ಬೆಂಗಳೂರು: ಹದಿನೇಳು ಭಾಷೆಗಳಲ್ಲಿ ಗಾನ ಮಾಧುರ್ಯ ಮೆರೆದ, ನಾಯಕ ಯಾರೇ ಇರಲಿ ಅವರ ಧ್ವನಿಗೆ ತಕ್ಕಂತೆ ತಮ್ಮ ಧ್ವನಿಯನ್ನು ಸಿಂಕ್ ಮಾಡಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ, ಕೋಟ್ಯಂತರ ಹೃದಯಗಳಲ್ಲಿ ಚಿರಸ್ಥಾಯಿಯಾಗಿರುವ ಮಧುರ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ (SPB) ಅವರು ಬದುಕಿದ್ದಿದ್ದರೆ ಜೂನ್ ನಾಲ್ಕಕ್ಕೆ 76 ವರ್ಷ ತುಂಬುತ್ತಿತ್ತು. ಅವರು ನೆನಪಿನ ಲೋಕ ಸೇರಿ ಒಂದುವರೆ ವರ್ಷ ಕಳೆದರೂ ಜನರ ನೆನಪಿನಲ್ಲಿ ಇನ್ನೂ ಶಾಶ್ವತವಾಗಿಯೇ ಇದ್ದಾರೆ.
ಅವರ ಜನ್ಮ ದಿನದಂದು ಅವರನ್ನು ನೆನಪಿಸಿಕೊಳ್ಳುವ, ನೆನಪಿಗಾಗಿ ಪುಸ್ತಕವೊಂದನ್ನು ಕಾಣಿಕೆಯಾಗಿ ಅರ್ಪಿಸುವ ಅಪರೂಪದ ಕಾರ್ಯಕ್ರಮವೊಂದು ಶನಿವಾರ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಂಭಾಗಣದಲ್ಲಿ ನಡೆಯಿತು, ಪತ್ರಕರ್ತ ಕಟ್ಟೆ ಗುರುರಾಜ್ ಅವರು ಸಂಪಾದಿಸಿರುವ ಅತ್ಯಂತ ವಿಶಿಷ್ಟ ಕೃತಿ ʻನನ್ನ ಹಾಡು ನನ್ನದುʼ ಲೋಕಾರ್ಪಣೆ ಕಾರ್ಯಕ್ರಮವದು. ಇದು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಬದುಕಿನ ಘಟನೆಗಳನ್ನು ಆಧರಿಸಿದ ಚೊಚ್ಚಲ ಕೃತಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಯಾರೂ ಕಂಡು, ಕೇಳರಿಯದ ಹಲವು ಮಾಹಿತಿಗಳ ಖಜಾನೆಯಾಗಿರುವ ಈ ಪುಸ್ತಕ ಎಸ್‌ಪಿಬಿ ಅವರ ಸಜ್ಜನಿಕೆ, ಸರಳತೆಗಳ ಮಹಾಮುಖವನ್ನು ಪರಿಚಯಿಸುತ್ತದೆ. ಅವರ ಗೌರವ ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡುತ್ತದೆ.
ಸಮಾರಂಭದಲ್ಲಿ ಭಾಗವಹಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಪತ್ರಕರ್ತ, ಸಾಹಿತಿ ಜೋಗಿ, ಲಹರಿ ಮ್ಯೂಸಿಕ್ ಸಂಸ್ಥೆಯ ವೇಲು, ಎಸ್‌ಪಿಬಿ ಅವರ ಆಪ್ತ ಗೋಪಿ ಅವರೆಲ್ಲರೂ ಪುಸ್ತಕದ ಶಕ್ತಿ ಮತ್ತು ಬಾಲು ಅವರ ಪ್ರೀತಿಯನ್ನು ಕೊಂಡಾಡಿದರು.
