Site icon Vistara News

Sunday Read | ಸಾನಿಚರ್‌ ಮೌಗ್ಲಿಯಾದನೇ? ಇದು ʼಜಂಗಲ್‌ ಬುಕ್‌ʼ ಹಿಂದಿನ ಸ್ಫೂರ್ತಿ ಕಥೆ!

mowgli

ಬಹಳಷ್ಟು ಮಂದಿಗೆ ದೀನಾ ಸಾನಿಚರ್‌ ಹೆಸರು ಕೇಳಿ ಗೊತ್ತಿರಲಿಕ್ಕಿಲ್ಲ, ಯಾಕೆಂದರೆ ಯಾರೇ ಆದರೂ ಬಹಳ ಸುಲಭವಾಗಿ ಮರೆತುಬಿಡುವಂಥವನು ಅವನು. ಆದರೆ, ಬಹಳಷ್ಟು ಮಂದಿ ರುಡ್ಯಾರ್ಡ್‌ ಕಿಪ್ಲಿಂಗ್‌ ಬರೆದ ʻದಿ ಜಂಗಲ್‌ ಬುಕ್‌ʼ ಕಾದಂಬರಿಯ ಮೌಗ್ಲಿಯನ್ನು ಮರೆಯಲು ಸಾಧ್ಯವಿಲ್ಲವಲ್ಲ!

ಅರೆ, ಈ ಮೌಗ್ಲಿಗೂ ದೀನಾ ಸಾನಿಚರ್‌ಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎನ್ನುವಿರಾ? ದೀನಾ ಸಾನಿಚರ್‌ ಎಂಬ ಸಾಮಾನ್ಯರಲ್ಲಿ ಸಾಮಾನ್ಯನ ಹೆಸರನ್ನು ಇಲ್ಲಿ ಹೇಳಲು ಕಾರಣವಿದೆ. ಇದೇ ದೀನಾ ಸಾನಿಚರ್‌ ಎಂಬಾತನೇ ಮೌಗ್ಲಿ ಎಂಬ ಪಾತ್ರಕ್ಕೆ ಕಿಪ್ಲಿಂಗ್‌ಗೆ ಪ್ರೇರಣೆ ಎಂದರೆ ನಂಬುತ್ತೀರಾ?

ಹೌದು, ನಂಬಲೇಬೇಕು. ಮೌಗ್ಲಿ ಎಂಬ ಪಾತ್ರ ಕಾಲ್ಪನಿಕ ಎಂದು ಹೇಳಲಾದರೂ, ಇಂಥದ್ದೊಂದು ಘಟನೆ ಆ ದಿನಗಳಲ್ಲಿ ನಡೆದಿತ್ತು. ಆದರೆ, ದೀನಾ ಸಾನಿಚರ್‌ನದ್ದೊಂದು ದುರಂತ ಕಥೆ. ಆದರೆ ಪ್ರಸಿದ್ಧ ಕಥೆಯೊಂದರ ಸ್ಪೂರ್ತಿಕಥೆಯೂ ಹೌದು. ೧೮೬೭ರ ಆಸುಪಾಸಿನಲ್ಲಿ ಉತ್ತರ ಪ್ರದೇಶದ ಬುಲಂದ್‌ ಶಹರ್‌ ಜಿಲ್ಲೆಯ ಕಾಡುಗಳಲ್ಲಿ ತೋಳಗಳ ಗುಂಪಿನಲ್ಲಿ ನಾಲ್ಕು ಕಾಲುಗಳಲ್ಲಿ ತೋಳಗಳ ಹಾಗೇ ನಡೆಯುತ್ತಿದ್ದ ಆರರ ಹರೆಯದ ಬಾಲಕನನ್ನು ಕಂಡ ಬೇಟೆಗಾರರ ಗುಂಪು ಆತನನ್ನು ನಾಡಿಗೆ ಕರೆತರುತ್ತಾರೆ. ಅವರು ಹೇಳುವಂತೆ, ಬಹುಶಃ ಈತ ಮಾನವರ ಸಂಪರ್ಕಕ್ಕೇ ಸಿಗದೆ, ಪ್ರಾಣಿಗಳೊಂದಿಗೇ ಬೆಳೆದ ಕಾಡು ಮಾನವ. ಹಾಗಾಗಿ, ಮನುಷ್ಯರ ಯಾವುದೇ ನಾಗರಿಕ ವಿಚಾರಗಳು ಈತನನ್ನು ಪ್ರಭಾವಿಸಲೇ ಇಲ್ಲ. ಪ್ರಾಣಿಗಳ ಜೊತೆಯೇ, ಮಾನವರನ್ನು ನೋಡದೆ, ಅದವರ ಸಂಪರ್ಕಕ್ಕೆ ಸಿಗದೇ ಇದ್ದುದರಿಂದ ಈತನೂ ಪ್ರಾಣಿಗಳಂತೆ ಜೀವನಕ್ರಮವನ್ನು ರೂಢಿಸಿಕೊಂಡ.

