ಬೆಂಗಳೂರು: ಖ್ಯಾತ ಹಿಂದೂಸ್ತಾನಿ ಸಂಗೀತಗಾರ(hindustani classical vocalist), ಕರ್ನಾಟಕದವರೇ ಆದ ಪಂಡಿತ ಗಣಪತಿ ಭಟ್ ಹಾಸಣಗಿ (Pandit Ganapati Bhat Hasanagi) ಅವರು ಮಧ್ಯ ಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ತಾನ್ಸೇನ್ ಸಮ್ಮಾನ್ ಪುರಸ್ಕಾರಕ್ಕೆ (tansen samman puraskar) ಆಯ್ಕೆಯಾಗಿದ್ದಾರೆ. ಡಿಸೆಂಬರ್ 24ರಂದು ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಗುತ್ತದೆ.
ತಮ್ಮ ಸಂಗೀತ ವಿದ್ವತ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಪಂಡಿತ ಗಣಪತಿ ಭಟ್ ಹಾಸಣಗಿ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಾಸಣಗಿ ಊರಿನವರು. ಪಂಡಿತ ಬಸವರಾಜ ರಾಜಗುರು ಅವರ ಮೆಚ್ಚಿನ ಶಿಷ್ಯರಾದ ಗಣಪತಿ ಭಟ್ ಅವರು, ಕಿರಾಣಾ-ಗ್ವಾಲಿಯರ್ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
1980ರಿಂದ ಪಂಡಿತ ಗಣಪತಿ ಭಟ್ ಅವರು ತಮ್ಮ ಹಾಸಣಗಿ ಗ್ರಾಮದಲ್ಲಿ ಗುರುಕುಲ ಮಾದರಿಯಲ್ಲಿ ಹಿಂದೂಸ್ತಾನಿ ಸಂಗೀತ ತರಬೇತಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ನಲ್ಲಿ ಸ್ಥಾನಿಕ ಗುರುಗಳಾಗಿದ್ದಾರೆ.
ಪಂಡಿತ ಗಣಪತಿ ಭಟ್ ಅವರು 1979ರಿಂದ ಅಖಿಲ ಭಾರತ ಆಕಾಶವಾಣಿಯಲ್ಲಿ ಬಿ ಹೈ ಗ್ರೇಡ್ ಕಲಾವಿದರಾಗಿದ್ದರು. ಬಳಿಕ 1988ರಿಂದ ಎ ಗ್ರೇಡ್ ಕಲಾವಿದರಾಗಿ ಗುರುತಿಸಿಕೊಂಡರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ 1995ರಿಂದ 1998ರವರೆಗೆ ಕೆಲಸ ಮಾಡಿದ್ದಾರೆ. 2001ರಿಂದ 2003ರವರೆಗೆ ಭಾರತ ಸರ್ಕಾರದ ಎಚ್ಆರ್ಡಿ ಮ್ಯೂಸಿಕ್ ಎಕ್ಸ್ಪರ್ಟ್ ಸಮಿತಿಯ ಸದಸ್ಯರಾಗಿದ್ದರು. ಅವರು ಆಕಾಶವಾಣಿ ಆಡಿಷನ್ ಸಮಿತಿಯ ಸದಸ್ಯರೂ ಆಗಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದ ಪರೀಕ್ಷಾ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಪಂಡಿತ ಗಣಪತಿ ಭಟ್ ಹಾಸಣಗಿ ಅವರಿಗೆ 1993ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. 2007ರಲ್ಲಿ ಕರ್ನಾಟಕ ಸಂಗೀತ ನಾಟಕ ನೃತ್ಯ ಅಕಾಡೆಮಿ ಪ್ರಶಸ್ತಿ, ಪುಣೆಯ ಆರ್ಯ ಪ್ರಸಾರಕ ಮಂಡಳ ನೀಡುವ ವತ್ಸಲಾಬಾಯಿ ಭೀಮಸೇನ ಜೋಶಿ ಅವಾರ್ಡ್(2006), ಪುಟ್ಟರಾಜ ಗವಾಯಿ ಪ್ರಶಸ್ತಿ(2015), ನಿಜಗುಣ ಪುರಂದರ ಪ್ರಶಸ್ತಿ(2017), ಪಂಡಿತ ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ(2020) ಸೇರಿ ಹಲವು ಪ್ರಶಸ್ತಿಗಳನ್ನು ಪಂಡಿತ ಗಣಪತಿ ಭಟ್ ಹಾಸಣಗಿ ಅವರನ್ನು ಅರಸಿ ಬಂದಿವೆ.
ಈ ಸುದ್ದಿಯನ್ನೂ ಓದಿ: Nobel Peace Prize: ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ, ಜೈಲಿನಲ್ಲಿರುವ ಪುರಸ್ಕೃತೆಗಾಗಿ ಖಾಲಿ ಕುರ್ಚಿ