Site icon Vistara News

Sunday Read: ಹೊಸ ಪುಸ್ತಕ: ಜಾರ್ಜ್‌ ಆರ್ವೆಲ್‌ನ ʼ1984′

1984 book

: ಜಾರ್ಜ್‌ ಆರ್ವೆಲ್‌ (ಅನುವಾದ: ಸಹನಾ ಹೆಗಡೆ)

ಅವರು ಸ್ಪರ್ಶಿಸುತ್ತಿರಲಿಲ್ಲ. ಆದರೆ ಜೂಲಿಯಾಳ ದೇಹ ಕಂಪಿಸುತ್ತಿರುವುದು ತನ್ನ ಅನುಭವಕ್ಕೆ ಬರುತ್ತಿದೆ ಎಂದು ಅವನಿಗೆ ಅನ್ನಿಸಿತು. ಅಥವಾ ಅದು ಬಹುಶಃ ಅವನ ದೇಹದ ಕಂಪನವೇ ಆಗಿರಲೂಬಹುದು. ತನ್ನ ಹಲ್ಲುಗಳು ಕಟಕಟಿಸದಂತೆ ಅದು ಹೇಗೋ ಅವನು ತಡೆದ. ಆದರೆ ಮೊಣಕಾಲುಗಳು ಅವನ ನಿಯಂತ್ರಣದಾಚೆ ಇದ್ದವು. ಕೆಳಗೆ, ಮನೆಯ ಒಳಗೂ ಹೊರಗೂ ಬೂಟುಗಳು ತುಳಿಯುವ ಸದ್ದು ಕೇಳಿಬಂತು. ಅಂಗಳವು ಜನರಿಂದ ತುಂಬಿಹೋದಂತೆನಿಸಿತು. ಕಲ್ಲುಗಳ ಮೇಲೆ ಉದ್ದಕ್ಕೂ ಏನನ್ನೋ ಎಳೆಯಲಾಗುತ್ತಿತ್ತು. ಹೆಂಗಸಿನ ಹಾಡು ಇದ್ದಕ್ಕಿದ್ದಂತೆ ನಿಂತುಬಿಟ್ಟಿತ್ತು. ಬಟ್ಟೆ ಒಗೆಯುವ ತೊಟ್ಟಿಯನ್ನು ಎತ್ತಿ ಅಂಗಳದುದ್ದಕ್ಕೂ ಬೀಸಿ ಎಸೆದಿರಬೇಕು ಎನ್ನುವ ಹಾಗೆ, ಉರುಳುವ ಲೋಹದ ದೀರ್ಘ ಖಣಿಲು. ನಂತರ, ಕೇಳಿಬಂದಿದ್ದು ಸಿಟ್ಟಿನ ಕೂಗಾಟದ ಗೊಂದಲ. ಅದು ಮುಗಿದಿದ್ದು ನೋವಿನ ಆಕ್ರಂದನವೊಂದರಲ್ಲಿ.

‘ಮನೆಯನ್ನು ಸುತ್ತುವರೆಯಲಾಗಿದೆ,’ ವಿನ್ಸ್ಟನ್ ಹೇಳಿದ.

‘ಮನೆಯನ್ನು ಸುತ್ತುವರೆಯಲಾಗಿದೆ,’ ಹೇಳಿತು ಸ್ವರ.

ಜೂಲಿಯಾ ತನ್ನ ಹಲ್ಲುಗಳನ್ನು ಒಟ್ಟಿಗೆ ಕಡಿಯುತ್ತಿರುವುದು ಅವನಿಗೆ ಕೇಳಿಸಿತು. ‘ನಾವು ಸಹ ವಿದಾಯ ಹೇಳಬಹುದು ಅಂತನ್ನಿಸುತ್ತಿದೆ,’ ಅವಳು ಹೇಳಿದಳು.

ಸಹನಾ ಹೆಗಡೆ

‘ನೀವು ಸಹ ವಿದಾಯ ಹೇಳಬಹುದು,’ ಹೇಳಿತು ಸ್ವರ. ನಂತರ, ಅಪ್ಪಳಿಸಿದ್ದು ಸ್ವಲ್ಪ ಬೇರೆಯದೇ ಆದ ಮತ್ತೊಂದು ಸ್ವರ. ಶಿಷ್ಟತೆಯನ್ನು ರೂಢಿಸಿಕೊಂಡ ಆ ಸಣಕಲು ಸ್ವರವನ್ನು ಮೊದಲೆಲ್ಲೋ ಕೇಳಿದಂತೆನಿಸುತ್ತಿತ್ತು ವಿನ್ಸ್ಟನ್‍ನಿಗೆ. ‘ಅಂದಹಾಗೆ, ಹೇಳಬೇಕೆಂದರೆ, ನಿಮ್ಮನ್ನು ಮಲಗಿಸಲು ಮೋಂಬತ್ತಿಯ ಬೆಳಕೊಂದು ಬರುತ್ತಿದೆ. ನಿಮ್ಮ ತಲೆಯನ್ನು ಉರುಳಿಸಲು ಕೈಗೊಡಲಿಯೊಂದು ಬರುತ್ತಿದೆ!”

