ಕಣ್ಣೆದುರು ಸ್ವರ್ಗವೇ ಧರೆಗಿಳಿದು ನಿಂತಿತ್ತು.
ಎದುರಿಗೆ ಒಂದು ಅದ್ಭುತ ಚಿತ್ರ!
ಮನದೊಳಗೆ ನೂರೊಂದು ಚಿತ್ರಗಳು ಮೂಡಲಾರಂಭಿಸಿದವು…
“ನಮ್ಮೆಲ್ರಿಗೂ ಒಂದ ಭ್ರಮೆ ಇತ್ತಾ. ಅದೇನ ಅಂದ್ರ ಮನುಷ್ಯರಾಯಿ ಹುಟ್ಟಿದ ಎಲ್ರೂ ಮನುಷ್ಯರ ಅಂದ್ಹೇಳಿ. ನಾವೆಲ್ಲ ಬಹಳ ದೊಡ್ಡರ ಅಂದ್ಹೇಳಿ. ಈ ಭೂಮಿ ಮೇಲಿನ ಬಹಳ ದೊಡ್ಡ ಶಕ್ತಿ ಅಂದ್ಹೇಳಿ. ಸತ್ಯ ಏನಂದ್ರೆ, ನಾವ ಯಾರೂ ಹುಟ್ಟಿದ ತಕ್ಷಣ ಮನುಷ್ಯರಾತಿಲ್ಲ. ಮನುಷ್ಯರಾಯಿ ಹುಟ್ಟೂದಿಲ್ಲ. ನನ್ನ ಪ್ರಕಾರ ಈ ಭೂಮಿ ಮ್ಯಾಲಿನ ಅತ್ಯಂತ ಬುರ್ನಾಸ್ ಪ್ರಾಣಿ ಅಂದ್ರೆ ಮನುಷ್ಯ. ಯಾವ್ದಾರೂ ಒಂದ ಕಣ್ಣಿಗೆ ಕಾಣದ ವೈರಸ್ ಬಂದ ಅಪ್ಪಳಿಸ್ರೆ ನಾವ ಥರ ಥರ ನಡುಗಿ ಹ್ವಾತೋ. ಸತ್ಯ ಏನ ಅಂದ್ರ ಈ ಭೂಮಿ ಮ್ಯಾಲೇ ಹುಟ್ಟೋ ಪ್ರತಿ ಒಂದ ಮನುಷ್ಯ ಪ್ರಾಣಿಯೂ ಮನುಷ್ಯರಾಪುಕೆ ಹುಟ್ಟಿರ್ತೋ. ಅಂತದ್ರಲ್ಲ ನಾವೆಲ್ಲ ಬದ್ಕಿನುದ್ದಕ್ಕೂ ಮನುಷ್ಯರಾಪುಕೇ ಪ್ರಯತ್ನ ಮಾಡ್ಕ. ಬದ್ಕ ಅಂದ್ರೆ ಮನುಷ್ಯತ್ವದತ್ತ ಕಡೆ ಹಾಕೋ ಹೆಜ್ಜೆ ಮತ್ತು ಅದನ್ನ ಪಡೆಯೋ ಹೋರಾಟ. ಅದ್ರೊಳ್ಗೆ ಹೆಚ್ಚಿನರ ಸೋತ ಬಿಡ್ತ್ರ. ಸೋಲತ್ರ ಅಂದ್ರೆ, ಹೆಚ್ಚಿನವರಿಗೆ ಇದ ಅರ್ಥವೇ ಆತಿಲ್ಲ. ಬದ್ಕ ಏನ-ಎತ್ತ-ಹ್ಯಾಂಗೆ ಅಂದ ಆರ್ಥ ಮಾಡ್ಕಂಪ್ಕಿಂತಾ ಮೊದ್ಲೇ ಅವರ ಬದ್ಕ ಮುಗ್ದೇ ಹ್ವಾತ್ತ. ಇನ್ನ ಒಂದಿಷ್ಟ ಜನ ಗೆಲ್ತ್ರ. ನಂಗೆ ನೀನ ಎಷ್ಟ ದುಡ್ಡ ಮಾಡ್ಡೇ, ಎಷ್ಟ ದೊಡ್ಡ ಕಂಪೆನಿ ಕಟ್ದೇ, ಎಷ್ಟು ಶ್ರೀಮಂತ ಆದೆ ಅಂಬುದ ಮುಖ್ಯ ಅಲ್ಲಾ. ನೀನ ಎಷ್ಟರ ಮಟ್ಟಿಗೆ ಮನುಷ್ಯ ಆದೆ ಅಂಬುದ ಮುಖ್ಯ. ಬದುಕಲ್ಲಿ ಕೇವಲ ಸಾಧ್ನೇ ಮಾಡೂದೇ ಮುಖ್ಯ ಅಲ್ಲ. ಎಲ್ಲ ಸಾಧ್ನಿ ಮಾಡಿದ ಮ್ಯಾಲೆ, ಒಂದ ದಿನ ನೀನ ಎಲ್ಲಾರೂ ಒಬ್ಬನೇ ಕೂತಳಿಕೆ ‘ನಾನ ಮನುಷ್ಯನಾದ್ನಾ?’ ಅಂದ ನಿನ್ನನ್ನೇ ನೀನ ಕೇಣ್ಕೋ. ಆಗ ಸಿಕ್ಕೋ ಉತ್ರ ಇತ್ತಲ್ದಾ ಅದರಿಂದ ನಿಂಗೆ ತೃಪ್ತಿ ಆರೆ, ನೀನ ನನ್ನ ಮಗ ಆಯಿ ಹುಟ್ಟದ್ದಕ್ಕೂ ಸಾರ್ಥಕ ಆಯ್ತ ಸಿದ್ಧಾರ್ಥ”
ಯಾವುದೋ ಒಂದು ದಿನ ಮಳೆ ಹೊಯ್ಯುತ್ತಿದ್ದ ಸಂಜೆ. ಹೊಸ್ಮನೆಯ ಹಳೆಯ ಹೆಬ್ಬಾಗಿಲಿನಲ್ಲಿ ತಂದೆ-ಮಗ ಇಬ್ಬರೇ ಕೂತಿದ್ದಾಗ ಧರ್ಮರಾಜ ಶೆಟ್ಟರು ಹೇಳಿದ ಮಾತುಗಳು ಸಿದ್ಧಾರ್ಥನ ಮನದಾಳದಲ್ಲಿ ಬೆಳಗಿನಿಂದ ಪ್ರತಿಧ್ವನಿಸಲಾರಂಭಿಸಿದ್ದವು.
ಅಪ್ಪಯ್ಯನ ಪ್ರಕಾರ ನಾನೀಗ ಮನುಷ್ಯನಾಗುವ ಈ ಪ್ರಯತ್ನದಲ್ಲಿ ಎಷ್ಟು ಯಶಸ್ವಿ ಆಗಿದ್ದೇನೆ?
ಆ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದೇನೆಯೇ? ಆಗಲಿದ್ದೆನೆಯೇ? ಮನುಷ್ಯನಾಗುವ ನಿಟ್ಟಿನಲ್ಲಿನ ಹಾದಿ ಇನ್ನೆಷ್ಟು ದೂರವಿದೆ?
ನಾನು ಇನ್ನು ಮುಂದೆ ಹಿಡಿಯಬಹುದಾದ ಹೊಸ ದಾರಿ ನನ್ನನ್ನು ಆ ನಿಟ್ಟಿನತ್ತ ಕೊಂಡೊಯ್ಯಬಹುದೇ!?
ಮನಸ್ಸು ಗೊಂದಲದ ಗೂಡಾಗಿ ಹೋಗಿತ್ತು.
ಜೊತೆಗೆ ಮುಂಜಾನೆ ಬಿದ್ದ ಕನಸು…
ಸೋಫಿಯ ತೋಳ ತೆಕ್ಕೆಯಲ್ಲಿ ಭದ್ರವಾಗಿ ಮಲಗಿದ್ದವನಿಗೇ ಆ ಭಯಂಕರ ಕನಸು ಬಂದು ಅಪ್ಪಳಿಸಿತ್ತು.
ಬೆಳಗಿನ ಜಾವ ನಾಲ್ಕು-ಐದರ ಹೊತ್ತಿಗೆ.
ಅಂತಿಂತಹ ಕನಸಲ್ಲ. ರುದ್ರ ಭಯಂಕರ ಕನಸು…
‘ಕೊಡೇರಿಯ ಬ್ಯಾಲೆಯ ಬಳಿ ಕಟ್ಟಿದ್ದ ಕನಸಿನ ಕಡಲ ತೀರದ ಮನೆಯ ತಾರಸಿಯ ಮೇಲೆ ಅರವತ್ಮೂರರ ಹರೆಯದ ಸಿದ್ಧಾರ್ಥ ಮುದುಡಿ ಮಲಗಿದ್ದ.
