ಸಬಿತಾ ಬನ್ನಾಡಿ ಅವರದು ನಿರ್ಭೀತ ಗದ್ಯ. ಕನ್ನಡ ಚಿಂತನೆಯ ವೈಚಾರಿಕ ತಾಣಗಳನ್ನು ಅವರು ಪ್ರಾಚೀನ ಗದ್ಯ- ಕಾವ್ಯಗಳಲ್ಲಿ ಅನ್ವೇಷಿಸುವಂತೆಯೇ, ಆಧುನಿಕ ಪ್ರಚಲಿತದಲ್ಲಿಯೂ ಗಮನಿಸುತ್ತಾರೆ. ವರ್ತಮಾನದ ಮಸೆಗಲ್ಲಿನಲ್ಲಿ ನಮ್ಮ ಚಿಂತನೆಗಳನ್ನು ಪುಟವಿಟ್ಟು ಶೋಧಿಸಿ ಬರೆದ ಅವರ ಬರಹಗಳ ಸಂಕಲನ ʻಇದಿರು ನೋಟ.ʼ ಇದರಲ್ಲಿನ ʼಭೀತಿಯಿಲ್ಲದ ಮಾತು, ನೀತಿಯಿಲ್ಲದ ಮೌನʼ ಎಂಬ ಲೇಖನದಿಂದ ಆಯ್ದ ಭಾಗ ಇಲ್ಲಿದೆ.
ಹತ್ತನೇ ಶತಮಾನದ ʻವಡ್ಡಾರಾಧನೆ’ಯಲ್ಲಿ ಬರುವ ʻಕಾರ್ತಿಕ ಋಷಿಯ ಕತೆ’ಯ ಅಗ್ನಿರಾಜ, ಮುನಿಗಳೂ ಸೇರಿದಂತೆ ಹಲವರ ಬಳಿ, ʻರಾಜ್ಯದ ಶ್ರೇಷ್ಠ, ಸುಂದರ ವಸ್ತು ಯಾರಿಗೆ ಸೇರಬೇಕು?’ ಎಂದು ಕೇಳಿ, “ರಾಜನಿಗೇ ಸೇರಬೇಕು’ ಎಂಬ ಒಪ್ಪಿಗೆಯನ್ನು ಸೃಷ್ಟಿಸಿಕೊಳ್ಳುತ್ತಾನೆ. ʻಆ ವಸ್ತು ಯಾವುದು?’ ಎಂದು ಕೇಳಿದವರ ಪ್ರಶ್ನೆಗೆ ಉತ್ತರಿಸುವ ಆಸಕ್ತಿಯನ್ನೇ ತೋರುವುದಿಲ್ಲ. ಏನು ಮಾಡುತ್ತಾನೆ ಎಂಬ ಊಹೆ ಯಾರಿಗೂ ಇದ್ದಿರಲಿಲ್ಲ. ತನ್ನ ಸುಂದರಿಯಾದ ಕಿರಿ ಮಗಳನ್ನು ಈ ಒಪ್ಪಿಗೆಯನ್ನು ತೋರಿಯೇ ಮದುವೆಯಾಗುತ್ತಾನೆ. ಅವಳ ಒಪ್ಪಿಗೆಯ ಪ್ರಶ್ನೆಯೇ ಅಲ್ಲಿರಲಿಲ್ಲ. ಹೀಗೆ ಹೆಣ್ಣನ್ನು ಭಾವವಿಲ್ಲದ ʻವಸ್ತು’ವಾಗಿ ಭಾವಿಸಿ ಆಕ್ರಮಿಸಿಕೊಳ್ಳುವುದನ್ನು ಸಕ್ರಮಗೊಳಿಸುವ ಇಂತ ಅನೈತಿಕತೆಯನ್ನು ಬೇರು ಸಮೇತ ಕೀಳದೆ ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುತ್ತೇವೆ ಎನ್ನುವುದು ಸುಳ್ಳು ಮಾತು.
