Site icon Vistara News

ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು

maya joga

| ಡಾ.ಲಕ್ಷ್ಮೀ ಜಿ ಪ್ರಸಾದ್

ತುಳುನಾಡಿನ ದೈವಾರಾಧನೆ ಒಂದು ವಿಶಿಷ್ಟವಾದ ಆರಾಧನಾ ರಂಗ ಕಲೆ, ಧಾರ್ಮಿಕ ಆರಾಧನಾ ಪದ್ಧತಿ. ಹಿಂದು‌, ಮುಸ್ಲಿಂ, ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ. ಎಲ್ಲ ಜಾತಿ‌ಮತಗಳ ಜನರೂ ಇಲ್ಲಿನ ದೈವಗಳ ಆರಾಧನೆ ಮಾಡುತ್ತಾರೆ. ಇಲ್ಲಿ ದೈವಗಳಾಗುವ ಮೊದಲು ಇವರು ಏನಾಗಿದ್ದರು ಯಾರಾಗಿದ್ದರು ಎಂಬುದು ಗಣನೆಗೆ ಬರುವುದಿಲ್ಲ. ದೈವಗಳಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ದೈವಗಳಿಗೂ ಸಮಾನ ಆದರ, ಗೌರವ, ಭಕ್ತಿಯ ಆರಾಧನೆ‌. ಹೀಗೆ ಜಾತಿ ಮತಗಳ ಸಾಮರಸ್ಯ ತುಳು ಸಂಸ್ಕೃತಿಯ ವೈಶಿಷ್ಟ್ಯ .

ತುಳು ಸಂಸ್ಕೃತಿಯಲ್ಲಿ‌ ಮಾಯವಾಗುವುದು ಎಂದರೆ ಸಾಯುವುದು ಅಲ್ಲ, ದುರಂತವೂ ಅಲ್ಲ. ಬರೀ ಅದೃಶ್ಯವಾಗುವುದಲ್ಲ‌, ಕರಗಿ ಹೋಗುವುದಲ್ಲ ಅಥವಾ ಇಲ್ಲವಾಗುವುದೂ ಅಲ್ಲ. ಇಲ್ಲಿ ಮಾಯಕಕ್ಕೆ ಸಲ್ಲುದು (ಮಾಯಕೊಗ್/ ಮಾಯೊಗ್ ಸಂದುನೆ) ಎಂದು ಹೇಳುತ್ತಾರೆ. ಅದರರ್ಥ ದೈವದ ಸಾನ್ನಿಧ್ಯಕ್ಕೆ ಸೇರುವುದು ಎಂದಾಗಿದೆ. ತುಳುವರ ಪರಿಕಲ್ಪನೆಯ ಮೋಕ್ಷ ಇದು. ಪುರಾಣ ಪರಿಕಲ್ಪನೆಯ ಮೋಕ್ಷಕ್ಕೂ ಮಾಯಕಕ್ಕೆ ಸಲ್ಲುವುದಕ್ಕೂ ವ್ಯತ್ಯಾಸವಿದೆ.

ಈ ಪರಿಕಲ್ಪನೆಯ ಮಾಯಕ ಅಥವಾ ಮೋಕ್ಷವೆಂದರೆ ಆ ದೈವದ ಜೊತೆ ಐಕ್ಯವಾಗುವುದಲ್ಲ ಬದಲಿಗೆ ಆ ದೈವದಂತೆಯೇ ಶಕ್ತಿ ಪಡೆದು ಇನ್ನೊಂದು ದೈವವಾಗುವುದು. ಎಂದರೆ ಶಿಷ್ಟ ರಕ್ಷಕ ದುಷ್ಟ ಶಿಕ್ಷಕರಾಗಿ ಜನರನ್ನು ಕಾಪಾಡುವ ಒಲವಿನ ಶಕ್ತಿಗಳಾಗುವುದು. ಇದನ್ನೇ ದೈವತ್ವ ಪ್ರಾಪ್ತಿ ಅಥವಾ ದೈವತ್ವ ಪಡೆಯುವುದು ಎನ್ನುತ್ತೇವೆ. ಯಾವ ದೈವದ ಸಾನ್ನಿಧ್ಯವನ್ನು ಪಡೆದಿರುವರೋ ಆ ದೈವದ ಸೇರಿಗೆ ದೈವ/ ಪರಿವಾರ ದೈವ ಎಂದು ಈ ದೈವವನ್ನು ಗುರುತಿಸುತ್ತಾರೆ. ಹಾಗಾಗಿ ‌ಮಾಯವಾದಾಗ ಅಶೌಚದ ಆಚರಣೆ ಇರುವುದಿಲ್ಲ‌, ಅಂತ್ಯ ಸಂಸ್ಕಾರ ಇರುವುದಿಲ್ಲ‌. ಬದಲಿಗೆ ದೈವದ ಆರಾಧನೆ ಇರುತ್ತದೆ. ಯಾಕೆಂದರೆ ಅವರು ಸತ್ತದ್ದಲ್ಲ. ದೈವ ಸಾನ್ನಿಧ್ಯಕ್ಕೆ ಸೇರಿ ದೈವವೇ ಆಗಿರುತ್ತಾರೆ.

