| ಮಂಜುನಾಥ್ ಕುಣಿಗಲ್
ಕಾರು ವೇಗ ಪಡೆದುಕೊಂಡು ಸಾಗಲೆತ್ನಿಸುತ್ತಿತ್ತು. ಹೆದ್ದಾರಿಯ ಸಾಲು-ಸಾಲು ತಗ್ಗುಗಳು ಕಾರಿನ ವೇಗಕ್ಕೆ ಕಡಿವಾಣ ಹಾಕಲೆತ್ನಿಸುತ್ತಿದ್ದವು. ʼಕಾಬೂಲ್ ನಗರ ಇನ್ನೂ ಹನ್ನೆರಡು ಮೈಲಿಗಳಾಚೆ ಇದೆ’ ಎಂದ ಮೊಹಮ್ಮದ್ ಆತನ ಪಕ್ಕ ಕುಳಿತಿದ್ದ ನನ್ನ ಪ್ರತಿಕ್ರಿಯೆಗೆ ಕಾಯುತ್ತಿರುವವನಂತೆ ಮುಖ ನೋಡಿದ. ಕತ್ತನ್ನಾಡಿಸಿದ ನಾನು ರಸ್ತೆಯ ಆಚೆಯನ್ನೇ ನೋಡುತ್ತಾ ಕುಳಿತಿದ್ದೆ. ರಸ್ತೆಗೆ ಸಮಾನಾಂತರವಾಗಿ ತೀವ್ರ ಶಿಥಿಲಾವಸ್ಥೆಯಲ್ಲಿದ್ದ ಮಣ್ಣಿನ ಮನೆಗಳು, ಗ್ಯಾರೇಜ್ ಶೆಡ್ಡುಗಳು, ಸಣ್ಣ ಹೋಟೆಲ್ಲುಗಳು, ಅಂಗಡಿ ಮುಂಗಟ್ಟುಗಳು, ಅಸ್ತವ್ಯಸ್ತವಾಗಿ ಜೋಡಿಸಿದಂತೆ ಕಾಣಿಸುತ್ತಿತ್ತು. ಅಲ್ಲಲ್ಲಿ ನಾನು ಹಿಂದೆ ನೋಡಿದಂತಹ ಎತ್ತರದ ಗೋಡೆಗಳೂ ಸಹ ಇದ್ದು, ಗೋಡೆಗೆ ಅಂಟಿಕೊಂಡಂತಿದ್ದ ಕಾವಲು ಗೋಪುರದ ಮೇಲೆ ಬಂದೂಕುಧಾರಿ ಸೈನಿಕರು ಎದೆ ಸೆಟೆಸಿ ನಿಂತದ್ದು ಸ್ಪಷ್ಟವಾಗಿ ಕಾಣುತ್ತಿತ್ತು.
ಅಂಗಡಿಗಳಲ್ಲಿ ತಿಂಡಿ ಡಬ್ಬಗಳು, ತರಕಾರಿ, ಕೋಲ ಪಾನೀಯಗಳನ್ನು ಒಟ್ಟಾಗಿ ಒಂದರ ನಂತರ ಒಂದರಂತೆ ಮೆಟ್ಟಿಲೋಪಾದಿಯಾಗಿ ಜೋಡಿಸಲಾಗಿತ್ತು. ಹಸಿಮಾಂಸದ ದೊಡ್ಡ ಭಾಗಗಳನ್ನು ಮತ್ತು ತಂದೂರಿಯ ದಪ್ಪ ರೊಟ್ಟಿಯನ್ನು ಸಾಲು ಸಾಲಾಗಿ ಕೊಕ್ಕೆಗೆ ನೇತುಹಾಕಲಾಗಿತ್ತು. ಕನಿಷ್ಟ ಪ್ಲಾಸ್ಟಿಕ್ ಹೊದಿಕೆಯೂ ಇರಲಿಲ್ಲ. ಪ್ರತೀ ಅಂಗಡಿಯಲ್ಲಿಯೂ ಒಂದೇ ತೆರನಾದ ನೋಟ ನನ್ನನ್ನು ಆಶ್ಚರ್ಯಚಕಿತನಾಗಿಸಿತ್ತು. ಬೇಸಿಗೆಯ ತಿಂಗಳು ಅದು. ಕಂದಹಾರಿನಲ್ಲಿ ಅನುಭವಿಸಿದ್ದ ಸುಡು ಬಿಸಿಲು ಇಲ್ಲಿಲ್ಲ. ತಂಪಿನ ವಾತಾವರಣವಿದೆ. ಆದರೆ ಎಲ್ಲೆಲ್ಲೂ ಧೂಳೇ ಧೂಳು, ಅಪರಿಮಿತ ಕಸದ ರಾಶಿ, ಗಾಳಿಯಲ್ಲಿ ತೇಲಿ ಬರುತ್ತಿದ್ದ ಧೂಳಿನ ಕಣಗಳು, ಕಸದ ತುಣುಕುಗಳು ಅಂಗಡಿಯಲ್ಲಿನ ಪದಾರ್ಥಗಳನ್ನೆಲ್ಲಾ ಮುತ್ತುತ್ತಿದ್ದರೂ, ಏನೂ ಸಂಭವಿಸುತ್ತಿಲ್ಲವೇನೋ ಎಂಬ ಮನಸ್ಥಿತಿ ಎಲ್ಲರದು, ಗ್ರಾಹಕನೂ ಸೇರಿ!
ಅದಾಗಲೇ ಹತ್ತು ನಿಮಿಷಗಳ ಪ್ರಯಾಣ ಮುಗಿದಿರಬಹುದು. ನಗರ ಸಮೀಪಿಸುತ್ತಿತ್ತು. ಅಂಗಡಿ ಮುಂಗಟ್ಟುಗಳು ಇನ್ನೂ ಒತ್ತೊತ್ತಾಗುತ್ತಲಿದ್ದಂತೆ ಜನ ನಿಬಿಡತೆಯೂ ಹೆಚ್ಚಾಗುತ್ತಿತ್ತು. ಹಿಂದೆ ನೋಡಿದಂತಹ ಮಣ್ಣಿನ ಮನೆಗಳು ಈಗ ಎಲ್ಲಿಯೂ ಕಾಣಸಿಗುತ್ತಿಲ್ಲ. ನಗರ ಪ್ರದೇಶಗಳಲ್ಲಿರುವಂತೆ ಆಧುನಿಕ ಶೈಲಿಯ ಕಾಂಕ್ರೀಟ್ ಕಟ್ಟಡಗಳು ಹಾಗೂ ಪರ್ಷಿಯನ್ ಶೈಲಿಯ ಕಟ್ಟಡಗಳ ಸಾಲು. ಆಶ್ಚರ್ಯವೆಂದರೆ ಅಲ್ಲಿನ ಪ್ರತಿಯೊಬ್ಬರೂ ದೇಸಿ ಉಡುಗೆಯಲ್ಲಿಯೇ ಇದ್ದದ್ದು. ನಮ್ಮಂತೆ ಅಂಗಿ ಶರಾಯಿ ಧರಿಸಿದವರು ಹುಡುಕಿದರೂ ಸಿಗುತ್ತಿರಲಿಲ್ಲ. ಆದರೆ, ಇದುವರೆಗೂ ಬಂದ ದಾರಿಯಲ್ಲಿ ನಾನು ಕನಿಷ್ಟ ಒಬ್ಬ ಹೆಂಗಸನ್ನೂ ನೋಡಲಿಲ್ಲ. ತಲೆಯಲ್ಲಿ ನೂರಾರು ಪ್ರಶ್ನಾರ್ಥಕ ಸ್ವರೂಪಿ ಯೋಚನಾ ಲಹರಿಗಳು ಹರಿದಾಡುತ್ತಿದ್ದರೂ ಮೊಹಮ್ಮದನನ್ನು ಕೇಳಲು ಹಿಂಜರಿಕೆ, ಹಳ್ಳ ತಗ್ಗುಗಳೊಂದಿಗೆ ಸರಸ ಜುಗಲ್ಬಂದಿಗೆ ಬಿದ್ದಿದ್ದ ಅವನನ್ನು ನನ್ನೆಡೆಗೆ ಸೆಳೆಯದಿರುವುದೇ ಉಚಿತವೆನಿಸಿತ್ತೂ ಕೂಡ. ಸರಕ್ಕನೆ ಬ್ರೇಕ್ ಬಿದ್ದೊಡನೆ ‘ಹೋ..ಕಾರ’ ಮಾಡಿ ನಾವೆಲ್ಲರೂ ಏನಾಯ್ತೆಂದು ಮುಂದೆ ನೋಡಿದೆವು.