ಅದೂ ಸಾವಿಗಂಜಿ…
ಗಢ ಗಢ ನಡುಗುತ್ತಾ…
ಸಾವನ್ನು ಎದುರು ನೋಡುತ್ತಾ…
ಬೇಡವೆಂದರೂ ಸಾವನ್ನು ಸ್ವಾಗತಿಸುತ್ತಾ.
ಧೋ ಎಂದು ಸುರಿವ ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿ ಚಳಿಯಲ್ಲಿ ನಡುಗುತ್ತಾ… ಒಂಟಿಯಾಗಿ… ಮುದುಡಿ ಮಲಗಿದ್ದ. ಕಣ್ಣುಗಳನ್ನು ಕೂಡ ತೆರೆಯಲಾರದಷ್ಟು ದೊಪ್ಪೆಂದು ಸುರಿಯುತ್ತಿದ್ದ ಮಳೆ. ಒಂದಲ್ಲ, ಎರಡಲ್ಲ, ಮೂರಲ್ಲ… ಒಂದು ವಾರದಿಂದ ಬಿಡದೇ ಬಾರಿಸುತ್ತಿದ್ದ ಮಳೆ… ಭಯಂಕರ ಬಿರುಗಾಳಿ… ಕಡಲು ಉಕ್ಕಿ ನಿಂತಿತ್ತು.
ಹೋದ ಸಂಜೆಯ ಹೊತ್ತಿಗೆ ಮನೆಯ ಬಾಗಿಲು ತಲುಪಿದ್ದ ಸಮದ್ರದ ಅಲೆಗಳು, ರಾತ್ರಿಯ ಹೊತ್ತಿಗೆ ಮನೆಯ ಒಳ ನುಗ್ಗಿ ನೆಲ ಅಂತಸ್ತನ್ನೇ ಮುಳುಗಿಸಿಯಾಗಿತ್ತು. ಸುತ್ತಲೂ ದಟ್ಟವಾಗಿ ಕವಿದ ಕತ್ತಲೆ. ಎರಡು ಕಿಲೋ ಮೀಟರ್ ದೂರದವರೆಗೆ ಬೇರೆ ಒಂದೇ ಒಂದು ಮನೆಯಿಲ್ಲ. ಮನುಷ್ಯರೂ ಇಲ್ಲ!
ಬಯಸಿ, ಬಯಸಿ ಊರಿಂದ ದೂರ, ಮನುಷ್ಯರಿಂದ ಬಹುದೂರ, ಸಮುದ್ರ ತೀರದಲ್ಲಿ ಒಂಟಿಯಾಗಿ ಇರಬೇಕು ಎಂದು ಕಟ್ಟಿಸಿದ್ದ ಮನೆ. ಮೊಬೈಲ್ ಸತ್ತಿತ್ತು. ಇಂಟರ್ನೆಟ್ ಕತ್ತರಿಸಿ ಹೋಗಿತ್ತು. ಜಗತ್ತೇ ದೂರವಾಗಿ ಹೋಗಿ ನಿಂತಿತ್ತು.
ಏನಾದರಾಗಲಿ ಎಂದುಕೊಂಡು ತಾರಸಿಯ ತುದಿ ತಲುಪಿದ ಸಿದ್ಧಾರ್ಥ ಬಟ್ಟೆ ಒಣಗಿಸಲು ಹಾಕಿದ್ದ ಕಡು ಮಾಡಿನ ಅಡಿಯಲ್ಲಿಯೇ ಚಾಪೆ ಹಾಸಿ, ಕಂಬಳಿ ಹೊದ್ದು ಅಡ್ಡಾದ. ಕೊರೆವ ಚಳಿ. ಸುರಿವ ಮಳೆ. ದಟ್ಟ ಕತ್ತಲೆ. ಆಗಾಗ ಆಗಸದಲ್ಲಿ ಗುಡುಗಿನ ಅಬ್ಬರದ ನಂತರ ಹರಿಯುತ್ತಿದ್ದ ಮಿಂಚಿನ ಬೆಳಕಿನ ಬಳ್ಳಿಗಳು. ಆಗೆಲ್ಲ ಕಣ್ಣಿಗೆ ಬೀಳುತ್ತಿದ್ದಕೊ ಉಕ್ಕೇರುತ್ತಿದ್ದ ಕಡಲಿನ ರುದ್ರ ಭಯಂಕರ ಅಲೆಗಳು.
