Site icon Vistara News

Sunday Read: ಹೊಸ ಪುಸ್ತಕ: ಎಮ್ಮೆಮುಖ ನೋಡಿದಾಗ್ಲೆಲ್ಲಾ…

msn book

: ಎಂ.ಎಸ್‌ ನರಸಿಂಹಮೂರ್ತಿ

ಯಲಹಂಕದಲ್ಲಿದ್ದ ನಾನು ಜಡಿಗೇನಳ್ಳಿಗೆ ಕೇಳಿ ವರ್ಗ ಮಾಡಿಸಿಕೊಂಡೆ. ಏಕೆಂದರೆ ಅದು ನನ್ನ ತವರೂರಿಗೆ ಹತ್ತಿರದ ಗ್ರಾಮೀಣ ಶಾಖೆ. ಅಲ್ಲಿ ಎರಡು ವರ್ಷ ಕೆಲಸ ಮಾಡಿದರೆ ಮುಂದಿನ ಹಂತಕ್ಕೆ ಬಡ್ತಿ ಸಿಗಬಹುದೆಂಬ ಆಸೆ ಇತ್ತು.

ಆ ಹಳ್ಳಿಯ ಶಾಖೆ ಮತ್ತು ಅಲ್ಲಿನ ಗ್ರಾಹಕರು ನನಗೆ ಅಡ್ಡಸ್ಟ್ ಆದರು. ʼಪೂಜಾರಿ ಲೋನ್ ಮೇಳ’ ನಡೆಯುತ್ತಿದ್ದ ಕಾಲ. ಸಾಲಗಳು ಕೊಡುವುದು ನಮಗೆ ಅನಿವಾರ್ಯವಾಗಿತ್ತು. ಕೇಳಿದವರಿಗೆಲ್ಲಾ ಸಾಲ ಕೊಟ್ಟು ಕೊಟ್ಟು ನಾನು ಬಹು ಬೇಗ ದಾನಶೂರ ಕರ್ಣ ಎಂಬ ಹೆಸರು ಗಳಿಸಿದ್ದೆ. ಯಾರದೋ ದುಡ್ಡು. ಎಲ್ಲಮ್ಮನ ಜಾತ್ರೆ!

ಹೊಸ ಫಲಾನುಭವಿಗಳು ಹಳ್ಳಿಯಲ್ಲಿ ಸಿಗುವುದೇ ಕಷ್ಟವಾಗಿತ್ತು. ನಾನು ಬ್ಯಾಂಕ್ ಮುಂದಿದ್ದ ಜಗುಲಿಯ ಮೇಲೆ ನಿಂತುಕೊಂಡು ಯಾರಿಗೆ ಸಾಲ ಕೊಡುವುದು ಎಂದು ಓಡಾಡುವ ಜನರನ್ನು ಗಮನಿಸುತ್ತಿದ್ದೆ. ಒಬ್ಬ ಪ್ಯೂನ್‌ ನನ್ನ ಸಹಾಯಕ್ಕಿದ್ದ. ದೂರದಲ್ಲೊಬ್ಬ ವ್ಯಕ್ತಿ ತಲೆಗೆ ಟವೆಲ್ ಹೋಗುತ್ತಿದ್ದುದನ್ನು ನೋಡಿ, ʼಈ ರಂಗಪ್ಪ ಸಾಲ ತಗೊಂಡಿಲ್ಲ ಸಾರ್’ ಎಂದ ಪ್ಯೂನ್.

ʼಹೋಗು ರಂಗಪ್ಪನ್ನ ಎತ್ತಾಕ್ಕೊಂಡು ಬಾ ಅವನಿಗೆ ಸಾಲ ಕೊಡೋಣ, ಟಾರ್ಗೆಟ್ ರೀಚ್ ಆಗಲೇಬೇಕು’ ಎಂದೆ. ನಮ್ಮ ಪ್ಯೂನ್ ಹೋಗಿ ಅವನನ್ನು ದರದರನೆ ಎಳೆದುಕೊಂಡು ಬಂದ. ಅವನು ಬ್ಯಾಂಕಿಗೆ ಬರಲು ಹೆದರಿ ನನ್ನ ಬಿಟ್ಬಿಡಿ ಎಂದು ಗೋಳಾಡುತ್ತಿದ್ದ.