ಇನ್ನು ತುಳುನಾಡಿನಲ್ಲಿ ಯಾರಿಗೆ ಯಾವಾಗ ಹೇಗೆ ಯಾಕೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಸಿದ್ಧ ಸೂತ್ರವಿಲ್ಲ. ಸಾಮಾನ್ಯವಾಗಿ ಎಲ್ಲರಂತೆ ಮಾನವರಾಗಿ ಹುಟ್ಟಿ ಅತಿಮಾನುಷ ಸಾಹಸ ಮೆರೆದವರು ಮಾಯಕಕ್ಕೆ ಸಂದು ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆದಿದ್ದಾರೆ. ಕೋಟಿ-ಚೆನ್ನಯರು, ಮುದ್ದ -ಕಳಲರು, ಎಣ್ಮೂರು ದೆಯ್ಯು -ಕೇಲತ್ತ ಪೆರ್ನೆ, ಕಾನದ- ಕಟದರು, ಕೋಟೆದ ಬಬ್ಬು- ತನ್ನಿ ಮಾಣಿಗ ಮೊದಲಾದ ಅತಿಮಾನುಷ ಸಾಹಸಿಗಳು ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.

ಇನ್ನು ದೈವಗಳ ಆರಾಧನೆ ಮಾಡಿದ ಅನನ್ಯ ಭಕ್ತರನ್ನು ದೈವಗಳು ಅನುಗ್ರಹಿಸಿ ಅವರನ್ನು ಮಾಯ ಮಾಡಿ‌ ತನ್ನ ಸೇರಿಗೆಗೆ / ಸಾನ್ನಿಧ್ಯಕ್ಕೆ ಸೇರಿಸಿಕೊಳ್ಳುತ್ತವೆ. ತನ್ನ ಅನನ್ಯ ಭಕ್ತೆಯಾದ ಅಕ್ಕ ಅರಸು ಎಂಬ ಜೈನ ಅರಸಿಯನ್ನು ರಕ್ತೇಶ್ವರಿ ದೈವವು ಮಾಯ ಮಾಡಿ‌ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಈ ಜೈನ ರಾಣಿ ಅಕ್ಕಚ್ಚು ದೈವವಾಗಿ ಆರಾಧನೆ ಹೊಂದುತ್ತಾಳೆ. ಕೋಟೆದ ಬಬ್ಬು ಸ್ವಾಮಿಯ ಅನನ್ಯ ಭಕ್ತೆಯಾದ ಅಜ್ಜಿ ಬೆರೆಂತೊಲು ಅನ್ನು ದೈವ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡ ಕಥೆ ಇದೆ. ಕೋಟೆದ ಬಬ್ಬು ಸ್ವಾಮಿಯ ಸಾನ್ನಧ್ಯ ಪಡೆದ ಅಜ್ಜಿ ಬೆರೆಂತೊಲು ಕೂಡ ಸೇರಿಗೆ ದೈವವಾಗಿ ಆರಾಧನೆ ಪಡೆಯುತ್ತಾಳೆ.

