ಜ್ಞಾನಪೀಠ ಪುರಸ್ಕೃತ ಕವಿ, ಕಾದಂಬರಿಕಾರ, ನಾಟಕಕಾರ ಚಂದ್ರಶೇಖರ ಕಂಬಾರರು ಹೊಸ ಪ್ರಹಸನದ ಜತೆ ಬಂದಿದ್ದಾರೆ. ಇದರ ಜತೆಗೆ ಅವರ ಕೃತಿಗಳ ಬಗ್ಗೆ ಕೀರ್ತಿನಾಥ ಕುರ್ತಕೋಟಿ ಅವರ ಲೇಖನಗಳ ಸಂಕಲನ ʻಕಂಬಾರರ ಕಾವ್ಯ ಮತ್ತು ನಾಟಕʼ, ಅವರ ಕಾದಂಬರಿ ʻಕರಿಮಾಯಿʼಯ ನಾಟಕ ರೂಪ ಇಂದು (ಜುಲೈ 24) ಬಿಡುಗಡೆಯಾಗುತ್ತಿವೆ. ಅಂಕಿತ ಪ್ರಕಾಶನ ಪ್ರಕಟಿಸುತ್ತಿರುವ ʻಮಾತೋಶ್ರೀ ಮಾದಕʼ ನಾಟಕದ ಆಯ್ದ ಭಾಗವಿಲ್ಲಿದೆ.
ಇಂತಿದು : ಪ್ರಸ್ತಾವನೆ
ಭೂತಮಾತೆ: ನಾನೊಬ್ಬ ಭೂತಮಾತೆ. ಇದು ನಟನಟಿಯರು ದೇವರಿಗೆ ನಮಸ್ಕಾರ ಮಾಡಿ ಪದ ಹಾಡಿ ನಾಟಕ ಸುರು ಮಾಡುವ ಕಾಲವಲ್ಲ. ಊರತುಂಬ ಕೆಟ್ಟ ರೋಗ ಹಬ್ಬಿರುವ ಕಾಲ. ಈಗೇನಾದರೂ ನಾಟಕ ಮಾಡಿದರೆ ನನ್ನಂಥ ಭೂತ ಬೇತಾಳಗಳೇ ಸೈ! ನಿಮ್ಮ ನಾಟಕದ ಆರಂಭಕ್ಕೆ ದೇವರ ಪೂಜೆ ಮಾಡಬೇಕು. ಆದರೆ ವಾಡೆಯ ಗುಡಿಯಲ್ಲಿ ದೇವರೇ ಇಲ್ಲ! ಈ ವಾಡೆಯ ಯಜಮಾನ ಮೀಸೆ ದೊಣ್ಣೆ ನಾಯಕ ಮತ್ತು ಅವನ ಧರ್ಮಪತ್ನಿಯಾದ ನಾನು- ಇಬ್ಬರೂ ಸ್ವರ್ಗವಾಸಿಗಳಾದ ಮೇಲೆ ನಮ್ಮ ಮಗ ರಾಮಕೃಷ್ಣನಿಗೆ ವಿದೇಶೀ ಹುಚ್ಚು ಹಿಡಿಯಿತು. ಇದ್ದಕ್ಕಿದ್ದಂತೆ ಒಂದು ದಿನ ಇಲ್ಲಿಯ ಮನೆ, ವಾಡೆ, ಗುಡಿಗುಂಡಾರಗಳ ಬಿಟ್ಟು, ಹೆಂಡತಿ ಮಕ್ಕಳನ್ನ ಕಟ್ಟಿಕೊಂಡು ಅಮೆರಿಕಾ ದೇಶಕ್ಕೆ ಹೋಗೇಬಿಟ್ಟ!
