:: ಎಚ್.ಎಸ್ ವೆಂಕಟೇಶಮೂರ್ತಿ
ನಮ್ಮ ಮನೆಯಲ್ಲಿ ನನ್ನನ್ನು ಬಿಟ್ಟರೆ ಅಕ್ಷರಗಳ ಒಡನಾಟ ಇದ್ದವರು ನನ್ನ ತಾಯಿ ಮಾತ್ರ. ನಮ್ಮ ಅಜ್ಜ ಭೀಮರಾಯರು ಗೊಪ್ಪೇನಹಳ್ಳಿಯಲ್ಲಿ ಶಾನುಭೋಗ ರಾಗಿದ್ದರು. ಶಾಲೆಯಲ್ಲಿ ಓದಿರದಿದ್ದರೂ ಕನ್ನಡವನ್ನು ಸ್ಫುಟವಾಗಿ ಬರೆಯುತ್ತಿದ್ದರು. ಅವರಿಗೆ ಇಂಗ್ಲಿಷ್ ಅಕ್ಷರಗಳ ಪರಿಚಯವಿರಲಿಲ್ಲ. ಸಹಿ ಮಾಡಲು ಎಷ್ಟು ಬೇಕೋ ಅಷ್ಟು ಅಕ್ಷರಗಳು ಮಾತ್ರ ಅವರಿಗೆ ಗೊತ್ತಿದ್ದವು. ಇನ್ನು ನಮ್ಮ ದೊಡ್ಡಜ್ಜಿ ಭೀಮಕ್ಕನದು ದುರಂತದ ಕಥೆ! ಪ್ರೈಮರಿ ಶಾಲೆಯಲ್ಲಿ ನಾಲ್ಕನೆಯ ತರಗತಿಯವರೆಗೆ ಓದಿದ್ದ ಆಕೆ ಅಕ್ಷರ ಬಲ್ಲವರಾಗಿದ್ದರು. ಅಕ್ಷರಗಳನ್ನು ಜೋಡಿಸಿಕೊಂಡು ಗ್ರಂಥಗಳನ್ನು ಓದುವುದರಲ್ಲಿ ಪರಿಣತರಾಗಿದ್ದರು. ತುಂಬಾ ಚೆಲುವೆಯಾಗಿದ್ದ ಆಕೆಗೆ ಹದಿನಾರನೇ ವಯಸ್ಸಿಗೇ ಗಂಡ ತೀರಿಹೋದರು. ಆಗ ಭೀಮಜ್ಜಿಯ ತಂದೆ ಆಕೆಯಿಂದ ಒಂದು ಪ್ರಮಾಣ ಮಾಡಿಸಿದರು. ಅವಳು ಓದಬಹುದು ಆದರೆ ಅಕ್ಷರಗಳನ್ನು ಮಾತ್ರ ಬರೆಯಬಾರದು ಎನ್ನುವ ಪ್ರಮಾಣ ಅದಾಗಿತ್ತು. ಹೀಗೆ ಭೀಮಕ್ಕ ನಿರಕ್ಷರಿಯಾಗಿ, ಆದರೆ ಸಾಹಿತ್ಯದ ಓದನ್ನು ನಡೆಸಿಕೊಂಡು ಬಂದ ಹೆಣ್ಣುಮಗಳು! ಭೀಮಜ್ಜಿಯ ತಂಗಿ ಸೀತಜ್ಜಿ ಶಾಲೆಯ ಮುಖವನ್ನೇ ನೋಡಿದವರಲ್ಲ. ಅವರದ್ದು ಒಂದೇ ಅಕ್ಷರ; ಅದು ಹೆಬ್ಬೆಟ್ಟಿನ ಗುರುತು! ಮೇಲ್ವರ್ಗ ಎಂದು ಕರೆಸಿಕೊಳ್ಳುವ ಜನರ ಮನೆಯಲ್ಲೂ ಹೆಣ್ಣುಮಕ್ಕಳ ಪರಿಸ್ಥಿತಿ ಹೀಗಿತ್ತು!
