ದೇಶವನ್ನು ಬೆಚ್ಚಿ ಬೀಳಿಸಿದ ರಾಜೀವ್ ಗಾಂಧಿ ಹತ್ಯೆ ಘಟನೆಯಲ್ಲಿ ಸುಳ್ಳು ಆರೋಪಕ್ಕೆ ತುತ್ತಾದವರು ವೆಂಕಟೇಶ್ ಮೂರ್ತಿ. ಪತ್ರಕರ್ತ ಹಾಗೂ ಲೇಖಕರಾದ ಶಿವಕುಮಾರ್ ಮಾವಲಿ ಈ ಘಟನೆಯನ್ನು LTTE ಮೂರ್ತಿ Calling ಎಂಬ ಪುಸ್ತಕದ ಮೂಲಕ ನಿರೂಪಿಸಿದ್ದಾರೆ. ಈ ಪುಸ್ತಕವನ್ನು ಸಾವಣ್ಣ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕದ ಆಯ್ದ ಭಾಗವನ್ನು ಇಲ್ಲಿ ಓದಬಹುದು.
ಭಾಗ 2: ಆಗಸ್ಟ್ 20, 1991-ಪುಷ್ಪ
ಎಂದಿನಂತೆ ಎದ್ದವಳು ಮನೆಯ ಕೆಲಸದಲ್ಲಿ ನಿರತಳಾಗಿದ್ದೆ. ಮೂರ್ತಿಯ ಚಲನವಲನಗಳ ಬಗ್ಗೆ ವಿಶೇಷವಾಗಿ ಏನು ಗಮನ ಕೊಟ್ಟಿರಲಿಲ್ಲ. ಅವರು ಕೂಡ ದಿನನಿತ್ಯದಂತೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಬೆಳಗಿನಿಂದ ನಾಲ್ಕೈದು ಬಾರಿ ಲ್ಯಾಂಡ್‌ಲೈನಿಗೆ ಬಂದ ಫೋನ್ ಕರೆಗಳನ್ನು ಸ್ವೀಕರಿಸಿ ಮಾತನಾಡಿದ್ದನ್ನು ಗಮನಿಸಿದ್ದೆ. ಅದರಲ್ಲೇನು ವಿಶೇಷವಾಗಲೀ ಸಂಶಯ ಬರುವಂತದ್ದಾಗಲೀ ಇರಲಿಲ್ಲ. ಸಾಮಾನ್ಯವಾಗಿ ನಮ್ಮ ಮನೆಗೆ ಪ್ರತಿನಿತ್ಯ ದಿನಪತ್ರಿಕೆ ತರುತ್ತಿರಲಿಲ್ಲ. ಆದರೆ ಅವತ್ತು ಮೂರ್ತಿ ಬೆಳಗ್ಗೆ ಹೊರಹೋದಾಗ ಹಾಲಿನ ಪ್ಯಾಕೆಟ್ ತಂದಿಟ್ಟು, ಸ್ನಾನ ಮುಗಿಸಿ ಬಂದವರು ಹಿಂದಿಂದೆ ಬಂದ ಫೋನ್ ಕರೆಗಳನ್ನು ಸ್ವೀಕರಿಸಿ ಮಾತನಾಡಿ, ಮತ್ತೆ ಹೊರ ಹೋಗಿ ದಿನಪತ್ರಿಕೆ ತಂದಿದ್ದರು. ಇದನ್ನು ನಾನು ಗಮನಿಸಿದ್ದೆನಾದರೂ ಆ ಕಡೆ ಲಕ್ಷ್ಯ ಕೊಡಲು ಹೋಗಿರಲಿಲ್ಲ.
