Site icon Vistara News

Javed Akhtar: “ರಾಮ- ಸೀತೆ ಕೇವಲ ದೇವರಲ್ಲ…” : ಕವಿ ಜಾವೇದ್‌ ಅಖ್ತರ್‌

Javed Akhtar

ಹೊಸದಿಲ್ಲಿ: ಭಗವಾನ್ ರಾಮ ಮತ್ತು ಸೀತೆ ಕೇವಲ ಹಿಂದೂ ದೇವರು ಮತ್ತು ದೇವತೆಗಳಲ್ಲ. ಅವರು “ಭಾರತದ ಸಾಂಸ್ಕೃತಿಕ ಪರಂಪರೆ” ಎಂದು ಕವಿ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ (Javed Akhtar) ಹೇಳಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ (Raj Thackeray) ಆಯೋಜಿಸಿದ್ದ ದೀಪೋತ್ಸವ (deepavali 2023) ಕಾರ್ಯಕ್ರಮದಲ್ಲಿ ಮಾತನಾಡಿದ ಅಖ್ತರ್, ರಾಮಾಯಣ ಭಾರತದ ಸಾಂಸ್ಕೃತಿಕ ಪರಂಪರೆಯಾಗಿದ್ದು, ರಾಮ ಮತ್ತು ಸೀತೆಯ ನಾಡಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಪಡುತ್ತೇನೆ ಎಂದರು.

“ರಾಮ ಮತ್ತು ಸೀತೆ ಕೇವಲ ಹಿಂದೂ ದೇವರು ಮತ್ತು ದೇವತೆಗಳಲ್ಲ. ಇದು ಭಾರತದ ಸಾಂಸ್ಕೃತಿಕ ಪರಂಪರೆಯಾಗಿದೆ. ನಾನು ನಾಸ್ತಿಕನಾಗಿದ್ದರೂ ರಾಮ ಮತ್ತು ಸೀತೆಯನ್ನು ಈ ದೇಶದ ಸಂಪತ್ತು ಎಂದು ಭಾವಿಸುತ್ತೇನೆ. ಅದಕ್ಕೇ ನಾನು ಇಲ್ಲಿಗೆ ಬಂದೆ. ರಾಮಾಯಣ ನಮ್ಮ ಸಂಸ್ಕೃತಿ ಪರಂಪರೆ. ಮರ್ಯಾದಾ ಪುರುಷೋತ್ತಮನ ಬಗ್ಗೆ ಮಾತನಾಡುವುದು, ರಾಮ ಸೀತೆಯರ ನಾಡಲ್ಲಿ ಹುಟ್ಟಿದ್ದಕ್ಕೆ ನಮಗೆ ಹೆಮ್ಮೆ. ಇಂದಿನಿಂದಲೇ ನಾವು ಜೈ ಸಿಯಾರಾಮ್ ಹೇಳುವುದು ರೂಢಿಸಿಕೊಳ್ಳೋಣ” ಎಂದರು.

ತಮ್ಮ ಭಾಷಣದ ವೇಳೆ ಅವರು “ಜೈ ಸಿಯಾ ರಾಮ್” ಎಂಬ ಘೋಷಣೆಗಳನ್ನು ಕೂಗುವಂತೆ ಜನರನ್ನು ಪ್ರೇರೇಪಿಸಿದರು. “ನಾನು ಲಖನೌದವನು. ನಾನು ಬಾಲ್ಯದಲ್ಲಿ ಶ್ರೀಮಂತರನ್ನು ನೋಡುತ್ತಿದ್ದೆ. ಶುಭೋದಯ ಎನ್ನುತ್ತಿದ್ದರು. ಆದರೆ ರಸ್ತೆಯಲ್ಲಿ ಸಾಗುತ್ತಿದ್ದ ಸಾಮಾನ್ಯ ವ್ಯಕ್ತಿ ʼಜೈ ಸಿಯಾ ರಾಮ್ʼ ಎಂದು ಹೇಳುತ್ತಿದ್ದ. ಆದುದರಿಂದ ಸೀತೆ ಮತ್ತು ರಾಮನನ್ನು ಪ್ರತ್ಯೇಕವಾಗಿ ಭಾವಿಸುವುದು ಪಾಪ. ಸಿಯಾ ರಾಮ್ ಎಂಬ ಪದವು ಪ್ರೀತಿ ಮತ್ತು ಏಕತೆಯ ಸಂಕೇತವಾಗಿದೆ. ಸಿಯಾ ಮತ್ತು ರಾಮ್ ಒಂದೇ. ಅದನ್ನು ಬೇರೆ ಬೇರೆ ಮಾಡುವವನು ರಾವಣನಾಗುತ್ತಾನೆ. ಆದ್ದರಿಂದ ನೀವು ನನ್ನೊಂದಿಗೆ ಮೂರು ಬಾರಿ ಜೈ ಸಿಯಾ ರಾಮ್ ಎನ್ನಿ. ಇಂದಿನಿಂದ ಜೈ ಸಿಯಾ ರಾಮ್ ಎಂದು ಹೇಳಿ” ಎಂದು ಹೇಳಿದರು.

ಜಾವೇದ್‌ ಅಖ್ತರ್‌ ಅವರು ಖ್ಯಾತ ಕವಿ ಹಾಗೂ ಬಾಲಿವುಡ್‌ನ ಜನಪ್ರಿಯ ಗೀತ ರಚನಕಾರ. ಇತ್ತೀಚೆಗೆ ಅವರು ಪಾಕಿಸ್ತಾನಕ್ಕೆ ಹೋದಾಗ, ಭಾರತದ ಮೇಲೆ ದಾಳಿ ಮಾಡಿದ ಉಗ್ರರು ಇಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದ್ದರು.

ಇದನ್ನೂ ಓದಿ: Shiv Sena : ತಾಕತ್ತು ಇದ್ದರೆ ಜಾವೇದ್​ ಅಖ್ತರ್​ ರೀತಿ ಪಾಕ್ ​ನೆಲದಲ್ಲಿ ಅವರಿಗೇ ಸವಾಲು ಹಾಕಿ; ಬಿಜೆಪಿಗೆ ಉದ್ಧವ್​​ ಠಾಕ್ರೆ ಸವಾಲು

Exit mobile version