ಸಿನಿಮಾಪ್ರಿಯರಿಗೆ ಜೇಮ್ಸ್ ಬಾಂಡ್ ಹೇಗೋ, ಸಾಹಿತ್ಯಪ್ರಿಯರಿಗೆ Ruskin Bond ಹಾಗೆ. ಹಿಮಾಲಯದ ಲಂಡೂರ್ನಲ್ಲಿ, ಹಿಮ ಕವಿದ ಬೆಟ್ಟಗಾಡುಗಳ ನಡುವೆ, ಪುಸ್ತಕಗಳು ತುಂಬಿದ ಸಣ್ಣ ಕೋಣೆಯಲ್ಲಿ ಬ್ರಹ್ಮಚಾರಿಯಾಗಿ ಬದುಕಿರುವ ಬಾಂಡ್ಗೆ ಮೇ 19ರಂದು 88 ವರ್ಷ ತುಂಬಿದೆ. ನಿತ್ಯ ಸಂಜೆ ಮುಂಜಾನೆಗಳಲ್ಲಿ ವಾಕಿಂಗ್ ಹೋಗುವ, ಮರದ ಕೊಂಬೆಯಲ್ಲಿ ಕೂತ ಕಿಂಗ್ಫಿಶರ್ ಕಂಡರೆ ಮುಗ್ಧವಾಗಿ ನೋಡುತ್ತಾ ನಿಂತುಬಿಡುವ, ಬಾಲ್ಯದಲ್ಲಿ ನಿರ್ಜನವಾದ ದಾರಿಗಳಲ್ಲಿ ತಾನು ನಡೆಯುವಾಗ ತನ್ನೆದುರೇ ಕಾಡಿನೊಳಗೆ ಜಿಗಿದು ಮಂಗಮಾಯವಾಗುವ ಚಿರತೆಯ ಚುಕ್ಕಿಗಳನ್ನು ಕೂಡ ವಿವರವಾಗಿ ನೆನಪಿಸಿಕೊಳ್ಳಬಲ್ಲ ಬಾಂಡ್ ಭಾರತದ ಮಕ್ಕಳಿಗೆಲ್ಲ ಬಹಳ ಪ್ರಿಯನಾದವನು. ಕನಿಷ್ಠ ವರ್ಷಕ್ಕೊಂದು ಪುಸ್ತಕವನ್ನಾದರೂ ಈ ಪ್ರಾಯದಲ್ಲಿ ಬರೆಯುತ್ತಾರೆ. ಕಳೆದ ವರ್ಷದ ಕೊರೊನಾ ಐಸೋಲೇಶನ್ ಕಾಲದಲ್ಲೂ ಕತೆಗಳನ್ನು ಬರೆದಿದ್ದು, ಆ ಸಂಕಲನಕ್ಕೆ ಆತ ಇಟ್ಟ ಹೆಸರು ‘ಇಟ್ ಈಸ್ ಎ ವಂಡರ್ಫುಲ್ ಲೈಫ್’. ಈ ವರ್ಷ ಬರೆದ ಪುಸ್ತಕ ʼಹೌ ಟು ಲಿವ್ ಲೈಫ್.ʼ
ಇಂಥ ಹಸಿರು ಸರದಾರ Ruskin Bond ಅವರ ಕೆಲವು ಸೊಗಸಾದ ಮಾತುಗಳು ಇಲ್ಲಿವೆ.
- ಬರೆಯುವುದಕ್ಕೆ ಏನೂ ಇಲ್ಲ ಅನಿಸಿದಾಗ ನಾನು ಈ ಕೋಣೆಯ ಕಿಟಕಿಯಿಂದ ಹೊರಗೆ ನೋಡುತ್ತೇನೆ. ಆ ಕಿಟಕಿಯಿಂದಾಚೆಗೆ ಏನೋ ಕಾಣಿಸುತ್ತದೆ; ಅದರ ಬಗ್ಗೆ ಬರೆಯುತ್ತೇನೆ. ಪ್ರತಿಯೊಬ್ಬನಿಗೂ ಹೊರಜಗತ್ತನ್ನು ನೋಡುವ ಇಂಥ ಒಂದು ಕಿಟಕಿ ಇರಬೇಕು.