“ಎರಡೂವರೆ ಸಾವಿರ ರೂಪಾಯಿ ಸಾಲ ಕೊಡ್ತೀನಿ. ಇದು D.I.R. ಸ್ಕೀಮು. ಕಡಿಮೆ ಬಡ್ಡಿ’ ಎಂದೆಲ್ಲಾ ಸಮಾಧಾನ ಹೇಳಿದೆ. ಅವನು ಹೆದರಿ ಕೈ ಮುಗಿದ. ʼಬೇಡ ಸ್ವಾಮಿ, ಇದುವರೆಗೂ ನಾನು ಸಾಲ ತಗೊಂಡಿಲ್ಲ. ಯಾವ ನನ್ನ ಮಗಾನೂ ನನ್ನ ಮನೆ ಬಾಗಿಲಿಗೆ ಸಾಲ ವಸೂಲಿಗೆ ಬಂದಿಲ್ಲ. ನಮ್ಮಪ್ಪನಿಗೆ ತಿಳಿದರೆ ಬೈತಾರೆ, ನನಗೆ ಸಾಲ ಬೇಡ’ ಎಂದು ಕಾಲಿಗೆ ಬಿದ್ದ.

ಸಾಲ ಕೊಡುವೆ ಎಂದರೆ ಬೇಡ ಎನ್ನುತ್ತಿದ್ದಾನೆ. ಅಷ್ಟು ಒಳ್ಳೆಯವನನ್ನು ಬಿಡುವುದು ಉಂಟೆ? ನಾನು ಸಾಲವನ್ನು ಅವನ ತಲೆಗೆ ಕಟ್ಟಿ ಕಳಿಸಿಕೊಟ್ಟೆ. ಅವನು ಬಿಕ್ಕುತ್ತಾ ಹಣ ತೆಗೆದುಕೊಂಡು ಹೋದ.

ಸಾಲ ವಿತರಣೆ ಪ್ರಾರಂಭ ಮಾಡಿದ ಕೆಲವೇ ತಿಂಗಳಲ್ಲಿ ನನಗೆ ಬಡ್ತಿ ಸಿಕ್ಕಿ ಬೆಂಗಳೂರಿಗೆ ವರ್ಗವಾಯಿತು. ಪ್ರಮೋಷನ್ ಸಿಕ್ಕ ಖುಷಿಗೆ ಆಫೀಸ್ ಸ್ಟಾಫ್‌ಗೆಲ್ಲ ಸಿಹಿ ತರಿಸಿಕೊಟ್ಟೆ. ನಾನು ಬೆಂಗಳೂರಿಗೆ ವರ್ಗವಾಗುವ ದಿನ ಬ್ಯಾಂಕಿನ ಮುಂದೆ ಸ್ಥಳೀಯ ಗ್ರಾಹಕರು ಗುಂಪು ಸೇರಿದರು.

ʼನೀವು ನಮ್ಮನ್ನ ಬಿಟ್ಟು ಹೋಗಬಾರು ಸಾರ್, ನೀವು ಇಲ್ಲೇ ಇರ್ಬೇಕು, ನಾವು ಎಂ.ಎಲ್.ಎ. ಬಚ್ಚೇಗೌಡರಿಗೆ ಹೇಳಿ ನಿಮ್ಮನ್ನ ಇಲ್ಲೇ ಉಳಿಸ್ಕೋತೀವಿ. ನಿಮ್ಮ ಪ್ರಮೋಷನ್ ಕ್ಯಾನ್ಸಲ್ ಮಾಡಿಸ್ತೀವಿ’ ಎಂದರು. ನನಗೆ ಭಯವಾಯಿತು. ʼಬೇಡಪ್ಪಾ, ತುಂಬಾ ಕಷ್ಟ ಪಟ್ಟು ಪ್ರಮೋಷನ್ ತಗೊಂಡಿದ್ದೀನಿ. ನಾನು ಹೋದರೆ ಏನಂತೆ, ಬ್ಯಾಂಕ್ ಇಲ್ಲಿ ಇದ್ದೇ ಇರುತ್ತೆ. ನನಗಿಂತ ಒಳ್ಳೆ ಮ್ಯಾನೇಜರ್‌ ಬಂದೇ ಬರ್ತಾರೆ’ ಎಂದು ಅಭಯ ನೀಡಿದೆ.

