ಪುಸ್ತಕಗಳನ್ನು ಓದುತ್ತೇವೆ. ಇದೇ ಮಾತನ್ನು ಮನುಷ್ಯರ ಬಗ್ಗೆ ಬಳಸಬಹುದಾದರೆ, ಮನುಷ್ಯರನ್ನೂ ಪುಸ್ತಕಗಳ ಥರ ಓದಬಹುದಾ? ಬೇರೊಬ್ಬರನ್ನು ಭೇಟಿಯಾದರೆ ನಾವು ಏನು ಮಾಡುತ್ತೇವೆ? ಪುಸ್ತಕವೊಂದು ಕಣ್ಣಿಗೆ ಬಿದ್ದಾಗ ಅದರ ಕವರ್ ಪೇಜ್, ಹಿಂಪುಟ ನೋಡಿ, ಆಸಕ್ತಿ ಕೆರಳಿಸಿದರೆ ಓದು ಮುಂದುವರಿಸುತ್ತೇವೆ. ಇಲ್ಲದಿದ್ದರೆ ಇಟ್ಟುಬಿಡುತ್ತೇವೆ. ಹಾಗೇ ಹೊಸಬರು ಪರಿಚಯವಾದಾಗಲೂ ಅವರು ನಮ್ಮಲ್ಲಿ ಆಸಕ್ತಿ ಕೆರಳಿಸಿದರೆ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮುಂದಾಗುತ್ತೇವೆ. ಇದೂ ಪುಸ್ತಕವೊಂದನ್ನು ಓದಿದಂತೆಯೇ. ಇದೇ ಈಗ ಪಾಪ್ಯುಲರ್ ಆಗುತ್ತಿರುವ ʼಹ್ಯೂಮನ್ ಲೈಬ್ರರಿ ಪ್ರಾಜೆಕ್ಟ್ʼನ ತಿರುಳು.
ಡೆನ್ಮಾರ್ಕ್‌ನಲ್ಲಿ ಆರಂಭ
ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ 2000ನೇ ಇಸವಿಯಲ್ಲಿ ಒಂದು ಪುಟ್ಟ ಧಾರೆಯಾಗಿ ಈ ಪ್ರಾಜೆಕ್ಟ್ ಶುರುವಾಯಿತು. ಕ್ರಿಸ್ಟೋಫರ್ ಎರಿಕ್‌ಸನ್ ಮತ್ತು ಬಳಗದವರು ಆರಂಭಿಸಿದರು. ಈಗ ಭಾರತವೂ ಸೇರಿ ಸುಮಾರು 70 ದೇಶಗಳಲ್ಲಿ ಇದು ನಡೆಯುತ್ತಿದೆ. ನಮ್ಮಲ್ಲಿ ಹೊಸದಿಲ್ಲಿ, ಪುಣೆ, ಹೈದರಾಬಾದ್, ಮುಂಬಯಿ, ಸೂರತ್ ಮುಂತಾದ ಕಡೆಗಳಲ್ಲಿ ನಡೆಯುತ್ತಿದೆ.
ಇದರ ಹಿಂದಿರುವ ಲಾಜಿಕ್ ಸಿಂಪಲ್. ʼಮನುಷ್ಯರನ್ನು ಜಡ್ಜ್ ಮಾಡದಿರೋಣ’ ಎಂಬುದು ಇದರ ಹಿಂದಿರುವ ಆಶಯ. ಈ ಹ್ಯೂಮನ್ ಲೈಬ್ರರಿಯಲ್ಲಿ ಪುಸ್ತಕಗಳು ಮನುಷ್ಯರ ರೂಪದಲ್ಲಿ ಇರುತ್ತಾರೆ. ನೀವು ಪುಸ್ತಕಗಳನ್ನು ಲೈಬ್ರರಿಯಿಂದ ತಂದಂತೆ ಈ ಲೈಬ್ರರಿಯಲ್ಲಿರುವ ಒಬ್ಬರನ್ನು ರೆಂಟ್ ಕೊಟ್ಟು ಮನೆಗೆ ಕರೆತರಬಹುದು. ಈ ಮನುಷ್ಯರನ್ನು ʼಓದಬಹುದು’. ಅಂದರೆ ಅವರು ಹೇಳುವ ಕತೆಗಳನ್ನು, ಅವರ ಅನುಭವಗಳನ್ನು ಆಲಿಸಬಹುದು.
