- ಮೂಲ ಇಂಗ್ಲಿಷ್: ಜಾರ್ಜ್ ಆರ್ವೆಲ್
- ಅನುವಾದ: ಸಹನಾ ಹೆಗಡೆ
ಇಂಗ್ಲಿಷ್ ಸಾಹಿತ್ಯದ ಕ್ಲಾಸಿಕ್ ಕೃತಿಗಳಲ್ಲಿ ಒಂದು ಜಾರ್ಜ್ ಆರ್ವೆಲ್ ಅವರ animal farm. ರಷ್ಯದ ಕಮ್ಯುನಿಸ್ಟ್ ಕ್ರಾಂತಿ ಮತ್ತು ಅದರಿಂದ ಕಾಲಾನಂತರದಲ್ಲಿ ಉಂಟಾದ ನಿರಂಕುಶ ಅಧಿಪತ್ಯದ ಬೆಳವಣಿಗೆಗಳನ್ನು ಅನ್ಯೋಕ್ತಿಯ ಮೂಲಕ ವರ್ಣಿಸುವ ಈ ಕೃತಿ ಸಾಕಷ್ಟು ಚರ್ಚೆ, ಶ್ಲಾಘನೆಗೆ ಪಾತ್ರವಾಗಿದೆ. ಕೋಟ್ಯಂತರ ಮಂದಿ ಅದನ್ನು ಓದಿದ್ದಾರೆ. ಈ ಕೃತಿಯನ್ನು ಸಹನಾ ಹೆಗಡೆ ಅವರು ಕನ್ನಡಕ್ಕೆ ತಂದಿದ್ದು, ಅದರ ಆಯ್ದ ಭಾಗ ಇಲ್ಲಿದೆ.
ಆ ಇಡೀ ಬೇಸಿಗೆ, ತೋಟದ ಕೆಲಸಗಳು ಗಡಿಯಾರದಂತೆ ನಿಯತ, ನಿಖರ ಹಾಗೂ ನಿರಂತರವಾಗಿ ನಡೆದವು. ಇಂತಹದೊಂದು ಕೆಲಸ ಸಾಧ್ಯವಾಗುತ್ತದೆಯೆಂದು ಊಹಿಸಿಯೂ ಇರದಿದ್ದ ಪ್ರಾಣಿಗಳಿಗೆ ಇದರಿಂದ ಸಂತೋಷವಾಯಿತು. ಈಗ ಅವು ಬಾಯ್ತುಂಬಿಕೊಳ್ಳುವ ಆಹಾರದ ಒಂದೊಂದು ತುತ್ತೂ, ತುಣುಕೂ ಅವುಗಳಿಗೆ ನಿಶ್ಚಿತವಾಗಿಯೂ ಅತೀವ ಸುಖವನ್ನು ನೀಡುವಂತಹದಾಗಿತ್ತು. ಈಗ ಆಹಾರವು ನಿಜಕ್ಕೂ ಅವುಗಳದೇ ಆಗಿತ್ತು. ತಮಗಾಗಿ ತಾವೇ ಬೆಳೆದುಕೊಂಡಿದ್ದಾಗಿತ್ತು. ಯಾರೋ ಒಲ್ಲದ ಮನಸ್ಸಿನ ಒಡೆಯ ಅವರಿಗೆ ದಯಪಾಲಿಸಿದ ಅನ್ನವಾಗಿರಲಿಲ್ಲ.
