| ದರ್ಶನ್ ಜಯಣ್ಣ
ಅದು ಸತ್ಯದ ಕಾಲ. ಆಗೆಲ್ಲ ದೃಶ್ಯಮಾಧ್ಯಮ ಇಷ್ಟೆಲ್ಲಾ ಮುಂದುವರಿದಿರಲಿಲ್ಲ. ಆದರೂ ಒಂದಷ್ಟು ಸುದ್ದಿಗಳು ಕಾಡಿಚ್ಚಿನಂತೆ ಪಸರಿಸುತ್ತಿದ್ದವು. ಅವುಗಳಲ್ಲಿ ಕೆಲವು ಸಾಯಿಬಾಬಾ ಫೋಟೋದಿಂದ ಕಣ್ಣೀರು ಬಂದದ್ದು. ಕಲ್ಕಿ ಭಗವಾನ್ ಫೋಟೋದಿಂದ ಜೇನುತುಪ್ಪ ಬಂದದ್ದು. ಯಾರದ್ದೋ ಮನೆಯ ಗರ್ಭಗುಡಿಯಲ್ಲಿ ಆರಡಿ ಹುತ್ತ ತಲೆಯೆತ್ತಿ ನಿಂತದ್ದು ಮತ್ತು ಬಹುಮುಖ್ಯವಾಗಿ ಗಣೇಶ ಹಾಲು ಕುಡಿದದ್ದು!
ಈ ಎಲ್ಲಾ ಸಂಗತಿಗಳಿಗೆ ಅಪ್ಪನದ್ದು ಮಿಶ್ರ ಪ್ರತಿಕ್ರಿಯೆ. ಕೆಲವೊಮ್ಮೆ ಫೋಟೋದಿಂದ ಹಂಗೆಲ್ಲಾ ಆಗುವುದು ಅಸಾಧ್ಯ ಅನ್ನುತ್ತಿದ್ದವರು ಮನೆಯಲ್ಲಿ ಹುತ್ತ ಬೆಳೆದುದರ ಬಗ್ಗೆ ಏನೂ ಹೇಳಲಿಲ್ಲ. ಇದಕ್ಕೆ ಕಾರಣ ಅಪ್ಪನಿಗೆ ʻನಾಗ’ ದೇವರ ಮೇಲಿದ್ದ ಅನನ್ಯ ಭಕ್ತಿ ಇರಬಹುದು. ಆದರೆ ಗಣೇಶನ ಕೇಸಿನಲ್ಲಿ ಅಪ್ಪನಿಗೆ ನಗು, ಸಿಟ್ಟು, ಬೇಸರ ಎಲ್ಲಾ ಒಟ್ಟಿಗೆ ಬಂದಿತ್ತು.
ಕಾರಣ ಇಷ್ಟೇ. ನಮ್ಮ ಮೇನ್ ರೋಡಿನ ಜ್ಯೂಸ್ ಸೆಂಟರ್‌ನಲ್ಲಿ ವ್ಯಾಪಾರ ಯಾವತ್ತೂ ಸಂಜೆಯ ಹೊತ್ತು. ಬೆಳಿಗ್ಗೆ ಎಲ್ಲಾ ಅಪ್ಪ ಮನೆಯ ಮುಂದಿನ ಗ್ರಂಥಿಗೆ ಅಂಗಡಿ (ಅಂಗಡಿಮನೆ) ನೋಡಿಕೊಳ್ಳುತ್ತಿದ್ದರು. ಸಂಜೆಯ ಹೊತ್ತು ನಮ್ಮ ಅಂಗಡಿಗೆ ಬರುವ ಗಿರಾಕಿಗಳು ಥರಾವರಿ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಅದು ತುಮಕೂರು -ಬೆಂಗಳೂರು ರಸ್ತೆಯ ವಾಹನ ಸಂದಣಿಯಿಂದ ಹಿಡಿದು, ಮಳೆ, ಬೇಸಾಯ, ರಾಜಕೀಯ, ದೇವರು, ವ್ಯಾಪಾರ ಮುಂತಾದ ವಿಷಯಗಳ ಬಗೆಗಾಗಿತ್ತು.
ಆದರೆ ಅವತ್ತು ಜನ ಮಾತನಾಡಿದ್ದು ಬೇರೆಯೇ. ಸಾಧಾರಣವಾಗಿ ಅಂಗಡಿಯ ಒಳಮನೆಯಲ್ಲಿ ಕೂತು ಓದಿಕೊಳ್ಳುತ್ತಿದ್ದ ನನ್ನ ಕಿವಿಗಳೂ ಆ ಸುದ್ದಿ ಕೇಳಿ ನಿಮಿರಿದವು. ಅದೆಂದರೆ ಗಣೇಶ ಹಾಲು ಕುಡಿದದ್ದು.
