Site icon Vistara News

Sunday Read: ಹೊಸ ಪುಸ್ತಕ: ಯೋಗತಾರಾವಳಿ- ಒಂದು ಅವಲೋಕನ

yogataravali

ಭಾರತೀಯ ಸಂಸ್ಕೃತಿಯ ಜೀವಾಳವೇ ಯೋಗವಿದ್ಯೆ. ಈ ವಿದ್ಯೆಯು ತಪಸ್ಸಿನಿಂದಲೇ ಲಭ್ಯ. ಈ ವಿದ್ಯೆಯು ಎಲ್ಲರಿಗೂ ಉಪಯುಕ್ತವಾಗಬಲ್ಲುದಾದರೂ ಸುಲಭಗೋಚರವೇನಲ್ಲ. ಯುಕ್ತವಾದ ಮಾರ್ಗದರ್ಶನವಿಲ್ಲದಿದ್ದಲ್ಲಿ ಎಷ್ಟೇ ಶ್ರಮಪಟ್ಟರೂ ಪೂರ್ಣವಾಗಿ ದಕ್ಕದ ವಿದ್ಯೆಯಿದು. ನಮ್ಮ ದೇಶದಲ್ಲಿ ಮಾತ್ರ ವೇದರಾಶಿಯಿಂದ ಹಿಡಿದು ಇಂದಿನ ಸತ್ಸಾಹಿತ್ಯದವರೆಗೂ ಅನುಸ್ಯೂತವಾಗಿ ಆದರಕ್ಕೆ ಪಾತ್ರವಾದ ವಿದ್ಯೆಯಿದು.

ವಿದ್ಯೆಯೊಂದು ಸೂಕ್ಷ್ಮವಾದಷ್ಟೂ ಅದು ಅನುಭವಮಾತ್ರಗಮ್ಯವಾಗುತ್ತದೆ. ಅದನ್ನು ಸಸಾರವಾಗಿ ಸಮಗ್ರವಾಗಿ ಗ್ರಹಿಸಬಲ್ಲ ಶಿಷ್ಯರ ಸಂಖ್ಯೆಯೂ, ಮುಂದುವರೆಸಿಕೊಂಡು ಹೋಗಬಯಸುವ ಮಂದಿಯೂ, ಅದನ್ನು ಸಾಧಿಸಿಕೊಳ್ಳುವವರೂ ವಿರಳರೇ ಆಗಿಬಿಡುವುದುಂಟು. ಎಂದೇ, ಸ್ವಲ್ಪವೇ ಕಾಲದಲ್ಲೇ ಎಷ್ಟೆಷ್ಟೋ ಪಲ್ಲಟಗಳನ್ನೋ ಶೈಥಿಲ್ಯಗಳನ್ನೋ ವಿಕಾರಗಳನ್ನೋ ವಿಸ್ಮೃತಿಗಳನ್ನೋ ಅಂತಹ ವಿದ್ಯೆಗಳು ಹೊಂದುತ್ತಾ ಹೋದಾವು!

ಉದಾಹರಣೆಗೆ ಗೀತ-ನೃತ್ಯಗಳ, ಅಥವಾ ಯೋಗ-ಆಯುರ್ವೇದಗಳ, ಮೂಲಗ್ರಂಥಗಳಲ್ಲಿ ಉಲ್ಲಿಖಿತವಾದ ಮೂಲೋದ್ದೇಶಗಳನ್ನೋ ಚರಮಫಲಗಳನ್ನೋ ನೋಡಿ. ಅವನ್ನಿಂದು ಸುಲಭವಾಗಿ ಕಾಣಲಾಗುತ್ತಿದೆಯೇನು? ಉತ್ಕಟವಾಗಿ ಶ್ರಮಿಸಿಯಾದರೂ ಅವನ್ನು ಸಾಧಿಸಿಕೊಳ್ಳಲಾಗುತ್ತಿವೆಯೇ? – ಎಂದು ಒಮ್ಮೆ ಕೇಳಿಕೊಂಡರೆ ಸಾಕು; ಹೌದೆಂದು ಧೈರ್ಯವಾಗಿ ಹೇಳಿಕೊಳ್ಳುವಂತೆ ಏನೂ ಕಾಣುವಂತಿಲ್ಲ – ಎಂಬುದು ಗೋಚರವಾಗುತ್ತದೆ: ತಪ್ಪಾಗುತ್ತಿರುವುದೆಲ್ಲಿ? ಎಂದು ಊಹಿಸಲು ಸಹ ಸಾಧ್ಯವಾಗುತ್ತಿಲ್ಲ!

