| ಜಿ.ಕೆ ನಂದಕುಮಾರ
ನನ್ನೊಳಗೊಬ್ಬ ಕತಿಗಾರದಾನ, ಅವನ್ನ ನಿಮಗ ಪರಚೆ ಮಾಡಸ್ಟೇಬೇಕು. ಈ ಕತಿಗಾರ ಒಂಥರಾ ಮನಷಾ, ಈತನ್ನ ಮಳಿಗಾಲದಾಗೊಮ್ಮೆ ಹರದು ನದಿ ಸೇರೋ ಹಿರೇಹಳ್ಳಕ್ ಹೊಲಸಬೋದು. ದೊಡ್ಡಮಳಿ ಬಂದಾಗ ಹಿರೇ ಹಳ್ಳ ತುಂಬಿ ಹರಕಂತ ತಿರವಿನ್ಯಾಗಿದ್ದ ಹೊಲದಾಗ ಸತ್ತ ಪ್ರಾಣಿಗುಳು, ನೆಂದ್ ಕರ್ರಗಾಗಿರೋ ಕಟಿಗಿ ಬಡ್ಡಿಗಳು, ಯಾರದೋ ಬಟ್ಟಿಗುಳು, ಕೊಳತ ಕೌದಿಗುಳು ನಾನಾ ನಮನಿ ಚಪ್ಪಲಿಗುಳು, ಮಕ್ಕಳ ಆಟದ ಸಾಮಾನುಗಳನ್ನ ಹೊತಗಂಬಂದ್ ಬಿಸಾಕಿ ಅವುಳಿಂದ ನೂರಾರು ಕತಿಗುಳನ್ನ ಕಾಣಸತತಲ್ಲ ಹಂಗ ಈ ಕತಿಗಾರನು ಹಿರೇಹಳ್ಳದಂಗ ನನ್ನೊಳಗ ಆಗಾಗ ಹರದು ತಿರವಿನ್ಯಾಗಿರೋ ಎರೆಹೊಲದಂತ ನನ್ನ ಎದೆ ಒಳಗ ಕತಿಗಳನ್ನ ಒಸ್ತು ಹೊಕ್ಕಾನ. ಈತ ಯಾವಾಗ ಬಂದ್ ಯಾ ಕತಿ ಹೇಳ್ತಾನ ಅನ್ನೋದ ಗೊತ್ತಾಗೋದುಲ್ಲ. ಆದರ ಈತ ನನ್ನ ನಗಸಿ, ಅಳಸಿ, ನಿದ್ದೆಗೆಡಿಸಿ ಹೇಳಿದ ಕತಿಗಳು ನನಗ ಆಗಾಗ ಭಾಳ ಕಾಡತಾವು, ಅಂಥಾ ಕತಿಗುಳಾಗ ನನ್ನ ನಿದ್ದೆ ಗೆಡಿಸಿದ ಗಣಪ್ಪನ ಕತಿ ನಿಮಗ ಹೇಳೀನಿ.
ಅದು ಹೂನ್ನೆರುಗು ಅನ್ನೋ ಹಳ್ಳಿ, ಆ ಹಳ್ಳಾಗ ಜಾತಿಗೊಂದೊಂದ್ ಓಣಿ ಇದ್ರ ಈ ಊರಿನ ಹೊರಗ ಒಂದ್ಕೇರಿ ಇತ್ತು. ಅದರಾಗೊಂದಿಷ್ಟು ಮನಿಗುಳು, ಆ ಮನಿಗಳೊಳಗಿನ ಒಂದ ಮನ್ಯಾಗ ಒಬ್ಬ ಜೋಗವ್ವ, ಅಕಿ ಮಗಳು ಬಸವಿ, ಬಸವಿ ಮಗ ದುರಗ ಇದ್ರು. ಜೋಗವ್ವ ದೇವ್ರ ಹೊತ್ತಾಕಿ ಲಗ್ನಾಗಿದ್ದಿಲ್ಲ. ಆದೂ ಅಕೀಗೆ ಒಬ್ಬ ಮಗಳಿದ್ದು, ಆ ಮಗಳಿಗೆ ಮುತ್ತು ಕಟ್ಟಿಸಿ ಹೊಸಪೇಟೆ ಟ್ರೇನಿಗೆ ಅಡ್ಯಾಡಸಾಕ ಹಚ್ಚಿದ್ರ, ಅಕಿ ಹೊಟ್ಟೆ ತುಂಬಿಸ್ಕಂಡ್ ಬಂದ್ ತ್ರಾಸಿನ್ಯಾಗ ಮಗನ್ನ ಹಡದರ ಮಗನ ತಲೀ ಸರೀಗೆ ಬೆಳೆದಿದ್ದಿಲ್ಲ ಪಾಪ.
