Site icon Vistara News

Sunday Read: ಹೊಸ ಪುಸ್ತಕ: ಎಡಬಲಗಳ ಸುತ್ತಮುತ್ತ: ಮಾತಿನ ಧೂಳು

eda balagala suttamutta book

:: ಡಾ.ಆರ್.ಜಿ ಹೆಗಡೆ

ಮಾಗಿಯ ಬೆಳ್ಳಂಬೆಳಗಿನ ಹಿತಕರ ವಾತಾವರಣದಲ್ಲಿಯೂ ಬೆಳಿಗ್ಗೆ ನ್ಯೂಸ್ ಪೇಪರ್ ಕೈಗೆತ್ತಿಕೊಂಡರೆ ರಾಜಕೀಯದ ಧೂಳು ಕಣ್ಣಿಗೆಲ್ಲ ರಾಚುತ್ತದೆ. ಭಾಷೆಯ ಸಭ್ಯತೆಯನ್ನು ಮೀರಿದ ಕಿವಿ ಗಡಚಿಕ್ಕುವ ರಾಜಕೀಯ ಧ್ವನಿಗಳು ಕಿವಿಗೆ ತೂತು ಹೊಡೆಯುತ್ತವೆ. ಮಾತಿನ ತೀವ್ರತೆ ಏರುತ್ತಲೇ ಹೋಗಿ ಬಂದೂಕಿನಿಂದ ಹೊರಬೀಳುವ ಗುಂಡಿನಂತಹ ಕರ್ಕಶತೆ ಪಡೆದುಕೊಂಡಿದೆ. ದುಖಃದ ವಿಷಯವೆಂದರೆ ಕೆಲವು ರಾಜಕೀಯ ನೇತಾರರು ಇಂತಹ ಏರುಮಾತುಗಳಿಂದಲೇ ಜನರ ಹೃದಯಗಳನ್ನು ತಟ್ಟಬಹುದೆಂದು ಭಾವಿಸಿದ್ದಾರೆ ಎಂದೇ ಅನಿಸುತ್ತದೆ.

ನಿಜವಾಗಿಯೂ ಮಾತಿನ ಮೂಲಕ ಚರ್ಚಿಸಬೇಕಾದವುಗಳು ತತ್ವಗಳು ಮತ್ತು ಹೊಸ ವಿಚಾರಗಳು. ಆದರೆ ಈ ರೀತಿಯ ಮಾತಿನ ಗದ್ದಲದಲ್ಲಿ ಜನರ ಮುಂದೆ ಹೇಳಬೇಕಾದ ತತ್ವಗಳು, ಚರ್ಚಿಸತಕ್ಕ ವಿಷಯಗಳು ಸಂಪೂರ್ಣವಾಗಿ ಕಳೆದುಹೋದಂತೆ ಅನಿಸುತ್ತದೆ. ಬಹುಶ: ಹೇಳಲು ಒಳಗಿನ ಆಳದ ಮಾತುಗಳು ಇಲ್ಲದೆ ಹೋಗಿದ್ದರಿಂದಲೇ ಮಾತುಗಳು ಗದ್ದಲಗಳಾಗಿ ಮಾರ್ಪಟ್ಟುಹೋಗಿವೆಯೇ ಎನ್ನವುದೂ ಒಂದು ಮಹತ್ವದ ಪ್ರಶ್ನೆ. ಕೆಲವು ಬುದ್ಧಿಜೀವಿಗಳೂ ಮಾತಿನ ಕರ್ಕಶತೆಯಲ್ಲಿ ರಾಜಕಾರಣಿಗಳಿಂತಲೂ ಮುಂದೆಯೇ ಹೋಗಿದ್ದಾರೆ. ಏರುಧ್ವನಿಯಲ್ಲಿ ಕಿರಿಚಾಡುವುದೇ ಸಾರ್ವಜನಿಕ ಸಂವಹನ ಎಂದೇ ಕೆಲವರು ಭಾವಿಸಿದ್ದಾರೆ ಅನಿಸುವ ವಾತಾವರಣ ಇದೆ.