ಬೆಂಗಳೂರಿನ ಯಾವುದೋ ದೇವಸ್ಥಾನದಲ್ಲಿದ್ದ ಅರ್ಚಕರೊಬ್ಬರು ಗಣೇಶನನ್ನು ಪೂಜಿಸಿ ನೈವೇದ್ಯಕ್ಕೆ ಹಾಲನ್ನು ಅರ್ಪಿಸುತ್ತಿರುವಾಗ ಸೊಂಡಲಿನಿಂದ ಹಾಲು ಸರಕ್ಕನೆ ಎಳೆಯಲ್ಪಟ್ಟು ಅಚ್ಚರಿಗೆ ಕಾರಣವಾಗಿತ್ತು. ಇದನ್ನು ಮಿಂಚಿನ ವೇಗದಲ್ಲಿ ಪ್ರಚಾರ ಮಾಡಲಾಗಿ ನೆರೆಹೊರೆಯ ಎಲ್ಲಾ ದೇವಸ್ಥಾನಗಳಲ್ಲಿಯೂ ಕ್ಷೀರಾರ್ಚನೆ ಪ್ರಾರಂಭವಾಯಿತು. ಇದನ್ನು ತಿಳಿದ ಜನ ಮುಗಿಬಿದ್ದರು. ಪೂಜೆ ಮಾಡಿಸಿದರು. ದಕ್ಷಿಣೆಯಿತ್ತರು.
ಗಣೇಶ ಕುಡಿದನೋ ಬಿಟ್ಟನೋ ಆದರೆ ಇದಕ್ಕೆ ಸಾಕ್ಷಿಯಾದವರೆಲ್ಲ “ಹೌದು ಸ್ವಲ್ಪ ಹಾಲು ಹಂಗೆ ಒಳಗೆ ಹೋದಂಗೆ ಹೋಯಿತು!” ಎಂದು ಹೇಳಿಕೆ ಇತ್ತರು. ಅಷ್ಟು ಸಾಕಿತ್ತು.
ಈ ಸುದ್ದಿ ತುಮಕೂರಿಗೆ ಮುಟ್ಟುವ ಹೊತ್ತಿಗೆ ಸಂಜೆಯಾಗಿತ್ತು. ಈ ವಿಷಯವನ್ನು ತಿಳಿದ ಅಕ್ಕಪಕ್ಕದ ಅಂಗಡಿಯವರು ಅಪ್ಪನಿಗೆ ಮುಗಿಬಿದ್ದು ನಮ್ಮ ಮನೆಯ ಮುಂದಿನ ಗ್ರಂಥಿಗೆ ಅಂಗಡಿ ತೆಗೆಯಬೇಕಾಗಿಯೂ ತಾವು ಅಲ್ಲಿರುವ ಪಂಚಲೋಹದ ಗಣೇಶಗಳ ವಿಗ್ರಹಗಳಿಗೆ ಹಾಲು ಅರ್ಪಿಸಬೇಕೆಂದೂ ದುಂಬಾಲು ಬಿದ್ದರು. ಅಪ್ಪ “ಈಗ ಆಗಲ್ಲ ಅಂಗಡಿ ಬಿಟ್ಟು ಬರೋಕೆ” ಎಂದರೂ ಪೀಡಿಸಿದರು.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಸಾಕೇತ್ ರಾಜನ್ ಶವ ಪಡೆಯಲು ಕುಟುಂಬಸ್ಥರು ಯಾಕೆ ಒಪ್ಪಲಿಲ್ಲ?
ಕಡೆಗೆ ಅಪ್ಪ, ಅಂಗಡಿಯ ಜವಾಬ್ದಾರಿಯನ್ನು ಅಮ್ಮ ಮತ್ತು ನನಗೆ ಬಿಟ್ಟು, ಇನ್ನೊಂದು ಅಂಗಡಿಯ ಬಳಿಗೆ ಹೊರಟರು. ನನಗೂ ಗಣೇಶ ಹಾಲು ಕುಡಿಯುವುದನ್ನು ನೋಡಲು ಆಸೆಯಿದ್ದರೂ ಅಮ್ಮನ ಜೊತೆಗೆ ಇರುವುದು ಮುಖ್ಯವಾಗಿ ಅಂಗಡಿ ಸಂಭಾಳಿಸಿ ಕಡೆಗೆ ಒಂಬತ್ತೂವರೆಯಷ್ಟು ಹೊತ್ತಿಗೆ ಗಿರಾಕಿಗಳಿಲ್ಲದ ಕಾರಣ ಬೀಗ ಹಾಕಿ ಮನೆಗೆ ಹೊರಟೆವು. ಅಲ್ಲಿ ಹೋದಾಗ ಅಪ್ಪ ಅಂಗಡಿಯ ಹೊರಗಿದ್ದರು. ಅಲ್ಲಿ ನೆರೆದಿದ್ದ ಅಸಂಖ್ಯ ಜನಸ್ತೋಮ ಎಲ್ಲಾ ಪಂಚಲೋಹದ ಗಣೇಶ ಮತ್ತಿತರೆ ದೇವರುಗಳಿಗೆ ಪೂಜೆ ಮಾಡಿ, ಹಣ್ಣು ಕಾಯಿ ಇಟ್ಟು ದೀಪ ಬೆಳಗಿ ಹಾಲು ಅರ್ಪಿಸುತ್ತಿದ್ದರು.