ಇಲ್ಲಿರುವುದು ಸ್ಟ್ರೇಟ್ ಮಾತ್ರ
ಲಹರಿ ವೇಲು ಅವರು ಎಸ್‌ಪಿಬಿ ಅವರನ್ನು ಹಿಮಾಲಯ ಪರ್ವತಕ್ಕೆ ಹೋಲಿಸಿದರು. ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಜಾತಿ, ಮತ ಯಾವುದೂ ಇಲ್ಲ. ಕಲೆಯ ಸಾರಸ್ವತ ಲೋಕದಲ್ಲಿ ಲೆಫ್ಟ್ ಯಾವುದು? ರೈಟ್ ಯಾವುದು? ಮುಖ್ಯವಲ್ಲ. ಇಲ್ಲಿ ಕೇವಲ ಸ್ಟ್ರೇಟ್ ಮಾತ್ರ ಇರಬೇಕು. ಎಸ್‌ಪಿಬಿ ಕೂಡಾ ಹಾಗೇ ಬದುಕಿದರು ಎಂದು ಹೇಳಿದರು. ಎಸ್‌ಪಿಬಿ ಆಪ್ತ ಮತ್ತು ಗಾಯಕರಾದ ಗೋಪಿ ಒಡನಾಟದ ಮಧುರ ಕ್ಷಣಗಳನ್ನು ಮೆಲುಕು ಹಾಕಿದರು.
ಅಧ್ಯಯನ ಪೀಠದ ಕನಸು
ʼಎಸ್‌ಪಿಬಿ ಅವರ ಹೆಸರಿನಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆ ಮಾಡಬೇಕೆಂಬ ಕನಸಿದೆ. ಶಿಗ್ಗಾಂವಿಯಲ್ಲಿ ಅವರ ಒಂದು ಪ್ರತಿಮೆ ಸ್ಥಾಪನೆ ಹಾಗೂ ಒಂದು ಥೀಮ್ ಪಾರ್ಕ್ ಮಾಡುವ ಯೋಚನೆಯಿದೆʼ ಎಂದರು ಹಂಸಲೇಖ.
ಎಸ್‌ಪಿಬಿ ಬದುಕಿನ ಒಳನೋಟಗಳನ್ನು ಒಳಗೊಂಡಿರುವ ನನ್ನ ಹಾಡು ನನ್ನದು ಕೃತಿಯ ಲೇಖಕ ಗುರುರಾಜ್ ಕಟ್ಟೆ, ಸಣ್ಣ ಸಣ್ಣ ಸಂಗತಿಗಳನ್ನು ಆಧರಿಸಿ ಈ ಪುಸ್ತಕವನ್ನು ಬರೆಯಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜೋಗಿ ಅವರು, ಎಸ್ಪಿಬಿ ಬದುಕು ಮತ್ತು ಪುಸ್ತಕದ ಒಳನೋಟವನ್ನು ತೆರೆದಿಟ್ಟರು. ರಂಜನಿ ಕೀರ್ತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಮೀಲ್ ಸಾವಣ್ಣ ಧನ್ಯವಾದ ಹೇಳಿದರು. ಮಕ್ಕಳು ಎಸ್‌ಪಿಬಿ ಅವರ ಮಧುರ ಗೀತೆಗಳನ್ನು ಹಾಡಿ ರಂಜಿಸಿದರು. ನನ್ನ ಹಾಡು ನನ್ನದು ಪುಸ್ತಕವನ್ನು ಸಾವಣ್ಣ ಪ್ರಕಾಶನ ಪ್ರಕಟಿಸಿದೆ.
ಇದನ್ನೂ ಓದಿ: ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಪುಸ್ತಕ ಪ್ರಾಧಿಕಾರ ಬಹುಮಾನ, ಡಾ.ಆಳ್ವ, ಕಾಪಸೆ, ನಾ. ಸೋಮೇಶ್ವರಗೆ ಪ್ರಶಸ್ತಿ