| ಶಿವಕುಮಾರ ಮಾವಲಿ
ಯಾವುದೋ ಅಸ್ಪಷ್ಟ ಕಾರಣಕ್ಕೆ ಮನೆ ಬಿಟ್ಟು ಹೊರಟ ವಯಸ್ಕನೊಬ್ಬ ದಾರಿ ಮಧ್ಯದಲ್ಲಿ ಸಿಕ್ಕ ಲೈಬ್ರರಿಯ ಒಳಗೆ ಹೋದ. ಎಂದೂ ಪುಸ್ತಕಗಳನ್ನು ತೆರೆದು ನೋಡದ , ಓದಿ ಅಭ್ಯಾಸವಿಲ್ಲದ ಆತನಿಗೆ ಅಲ್ಲಿ ಏನು ಮಾಡಬೇಕೆಂಬುದೂ ತೋಚಲಿಲ್ಲ.ಕೆಲವರು ಪುಸ್ತಕ ಹಿಡಿದು ಕೂತಿದ್ದರು. ಇನ್ನು ಕೆಲವರು ನಿಯತಕಾಲಿಕಗಳನ್ನು ತಿರುವಿ ಹಾಕುತ್ತಿದ್ದರು. ಸುಮ್ಮನೆ ಯಾವುದೋ ಮೂಲೆಯೊಂದರಲ್ಲಿ ಒಂದು ಪತ್ರಿಕೆ ಕೈಯಲ್ಲಿ ಹಿಡಿದು ಕೂತ. ಕೆಲ ಹೊತ್ತಿನ ನಂತರ ಸುಮ್ಮನೆ ಪುಸ್ತಕಗಳಿರುವ ರಾಕ್ ಗಳ ಬಳಿ ಹೋಗಿ ಕಣ್ಣಾಡಿಸತೊಡಗಿದ. ಯಾವತ್ತೂ ಪುಸ್ತಕಗಳನ್ನು ಓದಿ ಗೊತ್ತಿರದ ಅವನಿಗೆ ಒಂದೇ ಕಡೆಯಲ್ಲಿ ಪುಸ್ತಕಗಳ ರಾಶಿ ಕಂಡು ಏಕಕಾಲಕ್ಕೆ ಆಶ್ಚರ್ಯವೂ, ಅನಾದಾರವೂ ಉಂಟಾಯಿತು. ಅನೇಕ ಪುಸ್ತಕಗಳನ್ನು ಹೊರ ತೆಗೆದು ಅವುಗಳ ಹೆಸರು ಮತ್ತು ಮುಖಪುಟಗಳನ್ನಷ್ಟೆ ನೋಡುತ್ತಾ ಹೋದ. ಅಲ್ಲಿ ಒಂದು ಪುಸ್ತಕ ಕಣ್ಣಿಗೆ ಬಿತ್ತು.
‘ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಡಿ ‘ ಆ ಟೈಟಲ್ ಅನ್ನು ಅವನು ಎರೆಡೆರೆಡು ಬಾರಿ ಓದಿಕೊಂಡ. ಪುಸ್ತಕವನ್ನು ಹಾಗೆಯೇ ತೆಗೆದಿಡುವುದರ ಬದಲು ಅದರ ಹೆಸರಿನ ಮೇಲಿನ ಕುತೂಹಲದಿಂದಾಗಿ ಓದಲು ಶುರು ಮಾಡಿದ. ಈ ನಡುವೆ ಲೈಬ್ರರಿ ಸಮಯ ಮುಗಿದು ಜನರೆಲ್ಲ ಮನೆಗೆ ಹೋಗಿದ್ದರು. ಸಾಮಾನ್ಯವಾಗಿ ಪ್ರತಿನಿತ್ಯ ಬರುವ ಜನರಿಗೆ ಲೈಬ್ರರಿ ಮುಚ್ಚುವ ಸಮಯವೂ ಗೊತ್ತಿತ್ತಾದ್ದರಿಂದ ಲೈಬ್ರರಿಯನ್ ಕೂಡ ಯಾವುದೇ ತಪಾಸಣೆ ಮಾಡದೆ ಬಾಗಿಲು ಹಾಕಿಕೊಂಡು ಹೋಗಿದ್ದ. ಜೀವನದಲ್ಲಿ ಮೊದಲ ಬಾರಿ ಪುಸ್ತಕ ಕೈಯಲ್ಲಿ ಹಿಡಿದು ಓದ ತೊಡಗಿದ್ದ ಆತ, ತದಾತ್ಮತೆಯಲ್ಲಿ ಮೈಮರೆತಿದ್ದ.