ತನ್ನ ಅನನ್ಯ ಭಕ್ತೆಯಾದ ಓರ್ವ ಬಾಣಿಯೆತ್ತಿ (ಮಲಯಾಳ ಗಾಣಿಗ ಸಮುದಾಯದ ಸ್ತ್ರೀ) ಯನ್ನು ಭಗವತಿ ದೈವ ತನ್ನ ಸಾನ್ನಿಧ್ಯಕ್ಕೆ ಸೇರಿಸಿಕೊಂಡಿದೆ. ಈ ಸ್ತ್ರೀ ಒರು ಬಾಣಿಯೆತ್ತಿ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾಳೆ. ತನ್ನನ್ನು ಬಹಳ ಭಕ್ತಿ ನಿಷ್ಠೆಯಿಂದ ಆರಾಧನೆ ಮಾಡುತ್ತಿದ್ದ ಬ್ರಾಹ್ಮಣ ಅರ್ಚಕನನ್ನು ಪಂಜುರ್ಲಿ ದೈವವು ಮಾಯ ಮಾಡಿ ದೈವತ್ವ ನೀಡುತ್ತದೆ. ಆತ ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಇಪ್ಪತಜ್ಜ, ಕಾನಲ್ತಾಯ ಭಟ್ರು ಭೂತ, ಕಚ್ಚೆ ಭಟ್ಟ, ಬ್ರಾಣ ಭೂತ ಮೊದಲಾದವರುಈ ರೀತಿಯಾಗಿ ದೈವತ್ವ ಪಡೆದವರು.

ಅದೇ ರೀತಿ ದೈವ ದೇವರುಗಳಿಗೆ ಸ್ಥಾನ ಕಟ್ಟಿಸುವ‌ ಮಹತ್ಕಾರ್ಯ ಮಾಡಿದ ಅನೇಕರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ. ಕಾರಿಂಜೆತ್ತಾಯ, ಅಡ್ಕತ್ತಾಯ, ಚೆನ್ನಿಗರಾಯ, ಸುಜೀರ್‌ನ ದೇಯಿ ಬೈದ್ಯೆತಿ, ಜಾನು ನಾಯ್ಕ/ ಬೈದ್ಯ, ಕಂರ್ಭಿಸ್ಥಾನದ ದೇಯಿ ಬೈದೆತಿ, ಅಚ್ಚು ಬಂಗೇತಿ ಮೊದಲಾದವರು ಇಂತಹ ಕಾರಣಕ್ಕೆ ದೈವತ್ವ ಪಡೆದವರು. ಜನರಿಗೆ ಉಪಕಾರಿಯಾಗಿ ಹಳ್ಳಿ‌ಮದ್ದುಗಳನ್ನು ಕೊಡುತ್ತಿದ್ದ ಬ್ರಾಹ್ಮಣ ಸ್ತ್ರೀ ಇಲ್ಲತಮ್ಮ ದೈವವಾಗಿ ಇನ್ನೋರ್ವ ಸ್ತ್ರೀ ಶ್ರೀಮಂತಿ ದೈವವಾಗಿ ಆರಾಧನೆ ಪಡೆಯುತ್ತಿದ್ದಾರೆ.

ಇನ್ನು ದೈವಗಳ ಆಗ್ರಹಕ್ಕೆ ಎಂದರೆ ಕೋಪಕ್ಕೆ ತುತ್ತಾದವರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುವ ಅನೇಕ ಕಥಾನಕಗಳಿವೆ. ಚಾಮುಂಡಿ ದೈವಕ್ಕೆ ದ್ರೋಹ ಮಾಡಿದ ಓರ್ವ ಬ್ರಾಹ್ಮಣನನ್ನು ದೈವ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಆತ ಜತ್ತಿಂಗ ದೈವವಾಗಿ ಆರಾಧನೆ ಪಡೆಯುತ್ತಾನೆ. ತನಗೆ ಆಶ್ರಯ ಕೊಟ್ಟ ಮನೆಯ ಒಡೆಯನ ಮಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ವಶಪಡಿಸಿಕೊಳ್ಳಲೆತ್ನಿಸಿದ ಆಲಿ ಬ್ಯಾರಿ ಎಂಬ ಮುಸ್ಲಿಂ ವ್ಯಕ್ತಿಯನ್ನು ರಕ್ತೇಶ್ವರಿ ದೈವ ಉಪಾಯದಿಂದ ನೀರಿಗಿಳಿಸಿ ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ. ಆತ ಆಲಿ ಭೂತ/ ಆಲಿ ಚಾಮುಂಡಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾನೆ.