- ಸಂತಸ ಅನ್ನುವುದು ಚಿಟ್ಟೆ ಇದ್ದಂತೆ. ನೀವು ಅದರ ಹಿಂದೆ ಹೋದರೆ ಯಾವತ್ತೂ ಅದನ್ನು ಹಿಡಿಯಲಾರಿರಿ. ಆದರೆ ನೀವು ಸುಮ್ಮನೆ, ಕಲ್ಲಿನಂತೆ ನಿಂತಿದ್ದರೆ, ಅದು ಬಂದು ನಿಮ್ಮ ಹೆಗಲ ಮೇಲೇ ಕೂತುಕೊಳ್ಳಬಹುದು. ಆದರೆ ಮರುಕ್ಷಣವೇ ಹಾರಿಹೋಗಬಹುದು. ಅದು ಬಂದು ಕೂತಿದ್ದ ಕ್ಷಣವನ್ನು ಆನಂದಿಸಿ.
- ಜಗತ್ತಿನಲ್ಲಿ ಎಲ್ಲ ಯುದ್ಧಗಳು ನಡೆದು ಮುಗಿದು ಹೋದ ಬಳಿಕವೂ ಒಂದು ಚಿಟ್ಟೆ ಸುಂದರವಾಗಿಯೇ ಇರುತ್ತದೆ.
- ನಾವು ಯಾರನ್ನಾದರೂ ಪ್ರೀತಿಸುತ್ತಿರಲೇಬೇಕು. ನಮ್ಮ ನಮ್ಮ ಸ್ವಯಂಗಳಿಂದ ಆಚೆಗೆ, ನಾವು ಮನುಷ್ಯರನ್ನು ಪ್ರೀತಿಸುತ್ತಿರಬೇಕು. ನಮ್ಮ ಪ್ರೀತಿ- ಸಂತಸ- ದುಃಖಗಳನ್ನು ಹಂಚಿಕೊಳ್ಳಲು ಸಂಗಾತಿಗಳು ಬೇಕು. ಕ್ರೌಂಚ ಪಕ್ಷಿ ಕೂಡ ತನ್ನ ಸಂಗಾತಿ ಅಗಲಿದಾಗ ದುಃಖಿಸುತ್ತದೆ. ಪ್ರೀತಿಯ ಸ್ಪರ್ಶವಿಲ್ಲದೆ ಇರುವ ಬದುಕು ಬದುಕೇ ಅಲ್ಲ.
- ಮುಕ್ತವಾದ ದಾರಿಗಳಲ್ಲಿ ನೀವು ಸಾಗುವಾಗ ಅಪರಿಚಿತರೆಂಬವರೇ ಇಲ್ಲ. ಯಾಕೆಂದರೆ ನೀವು ಅದೇ ಅಕಾಶ, ಅದೇ ದಾರಿ, ಅದೇ ನೆಲ, ಅದೇ ಗಾಳಿಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿರುತ್ತೀರಿ. ಮುಕ್ತ ದಾರಿಗಳಲ್ಲಿ ನಾವೆಲ್ಲರೂ ಸಹೋದರರು.
- ಇಲ್ಲಿ ಯಾವುದೂ ಮಹತ್ವರಹಿತವಾದುದಲ್ಲ; ಎಲ್ಲದಕ್ಕೂ ಈ ಜಟಿಲವಾದ ಬದುಕಿನ ಬಲೆಯಲ್ಲಿ ಅದರದ್ದೇ ಮಹತ್ವ ಇದ್ದೇ ಇರುತ್ತದೆ.
