Site icon Vistara News

Sunday read: ಈ ಪುಸ್ತಕಗಳನ್ನು ಒಂದು ಸಲ ಓದಿ, ನಿಮ್ಮ ಬದುಕು ಬದಲಿಸಿಕೊಳ್ಳಲು ಸ್ಫೂರ್ತಿಯಾಗದಿದ್ದರೆ ಕೇಳಿ!

books

ದಿನ ಬೆಳಗಾಗುತ್ತದೆ, ರಾತ್ರಿಯಾಗುತ್ತದೆ, ಉಣ್ಣುತ್ತೇವೆ, ಮಲಗುತ್ತೇವೆ, ಅದೇ ಕಚೇರಿ, ಅದೇ ಕೆಲಸ, ಅದೇ ಸಂಬಳ! ಬಹಳಷ್ಟು ಮಂದಿಯ ಜೀವನ ಒಂದು ಹಂತದ ನಂತರ ಹೀಗೆಯೇ ಆಗಿಬಿಡುತ್ತದೆ. ವೃತ್ತಿಯಲ್ಲಿ ʻಆಹಾʼ ಎನ್ನುವಂತ ಬದಲಾವಣೆ ಇಲ್ಲದೆ ಜೀವನ ನಿಂತ ನೀರಿನಂತೆ ಕಾಣತೊಡಗುತ್ತದೆ. ಹಾಗಾದರೆ, ಇದರೆಲ್ಲದರ ಬದಲಾವಣೆ ಸಾಧ್ಯವೇ? ʻವಾವ್‌! ಅಮೇಜಿಂಗ್‌ʼ ಎನ್ನುವಂತ ಬೆಳವಣಿಗೆ ಜೀವನದಲ್ಲಿ ಸಾಧ್ಯವೇ ಎಂಬ ಪ್ರಶ್ನೆಗಳು ನಿಮ್ಮಲ್ಲಿ ಎದ್ದರೆ, ಆ ಕುರಿತು ಸಣ್ಣದೊಂದು ತುಡಿತ, ಬದಲಾಯಿಸಿಕೊಳ್ಳುವ ಮನಸ್ಸಿದ್ದರೆ, ಆ ಹೆಜ್ಜೆಯ ಪೂರ್ವಭಾವಿಯಾಗಿ ಈ ಒಂದಿಷ್ಟು ಪುಸ್ತಕ ಓದಿ. ಯಾರಿಗ್ಗೊತ್ತು ಇವೇ ನಿಮ್ಮ ಬದಲಾಗಬಲ್ಲ ಬದುಕಿನ ಮೊದಲ ಮೆಟ್ಟಿಲಾಗಬಹುದು!

ಮ್ಯಾಕ್‌ ಆಂಡರ್ಸನ್‌ ಹಾಗೂ ಸ್ಯಾಮ್‌ ಪಾರ್ಕರ್‌ ಅವರ ʻ೨೧೨ The Extra Degreeʼ: ೨೧೧ ಡಿಗ್ರಿಯಲ್ಲಿ ನೀರು ಬಿಸಿಯಾಗಿರಬಹುದು. ೨೧೨ರಲ್ಲಿ ಅದು ಕುದಿಯುತ್ತದೆ. ಹಾಗೆಯೇ ಕುದಿಯುತ್ತಿರುವ ನೀರು ಆವಿಯಾಗತೊಡಗುತ್ತದೆ. ಈ ಆವಿಯೇ ಚಲನಶಕ್ತಿಗೆ ಪ್ರೇರಕವಾಗಬಹುದು. ಒಂದು ಹೆಚ್ಚುವರಿ ಡಿಗ್ರಿಯೇ ಬದಲಾವಣೆ ಮಾಡುವುದಾದರೆ, ಒಂದು ಹೆಚ್ಚುವರಿ ಡಿಗ್ರಿಯ ಪ್ರಯತ್ನ ವ್ಯಾಪಾರದಲ್ಲೋ ಬದುಕಿನಲ್ಲೋ ಯಾಕಾಗಬಾರದು? ಗುಡ್‌ ಎಂಬ ಲೆವೆಲ್‌ನಿಂದ ಗ್ರೇಟ್‌ ಲೆವೆಲ್‌ಗೆ ಯಾಕೆ ಹೋಗಬಾರದು? ಯೋಚಿಸಿ.