ಮಂಗಳೂರಿನ ಉರ್ವ ಚಿಲುಂಬಿಯಲ್ಲಿ ಅರಬ್ ವ್ಯಾಪಾರಿಯೊಬ್ಬ ಮಲರಾಯ ದೈವದ ಭಕ್ತೆಯಾದ ಓರ್ವ ಬ್ರಾಹ್ಮಣ ಹುಡುಗಿಗೆ ತೊಂದರೆ ಕೊಡುತ್ತಾನೆ. ಆಗ ತನ್ನ ಭಕ್ತೆಯ ಮಾನ ರಕ್ಷಣೆಗಾಗಿ ಮಲರಾಯ ದೈವ ಆ ಹುಡುಗಿಯನ್ನು ಮಾಯ ಮಾಡುತ್ತದೆ. ಶಿಕ್ಷೆಯಾಗಿ ಆ ಅರಬ್ ವ್ಯಾಪಾರಿಯನ್ನು ಮಾಯ ಮಾಡುತ್ತದೆ. ಮಾಯವಾದ ಈ ಇಬ್ಬರೂ ಅದೇ ದೈವದ ಸೇರಿಗೆಗೆ / ಸಾನ್ನಿಧ್ಯಕ್ಕೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.

ಹೇಳಿದ ಹರಕೆಯನ್ನು ಮರೆತ ದೇವು ಪೂಂಜನ ಮೇಲೆ ಕಾಂತೇರಿ ಜುಮಾದಿ ದೈವ ಮುನಿದು ದುರಂತವನ್ನು ಉಂಟು ಮಾಡುತ್ತದೆ. ನಂತರ ದೇವು ಪೂಂಜನೂ ಕಾಂತೇರಿ ಜುಮಾದಿ ದೈವದ ಬಂಟ ದೈವವಾಗಿ ಆರಾಧನೆ ಪಡೆಯುತ್ತಾನೆ‌. ಹೇಳಿದ ಹರಕೆಯನ್ನು ಮರೆತದ್ದಲ್ಲದೆ ಜುಮಾದಿ ದೈವದ ಹಲಸಿನ ಮರದ ಹಣ್ಣನ್ನು ಕೊಯ್ದು ತಿಂದ ಮಂಜನಾಳ್ವರಿಗೆ ಶಿಕ್ಷೆಯ ರೂಪದಲ್ಲಿ ಕಂಬಳದ ಕೋಣಗಳು ಹಾಗೂ ನಾರ್ಯದ ಬಬ್ಬುವನ್ನು ಮಾಯ ಮಾಡುತ್ತದೆ. ಕಂಬಳದ ಕೋಣ ಹಾಗೂ ನಾರ್ಯದ ಬಬ್ಬು ದೈವತ್ಬ ಪಡೆದು ಎರುಬಂಟ ಮತ್ತು ಉರವ ದೈವಗಳಾಗಿ ಆರಾಧನೆ ಪಡೆಯುತ್ತಾರೆ.

ಇದನ್ನೂ ಓದಿ | ಹೊಸ ಪುಸ್ತಕ | ಕಾದಂಬರಿ ವಿಮರ್ಶೆ | ಕಳೆದುಹೋದ ಮೌಲ್ಯಗಳನ್ನು ಹುಡುಕುತ್ತಾ ಸಾಗುವ ಕಥಾನಕ ʼಅಬ್ಬೆʼ