ಹಿರಿಯ ಮಗಳು ನಿಶಾಗೆ ಆಗ ಏಳು ವರ್ಷ. ಚಿಕ್ಕವಳು ನೀತು. ಅವಳಿಗೆ ಮೂರು ವರ್ಷವಾಗಿತ್ತು. ಇಬ್ಬರನ್ನೂ ಸ್ಕೂಲಿಗೆ ಕಳಿಸಲು ತಯಾರು ಮಾಡಿದ ನಂತರ ಮೂರ್ತಿಯವರನ್ನು ಸಹಜವಾಗಿ ಒಂದೆರಡು ಬಾರಿ ಕರೆದೆ. ಆದರೆ ಉತ್ತರ ಬರಲಿಲ್ಲ. ಇನ್ನೊಂದೆರಡು ಬಾರಿ ಕರೆದಾಗಲೂ ಉತ್ತರವಿಲ್ಲದಾಗ ತಿಳಿಯಿತು. ಅವರು ಮನೆಯಲ್ಲಿಲ್ಲ ಎಂದು. ದಿನಾಲು ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದವರು ಅವರೇ. ಮಕ್ಕಳು ಶಾಲೆಗೆ ಹೊರಡುವ ಸಮಯದಲ್ಲಿ ಇವರಲ್ಲಿಗೆ ಹೋದರೆಂದು ನೆನೆದು ಕೋಪವೂ ಬಂತು. ಅದಕ್ಕಿಂತ ಹೆಚ್ಚಾಗಿ ಏನೂ ಹೇಳದೇ, ಇವರು ಮನೆಯಿಂದ ಹೋದದ್ದಾದರೂ ಎಲ್ಲಿಗೆ? ಎಂಬ ದಿಗಿಲು೦ಟಾಯಿತು.
ದೇವರ ಕೋಣೆಯಲ್ಲಿ ಪೂಜಾ ನಿರತರಾಗಿದ್ದ ಅತ್ತೆಯನ್ನು ಕೇಳಿದೆ. ಅದಕ್ಕವರು, ‘ಅಯ್ಯೋ, ಇಲ್ಲೇ ಎಲ್ಲೋ ಹೋಗಿರ್ತಾನೆ. ಅವ್ನೇನು ದಿನಾ ಹೇಳಿ ಹೊರಗೆ ಹೋಗ್ತಾನಾ?’ ಎಂದರು. ಮಾವನಿಗೂ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಸ್ವತಃ ವೈದ್ಯರಾದ ಅವರು ಯೋಗಾಭ್ಯಾಸದಲ್ಲಿ ನಿರತರಾಗಿದ್ದರು. ಸಮಯ ಒಂಭತ್ತಾದರೂ ಮೂರ್ತಿಯ ಸುಳಿವಿಲ್ಲ. ಮಕ್ಕಳ ಯೂನಿಫಾರಂ ಬಿಚ್ಚಿಸಿ, ಆ ದಿನ ಶಾಲೆಗೆ ಹೋಗುವುದು ಬೇಡ ಎಂದು ಅವರಿಗೆ ತಿಳಿಸಿದೆ.
ಅತ್ತೆ ಪೂಜೆ ಮುಗಿಸಿ ಬಂದರು. ತಿಂಡಿ ತಿನ್ನಿ ಎಂದರೆ ‘ಅವನೂ ಬರ್ಲಿ ಇರು’ ಎಂದರು. ಮಾವನಿಗೆ ಹೇಳಿದಾಗಲೂ ಅದೇ ಉತ್ತರ ಬಂತು. ಸುಮಾರು ಹತ್ತು ಗಂಟೆಯಾದರೂ ಮೂರ್ತಿ ಬರಲಿಲ್ಲ. ಅಲ್ಲಿಯವರೆಗೂ ಸಹಜವಾಗಿದ್ದ ನನಗೆ ಆಗ ಭಯ ಶುರುವಾಯಿತು. ಆ ಕ್ಷಣಕ್ಕೆ ಯಾರಿಗೆ ಫೋನ್ ಮಾಡಿ, ಏನು ಕೇಳಬೇಕು ಎಂಬುದೂ ನನಗೆ ತೋಚಲಿಲ್ಲ. ಹದಿನೇಳನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬಂದ ನನಗೆ ಗಂಡ ಏನು ಕೆಲಸ ಮಾಡುತ್ತಾರೆ ಎಂದು ತಿಳಿದಿತ್ತು ಬಿಟ್ಟರೆ, ಅವರ ಕೆಲಸ, ಹೊರಗಿನ ವ್ಯವಹಾರಗಳ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ನಾನು ಹೆಚ್ಚು ಕೇಳುತ್ತಿರಲಿಲ್ಲ; ಅವರು ಹೇಳುತ್ತಿರಲಿಲ್ಲ. ಹಾಗಾಗಿಯೇ ನನಗೆ ಯಾರನ್ನು ವಿಚಾರಿಸಬೇಕು ಎಂದು ಅಂದಾಜಾಗಲಿಲ್ಲ.