ನಮ್ಮ ಅಜ್ಜ ತುಂಬಾ ಸಾತ್ವಿಕ ಮನುಷ್ಯ. ಅವರಿಗೆ ಕಿವಿ ಏನೇನೂ ಕೇಳುತ್ತಿರಲಿಲ್ಲ. ನನ್ನನ್ನು ಅವರು ಕೈಹಿಡಿದು ಸಂತೆಗೆ ಕರೆದೊಯ್ಯುತ್ತಿದ್ದರು. ಸಂತೆಯಲ್ಲಿ ಅವರ ಪರಿಚಿತರು ಮುಂದೆ ವಿನಯದಿಂದ ನಗುತ್ತ ಮಾತಾಡಿದರೂ ಹಿಂದಿನಿಂದ ಅವರನ್ನು ಹಾಸ್ಯ ಮಾಡಿ ನಗುತ್ತಿದ್ದರು. ಇದರಿಂದ ನನಗೆ ತುಂಬಾ ಬೇಸರವಾಗುತ್ತಿತ್ತು. ಶಾನುಭೋಗರಾಗಿದ್ದ ಭೀಮಜ್ಜನಿಗೆ ವರ್ಷಕ್ಕೆ ನೂರು ರೂಪಾಯಿ ಪೋಟಿಗೆ ಬರುತ್ತಿತ್ತು. ಆ ನೂರು ರೂಪಾಯಿ ಇಡೀ ವರ್ಷದ ಖರ್ಚಿಗೆ! ಅಂದರೆ ನಮ್ಮ ಮನೆಯ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಊಹಿಸಬಹುದು. ಇದು ನಮ್ಮ ಮನೆಯ ಪರಿಸ್ಥಿತಿ ಮಾತ್ರವಲ್ಲ; ನಮ್ಮ ಕೇರಿಯ ನಮ್ಮ ಜಾತಿಯವರ ಮನೆಗಳೆಲ್ಲ ಹೀಗೇ ಕಷ್ಟದ ಬದುಕನ್ನು ನಡೆಸುತ್ತಿದ್ದವು. `ಬಾಯಿತುಂಬ ಅನ್ನ, ಹೊಟ್ಟೆತುಂಬ ಮುದ್ದೆ’ ಎನ್ನುವುದು ಆಗ ರೂಢಿಯ ಮಾತಾಗಿತ್ತು. ನಮ್ಮ ಅಜ್ಜ ವಾರಕ್ಕೊಮ್ಮೆ ಹಳ್ಳಿಗೆ ಹೋಗಿ ರೈತರೊಂದಿಗೆ ವ್ಯವಹಾರ ಮಾಡಿಕೊಂಡು ಬರುತ್ತಿದ್ದರು. ಕಂದಾಯ ವಸೂಲು ಮಾಡುತ್ತಿದ್ದರು. ವರ್ಷದ ಕೊನೆಯಲ್ಲಿ ಜಮಾಬಂದಿಯಲ್ಲಿ ತಾಲ್ಲೂಕು ಧಣಿಗಳಿಗೆ ಲೆಕ್ಕ ಒಪ್ಪಿಸುತ್ತಿದ್ದರು. ನಮ್ಮ ಅಜ್ಜ ಹಳ್ಳಿಗೆ ಹೋದಾಗ ಏನನ್ನಾದರೂ ರೈತರಿಂದ ಪಡೆದುಕೊಂಡು ಬರುತ್ತಿದ್ದರು. ಕೆಲವೊಮ್ಮೆ ಭಾರೀಗಾತ್ರದ ಹಲಸಿನಹಣ್ಣು ಅವರ ಹೆಗಲಮೇಲೆ! ಹಲಸಿನಹಣ್ಣು ತಂದ ದಿನ ಅಜ್ಜ ಹೊರಬಾಗಿಲಿನಿಂದಲೇ ನನ್ನನ್ನು ಕೂಗಿ ಕರೆಯುತ್ತಿದ್ದರು. “ಏಯ್ ಪುಟ್ಟಾ ಬಾರೋ. ಮುಳ್ಳುಹಂದಿ ತಂದಿದ್ದೇನೆ” ಎನ್ನುತ್ತಿದ್ದರು. ಹಲಸಿನಹಣ್ಣು