* * *
ಅದೊಂದು ಕ್ರೂರ ಕಥೆಯುಳ್ಳ ಕಾದಂಬರಿಯಾಗಿತ್ತು. ಅದರ ಸಾರಾಂಶವನ್ನಷ್ಟೆ ನಾನಿಲ್ಲಿ ಹೇಳಬಲ್ಲೆ. ತೀರ ಸಂಪ್ರದಾಯಸ್ಥ ಮತ್ತು ಜಾತಿವಾದಿ ಕುಟುಂಬಗಳಿಗೆ ಸೇರಿದ ಇಬ್ಬರು ಪ್ರೀತಿಸುವುದು. ಆಕೆ ಸಮಾಜಶಾಸ್ತ್ರದಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಆದರೆ ಅವನು ಮ್ಯಾಥಮ್ಯಾಟಿಕ್ಸ್ ನಲ್ಲಿ. ಆಕೆ ಸೋಷಿಯಲ್ ಸೈಂಟೀಸ್ಟ್ , ಆತ ಗ್ರೇಟ್ ಮ್ಯಾಥಮೆಟೀಶಿಯನ್. ಆದರೆ ಅವನ ಲೆಕ್ಕ ಮತ್ತು ಅವಳ ಸಮಾಜಶಾಸ್ತ್ರೀಯ ಜ್ಞಾನ ಅವರ ಮನೆಯವರ ಮುಂದೆ ಲೆಕ್ಕಕ್ಕಿಲ್ಲ.
ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿನ ಒಡನಾಟದಿಂದ ಹತ್ತಿರಾದ ಅವರ ಸ್ನೇಹ, ತಂತಮ್ಮ ಗುರಿಗಳ ಸಫಲತೆಯೊಂದಿಗೆ ಪ್ರೇಮವಾಗಿ ಮಾರ್ಪಾಡಾದಾಗ ಅಂಥದ್ದೊಂದು ಘೋರ ಶಿಕ್ಷೆ ಅವರಿಗೆ ಎದುರಾಗಬಹುದೆಂಬುದರ ಸುಳಿವೂ ಕೂಡ ಅವರಿಗಿತ್ತು. ತಾನು ಓದುತ್ತಿದ್ದ ವಿವಿಯಲ್ಲೇ ಪ್ರೊಫೆಸರ್ ಆಗಿದ್ದ ಅವಳಪ್ಪ ಅಷ್ಟೊಂದು ಜಾತಿವಾದಿಯಾಗಿರಬಲ್ಲ ಎಂಬುದು ಅವಳಿಗೂ ತಿಳಿದಿರಲಿಲ್ಲ. ಸುಶಿಕ್ಷಿತನಾದ ತನ್ನ ತಂದೆ ತನ್ನ ಮದುವೆಗೆ ಯಾವುದೇ ಅಡ್ಡಿಪಡಿಸದೆ ತಾವೇ ಖುದ್ದಾಗಿ ಜಾತಿವ್ಯವಸ್ಥೆಯನ್ನು ವಿರೋಧಿಸುವ ಮೇಲ್ಪಂಕ್ತಿ ಹಾಕಿಯಾರು ಎಂಬುದು ಅವಳ ನಿರೀಕ್ಷೆಯಾಗಿತ್ತು. ಆದರೆ ಜಾತಿಯೆಂಬುದು ನಮ್ಮ ರಕ್ತದಲ್ಲಿ ಸೇರಿ ಹೋಗಿರುವಂಥದ್ದು. ಅದನ್ನು ಮೀರುವುದು ಶಿಕ್ಷಣಕ್ಕೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ ಎಂಬುದು ಅವಳಿಗೂ ಮನವರಿಕೆಯಾಯಿತು. ಅವನೋ ಎಲ್ಲಿ ಇದೊಂದು ಅನಾಹುತಕ್ಕೆ ಕಾರಣವಾಗಿಬಿಡುತ್ತದೋ ಎಂದು ಹೆದರಿದ್ದ. ಆದರೆ ಆಕೆ ಧೈರ್ಯವಂತೆ. ತನ್ನ ಸಮಾಜಶಾಸ್ತ್ರೀಯ ಓದಿಗೆ ತಕ್ಕಂಥ ವರ್ತನೆ ವ್ಯಕ್ತಪಡಿಸಿದಳು.
