ಬೆಂಗಳೂರು: ನಾನು ಸಾಹಿತ್ಯ ಸಿನಿಮಾ ಎಂದು ಬೆಂಗಳೂರಿನಲ್ಲಿ ಬದುಕು ಹುಡುಕಿಕೊಳ್ಳುತ್ತಿದ್ದಾಗ ತಂದೆ ಊರಿನಲ್ಲಿ ನನಗಾಗಿ ಜಮೀನು ಮಾಡಿಟ್ಟು ಊರಿಗೆ ಬಾ ಎಂದು ಕರೆದರು. ನಾನು, ನಿಮ್ಮ ಜಮೀನು ನನಗೆ ಬೇಕಿಲ್ಲ ಎಂದು ಉತ್ತರಿಸಿ ಪತ್ರ ಬರೆದೆ. ಇದಾದ ತಿಂಗಳೊಳಗೆ ಅವರು ಕಾಯಿಲೆ ಉಲ್ಬಣಿಸಿ ತೀರಿಕೊಂಡರು. ಊರಿಗೆ ಹೋದೆ. ತಂದೆ ನನ್ನ ಪತ್ರ ತಲುಪಿದ ಬಳಿಕ ಕೊರಗಿನಲ್ಲಿ ತಮ್ಮ ಮಾತ್ರೆಗಳನ್ನು ಸೇವಿಸಿರಲಿಲ್ಲ ಎಂದು ಗೊತ್ತಾಯಿತು. ತಂದೆಯ ಸಾವಿಗೆ ಕಾರಣವಾದೆ ಎಂಬ ಪಶ್ಚಾತ್ತಾಪದಿಂದ ದಗ್ಧನಾದೆ. ಮುಂದೆ ಇದೇ ಘಟನೆಯನ್ನಿಟ್ಟುಕೊಂಡು ಒಂದು ನಾಟಕ ಬರೆದೆ. ಅದೇ ‘ಬದುಕ ಮನ್ನಿಸು ಪ್ರಭುವೆ’. ಇದಕ್ಕೆ ಲಂಕೇಶ್, ರಾಮಚಂದ್ರ ಶರ್ಮ ಅವರೆಲ್ಲ ಸ್ಪರ್ಧಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂತು. ಅದು ನನ್ನ ಕಣ್ಣೀರಿನಿಂದ ಮೂಡಿದ ಕೃತಿ. ನಮ್ಮ ನಮ್ಮ ಕಣ್ಣೀರುಗಳನ್ನು, ನಿಟ್ಟುಸಿರುಗಳನ್ನು ಹಿಂಬಾಲಿಸುತ್ತ ಹೋದರೆ ನೈಜ ಕತೆಗಳೋ ಕಾದಂಬರಿಗಳೋ ಬರೆಸಿಕೊಳ್ಳುತ್ತವೆ.
- ಟಿಎನ್ ಸೀತಾರಾಮ್ ಹೀಗೆ ತಮ್ಮ ಬದುಕಿನಿಂದ ಆಯ್ದ ಒಂದು ಘಟನೆಯನ್ನು ಎತ್ತಿಕೊಂಡು, ಅದಕ್ಕೂ ತಮ್ಮ ಸೃಜನಶೀಲತೆಗೂ ಇದ್ದ ಸಂಬಂಧವನ್ನು ವಿವರಿಸುತ್ತಾ ಇದ್ದರೆ ಎದುರು ಕುಳಿತ ಕಥೆಕೂಟಿಗರು ಮಂತ್ರಮುಗ್ಧ.
ಸಕಲೇಶಪುರದ ಮಕ್ಕಿತಿಟ್ಟದಲ್ಲಿ ನಡೆದ ʼಕಥೆಕೂಟʼ ವಾಟ್ಸ್ಯಾಪ್ ಗುಂಪಿನ ಒಂಬತ್ತನೇ ವಾರ್ಷಿಕೋತ್ಸವ ಹಾಗೂ ಆರನೇ ಸಮಾವೇಶದ ಎರಡನೇ ದಿನ ನಡೆದ ‘ಮುಕ್ತಕಥಾ’ ಸಂವಾದ ಕಾರ್ಯಕ್ರಮದಲ್ಲಿ ಟಿಎನ್ನೆಸ್ ಮತ್ತು ಡುಂಡಿರಾಜ್ ತಮ್ಮ ಕಥಾಜೀವನ- ಕಾವ್ಯಜೀವನದ ಅಂತರಂಗವನ್ನು ತೆರೆದಿಟ್ಟರು.