ಆತ ಬೆಳದ್ ಇಪ್ಪತ್ತ್ ವರಸಾದವಾರೂ ಸಣ್ ಹುಡ್ರ ಬುದ್ದಿ ಇತ್ತು ಆತಗ, ಭಾಳ ವಿಚಾರ ಮಾಡ್ತಿದ್ದಿಲ್ಲ, ಹೇಳಿದ ಕೆಲಸ ಸುಮ್ಮ ಮಾಡತಿದ್ದ. ದುಡ್ಯಾಕತ್ರ ಯಾರರ ಬಂದ್ ಸಾಕನ್ನೋಮಟ ಕತ್ತಿ ದುಡದಂಗ ದುಡ್ಯನು. ತಿನ್ನಾಕತ್ರ ಸಾಕಲೇ! ಅನ್ನೋಮಟ ದನಾ ತಿಂದಂಗ ತಿನ್ನೋನು. ಇನ್ನ ಮಲಗಿದ್ರ ಹಂದಿಗತೆ ಗೊರಕಿ ಹೊಡಿಯನು. ಜೋಗವ್ವ ಬಿಕ್ಷಾಕ ಹೋದ್ರ ಲಾಡಿ ಕಾಣೋ ಖಾಕಿ ಚಡ್ಡಿ ಆಕಾಶ್ ನೀಲಿ ಬಣ್ಣದ ದೊಡ್ಡಂಗಿ ಹಾಕಿಸಿ ಕರಕಂಡ್ ಹೋಗಕಿ, ಅವರ ಹಿಂದ ಈತನೂ ಒಂದ್ ಗೊಬ್ಬರ ಚೀಲದ ಜೊಳಗಿ ಹಿಡಕಂಡ್ ಬಂದ ಬಿಕ್ಷಾ ತುಂಬಿಸಿಗ್ಯಂತ ಕೊಟ್ಟ ಹಣ್ಣು, ರೊಟ್ಟಿ ತಿನಕಂತ ಇರನು. ಈತಗ ಬಟ್ಟೆ ಅಂದ್ರ ಆಕ್ಕಿದ್ದಿಲ್ಲ. ಕೇರಿ ಒಳಗಿರಕಾರ ಲಾಡಿಲೆ ಕಟ್ಟಿದ ಚಡ್ಡಿ ಮ್ಯಾಗ ಬರೇ ಮೈಲಿರೋನು. ಬಿಸಲು, ದಣುವು, ಮೂಡಗಾಳಿ ಈತನ್ನ ಅಳ್ಳಾಡತಿದ್ದಿಲ್ಲ. ಅಂಗಿ ತೊಡಸಿದ ತಗದ್ ತಗದ ಒಸಿಯನು. ಮತ್ ಜಬರಸಿದ್ರ, ಸುಮ್ಮ ಹಾಕ್ಯಣನು, ಮತ್ ಬ್ಯಾಸರಾದರ ತಗದೊಸಿಯನು. ಮತ್ತೆ ಬಿದ್ ಅಂಗಿ ತಗಂಡ್ ಕೊಡಿವಿ ಬೈದ್ ತೊಡಸರು. ಜೋಗವ್ವ ಈತನ್ನ ಬಿಕ್ಷಾಕ ಕರ್ಕಂಡ ಹೋದಾಗ ಅಂಗಿ ತೊಡಿಸಿ ತೊಡಸೆ ಸುಸ್ತಾಗೋಳು.
