:: ಸಚಿನ್ ನಾಯಕ್
“ದುರ್ಯೋಧನ ಹತನಾದ, ಭೀಮ ಕೊಂದು ಮುಗಿಸಿದ. ದುರ್ಯೋಧನನ ತೊಡೆ ಮುರಿದು, ಅವನನ್ನು, ತೊಟ್ಟ ಪ್ರತಿಜ್ಞೆಯಂತೆಯೇ ದ್ವಂದ್ವ ಯುದ್ಧದಲ್ಲಿ ಮಣ್ಣು ಮುಕ್ಕಿಸಿ, ದೌಪದಿಯ ಅವಮಾನದ ಸೇಡು ತೀರಿಸಿಕೊಂಡ… ಯುದ್ಧ ಮುಗಿಯಿತು….ಪಾಂಡವರಿಗೇ ಜಯ…!!”
ಹದಿನೆಂಟನೇ ದಿನ ಎರಡೂ ಕಡೆಯ ಕೆಲವು ಅಳಿದುಳಿದ ಸೈನಿಕರು ಅಕ್ಷರಶಃ ಅರೆಜೀವವಾಗಿದ್ದರೂ ಉತ್ಸಾಹದಿಂದ ಕುಣಿಯುತ್ತಾ ಕೇಕೆ ಹಾಕುತ್ತಿದ್ದರು!! ಎರಡೂ ಕಡೆಯ ಸೈನ್ಯಗಳೂ ಸಂಪೂರ್ಣವಾಗಿ ನಾಶವಾಗಿದ್ದವು. ಉಳಿದುಕೊಂಡವರಲ್ಲಿ ಇನ್ನೆಲ್ಲಿಯ ಶತ್ರುತ್ವ? ಪರಸ್ಪರ ಗುರುತು ಪರಿಚಯ ಕೂಡ ಇಲ್ಲದ ಈ ಸೈನಿಕರಿಗೆ ತಾವು ಯಾರ ಕೈ ಕೆಳಗೆ ಹೋರಾಡಿದ್ದರೋ ಇಲ್ಲವಾದ ಮೇಲೆ ತಮ್ಮತಮ್ಮಲ್ಲಿ ಇನ್ನೆಲ್ಲಿಯ ದ್ವೇಷ?? ಅವರೂ
ಒಟ್ಟಾಗಿಯೇ ಇದ್ದ ಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು ಕೇಕೆ ಹಾಕುತ್ತಿದ್ದರು.
ಅಲ್ಲಲ್ಲಿ ಬಿದ್ದಿದ್ದ ಸೇನಾನಿಗಳ, ರಥಿಕರ ಶವಗಳಿಂದ ಆಭರಣ, ಶಸ್ತ್ರಾಸ್ತ್ರ ಅಥವಾ ಬೆಲೆಬಾಳುವ ವಸ್ತುವೇನಾದರೂ ಸಿಕ್ಕರೆ ಕಿತ್ತು ಇಟ್ಟುಕೊಳ್ಳುತ್ತಿದ್ದರು. ಹದಿನೆಂಟು ದಿನಗಳ ಈ ಮಹಾಮಾರಿಯ ನರ್ತನದಲ್ಲಿ ಬದುಕುಳಿದಿದ್ದೇ ಹೆಚ್ಚು ಎಂದು ಸುಮ್ಮನೆ ಕೈ ಬೀಸಿಕೊಂಡು ಮನೆಗೆ ಹೋಗಲಾದೀತೇ? ತಮ್ಮ ಪರಾಕ್ರಮವನ್ನು ಹೇಳಿಕೊಳ್ಳಲು, ತೋರಿಸಿಕೊಳ್ಳಲು ಏನಾದರೂ ಬೇಕಲ್ಲವೇ?? ಹಾಗಾಗಿ ಕಿರೀಟ, ಕತ್ತಿ, ಕುದುರೆಯ ವಾಫೆಯ ತಾಮ್ರದಪಟ್ಟಿ, ಹೀಗೆ ಕೈಗೆ ಸಿಕ್ಕಿದ್ದನ್ನೆಲ್ಲ ಕಿತ್ತುಕೊಳ್ಳುತ್ತಿದ್ದರು ಈ ಅರೆಸತ್ತ ಮನುಷ್ಯರು. ಸತ್ತವನಾದರೂ ಸರಿ, ಕೊಳೆತು ನಾರುತ್ತಿರುವ ಹೆಣವಾದರೂ ಸರಿ, ಲೋಹ ಕೊಳೆಯುವುದೇ??