ಅಂದ್ಹಾಗೆ ವಾಡೇದ ಗುಡಿಯೊಳಗೆ ರಾಮಕೃಷ್ಣ ನಾಯಕನಿದ್ದ ಕಾಲದಲ್ಲಿ ದೇವರೇ ಇರಲಿಲ್ಲ ಅಂತಲ್ಲ. ಈ ಮನೆತನದ ದೇವರು ಕೊಲ್ಲಾಪುರದ ಲಕ್ಷ್ಮಿದೇವಿ, ಬೆಳ್ಳಿಯ ಮೂರ್ತಿ ಬಹಳ ಚಂದಾಕಿತ್ತು. ಹಬ್ಬ ಹರಿದಿನಗಳಲ್ಲಿ ಚಿನ್ನವಜ್ರದ ಆಭರಣಗಳಿಂದ ಅಲಂಕರಿಸಿದಾಗಂತೂ ನೋಡೋದಕ್ಕೆ ಎರಡು ಕಣ್ಣು ಸಾಲುತ್ತಿರಲಿಲ್ಲ. ಕಳ್ಳರು ಅದನ್ನು ಕದ್ದರಲ್ಲ, ಆಮ್ಯಾಕೆ ಯಾರೂ ಮತ್ತೊಂದು ಮೂರ್ತಿ ಇಡಲಿಲ್ಲ. ಯಾಕೆಂದರೆ ಇಡಬೇಕಾದವನು ವಿದೇಶಕ್ಕೆ ಹೋದ ಮೇಲೆ ಹೊಸ ಮೂರ್ತಿ ಇಡರ‍್ಯಾರು? ಅದಕ್ಕೇ ಈ ಗುಡಿಗೆ ಕಳ್ಳ ಲಕ್ಷ್ಮಿಗುಡಿ ಅಂತ ಹೆಸರು ಬಂತು. ಒಳಗೆ ಮೂರ್ತಿ ಇಲ್ಲದಿದ್ದರೂ ‘ಕಳ್ಳಲಕ್ಷ್ಮಿ ಇದಾಳೆ!’ ಅಂತಲೇ ಕಳ್ಳರ ನಂಬಿಕೆ. ಈಗಂತೂ ಕಳ್ಳರೇ ಇಲ್ಲಿಯ ಭಕ್ತರು!
ನನ್ನ ಮಗ ಅಂದರೆ ರಾಮಕೃಷ್ಣ ನಾಯಕ ವಿದೇಶಕ್ಕೆ ಹೋಗೋವಾಗ ಈ ವಾಡೆಯ ಹುವೇನವೇನೆಲ್ಲ ನೋಡಿಕೊಂಡಿರಲಿಕ್ಕೆ ಜವರ ಅಂತ ಒಂದಾಳು ನೇಮಿಸಿ ಹೋದನಲ್ಲ, ಇಂಥಾ ದೊಡ್ಡ ವಾಡೆಯ ಉಸ್ತುವಾರಿ ಇರಲಿ, ಇಲ್ಲಿಯ ಗುಪ್ತನಿಧಿಯ ವಿಚಾರವೂ ಅವನಿಗೆ ಗೊತ್ತಿಲ್ಲ! ಅದಕ್ಕೇ ನನ್ನ ಪತಿದೇವರಾದ ದೊಣ್ಣೆ ನಾಯಕನ ಭೂತ ಬಂದು ನನಗೆ ಆ ಜವಾಬ್ದಾರಿ ಕೊಟ್ಟು ‘‘ಯೋಗ್ಯವಾದ ಸಂಬಂಧಿಯ ಕೈಗೆ ನಿಧಿ ಸಮೇತ ವಾಡೆಯನ್ನು ಒಪ್ಪಿಸಿ ಬಾ’’ ಅಂತ ಒಪ್ಪಿಸಿದರು.
ನಾನವರ ಧರ್ಮಪತ್ನಿ, ಆಗಷ್ಟೇ ಕಾಲವಾದವಳು. ನನಗಿನ್ನೇನು ಕೆಲಸ? ಇದನ್ನ ನಿರ್ವಹಿಸಿಕೊಡೋದು ನನಗೂ ಇಷ್ಟವೆ. ಯಾಕಂತೀರೋ, ವಾಡೇದೊಳಗಿನ ರಾಣೀ ವಿಲಾಸದ ಯಜಮಾನಿ ನಾನು. ಅದನ್ನ ನಮ್ಮ ವಂಶಿಕರಿಗೇ ತಲುಪಿಸುವುದು ನನ್ನ ಕರ್ತವ್ಯ. ಜೀವಂತವಾಗಿದ್ದಾಗಿನ ನನ್ನ ಕರ್ತವ್ಯವನ್ನು ಭೂತವಾಗಿಯಾದರೂ ಪೂರೈಸೋಣ ಅಂತ ನಿಮ್ಮೆದುರು ನಿಂತಿದ್ದೀನಿ.