ವಿಶ್ವದ ಶ್ರೇಷ್ಟ ರಾಜಕೀಯ ಸಂವಹನಕಾರರನ್ನು ಒಂದಿಷ್ಟು ನೋಡಿಕೊಳ್ಳಬೇಕು. ಗಾಂಧಿ ತುಂಬ ಮೆಲು ಧ್ವನಿಯಲ್ಲಿ ಮಾತನಾಡುತ್ತಿದ್ದರು. “ಕ್ವಿಟ್ ಇಂಡಿಯಾ” ಎಂದು ಕೂಡ ಗಾಂಧಿ ಹೇಳಿದ್ದು ಮೃದು ಮಾತುಗಳಲ್ಲಿಯೇ. ನೆಹರೂ ಕಾವ್ಯ ತುಂಬಿದ ಭಾಷೆಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುವಂತೆ ಮಾತನಾಡುತ್ತಿದ್ದರು. ಗಾಂಧಿ ಗುಂಡಿಗೆ ತುತ್ತಾಗಿ ನಿಧನರಾದಾಗ ನೆಹರು ಮಾಡಿದ ಭಾಷಣ “ಬೆಳಕು ನಮ್ಮ ಜೀವನಗಳಿಂದ ಹೊರಟು ಹೋಗಿವೆ. ಈಗ ಕೇವಲ ಅಂಧಕಾರದಲ್ಲಿ ನಾವು ತಡಕಾಡುತ್ತಿದ್ದೇವೆ.” ಎನ್ನುವ ಮಾತುಗಳು ಅಜರಾಮರವಾಗಿ ಹೋಗಿವೆ. ಚರ್ಚಿಲ್‌ ಅವರ ಯುದ್ಧದ ಸಮಯದ ಭಾಷಣಗಳಲ್ಲಿಯೂ ಕಾವ್ಯಾತ್ಮಕತೆ ಇರುತ್ತಿತ್ತು. ಉದಾಹರಣೆಗೆ ಯೂಟ್ಯೂಬ್‌ನಲ್ಲಿರುವ ಅವರ ಭಾಷಣವೊಂದನ್ನು ಗಮನಿಸಬೇಕು. ತಾವು ಜರ್ಮನಿಯ ವಿರುದ್ಧ ಎಲ್ಲ ರೀತಿಗಳಲ್ಲಿಯೂ ಹೋರಾಡುತ್ತೇವೆ ಎಂದು ಅವರು ಹೇಳಿದ್ದು ಹೀಗೆ : “ನಾವು ಬೀಚುಗಳಲ್ಲಿ ಹೋರಾಡುತ್ತೇವೆ. ನೀಲಿ ಆಗಸದಲ್ಲಿ ಹೋರಾಡುತ್ತೇವೆ. ಗಿರಿ ಕಾನನಗಳಲ್ಲಿ ಹೋರಾಡುತ್ತೇವೆ. ಎಂದೂ ಮಣಿಯುವುದಿಲ್ಲ. ಎಂದಿಗೂ ಇಲ್ಲ. ಎಂದೆಂದೂ ಇಲ್ಲ. ಎಂದೆಂದೂ…..ಎಂದೆಂದೂ…..ಎಂದೆಂದೂ…..” ಎರಡನೆಯ ಮಹಾಯುದ್ಧದಂತಹ ಸಮಯದಲ್ಲಿ ಕೂಡ ಅವರ ಭಾಷೆಯ ಲಯವನ್ನು, ಸಂಗೀತಮಯತೆಯನ್ನು ಘನತೆಯನ್ನು ಖಂಡಿತಕ್ಕೂ ನೆನಪಿಸಿಕೊಳ್ಳಬೇಕು.