ಇವರ ನಡುವೆಯೇ ಕೊಳೆತ ಹೆಣಗಳನ್ನು ಕುಕ್ಕಿ ಕುಕ್ಕಿ ತಿನ್ನುತ್ತಾ, ಹದಿನೆಂಟು ದಿನಗಳಿಂದ ಸತತವಾಗಿ ತಿಂದು ಹೊಟ್ಟೆಯೆಂಬುದು ಭೂಮಿಭಾರವಾಗಿದ್ದರೂ ತಮ್ಮತಮ್ಮಲ್ಲೇ ಒಂದೊಂದು ತುಣುಕು ಮಾಂಸಕ್ಕಾಗಿಯೂ
ಕಚ್ಚಾಡುತ್ತಿರುವ ರಣಹದ್ದುಗಳು. ತಿಳಿಗುಲಾಬಿ ಬಣ್ಣದ ಅವುಗಳ ಮುಖಗಳು ಮಾಂಸ ಮಜ್ಜೆ, ನೆತ್ತರಿನಿಂದ ಮೆತ್ತಲ್ಪಟ್ಟು ಕಪ್ಪು ಮಿಶ್ರಿತ ಕೆಂಪುಬಣ್ಣಕ್ಕೆ ತಿರುಗಿದ್ದವು. ದಿನಗಟ್ಟಲೆ ಸ್ನಾನ, ನೀರನ್ನೇ ಕಾಣದ ಬೆವರು ರಕ್ತದಿಂದ ದುರ್ನಾತ ಬೀರುತ್ತಿದ್ದ ಆ ಸೈನಿಕರಿಗೂ, ಆ ರಣಹದ್ದುಗಳಿಗೂ ಯಾವ ವ್ಯತ್ಯಾಸವೂ ಕಾಣುತ್ತಿರಲಿಲ್ಲ.
ಯುದ್ಧವೇನೋ ಮುಗಿಯಿತು, ಗೆದ್ದವರು ಯಾರು? ಅದಕ್ಕಿಂತ ಮುಖ್ಯವಾಗಿ, ಗೆದ್ದಿದ್ದೇನನ್ನು? ಕೊಳೆತ ಹೆಣಗಳ ದುರ್ನಾತ ಬೀರುತ್ತಿರುವ ಈ ನೆಲವೇ? ವಿಧವೆ, ಅನಾಥರಿಂದ ತುಂಬಿ ಗೊಳೋ ಎನ್ನುತ್ತಿರುವ ಹಸ್ತಿನಾವತಿಯೇ? ಮೂಳೆ, ಬುರುಡೆಗಳ ಭವ ಸಿಂಹಾಸನವನ್ನೇರುವನೇ ಸಾಮ್ರಾಟ ಯುಧಿಷ್ಠಿರ, ಪಕ್ಕದಲ್ಲಿ ರಾರಾಜಿಸುವಳೇ ಸಾಮ್ರಾಜ್ಞಿ ದೌಪದಿ?
ಶೀಘ್ರವೇ ಇಲ್ಲಿಂದ ತೆರಳಬೇಕು, ಭೀಮನನ್ನೂ ಕರೆದುಕೊಂಡು. ಸಾಕು ಈ ಪರಾಕ್ರಮ, ಪೌರುಷ, ಸಾಹಸ ಎಲ್ಲವೂ, ಇನ್ನು ಬಾಹುಬಲದ ಅಗತ್ಯವಿಲ್ಲ. ಅರಮನೆ, ಬೆಡಗು, ಬಿನ್ನಾಣ ಇವ್ಯಾವುದರ ಅಗತ್ಯವೂ ಇಲ್ಲ. ನನ್ನಣ್ಣ ಮಹಾರಾಜ ಸೇನೇಶನನ್ನು ಕೋರಿ ಗಂಗೆಯ ತಟದಲ್ಲಿ ಭೂಮಿಯ ತುಣುಕೊಂದನ್ನು ಪಡೆದುಕೊಂಡು, ಅಲ್ಲೊಂದು ಚಿಕ್ಕ ಸೌಧವನ್ನು ಕಟ್ಟಿಕೊಂಡು ನಾನು, ಭೀಮ ಇಬ್ಬರೇ… ಅಕ್ಕಪಕ್ಕದಲ್ಲಿ ವಿಶೋಕ ಚಿತ್ರೆಯರ
ಸಂಸಾರವೂ, ಗೌರಾಂಗಿಯೂ, ನೆಮ್ಮದಿಯಿಂದ ಬದುಕಿನ ಉಳಿದ ದಿನಗಳನ್ನು ಸರಳ ರೀತಿಯಲ್ಲಿ ಎಲ್ಲರೂ ಒಟ್ಟಾಗಿ ಶಾಂತಿ ಕಳೆಯಬೇಕು. ಸಾಂಗತ್ಯ ಒಂದಿದ್ದರೆ ಸಾಕಲ್ಲವೇ, ಒಬ್ಬರಿಗೊಬ್ಬರು. ಅದೇ ಅಲ್ಲವೇ ನಿಜವಾದ ಸಂಪತ್ತು !
ಬಲಂಧರೆಯ ಸಾಮ್ರಾಜ್ಯ ಅದೇ.