ಕೇವಲ ಈತನಷ್ಟೇ ಅಲ್ಲ. ದೀನಾನಂತೆ ಇನ್ನೂ ನಾಲ್ಕೈದು ಮಕ್ಕಳನ್ನು ಭಾರತದ ಬೇರೆಬೇರೆ ಜಾಗಗಳಲ್ಲಿ ಬೇರೆ ಬೇರೆ ತೋಳಗಳ ಗುಂಪಿನಲ್ಲಿ ಕಂಡವರು ಇದ್ದಾರೆ. ಇಂಥ ಸಂದರ್ಭಗಳಲ್ಲಿ ಬೇಟೆಗಾರರು, ತೋಳಗಳ ಗುಂಪಿನಿಂದ ಆ ಮಗುವನ್ನು ರಕ್ಷಿಸಿ ನಾಡಿಗೆ ಕರೆದು ತಂದಿದ್ದಾರೆ. ಆದರೆ, ಮಾನವರಂತೆ ನಡತೆಯಿರದ ಪ್ರಾಣಿಗಳಂತೆಯೇ ಇದ್ದ ಅಂಥ ಮಕ್ಕಳನ್ನು ತೋಳಗಳ ಗುಂಪಿನಿಂದ ಹೊರ ತರಲು, ಮಗುವನ್ನು ನೋಡಿಕೊಳ್ಳುತ್ತಿದ್ದ ತಾಯಿ ತೋಳವನ್ನು ಸಾಯಿಸಿಯೇ ಕರೆತಂದ ಉದಾಹರಣೆಗಳಿವೆ. ತೋಳಗಳಿರುವ ಗುಹೆಗಳಿಗೆ ಬೆಂಕಿ ಹಾಕಿ, ತೋಳಗಳು ಅಲ್ಲಿಂದ ಕಾಲ್ಕಿತ್ತ ಮೇಲೆ ಮಾನವನನ್ನು ಆ ಗುಂಪಿನಿಂದ ಪ್ರತ್ಯೇಕಿಸಿ ತರುವ ಕೆಲಸವನ್ನೂ ಬೇಟೆಗಾರರು ಮಾಡಿದ್ದರು.