ಸುಮಾರು ಏಳೆಂಟು ವರುಷದ ಪೋರನೊಬ್ಬ ದಾರಿಗಡ್ಡವಾಗಿ ಓಡಿಬಂದಿದ್ದ. ಮೊಹಮ್ಮದ್ ಆತನನ್ನು ದರಿ ಭಾಷೆಯಲ್ಲಿ ಜೋರಾಗಿ ಗದರುತ್ತಿದ್ದುದಷ್ಟೇ ಅರಿವಾಗುತ್ತಿತ್ತು. ಆ ಹುಡುಗ ಚಲಿಸುವ ಕಾರಿಗೇಕೆ ಅಡ್ಡ ಬಂದ? ಇವ
ಏನೆಂದು ಬೈಯುತ್ತಿದಾನೆ? ನಮಗೆ ಯಾರಿಗೂ ತಿಳಿಯಲಿಲ್ಲ. ಜೇಬಿನಿಂದ ಹತ್ತು ಆಫ್ಘಾನಿ ನೋಟೊಂದನ್ನು ತೆಗೆದ ಮೊಹಮ್ಮದ್ ಆ ಬಾಲಕನ ಕೈಗಿತ್ತ. ಸಮಾಧಾನವಾದಂತೆ ಕಾಣದ ಹುಡುಗ ‘ಮಾಯ್’ ಎಂದೇನೋ ಮುಲುಕುತ್ತಿತ್ತು. ಎರಡು ನೀರಿನ ಬಾಟಲ್‌ಗಳನ್ನು ತೆಗೆದು ಕೊಟ್ಟ ಮೊಹಮ್ಮದ್ ಕಾರನ್ನು ಚಲಾಯಿಸತೊಡಗಿದ.
ಉಸಿರುಕಟ್ಟಿದಂತೆ ಅಡಗಿಸಿಟ್ಟಿದ್ದ ಪ್ರಶ್ನೆಗಳನ್ನೆಲ್ಲಾ ಒಂದೇ ಉಸುರಿಗೆ ಕೇಳಿದೆ. ಮೊಹಮ್ಮದ್ ಒಮ್ಮೆ ನಸುನಕ್ಕು, ‘ರಸ್ತೆ ಬದಿಯಿದ್ದ ಆ ಹುಡುಗನ ತಾಯಿಯನ್ನು ನೀವು ಗಮನಿಸಲಿಲ್ಲವೇ?’ ಎಂದ. ‘ಇಲ್ಲ’ ಎಂದು ತಲೆಯಾಡಿಸಿದೆ. ‘ರಸ್ತೆಯಲ್ಲಿ ಓಡಾಡುವ ಕಾರುಗಳನ್ನೋ, ಲಾರಿಗಳನ್ನೋ ಅಡ್ಡ ಹಾಕಿ ಭಿಕ್ಷೆ ಬೇಡೋದು ಅವರ ನಿತ್ಯ ಕಾಯಕ. ಆಕೆ ತನ್ನ ಮಗನನ್ನು ರಸ್ತೆಗೆ ಬಿಟ್ಟು ಓಡಾಡುವ ವಾಹನಗಳನ್ನು ತಡೆದು ನಿಲ್ಲಿಸಿ ಬೇಡುವಂತೆ ಕಳಿಸುತ್ತಾಳೆ. ನೀರಿಗೆ ತುಂಬಾ ಅಭಾವವಿದೆ ಇಲ್ಲಿ. ನೀರು ಹೇರಳವಾಗಿಯೇನೋ ಸಿಗುತ್ತೆ. ಆದರೆ ಅದನ್ನು ಸರಿಯಾಗಿ ಹಂಚುವ, ನಿರ್ವಹಿಸುವ ಸರ್ಕಾರಿ ಸಂಸ್ಥೆಗಳು ತುಕ್ಕು ಹಿಡಿದಂತೆ ಸೊರಗಿಹೋಗಿವೆ. ಉಳ್ಳವರು ಶಿಫಾರಸಿನಿಂದಲೋ, ಹಣವನ್ನು ತೆತ್ತೋ ತಮಗೆ ಬೇಕಾದಂತೆ ಅಗತ್ಯಗಳನ್ನ ಮಾಡಿಕೊಳ್ತಾರೆ, ಆದರೆ ಏನೂ ಇಲ್ಲದಂತಹ ಈ ಬಡ ಜನರ ಅಗತ್ಯಗಳನ್ನು ಪೂರೈಸುವವರು ಯಾರು? ಈ ಬಿಳಿ ಚರ್ಮದೋರು ನಮ್ಮ ದೇಶಾನ ಹಾಳುಮಾಡಿದ್ರು ಹಿಂದುಸ್ತಾನಿ!’ ಮೊಹಮ್ಮದ್ ತುಸು ಆವೇಶಕ್ಕೊಳಗಾದವನಂತೆ ಮಾತನಾಡುತ್ತಿದ್ದ.