ಯುವರಾಜನಾಗಿ ಸರ್ವಗನಿಗೆ ಕರ್ತವ್ಯಗಳಿರುತ್ತವೆ. ಈ ಯುದ್ಧ ಅನುಭವ ಹಾಗೂ ಪಾಠ. ಇನ್ನೆಂದೂ ಆತ ಬಯಸಲಾರ, ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಾ ಉತ್ತಮ ಆಡಳಿತಗಾರ ಎನಿಸಿಕೊಂಡರೆ ಸಾಕಲ್ಲವೇ! ಹೌದು! ಇವನಲ್ಲಿ ನನ್ನ ಮಗ ಸರ್ವಗ, ಇನ್ನೂ ಬಂದಿಲ್ಲವಲ್ಲ ಭೇಟಿಯಾಗಲು?? ವಿಜಯೋತ್ಸವ ಆಚರಿಸುತ್ತಿರುವರೇ ಪಾಂಡವರು, ಏನಿದೆ ಆಚರಿಸಲು?? ಬರುತ್ತಾನೆ, ಪಾಪ ಆಯಾಸದಿಂದ ಮಲಗಿ ವಿಶ್ರಾಂತಿ ಪಡೆಯುತ್ತಿರಬೇಕು. ನಾಳೆ ಬೆಳಿಗ್ಗೆ ಎದ್ದು ಬರಲಿ, ವಯಸ್ಸಿಗೆ ಮೀರಿದ ಅನುಭವ, ಆಪ್ತರಾದ ಅಭಿಮನ್ಯು ಹಾಗು ಘಟೋತ್ಕಚರ ಸಾವನ್ನು ಕಣ್ಣೆದುರೇ ನೋಡಿದ ಆ ಎಳೆಯ ಹರೆಯದ ಹುಡುಗನ ಮನಃಸ್ಥಿತಿ ಹೇಗಿರಬಹುದು? ಅಲ್ಲಿ ಕಾಶಿಯಲ್ಲಿ
ಅವನ ಪತ್ನಿಗೆ ಬಹುಶಃ ಪ್ರಸವವಾಗಿರಲೂಬಹುದೇ? ಕೆಲ ದಿನಗಳಲ್ಲಿಯೇ ಇವೆಲ್ಲಾ ದುಃಸ್ವಪ್ನಗಳನ್ನೂ ಬದಿಗೊತ್ತಿ ಹೊಸ ಜೀವನಕ್ಕೆ ತನ್ನನ್ನು ತಾನು ತೆರೆದುಕೊಳ್ಳಬೇಕು ಆತ. ಅವನಿಗೆ ನನ್ನ ಭೀಮನ ಮಾರ್ಗದರ್ಶನದ ಅಗತ್ಯ ತುಂಬಾ ಇದೆಯಲ್ಲವೇ? ನಿರ್ವಹಿಸಬಲ್ಲ ನಮ್ಮ ಮಗ, ಅವನಲ್ಲಿ ಆ ಯೋಗ್ಯತೆ ಇದೆ. ವಿಶ್ರಾಂತಿ ತೆಗೆದುಕೋ ಕಂದ, ನಾಳೆಯಿಂದ ಹೊಸ ಜೀವನಕ್ಕೆ ಪಯಣಿಸುವ.
” ಅ….ಯ್ಯೋ…..!”
ಮುಗಿಲನ್ನೇ ಭೇದಿಸುವಂತಹ ಆರ್ತನಾದ!! ಹೆಣ್ಣಿನದೋ? ಗಂಡಿನದೋ? ಗುರುತಿಸಲಾಗದಷ್ಟು ಕರ್ಕಶವಾಗಿತ್ತು ಆ ಚೀತ್ಕಾರ! ಆ ಕಡೆಯ ಶಿಬಿರದತ್ತಣಿಂದ ಬಂತಲ್ಲವೇ ಕೂಗು? ಇನ್ನೊಮ್ಮೆ ಮತ್ತೊಮ್ಮೆ…. ಇತ್ತಲಿಂದ ಯಾರೋ ಆ ಕಡೆ ಓಡಿದರು. ಅವರ ಧ್ವನಿಯೂ ಆ ಚೀತ್ಕಾರದೊಂದಿಗೇ ಸೇರಿ…!!!! ತಟ್ಟನೆ ನನ್ನ ಶಿಬಿರದ ಪರದೆಯನ್ನು ಸರಿಸಿ ಒಳಗೆ ಬಂದ ಹೆಣ್ಣು ನನ್ನನ್ನು ಎಬ್ಬಿಸಿ ಕರೆದುಕೊಂಡು ಹೋಯಿತು.
ಕೃತಿ: ಪುನರ್ನವ (ಕಾದಂಬರಿ)
ಲೇಖಕ: ಸಚಿನ್ ನಾಯಕ್
ಪ್ರಕಾಶನ: ಬಿಎಫ್‌ಸಿ ಪಬ್ಲಿಕೇಶನ್ಸ್
ಬೆಲೆ: 280 ರೂ.
ಇದನ್ನೂ ಓದಿ: Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು