Site icon Vistara News

Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ

sunday read

| ಜಗದೀಶ ಶರ್ಮಾ ಸಂಪ

ಯುಧಿಷ್ಠಿರ ಸಹೋದರರನ್ನು ಜೊತೆಯಾಗಿಸಿಕೊಂಡು ವಿದುರನೊಂದಿಗೆ ಹಾಸ್ತಿನಪುರಕ್ಕೆ ತೆರಳಿದ. ಜೊತೆಗೆ ಕುಂತಿ, ದೌಪದಿ ಮೊದಲಾದ ಸ್ತ್ರೀಯರೂ ಇದ್ದರು. ಹಿರಿಕಿರಿಯರನ್ನು ಭೇಟಿಯಾದ. ಸಭಾಗೃಹವನ್ನು ಪ್ರವೇಶಿಸಿದರು. ಅಲ್ಲಿ ಶಕುನಿ ದ್ಯೂತಕ್ಕೆ ಆಹ್ವಾನವಿತ್ತ.

ಯುಧಿಷ್ಠಿರನ ಪ್ರತಿಜ್ಞೆ ಅವನನ್ನು ಕಟ್ಟಿಹಾಕಿತು. ಮೋಸದ ದ್ಯೋತ ನಡೆಯಿತು. ಶಕುನಿಯ ದಾಳಕ್ಕೆ ಒಂದೊಂದಾಗಿ ಕಳೆದುಕೊಳ್ಳುತ್ತಾ ಹೋದ ಯುಧಿಷ್ಠಿರ. ಧನಸಂಪತ್ತು, ರತ್ನಗಳು, ರಥಗಳು, ಆನೆ-ಕುದುರೆಗಳು, ದಾಸ-ದಾಸಿಯರನ್ನು ಪಣಕ್ಕಿಟ್ಟು ಸೋತ. ಮೋಸದ ದ್ಯೋತವನ್ನು ನೋಡಿ ವಿದುರನಿಗೆ ಸುಮ್ಮನಿರಲಾಗಲಿಲ್ಲ.

“ಮಹಾರಾಜ, ನಾನು ಹೇಳುವುದನ್ನು ಕೇಳು. ಇದು ನಿನಗೆ ಇಷ್ಟವಾಗುವುದಿಲ್ಲ ಎಂದು ಗೊತ್ತಿದೆ. ಆದರೂ ಹೇಳುತ್ತಿದ್ದೇನೆ. ಸಾವು ಸಮೀಪಿಸಿದಾಗ ಔಷಧ ಬೇಡವೆನಿಸುತ್ತದೆ. ಈ ಪಾಪಿ ದುರ್ಯೋಧನ ಹುಟ್ಟಿದೊಡನೆ ನರಿಯಂತೆ ವಿಕಾರವಾಗಿ ಅರಚಿದ್ದ. ಇದು ಕುಲನಾಶದ ಕುರುಹು ಎಂದು ಆಗಲೇ ತಿಳಿದವರು ಹೇಳಿದ್ದರು. ಅವನೀಗ ಮೃತ್ಯುವಾಗಿ ಪರಿಣಮಿಸಿದ್ದಾನೆ. ನರಿ ದುರ್ಯೋಧನನ ರೂಪದಲ್ಲಿ ಮನೆಯಲ್ಲೇ ಇದೆ. ಅದು ನಿನಗೆ ತಿಳಿದಿದೆ. ಆದರೂ ತಿಳಿಯದಂತೆ ಇರುವೆ. ಶುಕ್ರಾಚಾರ್ಯರ ಮಾತೊಂದನ್ನು ಕೇಳು: ಜೇನು ಕೀಳಲೆಂದು ಮರವೇರುವವ ಕೆಳಗಿನ ಪ್ರಪಾತವನ್ನು ನೋಡುವುದಿಲ್ಲ. ಏರಿದ ಮೇಲೆ ಬಿದ್ದು ಮುಳುಗುವುದಷ್ಟೇ ಉಳಿಯುವುದು. ಇವನೂ ದ್ಯೂತದ ಮತ್ತಿನಲ್ಲಿದ್ದಾನೆ. ಪ್ರಪಾತ ಇವನಿಗೆ ಕಾಣುತ್ತಿಲ್ಲ. ಈ ಮಹಾರಥರೊಂದಿಗೆ ವೈರ ಬೆಳೆಸುತ್ತಿದ್ದಾನೆ. ಕಂಸ ಸಮಂಜಸವಾಗಿ ಇರಲಿಲ್ಲ. ಅಂಧಕರು, ಯಾದವರು, ಭೋಜರು ಎಲ್ಲರೂ ಸೇರಿ ತಮ್ಮವನೇ ಆದರೂ ಅವನನ್ನು ತ್ಯಜಿಸಿದರು. ಇದು ನಿನಗೆ ಗೊತ್ತಿರುವ ವಿಷಯವೇ. ಕೃಷ್ಣ ಅವನನ್ನು ಕೊಂದ ಅನಂತರ ಅವರೆಲ್ಲ ಸುಖವಾಗಿದ್ದಾರೆ. ಕಾಗೆಯನ್ನು ಕೊಟ್ಟು ನವಿಲುಗಳನ್ನು ಕೊಂಡುಕೋ. ನರಿಯನ್ನು ಕೊಟ್ಟು ಹುಲಿಗಳನ್ನು ಕೊಂಡುಕೋ, ಪಾಂಡವರನ್ನು ನಿನ್ನವರನ್ನಾಗಿ ಮಾಡಿಕೋ. ಶೋಕದ ಸಾಗರದಲ್ಲಿ ಮುಳುಗಬೇಡ.ʼʼ