ಗುಂಪಿನಲ್ಲಿ ಯಾವೊನೋ ಒಬ್ಬ ಗೊಣಗಿದ. ʼನಿಮಗೆ ಮುಂಚೆ ಇದ್ದವರೂ ಇದೇ ಮಾತನ್ನೇ ಹೇಳಿದ್ರು. ಒಳ್ಳೆಯವರು ಬರ್ತಾರೆ ಅಂತ. ಆದ್ರೆ ನಮ್ಮ ಕರ್ಮಕ್ಕೆ ನೀವು ಬಂದ್ರಿ’ ಅಂದ.

ಬೆಂಗಳೂರಿಗೆ ವರ್ಗವಾದ ಒಂದು ವರ್ಷದ ನಂತರ ಅದೇ ಹಳ್ಳಿಗೆ ರಾಜ್ಯೋತ್ಸವಕ್ಕೆ ನನ್ನನ್ನು ಕರೆಸಿದರು. ನಾನು ಕಾರು ಇಳಿಯುತ್ತಿದ್ದಂತೆಯೇ ಹಳ್ಳಿ ಜನಗಳೆಲ್ಲಾ ಪ್ರೀತಿಯಿಂದ ಸುತ್ತುವರಿದರು. ʼಹಳೇ ಮ್ಯಾನೇಜರ್ ಬಂದ್ರು’ ಎಂದು ಖುಷಿ ಪಟ್ಟರು.

ಕರಗಮ್ಮ ಎಂಬ ಒಬ್ಬ ಬಡ ಮಹಿಳೆ ಎರಡು ಹಣ್ಣು ತಂದು ನನ್ನ ಕೈಯಲ್ಲಿಟ್ಟು ನಮಸ್ಕಾರ ಮಾಡಿ, ʼಚೆಂದಾಗಿದ್ದೀರ ಸ್ವಾಮಿ? ಸಿಟಿ ಸೇರ್ಕೊಡು ಬಿಟ್ರಿ’ ಎಂದಳು. ಅವಳಿಗೆ ನಾನು ಎಮ್ಮೆ ಸಾಲ ಕೊಟ್ಟಿದ್ದೆ.

ʼಏನಮ್ಮಾ, ನಾನು ಕೊಟ್ಟ ಎಮ್ಮೇನ ಚೆನ್ನಾಗಿ ಸಾಕಿಕೊಂಡಿದ್ದೀಯಾ? ಆರೋಗ್ಯವಾಗಿದೆಯಾ?’ ಎಂದು ಕೇಳಿದೆ. ಬ್ಯಾಂಕ್ ಮ್ಯಾನೇಜರ್‌ಗೆ ಅವಳ ಆರೋಗ್ಯಕ್ಕಿಂತ ಅವಳ ಎಮ್ಮೆ ಆರೋಗ್ಯ ಮುಖ್ಯ. ಅವಳು ಸತ್ತರೆ ಅವಳ ಗಂಡನಿಗೆ ನಷ್ಟ. ಎಮ್ಮೆ ಸತ್ತರೆ ಬ್ಯಾಂಕಿಗೆ ನಷ್ಟ. ಅವಳ ಕಣ್ಣಲ್ಲಿ ಹೊಳಪು ಕಾಣಿಸಿಕೊಂಡಿತು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಕನ್ನಡದ ಸವಾಲುಗಳು: ಕನ್ನಡ ನುಡಿಯ ಬೆಳವಣಿಗೆಯ ಹಾದಿ

ʼಸ್ವಾಮ್ಯಾರೇ, ನೀವಾಗಿ ನೀವು ನನ್ನ ಗುಡಿಸಲು ಹುಡುಕ್ಕೊಂಡು ಬಂದು ನೀವಾಗಿ ನೀವು ಒಂದು ಎಮ್ಮೆನ ಸಾಲವಾಗಿ ಕೊಟ್ರಿ, ಆ ಎಮ್ಮೆ ಎರಡೂವರೆ ಲೀಟರ್ ಹಾಲು ಕರೀತದೆ, ಆ ಹಾಲನ್ನ ಡೈರಿಗೆ ಹಾಕಿ ಇಬ್ಬರು ಮಕ್ಕಳನ್ನ ಓದಿಸ್ತಾ ಇದ್ದೀವಿ ಸ್ವಾಮಿ. ತಾವು ದ್ಯಾವ್ರು ಸ್ವಾಮಿ, ತಮ್ಮ ಹೆಸರು ಹೇಳಿ ದೀಪ ಹಚ್ತೀನಿ ಸ್ವಾಮಿ, ತಮ್ಮಿಂದ ಹಿಟ್ಟು, ಗಂಜಿ ಸ್ವಾಮಿ’ ಎಂದೆಲ್ಲಾ ಹೊಗಳುತ್ತಾ ಹೋದಳು.

