ಕೇವಲ ಕಥೆಗಳಿಗೆ ಮಾತ್ರ ಸೀಮಿತವಾದ ‘ಕಥೆಕೂಟ’ ಎಂಬ ವಿಶಿಷ್ಟವಾದ ವಾಟ್ಸಪ್ ಗ್ರೂಪ್ ಆರನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ನಾಲ್ಕನೇ ಸಮಾವೇಶವನ್ನು ಇದೇ ಜೂನ್ 25 ಮತ್ತು 26ರಂದು ಬೆಂಗಳೂರಿನ ನೆಲಮಂಗಲದಲ್ಲಿರುವ ಗುಬ್ಬಿಗೂಡು ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದೆ.
ವಾಟ್ಸಪ್ ಗ್ರೂಪುಗಳು ಅಂದ ತಕ್ಷಣ ಬಂದಿದ್ದನ್ನು ಫಾರ್ವರ್ಡ್ ಮಾಡುವ ಅಥವಾ ಹಾಳುಹರಟೆಗಳಲ್ಲಿ ಕಾಲ ತಳ್ಳುವ ತಂತ್ರಜ್ಞಾನ ಎಂದಾಗಿರುವ ಸಂದರ್ಭದಲ್ಲಿ ಇದನ್ನು ಕತೆಗೋಸ್ಕರ ಮೀಸಲಿಟ್ಟು ಸೃಜನಶೀಲವಾಗಿ ರೂಪಿಸಿದದರು ಕತೆಗಾರ ಹಾಗೂ ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಹಾಗೂ ಜೋಗಿ.
ಈ ಕೂಟ ಹುಟ್ಟಿದ್ದು ಹೇಗೆ?
ಕಥೆಕೂಟ ಎಂಬುದು ಗೋಪಾಲಕೃಷ್ಣ ಕುಂಟಿನಿ ಹಾಗೂ ಜೋಗಿಯವರು ಕಂಡ ಕನಸು. ಪ್ರತಿಯೊಂದು ಘಟನೆಯಲ್ಲೂ ಕತೆಯಿದೆ, ಪ್ರತಿಯೊಬ್ಬರಲ್ಲೂ ಕತೆಯಿದೆ ಎಂದು ನಂಬಿರುವ ಗೋಪಾಲಕೃಷ್ಣ ಕುಂಟಿನಿ ಜೂನ್ 25, 2016ರಂದು ಗೆಳೆಯ ಜೋಗಿಗೆ ಕರೆ ಮಾಡಿ ಇದರ ಕಲ್ಪನೆ ಬಿತ್ತಿದರು. ಹೀಗೆ ಎಲ್ಲರೊಳಗಿರುವ ಕಥೆಯನ್ನು ಹೇಳುವುದಕ್ಕೆ, ಕೇಳುವುದಕ್ಕೆ ಒಂದು ವೇದಿಕೆಯನ್ನು ಕಟ್ಟಬೇಕು ಎಂಬ ಆಶಯದಿಂದ ಕಥೆಕೂಟ ಆರಂಭವಾಯಿತು.
ಕೂಟದ ಸಾಧನೆ ಏನು?