ಇದನ್ನೂ ಓದಿ | Sunday read | ಹೊಸ ಪುಸ್ತಕ | ತಟ್ಟನೆ ಮನಮಂ ಪಸಾಯದಾನ ಕೊಟ್ಟಳು

ʼʼಒಬ್ಬನ ಪರಿತ್ಯಾಗದಿಂದ ಕುಲ ಉಳಿಯುವುದಾದರೆ ಅವನನ್ನು ಬಿಟ್ಟುಬಿಡಬೇಕು. ಒಂದು ಕುಲವನ್ನು ಕೈಬಿಟ್ಟಾಗ ಊರು ಉಳಿಯುತ್ತದೆಯಾದರೆ ಕುಲವನ್ನು ಬಿಡಬೇಕು. ಒಂದು ಗ್ರಾಮದ ತ್ಯಾಗ ರಾಷ್ಟ್ರವನ್ನು ಉಳಿಸುವುದಾದರೆ ಗ್ರಾಮವನ್ನು ಬಿಡಬೇಕು. ಆತ್ರೋದ್ಧಾರವಾಗುವುದಾದರೆ ಪೃಥಿವಿಯನ್ನೇ ಬಿಡಬೇಕು. ಇದು ಶುಕ್ರಾಚಾರ್ಯರ ಮಾತು. ಅವರು ಸರ್ವಜ್ಞರು. ಎಲ್ಲ ಜೀವಿಗಳ ಸ್ವಭಾವವನ್ನು ಬಲ್ಲವರು. ಎಲ್ಲ ಶತ್ರುಗಳಿಗೆ ಭಯ ಹುಟ್ಟಿಸುವವರು. ಜಂಭಾಸುರನನ್ನು ತ್ಯಾಗ ಮಾಡಲು ಅಸುರರಿಗೆ ಹೇಳುವಾಗ ಅವರು ಈ ಮಾತನ್ನು ಹೇಳುತ್ತಾರೆ.ʼʼ