ಅತ್ತೆ, ಮಾವ ಇಬ್ಬರೂ ತಿಂಡಿ ತಿನ್ನಲು ತಯಾರಿರಲಿಲ್ಲ. ಮಕ್ಕಳು ಯುನಿಫಾರಂ ಬಿಚ್ಚಿಟ್ಟು ಶಾಲೆಗೆ ಹೋಗುವುದಿಲ್ಲವಲ್ಲ ಎಂಬ ಸಣ್ಣ ಖುಷಿಯೊಂದಿಗೆ ಮನೆಯೊಳಗೇ ಇದ್ದರು. ಸುಮಾರು ಹನ್ನೊಂದು ಗಂಟೆಯಾದರೂ ಮೂರ್ತಿಯವರ ಪತ್ತೆ ಇಲ್ಲ. ಆದರೆ ಆಗ ತಿಲಕನಗರ ಪೊಲೀಸ್ ಠಾಣೆಯಿಂದ ಎಸ್.ಐ. ಮತ್ತು ಹತ್ತಾರು ಜನ ಪಿ.ಸಿ.ಗಳು ಮನೆಯ ಕಡೆ ಬಂದರು. ಬಂದವರೇ, ‘ಮೂರ್ತಿ ಇಲ್ವೇನ್ರಿ?’ ಎಂದರು.
‘ಯಾಕೆ ಸರ್, ಏನಾಯ್ತು?’ ಎಂದೆ.
“ಮೂರ್ತಿ ಎಲ್ಲಿ ಹೋಗಿದ್ದಾರೆ? ಅದ್ನ ಹೇಳಿ.’
‘ನಾವು, ಅವರಿಗಾಗಿಯೇ ಕಾಯ್ತಾ ಇದ್ದೀವಿ ಸರ್, ಏನೂ ಹೇಳ್ದೆ ಎಲ್ಲಿಗೆ ಹೋದ್ರು ಅಂತ ಗೊತ್ತಾಗ್ತಿಲ್ಲ.ʼ
ಅತ್ತೆ, ಮಾವ ಭಯಗೊ೦ಡಿದ್ದನ್ನು ನೋಡಿದೆ. ಅತ್ತೆಯಂತೂ ದೇವರ ಕೋಣೆಗೆ ಹೋಗಿ ತುಪ್ಪದ ದೀಪ ಹಚ್ಚಿಟ್ಟು ಬಂದರು.
ʼಸರ್, ಏನು ಪ್ರಾಬ್ಲಂ? ಏಕೆ ಮನೆ ಮುಂದೆ ಅಷ್ಟು ದೊಡ್ಡ ಪೊಲೀಸ್ ವ್ಯಾನ್ ನಿಲ್ಲಿಸಿದ್ದೀರಿ?’ ಎಂದು ಮಾವ ಕೇಳಿದರು.
