ಬೆಂಗಳೂರು: ಕಳೆದ ಸುಮಾರು 40 ವರ್ಷಗಳಿಂದ ಕನ್ನಡಿಗರ ಪಾಲಿನ ಮನೆ ಮಗಳಂತಿದ್ದ ʻಮಂಗಳʼ ವಾರ ಪತ್ರಿಕೆ (Mangala Weekly) ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಗ್ರಾಮೀಣ ಭಾಗದಿಂದ ನಗರದವರೆಗೆ, ಸಾಹಿತಿಗಳಿಂದ ಪಾಮರರವರೆಗೆ, ಕಿರಿಯರಿಂದ ವಯೋವೃದ್ಧರವರೆಗೆ, ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಮಂಗಳಾ ವಾರಪತ್ರಿಕೆಯ ಕೊನೆಯ ಸಂಚಿಕೆ ಈಗ ಮಾರುಕಟ್ಟೆಗೆ ಬಂದಿದೆ. ಇನ್ನೆಂದೂ ಮಂಗಳ ಪ್ರಕಟವಾಗುವುದಿಲ್ಲ ಎಂದು ಸಂಪಾದಕರು ಪ್ರಕಟಣೆ ನೀಡಿದ್ದಾರೆ.
ಮುಂದಿನ ಸಂಚಿಕೆ ಇರುವುದಿಲ್ಲ
ಒಂದು ಕಾಲದಲ್ಲಿ ಅತ್ಯಂತ ಶಕ್ತಿಶಾಲಿ ಪ್ರಸರಣವನ್ನು ಕಂಡಿದ್ದ ಮಂಗಳ ಕೊರೊನಾ ನಂತರ ಎದುರಿಸಿದ ಸಂಕಷ್ಟದ ಪರಿಸ್ಥಿತಿ ಈಗ ಅದು ಪ್ರಕಟಣೆ ನಿಲ್ಲಿಸಲು ಮೂಲ ಕಾರಣ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುದ್ರಣ ವೆಚ್ಚ ವಿಪರೀತ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪತ್ರಿಕೆಯನ್ನು ನಡೆಸಿಕೊಂಡು ಹೋಗುವುದು ತ್ರಾಸದಾಯಕವಾಗಿರುವುದರಿಂದ ಈ ಸಂಚಿಕೆಯೊಂದಿಗೆ ʻಮಂಗಳʼದ ಪ್ರಕಟಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಮುಂದಿನ ಸಂಚಿಕೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮನೆ ಮನೆಯ ಪತ್ರಿಕೆ, ಮಹಿಳೆಯರ ಅಚ್ಚುಮೆಚ್ಚು
ದಿವಂಗತ ಎಂ.ಸಿ. ವರ್ಗೀಸ್ ಅವರು ಆರಂಭ ಮಾಡಿದ ಈ ಪತ್ರಿಕೆಯನ್ನು ಬಾಬು ಕೃಷ್ಣಮೂರ್ತಿ ಅವರು ಬಹುಕಾಲ ಸಂಪಾದಕರಾಗಿ ಮುನ್ನಡೆಸಿದ್ದರು. ನಂತರ ಸಂಪಾದಕರಾದ ಬಿ.ಎಂ. ಮಾಣಿಯಾಟ್, ಎನ್.ಎಸ್. ಶ್ರೀಧರ ಮೂರ್ತಿ ಅವರು ಸಾರಥ್ಯ ವಹಿಸಿಕೊಂಡರು. ಕಳೆದ 14 ವರ್ಷಗಳಿಂದ ಸಂಪಾದಕರಾಗಿ ಈಗ ಕೊನೆಯ ಸಂಚಿಕೆಯನ್ನೂ ರೂಪಿಸಿದವರು ಎನ್ನೇಬಿ ಮೊಗ್ರಾಲ್ ಪುತ್ತೂರು. ಎಲ್ಲ ಸಂಪಾದಕರು ಕೂಡಾ ಜನರ ನಾಡಿಮಿಡಿತವನ್ನು ಅರಿತು ಪತ್ರಿಕೆಯನ್ನು ಕಟ್ಟಿದ್ದರಿಂದ ಅದು ಎಲ್ಲರ ಮನೆಯ ಮಗಳಂತೆ ಬೆಳೆಯಿತು. ಸರಳ ಭಾಷೆ, ಸರಳಾತಿ ಸರಳ ಸಂಗತಿಗಳು ಅದರ ಹೆಚ್ಚುಗಾರಿಕೆ. ರಾಜ್ಯದಲ್ಲಿ ಅತಿ ಹೆಚ್ಚು ಮಹಿಳಾ ಓದುಗರನ್ನು ಹೊಂದಿದ ಪತ್ರಿಕೆಯಾಗಿ ಬೆಳೆದಿತ್ತು ಮಂಗಳ.