ವಾಡೆಯಲ್ಲಿ ದೇವರ ಮೂರ್ತಿ ಇಲ್ಲ ನಿಜ; ಆದರೆ ಅಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯೇನೂ ಕಮ್ಮಿಯಾಗಿಲ್ಲ. ಅಲ್ಲಿಗೆ ಬರುವವರೆಲ್ಲ ಲಕ್ಷ್ಮಿದೇವಿಯ ಕಳ್ಳರೇ, ಆದ್ದರಿಂದಲೇ ಕಳ್ಳರ ಲಕ್ಷ್ಮಿಯಾಗಿ ನಾನೂ ಅಷ್ಟೇ ಚುರುಕಾಗಿರೋದು.
ಈಗೀಗ ಈ ಕಳ್ಳ ನನ್ನಮಕ್ಕಳಿಗೂ ಬೋ ಕಷ್ಟ ಅದೆ ಕಣ್ರಪ್ಪೋ! ಅದೆಂತದೋ ಪಶ್ಚಿಮದ ಗಾಳಿ ಬೀಸ್ತಿದೆ ಅಂತೆ. ಪಶ್ಚಿಮದ ಗಾಳಿ ಅಂದರೆ ಮನ್ಸೂನಲ್ಲ! ಇದೇ ಒಂಥರಾ ಮನ್ಸೂನು. ಈ ಗಾಳಿ ಬೀಸಿದರೆ ನದಿಗೆ ಮಹಾಪೂರ ಬರಾಕಿಲ್ಲ; ಚರಂಡಿಗೆ ಮಹಾಪೂರ ಬಂದು ಮಕ್ಕಳನ್ನ ಕೊಚ್ಚಿಕೊಂಡು ಒಯ್ತದೆ ಅಂತೆ? ಎಲ್ಲಾದರೂ ಕೇಳಿದ್ದೀರಾ? ನಾನೇ ಇವರೆಲ್ಲರ ಕಳ್ಳಲಕ್ಷ್ಮಿ. ಅಂದರೆ ಕಳ್ಳರಿಗೆ ಲಕ್ಷ್ಮಿ ಅಂದರೆ ಅವರಿಗೆ ಲಕ್ಕು ಕೊಡೋಳು ಅಂತ. ನಿಮ್ಮಲ್ಲಿ ಅನೇಕರು ನನ್ನ ಒಕ್ಕಲು ಮಕ್ಕಳೇ. ಆದರೆ ಕಳ್ಳರ್ಯಾರೂ ತಾವು ಕಳ್ಳರು ಅಂತ ಹೇಳಿಕೊಳ್ಳೋದಿಲ್ಲ. ಒಳಗೊಳಗೇ ನನ್ನ ಪೂಜೆ ಮಾಡ್ತಾರೆ. ಹೊರಗೆ ಮಾತ್ರ ನ್ಯಾಯ ನೀತಿ ಸಂಸ್ಕೃತಿ ಅಂತಾರೆ. ಕೆಲವರು ಪ್ರಾಮಾಣಿಕರೂ ಇರ‍್ತಾರೆ. ಅವರು ಪಾಪ ‘ನಾವು ಕಳ್ಳರು, ನಮಗೆ ಲಕ್ಕು ಕೊಡು ತಾಯೀ, ಅಂತ ನನ್ನ ಹತ್ರ ಬರ‍್ತಾರೆ. ಧಾರಾಳವಾಗಿ ಕೊಡ್ತೀನಿ. ಕೆಲವರು ಹರಕೆ ಹೊರತಾರೆ: ಈ ಕಳ್ಳತನದಲ್ಲಿ ಮಾಲು ಸಮೇತ ಪಾರಾಗಿ ಬಂದರೆ ನಿನಗೆ ಸರಿ ಅರ್ಧ ಪಾಲು ಕೊಡ್ತೀವಿ, ಅದು ಕೊಡ್ತೀವಿ, ಇದು ಕೊಡ್ತೀವಿ ಅಂತ! ಕೆಲವರು ಕೊಟ್ಟ ಮಾತು ಉಳಿಸಿಕೊಳ್ತಾರೆ. ಕೆಲವರು ಕೊಡೋದಿಲ್ಲ. ಏನ್ ಮಾಡ್ಲಿಕಾಯ್ತದೆ! ಮಕ್ಕಳಲ್ಲವೆ? ನಾನಾದರೂ ತಗೊಂಡೇನು ಸುಖ ಸುರಕೊಳ್ಲಿಕ್ಕಾಯ್ತದ?