ಘಮ್ಮೆಂದು ವಾಸನೆ ಬಂದಾಗ ಮುಂಬಾಗಿಲು ಮುಚ್ಚಿ ಹಲಸಿನಹಣ್ಣು ಹಣ್ಣು ಕುಯ್ಯುವ ಕೆಲಸ ಪ್ರಾರಂಭವಾಗುತ್ತಿತ್ತು. ಕೈಗೆಲ್ಲ ಎಣ್ಣೆ ಹಚ್ಚಿಕೊಂಡು ಅಜ್ಜ ಹಲಸಿನಹಣ್ಣು ಬಿಡಿಸುತ್ತಿದ್ದರು. ಹಣ್ಣು ಬಿಡಿಸುವಾಗ ಅರ್ಧಕ್ಕರ್ಧ ಅವರೇ ನುಂಗುತ್ತಿದ್ದರು. ಅದರ ಪರಿಣಾಮ ಮಾರನೆಯ ದಿನ ಸಂಡಾಸಿಗೂ ಮನೆಗೂ ಅವರ ನಿರಂತರ ಓಡಾಟ! ಹಿತ್ತಲಲ್ಲಿ ಹಾಸಿದ ಅವರ ಒದ್ದೆಪಂಚೆ!
ನಮ್ಮ ಅಜ್ಜನಿಗೆ ನನ್ನನ್ನು ಕಂಡರೆ ಬಹಳ ಪ್ರೀತಿ. ಹೊರಗೆ ಹೋಗುವಾಗ ನನ್ನನ್ನು ಮುದ್ದು ಮಾಡಿ ಕೆನ್ನೆ ಕಚ್ಚದೇ ಹೋಗುತ್ತಿರಲಿಲ್ಲ. ಹೀಗೆ ಪ್ರೀತಿಯಿಂದ ನನ್ನನ್ನು ಬೆಳಸಿದ ಅಜ್ಜನಿಗೆ ಅರ್ಧವಯಸ್ಸಿನಲ್ಲಿಯೇ ಬರಬಾರದ ಕಾಯಿಲೆ ಬಂತು. ದಿನೇದಿನೇ ಅವರ ಹೊಟ್ಟೆ ಗುಡಾಣದಂತೆ ಉಬ್ಬತೊಡಗಿತು. ಎದೆಯಿಂದ ಕಿಬ್ಬೊಟ್ಟೆಯ ವರೆಗೆ ಏಕಪ್ರಕಾರವಾಗಿ ಉಬ್ಬುತ್ತಿದ್ದ ಹೊಟ್ಟೆ! ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಊಟ, ವಿಸರ್ಜನ ಕಾರ್ಯಗಳನ್ನೂ ನಿಂತುಕೊಂಡೇ ಮಾಡಬೇಕಾಗುತ್ತಿತ್ತು. ನಮ್ಮ ಅಜ್ಜಿಗೆ ತುಂಬಾ ಭಯವಾಯಿತು. ಅವರನ್ನು ಕರೆದುಕೊಂಡು ನನ್ನ ಚಿಕ್ಕಜ್ಜಿ ಇದ್ದ ಕೂನಬೇವು ಎನ್ನುವ ಊರಿಗೆ ಹೋದರು. ಅಲ್ಲಿ ಗೋವಿಂದದಾಸ್ ಎನ್ನುವ ಆಯುರ್ವೇದ ವೈದ್ಯರಿದ್ದರು. ಸುಮಾರು ಎರಡು ತಿಂಗಳು ಔಷಧೋಪಚಾರ ಪಡೆದರೂ ಅಜ್ಜನ ಆರೋಗ್ಯ ಸುಧಾರಿಸಲಿಲ್ಲ. ನಿರಾಸೆಯಿಂದ ಅಜ್ಜಿ ಅವರನ್ನು ಊರಿಗೆ ಕರೆತಂದರು. ನಮ್ಮ ಊರಿಗೆ ಹತ್ತಿರವಿದ್ದ ಹೊಳಲ್ಕೆರೆಯಲ್ಲಿ ಒಂದು ಪುಟ್ಟ ಬಾಡಿಗೆಮನೆ ಹಿಡಿದು ಅಜ್ಜನಿಗೆ ಹೋಮಿಯೋಪತಿ ವೈದ್ಯರಿಂದ ಚಿಕಿತ್ಸೆ ನೀಡಲು ಆರಂಭಿಸಿದರು. ಆ ವೈದ್ಯರು ಗುಳಿಗೆ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದರು. ಅಲ್ಲೇ ಓದುತ್ತಿದ್ದ ನಾನು ಅಜ್ಜ-ಅಜ್ಜಿಯರೊಂದಿಗೇ ಇದ್ದೆ. ಅವು ನಮ್ಮ ಜೀವನದಲ್ಲಿ ಬಹಳ ಕಷ್ಟದ ದಿನಗಳು. ಅಜ್ಜ ಬ್ರೆಡ್ ಮಾತ್ರ ತಿನ್ನುತ್ತಿದ್ದರು. ಬ್ರೆಡ್ಡಿನ ಚೂರುಗಳು ನನಗೆ ಸಿಗುತ್ತಿದ್ದವು. ದಿನಕ್ಕೆ ಒಂದು ಮೋಸಂಬಿ ಹಣ್ಣನ್ನು ಮಾತ್ರ ಅವರಿಗೆ ಕೊಡುತ್ತಿದ್ದೆವು. ಸಿಹಿಯಾದ ಹಣ್ಣನ್ನು ಆರಿಸುವುದರಲ್ಲಿ ನಾನು ಪರಿಣತನಾದೆ. ಆ ಕಾಲದಲ್ಲಿ ಎಂಟಾಣೆಗೆ ಒಂದು ಹಣ್ಣು!
ಅಜ್ಜನ ಆರೋಗ್ಯ ದಿನೇದಿನೇ ವಿಷಮಿಸತೊಡಗಿತು. ವೈದ್ಯರು ಕೈಚೆಲ್ಲಿದರು. ಅಜ್ಜನನ್ನು ಎತ್ತಿನಗಾಡಿ ಮಾಡಿಕೊಂಡು ಊರಿಗೆ ಕರೆದುಕೊಂಡು ಹೋದರು. ಇಷ್ಟರ ಮಧ್ಯೆ ನಮ್ಮ ಅಜ್ಜಿಗೆ ತಾನು ಬಸುರಿ ಎನ್ನುವ ಭ್ರಮೆ ಶುರುವಾಯಿತು. ವಯಸ್ಸಾದವರನ್ನು ಮನೆಗೆ ಕರೆಸಿಕೊಂಡು “ನಾನು ಗರ್ಭಿಣಿಯಾಗಿದ್ದೇನೆಯೇ?” ಎಂದು ಅವರನ್ನು ವಿಚಾರಿಸುತ್ತಿದ್ದರು. ಹೀಗೆ ಕೆಲವು ದಿನ ಕಳೆಯುವುದರಲ್ಲಿ ಅಜ್ಜ ತಮ್ಮ ಕೊನೆಯ ಉಸಿರೆಳೆದರು. ಹೈಸ್ಕೂಲಲ್ಲಿ ಓದುತ್ತಿದ್ದ ನಾನು ಅವರನ್ನು ನೋಡುವುದಕ್ಕೆ ಹಳ್ಳಿಗೆ ಹೋದೆ. ಆ ಚಿತ್ರ ಇನ್ನೂ ಕಣ್ಣಿಗೆ ಕಟ್ಟಿದೆ. ಉಬ್ಬು ಹೊಟ್ಟೆಯ ಅಜ್ಜ ಬುಗುಟು ಮಂಚದ ಮೇಲೆ ನೀಳವಾಗಿ ಕಾಲುಚಾಚಿ ಮಲಗಿದ್ದರು. ಅವರ ಅರ್ಧ ಮುಚ್ಚಿದ ಕಣ್ಣು ಭಯ ಹುಟ್ಟಿಸುವಂತಿತ್ತು. ಅವರನ್ನು ನೋಡಿ ನಾನು ದೂರದಲ್ಲೇ ನಿಂತು ಕಣ್ಣೀರುಗರೆದೆ. ಹೀಗೆ ನಮ್ಮ ಅಜ್ಜನ ಕತೆ ಮುಗಿಯಿತು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಮೊದಲ ಸಹಸ್ರಮಾನದ ಕನ್ನಡ ಶಾಸನಗಳು