‘ ಇದೆಲ್ಲಾ ಏನು ದುರಂತಕ್ಕೆ ಕಾರಣವಾಗಿಬಿಡುತ್ತೋ. ಸುಮ್ಮನೆ ನಾವು ಮನೆಯವರ ಮಾತು ಕೇಳಿ ಬಿಡೋಣ. ನಮ್ಮ ಮನೆಯವರು ಶಿಕ್ಷಿತರೇನಲ್ಲ. ಆದರೆ ಜಾತಿಯ ಹೊರಗೆ ಯೋಚಿಸುವುದನ್ನು ಅವರು ಊಹಿಸಲಾರರು. ಇನ್ನು ನಿನ್ನದು ಸುಶಿಕ್ಷಿತ ಕುಟುಂಬವೇ ಆದರೂ ಅವರೂ ಜಾತಿ ಮೀರಲು ತಯಾರಿಲ್ಲ. ಹಾಗಾಗಿ ನಾವು ನಮ್ಮ ಪ್ರೀತಿಯನ್ನು ಇಲ್ಲವಾಗಿಸೋದೆ ಒಳ್ಳೆಯದು ‘ ಎಂದ ಆ ಗ್ರೇಟ್ ಮ್ಯಾಥಮ್ಯಾಟಿಶಿಯನ್ .
‘ ಹೌದು. ಇಲ್ಲವಾಗಿಸಬೇಕು ಪ್ರೀತಿಯನ್ನಲ್ಲ ಆದರೆ ಜಾತಿಯನ್ನ. ನಾವು ಇದನ್ನು ಪ್ರಾರಂಭಿಸೋಣ. ಮತ್ಯಾರಾದರೂ ಮುಂದುವರೆಸುತ್ತಾರೆ. ನೀನು ಹೆದರಬೇಡ. True love never run smoothly ಎಂದು ಷೇಕ್ಸ್ ಪಿಯರ್ ಕೂಡ ಹೇಳಿದ್ದಾನೆ.’ ಎಂದು ಆಕೆ ಧೈರ್ಯ ತುಂಬಿದಳು.
Fortune favours the brave ಅನ್ನೋದು ಗಾದೆ. ಆದರೆ ಗಾದೆಗಳು ಸುಳ್ಳಾಗುವುದು ಸಹಜ. ಪ್ರೀತಿ ತಂದುಕೊಡುವ ಧೈರ್ಯ ಅಸಾಧಾರಣವಾದದ್ದು ಅನ್ನುವಂತೆ ಇಬ್ಬರೂ ಮದುವೆಯಾದರು. ತಮ್ಮದು ಆದರ್ಶ ಮದುವೆ ಎಂದು ಖುಷಿಪಟ್ಟರು. ಎರಡೂ ಕುಟುಂಬಗಳ ಒಪ್ಪಿಗೆಯಿಲ್ಲದ ಕಾರಣ ಪ್ರತ್ಯೇಕ ವಾಸವೇ ಸರಿ ಎಂದು ತೀರ್ಮಾನಿಸಿದರು.
ಹೀಗಿದ್ದಾಗಲೇ ಒಂದು ದಿನ ಆಕೆಯ ಅಪ್ಪ ಪತ್ರಿಕೆಯೊಂದಕ್ಕೆ ಜಾಹೀರಾತು ಕೊಟ್ಟರು. ಅದು ಕಾಣೆಯಾದವರು ವಿಭಾಗದಲ್ಲಿ. ಜಾತಿ ಆಧಾರಿತ ವಿವಾಹದ ಕ್ಲಾಸಿಫೈಡ್ ಗಳನ್ನು ಪ್ರಕಟಿಸುವ ಪತ್ರಿಕೆ ಕೇವಲ ಆತ ಹೆಚ್ಚು ದುಡ್ಡು ಕೊಟ್ಟ ಎಂಬ ಕಾರಣಕ್ಕೆ ಅವನು ಹೇಳಿದ್ದೆಲ್ಲವನ್ನು ಅದರಲ್ಲಿ ಬರೆದು ಪ್ರಕಟಿಸಿತ್ತು.