ಮೊದಲ ಬಾರಿ ನನ್ನನ್ನು ʼಹಿಂದುಸ್ತಾನಿ’ ಎಂದು ಕರೆದಿದ್ದರಿಂದ ನನಗೆ ಸ್ವಲ್ಪ ಇರುಸುಮುರುಸಾದಂತೆ ಅನಿಸಿತ್ತು. ಆತ ತನ್ನ ಮಾತುಗಳನ್ನು ಮುಂದುವರೆಸುತ್ತಾ ಅಲ್ಲಿನ ರಾಜಕೀಯ ಅರಾಜಕತೆ, ಜನರ ಮೌಡ್ಯ, ಸಾಲುಸಾಲು ಯುದ್ಧಗಳು, ಬಡತನ ಇತ್ಯಾದಿ ವಿಷಯಗಳ ಬಗ್ಗೆ ಅವನದೇ ದೃಷ್ಟಿಕೋನದಲ್ಲಿ ಮಾತನಾಡುತ್ತಲೇ ಇದ್ದ. ಹಿಂದೆ ಕುಳಿತಿದ್ದ ಬಿಳಿ ಚರ್ಮದವರಿಗೆ ಈತನ ಮಿಶ್ರ ಭಾಷೆಯ ಉಲಿಕೆ ಅರ್ಥವಾಗುವುದಿಲ್ಲ ಎಂಬ ಭಾವ ಹಾಗೂ ಅನುಭವ ಮೊಹಮ್ಮದನದು.
ʼ’ಅಲ್ಲಿ ನೋಡಿದಿರಾ, ಆ ಎತ್ತರದ ಬೆಟ್ಟಗಳು!’ ನನಗೆ ಆಣತಿಯಿತ್ತ ಮೊಹಮ್ಮದ್ ಮುಂದೆ ಕಾಣಿಸುತ್ತಿದ್ದ ಗಿರಿಗಳತ್ತ ತದೇಕವಾಗೊಮ್ಮೆ ನೋಡಿದ. ಅವನಾಣತಿಯಂತೆ ನಾನೂ ದಿಟ್ಟಿಸಿ ನೋಡತೊಡಗಿದೆ. “ಅದೇ ʼಕೊಹ್
ಈ-ಪದ್ಮಾನ್’ ಪರ್ವತ, ಹಿಂದೂ-ಕುಶ್ ಪರ್ವತಗಳ ಸಾಲಿಗೆ ಸೇರುತ್ತೆ. ಚಳಿಗಾಲದಲ್ಲಿ ನೋಡಬೇಕು ನೀವು, ನಿಮ್ಮ ಹಿಮಾಲಯಕ್ಕಿಂತಲೂ ಚೆನ್ನ. ನಾಲ್ಕೂ ದಿಕ್ಕಿಗೆ ಚಾಚಿದ ಹರವು ಆ ಗಿರಿಗಳದ್ದು. ಮಧ್ಯದಲ್ಲಿ ಈ ಕಾಬೂಲ್ ನಗರ. ಇಂತಹ ಸುಂದರ ನಗರವನ್ನ ಹೇಗೆ ಹಾಳು ಮಾಡಿದ್ದಾರೆ ನೋಡಿ’ ಎಂದು ಅಲವತ್ತುಕೊಳ್ಳುತ್ತಿದ್ದ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಸಾಕೇತ್ ರಾಜನ್ ಶವ ಪಡೆಯಲು ಕುಟುಂಬಸ್ಥರು ಯಾಕೆ ಒಪ್ಪಲಿಲ್ಲ?