ಹೇಗಾದರೂ ಈ ರಾತ್ರಿ ಕಳೆದರೆ ಸಾಕು. ನಾಳೆ ಯಾರಾದರೂ ಊರಿನವರು ಬಂದು ನನ್ನನ್ನು ಕಾಪಾಡಬಹುದು ಎಂಬ ಒಂದು ಸಣ್ಣ ಹಂಬಲ. ನಡುವೆ ಇಡೀ ಊರೇ ಮುಳುಗಿ ಹೋಗಿದ್ದರೆ ಎಂಬ ಆತಂಕ ಬೇರೆ. ತಾರಸಿ ಏರಿ ಮುದುಡಿ ಕೂತಿದ್ದ ಮುದಿ ಜೀವ ಬದುಕಿಗಾಗಿ ಹಂಬಲಿಸುತ್ತಿತ್ತು.
ಬರು ಬರುತ್ತಾ ಸಾವಿನಲೆಗಳ ಸಪ್ಪಳ ಜೋರಾಗುತ್ತಲೇ ಸಾಗಿತು. ಕಡಲ ನೀರು ಏರುತ್ತಲೇ ಬಂತು. ಮುಂಜಾನೆ ಬೆಳಗು ಹರಿಯುವ ಹೊತ್ತಲ್ಲೂ ಅಬ್ಬರದ ಮಳೆ ಮುಂದುವರಿದೇ ಇತ್ತು. ಉಕ್ಕಿ, ಉಕ್ಕಿ, ಉಕ್ಕಿ ನಿಂತ ಕಡಲು ತಾರಸಿಯ ಮಟ್ಟಕ್ಕೇರಿ ನಿಂತಾಗ, ಇನ್ನೂ ಸಾವೇ ಗತಿ ಎಂದುಕೊಂಡ ಸಿದ್ಧಾರ್ಥ ಮುದುಡಿದ್ದವ ಎದ್ದು ನಿಂತ. ತಾರಸಿಯ ಅಡ್ಡಗೊಡೆಗೆ ಬಂದಪ್ಪಳಿಸುತ್ತಿದ್ದ ಕಡಲ ಅಲೆಗಳು ಕ್ರಮೇಣ ಮೇಲೇರಿ ಒಳ ನುಗ್ಗ ತೊಡಗಿದವು.
ಎದುರು ಬೋರ್ಗರೆವ ಸಮುದ್ರ. ಮೂರು ಬದಿಯೂ ಆಗಸದೆತ್ತರಕ್ಕೆ ಬೆಳೆದು ನಿಂತಿದ್ದ ತೆಂಗಿನ ಮರಗಳನ್ನೇ ನುಂಗಿ ನಿಂತಿದ್ದ ಅಪಾರ ಜಲರಾಶಿ. ಹೊಸ್ಮನೆಯ ಹೊಳೆ. ಕೊಡೇರಿಯ ಕಡಲಿನ ಅಂಗಳದಲ್ಲಿಯೇ ಬಾಲ್ಯ ಕಳೆದರೂ ಈಜು ಬಾರದ ಜೀವ.
ಕಡಲ ತೀರದ ತನ್ನ ಮನೆ!
ತನ್ನದೇ ಮನೆ!
ಬದುಕಿನ ಕೊನೆಯ ಹೊತ್ತಿಗೆ ಸಮುದ್ರ ಬದಿಯ ನನ್ನದೇ ಒಂಟಿ ಮನೆಯಲ್ಲಿ ಒಂಟಿ ಜೀವನ. ಎಂದು ಬದುಕಿನುದ್ದಕ್ಕೂ ಹಂಬಲಿಸಿ. ನಿವೃತ್ತಿಯ ನಂತರ ಎಲ್ಲವನ್ನೂ ಬಿಟ್ಟು ಇಲ್ಲಿ ಬಂದು ಒಬ್ಬಂಟಿಯಾಗಿ ನೆಲೆ ನಿಂತ ಫಲವೇ ಇದು.
ಈ ರೀತಿಯ ನಿರ್ಗತಿಕ ಸಾವು!?
ಅನಾಥ ಪ್ರಜ್ಞೆ … ಸಾವಿಗಿಂತಲೂ ಘೋರವಾಗಿ ಅಪ್ಪಳಿಸಲಾರಂಭಿಸಿತು.