‘ಜಾಹೀರಾತಿನಲ್ಲಿರುವ ಚಿತ್ರದಲ್ಲಿರುವವರು ನನ್ನ ಮಗಳಾಗಿದ್ದಳು. ಆದರೆ ನನ್ನನ್ನು ಧಿಕ್ಕರಿಸಿ ಹೋದ ದಿನದಿಂದ ಅವಳು ನನ್ನ ಮಗಳಾಗಿ ಉಳಿದಿಲ್ಲ. ಅವಳ ಜೊತೆ ಇರುವ ಆ ವ್ಯಕ್ತಿಯೂ ನಮಗೆ ಸಂಬಂಧಪಟ್ಟವನಲ್ಲ. ಇವರುಗಳ ಬಗ್ಗೆ ಅನೇಕರು ನಮ್ಮ ಬಳಿ ಪದೆ ಪದೆ ವಿಚಾರಿಸುತ್ತಿರುವುದರಿಂದ ನಮಗೆ ಮಾನಸಿಕವಾಗಿ ಹಿಂಸೆ ಅನ್ನಿಸುತ್ತಿದೆ. ಅವರುಗಳು ಎಲ್ಲಿದ್ದಾರೋ ನಮಗೆ ತಿಳಿಯದು. ಅವರಿಲ್ಲದೆ ನಾವು ನೆಮ್ಮದಿಯಾಗಿಯೇ ಇದ್ದೇವೆ. ಹಾಗಾಗಿ ಈ ಮೂಲಕ ಸಾರ್ವಜನಿಕರಲ್ಲಿ ಮತ್ತು ನಮ್ಮ ಹಿತೈಷಿ ಬಂಧುಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಅವರು ಕಾಣೆಯಾಗಿದ್ದಾರೆ ನಿಜ. ಆದರೆ ಅವರನ್ನು ದಯವಿಟ್ಟು ಹುಡುಕಿ ಕೊಡಬೇಡಿ. ನಮ್ಮ ಪಾಡಿಗೆ ನಾವಿರುತ್ತೇವೆ. ಅವರ ಜೀವನ ಅವರದ್ದು ‘
* * *
ಬೆಳಗ್ಗೆ ಮನೆಗೆ ಬಂದ ಪತ್ರಿಕೆಯಲ್ಲಿ ಆ ಜಾಹೀರಾತನ್ನು ನೋಡಿದ ಆಕೆ ಮತ್ತು ಆತ ತೀವ್ರ ನೊಂದಕೊಂಡು ಆನಂತರ ಹೇಗೂ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರಲ್ಲ ಎಂಬ ಸಮಾಧಾನಪಟ್ಟುಕೊಂಡರು.
ಆ ರಾತ್ರಿ ಅವನೆದೆಯಲ್ಲಿ ಮುಖ ಇಟ್ಟು ಆಕೆ ಕೇಳಿದಳು;
‘ ಹೌದು, ನಾವು ಬದುಕಲು ನಿಜಕ್ಕೂ ಜಾತಿ ಅಷ್ಟು ಮುಖ್ಯವೇನು ? ಈಗ ನೋಡು ನಮ್ಮಿಬ್ಬರ ಮಧ್ಯೆ ಜಾತಿಯ ವಿಷಯ ಒಮ್ಮೆಯೂ ಅಡ್ಡಿ ಬಂದಿಲ್ಲ ಅಲ್ಲವೆ ? ಈ ಗಾಳಿ , ನೀರು , ಆಹಾರ ಮತ್ತು ಬೆಳಕುಗಳು ಯಾವ ಜಾತಿಗೆ ಸೇರಿದವು ? ‘
ಈ ಪ್ರಮೇಯವನ್ನು ಬಿಡಿಸಬಹುದಾದ ಉತ್ತರ ಆ ಗಣಿತಜ್ಞನ ಬಳಿ ಇರಲಿಲ್ಲ. ಸುಮ್ಮನೆ ಅವಳ ಹಣೆಗೊಂದು ಮುತ್ತು ಕೊಟ್ಟು ಹೇಳಿದ :
‘ಈ ಮುತ್ತು ಯಾವ ಜಾತಿಯೆಂದು ಹೇಳಬಲ್ಲೆಯೇನು ? ‘
ಇದನ್ನೂ ಓದಿ: Sunday read: ಹೊಸ ಪುಸ್ತಕ: ಗಣೇಶ ಹಾಲು ಕುಡಿದ!