ವಿನ್ಸ್ಟನ್‍ನ ಬೆನ್ನ ಹಿಂದೆ, ಹಾಸಿಗೆಯ ಮೇಲೆ ಏನೋ ದೊಪ್ಪನೆ ಬಿದ್ದಿತು. ಏಣಿಯೊಂದರ ತಲೆಯನ್ನು ಕಿಟಕಿಯಲ್ಲಿ ತೂರಿದ ರಭಸಕ್ಕೆ ಚೌಕಟ್ಟು ಮುರಿದು ಬಿದ್ದಿತ್ತು. ಯಾರೋ ಕಿಟಕಿಯ ಮೂಲಕ ಮೇಲೆ ಹತ್ತುತ್ತಿದ್ದರು. ಮೆಟ್ಟಿಲುಗಳ ಮೇಲೆ ಬೂಟುಗಳ ನುಗ್ಗಾಟ. ಕೋಣೆಯ ತುಂಬ ಕಪ್ಪು ಸಮವಸ್ತ್ರದಲ್ಲಿದ್ದ ಸದೃಢ ಜನರು. ಅವರ ಕಾಲುಗಳಲ್ಲಿ ಕಬ್ಬಿಣದ ಕವಚಗಳಿದ್ದ ಬೂಟುಗಳು. ಕೈಗಳಲ್ಲಿ ಆರಕ್ಷಕರ ಬಳಿ ಇರುವಂತಹ ಮೋಟು ದೊಣ್ಣೆ.

ವಿನ್ಸ್ಟನ್ ಈಗ ನಡುಗುತ್ತಿರಲಿಲ್ಲ. ಅವನು ಕಣ್ಣಗಳನ್ನು ಕೂಡ ಅಲ್ಲಾಡಿಸುತ್ತಿರಲಿಲ್ಲ. ಅವನನ್ನು ಬಾಧಿಸುತ್ತಿದ್ದ ಒಂದೇ ಒಂದು ಸಂಗತಿಯೆಂದರೆ, ನಿಶ್ಚಲವಾಗಿ ನಿಂತುಕೊಳ್ಳುವುದು. ನಿಶ್ಚಲವಾಗಿ ನಿಂತುಕೊಳ್ಳುವುದು ಅಂದರೆ ನಿಮ್ಮನ್ನು ಹೊಡೆಯಲು ಅವರಿಗೆ ನೆಪವನ್ನು ಒದಗಿಸಿಕೊಡದೆ ಇರುವುದು! ಬಹುಮಾನಕ್ಕಾಗಿ ಮುಷ್ಟಿಯುದ್ಧದಲ್ಲಿ ಪಾಲ್ಗೊಳ್ಳುವ ಜಟ್ಟಿಯ ದವಡೆಯಿಂದ ಮಾಂಸಖಂಡಗಳು ಜೋಲುವ ಹಾಗೆ, ಅವನೆದುರಿಗೆ ನಿಂತ ಮನುಷ್ಯನ ಕೆಳದವಡೆಯಿಂದ ನುಣುಪಾದ ಮಾಂಸವು ಜೋಲುತ್ತಿತ್ತು. ಅದರಲ್ಲಿ ಬಾಯಿ ಕೇವಲ ಒಂದು ಸೀಳಿನಂತೆ ಕಾಣುತ್ತಿತ್ತು. ದೊಣ್ಣೆಯನ್ನು ತನ್ನ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ ಆಯ ತಪ್ಪದಂತೆ ಧ್ಯಾನಸ್ಥನಾಗಿ ಇಟ್ಟುಕೊಂಡಿದ್ದ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಎಮ್ಮೆಮುಖ ನೋಡಿದಾಗ್ಲೆಲ್ಲಾ…

ವಿನ್ಸ್ಟನ್ ಅವನ ಕಣ್ಣುಗಳನ್ನು ಸಂಧಿಸಿದ. ಕೈಗಳನ್ನು ತಲೆಯ ಹಿಂದೆ ಇಟ್ಟುಕೊಂಡಿದ್ದ ಮತ್ತು ಮೈಮುಖಗಳನ್ನೆಲ್ಲ ತೆರೆದಿಟ್ಟ ಸ್ಥಿತಿಯಲ್ಲಿ, ಬೆತ್ತಲುತನದ ಭಾವನೆಯು ಬಹುತೇಕ ಸಹಿಸಲು ಅಸಾಧ್ಯವಾಗಿತ್ತು. ಆ ಮನುಷ್ಯ ಬಿಳಿನಾಲಿಗೆಯ ತುದಿಯನ್ನು ಹೊರಚಾಚಿ, ತನ್ನ ತುಟಿಗಳಿರಬೇಕಾಗಿದ್ದ ಜಾಗವನ್ನು ನೆಕ್ಕಿದ. ನಂತರ ದಾಟಿ ಮುಂದೆ ಹೋದ. ಮತ್ತೊಮ್ಮೆ ಏನೋ ಅಪ್ಪಳಿಸಿದ ಸದ್ದು. ಯಾರೋ ಮೇಜಿನ ಮೇಲಿದ್ದ ಗಾಜಿನ ಪೇಪರ್‌ವ್ಹೇಟ್‍ನ್ನು ಎತ್ತಿ ಒಲೆಗೂಡಿನ ಕಲ್ಲಿಗೆ ಕುಕ್ಕಿದ್ದರು. ಅಪ್ಪಳಿಸಿದ ರಭಸಕ್ಕೆ ಅದು ನುಚ್ಚು ನೂರಾಗಿತ್ತು.