ನೆಪೋಲಿಯನ್‌ ಹಿಲ್‌ ಅವರ ʻThe Five Essential Principles Of Think And Grow Rich: ಥಾಮಸ್‌ ಎಡಿಸನ್‌, ಆಂಡ್ರ್ಯೂ ಕಾರ್ನೆಗಿ, ಹೆನ್ರಿ ಫೋರ್ಡ್‌ ಮತ್ತಿತರ ೫೦೦ಕ್ಕೂ ಹೆಚ್ಚು ಯಶಸ್ವೀ ಶ್ರೀಮಂತರ ಕತೆಯನ್ನು ಬಿಚ್ಚಿಡುತ್ತಾ, ಲೇಖಕ ನೆಪೋಲಿಯನ್‌ ಹಿಲ್‌ ಆ ಮೂಲಕ ನಮ್ಮ ಬದುಕಿನ ಮಹತ್ತರ ಬದಲಾವಣೆಗೆ ಕಲಿಕೆ ಹಾಗೂ ಸ್ವಾವಲಂಬನೆಯಿಂದ ನಾವು ಅನುಸರಿಸಬೇಕಾದ ಸೂತ್ರಗಳನ್ನು ಹಾಕಿಕೊಳ್ಳುವ ಹಾದಿಯಲ್ಲಿ ಕೈಹಿಡಿದು ನಡೆಸುತ್ತಾರೆ.

ಮ್ಯಾಥ್ಯೂ ಎಮರ್ಜಿಯಾನ್‌ ಅವರ ʻEvery Monday Mattersʼ: ಇದೊಂದು ಪ್ರಾಕ್ಟಿಕಲ್‌ ಗೈಡ್‌ ಇದ್ದ ಹಾಗೆ. ಪ್ರತಿ ವಾರವೂ ಒಳ್ಳೆಯ ಯೋಜನೆಯೊಂದನ್ನು ಹಾಕಿಕೊಂಡು ಅದರಂತೆ ನಡೆಯಲು ಪ್ರಯತ್ನಿಸುವುದು ಇದರ ಉದ್ದೇಶ. ಪ್ರತಿ ಸೋಮವಾರವೂ ಮಾಡಲು ವಿನೂತನ ಕೆಲಸಗಳು ನಿಮ್ಮನ್ನು ಪೂರ್ತಿಯಾಗಿ ಎಂಗೇಜ್‌ ಮಾಡಬಹುದಾದ ಕೆಲಸಗಳನ್ನು ಒದಗಿಸುವ ಮೂಲಕ ಸರಿಯಾದ ಹಾದಿಯಲ್ಲಿ ನಡೆಸುವುದು ಇದರ ಉದ್ದೇಶ.

ಏಂಜೆಲಾ ಮೇರಿ ಹಚಿನ್ಸನ್ ಅವರ ‘Create Your Yes:‌ ವೃತ್ತಿಜೀವನದಲ್ಲಿ ʻನೋʼ ಎಂಬ ಶಬ್ದ ಕೇಳುವುದು ಕಷ್ಟ. ಹಚಿನ್ಸನ್ ಅವರು ತುಂಬ ಸಿಂಪಲ್‌ ರೂಲ್‌ ಹೇಳುತ್ತಾರೆ. ಕನಸುಗಳು ತಾನಾಗೇ ಹುಟ್ಟುವುದಿಲ್ಲ, ಅದನ್ನು ಬಿತ್ತಬೇಕು! ಸೋಲಿಗಿಂತ ಹೆಚ್ಚಾಗಿ ಕನಸನ್ನು ನನಸಾಗಿಸುವತ್ತ ಇಡುವ ಹೆಜ್ಜೆಯೇ ಇಲ್ಲಿ ಮುಖ್ಯವಾಗುತ್ತದೆ. ನಮಗೆ ನಾವೇ ಸ್ಪೂರ್ತಿಯಾಗಿ ಒಂದೊಂದೇ ಹೆಜ್ಜೆ ಇಡುತ್ತಾ ನೋʼಗಳಿಗೆಲ್ಲ ಉತ್ತರ ಹೇಳಬೇಕು ಎಂದುಕೊಳ್ಳುವವರಿಗಾಗಿಯೇ ಇದೆ ಈ ಪುಸ್ತಕ!