ಕಡಲೇ ಬಂದು ನುಂಗಲೋ!?
ನಾನೇ ಕಡಲಿಗೆ ಹಾರವಾಗಲೋ!?
ಸಾವೇ ಬಂದು ಬರಸೆಳೆದುಕೊಳ್ಳಲೋ… ನಾನೇ ಹೋಗಿ ಸಾವನ್ನು ಅಪ್ಪಿಕೊಳ್ಳಲೋ…
ಅದಾಗಲೇ ಅರ್ಧ ನೀರು ತುಂಬಿಕೊಂಡಿದ್ದ ತಾರಸಿಯ ಮೇಲೆ ಎಳೆದೆಳೆದು ಹೆಜ್ಜೆ ಹಾಕಿದ.
ಸಾಗರವೆಲ್ಲಿ!?
ಎತ್ತ ನೋಡಿದರೂ ಜಲರಾಶಿ. ಸುತ್ತಲೂ ಸಾಗರವೇ!
ಇನ್ನು ತಪ್ಪಿಸಿಕೊಳ್ಳಲು, ಬದುಕಿ ಉಳಿಯಲು ಸಾಧ್ಯವೇ ಇಲ್ಲ. ಅರಿವಾದ ಕೂಡಲೇ, ಸಾಗರದ ಕಡೆಗೆ ನೋಡಿ ನಾನೇ ನಿನಗೆ ಒಡ್ಡಿಕೊಂಡು ಬಿಡುತ್ತೇನೆ ಎಂದು ತಾರಸಿಯ ಅಡ್ಡ ಗೋಡೆ ಮೇಲೆ ಹತ್ತಿ ನಿಂತ. ಮೈಮೇಲೆ ಅದುವರೆಗೆ ಇದ್ದ ಕಂಬಳಿಯನ್ನು ಕಿತ್ತು ಎಸೆದ. ಮೈಗಂಟಿಕೊಂಡಿದ್ದ ಪೈಜಾಮ, ಟೀ ಶರ್ಟ್ ಎರಡನ್ನೂ ಕಿತ್ತೆಸೆದ. ಒಳ ಉಡುಪನ್ನೂ ತೆಗೆದು ಬಿಸಾಡಿದ. ಆಗಸದತ್ತ ಮುಖ ಮಾಡಿ ಬೆತ್ತಲಾಗಿ ನಿಂತಿದ್ದವ ಸೊಕ್ಕಿ-ಉಕ್ಕುತ್ತಿದ್ದ ಸಾಗರಕ್ಕೆ ಸಡ್ಡು ಹೊಡೆದು ನಿಂತ. ಆಗಸದೆತ್ತರಕ್ಕೆ ಕೈ ಚಾಚಿ, ಕಣ್ಣು ಮುಚ್ಚಿ, ಎದುರಿನ ಸೊಕ್ಕಿನ ಅಲೆಗಳಿಗೆ ತನ್ನನ್ನು ತಾನೇ ಒಡ್ಡಿಕೊಳ್ಳಲು ಮುಂದಾದ. ತಾರಸಿಯ ಕೊನೆಯ ಅಡ್ಡ ಗೋಡೆಯ ಮೇಲೆ ನಿಂತಿದ್ದವ ಒಂದು ಹೆಜ್ಜೆ …’
ಕನಸು ಧುತ್ತೆಂದು ಕತ್ತರಿಸಿತು. ಧಸಕ್ಕೆಂದು ವಾಸ್ತವಕ್ಕಿಳಿದ. ಮೈ ಬೆವರಿನಿಂದ ಒದ್ದೆಯಾಗಿ ಹೋಗಿತ್ತು. ಕೈಕಾಲುಗಳು ನಡುಗುತ್ತಿದ್ದವು. ಪಕ್ಕದಲ್ಲಿಯೇ ಇದ್ದ ಸೋಫಿಯ ಕೈಗಳು ಇವನ ಕೊರಳನ್ನು ತಬ್ಬಿಕೊಂಡೇ ಇದ್ದವು. ನಿಧಾನವಾಗಿ ಅವಳ ಕೈಗಳನ್ನು ಪಕ್ಕಕ್ಕೆ ಸರಿಸಿ, ಶಬ್ಧವಾಗದಂತೆ ಮೇಲೆದ್ದು ಬಾತ್ರೂಂ ಒಳಗೆ ಹೋಗಿ ಚಿಲಕ ಹಾಕಿಕೊಂಡ.