ʼನಿಮ್ಮ ಮಗ ಮೂರ್ತಿ ಇದಾನಲ್ಲ…ʼ ಎಂದು ಒರಟಾಗಿ ಏನೋ ಹೇಳಲು ಬಂದ ಪಿ.ಸಿ.ಯನ್ನ ತಡೆದು ಎಸ್.ಐ.ನವರು, ‘ನೋಡಿ ನಿಮ್ಮ ಮಗ ಮೂರ್ತಿ LTTEಯವರಿಗೆ ಸಿಂಪಥೈಸರ್ ಆಗಿ ಕೆಲ್ಸ ಮಾಡ್ತಿದ್ದಾನೆ ಅಂತ ಮಾಹಿತಿ ಬಂದಿದೆ. ಅದ್ಕೆ ಅವ್ರನ್ನ ಹುಡುಕ್ಕೊಂಡು ಬಂದಿದೀವಿ’ ಎಂದು ಸಾವಧಾನವಾಗಿ ತಿಳಿಸಿ ಹೇಳಿದರು.
‘ಅಲ್ಲ ಸರ್, ನನ್ ಮಗ ಮಾಡೋದು ಕಾರ್ ಡೀಲರ್ ಬ್ಯುಸಿನೆಸ್ಸು… ಅದ್ರಲ್ಲಿ ಲೈಸೆನ್ಸು, ಟ್ಯಾಕ್ಸು, ಇನ್ಶೂರೆನ್ಸ್ ಅಂತ ಅದೇನೇನೊ ಮಾತಾಡ್ತಾ ಇರ್ತಾನೆ; ಅದನ್ನ ಮಾಡಿದ್ರೆ ನೀವ್ಯಾಕ್ ಅವ್ನ ಹುಡುಕಿಕೊಂಡು ಬಂದಿದ್ದೀರಿ?’ ಎಂದು ಅತ್ತೆ ಕೇಳಿದ್ದಕ್ಕೆ, ಸ್ವಲ್ಪವೂ ಕೋಪ ಮಾಡಿಕೊಳ್ಳದ ಎಸ್.ಐ. ಅವರು,
‘ಅಮ್ಮ, ಇದು ಲೈಸೆನ್ಸು, ಟ್ಯಾಕ್ಸು, ಇನ್ಶೂರೆನ್ಸ್ ಕೇಸಲ್ಲ. LTTE ಅನ್ನೋದು ಒಂದು ಟೆರರಿಸ್ಟ್ ಗುಂಪು, ನಮ್ಮ ಪ್ರಧಾನಿಗಳನ್ನ ಮೂರು ತಿಂಗಳ ಹಿಂದೆ ತಮಿಳುನಾಡಿನಲ್ಲಿ ಕೊಂದ್ರಲ್ಲ ಅವರ ಗ್ಯಾಂಗು. ನೀವು ಪೇಪರಲ್ಲಿ, ಟಿ.ವಿ.ಯಲ್ಲಿ ನೋಡಿಲ್ವ, ಪ್ರಧಾನಿಯವರನ್ನು ಕೊಂದ ಹಂತಕರು ಇನ್ನೂ ದೇಶದಲ್ಲೇ ಇರೋ ಖಚಿತ ಮಾಹಿತಿ ಇದೆ. ಅದಕ್ಕಾಗಿಯೇ ದೇಶಾದ್ಯಂತ ಹೈ ಅಲರ್ಟ್ ಕೂಡ ಸರ್ಕಾರ ಘೋಷಿಸಿದೆ.’
‘ಅದಕ್ಕೂ ನಮ್ಮ ಮೂರ್ತಿಗೂ ಏನ್ ಸಂಬಂಧ ಸರ್? ದಯವಿಟ್ಟು ನೀವು ಈ ಪೊಲೀಸ್ನೋರ‍್ನೆಲ್ಲ ಇಲ್ಲಿಂದ ಹೋಗೋಕೆ ಹೇಳಿ’ ಎಂದು ಬೇಡಿಕೊಂಡರು ಅತ್ತೆ.