ಅವಳ ಹೊಗಳಿಕೆ ಯಾವ ಮಟ್ಟಕ್ಕೆ ಹೋಯಿತೆಂದರೆ, “ಸ್ವಾಮ್ಯಾರೇ, ನೀವು ನಿಜ ಹೇಳಿದ್ರೂ ಕೇಳೀರ, ಸುಳ್ಳು ಹೇಳಿದ್ರೂ ಕೇಳೀರ. ನಮ್ಮನೆಯಾಗೈತಲ್ಲ ನೀವು ಕೊಡಿಸಿದ ಎಮ್ಮೆ, ಆ ಎಮ್ಮೆ ಮುಖ ನೋಡ್ದಾಗೆಲ್ಲಾ ನಿಮ್ಮ ಮುಖ ನೆನಪಿಗೆ ಬರ್ತದೆ ಸ್ವಾಮಿ’ ಎಂದಳು.

ಪಕ್ಕದಲ್ಲಿದಲ್ಲಿದ್ದ ಹೊಸ ಮ್ಯಾನೇಜರ್ ನನ್ನ ಕಿವಿಯಲ್ಲಿ ಮೆಲ್ಲನೆ ಹೇಳಿದ: ʼಸಾರ್, ಅವಳು ಈಗ ಡೈರಿಗೆ ಅರ್ಧ ಲೀಟರ್ ಮಾತ್ರ ಹಾಕ್ತಾಳೆ. ಉಳಿದಿದ್ದೆಲ್ಲಾ ಆಚೆ ಮಾರ್ಕೋತಾಳೆ, ಡಿಫಾಲ್ಟರು.ʼ

ನಾನು ದಬಾಯಿಸಿದೆ. ʼಏನು ಕರಗಮ್ಮ, ನಾನಿದ್ದಾಗ ಎರಡೂವರೆ ಲೀಟರ್ ಹಾಲು ಡೈರಿಗೆ ಹಾಕ್ತಾ ಇದ್ಯಲ್ಲಮ್ಮ, ಈಗ್ಯಾಕೆ ಬರೀ ಅರ್ಧ ಲೀಟರ್ ಹಾಕ್ತಿಯ? ಸಾಲ ತೀರೋದು ಹ್ಯಾಗೆ?’

ಇದನ್ನೂ ಓದಿ: Sunday Read: ಹೊಸ ಪುಸ್ತಕ: ತುಷಾರ ಹಾರ

ಅವಳು ಬಹಳ ಮುಗ್ಧವಾಗಿ ಉತ್ತರ ಕೊಟ್ಟಳು. ʼಗೊತ್ತಿಲ್ಲ ಸ್ವಾಮ್ಯಾರೇ, ನೀವು ಇಲ್ಲಿದ್ರಲ್ಲ ವರ್ಷಕ್ಕೆ ಮುಂಚೆ. ಆವಾಗ್ಲೆ ನಮ್ಮ ಎಮ್ಮೆ ಕರ ಹಾಕಿದ್ದು, ನೀವು ಬೆಂಗ್ಳೂರಿಗೆ ಹೋದ್ಮೇಲೆ ಯಾಕೋ ಏನೋ ನಮ್ಮ ಎಮ್ಮೆ ಕರಾನೇ ಹಾಕಿಲ್ಲ!’

ಕೃತಿ: ಎಂಎಸ್‌ಎನ್‌ ಹೆಜ್ಜೆಗಳು (ಆತ್ಮಕತೆಯ ರಸನಿಮಿಷಗಳು)
ಲೇಖಕ: ಎಂ.ಎಸ್‌ ನರಸಿಂಹಮೂರ್ತಿ
ಪ್ರಕಾಶನ: ವಿಕ್ರಂ ಪ್ರಕಾಶನ, ಬೆಂಗಳೂರು
ಬೆಲೆ: 250/-

Exit mobile version