ಮೈ ಇನ್ನೂ ನಡುಗುತ್ತ, ಬೆವರು ಸುರಿಯುತ್ತಿತ್ತು. ಕನಸಿನ ಅಘಾತದಿಂದ! ಅದೂ ಘಾಂದ್ರುಕ್ನ ಬೆಳಗಿನ ಜಾವದ ಕೊರೆವ ಚಳಿಯ ನಡುವೆ. ಕನ್ನಡಿಯ ಮುಂದೆ ನಿಂತು ಮುಖ ನೋಡಿಕೊಂಡವ, ನಲ್ಲಿ ತಿರುಗಿಸಿದ. ಹಿಮಗಟ್ಟಿದ್ದ ನೀರು ಹನಿಯಿತು. ಆ ನೀರಲ್ಲೇ ಮುಖ ತೊಳೆದವ ಒಂದು ಕ್ಷಣ ಕಲ್ಲಾಗಿ ನಿಂತ.
ಕನಸಿಗೂ, ವಾಸ್ತವಕ್ಕೂ ನಡುವಿನ ಗೆರೆಯನ್ನು ಅಳಿಸಿ ಹಾಕುವ ಯತ್ನ ಮಾಡಿದ.
‘ತನ್ನೆದುರು ಸಾಗರವಿಲ್ಲ. ನಾನು ಕೊಡೇರಿಯಲ್ಲಿ ಇಲ್ಲ. ಸಾವಿನ ಎದುರು ನಿಂತಿಲ್ಲ’ ಎಂದು ಮನವರಿಕೆಯಾದ ಮೇಲೆ ಕಾಟೇಜ್ನ ಲಿವಿಂಗ್ ರೂಂಗೆ ವಾಪಸು ಬಂದ. ಅಲ್ಲಿದ್ದ ಎಲೆಕ್ಟ್ರಿಕ್ ಕ್ಯಾಟಲ್ನಲ್ಲಿ ತಣ್ಣೀರು ಸುರಿದು, ಅದನ್ನು ಕುದಿಸಿ, ಪಿಂಗಾಣಿಯ ಕಪ್ಗೆ ಬಿಸಿ ನೀರು ಸುರಿದು, ಟೆಟ್ಲೆಯ ಗ್ರೀನ್ ಟೀ ಬ್ಯಾಗ್ ಅದರೊಳಗೆ ಅದ್ದಿ, ಕೈಯಲ್ಲಿದ್ದ ಬಿಸಿ-ಬಿಸಿಯಾದ ಕಪ್ ಹಿಡಿದು ಸೋಫಾ ಮೇಲೆ ಕೂತ ಸಿದ್ಧಾರ್ಥ. ಒಳಗೆ ಮಲಗಿದ್ದ ಸೋಫಿಯ ನಿದ್ದೆಗೆ ಭಂಗ ತರಬಾರದು ಎಂದುಕೊಂಡು, ಸೋಫಾದ ಮೇಲೆಯೇ ಕೂತು ಬೆಳಗು ಹರಿಯುವುದರ ನಿರೀಕ್ಷೆಯಲ್ಲಿ ಕಾಲ ಕಳೆದ.
ಬೆಳಗಾಯಿತು. ನಿನ್ನೆ ಸಂಜೆಯ ಹೊತ್ತಿಗೆ ಆಗಸದೆಲ್ಲೆಡೆ ದಟ್ಟವಾಗಿ ಹರಡಿಕೊಂಡಿದ್ದ ಮೋಡಗಳೆಲ್ಲವೂ ಮರೆಯಾಗಿದ್ದವು. (ಪೂರ್ಣ ಪಾಠಕ್ಕಾಗಿ ’ಘಾಂದ್ರುಕ್’ ಕಾದಂಬರಿ ಓದಿ)
ಕೃತಿ: ಘಾಂದ್ರುಕ್
ಕೃತಿಕಾರ: ಸತೀಶ್ ಚಪ್ಪರಿಕೆ
ಪ್ರಕಾಶನ: ಅಂಕಿತ ಪುಸ್ತಕ
ಪುಟ: 424, ಬೆಲೆ: ರೂ.495
ಆನ್‌ಲೈನ್ ಖರೀದಿಗೆ: ನವಕರ್ನಾಟಕ, ಅಂಕಿತಪುಸ್ತಕ, ಸಪ್ನಾಆನ್‌ಲೈನ್