ಮನುಷ್ಯರೊಳಗಿನ ಕತೆಗಳು
ಸಾಮಾನ್ಯವಾಗಿ ಇಲ್ಲಿ ಬರುವವರು ತಮ್ಮ ಜೀವನದ ಕತೆಗಳನ್ನು ಹೇಳುತ್ತಾರೆ. ಇವರನ್ನು ಹ್ಯೂಮನ್ ಬುಕ್ ಅಂತ ಕರೆಯಲಾಗುತ್ತದೆ. ಯಾವುದೋ ದೇಶದಿಂದ ನಿರಾಶ್ರಿತರಾಗಿ ಓಡಿ ಬಂದವರು, ಇನ್ನೆಲ್ಲೋ ಸರಕಾರದ ಯಾವುದೋ ಪ್ರಾಜೆಕ್ಟ್‌ಗಾಗಿ ನಿರಾಶ್ರಿತರಾದವರು, ಮನೆ- ಸಮಾಜದಲ್ಲಿ ಅನುಭವಿಸಿದ ಕಷ್ಟಕೋಟಲೆಯಿಂದ ಬೆಂದು ಬಂದು ಸಕ್ಸಸ್ ಆದವರು, ದೌರ್ಜನ್ಯದಿಂದ ಬಳಲಿದವರು, ಕೋಮುಗಲಭೆಯಲ್ಲಿ ಮನೆ ಮಾರು ಸುಟ್ಟುಹೋಗಿ ಓಡಿಬಂದವರು, ಲಿಂಗ- ಬಣ್ಣ- ರೂಪ ಇತ್ಯಾದಿಗಳಿಗಾಗಿ ಜನರಿಂದ ಅವಮಾನ ಎದುರಿಸಿದವರು ಇಲ್ಲಿ ಹ್ಯೂಮನ್ ಬುಕ್‌ಗಳಾಗುತ್ತಾರೆ. ಇಲ್ಲಿ ನೀವು ಓದುವ ಹ್ಯೂಮನ್ ಯಾರೂ ಇರಬಹುದು- ಅರಣ್ಯಾಧಿಕಾರಿ, ಅಫಘಾನಿಸ್ತಾನದಿಂದ ಓಡಿ ಬಂದ ನಿರಾಶ್ರಿತ, ಟಿಫಿನ್ ಒಯ್ಯುವ ಡಬ್ಬಾವಾಲಾ, ಮೈಸೂರಿನ ಜಟಕಾವಾಲಾ, ಪೋಸ್ಟ್‌ಮ್ಯಾನ್, ಕ್ಯಾನ್ಸರ್ ಸರ್ವೈವರ್- ಇತ್ಯಾದಿ.
ಪೂರ್ವಾಗ್ರಹ ಮೀರುವ ಯತ್ನ
ಹೆಚ್ಚಾಗಿ ಇವು ನಡೆಯುವುದು ಇವೆಂಟ್‌ಗಳ ಮೂಲಕ. ಇಂಥ ಹಲವು ʼಬುಕ್’ಗಳನ್ನು ಒಂದೆಡೆ ಸೇರಿಸಿ ಇವೆಂಟ್ ಏರ್ಪಡಿಸಲಾಗುತ್ತದೆ. ಅಲ್ಲಿಗೆ ಆಸಕ್ತ ಜನ ಬಂದು ಈ ಪುಸ್ತಕಗಳ ಮುಂದೆ ಕುಳಿತು, ಅವರು ಹೇಳುವ ಮಾತುಗಳನ್ನು ಕೇಳಿ, ಅನುಮಾನಗಳಿದ್ದಲ್ಲಿ ಪರಿಹರಿಸಿಕೊಂಡು ಹೋಗುತ್ತಾರೆ. ಡೆನ್ಮಾರ್ಕ್ ಇಂಥ ಪರಿಕಲ್ಪನೆ ಮಂಡಿಸಿದ ಮೊದಲ ದೇಶವಾದರೆ, ಇವರದೊಂದು ಪರ್ಮನೆಂಟ್ ಲೈಬ್ರರಿ ಕಟ್ಟಿದ ಮೊದಲ ದೇಶ ಆಸ್ಟ್ರೇಲಿಯಾ.