ಅಯೋಗ್ಯ, ನಿಷ್ಪ್ರಯೋಜಕ, ಪರಾವಲಂಬಿ ಮನುಷ್ಯರು ತೊಲಗಿ ಹೋಗಿದ್ದ ಕಾರಣ, ಪ್ರತಿಯೊಂದು ಪ್ರಾಣಿಗೂ ತಿನ್ನಲು ಹೆಚ್ಚು ಆಹಾರ ಸಿಗುತ್ತಿತ್ತು. ಪ್ರಾಣಿಗಳು ಅನನುಭವಿಗಳಾಗಿದ್ದವು ನಿಜ. ಆದರೆ ಅಷ್ಟೊಂದು ಕೆಲಸ-ಕಾರ್ಯಗಳ ನಡುವೆಯೂ ಅವುಗಳಿಗೆ ಮೊದಲಿಗಿಂತ ಹೆಚ್ಚು ಬಿಡುವು, ವಿರಾಮ ಸಿಗುತ್ತಿತ್ತು. ಅವು ಹಲವಾರು ತೊಂದರೆಗಳನ್ನು ಎದುರಿಸಬೇಕಾಯಿತು. ಉದಾಹರಣೆಗೆ, ವರ್ಷದ ಕೊನೆಗೆ, ಜೋಳವು ಕಟಾವಿಗೆ ಬಂದಾಗ, ಅದನ್ನು ಪುರಾತನ ವಿಧಾನದಲ್ಲಿಯೇ ಕಾಲಿನಿಂದ ತುಳಿದು, ಒಕ್ಕಿ ಕಾಳನ್ನು ಬೇರ್ಪಡಿಸಬೇಕಿತ್ತು ಮತ್ತು ಬಾಯಿಂದ ಊದಿ, ಕಾಳನ್ನು ತೂರಿ, ಹೊಟ್ಟನ್ನು ತೆಗೆಯಬೇಕಿತ್ತು. ಏಕೆಂದರೆ, ತೋಟದಲ್ಲಿ ತೆನೆಯನ್ನು ಬಡಿಯುವ, ಒಕ್ಕುವ ಯಂತ್ರವಿರಲಿಲ್ಲ. ಆದರೆ ಹಂದಿಗಳು ತಮ್ಮ ಚಾತುರ್ಯದಿಂದ ಮತ್ತು ಬಾಕ್ಸರ್ ತನ್ನ ಅಗಾಧ ಸ್ನಾಯುಬಲದಿಂದ ಅವುಗಳನ್ನೆಲ್ಲ ಸದಾ ನಿಭಾಯಿಸಿಬಿಡುತ್ತಿದ್ದವು.
ಬಾಕ್ಸರ್ ಎಂದರೆ ಎಲ್ಲರಿಗೂ ಮೆಚ್ಚುಗೆ. ಅದು ಜೋನ್ಸ್ ಒಡೆಯನಾಗಿದ್ದಾಗಲೂ ಶ್ರಮಜೀವಿಯೇ ಆಗಿತ್ತು. ಈಗಂತೂ ಅದು ಮಾಡುವ ಕೆಲಸವನ್ನು ನೋಡಿದರೆ, ಒಂದಲ್ಲ, ಮೂರು ಕುದುರೆಗಳು ಮಾಡುವಷ್ಟು ಕೆಲಸವನ್ನು ಅದೊಂದೇ ಮಾಡುತ್ತಿರುವಂತೆ ಕಾಣುತ್ತಿತ್ತು. ಇಡೀ ತೋಟದ ಕೆಲಸವು ಅದರ ಬಲಶಾಲಿ ಹೆಗಲುಗಳ ಮೇಲಿದ್ದಂತೆ ತೋರುವ ದಿನಗಳೂ ಇದ್ದವು. ಬೆಳಗಿನಿಂದ ರಾತ್ರಿಯವರೆಗೂ ಒಂದಲ್ಲ ಒಂದು ಭಾರವನ್ನು ಎಳೆಯುತ್ತ, ನೂಕುತ್ತ, ಸದಾ ಅತ್ಯಂತ ಕಠಿಣ ಕೆಲಸವಿದ್ದಲ್ಲಿಯೇ ಇರುತ್ತಿತ್ತು. ಬೆಳಿಗ್ಗೆ ಮತ್ತೆಲ್ಲರೂ ಏಳುವುದಕ್ಕಿಂತ ಅರ್ಧ ತಾಸು ಮೊದಲೇ ತನ್ನನ್ನು ಕೂಗಿ ಕರೆಯುವಂತೆ ಎಳೆಯ ಹುಂಜವೊಂದಕ್ಕೆ ಹೇಳಿ ವ್ಯವಸ್ಥೆ ಮಾಡಿಕೊಂಡಿತ್ತು. ಯಾವ ಕೆಲಸವು ತುಂಬಾ ಅಗತ್ಯವಾದುದೆಂದು ತೋರುತ್ತಿತ್ತೋ ಅದನ್ನು ದಿನದ ನಿತ್ಯ ಕೆಲಸಗಳು ಆರಂಭವಾಗುವುದಕ್ಕೂ ಮೊದಲೇ ಸ್ವಇಚ್ಛೆಯಿಂದ ಮಾಡಿ ಮುಗಿಸಿಬಿಡುತ್ತಿತ್ತು. ಪ್ರತಿಯೊಂದು ಸಮಸ್ಯೆ, ಹಿನ್ನಡೆಗೂ “ನಾನು ಇನ್ನೂ ಕಷ್ಟಪಟ್ಟು ಕೆಲಸ ಮಾಡುತ್ತೇನೆ !ʼʼ ಎನ್ನುವುದೇ ಅದರ ಉತ್ತರವಾಗಿತ್ತು ಮತ್ತು ಅದನ್ನು ತನ್ನ ವೈಯಕ್ತಿಕ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿತ್ತು.
ಆದರೆ ಅದೊಂದೇ ಅಲ್ಲ, ತೋಟದಲ್ಲಿನ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ ಮಾಡುತ್ತಿದ್ದರು. ಉದಾಹರಣೆಗೆ, ಕೊಯ್ಲು ಮಾಡುವಾಗ ಹೊಲದಲ್ಲಿ ಚದುರಿ ಬಿದ್ದಿದ್ದ ಜೋಳದ ಕಾಳುಗಳನ್ನು ಕೋಳಿ ಮತ್ತು ಬಾತುಗಳು ಒಟ್ಟುಗೂಡಿಸಿ, ಉಳಿಸಿದ್ದೇ ಸುಮಾರು ಐದು ಕೊಳಗದಷ್ಟಾಗಿತ್ತು. ಯಾರೂ ಕದಿಯಲಿಲ್ಲ. ತಮಗೆ ಸಿಕ್ಕ ಪಡಿತರದ ಬಗ್ಗೆ ಗೊಣಗಲಿಲ್ಲ. ಹಿಂದೆ ಬದುಕಿನ ಸಹಜ ಲಕ್ಷಣಗಳೇ ಆಗಿಹೋಗಿದ್ದ ಜಗಳ, ತಂಟೆ, ಕಚ್ಚಾಟ, ನಿಂದೆ, ಅಸೂಯೆಗಳು ಬಹುತೇಕ ನಾಪತ್ತೆಯಾಗಿದ್ದವು. ಯಾರೂ ಅಥವಾ ಬಹುತೇಕವಾಗಿ ಯಾರೂ ಕೆಲಸದಿಂದ ನುಣುಚಿಕೊಳ್ಳುತ್ತಿರಲಿಲ್ಲ. ಮೊಲ್ಲಿ ಬೆಳಿಗ್ಗೆ ಅಷ್ಟು ಬೇಗ ಏಳುತ್ತಿರಲಿಲ್ಲ ಎನ್ನುವುದು ನಿಜ ಮತ್ತು ಆಗಾಗ ತನ್ನ ಗೊರಸಿನಲ್ಲಿ ಕಲ್ಲು ಸೇರಿಕೊಂಡಿದೆ ಎಂದು ಹೇಳಿ, ಬೇಗ ಕೆಲಸ ಬಿಟ್ಟು ಹೋಗಿಬಿಡುವ ಅಭ್ಯಾಸ ಅದಕ್ಕಿತ್ತು. ಬೆಕ್ಕಿನ ವರ್ತನೆಯೇ ಏನೋ ವಿಚಿತ್ರವಾಗಿತ್ತು. ಏನಾದರೂ ಕೆಲಸ ಮಾಡಬೇಕಿದ್ದಾಗಲೇ ಅದು ಯಾರ ಕಣ್ಣಿಗೂ ಬೀಳುತ್ತಿರಲಿಲ್ಲ ಎನ್ನುವುದು ಬೇಗ ಎಲ್ಲರ ಗಮನಕ್ಕೆ ಬಂದಿತು. ಗಂಟೆಗಟ್ಟಲೇ ಕಾಣೆಯಾಗಿಬಿಡುತ್ತಿತ್ತಾದರೂ ಊಟದ ಸಮಯಕ್ಕೆ ಸರಿಯಾಗಿ ಅಥವಾ ಸಂಜೆ ಕೆಲಸಗಳೆಲ್ಲ ಮುಗಿದ ಮೇಲೆ ಏನೂ ಆಗಿಯೇ ಇಲ್ಲವೆಂಬಂತೆ ತಿರುಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಯಾವಾಗಲೂ ಅದೆಂತಹ ಅದ್ಭುತವಾದ ನೆಪಗಳನ್ನು ಹೇಳುತ್ತಿತ್ತೆಂದರೆ, ಪ್ರೀತಿಯಿಂದ ಗುರುಗುಟ್ಟುತ್ತಿತ್ತೆಂದರೆ, ಅದರ ಸದುದ್ದೇಶವನ್ನು ನಂಬದಿರಲು ಸಾಧ್ಯವೇ ಇರಲಿಲ್ಲ.
ದಂಗೆಯ ದಿನದಿಂದೀಚೆಗೆ ಹಳಬ ಕತ್ತೆ ಬೆಂಜಮಿನ್‌ನಲ್ಲಿ ಯಾವ ಬದಲಾವಣೆಯೂ ಆದಂತೆ ಕಂಡುಬರಲಿಲ್ಲ. ಜೋನ್ಸ್‌ನ ಸಮಯದಲ್ಲಿ ಮಾಡುತ್ತಿದ್ದ ಹಾಗೇ ನಿಧಾನಕ್ಕೆ ಪಟ್ಟುಬಿಡದಂತೆ ತನ್ನ ಕೆಲಸ ಮಾಡುತ್ತಿತ್ತು. ನುಣುಚಿಕೊಳ್ಳುತ್ತಲೂ ಇರಲಿಲ್ಲ, ಹೆಚ್ಚುವರಿ ಕೆಲಸ ಮಾಡುತ್ತೇನೆಂದು ತಾನಾಗಿಯೇ ಮುಂದೆ ಬರುತ್ತಿರಲೂ ಇಲ್ಲ. ದಂಗೆ ಮತ್ತದರ ಪರಿಣಾಮಗಳ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಜೋನ್ಸ್ ತೊಲಗಿ ಹೋಗಿರುವ ಕಾರಣ, ಈಗ ಅದು ಮೊದಲಿಗಿಂತ ಹೆಚ್ಚು ಸಂತೋಷವಾಗಿಲ್ಲವೇ ಎಂದು ಕೇಳಿದರೆ, ಅದು ‘ಕತ್ತೆಗಳು ದೀರ್ಘಕಾಲ ಬದುಕುತ್ತವೆ. ನಿಮ್ಮಲ್ಲಿ ಯಾರೂ ಸತ್ತ ಕತ್ತೆಯನ್ನು ನೋಡಿಯೇ ಇಲ್ಲ,’ ಎಂದಷ್ಟೇ ಹೇಳುತ್ತಿತ್ತು. ಇತರ ಪ್ರಾಣಿಗಳು ಅದು ಕೊಡುತ್ತಿದ್ದ, ಅರ್ಥಮಾಡಿಕೊಳ್ಳಲು ಕಷ್ಟವಾದ ಇಂತಹ ನಿಗೂಢ, ಸಂದಿಗ್ಧ ಉತ್ತರದಿಂದಲೇ ಸಂತೃಪ್ತರಾಗಬೇಕಿತ್ತು.