ಆಕೆ ಏನೋ ಹೇಳಲು ಪ್ರಯತ್ನಿಸಿ, ಹೇಳಲಾಗದೆ ಸುಮ್ಮನೆ ಅವನನ್ನು ತಬ್ಬಿ ಮಲಗಿದಳು. ಯಾಕೋ ಈ ಹಿಂದೆ ಇದ್ದ ಧೈರ್ಯ ಅವಳಿಗೆ ಆ ದಿನ ಇರಲಿಲ್ಲ. ಮತ್ತಷ್ಟು ಗಟ್ಟಿ ತಬ್ಬಿಕೊಂಡು ಮಲಗಿದಳು. ಅಂದಿನಿಂದ ದಿನವೂ ಹಾಗೆ ತಬ್ಬಿಕೊಂಡು ಮಲಗುತ್ತಿದ್ದಳು.
ಕೆಲ ದಿನಗಳ ನಂತರ ಹಾಗೆಯೇ ತಬ್ಬಿಕೊಂಡ ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ನಿರ್ಜನ ಪ್ರದೇಶವೊಂದರಲ್ಲಿ ಬಿದ್ದಿದ್ದವು. ಕಾಣೆಯಾಗಿದ್ದಾರೆ; ಹುಡುಕಿಕೊಡಬೇಡಿ ಎಂದಮೇಲೆ ಯಾರು ತಾನೆ ಅವುಗಳ ಪೂರ್ವಾಪರದ ಬಗ್ಗೆ ತಲೆ ಕೆಡಿಸಿಕೊಂಡಾರು ?
* * *
ಇಡೀ ರಾತ್ರಿ ಕೂತು ಆ ಕಾದಂಬರಿ ಓದಿ ಮುಗಿಸಿದ ವಯಸ್ಕ ತಾನು ಮನೆಗೆ ವಾಪಾಸ್ಸು ಹೋಗುವುದೋ ಬೇಡವೋ ಎಂದು ಹೆದರಿದ. ಬೆಳಗ್ಗೆ ಲೈಬ್ರರಿಯನ್ ಬಾಗಿಲು ತೆಗೆದಾಗ ನಡೆದದ್ದೆಲ್ಲವನ್ನೂ ಹೇಳಿದ. ಲೈಬ್ರರಿಯನ್ ಗೆ ಒಂಥರಾ ಖುಷಿ. ಎಂದೂ ಪುಸ್ತಕ ಓದದವನನ್ನು ಕೂಡಿ ಹಾಕಿ ಒಂದು ಪುಸ್ತಕ ಓದಿಸಿದೆ ಎಂಬ ಖುಷಿ ಅವನದ್ದಾಗಿತ್ತು. ತಾನೇ ತಿಂಡಿ ತರಿಸಿಕೊಟ್ಟು ಉಪಚರಿಸಿದ. ತಿಂಡಿ ತಿನ್ನುತ್ತಾ ಹಾಗೆಯೇ ಪತ್ರಿಕೆ ತಿರುವಿ ಹಾಕಿದ ವಯಸ್ಕನ ಕಣ್ಣಿಗೊಂದು ಸುದ್ದಿ ಬಿತ್ತು. ‘ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಸುಟ್ಟು ಹಾಕಿದ ಹೆತ್ತ ಅಪ್ಪ. ಮರ್ಯಾದಾ ಹತ್ಯೆ ಪ್ರಕರಣ ದಾಖಲು.’ ಆ ವಯಸ್ಕ ತಿಂಡಿ ತಿಂದು ಸರಸರನೆ ಅಲ್ಲಿಂದ ಕಾಲುಕಿತ್ತ.
ಕೃತಿ: ಪ್ರೇಮಪತ್ರದ ಆಫೀಸು ಮತ್ತು ಅವಳು (ಕತಾ ಸಂಕಲನ)
ಪ್ರಕಾಶನ: ಮಾವಲಿ ಪಬ್ಲಿಕೇಶನ್ಸ್
ಪುಟ- 150, ಬೆಲೆ- 160 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಕಂದಹಾರ್‌ಗೆ ಬಂದ ಕುಣಿಗಲ್ ಹುಡುಗ