- ಮಳೆಯು ಮರಗಳ ಮೇಲೆ, ಈ ಪಟ್ಟಣದ ಮನೆಗ ಮಾಡುಗಳ ಮೇಲೆ ಸುರಿಯುತ್ತದೆ. ನೆಲ ಆ ನೀರನ್ನು ಹೀರಿಕೊಂಡು ತನ್ನದೇ ಒಂದು ಒಳ್ಳೆಯ ಪರಿಮಳವನ್ನು ಹೊಮ್ಮಿಸುತ್ತದೆ. ಒದ್ದೆ ನೆಲದ ಪರಿಮಳವೇ ಈ ಜಗತ್ತಿನಲ್ಲಿ ಅತ್ಯುತ್ತಮವಾದ ಪರಿಮಳ. ಅದು ನಮ್ಮ ಬದುಕಿನ ಅತ್ಯುತ್ತಮವಾದ ದಿನಗಳನ್ನು- ಅಂದರೆ ಬಾಲ್ಯವನ್ನು- ನೆನಪಿಸುತ್ತದೆ. ಪರ್ವತಗಳಲ್ಲಿ ಬದುಕಿದವರಿಗೆ ಅದು ಜೀವನದ ಒಂದು ಭಾಗವೇ ಆಗಿರುತ್ತದೆ.
- ಒಮ್ಮೆ ಬೆಟ್ಟಗಳಲ್ಲಿ ಇದ್ದವನು ಅಲ್ಲಿಂದ ದೂರ ಹೋದರೂ ಅದು ಅವನನ್ನು ಹಿಂಬಾಲಿಸುತ್ತದೆ. ಜಗತ್ತು ಬದಲಾಗುತ್ತಲೇ ಇರುತ್ತದೆ. ಆದರೆ ಎಂದೂ ಬದಲಾಗದೆ ಇರುವಂಥದು ಒಂದು ಎಲ್ಲೋ ನಮ್ಮೊಳಗೆ ಇದ್ದೇ ಇರುತ್ತದೆ.
- ಮನಬಿಚ್ಚಿ ನಗಲು ಸಾಧ್ಯವಾಗುವುದು ಮತ್ತು ಇತರರ ಬಗ್ಗೆ ಕರುಣೆ ತೋರುವ ಸಾಮರ್ಥ್ಯ ಇರುವುದು ಮನುಷ್ಯನನ್ನು ಇತರ ಮೃಗಗಳಿಗಿಂತ ಭಿನ್ನವಾಗಿಸಿದೆ.
- ಪುಸ್ತಕಗಳನ್ನು ಓದುವವರು ವಿಶಿಷ್ಟ ವ್ಯಕ್ತಿಗಳು. ತಮ್ಮ ಅತ್ಯಂತ ಸುಖದ ಕ್ಷಣಗಳನ್ನು ಅವರು ಪುಸ್ತಕಗಳಿಂದ ಪಡೆಯುತ್ತಾರೆ. ಓದದವರು ದುರದೃಷ್ಟವಂತರು. ಅವರಲ್ಲೇನೂ ತಪ್ಪಿಲ್ಲ. ಆದರೆ ಬದುಕಿನ ದೊಡ್ಡ ಸಂಮಾನಗಳಿಂದ ವಂಚಿತರಾದವರು.
- ಒಳ್ಳೆಯ ಪುಸ್ತಕ ನಿಮ್ಮ ಗೆಳೆಯನಿದ್ದಂತೆ- ಅದು ನಿಮ್ಮನ್ನು ಎಂದೂ ಕೈಬಿಡದು. ನೀವು ಅದನ್ನು ಮತ್ತೆ ಮತ್ತೆ ಕೈಗೆತ್ತಿಕೊಳ್ಳಬಹುದು, ಅದರಿಂದ ನೀವು ಪಡೆಯುವ ಸುಖ ಎಂದೂ ಮಾಸದು.
ಇದನ್ನೂ ಓದಿ: Book Excerpt : ಯಕ್…!