ʼಏನು ಲಿಂಕ್ ಇದೆ ಅನ್ನೋದು ಇನ್ವೆಸ್ಟಿಗೇಶನ್‌ನಿಂದ ತಿಳಿಯುತ್ತಮ್ಮ. ನೀವು ನಮಗೆ ಸಹಕರಿಸಬೇಕು. ಇದು ದೇಶದ ಮಾಜಿ ಪ್ರಧಾನಿಯನ್ನು ಕೊಂದವರಿಗೆ ಸಂಬಂಧಪಟ್ಟ ವಿಷ್ಯ, ಯಾಕೆ ನಿಮ್ಮನೇಲಿ ಪೇಪರ್ ತರಿಸೋದಿಲ್ವ?’
‘ಇಲ್ಲ ಸರ್, ಏನಾದ್ರು ಇಂಪಾರ್ಟೆಂಟ್ ಇದ್ದಾಗ ಮಾತ್ರ ಅವರೇ ತರ್ತಾರೆ’ ನಾನೇ ಹೇಳಿದೆ.
‘ಇವತ್ತು ತ೦ದಿದ್ರಾ?’
‘ಹೌದು ಸರ್, ಮೊದ್ಲು ತಂದಿರ್ಲಿಲ್ಲ, ಆಮೇಲೆ ಹೋಗಿ ತಂದ್ರು.’
‘ಎಲ್ಲಿದೆ ಪೇಪರ್ ?’
ನಾನು ಅದಾಗಲೇ ಮನೆಯಲ್ಲಿ ಪೇಪರ್ ಇಲ್ಲದ್ದನ್ನು ಖಚಿತಪಡಿಸಿಕೊಂಡಿದ್ದೆ. ಅವರು ಫೋನ್ ಕರೆಗಳಲ್ಲಿ ಮಾತಾಡಿದ ಮೇಲೆ, ಪೇಪರ್ ಕೊಂಡು ತಂದು, ನಂತರ ಮನೆಯಿಂದ ಎಲ್ಲೋ ಹೋಗಿದ್ದರು ಎಂಬ ವಿಷಯ ನನಗೆ ಆಗ ಸ್ಪಷ್ಟವಾಯಿತು, ಹಾಗಾಗಿ ‘ಮನೇಲಿ ಇಲ್ಲ ಸರ್ ಪೇಪರ್’ ಎಂದೆ.
‘ಈಗಿನ್ನು ತಂದಿದ್ರು ಅಂದ್ರಲ್ಲ… ಎಲ್ಲಿ ಹೋಯ್ತು?’
‘ಹೌದು ಸರ್. ಅವ್ರ ತಗೊಂಡೋಗಿರ್ಬೇಕು’
‘ಯೆಸ್- ಪೇಪರಲ್ಲಿರೋ ವಿಷ್ಯ ಮನೆಯವರಿಗೆಲ್ಲ ತಿಳಿಯುತ್ತೆ ಅಂತ ಅದ್ನ ತಗೊಂಡೇ ಹೋಗಿದಾರೆ ಬಿಡಿ.’
ʼಏನಿದೆ ಅಂತಾದ್ದು ಪೇಪರಿನಲ್ಲಿ?’ ಅತ್ತೆ ಕೇಳಿದರು.
ಎಸ್.ಐ. ಹೊರಗಡೆ ನಿಂತಿದ್ದ ಪಿ.ಸಿ.ಗೆ ಪೇಪರ್ ತರಲು ಹೇಳಿದರು. ಪೊಲೀಸ್ ವ್ಯಾನು, ಪಿ.ಸಿ.ಗಳು ಮನೆ ಸುತ್ತುವರಿದಿದ್ದರಿಂದ ಮನೆಯ ಹತ್ತಿರ ಸಾಕಷ್ಟು ಜನ ಸೇರಿದ್ದರು. ಅವರಲ್ಲಿಯೇ ಒಬ್ಬರು ದಿನಪತ್ರಿಕೆ ಹಿಡಿದೇ ಬಂದಿದ್ದರು. ಅವರ ಕೈಯಿಂದಲೇ ಪಿ.ಸಿ. ಪತ್ರಿಕೆ ತೆಗೆದುಕೊಂಡು ಬಂದು ಎಸ್.ಐ. ಕೈಗೆ ನೀಡಿದರು. ಎಸ್.ಐ. ಅದನ್ನು ಅತ್ತೆಯವರ ಕೈಗೆ ಕೊಡಬೇಕೆನ್ನುವಷ್ಟರಲ್ಲಿ ಮಾವ ಮಧ್ಯೆ ಪ್ರವೇಶಿಸಿ, ʼಆ ಪೇಪರಲ್ಲಿ ಏನಾದ್ರು, ಇರ್ಲಿ ಸರ್. ಪೇಪರಲ್ಲಿ ಬಂದಿದ್ದೆಲ್ಲ ನಿಜ ಇರ್ಬೇಕು ಅಂತೇನಿಲ್ಲ’ ಎಂದು ರೇಗಿದರು.