ಈ ಕೂಟದ ಮೂಲಕ ಕೆಲವರು ಕತೆಗಾರರಾಗಿದ್ದಷ್ಟೇ ಅಲ್ಲ, ಸ್ವತಃ ಸಂಕಲನವನ್ನೂ ಹೊರತಂದರು. ಇದಕ್ಕೆ ಉದಾಹರಣೆ ಎಂದರೆ ಕತೆಗಾರ ಸಚಿನ್ ತೀರ್ಥಹಳ್ಳಿ ಅವರ ʼನವಿಲು ಕೊಂದ ಹುಡುಗ” ಹಾಗೂ ‘ಮಿಸ್ಟರ್ ಎಕ್ಸ್”, ರಾಜೇಶ್ ಶೆಟ್ಟಿ (ಡ್ರಾಮಾ ಕಂಪನಿ), ಪ್ರಮೋದ ಮೋಹನ ಹೆಗಡೆ (ಮೈಸೂರ್ ಪಾಕ್ ಹುಡುಗ), ಪೂರ್ಣಿಮಾ ಮಾಳಗಿಮನಿ (ಪ್ರೀತಿಷ್ರೇಮ ಪುಸ್ತಕದಾಚೆಯ ಬದನೆಕಾಯಿ), ಅನನ್ಯ ತುಷಿರ (ಅರ್ಧ ನೆನಪು ಅರ್ಧ ಕನಸು) ಪುಸ್ತಕಗಳೂ ಕೂಟದ ಒತ್ತಾಸೆಯಿಂದ ಬೆಳಕು ಕಂಡಿವೆ.
ಇದರ ಜೊತೆಗೆ ಸಂಸ್ಕೃತ ಸಾಹಿತ್ಯ ಉಪನ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಜಗದೀಶ ಶರ್ಮ ಕನ್ನಡದಲ್ಲಿ ಕಥೆಗಳನ್ನು ಬರೆಯಲಾರಂಭಿಸಿ ಈವರೆಗೆ ‘ಕಥೆಯೆಲ್ಲ ಜೀವನ”, ‘ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕತೆಗಳು’ ಮುಂತಾದ ಸಂಕಲನ ತಂದರು. ಅವರ ಸಂಕಲನಗಳು ಓದುಗವರ್ಗದಲ್ಲಿ ಸಂಚಲನ ಮೂಡಿಸಿದವು. ಸೆಲ್ಕೋ ಕಂಪನಿಯ ಸಿಇಓ ಹಾಗೂ ಯಕ್ಷಗಾನ ಅರ್ಥಧಾರಿ ಮೋಹನ ಭಾಸ್ಕರ ಹೆಗಡೆ ಅವರು, ಈ ಕೂಟದ ಮೂಲಕ ಕತೆ ಬರೆಯಲಾರಂಭಿಸಿ, ‘ಪ್ರಭಾರಿ’ ಎನ್ನುವ ಕಥಾ ಸಂಕಲನವನ್ನೂ ಪ್ರಕಟಿಸಿ ಕಥಾಲೋಕಕ್ಕೆ ಪ್ರವೇಶ ಪಡೆದರು.
ಇದಲ್ಲದೇ ಕಥೆಕೂಟದ ಇಪ್ಪತ್ಮೂರು ಕತೆಗಾರರ ಆಯ್ದ ಕತೆಗಳನ್ನೊಳಗೊಂಡ ‘ಮಳೆಯಲ್ಲಿ ನೆನೆದ ಕತೆಗಳು’ ಸಂಕಲನವನ್ನು ಕೂಡ ಸಾವಣ್ಣ ಪ್ರಕಾಶನ ಹೊರತಂದಿದೆ.
ಸಮಾವೇಶದಲ್ಲಿ ಏನೇನು ಇರುತ್ತದೆ?
ಜೂನ್ 25, 26ರಂದು ನಡೆಯುವ ಕಥೆಕೂಟದ ಸಮಾವೇಶದಲ್ಲಿ ಎರಡು ದಿನಗಳ ಕಾಲ ಐದು ಗೋಷ್ಠಿಗಳು ನಡೆಯಲಿವೆ. 25ರಂದು ಸಂಜೆ 7. 30ಕ್ಕೆ “ಮುಸ್ಸಂಜೆ ಕಥಾ ಪ್ರಸಂಗ’ ಗೋಷ್ಠಿಯಲ್ಲಿ ಲೋಹಿತ್ ಶರ್ಮ, ರೂಪಲ್ ಶೆಟ್ಟಿ, ಸುಶಾಂತ್ ಮುಂಗರವಳ್ಳಿ, ಶ್ರೀಕಂಠಮೂರ್ತಿ, ಭರತ್ ಕುಮಾರ್ ಹಾಗೂ ವಿಕಾಸ್ ನೇಗಿಲೋಣಿ ಕತೆಯ ಕುರಿತು ಮಾತಾಡಲಿದ್ದಾರೆ.