- ಕಾಲದ ಸುದೀರ್ಘ ಯಾನದಲ್ಲಿ ನಾವು ಕೆಲವು ಹಳೆಯ ಗೆಳೆಯ ಗೆಳತಿಯರನ್ನು ಬಿಟ್ಟು ಮುಂದೆ ಹೋಗಬೇಕಾಗಬಹುದು. ಆದರೆ ಅವರನ್ನು ಪ್ರೀತಿಸಿದ, ಅವರ ಜೊತೆ ಒಡನಾಡಿದ ಶ್ರೀಮಂತ ಕ್ಷಣಗಳು ನಮ್ಮನ್ನು ಚೈತನ್ಯಯುತವಾಗಿ ಇಟ್ಟಿರುತ್ತವೆ.
- ಮರಗಳು ಓಡಾಡುತ್ತವೆ, ಚಲಿಸುತ್ತವೆ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಅವು ನಾನು ಮನೆಯೊಳಗೆ ಮಲಗಿದ್ದಾಗ ರಾತ್ರಿ, ಪರಸ್ಪರ ತಮ್ಮೊಳಗೇ ಪಿಸುಗುಡುತ್ತಿರುತ್ತವೆ. ಮಸ್ಸೂರಿಯಲ್ಲಿ ನಾನು ಇದ್ದ ಮನೆಯ ಕಡೆಗೆ ಎಷ್ಟೋ ವರ್ಷಗಳ ನಂತರ ಒಮ್ಮೆ ನಾನು ಹೋಗಿದ್ದೆ. ನಾನು ಸದಾ ನೋಡುತ್ತಿದ್ದ ಮರಗಳ ಅಕ್ಕಪಕ್ಕದಲ್ಲಿ ಅದೇ ಜಾತಿಯ ಗಿಡಗಳು ಬೆಳೆದಿದ್ದವು. ಈ ಹಳೆಯ ಮರಗಳು ತಮ್ಮ ಬೀಜಗಳನ್ನು ಚಿಮ್ಮಿಸಿ ತಮ್ಮ ಸಂತತಿಯನ್ನು ಮುಂದುವರಿಸಿದ್ದವು. ನೀವು ಎಂದೂ ಹಸ್ತಕ್ಷೇಪ ಮಾಡದೆ ಹೋದರೆ, ಮರಗಳು ತಮ್ಮದೇ ರೀತಿಯಲ್ಲಿ ತಮ್ಮ ಚಲನೆಯನ್ನು ಜಾರಿಯಲ್ಲಿ ಇಟ್ಟಿರುತ್ತವೆ.
- ನಾನು ಇಷ್ಟೊಂದು ಸರಳವಾಗಿ ಬರೆಯಲು ಹೇಗೆ ಸಾಧ್ಯ ಎಂದು ಕೆಲವರು ಕೇಳುತ್ತಾರೆ. ಅದೇನೂ ಇಲ್ಲ; ಒಂದು ವಾಕ್ಯದಿಂದ ಇನ್ನೊಂದು ವಾಕ್ಯ ಭಿನ್ನವಾಗಿರಬೇಕು, ಮನ ಸೆಳೆಯುವಂತಿರಬೇಕು, ಮುಂದಿನ ವಾಕ್ಯ ಓದಲು ಪ್ರೇರೇಪಿಸಬೇಕು. ಇಷ್ಟೇ ಇರುವುದು.
- ಬರಹಗಾರ ಹೆಚ್ಚು ಮಾತಾಡಬಾರದು. ಯಾಕೆಂದರೆ ಆತನ ಬರಹವೇ ಓದುಗನ ಜತೆ ಹೆಚ್ಚು ಮಾತಾಡುತ್ತಿರುತ್ತದೆ.
ಇದನ್ನೂ ಓದಿ: Book Excerpt: ದೇವೇಂದ್ರನ ಮೀಸೆ ಹಸುರಾದುದು ಹೇಗೆ?