ಧಾರಾವಾಹಿಗಳು ಜೀವಾಳ, ಅದರ ಚಿತ್ರಗಳು ರಸಗವಳ
ಒಂದು ವಿಶೇಷ ಲೇಖನ, ಕೆಲವು ಚಿಕ್ಕಪುಟ್ಟ ಲೇಖನಗಳು, ಕ್ವಿಜ್, ಸಿನಿಮಾ, ಮಕ್ಕಳ ವಿಭಾಗ ಹೀಗೆ ಎಲ್ಲರನ್ನೂ ಒಳಗೊಳ್ಳುವ ಹಾಗೆ ರೂಪುಗೊಳ್ಳುತ್ತಿದ್ದ ಮಂಗಳ ವಾರಪತ್ರಿಕೆಯ ನಿಜವಾದ ಶಕ್ತಿ ಅದರ ಧಾರಾವಾಹಿಗಳು. ಒಂದು ಸದಭಿರುಚಿಯ ಪತ್ರಿಕೆಯಾಗಿ ಎಲ್ಲವನ್ನೂ ಒಳಗೊಂಡಿದ್ದ ಪತ್ರಿಕೆಯನ್ನು ಪ್ರತಿ ವಾರವೂ ಓದುಗರು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದ್ದು ಧಾರಾವಾಹಿಗಳು. ಅತ್ಯಂತ ಕುತೂಹಲಕಾರಿ ಕಥಾನಕಗಳೊಂದಿಗೆ ರಂಜಿಸುತ್ತಿದ್ದ ಧಾರಾವಾಹಿಗಳಿಗೆ ಬಿಡಿಸಲಾಗುತ್ತಿದ್ದ ಸೊಗಸಾದ ಚಿತ್ರಗಳು ಜೀವಂತ ಪಾತ್ರಗಳಂತೆಯೇ ಗಮನ ಸೆಳೆಯುತ್ತಿದ್ದವು.
ಉಷಾ ನವರತ್ನರಾಮ್, ಸಾಯಿಸುತೆ, ಸಿ.ಎನ್. ಮುಕ್ತಾ, ಬಿ.ಎಲ್. ವೇಣು, ಸುದರ್ಶನ ದೇಸಾಯಿ, ಕೌಂಡಿನ್ಯ… ಜನಪ್ರಿಯ ಕಾದಂಬರಿಕಾರರು ಮಂಗಳಕ್ಕೆ ಬರೆಯುತ್ತಿದ್ದರೆ ಇನ್ನೊಂದು ಕಡೆ ನೂರಾರು ಕಾದಂಬರಿಕಾರರನ್ನು ಸೃಷ್ಟಿಸಿದ ಕೀರ್ತಿ ಕೂಡಾ ಮಂಗಳಕ್ಕೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾದಂಬರಿ ಬರೆಯುವುದು ಹೇಗೆ ಎನ್ನುವ ಕಮ್ಮಟಗಳನ್ನು ಹಿಂದೆ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ಅವರು ಏರ್ಪಡಿಸಿದ್ದರು. ಈಗ ದೊಡ್ಡ ಕಾದಂಬರಿಕಾರರಾಗಿ ಗುರುತಿಸಲಾಗುವ ಹಲವರು ಮಂಗಳದಿಂದಲೇ ತಮ್ಮ ಮಂಗಳಯಾನ ಆರಂಭ ಮಾಡಿದವರು. ಈಗ ದೊಡ್ಡ ಹೆಸರು ಮಾಡುತ್ತಿರುವ ಕವಿಗಳ ಮೊದಲ ಕವನ, ಕಥೆಗಾರರ ಮೊದಲ ಕಥೆಗೆ ಆಸರೆ ಕೊಟ್ಟಿದ್ದು ಮಂಗಳ.
