Site icon Vistara News

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ನೀಡುವ 2022ನೇ ಸಾಲಿನ ಬಹುಮಾನಗಳು ಪ್ರಕಟ

kuvempu bhasha

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2022ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಗಳು ಪ್ರಕಟವಾಗಿವೆ. ಎಸ್‌.ಎಲ್‌.ಭೈರಪ್ಪನವರ ʻಉತ್ತರಕಾಂಡʼ ಕಾದಂಬರಿಯ ಇಂಗ್ಲಿಷ್‌ ಅನುವಾದಕ್ಕೆ ಪುರಸ್ಕಾರ ದೊರೆತಿದೆ.

ಈ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿಗಳನ್ನು ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ ಭಟ್‌ ಪ್ರಕಟಿಸಿದ್ದಾರೆ. ಕರ್ನಾಟಕ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ| ಸಿ.ಆರ್. ಯರವಿನತೆಲಿಮಠ, ಮೈಸೂರು ವಿವಿಯ ವಿಶ್ರಾಂತ ಪ್ರಾಧ್ಯಾಪಕ ಆರ್.ವಿ.ಎಸ್. ಸುಂದರಂ, ಲೇಖಕಿ ವಿಜಯಾ ಗುತ್ತಲ, ಭಾಷಾಂತರಕಾರ ಕೆ.ನಲ್ಲತಂಬಿ ಹಾಗೂ ಅನುವಾದಕ, ನಿಘಂಟು ರಚನಕಾರ ವಿ.ಕೃಷ್ಣ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ರೂ. ನಗದು ಮತ್ತು ಫಲಕ ಒಳಗೊಂಡಿದೆ.

ಪುಸ್ತಕ ಬಹುಮಾನಗಳು

2021ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪುಸ್ತಕ ಬಹುಮಾನಗಳನ್ನೂ ಪ್ರಕಟಿಸಲಾಗಿದೆ. ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡ ಪುಸ್ತಕ ಬಹುಮಾನಕ್ಕೆ ಡಾ| ಎಚ್.ಆರ್. ವಿಶ್ವಾಸ ಅವರು ಅನುವಾದಿಸಿದ “ಉತ್ತರಕಾಂಡಂ’ ಕೃತಿ ಆಯ್ಕೆಯಾಗಿದೆ. ಇದು ಎಸ್‌.ಎಲ್.ಭೈರಪ್ಪನವರ ಉತ್ತರಕಾಂಡದ ಅನುವಾದ.

ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಗೊಂಡ “ದ ಎಸೆನ್ಶಿಯಲ್ ಮಹಾಭಾರತ’ ಕೃತಿ (ಅನುವಾದಕರು: ಅರ್ಜುನ ಭಾರದ್ವಾಜ ಮತ್ತು ಹರಿ ರವಿಕುಮಾರ್. ಇದು ಎ.ಆರ್.ಕೃಷ್ಣಶಾಸ್ತ್ರಿ ಅವರ ವಚನಭಾರತದ ಅನುವಾದ)ಗೆ ಪುಸ್ತಕ ಬಹುಮಾನ ದೊರೆತಿದೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಗೊಂಡ “ಪರ್ದಾ -ಪಾಲಿಗಮಿ’ (ಅನುವಾದಕರು: ದಾದಾಪೀರ್ ಜೈಮನ್) ಕೃತಿ, ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಬಂದುದಕ್ಕೆ ನೀಡುವ ಬಹುಮಾನಕ್ಕೆ ಮಲರ್‌ವಿಳಿ ಕೆ. ಅವರ “ಕಳ್ಳಿಗಾಡಿನ ಇತಿಹಾಸ’ ಕೃತಿ, ಮೋಹನ ಕುಮಾರ ಕುಂಟಾರು ಅವರ “ಪ್ರೇಮಪತ್ರ’ ಕೃತಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ. ಪುಸ್ತಕ ಬಹುಮಾನವು ತಲಾ 25 ಸಾವಿರ ರೂ. ಬಹುಮಾನ ಮತ್ತು ಪುರಸ್ಕಾರ ಒಳಗೊಂಡಿದೆ.

ಇದನ್ನೂ ಓದಿ: 68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ

Exit mobile version