ನಾವು ನೊಂದ ನೋವಿನಲ್ಲಿ ನಮ್ಮ ಜೀವವಿರುತ್ತದೆ. ನಮ್ಮ ಕಣ್ಣೀರು ನಿಟ್ಟುಸಿರನ್ನು ಹಿಂಬಾಲಿಸಿದಾಗಲೇ ನಾವು ಬರೆಯಬೇಕಾದ ಕತೆ ಸಿಗುತ್ತದೆ. ಹಾಗಾಗಿ ನಾನು ಬರೆಯುವ ಕತೆಗಳಲ್ಲಿ ನಿಜವಾದ ನಾನು ಇರುತ್ತೇನೆ. ಹೊರತು, ನಿಮ್ಮ ಜೊತೆ ಒಡನಾಡುತ್ತಿರುವ ನಾನು ಸುಳ್ಳಿರಬಹುದು. ಆದರೆ ನನ್ನ ಕತೆಗಳು ಸುಳ್ಳಲ್ಲ. ನನ್ನ ಕತೆಯೇ ಸತ್ಯ ಎಂದರು ಟಿಎನ್ನೆಸ್. ನಾನು ಇದುವರೆಗೂ ಸೀರಿಯಲ್‌ಗಳಿಗಾಗಿ ಪ್ರತಿದಿನದಂತೆ ಸುಮಾರು 7000 ಕತೆಗಳನ್ನು ಬರೆದಿದ್ದೇನೆ. ಮನುಷ್ಯ ಮೂಲಭೂತವಾಗಿ ಕತೆ ಕಟ್ಟುವವನಾದ್ದರಿಂದ ಇದು ಸಾಧ್ಯವಾಗಿದೆ ಎಂದವರ ಮಾತು.
ಹಾಸ್ಯಕವನ, ಹನಿಕವನ ಬರೆಯುವುದು ನನ್ನ ಆಯ್ಕೆಯಾಗಿರಲಿಲ್ಲ. ಅದು ಅನಿವಾರ್ಯ ಆಗಿತ್ತು. ಮಾಧ್ಯಮಗಳೂ ಕೆಲವೊಮ್ಮೆ ಅದನ್ನೇ ಬಯಸುತ್ತಿದ್ದವು. ನನಗೆ ಗಂಭೀರ ಕಾವ್ಯ ರಚನೆ ಇಷ್ಟವೇ. ಹಲವು ಗಂಭೀರ ಕಾವ್ಯ ರಚಿಸಿದ್ದೇನೆ ಕೂಡಾ. ಆದರೆ ಜನರ ಗಮನ ಹೆಚ್ಚು ಸೆಳೆದದ್ದು ಹನಿಗವನಗಳು ಎಂಬುದು ಡುಂಡಿರಾಜ್ ಮಾತಾಗಿತ್ತು. ಹಾಲು ಮಾರಲು ಬರುತ್ತಿದ್ದ ಹುಡುಗಿಯ ಬಗ್ಗೆ ಬರೆದ ಮೊದಲ ಕವನ ನೆನಪಿಸಿಕೊಂಡರು ಡುಂಡಿ.
ಗಂಭೀರ ಕವನ ಬರೆಯಲು ಸಾಕಷ್ಟು ಜನರಿದ್ದಾರೆ; ಆದರೆ ಹನಿಗವನ ಬರೆಯುವುದರಲ್ಲಿ ನಿನಗೆ ಸ್ಪರ್ಧಿಗಳಿಲ್ಲ ಎಂದು ಗೆಳೆಯ ಬಿಆರೆಲ್ ತನಗೆ ಒತ್ತಾಸೆಯಾಗಿ ನಿಂತುದನ್ನು ಡುಂಡಿ ನೆನಪಿಸಿಕೊಂಡರು. ಆತ್ಮತೃಪ್ತಿಯ ರಚನೆಗಳು ಮತ್ತು ಜನಪ್ರಿಯ ರಚನೆಗಳು- ಎರಡರ ನಡುವೆ ಭೇದ ಇದ್ದೇ ಇರುತ್ತದೆ. ಹೊಟ್ಟೆಪಾಡಿನ ಪ್ರಶ್ನೆ ಬಂದಾಗ ಜನಪ್ರಿಯ ರಚನೆಗಳು ಅನಿವಾರ್ಯವಾಗುತ್ತವೆ; ಆತ್ಮತೃಪ್ತಿ ಬದಿಗೆ ಸರಿಯುತ್ತದೆ ಎಂಬುದು ಇಬ್ಬರ ಒಕ್ಕೊರಲ ಉತ್ತರವಾಗಿತ್ತು.
ಅನಂತ ಕುಣಿಗಲ್ ಚುರುಕಾದ ಪ್ರಶ್ನೆಗಳ ಮೂಲಕ ಈ ಕಾರ್ಯಕ್ರಮ ನಡೆಸಿಕೊಟ್ಟರು. ಕವಿತಾ ಹೆಗಡೆ ಅಭಯಂ ಕಾರ್ಯಕ್ರಮವನ್ನು ನಿರ್ವಹಿಸಿದರು. ಜೋಗಿ, ಗೋಪಾಲಕೃಷ್ಣ ಕುಂಟಿನಿ ಉಪಸ್ಥಿತರಿದ್ದರು.
ಇದನ್ನೂ ಓದಿ: Pustaka Sante : ವೀರಲೋಕ ಪುಸ್ತಕ ಸಂತೆ ಅದ್ಧೂರಿ ಆರಂಭ, ವೆರಿ ಗುಡ್ ಎಂದು ಬೆನ್ನುತಟ್ಟಿದ ಸಿಎಂ ಸಿದ್ದರಾಮಯ್ಯ