ಆತ ಹೇಳಿದ್ದು ಅಕ್ಷರಶಃ ಸತ್ಯ. ನನ್ನ ದೃಷ್ಟಿಯ ಸುರುಳಿ ಬಿಚ್ಚಿ ತೀವ್ರವಾಗಿ ನೋಡತೊಡಗಿದೆ. ಬೇಸಿಗೆಯಲ್ಲಿ ಶಿಮ್ಲಾ ನಗರ ಹೇಗೆ ಕಾಣುತ್ತೋ ಹಾಗೇ ಇದೆ ಕಾಬೂಲ್, ಆದರೆ ಸದಾ ಸಂಭವಿಸುತ್ತಿದ್ದ ಯುದ್ಧಕ್ಕೆ ನಲುಗಿ ಪ್ರೇತಕಳೆ ಆವರಿಸಿತ್ತು. ಸಮುದ್ರದಿಂದ ಸುಮಾರು ಐದು ಸಾವಿರ ಅಡಿಗಳಿಗಿಂತಲೂ ಹೆಚ್ಚಿನ ಎತ್ತರದಲ್ಲಿರುವ ಕಾಬೂಲ್ ನಗರ ಒಂದು ಸುಂದರ ಗಿರಿಧಾಮವೆನ್ನುವುದರಲ್ಲಿ ಸಂಶಯವಿಲ್ಲ. ಬೇಸಿಗೆಯ ಕಾವು ತಣಿಸಲೇನೋ ಎಂಬಂತೆ ಸಾಲು ಬೆಟ್ಟಗಳವು ತಮ್ಮ ಬಿಳಿ ಬಟ್ಟೆಗಳನ್ನ ಬಿಚ್ಚಿ ನಗ್ನವಾಗಿ ಕುಳಿತಿದ್ದವು. ಚಳಿಗಾಲದ ಹಿಮಚ್ಛಾದಿತ ಕಾಬೂಲ್ ನಗರವನ್ನು ಕಲ್ಪಿಸಿಕೊಂಡು ನನ್ನಷ್ಟಕ್ಕೆ ನಾನೇ ಪುಳಕಗೊಳ್ಳುತ್ತಿದ್ದೆ. ಅದಕ್ಕೇ ಇರಬಹುದು ಅನಿಸುತ್ತೆ ಕಾಬೂಲ್ ಬಾಬರನಿಗೆ ಸ್ವರ್ಗವಾಗಿತ್ತು ಎಂದುಕೊಂಡೆ. ಏನೋ ನೆನಪಾದಂತೆ, ʼಹಿಂದೂಗಳನ್ನು ಸಾಮೂಹಿಕವಾಗಿ ಹತ್ಯೆಗೈದ ಬೆಟ್ಟವಂತೆ ಅದು, ಅದಕ್ಕಾಗಿಯೇ ಅದರ ಹೆಸರು ʼಹಿಂದು ಕುಶ್’ ಅಂತಲ್ಲವೇ?’ ಎಂದೆ. ಹೌದೆಂಬಂತೆ ತಲೆಯಾಡಿಸಿದ, ಹೆಚ್ಚು ಮಾಹಿತಿ ಆತನಿಗೆ ಗೊತ್ತಿಲ್ಲ ಎಂಬ ಅರಿವಾಗಿ ಮತ್ತೆ ಅದರ ಬಗ್ಗೆ ಏನನ್ನೂ ಕೇಳದೆ ಸುಮ್ಮನಾದೆ.