ಹಾಗೆಯೇ ನೆಲ್ಸನ್‌ ಮಂಡೇಲಾ, ಮಾರ್ಟಿನ್ ಲೂಥರ್‌ ಕಿಂಗ್‌ ಅವರ ಭಾಷಣಗಳನ್ನು ಕೇಳಬೇಕು. ಅಷ್ಟೇಕೆ ದೂರ ಹೋಗುವುದು. ಅಟಲ್ ಬಿಹಾರಿ ವಾಜಪೇಯಿಯವರ ಮಾತಿನ ಭಾಷೆ ಮತ್ತು ಇಂದಿರಾ ಗಾಂಧಿಯವರ ಭಾಷೆಗಳಲ್ಲಿಯೂ ಒಂದು ಗಾಂಭೀರ್ಯತೆ ಇತ್ತು. ಅವರ ಮಾತುಗಳ ಜತೆ ಧೂಳು ಇರುತ್ತಿರಲಿಲ್ಲ. ಕರ್ಕಶತೆ ಇರಲಿಲ್ಲ. ಕಂಟೆಂಟ್ ಇರುತ್ತಿತ್ತು. ಕಂಟೆಂಟ್‌ಮೆಂಟ್ ಇರುತ್ತಿತ್ತು. ಅವರಿಗೆಲ್ಲ ಸುದ್ದಿಯಲ್ಲಿರಲು ದಿನಾಲೂ
ಮಾತನಾಡಬೇಕು, ಬಹಳ ಮಾತನಾಡಬೇಕು, ಏರುಧ್ವನಿಯಲ್ಲಿ ಮಾತನಾಡಬೇಕು ಎಂದೇನೂ ಇರಲಿಲ್ಲ. ಅವರ ಮಾತುಗಳು, ವಿಚಾರಗಳು ನ್ಯೂಸ್ ಪೇಪರ್ ಗಂಧಗಾಳಿಯೇ ಇರದ ಮುಗ್ಧನೊಬ್ಬನಿಗೂ ಕೂಡ ಅರ್ಥವಾಗಿ ಹೋಗುತ್ತಿದ್ದವು. ಓದದವನಿಗೂ, ರೇಡಿಯೋ ಕೇಳದವನಿಗೂ, ಅನಕ್ಷರಸ್ಥನಿಗೂ, ರಾಜಕೀಯದ ಅವು ಜನರಿಗೆ ರಾಜಕೀಯದ ಸಾರ್ವಜನಿಕ ಬದುಕಿನ ಪಾಠಗಳಾಗಿರುತ್ತಿದ್ದವು. ಸಾಮಾನ್ಯ ಮನುಷ್ಯನ ಮನಸ್ಸಿನಲ್ಲಿ ಹೊಸ ಪ್ರೋತ್ಸಾಹ ತುಂಬುವಂತಿರುತ್ತಿದ್ದವು. ಅವರ ಮಾತು ಈಗ ಹಲವು ಸಂದರ್ಭಗಳಲ್ಲಿ ಆಗುವಂತೆ ಮಾತು ಧೂಳಾಗಿ ಮೂಗಿನ ಮುಂದೆ ಹಿಡಿದರೆ ಕೆಮ್ಮು ತರಿಸುವ ಮೆಣಸಿನ ಪುಡಿಯಾಗಿ ಇರಲಿಲ್ಲ.

ಹಾಗೆಂದು ಇಂದು ಕೂಡ ಅಂತಹ ಗೌರವಾನ್ವಿತ ಭಾಷೆಯಲ್ಲಿ ಮಾತನಾಡುವ ರಾಜಕಾರಣಿಗಳು ಇಲ್ಲದೇ ಇಲ್ಲವೆಂದೇನೂ ಅಲ್ಲ. ಇದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರ ಮಾತುಗಳು ಬಹುಶಃ ರಾಜಕೀಯದ
ಧೂಳಿನಲ್ಲಿ ಮುಚ್ಚಿಹೋಗುತ್ತಿವೆ. ಕೆಲವೊಮ್ಮೆ ಧೂಳನ್ನು ಮೀರಿ ಕೂಡ ಜನರ ಹೃದಯಗಳನ್ನು ಮಿಡಿಯಬಲ್ಲಂತಹ ನಾಯಕರೂ ಕೂಡ ಇಂದೂ ಇದ್ದಾರೆ. ಇಲ್ಲವೆಂದೇನೂ ಅಲ್ಲ. ನಾನು ಹೇಳುತ್ತಿರುವುದು ಪ್ರತಿದಿನ ಪೇಪರುಗಳಲ್ಲಿ ಕಂಡುಬರುವ ಸಾಧಾರಣವಾಗಿರುವ ರಾಜಕೀಯ discourse ಕುರಿತು. ಬಹುಶಃ ಇಂತಹ ರಾಜಕಾರಣಿಗಳು, ಬುದ್ಧಿಜೀವಿಗಳು ಕೂಡ ರಾಜಕೀಯ ಸಂವಹನವೆಂದರೇನೆಂದು ಅರಿಯಬೇಕಿದೆ. ಕಿವಿ ಗಡಚಿಕ್ಕುವ ಮೈಕಿನಲ್ಲಿ, ದೊಡ್ಡ ಧ್ವನಿಯಲ್ಲಿ, ಕೇಳುಗರೆಲ್ಲರ ಕಿವಿಗಡಗುಡುವಂತೆ ಆಡುವ ಮಾತು ಸಂವಹನವಾಗುವದಿಲ್ಲ. ರಾಜಕೀಯ ಸಂವಹನ ಮೂಲದಲ್ಲಿ ಬೇಡುವದು ನಾಯಕನೊಬ್ಬನ, ವ್ಯಕ್ತಿಯೊಬ್ಬನ, ಶ್ರೇಷ್ಠ ಮೌಲ್ಯಗಳಿಗೆ, ತತ್ವಗಳಿಗೆ ಬದ್ಧವಾದ ವ್ಯಕ್ತಿತ್ವ, ಅಂತಹ ವ್ಯಕ್ತಿತ್ವ ತನ್ನನ್ನು ತಾನು ಹಲವು ವಿಧಾನಗಳಲ್ಲಿ, ಸಂಕೇತಗಳ ಮೂಲಕ ತನ್ನನ್ನು ತಾನೇ ಹೇಳಿಕೊಳ್ಳುತ್ತದೆ. ಮೌಲ್ಯಗಳು ಸಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿರಬಹುದು. ಆ ಪ್ರಶ್ನೆ ಬೇರೆ. ಉದಾಹರಣೆಗೆ ಗಾಂಧಿ ಶಾಂತಿತತ್ವದಲ್ಲಿ ಮೂಲಭೂತ ನಂಬಿಕೆ ಇಟ್ಟಿದ್ದರು. ಹಿಟ್ಲರ್ ಹಿಂಸೆಯಲ್ಲಿ, ಸೇಡು ತೀರಿಸಿಕೊಳ್ಳುವುದರಲ್ಲಿ ನಂಬಿಕೆ ಹೊಂದಿದ್ದ. ವೈಶಿಷ್ಟ್ಯತೆ ಎಂದರೆ ಇಬ್ಬರೂ ಕೂಡ ಕೋಟ್ಯಂತರ ಜನರನ್ನು ಆರ್ಕಷಿಸಿದರು. ಆ ಜನರ ಜೀವನದ ಭಾಗ ಆಗಿ ಹೋದರು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ನೀಲಿ ನಕ್ಷೆ