ಏನೋ ಪುಡಿಗಾಸಿನ ಸರಗಳ್ಳತನ ಅಂತ ಅಲ್ಲಿ ಇಲ್ಲಿ ಕದ್ದುಕೊಂಡು ಅಡ್ಡಾಡುತ್ವೆ. ಪೋಲೀಸರಿಗೆ ಸಿಕ್ಕುಬಿದ್ದು ಪತ್ರಿಕೇಲಿ ಫೋಟೋ ಬಂದರೆ ಹಿರಿಹಿರಿ ಹಿಗ್ಗಿ ಜನ್ಮ ಸಾರ್ಥಕ ಆಯ್ತು ಅಂತ ಜೇಲಿಗೆ ಹೋಗುತ್ವೆ ಅಷ್ಟೇಯ.
ಶ್ರೀಮಂತ ವಾಡೆಯ ಮೇಲೆ ಕಣ್ಣು ಹಾಕದ ಕಳ್ಳನುಂಟೆ! ಥರಾವರಿ ಕಳ್ಳರು ಇರ‍್ತಾರೆ. ಇದೀಗ ಕೇರಳದ ಮಂತ್ರತಂತ್ರ ಬಲ್ಲ ಕಳ್ಳರಿಬ್ಬರು ಬಂದಿದ್ದಾರೆ. ಅವರಿಂದ ವಾಡೆಯನ್ನ ಕಾಯಬೇಕು. ಹಾಂಗೇ ಒಬ್ಬ ದರಿದ್ರ ಇತಿಹಾಸಕೋರ ಬಂದಿದ್ದಾನೆ. ಮಾತಿಗೆ ಶುರು ಮಾಡಿದರೆ ನಿಲ್ಲಿಸೋದೇ ಇಲ್ಲ! ಎದುರಿಗೆ ಯಾರು ಬಂದರೂ ತಾನು ಬರೆದ ಇತಿಹಾಸದ ಪಾಠ ಮಾಡುತ್ತಾನೆ. ‘ಮಾತಿಗೆ ಸುರು ಮಾಡಿದರೆ ನಿಲ್ಲಿಸೋದೇ ಇಲ್ಲ ಕೊರಕ! ಅಗೊ ವಾಡೇದ ಕಾವಲಿಗ ಜವರ ಬಂದ.
ದೃಶ್ಯ-೧
(ನಿರ್ಜನವಾದ ಅರಮನೆ. ಪ್ರೊ. ಟಿ.ವಿ. ಟಪ್ಪಾ ಶಿಷ್ಯನೊಂದಿಗೆ ಅರಮನೆಯನ್ನು ನೋಡುತ್ತ, ಆನಂದಾಶ್ಚರ್ಯ ಪಡುತ್ತ ಸುತ್ತುತ್ತಾನೆ. ಶಿಷ್ಯ ಆಗಾಗ ಫೋಟೋ ಹಿಡಿದುಕೊಳ್ಳುತ್ತಾನೆ. ಅಲ್ಲಿಯೇ ಇದ್ದ ಶಾಸನವನ್ನು ಓದುತ್ತಾನೆ. ಜವರ ಅವರ ಹಿಂದೆ ಬಂದು ನಿಲ್ಲುತ್ತಾನೆ. ಚಿತ್ರ ತೆಗೆಯುವಾಗ ಗುರಿ ಹಿಡಿಯಲು ಹಿಂದೆ ಮುಂದೆ ಸರಿಯುವಾಗ ಜವರನನ್ನು ತಡವಿ ನೋಡಿ ಗಾಬರಿಯಾಗಿ ಪರುಚುತ್ತಾನೆ. ಜಡೆಯ, ವಿಕಾರ ಕೂದಲಿನ, ಕತ್ತು ಮುಂಗೈ ದೇಹದ ಎಲ್ಲೆಂದರಲ್ಲಿ ತಾಯತಗಳನ್ನು ಕಟ್ಟಿಕೊಂಡ ವಿಲಕ್ಷಣ ಆಕಾರದ ಆಸಾಮಿ. ಅವನೇ ಅರಮನೆಯನ್ನು ನೋಡಿಕೊಳ್ಳುವಾತ.)
ಜವರ: ಯಾರ‍್ರೀ ನೀವು?