“ಪಾಂಡವರ ಐಶ್ವರ್ಯವನ್ನು ಬಯಸಿ ನೀನು ಹೀಗೆ ಮಾಡಬೇಡ. ನಿತ್ಯ ಬಂಗಾರ ಕೊಡುವ ಪಕ್ಷಿಯನ್ನು ಕೊಂದು ದುಃಖಿಯಾದ ರಾಜನಂತೆ ಆದೀತು ನಿನ್ನ ಅವಸ್ಥೆ. ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ತೋಟಗಾರ ತೋಟದಲ್ಲಿ ಗಿಡಗಳಿಗೆ ದಿನವೂ ನೀರುಣಿಸುತ್ತಾನೆ. ಅರಳಿದಂತೆಲ್ಲ ಹೂವನ್ನು ಗಿಡದಿಂದ ಬಿಡಿಸಿಕೊಳ್ಳುತ್ತಾನೆ. ಹಾಗೆ ಪಾಂಡವರನ್ನು ನೋಡಿಕೋ. ಅವರಿಂದ ಸಿಗುವುದನ್ನು ಪಡೆದುಕೋ. ಇದ್ದಿಲು ಮಾಡುವವ ಬುಡದೊಂದಿಗೆ ಮರವನ್ನು ಸುಡುವಂತೆ ಈ ಪಾಂಡವರನ್ನು ಸುಡಲು ಹೋಗಬೇಡ. ಮಕ್ಕಳು, ಮಂತ್ರಿಗಳು, ಸೈನ್ಯದೊಂದಿಗೆ ಸೋಲನ್ನು ಕಾಣಬೇಕಾಗುತ್ತದೆ. ಒಂದಾಗಿ ನಿಂತ ಪಾಂಡವರನ್ನು ಸಮರದಲ್ಲಿ ಎದುರಿಸುವವರು ಯಾರಿದ್ದಾರೆ? ದೇವತೆಗಳೊಂದಿಗೆ ದೇವರಾಜನೇ ಬಂದರೂ ಅವನಿಗೆ ಸೋಲು ನಿಶ್ಚಿತ.ʼʼ

ʼʼದ್ಯೂತ ಕಲಹಕ್ಕೆ ಕಾರಣ. ಪರಸ್ಪರರಲ್ಲಿ ವಿರೋಧವನ್ನು ಹುಟ್ಟಿಸುತ್ತದೆ. ಅದು ದೊಡ್ಡ ಯುದ್ಧಕ್ಕೂ ಎಳೆಯಬಹುದು. ಈ ದುರ್ಯೋಧನ ದೊಡ್ಡ ವೈರವನ್ನೇ ಸೃಷ್ಟಿಸುತ್ತಿದ್ದಾನೆ. ಈ ದುರ್ಯೋಧನನ ತಪ್ಪಿನಿಂದಾಗಿ ಪ್ರತೀಪನ ಕವಲಿನವರು, ಶಂತನುವಿನ ಕವಲಿನವರು ಮತ್ತು ಭೀಮಸೇನನ ಕವಲಿನವರು ಬಾಹ್ಲೀಕನ ಕವಲಿನವರೊಂದಿಗೆ ಕಷ್ಟಕ್ಕೆ ಈಡಾಗುತ್ತಾರೆ. ಗೋವು ಸೊಕ್ಕಿನಿಂದ ತಾನೇ ಬಲವಾಗಿ ಕಲ್ಲನ್ನು ಗುದ್ದಿ ಕೊಂಬನ್ನು ಮುರಿದುಕೊಂಡಂತೆ ಈ ದುರ್ಯೋಧನನ ಪರಿಸ್ಥಿತಿ ಆಗಲಿದೆ. ಇವನ ಅಹಂಕಾರ ಈ ರಾಷ್ಟ್ರದಿಂದಲೇ ಕ್ಷೇಮವನ್ನು ಹೊರಹಾಕುತ್ತದೆ. ರಾಜನ್, ವೀರನೂ, ವಿದ್ವಾಂಸನೂ ಆಗಿದ್ದು ಕೂಡಾ ತನ್ನ ಸಾಮರ್ಥ್ಯವನ್ನು ಮರೆತು ಇನ್ನೊಬ್ಬರ ಮಾತು ಕೇಳುವವ ಉಳಿಯಲುಂಟೆ? ಸಣ್ಣ ಬಾಲಕ ನಡೆಸುವ ನೌಕೆಯನ್ನು ಏರಿ ಸಮುದ್ರ ದಾಟಲು ಹೊರಟವನಂತೆ ಆಗುತ್ತದೆ ಅಷ್ಟೆ. ದುರ್ಯೋಧನ ಯುಧಿಷ್ಠಿರನೊಂದಿಗೆ ಆಡುತ್ತಿರುವ ಆಟದಲ್ಲಿ ನೀನು ಗೆಲ್ಲುತ್ತಿರುವೆ ಎನ್ನುವ ಸಂತೋಷದಲ್ಲಿ ಇರುವೆ. ಅತಿಯಾದ ಅಪಹಾಸ್ಯ ಸರಿಯಾದ ಪೆಟ್ಟು ಕೊಡುತ್ತದೆ ಎನ್ನುವುದು ನೆನಪಿರಲಿ, ಇದು ಮನುಷ್ಯ ಕುಲದ ವಿನಾಶಕ್ಕೆ ಕಾರಣವಾದೀತು.ʼʼ