ಯಾರೊಬ್ಬರೂ ಗಣೇಶ ಹಾಲು ಕುಡಿಯಲಿಲ್ಲ ಎಂದು ಹೇಳಲಿಲ್ಲ. ನಾನು ಅಂಗಡಿಯೊಳಗೆ ಹೇಗೋ ತೂರಿಕೊಂಡು ಹೋಗಿ ಕುಂತಿದ್ದೆ. ನೆಲವೆಲ್ಲಾ ರಾಡಿಯಾಗಿತ್ತು. ಈ ವಿಷಯ ತಿಳಿದ ಪಕ್ಕದ ಬೀದಿಯ ಜನ ಕೂಡ ಬಂದು ಹಾಲು ಅರ್ಪಿಸಿದರೂ ಯಾರೂ ಒಂದು ವಿಗ್ರಹ ಕೂಡಾ ಕೊಳ್ಳದಿದ್ದುದು ನನ್ನ ಮತ್ತು ಅಪ್ಪನ ಬೇಸರಕ್ಕೆ ಕಾರಣವಾಗಿತ್ತು.
ಜನಗಳ ಈ ಉಪಟಳ ನಿಂತದ್ದು ರಾತ್ರಿ ಎರಡು ಗಂಟೆ ಸುಮಾರಿಗೆ ಅಲ್ಲಿಯವರೆಗೂ ಬೀದಿಯ ಜನಕ್ಕೆ ಚೌತಿ, ನಾನು ನಿದ್ದೆ ಹೋದೆ. ಅಪ್ಪ-ಅಮ್ಮ ಎಲ್ಲವನ್ನೂ ಶುಚಿಗೊಳಿಸಿ, ಮಲಗಿದಾಗ ಬೆಳಿಗ್ಗೆ ಮೂರಾಯಿತಂತೆ. ಬೆಳಿಗ್ಗೆ ಎದ್ದವರು ನನ್ನನ್ನೂ ಎಬ್ಬಿಸಿ ಮನೆಯ ಮುಂದಿನ ಅಂಗಡಿ ತೆಗೆದು “ಬಾ ಸ್ವಲ್ಪ ಕೆಲಸ ಇದೆ” ಅಂದರು. ನಾನು ಅವರೊಟ್ಟಿಗೆ ಹೋದೆ.
“ಎಷ್ಟು ಗಣೇಶನ ವಿಗ್ರಹಗಳಿವೆ ಎಣಿಸು” ಎಂದರು. ಎಣಿಸಿದೆ ಸರಿಯಾಗಿತ್ತು. ಆದರೆ ಒಂದೆರಡು ಲಕ್ಷ್ಮಿ ಮತ್ತು ಕೃಷ್ಣನ ವಿಗ್ರಹಗಳು ಕಾಣೆಯಾಗಿದ್ದವು! ಅಪ್ಪನಿಗೆ ನಖಶಿಖಾಂತ ಉರಿದುಹೋಯಿತು. ಆದರೆ ಯಾರನ್ನು ದೂರುವುದು? ನಮ್ಮ ಅಸಹಾಯಕತೆಯನ್ನು ಬಿಟ್ಟು. ವಿಗ್ರಹದ ಜೊತೆಗೆ ಬೇರೆಯ ವಸ್ತುಗಳೂ ಕಾಣೆಯಾಗಿದ್ದವು. ಅದಕ್ಕೆ ಬದಲಾಗಿ ನಮಗೆ ಸಿಕ್ಕಿದ್ದು ಹಣ್ಣು ಕಾಯಿ ಅಷ್ಟೇ.
ಎಲ್ಲವನ್ನೂ ಸಮಚಿತ್ತದಿಂದ ತೆಗೆದುಕೊಳ್ಳುತ್ತಿದ್ದ ಅಪ್ಪ ಅವತ್ತು “ನೋಡು, ಇದನ್ನೇ ಜನ ಮರುಳೋ ಜಾತ್ರೆ ಮರುಳೋ ಅನ್ನೋದು ಗೊತ್ತಾಯ್ತಾ?” ಎಂದಾಗ ನಾನು ಸುಮ್ಮನೆ ತಲೆಯಾಡಿಸಿದೆ. ಗಣೇಶನ ಅಷ್ಟೂ ವಿಗ್ರಹಗಳು ನಮ್ಮನ್ನು ನೋಡಿ ನಗುತ್ತಿದ್ದವು!
ಕೃತಿ: ಅಪ್ಪನ ರ್ಯಾಲೀಸ್ ಸೈಕಲ್ (ಪ್ರಬಂಧಗಳು)
ಲೇಖಕ: ದರ್ಶನ್ ಜಯಣ್ಣ
ಪ್ರಕಾಶನ: ಛಂದ ಪುಸ್ತಕ
ಬೆಲೆ: 110 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ಟ್ರಿಗ್ನಾಮೆಟ್ರಿಕ್ ಸರ್ವೆಯೆಂಬ ವೈಜ್ಞಾನಿಕ ಸಾಹಸ