ನಮ್ಮ ಅಜ್ಜಿಯ ಬಸುರಿನ ಹುಚ್ಚು ಜಾಸ್ತಿಯಾಗುತ್ತಲೇ ಇತ್ತು. ತಿಂಗಳಾದ ಮೇಲೆ ಅವರನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಿದಾಗ “ಹೊಟ್ಟೆಯಲ್ಲಿರುವುದು ಕೂಸಲ್ಲ. ಬರೀ ಗಾಳಿ” ಎಂದು ಅವರು ತೀರ್ಪುಕೊಟ್ಟರು. ಇದು ನಮ್ಮ ಅಜ್ಜಿಗೆ ದೊಡ್ಡ ಆಘಾತ! ಊರಿಗೆ ಹಿಂದಿರುಗಿದ ಮೇಲೆ ಅವರಿಗೆ ಒಂದು ವಿಚಿತ್ರವಾದ ಕಾಯಿಲೆ ಆರಂಭವಾಯಿತು. ಕುಳಿತಲ್ಲೇ ಗಂಟೆಗಟ್ಟಲೆ ಹಿಂದಕ್ಕೆ ಮುಂದಕ್ಕೆ ಮೈ ತೂಗುವ ಕಾಯಿಲೆ! “ಇದು ಕಾಯಿಲೆಯಲ್ಲ ದೆವ್ವದ ಕಾಟ” ಎಂದು ನಮ್ಮ ಊರಿನ ಹಿರಿಯರು ಹೇಳಿದರು. ಬೇಕಾದಷ್ಟು ಮಂತ್ರ-ಮಾಟಗಳನ್ನು ಮಾಡಿಸಲಾಯಿತು. ಆದರೆ ಅಜ್ಜಿಯ ಮೈತೂಗು ಕಡಿಮೆಯಾಗಲಿಲ್ಲ. ಅವರಿಗೆ ಪ್ರಜ್ಞೆ ಚೆನ್ನಾಗಿಯೇ ಇರುತ್ತಿತ್ತು. ಆದರೆ ಒಂದೇ ಸಮನೆ ಹಿಂದೆ ಮುಂದೆ ತೂಗುತ್ತಿದ್ದರು. ನಮ್ಮ ಊರಿನ ಮಂತ್ರವಾದಿ ದೊಣ್ಣೆಬಸಣ್ಣ! ಆತನ ಗಾತ್ರವನ್ನು ನೋಡಿಯೇ ಆ ಹೆಸರನ್ನು ಯಾರೋ ಅವನಿಗೆ ಇಟ್ಟಿರಬೇಕು! ಬಸಣ್ಣ ಬಂದು ಮಂತ್ರಿಸಿ, ಕೋಳಿ ಬಲಿಕೊಟ್ಟು “ಇನ್ನು ದೆವ್ವ ಈ ಕಡೆ ಬರುವುದಿಲ್ಲ” ಎಂದು ಹೇಳಿಹೋದ. ಹೋದದ್ದು ಬಸಣ್ಣ ಮಾತ್ರ; ದೆವ್ವ ಶಾಶ್ವತವಾಗಿ ನಮ್ಮ ಮನೆಯಲ್ಲಿಯೇ ಉಳಿದುಕೊಂಡಿತು. ನಮ್ಮ ಊರಿನ ಹತ್ತಿರ ಉಕ್ಕಡಗಾತ್ರಿ ಎನ್ನುವ ಪ್ರಸಿದ್ಧ ಸ್ಥಳವಿದೆ. ಅಲ್ಲಿ ಅಜ್ಜಯ್ಯ ಎನ್ನುವವರ ಸಮಾಧಿಯಿದೆ. ಅದು ದೆವ್ವಗಳನ್ನು ಓಡಿಸುವ ತಾಣ. ಅಜ್ಜಿಯನ್ನು