ನವದೆಹಲಿ: ಆಡಳಿತದ ಮೇಲೆ ನಿಯಂತ್ರಣ, ದಿಟ್ಟ ನಿರ್ಧಾರಗಳು, ದೇಶದ ವಿಚಾರ ಬಂದಾಗ ರಾಜಿಯಾಗದ ಮನಸ್ಥಿತಿ, ಸ್ಪಷ್ಟ ನಿಲುವುಗಳೊಂದಿಗೆ ಮುನ್ನುಗ್ಗುತ್ತಿದ್ದ ಇಂದಿರಾ ಗಾಂಧಿ (Indira Gandhi) ಅವರು ಆಹಾರ ಪ್ರಿಯರೂ ಆಗಿದ್ದರು. ಅಲ್ಲದೆ, “ಅವರಿಗೆ ಪಪ್ಪಾಯಿ ಹಣ್ಣು ಹೆಚ್ಚು ನೆಚ್ಚಿನದ್ದಾಗಿತ್ತು, ಅವರಿಗೆ ಬೆಳಗ್ಗಿನ ಉಪಾಹಾರಕ್ಕೆ ಪಪ್ಪಾಯಿ ಹಣ್ಣನ್ನು ತಂದುಕೊಡಲು ಪೊಲೀಸ್ ವಾಹನದಲ್ಲಿ ಇಡೀ ಮುಂಬೈ ಸುತ್ತಿದ್ದೆ” ಎಂದು ಮುಂಬೈ ತಾಜ್ ಹೋಟೆಲ್‌ನಲ್ಲಿ ಮುಖ್ಯ ಬಾಣಸಿಗ (Chief Chef) ಆಗಿದ್ದ ಸತೀಶ್ ಅರೋರ ಅವರು ಬರೆದಿರುವ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಮುಂಬೈ ತಾಜ್ ಹೋಟೆಲ್ ಕಿಚನ್‌ನಲ್ಲಿ ಸುಮಾರು ಐದು ದಶಕಗಳವರೆಗೆ ಶೆಫ್ ಆಗಿ ಕಾರ್ಯನಿರ್ವಹಿಸಿದ ಸತೀಶ್ ಅರೋರ ಅವರು ‘ಸ್ವೀಟ್ಸ್ ಆ್ಯಂಡ್ ಬಿಟರ್ಸ್: ಟೇಲ್ಸ್ ಫ್ರಾಮ್ ಎ ಶೆಫ್ಸ್ ಲೈಫ್’ (Sweets and Bitters: Tales from a Chef’s Life) ಎಂಬ ಪುಸ್ತಕ ಬರೆದಿದ್ದು, ಇದರಲ್ಲಿ ಇಂದಿರಾ ಗಾಂಧಿ ಅವರ ಪಪ್ಪಾಯಿ ಪ್ರೇಮ, ಅವರಿಗೆ ಪಪ್ಪಾಯಿ ತಂದುಕೊಡಲು ಪಟ್ಟ ಹರಸಾಹಸದ ಕುರಿತು ಉಲ್ಲೇಖಿಸಿದ್ದಾರೆ.
“ಅದು 1983ನೇ ಇಸವಿ. ಜಾಗತಿಕ ಟೂರಿಸಂ ಕುರಿತು ಚರ್ಚಿಸಲು ಗೋವಾದ ತಾಜ್ ಗೋವಾ ಹೋಟೆಲ್‌ನಲ್ಲಿ ಕಾಮನ್‌ವೆಲ್ತ್ 40 ರಾಷ್ಟ್ರಗಳ ಸಭೆ ಆಯೋಜಿಸಲಾಗಿತ್ತು. ಎಲ್ಲ ರಾಷ್ಟ್ರಗಳ ನಾಯಕರಿಗೆ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ, ಬೆಳಗ್ಗಿನ ಉಪಾಹಾರಕ್ಕೆ ಎಲ್ಲರಿಗೂ ಪಪ್ಪಾಯಿ ಹಣ್ಣಿನ ಸಲಾಡ್ ಇರಬೇಕು ಎಂದು ಸೂಚಿಸಲಾಗಿತ್ತು. ಆದರೆ, ಅದು ಪಪ್ಪಾಯಿ ಹಣ್ಣಿನ ಸೀಸನ್ ಆಗಿರದ ಕಾರಣ ಎಲ್ಲೂ ಪಪ್ಪಾಯಿ ಹಣ್ಣು ಸಿಗಲಿಲ್ಲ. ಇದು ಗೋವಾ ತಾಜ್ ಹೋಟೆಲ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಲು ಕಾರಣವಾಗಿತ್ತು” ಎಂದು ಸತೀಶ್ ಅರೋರ ಪುಸ್ತಕದಲ್ಲಿ ವಿವರಿಸಿದ್ದಾರೆ.
