ಎಚ್.ಎಸ್.ವೆಂಕಟೇಶಮೂರ್ತಿಯವರು ತಮ್ಮ, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆಯ ಮೂಲಕ ಜನಪ್ರಿಯರಾದ ಸಾಹಿತಿ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ ಇವರು ಎಚ್ಚೆಸ್ವಿ ಎಂದೇ ಪ್ರಸಿದ್ಧಿ ಹೊಂದಿದವರು. ವಿವಿಧ ಬಗೆಯ ನೂರಾರು ಕವಿತಗಳನ್ನು ಅವರು ರಚಿಸಿದ್ದಾರೆ. ಇಂದು ಇವರ ಜನ್ಮದಿನ. ಅವರು ರಚಿಸಿದ ನಿಮ್ಮ ಜೀವನಕ್ಕೆ ಹತ್ತಿರವಾಗುವಂತಹ 7 ಕವಿತಗಳು ಇಲ್ಲಿದೆ.
ಜೂನ್ 23, 1944ರಲ್ಲಿ ಜನಿಸಿದ ಎಚ್ಚೆಸ್ವಿ ಅವರ ಬಾಲ್ಯದ ಹೆಸರು ಶ್ರೀನಿವಾಸ. ಶಿವಮೊಗ್ಗ ಜಿಲ್ಲೆಯ ಹೊದಿಗ್ಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ಚಿಕ್ಕವಯಸ್ಸಿನಿಂದಲೂ ಕುವೆಂಪು, ಬೇಂದ್ರೆ, ಗೋರೂರು, ಮಾಸ್ತಿ, ಕಾರಂತ ಮೊದಲಾದವರ ಕೃತಿಗಳನ್ನು ಓದುತ್ತಾ ಬೆಳೆದವರು.
ಎಚ್ಚೆಸ್ವಿ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರು ಒಟ್ಟು 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 2 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಅಪ್ರಮೇಯ ಸಾಧಕ.
ತಾಯಿಯ ತವರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಚ್ಚೆಸ್ವಿ ಅವರ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಇದೇ ಅವರಿಗೆ ಕವನ ಬರೆಯಲು ಪ್ರೇರಣೆ ನೀಡಿದ್ದು ಎಂದು ಎಚ್ಚೆಸ್ವಿ ಹೇಳಿದ್ದಾರೆ. ಎಚ್ಚೆಸ್ವಿ ಅವರ ಕವನಗಳು ಸರಾಗ, ಕ್ಲಿಷ್ಟವಾದ ಶಬ್ದಬಳಕೆ ಕಾಣಸಿಗುವುದಲ್ಲ. ಆದರೆ, ಕವನಗಳ ಭಾವವು ಮನಸ್ಸಿಗೆ ನಾಟುವಂತಿರುತ್ತದೆ.
ಲಯಬದ್ಧವಾದ ಕವನಗಳು ಓದುಗರಿಗೆ ಅತ್ಯಂತ ಆನಂದ ನೀಡುತ್ತವೆ. ಪ್ರೇಮ ಕವಿತೆಗಳು ಈಗಿನ ಯುವಜನತೆಯ ಅಚ್ಚುಮೆಚ್ಚು. ಮನಸೋತಾಗ, ದುಃಖವಾದಾಗ, ಪ್ರೀತಿಪಾತ್ರರು ಬಿಟ್ಟು ಹೋದಾಗ ಮನಸ್ಸಿಗೆ ಕುಗ್ಗದಂತೆ ಚೈತನ್ಯ ನೀಡುವ ಕವಿತೆಗಳು ಕೂಡ ಇವರ ಬತ್ತಳಿಕೆಯಲ್ಲಿದೆ. ʼಶ್ರೀರಾಮಚಾರಣಂʼ, ʼಬುದ್ಧಚರಣʼ ಇವರ ವಿಭಿನ್ನ ಕೃತಿಗಳು. ತಾಯಿಯ ಪ್ರೀತಿ, ರಾಧೆ-ಮಾಧವರ ಬಾಂಧವ್ಯದ ಕುರಿತು ಇವರ ಕವಿತೆಗಳು ಶಾಶ್ವತವಾಗಿ ನೆನಪಿನಲ್ಲಿರುವಂಥದ್ದು.
ಅವರ 7 ಕವಿತೆಗಳನ್ನು ಇಂದು ಓದಿ ಆನಂದಿಸಿ
1.ಇಷ್ಟು ಕಾಲ ಒಟ್ಟಿಗಿದ್ದು: ಅಂತರಾಳವನ್ನು ಅರಿಯದೇ ಬದುಕುವ ಮನುಷ್ಯನಿಗೆ ಕನ್ನಡಿ ತೋರುವ ಕವಿತೆ
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ? ||
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ ?
ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ ?
ಸಾವಿರಾರು ಮುಖದ ಚೆಲುವ ಹಿಡಿದಿ ತೋರಿಯೂ
ಒಂದಾದರು ಉಳಿಯಿತೇ ಕನ್ನಡಿಯ ಪಾಲಿಗೆ ?