26ರಂದು ಬೆಳಿಗ್ಗೆ 10ಕ್ಕೆ ಖ್ಯಾತ ನಿರ್ದೇಶಕ ಬಿಎಸ್ ಲಿಂಗದೇವರು ಅವರು ಸಮಾವೇಶವನ್ನು ಉದ್ಭಾಟಿಸಲಿದ್ದು ಗೋಪಾಲಕೃಷ್ಣ ಕುಂಟಿನಿ ಅವರ ಅಧ್ಯಕ್ಷತೆಯಲ್ಲಿ ಜೋಗಿ ಅವರು “ಕತೆ ಮತ್ತು ನಾನು’ ಎನ್ನುವ ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ.
ಅನಂತರ ನಡೆಯುವ ‘ಕತೆಯ ಕಷ್ಟಸುಖ’ ಗೋಷ್ಠಿಯಲ್ಲಿ ಈರಯ್ಯ ದೂಂತೂರು, ಪ್ರಮೋದ ಮೋಹನ ಹೆಗಡೆ, ಅನನ್ಯ ತುಷಿರ, ಮಾರುತಿ ಎನ್ ಎನ್ ಹಾಗೂ ವಾಣಿ ಸುರೇಶ್ ಮಾತಾಡಲಿದ್ದಾರೆ. “ನಮ್ಮೊಳಗೂ ಕತೆಗಳಿವೆ’ ಗೋಷ್ಠಿಯಲ್ಲಿ ವಿದ್ಯಾ ಹೆಗಡೆ, ಭಾಗ್ಯಜ್ಯೋತಿ, ಪೂರ್ಣಿಮಾ ಮಾಳಗಿಮನಿ, ಶ್ರೀರಕ್ಷಾ ಹೆಗಡೆ, ಸುಧಾ ದೇಶಪಾಂಡೆ ಮತ್ತು ಶುಭಶ್ರೀ ಭಟ್ಟ ಮಾತಾಡಲಿದ್ದಾರೆ. ‘ಹುಟ್ಟಿದ ಕತೆ, ಕಟ್ಟಿದ ಕತೆ’ ಗೋಷ್ಠಿಯಲ್ಲಿ ಮೇಘನಾ ಸುಧೀಂದ್ರ, ಶ್ರೀನಿವಾಸ ದೇಶಪಾಂಡೆ, ನೀಲಿಲಿಚಿಟ್ಟೆ, ಹರೀಶ್ ಕೇರ, ರಾಘವೇಂದ್ರ ಅಗ್ನಿಹೋತ್ರಿ ಮಾತಾಡಲಿದ್ದಾರೆ. “ಓದು ಜನಮೇಜಯ” ಗೋಷ್ಠಿಯಲ್ಲಿ ರಾಜೇಶ್ ಶೆಟ್ಟಿ, ಪ್ರಿಯಾ ಕೆರ್ವಾಶೆ, ಜಗದೀಶ ಶರ್ಮ, ಸಚಿನ್ ತೀರ್ಥಹಳ್ಳಿ ಹಾಗೂ ರಂಜನಿ ಕೀರ್ತಿ ಮಾತಾಡಲಿದ್ದಾರೆ.
ಈ ಕಾರ್ಯಕ್ರಮವು ಬುಕ್‌ಬ್ರಹ್ಮ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ಇರಲಿದೆ.
ಇದನ್ನೂ ಓದಿ: ಹೋಟೆಲ್, ಮಾಲ್‌ಗಳಲ್ಲಿಯೂ ಸಿಗಲಿದೆ ಪುಸ್ತಕ, ಇದು ವೀರಕಪುತ್ರ ಶ್ರೀನಿವಾಸ್ ಸಾಹಸ