ಇದನ್ನೂ ಓದಿ | Sunday read | ಹೊಸ ಪುಸ್ತಕ | ಕಪಿನಪ್ಪನ ಮನೆಯಲ್ಲಿ ಜೋಹಾನ್ ಗ್ರೆಗರ್ ಮೆಂಡಲ್
ಜೋಗವ್ವ ಹಿಂಗ ಒಂದ್ ಶನಿವಾರ ಬಿಕ್ಷಾಕ ಹೋದಾಗ ಆ ಊರಿನ ಯಜಮಾನನ ಮನ್ಯಾಗ ಮದವಿ ಮಾತುಕತಿ ಮುಗಸಿ ಊಟಾಮಾಡಿ ಗಾಳಿಗೆ ಮನಿಹೊರಗಿನ ಕಟ್ಟಿಮ್ಯಾಗ ಕುಂತಿದ್ದು, ಜೊಗವ್ವ ಬಿಕ್ಷಾಕ ಬಂದ್ರ ಆ ಮನಿಯೋರು ಜೋಳಗಿಗೆ ಸೇರ್ ಜ್ವಾಳ ಹಾಕಿ, ಊಟ ಮಾಡಿ ಇಬ್ರು ಅಂದ್ ಅಲ್ಲಿ ಅಂಗಳದಾಗಿರೋ ಗ್ವಾದಲಿ ತಾಕಿರೋ ಕಟ್ಟಿಮ್ಯಾಗ ಕುಂದ್ರಸಿ ಎಲಿ ಹಾಸಿ ಹೋಳಿಗಿ ಬದನಿಕಾಯಿ ಪಲ್ಲೆ ಅನ್ನಾ ಸಾರು ಬಡಿಸಿದರು. ದುರಗ ಕೆತ್ತ ಬಡ್ಯಾಕ, ಊಟಾದಮ್ಯಾಗ ತಾನೂ ಅಂಗಿ ಬಿಚ್ಚಿ ಗ್ವಾದಲ್ಯಾಗ ಅವರಂಗ ಗಾಳಿಗೆ ಕುಂತ. ಜೋಗವ್ವ ಬೈದ್ ಕೆಳಗಿಳಿ ಅನ್ನಕೂ ಮನಿ ಯಜಮಾನ ಇರಲಿ ಬಿಡ ಜೋಗವ್ವ ಪಾಪ ಆತಗ ಬುದ್ದಿಲ್ಲ, ತಿಳಿಸಿ ಹೇಳಿದ್ರು ತಿಳಿಯಲ್ಲ ಕುಂದರ್ಲಿ ಅಂತ ಜೋಗವ್ವಗ ಎಲಿ ಅಡಿಕೆ ಕೊಟ್ಟ ಜೋಗವ್ವ ಒಂದಡಿಕೆ ಕಡದು ತಂಬಾಕಾ ತಿಕ್ಕಿ ಎಲಿ ಹಾಕ್ಯಂಡ್ ಉಳದ ಎರಡಲಿ ದುರಗಗ ಕೊಟ್ರ ಎಲಿ ಅಡಿಕಿ ನೋಡದನ ರೊಟ್ಟಿ ಹರಕಂಡಂಗ ಹರಕಂಡ್ ತಿನ್ನಾಕತ್ತ. ಯಜಮಾನನ ಮನಿಗೆ ಬಂದ ಬೀಗರು ಇದನ್ನ ಗಾಭಾಗಿ ನೋಡಿ ಸುಮ್ಮನಾದರು. ಜೋಗವ್ವ ಎಷ್ಟು ಕರದರು ಕೇಳದ ಎಲಿ ತಿಂದ್ ತೇಗಿ ಮನಿ ಯಜಮಾನನಂಗ ಗ್ವಾದಲಿ ತಾಕಿರೋ ಕಟ್ಟಿ ಮ್ಯಾಗ ಅಂಗಾತ ಮಕ್ಕಂಡ. ಎಷ್ಟೇ ಎಬಸಿದ್ರು ಏಳೆ ಇಲ್ಲ, ಜೋಗವ್ವ ಸಿಟ್ಟಿಗೆದ್ ಮುಂದಿನ ಮನಿಗುಳಿಗೆ ಹೋದ್ಲು, ದುರಗ ಅಲ್ಲಿ ಅಂಗಾತ ಮಲಗಿದ್ದ. ಈತಗ ಊರಾಗ ಸ್ವಾತಂತ್ರ ಇತ್ತು ಹಂಗಾಗೆ ಎಲ್ಲರ ಮಲಗಿದ್ರು ಯಾರು ಎಬಸ್ತಿದ್ದಿಲ್ಲ. ಎಚ್ಚರಾದಾಗ ಎದ್ದೋಕ್ಕಾನ ಜೋಗವ್ವ ಇಲ್ಲ ಬಸಿವಿ ಹುಡಕ್ಯಂಬಂದ್ ಎಬಿಸಿ ಕರಕಂಡ್ ಹೊಕ್ಕಾರ ಅಂತ.
ಆ ಮನಿಯೋರು ಇದಕ್ಕೆ ತಲಿ ಕೆಡಸಗಳದ ತಮ್ ಪಾಡಿಗೆ ತಾವು ಮಾತಾಡಾಕತ್ತು, ಎರಡೂರಿನ ಮನಿತನಗುಳು ಅಪರೂಪಕ್ ಕಲ್ತಿದ್ವಲ್ಲ. ಮಾತಾಡಿದ್ದ ಆಡಿದ್ದು, ಮಾತಾಡಕ್ಕಂತ ಮಳಿ ಬಗ್ಗೆ ಮಾತ್ ಬಂದ್ ಮಳಿಯಿಂದ ಹೊನ್ಸೆರಗು ಹೊರಗೆ ಚಂದಂಗ ಹರಿಯೋ ಹಿರೇಹಳ್ಳದ ಮಾತ್ ಬಂದಾಗ, ʻಹಿರೇಹಳ್ಳಾ’ ಅನ್ನೋ ಶಬ್ದ ಕೇಳಿ ದುರಗ ಎದ್ ಕುಂತ. ದುರಗಗ ಹಿರೇ ಹಳ್ಳಂದ್ರ ಭಾಳ ಪ್ರೀತಿ, ಮಳಿಗಾಲದಾಗ ತುಂಬಿ ಹರದು ಸಣ್ಣ ಸಣ್ಣ ಗುಂಡಿಗಳಾಗ ಉಳದ ನಿಂತ ನೀರಾಗ ಆಡೋದಂದ್ರ ದುರಗಗ ಭಾಳ ಇಷ್ಟಾ. ಆದರ ಯಾಲ್ಡ್ ವರಸದಿಂದ ಮಳಿ ಬರದ ಅದು ಕನಸಾಗಿತ್ತು.
ಇದನ್ನೂ ಓದಿ | Sunday Read | ಹೊಸ ಪುಸ್ತಕ | ಬೊಂಬಾಯ್ ಮಿಠಾಯಿ ಮಾಮ
ಕೃತಿ: ಬಿಳೆ ದಾಸ್ವಾಳ (ಮತ್ ಇನ್ನಷ್ಟು ಕತಿಗುಳು)
ಲೇಖಕರು: ಜಿ.ಕೆ ನಂದಕುಮಾರ್
ಪ್ರಕಾಶನ: ಸಪ್ನಾ ಬುಕ್ ಹೌಸ್