2. ಹುಚ್ಚು ಖೋಡಿ ಮನಸು: ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ಸ್ವಭಾವದ ವರ್ಣನೆಯ ಕವನ
ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು
ಮರುಘಳಿಗೆಯೇ ಮೌನ,
ಕನ್ನಡಿ ಮುಂದಷ್ಟು ಹೊತ್ತು
ಬರೆಯದಿರುವ ಕವನ ||
ಸೆರಗು ತೀಡಿದಷ್ಟು ಸುಕ್ಕು
ಹಠ ಮಾಡುವ ಕೂದಲು
ನಿರಿ ಏಕೋ ಸರಿಯಾಗದು
ಮತ್ತೆ ಒಳಗೆ ಹೋದಳು ||
ಕೆನ್ನೆ ಕೊಂಚ ಕೆಂಪಾಯಿತೆ
ತುಟಿಯ ರಂಗು ಹೆಚ್ಚೇ
ನಗುತ ಅವಳ ಛೇಡಿಸುತಿದೆ
ಗಲ್ಲದ ಕರಿ ಮಚ್ಚೆ ||
ಬರಿ ಹಸಿರು ಬರಿ ಹೂವು
ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ
ಸುಮ್ಮನೆ ನಿಟ್ಟುಸಿರು ||
3. ಇರಬೇಕು ಇರುವಂತೆ: ಸಕಲ ಚಿಂತೆಯನ್ನೂ ತೊರೆದು ಸಮಾಧಾನದಿಂದ ಬದುಕಲು ಸ್ಫೂರ್ತಿ ಈ ಕವನ
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ||ಪ||
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು||೧||
ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ ತುಂಬಿ ನದಿಯು
ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು||೨|
4. ಗೋಕುಲದಲ್ಲಿ: ರಾಧಾ-ಮಾಧವರ ಬಂಧ ಬಣ್ಣಿಸುವ ಹಾಡು
ಗೋಕುಲದಲ್ಲಿ ಗೊಲ್ಲರ ನಡುವೆ
ರಾಧೆ ನೋಡಿದಳು ಮಾಧವನ
ಹೇಗೆ ಕರೆಯುವುದು ನಟ್ಟಿರುಳಲ್ಲಿ
ಯಮುನೆಯ ಬಳಿ ಬಾ ಎಂದವನ
ಯೋಚಿಸಿ ಅರಕ್ಷಣ ರಾಧೆ ಬರೆದಳು
ಕಾಲಬೆರಳಲಿ ಚಂದ್ರಮನ
ಚಂದ್ರನ ಕೆಳಗೆ ಹರಿಯುವ ನದಿಯ
ಅದರಲಿ ತೇಲುವ ಬಾನ್ಸುರಿಯ
ಕೃಷ್ಣ ನೋಡಿದನು ತಾನೂ ಬರೆದನು
ಚಂದ್ರನ ಪಕ್ಕ ಚಂದ್ರನನು
ಇರಿಸಿದ ನಡುವೆ ನವಿಲಿನ ಕಣ್ಣ
ಸೂರದಾಪ್ರಿಯ ಮೋಹನ
5. ಅಮ್ಮ ಗುಬ್ಬಿಯ ಲೋಕಜ್ಞಾನ: ತಾಯಿ-ಮಗು ಪ್ರೀತಿಯ ಅನಾವರಣ
ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ ||
ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ
ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ ||
ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು
ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು
ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ
ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ
ನಿಟ್ಟುಸಿರಿತ್ತು ಅಮ್ಮ ಗುಬ್ಬಿ ಇಲ್ಲ ಬಂಗಾರ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು
6. ನನ್ನ ಬಾಳಿನ ಇರುಳ: ನಿಶ್ಕಲ್ಮಷ ಪ್ರೀತಿಯನ್ನು ಹಂಬಲಿಸುವ ಮನಸ್ಸಿನ ಬಯಕೆ
ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ
ಕೆಂಪು ತುಟಿಗಳ ಹವಳ ಬೆಳಗಲೆಬೇಕು ||
ಕವಿದಿರುವ ಮೋಡಗಳ ಸೀಳಿಹಾಕಲು ಅವಳ
ಕಣ್ಣ ಸುಳಿ ಮಿಂಚುಗಳು ಹೊಳೆಯಲೆಬೇಕು
ಒಣಗಿದ ಎದೆಯ ನೆಲ ನೆನೆಯಲು ನನ್ನವಳ
ಆನಂದ ಭಾಷ್ಪಗಳ ಮಳೆಯಾಗಬೇಕು
ನನ್ನ ಬಾನಿನ ನೀಲಿ ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ ತೋಯಲೆಬೇಕು
7. ಲೋಕದ ಕಣ್ಣಿಗೆ: ರಾಧೆಯ ಕಣ್ಣಲ್ಲಿ ಕೃಷ್ಣನನ್ನು ಕಾಣುವ ಕವನ
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.
ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.
ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ,
ಭಾವಿಸಿ ಸೇರಲು ಬೃಂದಾವನವ,
ರಾಧೆ ತೋರುವಳು ದಾರಿ.
ಮಹಾಪ್ರವಾಹ, ತಡೆಯುವರಿಲ್ಲ,
ಪಾತ್ರವಿರದ ತೊರೆ ಪ್ರೀತಿ.
ತೊರೆದರು ತನ್ನ, ತೊರೆಯದು ಪ್ರಿಯನ,
ರಾಧೆಯ ಪ್ರೀತಿಯ ರೀತಿ, ಇದು
ರಾಧೆಯ ಪ್ರೀತಿಯ ರೀತಿ
ಇದನ್ನೂ ಓದಿ: ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್‌ಗೆ ಸೇಡಿಯಾಪು ಪ್ರಶಸ್ತಿ