ಇತ್ತೀಚಿನ ದಿನಗಳ ಕೆಲವು ಬೆಳವಣಿಗೆಗಳು ಹೃದಯವನ್ನು ಗಾಸಿಗೊಳಿಸುವಂತಿದ್ದವು. ಹಾಥರಸ್‌ನ ಹೆಣ್ಣುಮಗಳ ಸುಯ್ಲು ಯಾರನ್ನಾದರೂ ತಟ್ಟುವುದಿಲ್ಲವೆಂದರೆ ಅವರಿಗೆ ಹೃದಯವೇ ಇಲ್ಲ ಎಂದರ್ಥ. ಹಾಗಿರುವಾಗ ಆ ಅಪರಾಧಿಗಳ ಪರವಾಗಿ ಕತೆ ಕಟ್ಟುವ ಪಡೆಯೇ ಎದ್ದು ನಿಲ್ಲುತ್ತದೆ ಮತ್ತು ಬೃಹತ್ ಸಮೂಹವೊಂದು ಮೌನವಾಗಿರುತ್ತದೆ. ಇಂತಹ ನಡೆಗಳ ಪರಿಣಾಮ ಊಹಾತೀತ, ಬೆದರಿಕೆಗಳೇ ಆಳ್ವಿಕೆಗಳಾಗಿ, ಬೆದರಿಸುವವರಿಗೆ ಅಂಕೆಯೇ ಇಲ್ಲದ ನಿರಂಕುಶತೆ ಹಬ್ಬಿ ಹರಡುತ್ತದೆ.
ಇದನ್ನೂ ಓದಿ | Sunday Read | ಹೊಸ ಪುಸ್ತಕ | ಚಲಂನ ಪ್ರಣಯ ಚರಿತ್ರೆ ಗಿಡಗಳ ಕೆಳಗೆ
ಇದಕ್ಕೆ ಇಂಬು ನೀಡುವಂತೆ ಎರಡು ಸುದ್ದಿಗಳು ಬಂದವು. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರ ಐಪಿಎಲ್ ಅಪಯಶಸ್ಸಿಗೆ ಸೇಡಿನ ರೂಪದಲ್ಲಿ ಅವರ ಐದು ವರ್ಷದ ಮಗಳನ್ನು ರೇಪ್ ಮಾಡುವುದಾಗಿ ಗುಜರಾತಿನ ಕಛ್‌ನ ಹದಿನಾರರ ಬಾಲಕ(?) ಟ್ವಿಟ್ ಮಾಡಿದ. ಅದೇ ಸುಮಾರಿಗೆ ತಮಿಳು ನಟ ವಿಜಯ್ ಸೇತುಪತಿಯವರು ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಸಿನಿಮಾದಲ್ಲಿ ಪಾತ್ರ ನಿರ್ವಹಣೆ ಮಾಡುವುದನ್ನು ವಿರೋಧಿಸಿ ಅವರ ಪುಟ್ಟ ಮಗಳನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಿ ಚೆನ್ನೈನ ವ್ಯಕ್ತಿಯೊಬ್ಬ ಟ್ವಿಟ್ ಮಾಡಿದ. ಇವೆರಡೂ ಪ್ರಕರಣಗಳಲ್ಲಿ ಇಷ್ಟು ಪಬ್ಲಿಕ್ ಆಗಿ ಇಂತಹ ಪ್ರಸಿದ್ಧರ ಮಕ್ಕಳನ್ನೇ ಮುಂದಿಟ್ಟು ಬೆದರಿಕೆ ಹಾಕುತ್ತಾರೆಂದರೆ ನಾವೀಗ ಎತ್ತ ಸಾಗುತ್ತಿದ್ದೇವೆ? ಇದು ಎಲ್ಲಾ ಪ್ರಜ್ಞಾವಂತರನ್ನು ಕಾಡಬೇಕಾದ ಸಂಗತಿ ಅಲ್ಲವೇ? ಅಂಕಿ ಅಂಶಗಳ ಪ್ರಕಾರ ದಿನವೊಂದಕ್ಕೆ ಈ ದೇಶದಲ್ಲಿ ಸರಾಸರಿ 90 ಅತ್ಯಾಚಾರಗಳು ನಡೆಯುತ್ತವೆ ಎಂಬುದಕ್ಕೂ ಮೇಲಿನ ವಿಷಯಕ್ಕೂ ಸಂಬಂಧ ಇಲ್ಲವೇ?