ಪ್ರೊಫೆಸರ್: ಪ್ರೊಫೆಸರ್ ಟಿ.ವಿ. ಟಪ್ಪಾ ಅಂತ, ಅಂದರೆ ಟಿ. ವೆಂಕಟಪ್ಪಾ, ಮೈಸೂರು ವಿಶ್ವವಿದ್ಯಾಲಯದಲ್ಲಿ ಹಿಸ್ಟರಿ ಪ್ರೊಫೆಸರ್!
ಜವರ: ಇಲ್ಲಿಗ್ಯಾಕೆ ಬಂದಿರಿ? ಯಾರನ್ನ ಕೇಳಿ ಫೋಟೋ ಹಿಡಕಂಡ್ರಿ?
ಪ್ರೊಫೆಸರ್: ಯಾಕಂದರೆ, ಇದು ಇತಿಹಾಸ ಪ್ರಸಿದ್ಧ ಅರಮನೆ.
ಜವರ: ಗೊತ್ತುರೀ, ನೀವ್ಯಾಕಿಲ್ಲಿ ಬಂದಿರಿ ಅಂದರೆ…
ಪ್ರೊಫೆಸರ್: ಮೈಸೂರಿನಲ್ಲೆಲ್ಲಾ ಜಗತ್ಪ್ರಸಿದ್ಧನಾದ ಇತಿಹಾಸಕಾರನಯ್ಯಾ ನಾನು. ಈ ಮನೆಯ ಪಾಳೇಗಾರರ ಬಗ್ಗೆ ನಾನೆಂಥಾ ಥೀಸೀಸ್ ಬರ್ದಿದ್ದೇನೆ – ಗೊತ್ತೇನಯ್ಯಾ? ಈ ಅರಮನೆ ಇತಿಹಾಸ ಪ್ರಸಿದ್ಧವಾದದ್ದೇ ನನ್ನ ಲೇಖನಗಳಿಂದ! ಗೊತ್ತೋ?
ಜವರ: ಗೊತ್ತಿಲ್ಲ.
ಪ್ರೊಫೆಸರ್: ಹಾಂಗ ಬಾ ದಾರಿಗೆ. ನಿಮ್ಮ ಪಾಳೇಗಾರರು ಕೆರೆ ಬಾವಿ ಕಟ್ಟಿಸಿ ಮರ ನೆಟ್ಟದ್ದು, ರಸ್ತೆ ಮಾಡಿಸಿ ಬೇಟೆ ಆಡಿದ್ದು, ಎಲ್ಲಾ ವಿವರವಾಗಿ, ಸ್ವಾರಸ್ಯಕರವಾಗಿ ಬರ್ದಿದ್ದೇನಯ್ಯಾ! ನಿಮ್ಮ ಪಾಳೇಗಾರರು ವಿಜಯನಗರ ಸಾಮ್ರಾಜ್ಯ ಕಟ್ಟೋದಕ್ಕೆ ನೆರವಾದರಪ್ಪ! ಇದು ಗೊತ್ತೇನಯ್ಯಾ?
ಜವರ: ಔದ್ರಾ, ಗೊತ್ತಿರಲಿಲ್ಲ ಸಾಮಿ!
ಪ್ರೊಫೆಸರ್: ಮತ್ತೆ, ಏನಂದುಕೊಂಡೆ ನನ್ನ? ಇರು ಇರು ಈಗೊಂದು ಇಷ್ಟು ದಪ್ಪ ಪುಸ್ತಕ ಬರ‍್ದೀದ್ದೀನಯ್ಯಾ! ಅದು ಪ್ರಕಟವಾದ ಮೇಲೆ ಈ ಪ್ರೊಫೆಸರ್ ಟಪ್ಪಾ ಎಷ್ಟು ದೊಡ್ಡ ಮನುಷ್ಯ, ಎಷ್ಟು ದೊಡ್ಡ ಪ್ರೊಫೆಸರ್ ಅಂತ ನಿನಗೇ ಗೊತ್ತಾಗುತ್ತೆ! ಹೋಗಲಿ, ಈ ಅರಮನೆ ಕಟ್ಟಿಸಿದ ಪಾಳೇಗಾರನ ಹೆಸರಾದರೂ ಗೊತ್ತೇನಯ್ಯಾ ನಿನಗೆ?
ಜವರ: ಗೊತ್ತು ಸಾಮೀ ಮೀಸೆ ದೊಣ್ಣೆನಾಯ್ಕ!