ವಿಧಿ ನಿಷೇಧಗಳು ಆದಿಮಾನವನ ಕಾಲದ ಅಲಿಖಿತ ಶಾಸನಗಳಾಗಿದ್ದವು ಎಂಬಂತೆ ನಿಯಮಗಳನ್ನು ಮೀರಿದ ಅನೇಕರು ಮಾಯವಾಗಿ ದೈವತ್ವ ಪಡೆದಿದ್ದಾರೆ. ಬಬ್ಬರ್ಯನ ಕೋಲವನ್ನು ಸ್ತ್ರೀಯರು ನೋಡಬಾರದೆಂಬ ನಿಯಮವನ್ನು ಮೀರಿ ನೋಡಿದ ಮುಸ್ಲಿಂ ಮಹಿಳೆ ಬ್ಯಾರ್ದಿ ಭೂತವಾಗಿ ದೈವತ್ವ ಪಡೆದಿದ್ದಾಳೆ. ಉಳ್ಳಾಕುಲ ದೈವದ ಕೋಲವನ್ನು ಹಲಸಿನ ಮರದ ಎಡೆಯಿಂದ ಬಗ್ಗಿ ನೋಡಿದ ಈರ್ವರು ಬ್ರಾಹ್ಮಣ ಹುಡುಗಿಯರು ನುರ್ಗಿ‌ಮದಿಮಾಳ್ ದುರ್ಗಿ‌ಮದಿಮಾಳ್ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ. ಅರಸು ದೈವದ ಕೋಲವನ್ನು ನೋಡಿದ ಮೀನುಗಾರ್ತಿ ಮಹಿಳೆಯೊಬ್ಬಳನ್ನು ದೈವ ಮಾಯ ಮಾಡುತ್ತದೆ.

ಇನ್ನು ಯಾವುದೇ ವಿಶೇಷ ಕಾರಣವಿಲ್ಲದೇ ಇದ್ದಾಗಲೂ ದೈವದ ದೃಷ್ಟಿಗೆ ಬಿದ್ದು ಮಾಯವಾಗಿ ಆಯಾಯ ದೈವಗಳ ಸಾನ್ನಧ್ಯದಲ್ಲಿ ದೈವಗಳಾಗಿ ಆರಾಧಿಸಲ್ಪಡುತ್ತಾರೆ. ಕುಂಞಿ ಭೂತ, ಬ್ಯಾರಿ ಭೂತ, ಮಾಪುಲೆ ಮಾಪುಳ್ತಿ ಭೂತಗಳು, ಮಾಪುಲ್ತಿ, ಧೂಮಾವತಿ, ಬ್ರಾಣ ಭೂತ ಮತ್ತು ಮಾಣಿ ಭೂತ, ದಾರು ಕುಂದಯ ಮೊದಲಾದವರು ಅಕಾರಣವಾಗಿ ದೈವದ ದೃಷ್ಟಿ ತಾಗಿ ‌ಮಾಯವಾಗಿ ಆಯಾಯ ದೈವಗಳ ಸಾನ್ನಿಧ್ಯ ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.

ಇಲ್ಲಿ ದೈವತ್ವ ಪಡೆಯುವ ಮೊದಲು ಇವರು ಏನಾಗಿದ್ದರು? ಒಳ್ಳೆಯವರೋ ಕೆಟ್ಟವರೋ ಎಂಬ ವಿಷಯ ಗಣನೆಗೆ ಬರುವುದಿಲ್ಲ. ದೈವವಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು. ಎಲ್ಲ ದೈವಗಳಿಗೂ ಸಮಾನ ಗೌರವ, ಭಕ್ತಿಯ ಆರಾಧನೆ ಇರುತ್ತದೆ. ಇದು ತುಳು ಸಂಸ್ಕೃತಿಯ ವಿಶಿಷ್ಟತೆ. ಇಲ್ಲಿ ಎಲ್ಲ ಜಾತಿ ಮತಗಳ ಜನರೂ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ. ಹಾಗೆಯೇ ಇಲ್ಲಿ ಎಲ್ಲ ಜಾತಿ ಮತಗಳ ಜನರೂ ದೈವಗಳನ್ನು ನಂಬಿ ಆರಾಧಿಸುತ್ತಾರೆ. ಇಲ್ಲಿನ ದೈವಾರಾಧನೆಯಲ್ಲಿ ಜಾತಿ ಮತಗಳ ಸಾಮರಸ್ಯವಿದೆ. ಹಾಗಾಗಿ ಇದು ಜಗತ್ತಿಗೇ ಮಾದರಿಯಾಗಿರುವ ಶ್ರೇಷ್ಠ ಆರಾಧನಾ ಪದ್ಧತಿಯಾಗಿದೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಸಣ್ಣಕಥೆ | ಹೊಸ ಶಿಕಾರಿ