‘ಅದು ನಿಜಾನೋ ಸುಳ್ಳೋ ಅನ್ನೋದನ್ನ ತನಿಖೆಯಿಂದ ತಿಳಿಸ್ತೀವಿ ಬಿಡಿ’ ಎಸ್.ಐ. ಕೂಡ ರೇಗುವಂತೆಯೇ ಹೇಳಿದ್ದರು. ಆದರೆ ನಮ್ಮ ಮಾವ ಅಷ್ಟಕ್ಕೇ ಸುಮ್ಮನಾಗಲಿಲ್ಲ.
‘ನಾನು ಮೂವತ್ತೈದು ವರ್ಷ ವೈದ್ಯನಾಗಿ ಸೇವೆ ಸಲ್ಲಿಸಿದ್ದೀನಿ. ಆನೇಕಲ್‌ನಲ್ಲಿ ಹೋಗಿ ಕೇಳಿ ಜನರನ್ನ, ಡಾ. ಪಿ. ಅಣ್ಣಯ್ಯಪ್ಪ ಎಂಥವರು ಅಂತ.’
‘ದುಡ್ಡಿಲಿರೋ ರೋಗಿಗಳಿಗೆ ತಾವೇ ಕೈಯಿಂದ ಹಣ ಕೊಟ್ಟು ಕಳ್ಸೋರು ಸರ್ ನಮ್ ಮನೇವ್ರು.’
‘ಅಂತ ದೇಶಭಕ್ತರ ಮನೆ ಕಣಿ, ನಮ್ದು. ನೀವು ಹೀಗೆ ಮನೆಯೊಳಗೆ ನುಗ್ಗಿ, ಮನೆ ಹೊರಗೆ ಪೊಲೀಸ್ ವ್ಯಾನ್ ನಿಲ್ಸೋದು ದೇಶಭಕ್ತರಿಗೆ ಮಾಡೋ ಅವಮಾನ ಸರ್’ ಎಂದು ಭಾವನಾತ್ಮಕವಾಗಿ ಮಾತಾಡಿದರು ಮಾವ.
‘ಸರ್, ನಿಮ್ಮ ಸೇವೆಯ ಬಗ್ಗೆ ನಾವ್ಯಾರೂ ಹಗುರವಾಗಿ ಮಾತಾಡ್ತಿಲ್ಲ. ಈಗಿರೋ ವಿಷ್ಯ ಬೇರೆನೆ. ಅದು ನಿಮ್ಮ ಮಗನಿಗೆ ಸಂಬಂಧಿಸಿದ್ದು. ನಿಮ್ಮದೇ ಥರದ ದೇಶಭಕ್ತಿ ನಿಮ್ಮ ಮಗನಿಗೂ ಇರಬೇಕಲ್ವ?’
‘ಸರ್, ನನ್ ಮಗ ಏನ್ ಮಾಡಿದ್ದಾನೆ?’ ಅತ್ತೆ ಅಳುತ್ತಾ ಕೇಳಿದರು. ಅವರನ್ನು ಕರೆತಂದು ಕುರ್ಚಿಯ ಮೇಲೆ ಕೂರಿಸಿ, ಸಮಾಧಾನ ಮಾಡಿದೆ.
