ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವ (Kannada Rajyotsava) ಸಂದರ್ಭದಲ್ಲಿ ನಾಡಿನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ 2023 (Rajyotsava Award 2023) ನೀಡಲಾಗುತ್ತದೆ. ಈ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಸಾಧಕರ ಹೆಸರನ್ನು ಶಿಫಾರಸು ಮಾಡಲು ಸಾರ್ವಜನಿಕರಿಗೆ ಅವಕಾಶ (Public Nomination) ನೀಡಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಗೆ ಅರ್ಹರನ್ನು ಆಯ್ಕೆ ಮಾಡುವ ಉದ್ದೇಶದಿಂದ ಕಳೆದ ಕೆಲವು ವರ್ಷದಿಂದ ಆನ್‌ಲೈನ್‌ನಲ್ಲಿ ಸಾಧಕರ ಹೆಸರು ಮತ್ತು ವಿವರವನ್ನು ನೀಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಅದರಂತೆ ಈ ಬಾರಿಯೂ ಶಿಫಾರಸಿಗೆ ಮನವಿ ಮಾಡಲಾಗಿದ್ದು, ಸೇವಾ ಸಿಂಧು ಪೋರ್ಟಲ್ (Sewa Sindhu Portal) ಮೂಲಕ ಅಕ್ಟೋಬರ್ 1ರಿಂದ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 15ರಂದು ನಾಮ ನಿರ್ದೇಶನಕ್ಕೆ ಕೊನೆಯ ದಿನವಾಗಿರುತ್ತದೆ.
ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆ ಇರುತ್ತದೆ. ಅದರಲ್ಲಿ ಸಾಧಕರ ಹೆಸರು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಅವರ ಊರು , ವಿಳಾಸ, ಸಂಪರ್ಕ ಸಂಖ್ಯೆ ಇತ್ಯಾದಿ ವಿವರಗಳನ್ನು ಒದಗಿಸಬೇಕಾಗುತ್ತದೆ.
ರಾಜ್ಯದ ಮೂಲೆ ಮೂಲೆಯಲ್ಲಿ ಎಲೆಮರೆಕಾಯಿಯಂತೆ ತಮ್ಮ, ತಮ್ಮ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸುವ ಉದ್ದೇಶದಿಂದ ಈ ನಾಮ ನಿರ್ದೇಶನ ಅವಕಾಶ ನೀಡಲಾಗಿದೆ.
ಪ್ರತಿ ವರ್ಷವೂ ಈ ನಾಮಕರಣಕ್ಕೆ ಅವಕಾಶವಿರುತ್ತದೆ. ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ಮೇಲ್ಪಟ್ಟವರನ್ನು ಮಾತ್ರ ಶಿಫಾರಸು ಮಾಡಬಹುದಾಗಿರುತ್ತದೆ. ಇದರಲ್ಲಿ ಕ್ರೀಡಾ ವಿಭಾಗರದಲ್ಲಿ ವಯಸ್ಸಿನ ವಿನಾಯಿತಿ ಇರುತ್ತದೆ.
2022ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ, ನಾಮನಿರ್ದೇಶನಕ್ಕೆ ಅವಕಾಶ ಕಲ್ಪಿಸಿದಾಗ ಸುಮಾರು 28000ಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದಿದ್ದವು. ಅವರ ಪೈಕಿ ಸಾಧನೆ, ಜಿಲ್ಲಾವಾರು ಮಾನದಂಡಗಳನ್ನು ಪರಿಗಣಿಸಿ 67 ಸಾಧಕರನ್ನು ಆಯ್ಕೆ ಮಾಡಿ ಗೌರವಿಸಲಾಗಿತ್ತು.
ಈ ಬಾರಿ 68 ಮಂದಿ ಸಾಧಕರಿಗೆ ಪ್ರಶಸ್ತಿ
ಈ ಬಾರಿ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಗಿರುವುದರಿಂದ 68 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಆನ್‌ಲೈನ್ ಮೂಲಕ ಬಂದಿರುವ ಅರ್ಜಿಗಳನ್ನು ಪ್ರತ್ಯೇಕಿಸಿ ಅವುಗಳನ್ನು ತಜ್ಞರ ತಂಡದ ಮುಂದೆ ಇಟ್ಟು ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಇದಕ್ಕಾಗಿಯೇ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಮಾಡಲಾಗುತ್ತದೆ.