ಪ್ರೊ. ಕೆ.ಎಸ್‌ ಕಣ್ಣನ್‌

ಹೆಜ್ಜೆಹೆಜ್ಜೆಗೂ ತನ್ನನ್ನು ಯೋಗಶಾಸ್ತ್ರವೆಂದು ಕರೆದುಕೊಳ್ಳುವ ಗ್ರಂಥ ಭಗವದ್ಗೀತೆಯೇ ಸರಿ. ಮಧ್ಯಕಾಲದಲ್ಲಿ ಯೋಗವು ನಷ್ಟವಾಗಿದ್ದನ್ನು ಅದು ನೆನಪಿಸುತ್ತದೆ. ತದ್ದ್ವಾರಾ ಎಚ್ಚರಿಸುತ್ತದೆ! : “ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ!” (ಗೀತೆ 4.2). ಒಂದರ್ಥದಲ್ಲಿ, ಸದ್ವಿದ್ಯೆಯ ಲೋಪವೇ ಜಗತ್ತಿನಲ್ಲಿ ಕ್ಷೋಭೆಗೆ ಕಾರಣವೆನಿಸುವ ಧರ್ಮಗ್ಲಾನಿ; ಗ್ಲಾನಿಯೆಂದರೆ ಬಾಡುವುದು. ಹಾಗೆ ನಾಶಹೊಂದಿದ ಧರ್ಮದ ಪುನಸ್ಸಂಸ್ಥಾಪನೆಯಾಗಬೇಕು. ಅದಕ್ಕಾಗಿಯೇ ತತ್ತತ್ಕಾಲಕ್ಕೆ ಭಗವಂತನ ಅವತರಣವು ಆಗುವುದೂ. ಎಂದೇ, ಸಂಭವಾಮಿ ಯುಗೇ ಯುಗೇ – ಎಂಬುದೇ ಯೋಗಾಚಾರ್ಯನಾದ ಶ್ರೀಕೃಷ್ಣನ ಆಶ್ವಾಸನೆ (ಗೀತೆ 4.7).

ಇಂತಹ ತಾರಕವಿದ್ಯೆಯನ್ನು ಕರತಲಾಮಲಕವಾಗಿ ಆಮೂಲಾಗ್ರವಾಗಿ ಕಂಡುಕೊಂಡಿದ್ದ ಅಪೂರ್ವಪುರುಷರೆಂದರೆ ಅಷ್ಟಾಂಗಯೋಗವಿಜ್ಞಾನಮಂದಿರದ ಸಂಸ್ಥಾಪಕರಾದ, ಮೈಸೂರಿನ ಬಳಿಯ ಹೆಡತಲೆ-ಗ್ರಾಮದ ನಿವಾಸಿಗಳಾಗಿದ್ದ ಶ್ರೀರಂಗಮಹಾಗುರುಗಳು (1913-1969). ಭಾರತೀಯಸಂಸ್ಕೃತಿಯ ಸರ್ವಸ್ವಕ್ಕೂ ಯೋಗವಿದ್ಯೆಯು ಹೇಗೆ ಆಧಾರಭೂತವಾದದ್ದು – ಎಂಬುದನ್ನು ಪ್ರಯೋಗಬದ್ಧವಾಗಿ ತೋರಿಸಬಲ್ಲ ಏಕೈಕಪುರುಷರಾಗಿದ್ದರು, ಅವರು.