ಜನರೊಂದಿಗೆ ನೇರ ಸಂಪರ್ಕ, ಮಂಗಳ ಓದುಗರ ಬಳಗ
ಪ್ರತಿ ವಾರವೂ ಜನರೊಂದಿಗೆ ನೇರ ಸಂವಹನ ಮಂಗಳಾ ವಾರಪತ್ರಿಕೆಯ ಮತ್ತೊಂದು ಮಹತ್ವದ ಹೆಜ್ಜೆ. ಕ್ವಿಜ್ ಪ್ರಶ್ನೋತ್ತರಗಳನ್ನು ಮಾಡಿ ಅದರಲ್ಲಿ ಗೆದ್ದವರ ಫೋಟೊ ಪ್ರಕಟಿಸಿ, ಅವರಿಗೆ ಬಹುಮಾನ ನೀಡಿ ಗೌರವಿಸುವ ಅತಿ ದೊಡ್ಡ ಗೌರವವನ್ನು ಅದು ನೀಡಿತ್ತು. ಮನೆಯ ಹಿರಿಯರೂ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಫೋಟೊ ಅಚ್ಚಾದಾಗ ಖುಷಿಪಟ್ಟಿದ್ದರು.
ಮಂಗಳ ಪತ್ರ-ಮೈತ್ರಿ ಎನ್ನುವ ಅಂಕಣ ನಾಡಿನ ಸಾವಿರಾರು ಮಂದಿಯ ನಡುವೆ ಸ್ನೇಹದ ಬೆಸುಗೆ ಬೆಸೆಯಿತು. ಅದೆಷ್ಟೋ ಊರುಗಳಲ್ಲಿ ಮಂಗಳಾ ಓದುಗರ ಬಳಗ ಸೃಷ್ಟಿಯಾಯಿತು. ಆ ಮಟ್ಟಿಗೆ ಓದುಗರೊಂದಿಗೆ ಒಡನಾಟ ಬೆಸೆದು, ಅವರನ್ನು ಬೆಳೆಸುತ್ತಾ, ತಾನೂ ಬೆಳೆದ ಪತ್ರಿಕೆ ಮಂಗಳ. ತನ್ನ ಓದುಗರನ್ನೇ ಬರಹಗಾರರಾಗಿ ಬೆಳೆಸಿದ ಶಕ್ತಿವಂತ ಪತ್ರಿಕೆ ಮಂಗಳ.
ಮಂಗಳದ ಬಹುತೇಕ ಸಂಚಿಕೆಗಳಲ್ಲಿ ಹೆಣ್ಣುಮಕ್ಕಳ ಮುಖಪುಟಗಳೇ ಇರುತ್ತಿದ್ದವು. ಅವರೆಲ್ಲ ಚಿತ್ರನಟಿಯರೇ ಆಗಿದ್ದರೂ ಯಾವತ್ತೂ ಅಸಭ್ಯ ಎನಿಸುವ ಉಡುಗೆಯಲ್ಲಿ ಕಂಡದ್ದೇ ಇಲ್ಲ. ಎಂಥ ನಟಿಯರಾದರೂ ಪಕ್ಕದ್ಮನೆ ಹುಡುಗಿಯರು ಅನಿಸೋ ರೀತಿಯಲ್ಲಿ, ಮನೆ ಮಗಳಂತೆ ಸಿಂಗರಿಸಿ ಅವರನ್ನು ಮನೆಗೆ ಕಳುಹಿಸುತ್ತಿದ್ದ ಸದಭಿರುಚಿ ಮಂಗಳದ ವಿಶೇಷ.
