ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್.ಕೆ. ಭಗವಾನ್ (SK Bhagavan) ತಮ್ಮ ಜೀವನದ ಕೊನೆಯ ದಿನಗಳಲ್ಲಿ ಆತ್ಮಕತೆ ಬರೆಯುತ್ತಿದ್ದರು. ಅದು ಪ್ರಕಟವಾಗುವ ಮೊದಲೇ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ʻರಾಜ್ ಕಂಡ ನಾನ್-ಭಗವಾನ್ʼ ಎಂದು ಈ ಆತ್ಮಕತೆಗೆ ಹೆಸರಿಡುವ ಕುರಿತು ಚರ್ಚೆ ನಡೆಯುತ್ತಿತ್ತು. ಇದನ್ನು ಭಗವಾನ್ ಇನ್ನೂ ಅಂತಿಮಗೊಳಿಸಿರಲಿಲ್ಲ. ʻʻಅವರು ತಮ್ಮ ಜೀವನದ ಕುರಿತು ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ್ದು, ಇದನ್ನು ನಾಗ ಹುಬ್ಬಳ್ಳಿ ಎನ್ನುವವರು ಅಕ್ಷರ ರೂಪಕ್ಕಿಳಿಸಿದ್ದರು. ಆದರೆ ಭಗವಾನ್ ಅದನ್ನು ಸಂಪೂರ್ಣವಾಗಿ ತಾವೇ ಕುಳಿತು ತಿದ್ದಿ ಬರೆಯುತ್ತಿದ್ದರು. ಈಗಾಗಲೇ ʻಕಸ್ತೂರಿ ನಿವಾಸ’ ಸಿನಿಮಾದವರೆಗೆ ಅವರು ತಿದ್ದಿ ನನಗೆ ಕೊಟ್ಟಿದ್ದರು. ಇನ್ನೊಂದಿಷ್ಟು ಕೆಲಸವನ್ನು ಅವರು ಪೂರ್ಣಗೊಳಿಸಿದ್ದು, ಅದನ್ನು ನನಗೆ ಕಳಿಸುವ ಮೊದಲೇ ನಮ್ಮನಗಲಿದ್ದಾರೆʼʼ ಎಂದು ಈ ಕೃತಿಯನ್ನು ಪ್ರಕಟಿಸುತ್ತಿರುವ ವಿಕ್ರಂ ಪ್ರಕಾಶನದ ಹರಿಪ್ರಸಾದ್ ʻವಿಸ್ತಾರ ನ್ಯೂಸ್ʼಗೆ ತಿಳಿಸಿದ್ದಾರೆ.
ಈಗಾಗಲೇ ಪುಸ್ತಕವನ್ನು ಯಾರಿಗೆ ಅರ್ಪಿಸಬೇಕು, ಮುನ್ನುಡಿ ಏನಿರಬೇಕು ಎಂಬುದನ್ನು ಅವರೇ ಕೈಯಲ್ಲಿ ಬರೆದು ಕಳಿಸಿದ್ದರು. ಅವರ ಕೈ ಬರಹ ಎಲ್ಲರನ್ನೂ ಆಕರ್ಷಿಸುವಂತಿದೆ. ಈ ವಯಸ್ಸಿನಲ್ಲಿಯೂ ಅವರು ಉತ್ಸಾಹ ಕಳೆದುಕೊಂಡಿರಲಿಲ್ಲ. ಹಬ್ಬ ಹರಿದಿನಗಳಲ್ಲಿ ತಮ್ಮ ಪರಿಚಿತರೆಲ್ಲರಿಗೂ ತಾವೇ ಕರೆಮಾಡಿ ಶುಭಾಶಯ ಹೇಳುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಹೃದಯ ತೊಂದರೆಯಿಂದಾಗಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಆಸ್ಪತ್ರೆಯಿಂದ ಬಂದ ಮೇಲೆ ಪಟ್ಟಾಗಿ ಕುಳಿತು ಆತ್ಮಕತೆಯನ್ನು ಪೂರ್ಣಗೊಳಿಸಿದ್ದರು. ಈಗಾಗಲೇ ಮುಕ್ತಾಯ ಹಂತಕ್ಕೆ ಬಂದಿದ್ದ ಅವರ ಆತ್ಮಕಥೆಗೆ 70-80 ಪುಟಗಳನ್ನು ಹೊಸದಾಗಿ ಸೇರಿಸಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ʻʻಭಗವಾನ್ ಅವರ ಆತ್ಮಕತೆ ಹೊರಬರುವ ಮುನ್ನವೇ ಅವರಿಲ್ಲವಾಗಿದ್ದಾರೆ. ಆದರೆ ಆದಷ್ಟು ಬೇಗ ಅದನ್ನು ಪ್ರಕಟಿಸಲಾಗುವುದು. ಇದಕ್ಕೆ ಅವರ ಕುಟುಂಬದವರು ಕೂಡ ಈಗಾಗಲೇ ಅನುಮತಿ ನೀಡಿದ್ದಾರೆʼʼ ಎಂದು ವಿಕ್ರಂ ಪ್ರಕಾಶನದ ಹರಿಪ್ರಸಾದ್ ತಿಳಿಸಿದ್ದಾರೆ.
1993ರಲ್ಲಿ ದೊರೈರಾಜ್ ನಿಧನದ ನಂತರ ಚಿತ್ರನಿರ್ದೇಶನಕ್ಕೆ ಭಗವಾನ್ ವಿದಾಯ ಹೇಳಿದ್ದರು. ಸುಮಾರು 49 ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿಯ 32 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕನಟರಾಗಿ ನಟಿಸಿದ್ದು ವಿಶೇಷವಾಗಿದೆ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು 24 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತಮ್ಮ ಆತ್ಮಕತೆಯಲ್ಲಿ ಡಾ. ರಾಜ್‌ಕುಮಾರ್ ಅಭಿನಯ, ವೈಕ್ತಿತ್ವದ ಕುರಿತು ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ : SK Bhagavan: ಭಗವಾನ್ ನಿಧನಕ್ಕೆ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರಿಂದ ಸಂತಾಪ