“ಹಾಗಾದರೆ ಇಲ್ಲಿ ಹಿಂದೂಗಳು ಇದ್ದರು ಅನ್ನೋ ಹಾಗಾಯ್ತು ಅಲ್ಲವೇ?’ ʼಹಾಂ… ಈಗಲೂ ಇದ್ದಾರೆ. ನೂರಕ್ಕೆ ಇಬ್ಬರಿರಬಹುದು ಅನಿಸುತ್ತೆ. ಆದರೆ ಅವರನ್ನು ನೀವು ನೋಡಿದರೆ ಹಿಂದೂಗಳೆಂದು ಗುರುತು ಹಚ್ಚಲು ಅಸಾಧ್ಯ. ಏಕೆಂದರೆ ಅವರ ರೂಪ, ಉಡುಪು, ಊಟ ಎಲ್ಲವೂ ನಮ್ಮಂತೆ. ಎಲ್ಲಾ ಹೆಂಗಸರೂ ಬುರ್ಖಾ ಹಾಕಲೇಬೇಕು. ಕೆಲವು ಹಿಂದೂ ದೇವಸ್ಥಾನಗಳೂ ಇವೆ’ ಎಂದ. ನನಗೋ ತಡೆದುಕೊಳ್ಳಲಾಗದ ಸಖೇದಾಶ್ಚರ್ಯ. ʼʼಅವರನ್ನು ನೋಡಬಹುದೇ? ಕನಿಷ್ಠ ದೇವಸ್ಥಾನವನ್ನಾದರೂ…’ ಎನ್ನುವಷ್ಟರಲ್ಲೇ ನನ್ನ ಮಾತನ್ನು ತಡೆದ ಮೊಹಮ್ಮದ್, ನನಗೆ ಹಿಂದೆ ನೋಡುವಂತೆ ಒಮ್ಮೆ ಕಣ್ಣಿನ ಸನ್ನೆ ಮಾಡಿ ʼಈಗ ಬೇಡ, ಸಾಧ್ಯವಾದರೆ ನಾಳೆ ಪ್ರಯತ್ನಿಸೋಣ’ ಎಂದ. ʼಈ ಬಿಳಿಯರ ತಕರಾರಿದೆಯೇ?’ ಎಂದೆ. ʼಹಾಗೇನಿಲ್ಲಾ, ಆದರೆ ಕಳೆದ ನಾಲ್ಕೈದು ತಿಂಗಳಿನಲ್ಲಿ ಕಂಪನಿಯ ಮೂವರು ಕೆಲಸಗಾರರನ್ನು ಅಪಹರಿಸಿ ದೊಡ್ಡ ಮೊತ್ತದ ದುಡ್ಡನ್ನು ಕಿತ್ತಿದ್ದರು, ಅದಾದ ನಂತರ ಯಾರನ್ನೂ ನಗರದ ಒಳಗೆ ಕಳುಹಿಸುತ್ತಿಲ್ಲ. ನಿಮ್ಮ ಕೆಲಸ ಏನೋ ತುಂಬಾ ಪ್ರಮುಖವಾದದ್ದಂತೆ, ಅದಕ್ಕೆ ಇಲ್ಲಿಗೆ ಬಂದಿದ್ದೇವೆ ಅದೂ ಈ ಇಬ್ಬರ ಜೊತೆ, ಆಯುಧಧಾರಿಗಳಾಗಿ’ ಎಂದ.
ಇದನ್ನೂ ಓದಿ: Sunday read: ಹೊಸ ಪುಸ್ತಕ: ಗಣೇಶ ಹಾಲು ಕುಡಿದ!
ʼಯಾರು ಅಪಹರಿಸಿದ್ದು, ತಾಲಿಬಾನ್‌ನವರೇ?’ ಎಂದೆ. ʼಅವರು ಜಾಗ ಖಾಲಿ ಮಾಡಿ ತುಂಬಾ ದಿವಸ ಆಯ್ತು, ಅವರ ಹೆಸರಲ್ಲಿ ಇಲ್ಲಿಯ ಜನರೇ ದುಡ್ಡಿಗಾಗಿ ಏನೆಲ್ಲಾ ಮಾಡ್ತಾ ಇದಾರೆ’ ಎಂದ. ʼನಿಮ್ಮ ಜೊತೆ ನಾನು ಇಲ್ಲಿ
ಬಂದಿರೋದೂ ಸುರಕ್ಷಿತವಿಲ್ಲ. ಆದರೆ ನನ್ನ ಹೊಟ್ಟೆ ಪಾಡು ಇದರಿಂದಲೇ ಸಾಗೋದು’ ಎನ್ನುತ್ತಿದ್ದ. ಹಾಗಾದರೆ ನಾನಿಲ್ಲಿ ಅದೆಷ್ಟು ಸುರಕ್ಷಿತ ಎಂಬ ನೂರಾರು ಆಲೋಚನೆಗಳು ಕಾಡಹತ್ತಿದವು.
ಕೃತಿ: ಕುಣಿಗಲ್ ಟು ಕಂದಹಾರ್
ಲೇಖಕ: ಮಂಜುನಾಥ್ ಕುಣಿಗಲ್
ಪ್ರಕಾಶನ: ವೀರಲೋಕ ಬುಕ್ಸ್
ಬೆಲೆ: 260 ರೂ.