ಅಲ್ಲಿಗೆ ಕರೆದುಕೊಂಡು ಹೋದೆವು. ಹೈಸ್ಕೂಲು ಎರಡನೇ ವರ್ಷದ ಪರೀಕ್ಷೆ ಮುಗಿದಿತ್ತಾದ್ದರಿಂದ ನಾನೂ ಅವರ ಜತೆ ಉಕ್ಕಡಗಾತ್ರಿಗೆ ಹೋದೆ. ನದಿಯಲ್ಲಿ ಸ್ನಾನ ಮಾಡಿದ ಕೂಡಲೇ ಅಜ್ಜಿಯ ರಂಪಾಟ ಶುರುವಾಯಿತು. ಅವರನ್ನು ಹೇಗೋ ಹಿಡಿದುಕೊಂಡು ಅಜ್ಜಯ್ಯನ ಸಮಾಧಿಯ ಬಳಿ ಕರೆದುಕೊಂಡು ಹೋದೆವು. ಸಮಾಧಿಯ ಬಳಿ ದೊಡ್ಡ ಪ್ರಾಂಗಣ; ಅಲ್ಲಿ ಹತ್ತಾರು ಜನ ದೆವ್ವ ಹಿಡಿದವರು ನಾನಾ ರೀತಿಯಲ್ಲಿ ಆರ್ಭಟ ಮಾಡುತ್ತ ನೋಡುಗರಿಗೆ ದಿಗಿಲು ಹುಟ್ಟಿಸುತ್ತಿದ್ದರು. ಬರೀ ಮೈತೂಗುತ್ತಿದ್ದ ನಮ್ಮ ಅಜ್ಜಿ ಅಲ್ಲಿ ಮಾತಾಡಲು ಪ್ರಾರಂಭ ಮಾಡಿದರು. “ನಾನು ಇವಳ ಚಿಕ್ಕಮ್ಮ ಪದ್ದಮ್ಮ. ಮಗುವನ್ನು ಹೆತ್ತು ನಾನು ತೀರಿಕೊಂಡೆ. ಆ ಮಗುವಿಗೆ ಇವಳು ಹಾಲು ಕೊಟ್ಟು ಸಾಕಿದಳು. ಆಮೇಲೆ ಮಗು ತೀರಿಕೊಂಡಿತು. ಹಾಗಾಗಿ ಇವಳ ಬಗ್ಗೆ ನನಗೆ ಬಹಳ ಪ್ರೀತಿ. ಅದಕ್ಕೇ ನಾನು ಇವಳ ಮೈಯಲ್ಲಿ ಸೇರಿಕೊಂಡಿದ್ದೇನೆ. ಇನ್ನು ಇರುವುದಿಲ್ಲ. ಅಜ್ಜಯ್ಯ ಹೋಗು ಹೋಗು ಎನ್ನುತ್ತಿದ್ದಾರೆ. ನಾನು ಈಗ ಪ್ರೇತಲೋಕಕ್ಕೆ ಹೊರಟೆ” ಇಷ್ಟು ಮಾತಾಡಿ ಅಜ್ಜಿ ಧೊಪ್ಪನೆ ನೆಲದಮೇಲೆ ಬಿದ್ದರು. ಸದ್ಯ ದೆವ್ವದ ಪರಿಹಾರ ಆಯಿತು ಎಂದು ನಾವೆಲ್ಲ ಸಮಾಧಾನ ಪಟ್ಟುಕೊಂಡೆವು.
ಕೃತಿ: ನೆನಪಿನ ಒರತೆ (ಸಾಹಿತ್ಯ ಕೇಂದ್ರಿತ ಆತ್ಮಕತೆ)
ಲೇಖಕ: ಎಚ್ ಎಸ್ ವೆಂಕಟೇಶಮೂರ್ತಿ
ನಿರೂಪಣೆ: ಅಂಜನಾ ಹೆಗಡೆ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 450 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ದಶಕಂಠ ರಾವಣನ ಪುಷ್ಪಕ ವಿಮಾನ