ಕಾಂತಾರದ ದಂತ ಕಥೆ ಯಾವುದೋ ಕಾಲ ಘಟ್ಟದಲ್ಲಿ ನಡೆದದ್ದೇ ಆಗಿದ್ದರೆ ಅಲ್ಲಿ ದೈವ ಕಟ್ಟಿದಾಗ ಮಾಯವಾಗುವ ತಂದೆ ಮಗ ಇಬ್ಬರೂ ಕೂಡ ಪಂಜುರ್ಲಿ ದೈವದ ಸಾನ್ನಿಧ್ಯಕ್ಕೆ ಸೇರಿದ ಸೇರಿಗೆ ದೈವಗಳೇ ಆಗಿರುತ್ತಾರೆ. ಹಾಗಾಗಿಯೇ ಅವರಿಬ್ಬರು ಮಾಯಕವಾದ ಸ್ಥಳದಲ್ಲಿ ತಂದೆ ಮಗನ ಸಮಾಗಮವನ್ನು ತೋರಿಸಿರಬಹುದು. ಗುರುವ ಸತ್ತಾಗ ಅಳುವ ಧ್ವನಿ ಪಂಜುರ್ಲಿ ದೈವದ ಸಾನ್ನಿಧ್ಯ ಸೇರಿ ಸೇರಿಗೆ ದೈವವಾದ ಗುರುವನ ಚಿಕ್ಕಪ್ಪನದು ಎಂದು ಅರ್ಥೈಸಬಹುದು ಅಥವಾ ತನ್ನ ಅನನ್ಯ ಭಕ್ತ ಗುರುವನ ಸಾವಿಗೆ ದುಃಖಿಸಿದ ಪಂಜುರ್ಲಿಯದೆಂದೂ ಅರ್ಥೈಸಬಹುದು. ಇದು ಸಿನೇಮ ಹಾಗಾಗಿ ಈ ಭಾಗ ಕಲ್ಪನೆಯಾಗಿರಲೂ ಸಾಧ್ಯವಿದೆ.

ಇಂದು ಬಿಡುಗಡೆ

ಈ ಕೃತಿ, ತುಳುನಾಡಿನ 1253 ದೈವಗಳ ಸಚಿತ್ರಮಯ ಮಾಹಿತಿ ಪುಸ್ತಕ. ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರಿಂದ ಸಂಗ್ರಹಿಸಿ ವಿಶ್ಲೇಷಿಸಿದ ಕೃತಿ. ಸಂಶೋಧಕಿ ಡಾ. ಲಕ್ಷ್ಮೀ ಪ್ರಸಾದ್ ಅವರ ಈ ಕೃತಿ ಇಂದು (ಜನವರಿ 15) ಬೆಂಗಳೂರಿನ ಯಲಹಂಕ ಉಪನಗರದ 5ನೇ ಹಂತದಲ್ಲಿರುವ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಅತಿಥಿಗಳಾಗಿ ಗೋವಿಂದೂರು ವೆಂಕಪ್ಪ ಹೆಗ್ಡೆ, ಡಾ.ಈಶ್ವರ ದೈತೋಟ, ಶಾಸಕ ಎಸ್.ಆರ್.ವಿಶ್ವನಾಥ್, ನಟ ಅಜಿತ್ ಹಂದೆ ಭಾಗವಹಿಸಲಿದ್ದಾರೆ. ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಡಾ. ಲಕ್ಷ್ಮೀ ಪ್ರಸಾದ್ ಅವರ 21 ವರ್ಷಗಳ ಅಧ್ಯಯನದ ಫಲ ಈ ಕೃತಿ. ಕರಾವಳಿ ಕರ್ನಾಟಕದ ದೈವಾರಾಧನೆಯ ಸಮಗ್ರ ಮಾಹಿತಿಯೇ ಇಲ್ಲಿದೆ.

ಪುಸ್ತಕ: ʼಮಾಯ ಮತ್ತು ಜೋಗದ ಬೆಳಕಿನಲ್ಲಿʼ
ಲೇಖಕಿ: ಡಾ.ಲಕ್ಷ್ಮೀ ಜಿ ಪ್ರಸಾದ್
ಪ್ರಕಾಶನ: ಮಾತೃಶ್ರೀ ಪ್ರಕಾಶನ
ಪುಸ್ತಕಗಳಿಗಾಗಿ ಸಂಪರ್ಕ ಸಂಖ್ಯೆ: 9480516684

Exit mobile version