ಆಂಥೊನಿ ಮೂರ್‌ ಅವರ ʻWhat Extraordinary People Knowʼ: ಈ ಪುಸ್ತಕ ನಿಮ್ಮನ್ನು ಅದೇ ಹಳೆಯ ನಿರಾಶಾವಾದದಲ್ಲಿ ಬದುಕುತ್ತಾ ನಿಂತ ನೀರಾಗಿರುವ ಕೆಲಸದಿಂದ ಮೈಕೊಡವಿ ಏಳುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಸ್ಪೂರ್ತಿ ಪಡೆಯುವುದರಿಂದ ಹಿಡಿದು, ನಮ್ಮೊಳಗೇ ಇರುವ ಸೋಮಾರಿತನವನ್ನು ಹೊಡೆದೋಡಿಸಿ ನಮ್ಮ ವ್ಯಕ್ತಿತ್ವಕ್ಕೊಂದು ಚೆಂದದ ಚೌಕಟ್ಟು ಹಾಕಿ ಕೊಡುವಲ್ಲಿ ನೆರವಾಗುವ ಪುಸ್ತಕ.

ಇದನ್ನೂ ಓದಿ: ಬೈಕಿಂಗ್‌ ಕ್ರೇಜ್‌ ನಿಮಗಿದೆಯಾ? ನೀವು ಓದಲೇಬೇಕಾದ ಐದು ಪುಸ್ತಕಗಳು ಇಲ್ಲಿವೆ

ಮೈಕ್‌ ಒʼಟೂಲ್‌ ಮತ್ತು ಹ್ಯೂ ಕೆನೆಡಿ ಅವರ ʻThe Unconventionalsʼ: ಹಲವು ಭರ್ಜರಿ ಯಶಸ್ಸು ಕಂಡ ಉದ್ದಿಮೆಗಳ ಆಸಕ್ತಿದಾಯಕ ಕತೆಗಳ ಮೂಲಕ ನಿಮ್ಮ ಕನಸನ್ನು ಚಿಗುರಿಸಿ ನಿಮ್ಮದೇ ಕಂಪನಿ ಕಟ್ಟಿಕೊಳ್ಳುವುದು ನೀವು ಯೋಚಿಸಿದ್ದಕ್ಕಿಂತ ಸುಲಭವಿದೆ ಎಂದು ಮನದಟ್ಟು ಮಾಡಿಸುವ ಪುಸ್ತಕವಿದು. ಕೆಲವು ಬ್ಯುಸಿನೆಸ್‌ ಸಂಬಂಧಿ ಸಂದರ್ಶನಗಳ ಮೂಲಕ ನೀವು ವೃತ್ತಿಯಲ್ಲಿ ಸಾಮಾನ್ಯ ಸಂಪ್ರದಾಯವನ್ನು ಮೆಟ್ಟಿ ನಿಲ್ಲುವ ಆಶಾವಾದಿಯಾಗಿ ಬೆಳೆಯಲು ಇದು ಪ್ರೇರೇಪಿಸುತ್ತದೆ.