ಗಾಂಧಿಜಿಯವರ ಶಾಂತಿ ಮಂತ್ರಗಳಂತೆ ಹಿಟ್ಲರ್‌ನ ನಕಾರಾತ್ಮಕ ಮಾತುಗಳೂ ಹೃದಯಗಳನ್ನು ತೀವ್ರವಾಗಿ ಮುಟ್ಟಿದ್ದವು. ಇದಕ್ಕೆ ಮುಖ್ಯ ಕಾರಣವೆಂದರೆ ಗಾಂಧಿಜಿಯಾಗಿರಲಿ ಅಥವಾ ಹಿಟ್ಲರ್‌ ಆಗಿರಲಿ, ಅವರ ಮಾತು ಮತ್ತು ಕೃತಿಗಳು ಒಂದೇ ಆಗಿದ್ದುದು. ಅವರು ಎಲ್ಲವನ್ನೂ ಮಾತಿನ ಮೂಲಕವೇ ಹೇಳುವ ಅಗತ್ಯವಿರಲಿಲ್ಲ. ಅವರ ಜೀವನ ವಿಧಾನವೇ, ವ್ಯಕ್ತಿತ್ವವೇ ಮಾತನಾಡುತ್ತಿತ್ತು. ಗಾಂಧೀಜಿಯವರು ದೀರ್ಘವಾಗಿ ಅಥವಾ ಕರ್ಕಶ ಧ್ವನಿಯಲ್ಲಿ ಮಾತನಾಡುವ ಅಗತ್ಯವೇ ಇರಲಿಲ್ಲ. ಅವರ ಮಾತುಗಳು ಅವರ ಜೀವನವೇ ಭಾಗವೇ ಆಗಿ ಅವರು ಪ್ರತಿನಿಧಿಸುತ್ತಿದ್ದ ನೂರಾರು ಸಂಕೇತಗಳ ಮೂಲಕ ತಮ್ಮನ್ನು ಹೇಳಿಕೊಳ್ಳುತ್ತಿದವು. ಸುದೀರ್ಘ ಭಾಷಣಕ್ಕಿಂತಲೂ ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗಿಸಲು ಮೌನ ಮತ್ತು ಉಪವಾಸ ಹೆಚ್ಚು ಪರಿಣಾಮಕಾರಿ ಎನ್ನುವುದು ಅವರಿಗೆ ಗೊತ್ತಿತ್ತು. ಒಂದು ಹಿಡಿ ಉಪ್ಪನ್ನು ಕೈಯಲ್ಲಿ ಎತ್ತಿ ಹಿಡಿದು ಚೈಲಿಗೆ ಹೋಗುವುದು ಕಠೋರ ಮಾತುಗಳಿಂತಲೂ ಸಂವಹನ ದೃಷ್ಟಿಯಿಂದ ಹೆಚ್ಚು ಒಳ್ಳೆಯದು ಎನ್ನುವುದು ಗಾಂಧೀಜಿಗೆ ಗೊತ್ತಿತ್ತು.

ಈ ಹಿನ್ನೆಲೆಯಲ್ಲಿ ಬಹುಶಃ ಕರ್ಕಶವಾಗಿ ಮಾತನಾಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕಾದದ್ದರೆಂದರೆ ಸಂಹವನದ ಸೂಕ್ಷ್ಮತೆಗಳು ಭಾಷಣಗಳಿಗಿಂತ ಮೂಲಭೂತ ಮೌಲ್ಯಗಳಿಗೆ ಬದ್ಧವಾದ ವ್ಯಕ್ತಿತ್ವವನ್ನೇ ಬೇಡುತ್ತವೆ. ಉದಾಹರಣೆಗೆ ರಾಜಕಾರಣಿಯೊಬ್ಬ ನಿಜಕ್ಕೂ ತನ್ನ ಹೃದಯಾಂತರಾಳದಿಂದ ಪ್ರಾಮಾಣಿಕ, ಅಭಿವೃದ್ಧಿ ಪರವಾಗಿ ನಿಂತ ವ್ಯಕ್ತಿ, ನಿಜವಾಗಿಯೂ ತನ್ನ ನೋವು ನಲಿವುಗಳನ್ನು ಪ್ರತಿಫಲಿಸುವವನು ಎಂದು ಒಂದು ಸಮುದಾಯ ಭಾವಿಸಿದರೆ ಆ ಭಾವನೆಗೆ ಚ್ಯುತಿಬಾರದಂತೆ ಆತ ಸತತವಾಗಿ ನಡೆದುಕೊಂಡರೆ ಮಾತನಾಡುವ ಅವಶ್ಯಕತೆ ಇರುವುದಿಲ್ಲ.

ಕೃತಿ: ಎಡಬಲಗಳ ಸುತ್ತಮುತ್ತ
ಲೇಖಕ: ಡಾ.ಆರ್.ಜಿ ಹೆಗಡೆ
ಪ್ರಕಾಶನ: ಸಾಧನ ಪಬ್ಲಿಕೇಶನ್ಸ್‌, ಬೆಂಗಳೂರು
ಬೆಲೆ: 200 ರೂ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು

Exit mobile version