ಸಾನಿಚರ್‌ ಪ್ರಕರಣದಲ್ಲಿ, ಆತನನ್ನು ಬೇಟೆಗಾರರು ನಾಡಿಗೆ ಕರೆತಂದರೂ ಇಲ್ಲಿನ ವಾತಾವರಣಕ್ಕೆ ಆ ಬಾಲಕನಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಆತನನ್ನು ಸಾಕುವುದು ಹೇಗೆಂದು ತಿಳಿಯದ ಅವರು, ಆಗ್ರಾದ ಬಳಿಯ ಸಿಕಂದರಾ ಮಿಶನ್‌ ಎಂಬ ಅನಾಥಾಶ್ರಮಕ್ಕೆ ದಾಖಲಿಸಿ ಆತನಿಗೆ ನಾಗರಿಕ ಶಿಷ್ಟಾಚಾರಗಳನ್ನು ಕಲಿಸಲು ಪ್ರಯತ್ನಿಸಲಾಯಿತು. ಅಲ್ಲೇ ಆತನಿಗೆ ದೀನಾ ಸಾನಿಚರ್‌ ಎಂಬ ನಾಮಕರಣವೂ ಆಯಿತು. ಆದರೆ ಅಲ್ಲೂ ಆತನಿಗೆ ಹೊಂದಿಕೊಳ್ಳಲು ಕಷ್ಟವಾಗತೊಡಗಿತು. ಬಟ್ಟೆ ಹಾಕುವುದರಿಂದ ಹಿಡಿದು, ಸ್ಥಳೀಯ ಭಾಷೆಗಳನ್ನು ಕಲಿಯುವುದರವರೆಗೆ ಎಲ್ಲವೂ ಆತನಿಗೆ ಸವಾಲೇ ಆದವು. ಆತನ ಹಲ್ಲುಗಳು ಬಲಿಷ್ಟವಾಗಿ ಚೂಪಾಗಿ ಮಾಂಸ ತಿನ್ನುವಂತೆ ರಚನೆಯಾಗಿಬಿಟ್ಟಿದ್ದವು. ಇದರಿಂದ ಆತನಿಗೆ ಆಹಾರದ ಸಮಸ್ಯೆಯೂ ಆಗತೊಡಗಿತು.

ಇದನ್ನೂ ಓದಿ | Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ

೧೯೪೧ರಲ್ಲಿ ದೀನಾ ಬಗೆಗೆ ಅಮೆರಿಕದ ಮಕ್ಕಳ ಮನಃಶಾಸ್ತ್ರಜ್ಞ ವೇನೇ ಡೆನ್ನಿಸ್‌ ಎಂಬವರು ಕೂಲಂಕುಷ ಅಧ್ಯಯನ ನಡೆಸಿದ್ದರು. ಅವರ ಪ್ರಕಾರ ದೀನಾ ಮನುಷ್ಯನ ಭಾವನೆಗಳಿಗೆ, ಸಂಬಂಧಗಳಿಗೆ ಅತೀ ಕಡಿಮೆ ಅಥವಾ ಸಂಬಂಧವೇ ಇಲ್ಲದ ಹಾಗೆ ಬೆಳೆದವನು ಹಾಗೂ ಬೆಚ್ಚಗೆ ಹಾಗೂ ತಣ್ಣಗಿನ ಯಾವ ಅನುಭವಗಳಿಗೂ ಆತನ ದೇಹ ಸ್ಪಂದಿಸುವುದಿಲ್ಲ ಎಂದಿದ್ದರು. ಸಾನಿಚರ್‌ ಅನಾಥಾಶ್ರಮದಲ್ಲಿ ತನ್ನಂತೆ ಇದ್ದ ಇತರ ಯಾವ ಮಕ್ಕಳ ಜೊತೆಗೂ ಸಲುಗೆ ಹಾಗೂ ಗೆಳೆತನ ಮಾಡಿಕೊಳ್ಳಲಿಲ್ಲ. ಆತನ ಹಾಗೇ ಇದ್ದ ಇನ್ನೊಂದು ಮಗುವನ್ನು ಕಾಡಿನಿಂದ ತೋಳಗಳ ಗುಂಪಿನಿಂದ ಪ್ರತ್ಯೇಕಿಸಿ ತಂದು ಸೇರಿಸಲಾದ ಹುಡುಗನೊಬ್ಬನ ಪ್ರವೇಶವಾಗುವವರೆಗೆ ಸಾನಿಚರ್‌ ಯಾರೊಬ್ಬರ ಜೊತೆಗೂ ಬೆರೆತಿರಲಿಲ್ಲ. ಆದರೆ, ಆ ಹುಡುಗ ಬಂದ ಮೇಲೆ ಅವರಿಬ್ಬರ ನಡುವೆ ಒಂದು ವಿಚಿತ್ರ ಗೆಳೆತನ ಬೆಳೆಯಿತು. ಹೊಸದಾಗಿ ಬಂದ ಹುಡುಗನಿಗೆ ಸಾನಿಚರ್‌ ಲೋಟದಲ್ಲಿರುವ ನೀರು/ದ್ರವಾಹಾರವನ್ನು ಹೇಗೆ ಕುಡಿವುದೆಂದು ಹೇಳಿಕೊಟ್ಟನು ಎಂದು ಡೆನ್ನಿಸ್‌ ವಿವರಿಸಿದ್ದಾರೆ.

