:: ಪ್ರೊ. ಷ. ಶೆಟ್ಟರ್
19ನೆಯ ಶತಮಾನದ ಕೊನೆಯ ದಶಕದಿಂದ ಈವರೆಗೂ ಪ್ರಕಟವಾಗಿರುವ ಹಳಗನ್ನಡ ಶಾಸನಗಳೆಲ್ಲವನ್ನೂ ಸಂಗ್ರಹಿಸಿ ಮತ್ತೊಂದು ವಿಧಾನದಲ್ಲಿ ಸಂಪಾದಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಆರಂಭ ಕಾಲದ ಕದಂಬರು, ಕೋಲಾರ ಹಾಗೂ ತಲಕಾಡಿನ ಗಂಗರು, ಬಾದಾಮಿ ಚಾಲುಕ್ಯರು ಮತ್ತು ಮಾನ್ಯಖೇಟದ ರಾಷ್ಟ್ರಕೂಟರಲ್ಲದೆ ಇವರ ಸಾಮಂತರೂ ಸಮಕಾಲೀನರೂ ಕ್ರಿ.ಶ. ಸು, ನಾಲ್ಕರಿಂದ 10ನೆಯ ಶತಮಾನದವರೆಗೆ ಬರೆಸಿದ ಶಾಸನಗಳ ಲಿಪಿ ಮತ್ತು ಭಾಷೆಯನ್ನು ಈ ಹಳಗನ್ನಡ ಪದವು ಪ್ರತಿನಿಧಿಸುವುದು.
ಒಂದು ಜನಾಂಗ ಭಾಷೆಯಾಗಿ ನಾಲ್ಕನೆಯ ಶಕಮಾನಕ್ಕಿಂತ ಬಹುಕಾಲ ಮುಂಚೆಯೇ ಹಳಗನ್ನಡವು ಕೆಳದಖ್ಖಣದಲ್ಲಿ ಪ್ರಚಾರದಲ್ಲಿತ್ತು, ಆದರೆ ಅದನ್ನು ಬರೆಯಲು ವಿಶಿಷ್ಟ ಲಿಪಿ ಇರಲಿಲ್ಲ. ಇದಕ್ಕಿಂತ ಪೂರ್ವದ ಇಲ್ಲಿಯ ಬರಹಗಳೆಲ್ಲವೂ ಮೌರ್ಯ ಅರಸ ಅಶೋಕನು ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಪರಿಚಯಿಸಿದ ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ಭಾಷೆಗಳಲ್ಲಿದ್ದವು. ಕ್ರಿಶ. ಮೂರನೆಯ ಶತಮಾನದಲ್ಲಿ ಸಂಸ್ಕೃತ ಭಾಷೆಯು ಕೆಳದಖ್ಖಣವನ್ನು ಪ್ರವೇಶಿಸಿ, ಪ್ರಾಕೃತದಂತೆ ಶಾಸನ ಭಾಷೆಯಾಗತೊಡಗಿತು. ಆದರೆ ಇದಕ್ಕೂ ತನ್ನದಾದ ಲಿಪಿ ಇರದ ಕಾರಣ ಈ ಭಾಷಾ ಬರಹಗಳೆಲ್ಲವೂ ಆರಂಭದಲ್ಲಿ ಬ್ರಾಹ್ಮೀಲಿಪಿಯನ್ನು, ಆನಂತರ ಕಾಲದಲ್ಲಿ ದಕ್ಷಿಣದ ಲಿಪಿಗಳನ್ನು, ಅವಲಂಬಿಸಬೇಕಾಯಿತು. ಕ್ರಿ.ಶ.ಎಂಟನೆಯ ಶತಮಾನದವರೆಗೂ ಇಲ್ಲಿ ಬರೆಸಿದ ಸಂಸ್ಕೃತ ಶಾಸನಗಳೆಲ್ಲವೂ ಹಳಗನ್ನಡ ಲಿಪಿಯಲ್ಲಿವೆ. ಈ ಶತಮಾನದಲ್ಲಿ ನಾಗರೀ ಲಿಪಿಯು ಪ್ರವೇಶಮಾಡಿ ಸಂಸ್ಕೃತ ಭಾಷಾಬರಹಗಳನ್ನು ಹಂಚಿಕೊಳ್ಳಲಾರಂಭಿಸಿತು.