ಇದನ್ನೂ ಓದಿ | Sunday read | ಹೊಸ ಪುಸ್ತಕ | ಸಣ್ಣ ಕಥೆ | ಗಣಪ್ಪ

ʼʼಸಭೆಯಲ್ಲಿರುವ ಪ್ರತೀಪ ಮತ್ತು ಶಂತನುವಿನ ವಂಶದ ಕ್ಷತ್ರಿಯರೇ, ನನ್ನ ಮಾತು ಕೇಳಿ, ಘೋರವಾಗಿ ಉರಿಯುವ ಬೆಂಕಿಯ ಒಳಗೆ ಹೊಗಬೇಡಿ. ಆಗಿರುವುದನ್ನು ಯುದ್ಧವಾಗದಂತೆ ಶಾಂತಗೊಳಿಸಿ, ದ್ಯೂತದಲ್ಲಿ ಮತ್ತನಾದ
ಯುಧಿಷ್ಠಿರ ಕುಪಿತನಾದರೆ, ಭೀಮ-ಅರ್ಜುನ ನಕುಲ-ಸಹದೇವರು ಸಿಟ್ಟಾದರೆ ನಿಮಗೆ ರಕ್ಷಣೆ ಎಲ್ಲಿದೆ? ಮಹಾರಾಜ, ನೀನು ಸಂಪತ್ತಿನ ಗಣಿ. ಮತ್ತೇಕೆ ಈ ದ್ಯೂತದ ಆಸೆ? ಪಾಂಡವರೇ ನಿಧಿ. ಅವರ ಮನಸ್ಸನ್ನು ಗೆಲ್ಲು. ಅವರಿಗಿಂತ ಸಂಪತ್ತು ಬೇರೆ ಬೇಕೇ? ಶಕುನಿಯ ಆಟದ ವಿಧಾನ ನಮಗೆಲ್ಲ ಗೊತ್ತಿದೆ. ಪರ್ವತ ಪ್ರದೇಶದ ಈತ ಮೋಸಗಾರ. ಈ ಮಾಯಾಯುದ್ಧದವ ಎಲ್ಲಿಂದ ಬಂದನೋ ಅಲ್ಲಿಗೇ ಹಿಂದಿರುಗಲಿʼʼ ಎಂದ.

ತುಂಬಿದ ಸಭೆಯಲ್ಲಿ ಪ್ರಭಾವಿ ದುರ್ಯೋಧನ, ಶಕುನಿ, ಧೃತರಾಷ್ಟ್ರರ ತಪ್ಪುಗಳನ್ನು ವಿದುರ ನಿರ್ಭಯವಾಗಿ ಹೇಳಿದ್ದ. ಸತ್ಯ ಹೇಳುವವನಿಗೆ ಯಾವ ಭಯ? ಭಯವಿರಬೇಕಾದ್ದು ಸುಳ್ಳುಗಾರರಿಗೆ. ವಿದುರನ ಮಾತು ದುರ್ಯೋಧನನನ್ನು ಕೆರಳಿಸಿತು. ಕೆರಳಿಸಲೇಬೇಕಲ್ಲ.

ಪುಸ್ತಕ: ವಿದುರ (ಮಹಾಭಾರತದ ನೈಜ ನಾಯಕ)

ಲೇಖಕರು: ಜಗದೀಶ ಶರ್ಮಾ ಸಂಪ

ಪ್ರಕಾಶನ: ಸಾವಣ್ಣ ಪ್ರಕಾಶನ

ಬೆಲೆ: ೨೫೦ ರೂ.

Exit mobile version