ಸಾನಿಚರ್‌ ಹೆಚ್ಚು ಕಾಲ ಬದುಕಲೂ ಇಲ್ಲ. ದಿನೇ ದಿನೇ ಆರೋಗ್ಯ ಕ್ಷೀಣಿಸುತ್ತಾ, ಕೊನೆಗೊಂದು ದಿನ ತನ್ನ ೩೪ರ ಹರೆಯದಲ್ಲಿ ಈತ ಮರಣ ಹೊಂದಿದ. ಬೇಕಾಬಿಟ್ಟಿ ಧೂಮಪಾನದ ಅಭ್ಯಾಸ ಮಾಡಿಕೊಂಡಿದ್ದ ಈತನಿಗೆ ಟ್ಯುಬರ್‌ಕ್ಯುಲೋಸಿಸ್‌ ಕಾಯಿಲೆಯಿತ್ತು. ಸಾಯುವ ಮೊದಲು ಕೊನೆಗೂ ಆತ ತಟ್ಟೆಯಲ್ಲಿ ತಾನೇ ಉಣ್ಣುವುದು ಹಾಗೂ ಚಂದಕ್ಕೆ ಡ್ರೆಸ್‌ ಮಾಡಿಕೊಳ್ಳುವುದನ್ನು ಕರಗತ ಮಾಡಿಕೊಂಡಿದ್ದ ಎಂಬ ವಿವರಗಳು ದಕ್ಕುತ್ತವೆ. ಹೀಗೆ ದುರಂತ ಅಧ್ಯಾಯ ಕಂಡ ಸಾನಿಚರ್‌ನಂತ ಪಾತ್ರವೇ ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ನಲ್ಲಿ ಮೌಗ್ಲಿ ಹೆಸರಿನಲ್ಲಿ ಜೀವ ತಳೆಯಿತು ಎನ್ನಲಾಗಿದೆ. ಸಾನಿಚರ್‌ ಮರಣದ ಒಂದು ವರ್ಷ ಮೊದಲು ಹೊರಬಂದಿದ್ದ ಈ ಕಾದಂಬರಿ ವಿಶ್ವದ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲೊಂದು. ಇಂದಿಗೂ ಶ್ರೇಷ್ಠ ಕಾಡಿನ ಕಥೆಯಾಗಿ, ಕಾರ್ಟೂನ್‌, ಸಿನಿಮಾವಾಗಿ ಕಾಣಿಸಿಕೊಳ್ಳುವ ದಿ ಜಂಗಲ್‌ ಬುಕ್‌ನ ಹಿಂದಿನ ಸ್ಪೂರ್ತಿ ಕಥೆಯಿದು!

ಇದನ್ನೂ ಓದಿ: Sunday read | ಹೊಸ ಪುಸ್ತಕ | ಎಲ್ಲರೂ ಕುರುಡರಾದಾಗ ಉಳಿದ ಒಬ್ಬಳೇ ಮಹಿಳೆಯ ಕಥೆ

Exit mobile version