ಭಾನುವಾರಗಳಂದು ಕೆಲಸವಿರುತ್ತಿರಲಿಲ್ಲ. ಬೆಳಗಿನ ತಿಂಡಿಯನ್ನು ಎಂದಿಗಿಂತಲೂ ಒಂದು ಗಂಟೆ ತಡವಾಗಿ ನೀಡಲಾಗುತ್ತಿತ್ತು. ತಿಂಡಿ ಮುಗಿದ ಮೇಲೆ ಸಮಾರಂಭವೊಂದು ಇರುತ್ತಿತ್ತು. ಅದನ್ನು ಪ್ರತೀ ವಾರವೂ ತಪ್ಪದೇ ಆಚರಿಸಲಾಗುತ್ತಿತ್ತು. ಮೊದಲು ಧ್ವಜಾರೋಹಣ. ಸಾಮಾನು- ಸರಂಜಾಮುಗಳನ್ನಿಡುವ ಕೋಣೆಯಲ್ಲಿ ಸ್ನೋಬಾಲ್‌ಗೆ ಹಸಿರು ಬಣ್ಣದ ಹಳೆಯ ಮೇಜುವಸ್ತ್ರವೊಂದು ಸಿಕ್ಕಿತ್ತು. ಅದು ಜೋನ್ಸ್ ಮಹಾಶಯನ ಹೆಂಡತಿಯದಾಗಿತ್ತು. ಅದರ ಮೇಲೆ ಬಿಳಿಯ ಬಣ್ಣದಲ್ಲಿ ಒಂದು ಗೊರಸು ಮತ್ತು ಒಂದು ಕೋಡಿನ ಚಿತ್ರವನ್ನು ಸ್ನೋಬಾಲ್ ಬರೆದಿತ್ತು. ಪ್ರತೀ ಭಾನುವಾರದಂದು ಬೆಳಿಗ್ಗೆ ಅದನ್ನು ತೋಟದ ಮನೆಯ ಉದ್ಯಾನವನದಲ್ಲಿದ್ದ ಧ್ವಜಸ್ತಂಭದ ಮೇಲಕ್ಕೆ ಏರಿಸಲಾಗುತ್ತಿತ್ತು. ಧ್ವಜದ ಹಸಿರು ಬಣ್ಣವು ಇಂಗ್ಲೆಂಡಿನ ಹಸಿರು ಹೊಲಗಳನ್ನು ಪ್ರತಿನಿಧಿಸಿದರೆ ಗೊರಸು- ಕೋಡುಗಳು, ಕೊನೆಯದಾಗಿ ಮನುಕುಲವನ್ನು ಉರುಳಿಸಿದ ಮೇಲೆ ಉದಯಿಸಲಿರುವ ಪ್ರಾಣಿಗಳ ಗಣತಂತ್ರವನ್ನು ಸೂಚಿಸುತ್ತದೆ ಎಂದು ಸ್ನೋಬಾಲ್ ವಿವರಿಸಿತು. ಧ್ವಜಾರೋಹಣವಾದ ಮೇಲೆ ಮೀಟಿಂಗ್ ಎಂದು ಹೆಸರಾಗಿದ್ದ ಸರ್ವ ಸಾಧಾರಣ ಸಭೆಯಲ್ಲಿ ಭಾಗವಹಿಸಲು ಎಲ್ಲಾ ಪ್ರಾಣಿಗಳೂ ಗುಂಪುಗುಂಪಾಗಿ ದೊಡ್ಡ ಕೊಟ್ಟಿಗೆಯೊಳಕ್ಕೆ ಹೋಗುತ್ತಿದ್ದವು. ಅಲ್ಲಿ, ಮುಂಬರುವ ವಾರದಲ್ಲಿ ಆಗಬೇಕಾದ ಕೆಲಸಕಾರ್ಯಗಳನ್ನು ಯೋಜಿಸಲಾಗುತ್ತಿತ್ತು, ಠರಾವುಗಳನ್ನು ಮಂಡಿಸಲಾಗುತ್ತಿತ್ತು ಹಾಗೂ ಚರ್ಚಿಸಲಾಗುತ್ತಿತ್ತು. ಇತರ ಪ್ರಾಣಿಗಳು ಹೇಗೆ ಮತ ಚಲಾಯಿಸಬೇಕೆಂಬುದನ್ನು ಅರ್ಥಮಾಡಿಕೊಂಡಿದ್ದವು. ಆದರೆ ಅವುಗಳಿಗೆ ತಮ್ಮದೇ ಆದ ಯಾವುದೇ ಠರಾವುಗಳ ಬಗ್ಗೆ ಯೋಚಿಸಲೂ ಸಾಧ್ಯವಿರಲಿಲ್ಲ.
ಇದನ್ನೂ ಓದಿ: ಹೊಸ ಪುಸ್ತಕ : ಯಕ್…!
