Site icon Vistara News

ಶಿಶುನಾಳ ಶರೀಫ ಅವರ ಪುಣ್ಯಸ್ಮರಣೆಯ ದಿನದಂದು ಕಸಾಪ ವತಿಯಿಂದ ವಿಶೇಷ ಕಾರ್ಯಕ್ರಮ

ಶಿಶುನಾಳ ಶರೀಫ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜುಲೈ 3ರಂದು ಶಿಶುನಾಳ ಶರೀಫ ಅವರ ತತ್ತ್ವಪದಗಳ ಆಧಾರಿತ ತತ್ತ್ವರಸಾಯನ ಕಾರ್ಯಕ್ರಮ ನಡೆಯಲಿದೆ. ಜೂನ್ 18 ಹಾಗೂ 19ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದರು.

ಜುಲೈ 3 ಸಂತ ಶಿಶುನಾಳ ಶರೀಫರು ಹುಟ್ಟಿದ ದಿನ ಹಾಗೂ ಅವರು ದೇಹಬಿಟ್ಟ ದಿನವೂ ಹೌದು. ಶಿಶುನಾಳ ಶರೀಫರ ಪುಣ್ಯಸ್ಮರಣೆಯಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ | “ಅಂಥವರ ಪಠ್ಯವನ್ನೇ ತೆಗೆದ ಮೇಲೆ ನನ್ನದು ಏತಕ್ಕೆ?”: ತಮ್ಮ ಬರಹದ ಪಾಠ ಮಾಡದಂತೆ ದೇವನೂರು ಆಗ್ರಹ

ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. 107 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ಹಿರಿಮೆ ಈ ಸಂಸ್ಥೆಗಿದೆ. ಈ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಬೇಕು. ಈ ಹಿನ್ನೆಲೆಯಲ್ಲಿ ʼತತ್ತ್ವರಸಾಯನʼ ಎನ್ನುವ ಶೀರ್ಷಿಕೆಯಲ್ಲಿ ಸಂತ ಶಿಶುನಾಳ ಶರೀಫರ ತತ್ತ್ವಪದಗಳ ಆಧಾರಿತ ಸಂಗೀತ-ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಹೇಶ ಜೋಶಿ ತಿಳಿಸಿದರು.

ಈ ಕಾರ್ಯಕ್ರಮದ ಆಯೋಜನೆಗೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ ಹಾಗೂ ಶ್ರೀ ಶಾರದ ವಿದ್ಯಾಪೀಠ ಕೈಜೋಡಿಸಿವೆ.

ಈ ದಿನವನ್ನು ಭಾವೈಕ್ಯತೆಯ ದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಕನ್ನಡ ನಾಡಿನಲ್ಲಿ ಶಾಂತಿ, ಸೌಹಾರ್ದತೆಗೆ ಪೂರಕವಾಗುವ ವಾತಾವರಣ ಸೃಷ್ಟಿಸಿ ಹಾಗೂ ಸಹೋದರತ್ವದ ಭಾವ ಬೆಳೆಸಿ ಕನ್ನಡ ಕಟ್ಟುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಅನೇಕ ಆಸಕ್ತ ಕಲಾವಿದರನ್ನು, ಜಾನಪದ ಕಲಾತಂಡದವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಶನಿವಾರ ಜೂನ್ 18 ಹಾಗೂ 19 ರಂದು ಸಂಗೀತ ಹಾಗೂ ನೃತ್ಯ ತಂಡದವರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಸಂಗೀತ ಕಲಾವಿದರು ಹಾಗೂ ನೃತ್ಯ ತಂಡದವರು ನೇರವಾಗಿ ಜೂನ್ 18, 19ರಂದು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಗಾಯನ/ನೃತ್ಯದ ಅನುಭವದ ವಿವರಣೆಗಳುಳ್ಳ ಸ್ವ-ವಿವರಗಳನ್ನೊಳಗೊಂಡ ಅರ್ಜಿಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಆಗಮಿಸಬೇಕು.
ವಿಳಾಸ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018 .
ಜೂನ್‌ 18 -ಸಂಗೀತ ತಂಡದವರಿಗೆ ಅವಕಾಶ
ಜೂನ್‌ 19– ನೃತ್ಯ ತಂಡದವರಿಗೆ ಅವಕಾಶ

ಇದನ್ನೂ ಓದಿ: ಸಮಾಜದಲ್ಲಿ ಕುಟುಂಬವೇ ಮಾದರಿ ಸಂಸ್ಥೆ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅಭಿಮತ

Exit mobile version