ಇದು ಜನರ ನಡುವೆ ಇರುವ ಪೂರ್ವಾಗ್ರಹಗಳನ್ನು ನಿವಾರಿಸುವ ಒಂದು ಪ್ರಯತ್ನ. ಸಾಮಾನ್ಯವಾಗಿ ನಾವು ಹೆಚ್ಚಾಗಿ ಭೇಟಿ ಮಾಡದ ವ್ಯಕ್ತಿಗಳ ಬಗ್ಗೆ ನಮ್ಮಲ್ಲಿ ಒಂದು ಬಗೆಯ ಪೂರ್ವಾಗ್ರಹ ಬೇರೂರಿಕೊಂಡಿರುತ್ತದೆ. ನಮ್ಮದೇ ನಾಡಿನ ಅಲೆಮಾರಿಗಳ, ಹಕ್ಕಿಪಿಕ್ಕಿ ಜನಾಂಗದವರ ಬಗ್ಗೆ ನಮಗೆ ಗೊತ್ತಿಲ್ಲ. ಬಾಂಗ್ಲಾದಿಂದ ಬಂದ ಹಿಂದೂಗಳ ಯಾತನೆಯ ಕತೆಗಳೇನು ಎಂಬುದನ್ನು ನಮಗೆ ಯಾರೂ ಹೇಳಿಲ್ಲ. ನಮ್ಮ ಪಕ್ಕದಲ್ಲೇ ವಾಸಿಸುವ ಇನ್ನೊಂದು ಕುಟುಂಬದ ಕತೆಯೂ ನಮಗೆ ಸರಿಯಾಗಿ ಗೊತ್ತಿರುವುದಿಲ್ಲ. ನಮ್ಮ ಅಜ್ಜ ಅಥವಾ ಮುತ್ತಜ್ಜ ಹೇಳುವ ಹಿಂದಿನ ಕಾಲದ ಕತೆಗಳನ್ನೂ ನಾವು ಸರಿಯಾಗಿ ಕಿವಿಗೊಟ್ಟು ಕೇಳಿರುವುದಿಲ್ಲ. ಸರಿಯಾಗಿ ಆಲಿಸಿದ್ದರೆ ಅವರೇ ಒಂದು ಗ್ರಂಥ ನೀಡಬಹುದಾದ ಜ್ಞಾನವನ್ನು ನಮ್ಮಲ್ಲಿ ಬಿತ್ತಿರುತ್ತಿದ್ದರು. ಕಡೆಗೂ ʼಗ್ರಂಥʼ ಎಂದರೆ ಇನ್ನೊಬ್ಬ ಮನುಷ್ಯನ ಅನುಭವ ಮತ್ತು ಜ್ಞಾನದ ಮೊತ್ತವೇ ತಾನೆ?
ಪುಸ್ತಕ ವಿಮರ್ಶೆ: ಪದಗಳಿಗೆ ನಿಲುಕದ ಭಾವವೇ ಪ್ರೀತಿ
ನಿಮ್ಮ ಊರಿನಲ್ಲೂ ಆರಂಭಿಸಬಹುದು
ನಿಮ್ಮ ಊರಿನಲ್ಲೂ ನೀವು ʼಹ್ಯೂಮನ್ ಲೈಬ್ರರಿʼ ಚೈನ್‌ನಲ್ಲಿ ಇಂಥದೊಂದು ಲೈಬ್ರರಿ ಆರಂಭಿಸಲು ಬಯಸಿದ್ದರೆ, ಹೈದರಾಬಾದ್‌ನ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು. ಬೇರೆಲ್ಲಾ ಕಡೆ ಪುಸ್ತಕ ಲೋಕದಲ್ಲಿ ಆಗುವಂತೆಯೇ ಇಲ್ಲೂ ಕೆಲವು ʼಪುಸ್ತಕʼಗಳು ʼಬೆಸ್ಟ್ ಸೆಲ್ಲರ್ʼ ಅಥವಾ ಹೆಚ್ಚು ಜನ ಓದಲು ಬಯಸುವುದು ಇದೆ. ಇನ್ನು ಕೆಲವು ಅಷ್ಟೇನೂ ಪಾಪ್ಯುಲರ್ ಅಲ್ಲ. ಕೆಲವು ಗಂಭೀರ, ಕೆಲವು ಕಾಮಿಡಿ, ಕೆಲವು ಆಕರ್ಷಕ, ಕೆಲವು ಬೋರಿಂಗ್.
ಪುಸ್ತಕಗಳನ್ನು ಓದಿ ನಮ್ಮ ತಿಳುವಳಿಕೆ ಬೆಳೆಸಿಕೊಳ್ಳುವಂತೆಯೇ ಈ ಹ್ಯೂಮನ್ ಬುಕ್‌ಗಳ ಮೂಲಕ ನಮ್ಮ ಪೂರ್ವಾಗ್ರಹಗಳನ್ನು ಪರಿಹರಿಸಿಕೊಂಡು, ಇನ್ನಷ್ಟು ಉತ್ತಮ ಸಮಾಜ ಆಗೋಣ ಎಂಬುದು ಇದನ್ನು ಸ್ಥಾಪಿಸಿದವರ ಆಶಯ. ಇದರ ಆಶಯವನ್ನೇ ಬಳಸಿಕೊಂಡು, ನಮ್ಮ ಸುತ್ತಮುತ್ತ ಇರುವ ಹ್ಯೂಮನ್ ಬುಕ್‌ಗಳನ್ನು ನಾವೂ ಓದಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ?
ಬೆಂಗಳೂರಿನಲ್ಲಿದೆ
ಬೆಂಗಳೂರಿನಲ್ಲಿ ಹ್ಯೂಮನ್ ಲೈಬ್ರರಿಯ ಶಾಖೆಯಿದ್ದು, ಇವೆಂಟ್‌ಗಳನ್ನೂ ಸಂಘಟಿಸುತ್ತಿದೆ. ಇದರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಇದರ ಚಟುವಟಿಕೆಗಳ ವಿವರ ಇದೆ.