ನಾಡಿನಾದ್ಯಂತ ಬೇಸರದ ಮಾತು, ನೆನಪುಗಳ ಮೆರವಣಿಗೆ
ಅಂಥ ವಾರಪತ್ರಿಕೆ ತನ್ನ ಪ್ರಕಟಣೆಯನ್ನು ನಿಲ್ಲಿಸುತ್ತಿದೆ ಎಂದು ಪ್ರಕಟಿಸುತ್ತಿದ್ದಂತೆಯೇ ಆ ಪತ್ರಿಕೆಯ ಜತೆ ಒಡನಾಟ ಹೊಂದಿದ್ದ ನೂರಾರು ಬರಹಗಾರರು, ಓದುಗರು ತುಂಬ ನೋವಿನಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ತುಂಬ ಮಂಗಳ ಯಾನದ ನೆನಪುಗಳ ಮೆರವಣಿಗೆಯೇ ನಡೆಯುತ್ತಿದೆ.
ಹಿರಿಯ ಕಾದಂಬರಿಕಾರ ವಿವೇಕಾನಂದ ಕಾಮತ್, ಕಥೆಗಾರರಾದ ವಿನಾಯಕ ಅರಳಸುರುಳಿ, ಪದ್ಮನಾಭ ಭಟ್ ಶೇವ್ಕಾರ್, ಕಿರಣ್ ಪ್ರಸಾದ್ ಕುಂಡಡ್ಕ.. ಹೀಗೆ ಹಲವಾರು ಮಂದಿ ಮಂಗಳದ ನೆನಪಿನ ಸುರುಳಿ ಬಿಚ್ಚಿಟ್ಟಿದ್ದಾರೆ.
ಸಂಪಾದಕರ ಕೊನೆಯ ಮಾತು
ಮಂಗಳ ಸಂಪಾದಕರಾದ ಎನ್ನೇಬಿ ಮೊಗ್ರಾಲ್ ಅವರು ಕೂಡಾ ಪತ್ರಿಕೆಯ ಕೊನೆಯ ಸಂಚಿಕೆಯ ಮುಖಪುಟ ಹಂಚಿಕೊಂಡು ಭಾವುಕರಾಗಿದ್ದಾರೆ.
ಅವರ ಬರಹದ ಕೊನೆಯ ಪ್ಯಾರಾ ಇಲ್ಲಿದೆ: ಸ್ವೀಕೃತ ಕಾದಂಬರಿಗಳು, ಕಥೆಗಳು, ಕವನಗಳು, ಲೇಖನಗಳು ಕಡತದಲ್ಲಿ ಸಾಕಷ್ಟಿವೆ. ಅವುಗಳ ಲೇಖಕರಿಗೆ ಆಗುವ ನೋವು-ನಿರಾಶೆಯನ್ನು ಅವರ ಪಕ್ವತೆ ಮೆಟ್ಟಿನಿಲ್ಲಬಹುದೇನೋ. ಆದರೆ ಯಾವ ರೀತಿಯಲ್ಲೂ ಸಮಾಧಾನ ಹೇಳಲಾಗದಂತಹ ಚಿತ್ರವೊಂದು ಮೊನ್ನೆ ಮೇಲ್ ಮೇಲೆ ಕಣ್ಣಾಡಿಸುತ್ತಿದ್ದಾಗ ಎದುರಾಯಿತು. ‘ನಮ್ಮ ಮನೆ ಬೆಳಕು’ ವಿಭಾಗಕ್ಕೆ ಬಂದ ಒಂದಷ್ಟು ಮುಗ್ಧ ಪುಟಾಣಿಗಳ ಭಾವಚಿತ್ರಗಳು ನನ್ನತ್ತ ನೋಡಿ, ‘ಅಂಕಲ್, ನಮ್ಮ ಫೋಟೋ ಯಾವಾಗ ಬರುತ್ತೆ?’ ಎಂದು ಕೇಳಿದಂತಾಗಿ ಕ್ಷಣ ಭಾವುಕನಾದೆ. ‘ಸಾರಿ ಕಂದಮ್ಮಗಳಾ…’ ಎನ್ನುತ್ತಾ ಮೇಲ್ ಮುಚ್ಚಿದೆ.