ಮುಂಬೈನಿಂದ ಪಪ್ಪಾಯಿ ತರಿಸಿದೆವು
“ಉಪಾಹಾರ ಕೂಟಕ್ಕೆ ಯಕಶ್ಚಿತ್ ಪಪ್ಪಾಯಿ ಹಣ್ಣನ್ನು ಸರಬರಾಜು ಮಾಡಲು ನಾವು ತೀರ್ಮಾನಿಸಿದ್ದೆವು. ಇಂದಿರಾ ಗಾಂಧಿ ಅವರಿಗೆ ಮಾಗಿದ ಹಣ್ಣೇ ಬೇಕಾಗಿತ್ತು. ಮುಂಬೈನಿಂದ ಕಾಯಿಯಾಗಿರುವ ಪಪ್ಪಾಯಿಯನ್ನು ತರಿಸಿಕೊಂಡು, ಹಣ್ಣಾದ ಬಳಿಕ ಅತಿಥಿಗಳಿಗೆ ನೀಡುವುದು ನಮ್ಮ ಉದ್ದೇಶವಾಗಿತ್ತು. ಅದರಂತೆ, ಮುಂಬೈನಿಂದ ಪಪ್ಪಾಯಿ ಕಾಯಿಗಳನ್ನು ತರಿಸಿದೆವು. ಆದರೆ, ಇನ್ನೇನು ಅತಿಥಿಗಳು ಉಪಾಹಾರಕ್ಕೆ ಆಗಮಿಸಬೇಕು, ಮುಂಬೈನಿಂದ ತಂದ ಹಣ್ಣುಗಳು ಮೆತ್ತಗಾಗಿವೆ ಎಂಬುದಾಗಿ ನಮ್ಮ ತಂಡದ ಸದಸ್ಯರೊಬ್ಬರು ಹೇಳಿದರು. ಆಗ ನಮ್ಮ ಪರಿಸ್ಥಿತಿ ಯಾರಿಗೂ ಬೇಡವಾಗಿತ್ತು” ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಇಂದಿರಾ ಗಾಂಧಿಗೆ ಭದ್ರತಾ ಅಧಿಕಾರಿಯಾಗಿದ್ದ ಲಾಲದುಹೋಮಾ ಈಗ ಮಿಜೋರಾಂ ಸಿಎಂ!
“ನಮ್ಮ ಪ್ರಧಾನಿಗೆ ಮಾಗಿದ ಪಪ್ಪಾಯಿ ಹಣ್ಣುಗಳನ್ನೇ ಕೊಡಬೇಕು. ಆದರೆ, ಮುಂಬೈನಿಂದ ತರಿಸಿದ ಹಣ್ಣು ಮೆತ್ತಗಾಗಿವೆ. ಆಗ ನನ್ನ ಕಣ್ಣುಗಳು ಒದ್ದೆಯಾದವು. ಇದೇ ವೇಳೆ, ನನಗೊಂದು ಪೊಲೀಸ್ ಜೀಪ್ ವ್ಯವಸ್ಥೆ ಮಾಡಲಾಗಿತ್ತು. ಕೂಡಲೇ ನಾನು ಪೊಲೀಸ್ ಜೀಪ್ ಹತ್ತಿ ಇಡೀ ಗೋವಾ ಸುತ್ತಿದೆ. ಹಣ್ಣಿನ ಮಾರುಕಟ್ಟೆಗೆ ತೆರಳಿ, ಮಾಗಿದ ಪಪ್ಪಾಯಿ ಹಣ್ಣುಗಳನ್ನು ತಂದು, ಇಂದಿರಾ ಗಾಂಧಿ ಅವರಿಗೆ ನೀಡಿದೆವು” ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