ಅನುವಾದಕಿಯ ಮಾತು

ಭಾಷೆಯೊಂದರ ಸಂರಚನೆ, ಪದಕೋಶದಲ್ಲಿ ಆಗುವ ಬದಲಾವಣೆಗಳು ಮತ್ತು ಒಟ್ಟಾರೆ ಜಾಗತಿಕ, ರಾಷ್ಟ್ರೀಯ ಅಥವಾ ಸ್ಥಳೀಯ ಸಂದರ್ಭದಲ್ಲಿ ಕೃತಿಯು ಹೊಂದಿರುವ ಪ್ರಸ್ತುತತೆ ಇವು ಅದಾಗಲೇ ಅನುವಾದಗೊಂಡಿರುವ ಕೃತಿಯನ್ನೂ ಮತ್ತೆ ಮತ್ತೆ ಅನುವಾದಕ್ಕೆ ತೆರೆದುಕೊಳ್ಳುವಂತೆ ಮಾಡುತ್ತವೆ. ರಾಜಕೀಯ ವಿಡಂಬನೆಗಳಿಂದ ಕೂಡಿದ ತನ್ನ ಬರಹಗಳಿಂದಾಗಿ ವಿಶ್ವವಿಖ್ಯಾತನಾದ ಬ್ರಿಟಿಷ್ ಲೇಖಕ ಜಾರ್ಜ್ ಆರ್ವೆಲ್‌ನ ಪ್ರಸಿದ್ಧ ಕಾದಂಬರಿ ‘1984’ನ್ನು ಅನುವಾದಿಸುವ ಅವಕಾಶ ನನಗೆ ಒದಗಿ ಬಂದಿದ್ದು ಹೀಗೆ. ಲಿಂಗ, ವರ್ಗ, ಜಾತಿ, ಮತ, ಧರ್ಮ, ಸಿದ್ಧಾಂತಗಳ ಸುಳಿಯಲ್ಲಿ ಸಿಕ್ಕು ಮನುಷ್ಯ ಮೂಲಭೂತವಾಗಿ ತಾನು ಏನು ಎನ್ನುವುದನ್ನೇ ಮರೆತಿರುವ ಕಾಲಘಟ್ಟದಲ್ಲಿ ಈ ಕೃತಿಯು ಇನ್ನಷ್ಟು ಪ್ರಸ್ತುತವಾಗಿದೆ, ಊಹಿಸಲೂ ಅಸಾಧ್ಯವಾದ ಮಟ್ಟಿಗಿನ ತಣ್ಣನೆಯ ಕ್ರೌರ್ಯ, ಅದು ಯಾರಲ್ಲಾದರೂ ಇರಬಹುದು, ನಮ್ಮೊಳಗೂ ಇದ್ದಿರಲು ಸಾಧ್ಯ ಎಂಬ ಕಟುಸತ್ಯವನ್ನು ಅನಾವರಣಗೊಳಿಸುತ್ತದೆ.

1984 – ನನ್ನ ಪಾಲಿಗೆ, ಒಂದು ಕಾದಂಬರಿಯಾಗಿ ಹೇಗೆ ಮನಸ್ಸಿನಲ್ಲಿ ಉಳಿಯಬಲ್ಲದೋ ಅದರ ಅನುವಾದ ಪ್ರಕ್ರಿಯೆಯೂ ಅಷ್ಟೇ, ಬಹುಕಾಲ ನೆನಪಿನಲ್ಲಿ ಉಳಿಯುವಂತಹದು. ಅಧಿಕಾರ, ರಾಜಕೀಯ, ಕುತಂತ್ರ, ಹಿಂಸೆ, ಅಪನಂಬಿಕೆ, ಅಭದ್ರತೆ, ಯುದ್ಧ, ಕ್ಷೋಭೆ, ಮಾನವನ ಅತೃಪ್ತ ವಾಂಛೆಗಳು, ಲಾಲಸೆ, ವಿಕ್ಷಿಪ್ತ ಮನಃಸ್ಥಿತಿ, ಕಾಮ, ಪ್ರೇಮ ಎಲ್ಲದರ ಸುತ್ತ ಸುತ್ತುತ್ತಲೇ ಕೃತಿಯೊಂದು ಅನುವಾದ ಕ್ರಿಯೆಯಲ್ಲಿ ಸಂಪೂರ್ಣ ತೃಪ್ತಿಯನ್ನು ತಂದುಕೊಟ್ಟ ಭಾವ ಶಾಶ್ವತವಾದುದು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಕನ್ನಡದ ಸವಾಲುಗಳು: ಕನ್ನಡ ನುಡಿಯ ಬೆಳವಣಿಗೆಯ ಹಾದಿ

Exit mobile version