ಸ್ನೋಬಾಲ್ ಮತ್ತು ನೆಪೋಲಿಯನ್ ಚರ್ಚೆಗಳಲ್ಲಿ ಇದುವರೆಗೆ ಅತ್ಯಂತ ಸಕ್ರಿಯವಾಗಿದ್ದವರು. ಆದರೆ ಇವೆರಡರಲ್ಲಿ ಎಂದಿಗೂ ಸಹಮತವಿಲ್ಲ ಎಂಬುದು ಎಲ್ಲರ ಗಮನಕ್ಕೂ ಬಂದಿತು. ಎರಡರಲ್ಲಿ ಯಾರೇ ಒಂದು ಸಲಹೆಯೊಂದನ್ನು ನೀಡಿದರೂ ಮತ್ತೊಂದು ಅದನ್ನು ವಿರೋಧಿಸಿಯೇ ಸಿದ್ಧ ಎಂದು ಹೇಳಬಹುದಿತ್ತು. ಹಣ್ಣಿನ ತೋಟದ ಪಕ್ಕದಲ್ಲಿದ್ದ ಚಿಕ್ಕ ಹುಲ್ಲುಗಾವಲಿನ ಜಾಗವು ಕೆಲಸದಿಂದ ನಿವೃತ್ತಿ ಹೊಂದಿದ ಪ್ರಾಣಿಗಳಿಗೆ ವಿಶ್ರಾಂತಿ ಗೃಹವಾಗಿ ಇರಬೇಕೆಂದು ಮತ್ತು ಅದನ್ನು ಬೇರೆ ಯಾವ ಕೆಲಸಕ್ಕೂ ಬಳಸಬಾರದೆಂದು ತೀರ್ಮಾನಿಸಲಾಗಿತ್ತು. ಆ ವಿಷಯವು ಅದರಷ್ಟಕ್ಕೇ ಯಾರೂ ಆಕ್ಷೇಪಿಸುವಂತಹದಾಗಿರಲಿಲ್ಲ. ಆದರೂ ಪ್ರತಿಯೊಂದು ವರ್ಗದ ಪ್ರಾಣಿಗೂ ಸೂಕ್ತವಾದ ನಿವೃತ್ತಿಯ ವಯಸ್ಸು ಯಾವುದಾಗಿರಬೇಕು ಎನ್ನುವ ವಿಷಯದ ಮೇಲೆ ಬಿರುಸಿನ ಚರ್ಚೆ ನಡೆಯಿತು. ಯಾವಾಗಲೂ ಮೀಟಿಂಗ್ ‘ಇಂಗ್ಲೆಂಡಿನ ಪ್ರಾಣಿಗಳು’ ಹಾಡನ್ನು ಹಾಡುವುದರ ಮೂಲಕವೇ ಕೊನೆಗೊಳ್ಳುತ್ತಿತ್ತು ಮತ್ತು ಮಧ್ಯಾಹ್ನದ ಸಮಯವು ಮನೋರಂಜನೆಗೆ ಮೀಸಲಾಗಿತ್ತು.
ಹಂದಿಗಳು ಸಾಮಾನು- ಸರಂಜಾಮುಗಳ ಕೋಣೆಯನ್ನು ತಮ್ಮ ಕೇಂದ್ರ ಕಚೇರಿಯನ್ನಾಗಿಸಿಕೊಂಡಿದ್ದವು. ಅಲ್ಲಿ, ಸಾಯಂಕಾಲದ ಹೊತ್ತು ಅವು, ತೋಟದ ಮನೆಯಿಂದ ತಂದುಕೊಂಡಿದ್ದ ಪುಸ್ತಕಗಳಿಂದ ಕಮ್ಮಾರಿಕೆ, ಮರಗೆಲಸ ಹಾಗೂ ಇನ್ನಿತರ ಆವಶ್ಯಕ ಕೌಶಲ್ಯಗಳನ್ನು ಅಭ್ಯಾಸ ಮಾಡುತ್ತಿದ್ದವು. ಸ್ನೋಬಾಲ್ ಕೂಡ ಇನ್ನಿತರ ಪ್ರಾಣಿಗಳನ್ನು, ಪ್ರಾಣಿ ಸಮಿತಿಗಳಲ್ಲಿ ಸಂಘಟಿಸುವ ಕಾರ್ಯದಲ್ಲಿ ನಿರತವಾಗಿತ್ತು. ಈ ಕೆಲಸದಲ್ಲಿ ಅದಕ್ಕೆ ದಣಿವೆಂಬುದೇ ಇರಲಿಲ್ಲ. ಓದು- ಬರಹದ ತರಗತಿಗಳನ್ನು ನಡೆಸಲು ವಿದ್ಯಾಸಂಸ್ಥೆಗಳನ್ನು ಆರಂಭಿಸುವುದರ ಜೊತೆಗೆ, ಅದು ಕೋಳಿಗಳಿಗೆ ಮೊಟ್ಟೆ ಉತ್ಪಾದನಾ ಸಮಿತಿಯನ್ನು, ಹಸುಗಳಿಗೆ ಸ್ವಚ್ಛ ಬಾಲಗಳ ಸಂಘ, ಕಾಡಿನ ಕಾಮ್ರೇಡ್‌ಗಳ ಮರು ಶಿಕ್ಷಣ ಸಮಿತಿ (ಹೆಗ್ಗಣ ಮತ್ತು ಮೊಲಗಳನ್ನು ಪಳಗಿಸುವುದು ಇದರ ಉದ್ದೇಶವಾಗಿತ್ತು), ಕುರಿಗಳಿಗಾಗಿ ಬಿಳಿ ತುಪ್ಪಟ ಆಂದೋಲನ ಮತ್ತು ಇನ್ನಿತರ ಹಲವಾರು ಸಂಘ–ಸಂಸ್ಥೆ-ಸಮಿತಿಗಳನ್ನು ರೂಪಿಸಿತು.