ಮಕ್ಕಳಿಗೆ ಏನೊಂದೂ ಅರಿವಾಗದೆ, ಕಣ್ ಕಣ್ ಬಿಡುತ್ತಿದ್ದರು. ಮೂರ್ನಾಲ್ಕು ತಾಸಾದರೂ ಒಂದು ಫೋನ್ ಕರೆ ಕೂಡ ಮಾಡಿರದ ಮೂರ್ತಿಯ ಮೇಲೆ ನನಗೆ ಕೋಪವೂ ಬರುತ್ತಿತ್ತು. ಹಾಗೆಯೇ ಪೊಲೀಸರು ಹೇಳಿದಂತೆ ಇವರು ಏನಾದರೂ ಕೆಟ್ಟ ವ್ಯವಹಾರದಲ್ಲಿ ಪಾಲ್ಗೊ೦ಡಿರಬಹುದೆ? ಎಂದೂ ಆಲೋಚನೆ ಬಂತು. ಹಾಗಾಗಿಯೇ ಇವರು ಮನೆಗೆ ತಿಳಿಸದೇ ಹೋಗಿದ್ದಾರೆ ಎಂದೇ ನನಗೂ ಅನ್ನಿಸಿತು. ಆದರೆ ಗಂಡನ ಬಗ್ಗೆ ಹೀಗೆಲ್ಲ ಯೋಚಿಸುವುದು ತಪ್ಪು ಎಂದು ಬಲವಾಗಿ ನಂಬಿಕೊಂಡೆ. ನಾನು ಧೈರ್ಯ ಕಳೆದುಕೊಂಡರೆ ಅತ್ತೆ, ಮಾವ, ಮಕ್ಕಳನ್ನು ಸಂಭಾಳಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನೋವು ನುಂಗಿಕೊಂಡೆ.
‘ಸರ್, ಆ ಪತ್ರಿಕೆ ಕೊಡಿ’ ಎಂದು ನಾನೇ ಕೇಳಿದೆ.
‘ಎಲ್‌ಟಿಟಿಇಯ ಶಿವರಾಸನ್ ಮತ್ತವನ ಸಹಚರರಿಗೆ ಊಟ ಒದಗಿಸುತ್ತಿದ್ದ ಜಿಪ್ಸಿ ನಂ. 9009 ಕಂಡಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು’ ಎಂದು ಪೊಲೀಸ್ ಪ್ರಕಟಣೆ ಮಾಡಿದ್ದು ದೊಡ್ಡ ಅಕ್ಷರಗಳಲ್ಲಿ ಸುದ್ದಿಯಾಗಿತ್ತು!
ನಾನು ಪೇಪರಿನಲ್ಲಿ ಇನ್ನೇನು ಬರೆದಿದ್ದಾರೆ ಎಂದು ಓದೋಣವೆಂದುಕೊಂಡೆ. ಅಷ್ಟರಲ್ಲಿ ಎಸ್.ಐ. ನನ್ನನ್ನು ಮನೆಯಿಂದ ಹೊರಗೆ ಕರೆತಂದು, ಮನೆಯ ಪಕ್ಕದ ಖಾಲಿ ಸೈಟಿನಲ್ಲಿದ್ದ ಜಿಪ್ಸಿಯೊಂದನ್ನು ತೋರಿಸಿ, ‘ಈ ಜಿಪ್ಸಿನ ನೀವು ಗುರುತಿಸ್ತೀರ?ʼ ಎಂದರು.
ಕಥೆ: ಎ. ವೆಂಕಟೇಶಮೂರ್ತಿ
ನಿರೂಪಣೆ: ಶಿವಕುಮಾರ ಮಾವಲಿ
ಪ್ರಕಾಶನ: ಸಾವಣ್ಣ
ಬೆಲೆ: 120 ರೂ.
ಇದನ್ನೂ ಓದಿ: Sunday read | ಹೊಸ ಪುಸ್ತಕ | ಹೀರೋಯಿನ್ ಹಾಗೆ ಇದ್ದ ಹುಡುಗಿ