ಆದರೂ ಇಲ್ಲಿಯ ಬಹುತೇಕ ಸಂಸ್ಕೃತ ಶಾಸನಗಳನ್ನು ಶತಮಾನಗಳುದ್ದಕ್ಕೂ ಬರೆಸಿದ್ದು ಕನ್ನಡ ಲಿಪಿಗಳಲ್ಲಿಯೇ. ಇಂದಿನ ಕರ್ನಾಟಕ ರಾಜ್ಯದಲ್ಲಿ ಮೊದಲ ಸಹಸ್ರಮಾನದಲ್ಲಿ ಬರೆಸಿದ ಹಳಗನ್ನಡ ಶಾಸನಗಳ ಸಂಖ್ಯಾ ಪ್ರಮಾಣವನ್ನಿನ್ನೂ ಇತ್ಯರ್ಥಗೊಳಿಸಬೇಕಾಗಿದೆ, ಅದರೆ ಇವುಗಳಲ್ಲಿ ಹೆಚ್ಚಿನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದವೆಂಬುದರ ಬಗ್ಗೆ ಸಂಶಯವಿಲ್ಲ. ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ನುಡಿಗಟ್ಟುಗಳು ಮಾತ್ರ ಶಾಸನ ಮಾಧ್ಯಮಗಳಾಗಿದ್ದ ಕ್ರಿ.ಪೂ. ಮೂರನೆಯ ಶತಮಾನದಿಂದ ಕ್ರಿ.ಶ. ಮೂರನೆಯ ಶತಮಾನದ ಕಾಲಾವಧಿಯಲ್ಲಿ ಇಲ್ಲಿ ಬರೆಸಿದ ಸುಮಾರು 400 ಶಿಲಾಶಾಸನಗಳು ಈಗ ಉಳಿದುಕೊಂಡಿವೆ. ನಾಲ್ಕನೆಯ ಶತಮಾನದಿಂದ 10ನೆಯ ಶತಮಾನದ ಕೊನೆಯವರೆಗೆ ಸಂಸ್ಕೃತ ಭಾಷೆ ಮತ್ತು ಹಳಗನ್ನಡ ಲಿಪಿಯಲ್ಲಿ (ಇಲ್ಲವೇ ಕನ್ನಡ ಮತ್ತು ಸಂಸ್ಕೃತ ದ್ವಿಭಾಷೆಗಳಲ್ಲಿ) ಬರೆಸಿದ ತಾಮ್ರಪಟ ಮತ್ತು ಶಿಲಾ ಶಾಸನಗಳಲ್ಲಿ ಸುಮಾರು 500 ಉಳಿದುಕೊಂಡಿವೆ. ಸರಿಸುಮಾರು ಇದೇ ಕಾಲಾವಧಿಯಲ್ಲಿ ಹಳಗನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಸಿದ 2000 ಹೆಚ್ಚು ಸಂಖ್ಯೆಯ ಶಿಲಾಶಾಸನಗಳೂ ತಾಮ್ರಪಟಗಳೂ ಈವರೆಗೂ ಲಭ್ಯವಾಗಿವೆ. 2000 ಹಳಗನ್ನಡ ಶಾಸನಗಳನ್ನು ಮತ್ತೊಮ್ಮೆ ಸ೦ಪಾದಿಸಿ ಪ್ರಕಟಿಸುವುದು, ಈ ಅಧ್ಯಯನದ ಉದ್ದೇಶವಾಗಿದೆ.
(ಬೆನ್ನುಡಿಯಿಂದ)
ಕೃತಿ: ಮೊದಲ ಸಹಸ್ರಮಾನದ ಕನ್ನಡ ಶಾಸನಗಳು (ಎಂಟು ಸಂಪುಟಗಳು)
ಲೇಖಕ: ಪ್ರೊ.ಷ. ಶೆಟ್ಟರ್
ಪ್ರಕಾಶನ: ಅಭಿನವ ಪ್ರಕಾಶನ
ಎಂಟು ಸಂಪುಟಗಳ ಒಟ್ಟು ಬೆಲೆ: ರೂ. 8450
ಇದನ್ನೂ ಓದಿ: Sunday Read: ಹೊಸ ಪುಸ್ತಕ: ದಶಕಂಠ ರಾವಣನ ಪುಷ್ಪಕ ವಿಮಾನ