ಇದನ್ನೂ ಓದಿ: ಹೊಸ ಪುಸ್ತಕ: ಇದು ಮತ್ತೊಂದು ಕರ್ಣಕುಂಡಲಗಳ ಕಥೆ
ಒಟ್ಟಾರೆಯಾಗಿ ಈ ಕಾರ್ಯಯೋಜನೆಗಳು ವಿಫಲಗೊಂಡವು. ಉದಾಹರಣೆಗೆ, ವನ್ಯ ಜೀವಿಗಳನ್ನು ಪಳಗಿಸುವ ಪ್ರಯತ್ನವು ಬಹುತೇಕ ಆರಂಭಗೊಂಡ ತಕ್ಷಣವೇ ಮುರಿದುಬಿತ್ತು. ಅವು ಮೊದಲಿನ ವರ್ತನೆಯನ್ನೇ ಮುಂದುವರೆಸಿದವು ಹಾಗೂ ಒಂದೊಮ್ಮೆ ಔದಾರ್ಯ ತೋರಿದರೆ, ಅದರಿಂದ ಆರಾಮವಾಗಿ ಲಾಭ ಪಡೆದುಕೊಂಡವು. ಮರುಶಿಕ್ಷಣ ಸಮಿತಿಯನ್ನು ಸೇರಿದ ಬೆಕ್ಕು ಕೆಲ ದಿನಗಳ ಕಾಲ ಅಲ್ಲಿ ಸಕ್ರಿಯವಾಗಿತ್ತು. ಒಂದು ದಿನ ಅದು ಮಾಡೊಂದರ ಮೇಲೆ ಕುಳಿತು, ತನಗೆ ಸಿಗದಷ್ಟು ದೂರದಲ್ಲಿದ್ದ ಕೆಲ ಗುಬ್ಬಿಗಳೊಡನೆ ಮಾತನಾಡುತ್ತಿರುವುದು ಕಂಡಿತು. ಎಲ್ಲಾ ಪ್ರಾಣಿಗಳು ಈಗ ಕಾಮ್ರೇಡ್‌ಗಳು ಮತ್ತು ಇಷ್ಟವಿದ್ದರೆ ಯಾವ ಗುಬ್ಬಿಯಾದರೂ ಬಂದು ತನ್ನ ಮುಂಗಾಲಿನ ಮೇಲೆ ಕುಳಿತುಕೊಳ್ಳಬಹುದು ಎಂದು ಹೇಳುತ್ತ ಇತ್ತು. ಆದರೆ ಗುಬ್ಬಿಗಳು ಮಾತ್ರ ತಮ್ಮ ಅಂತರವನ್ನು ಕಾಯ್ದುಕೊಂಡವು.
ಕೃತಿಯ ಹೆಸರು: ಅನಿಮಲ್ ಫಾರ್ಮ್
ಮೂಲ ಇಂಗ್ಲಿಷ್: ಜಾರ್ಜ್ ಆರ್ವೆಲ್
ಅನುವಾದ: ಸಹನಾ ಹೆಗಡೆ
ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಪುಟಗಳು: 116
ಬೆಲೆ: 80