ಮೌರಾ ನೆವೆಲ್‌ ಥಾಮಸ್‌ ಅವರ ʻAttention Managementʼ:‌ ಇದು ಪ್ರತಿದಿನದ ಯಶಸ್ಸು ಹಾಗೂ ಹೆಚ್ಚು ಉತ್ಪಾದನೆ ಮಾಡುವುದನ್ನು ತನ್ನ ಮುಖ್ಯ ಹಂದರವನ್ನಾಗಿ ಹೊಂದಿದೆ. ಏಕಾಗ್ರತೆಯ ನಿರ್ವಹಣೆ ನಮಗೆ ನಿತ್ಯ ಬೇಕಾಗುವ ಬಹುಮುಖ್ಯ ಅಂಶ. ಚಿತ್ತ ಚಾಂಚಲ್ಯದಿಂದ ಹೊರಬಂದು ನಮ್ಮ ಮೇಲೆ ನಾವೇ ವರ್ಕ್‌ ಮಾಡಬೇಕಾದ ಗುಣಗಳಾದ, ಗುರಿಯತ್ತ ಏಕಾಗ್ರತೆ, ಮನಸ್ಸಿನ ನಿಯಂತ್ರಣ ಮತ್ತಿತರ ಕೌಶಲಗಳನ್ನೂ ಒಳಗೊಂಡಿದೆ.

ರಾಬರ್ಟ್‌ ಗ್ಲೇಝರ್‌ ಅವರ ʻElevate’:‌ ನಮ್ಮ ಶಕ್ತಿ ಸಾಮರ್ಥ್ಯದ ವೃದ್ಧಿಯ ಬಗೆಗೆ ತುಂಬ ಅಗತ್ಯವಾದ ಐದು ಮೂಲಭೂತ ಸುಧಾರಣೆಗಳ ಕುರಿತಾದ ಪುಸ್ತಕ ಇದಾಗಿದೆ. ನಮ್ಮನ್ನು ನಾವು ಮಿತಿಗೊಳಿಸುವ ನಂಬಿಕೆಗಳು, ನಾವು ನಡೆಯಬೇಕಾದ ದಾರಿ, ನಮ್ಮ ಮುಂದಿರುವ ಗುರಿ, ಹೊಣೆಗಾರಿಕೆ, ನಮ್ಮ ಆರೋಗ್ಯ ಪಾಲನೆ, ಒಂದು ನಿಗದಿತ ವೇಳೆಯ ಪಾಲನೆ ಹಾಗೂ ಧನಾತ್ಮಕ ಅಭ್ಯಾಸಗಳ ಬಗೆಗೆ ಇದು ಬೆಳಕು ಚೆಲ್ಲುತ್ತದೆ.

ಟೆಡ್‌ ಲಾರ್ಕಿನ್ಸ್‌ ಅವರ ‘The Get To Principal’: ಬದುಕೇ ಬದಲಾಗಬಲ್ಲ ಅತ್ಯದ್ಭುತ ಸಾಧ್ಯತೆಗಳು ನಮ್ಮ ಮುಂದಿರುವ ಬಗ್ಗೆ ನಮಗೆ ಜ್ಞಾನೋದಯ ಮಾಡಿಸುವ ಪುಸ್ತಕ ಇದಾಗಿದೆ. ನಿಮ್ಮದೇ ನಡವಳಿಕೆಗಳ ಪರಿಣಾಮವೇ ನೀವೂ ಅನುಭವಿಸುತ್ತಿರುವುದು ಎಂಬ ಪರಮ ಸತ್ಯದ ಅರಿವಾಗಿಸುವುದಲ್ಲದೆ, ಇದು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಸಂತೋಷದಾಯಕವಾಗಿಸುವಲ್ಲಿಗೆ ಕೊಂಡೊಯ್ಯುತ್ತದೆ. ಪ್ರತಿನಿತ್ಯದ ಬದುಕಿನಲ್ಲಿ ಖುಷಿ, ನೆಮ್ಮದಿ ಕಂಡುಕೊಳ್ಳುವ ಹಾಗೂ ನಮ್ಮದೇ ಋಣಾತ್ಮಕ  ಆಲೋಚನೆಗಳಿಂದ ದೂರ ನಿಲ್ಲುವ ಬಗೆಯನ್ನು ವಿವರಿಸುತ್ತದೆ.

ಇದನ್ನೂ ಓದಿ: Sunday Read | ಹೊಸ ಪುಸ್ತಕ: ದೇವರಿಲ್ಲದ ವಾಡೆಯಲ್ಲಿ ಭೂತಮಾತೆಯ ಸ್ವಗತ

Exit mobile version