ಇವರು ಪ್ರಸಿದ್ಧರಾಗಿರುವುದರಿಂದ ಈ ಕುರಿತು ಒಂದಿಷ್ಟು ಆಕ್ರೋಶ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುತ್ತದೆ ಮತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಆದರೆ ಯಾವ ಬಲವೂ ಇಲ್ಲದವರ ಪಾಡೇನು? ವಿಜಯ್ ಸೇತುಪತಿ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯೇ ಅದಕ್ಕೂ ಮೊದಲು ಹಲವು ಬಾರಿ ಟ್ವಿಟರ್‌ನಲ್ಲಿ ಇದೇ ರೀತಿಯ ಬೆದರಿಕೆಯನ್ನು ಹಲವು ಮಹಿಳೆಯರಿಗೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಮತ್ತು ತನಗೂ ಇದೇ ರೀತಿಯ ಬೆದರಿಕೆ ಹಾಕಿದ್ದ ಎಂಬುದಾಗಿ ನಟಿ ಕಸ್ತೂರಿಯವರು ಟ್ವಿಟ್ ಮಾಡಿದ್ದಾರೆ. ಅವರು
ತಮ್ಮ ಟ್ವಿಟ್‌ನಲ್ಲಿ, `ಆತನ ಮೇಲೆ ಏನಾದರೂ ಕ್ರಮ ಕೈಗೊಳ್ಳುವಿರಾ? ಅವನು ಬಹಳ ಸ್ವತಂತ್ರವಾಗಿರುವಂತೆ ಕಾಣಿಸುತ್ತಿದೆ’ ಎಂದಿದ್ದಾರೆ. ಟ್ವಿಟರ್ ಈಗ ಅವನ ಖಾತೆಯನ್ನು ರದ್ದುಪಡಿಸಿದೆ! ಅಂದರೆ ಈ ಮೊದಲು ಆ ಶಿಕ್ಷೆಯೂ ಅವನಿಗೆ ಅಗಿರಲಿಲ್ಲ!
ಇದನ್ನೂ ಓದಿ | Sunday read | ಹೊಸ ಪುಸ್ತಕ | ಎಲ್ಲರೂ ಕುರುಡರಾದಾಗ ಉಳಿದ ಒಬ್ಬಳೇ ಮಹಿಳೆಯ ಕಥೆ
ಶಿಕ್ಷೆಯಿಲ್ಲದ ಈ ಸ್ಥಿತಿಯು ಇವೆಲ್ಲ ಶಿಕ್ಷಾರ್ಹ ವಿಷಯಗಳೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದರ ವ್ಯಕ್ತರೂಪ. ಹದಿನಾರು ವರ್ಷದ ಹುಡುಗನೊಬ್ಬ ಇಂತಹ ದುಸ್ಸಾಹಸ ಮಾಡುತ್ತಾನೆಂದರೆ ಇದಕ್ಕೆ ಯಾರು ಹೊಣೆ? ಅವನ ಮನಸ್ಸಿನಲ್ಲಿ ಹೆಣ್ಣುಕೂಸಿನ ಕುರಿತು ಇಷ್ಟು ನೀಚ ಭಾವನೆಗಳು ಹುಟ್ಟಿದ್ದು ಹೇಗೆ? ʻಪಾರ್ಚ್ (Parched)’ ಎಂಬ ಹಿಂದಿ ಸಿನಿಮಾ ಇದನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ. ಚಿಕ್ಕಂದಿನಲ್ಲೇ ಅಪ್ಪನನ್ನು ಕಳೆದುಕೊಂಡ ಹುಡುಗನೊಬ್ಬ ಅಮ್ಮ ಕಷ್ಟಪಟ್ಟು ಬೆಳೆಸಿದ್ದು ಮರೆತು ತಾನೇ ಗಂಡುದಿಕ್ಕು ಎಂಬ ಅಹಮ್ಮಿಗೆ ಒಳಗಾಗುತ್ತಾನೆ. ಸುತ್ತಲಿನ ಹೆಣ್ಣುಮಕ್ಕಳ ಬವಣೆ ನೋಡಿಯೂ ಆತ ಚಿಕ್ಕ ವಯಸ್ಸಿನಲ್ಲಿ ಮದುವೆಯಾದಾಗ ಹೆಂಡತಿಯನ್ನು ಹಿಂಸಿಸುತ್ತಾನೆ. ಹಾಗೆ ವರ್ತಿಸುವುದೇ ಗಂಡಸುತನ ಎಂಬ ಸಾಮಾಜಿಕ ತರಬೇತಿ ಮನೆಯ ಹೊರಗೆ ಅವನು ಒಡನಾಡುವ ಸ್ನೇಹಿತರಿಂದ, ಸಮಾಜದಿಂದ ಸಿಕ್ಕಿದೆ. ಹೆಣ್ಣುಮಕ್ಕಳ ಬಗೆಗೆ ಕೆಟ್ಟ ಪದ ಬಳಸುವುದು, ಕೀಳಾಗಿ ಭಾವಿಸುವುದು, ಹಿಗ್ಗಾಮುಗ್ಗಾ ಥಳಿಸುವುದು, ಆಕ್ರಮಿಸುವುದು ಎಲ್ಲವೂ ಸಹಜ ಎಂದೇ ಭಾವಿಸುವಂತೆ ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ ಈ ದುಷ್ಟಪಾಠ ಈ ಕ್ರೌರ್ಯ ಹಿಂಸೆಯನ್ನು ಸಾಮಾನ್ಯೀಕರಿಸುತ್ತದೆ. ಕುಟುಂಬದೊಳಗಿನ ಅವಕಾಶ ಸಿಕ್ಕರೆ ಕುಟುಂಬದ ಹೊರಗೂ ಕೋರೆ ತೋರಿಸುತ್ತದೆ. ಅಂದರೆ ಮನೆ ಮನೆಯೂ ಹೆಣ್ಣನ್ನು ಅಪಮಾನಿಸುವ ಕೂರಲಗುಗಳನ್ನು ಉತ್ಪಾದಿಸುವ ಮಸೆತಾಣಗಳಾಗಿವೆ. ಕೆಲವು ಮೃದುವಾಗಿ ಇನ್ನು ಹಲವು ಅಮಾನುಷವಾಗಿ ಇದರ ಕಾರ್ಯಾಗಾರಗಳಾಗಿವೆ. ಎಲ್ಲೋ ಅಪರೂಪದಲ್ಲಿ ಅಪರೂಪವಾಗಿ ಹೆಣ್ಣನ್ನು ಎಲ್ಲ ರೀತಿಯಲ್ಲೂ ಸಮಾನವಾಗಿ ಪರಿಗಣಿಸುವ ಗೌರವ ಕೇಂದ್ರಗಳು ಇರುವವೇನೋ, ವಿಳಾಸ ಸ್ವಲ್ಪ ಕಷ್ಟವೇ. ಇದರ ಜೊತೆಗೆ ಆಳುವ ಶಕ್ತಿಗಳಿಗೂ ಇವೆಲ್ಲವೂ ರಾಜಕಾರಣದ ದಾಳಗಳಾಗಿ ಕಾಣುತ್ತವೆಯೇ ಹೊರತು ಎಲ್ಲ ರಾಜಕಾರಣಿಗಳು ಒಂದಾಗಿ ಅಳಿಸಬೇಕಾದ ಕಳಂಕಗಳಾಗಿ ಕಾಣುವುದಿಲ್ಲ.
ಕೃತಿ: ಇದಿರು ಮಾತು
ಲೇಖಕರು: ಸಬಿತಾ ಬನ್ನಾಡಿ
ಪ್ರಕಾಶನ: ಬಹುರೂಪಿ
ಪುಟ 164, ಬೆಲೆ 200 ರೂ.
ಇದನ್ನೂ ಓದಿ | ಕೇರಂ ಬೋರ್ಡ್ ಅಂಕಣ | ಅಂಡರ್‌ಪಾಸ್‌ಗಳಲ್ಲಿ ಪಿಸುಗುಡುವ ಕಡಲು