ಯೋಗವಿದ್ಯೆಯ ತುತ್ತತುದಿಯನ್ನು ಸ್ವಪ್ರಯತ್ನದಿಂದಲೇ – ವಾಸ್ತವವಾಗಿ ಹೇಳಬೇಕೆಂದರೆ ಅಪ್ರಯತ್ನವಾಗಿಯೇ – ಅವರು ಮುಟ್ಟಿದ್ದರು. ಸ್ವಾನುಭವದ ಬಲದ ಮೇಲೇ ಎಲ್ಲವನ್ನೂ ಪ್ರತಿಪಾದಿಸಬಲ್ಲವರಾಗಿದ್ದರು; ಆದರೂ ಯೋಗಲಕ್ಷ್ಯವನ್ನೂ ಯೋಗಮಾರ್ಗವನ್ನೂ ಯುಕ್ತವಾಗಿ ನಿರೂಪಿಸುವ ಹಲಕೆಲವು ಶಾಸ್ತ್ರವಾಕ್ಯಗಳನ್ನೂ ಅವರು ಶಿಷ್ಯಶಿಕ್ಷಣಕ್ಕಾಗಿ ಆಯ್ದಿಟ್ಟಿದ್ದರು. ಯೋಗವಿದ್ಯೆಯ ಶಿಖರಪ್ರಾಯವಾದ ತುಂಗ-ತುರೀಯ-ಸ್ಥಿತಿಯೊಂದುಂಟು. ಅದನ್ನು ಶಂಕರಭಗವತ್ಪಾದರ ಈ ಯೋಗತಾರಾವಳಿಯೆಂಬ ಕಿರುಕೃತಿಯು ರುಚಿರವಾಗಿ ಚಿತ್ರಿಸುತ್ತದೆ.

ಏನು ತಾರಾವಳಿಯೆಂದರೆ? “ತಾರ”ವೆಂದರೆ ಮುತ್ತು; ಆವಲಿ/ ಆವಳಿಯೆಂದರೆ ಸಾಲು. ಹೀಗಾಗಿ ತಾರಾವಳಿಯೆಂದರೆ ಮುತ್ತುಗಳ ಸಾಲು; ಮುತ್ತುಗಳನ್ನು ಸಾಲಾಗಿ ಪೋಣಿಸಿರುವ ಹಾರ. ಮುತ್ತುಗಳಿಂದಾದ ಸರದ ಮುಂದೆ ಮತ್ತಿನ್ನಾವ ಸರ? ಅಷ್ಟೇ ಅಲ್ಲ. ತಾರೆಯೆಂದರೆ ನಕ್ಷತ್ರವೂ ಹೌದಲ್ಲವೇ? ಹೀಗಾಗಿ, ತಾರಾವಲಿಯೆಂದರೆ ತಾರೆಗಳಂತಿರುವ ತಾರಗಳ ಒಂದು ಆವಲಿ: ಎಂದರೆ, ನಕ್ಷತ್ರಗಳಂತೆ ಹೊಳೆಯುವ ಮುತ್ತುಗಳಿಂದಾದ ಒಂದು ಮುದ್ದಾದ, ಬೆಲೆಬಾಳುವ, ಸರವಿದು! ನಕ್ಷತ್ರಗಳೆಷ್ಟು? ಇಪ್ಪತ್ತೇಳು (ಅಥವಾ ಇಪ್ಪತ್ತೆಂಟು) – ಎನ್ನುವರಲ್ಲವೇ? ಇದೋ, ಅಷ್ಟೇ ಸಂಖ್ಯೆಯ ಶ್ಲೋಕಗಳೇ ಇಲ್ಲಿವೆ! (ಕೊಸರಿನ ಒಂದು ಶ್ಲೋಕವೂ ಸೇರಿ) ಒಟ್ಟು 29 ಮುದ್ದಾದ ಶ್ಲೋಕಗಳ ಕಿರುಕೃತಿ ಇದು. (ಅಲ್ಲದೆ, “ತಾರ”ವೆಂಬುದಕ್ಕೆ ದಾಟಿಸುವುದೆಂಬ ಅರ್ಥವೂ, ಪ್ರಣವವೆಂಬ ಅರ್ಥವೂ, ವಿಷ್ಣುವೆಂಬ ಅರ್ಥವೂ ಉಂಟು. ಯೋಗವಿದ್ಯೆಯಲ್ಲಿ ಪ್ರಣವನಾದಕ್ಕೆ ಪ್ರಶಸ್ತವಾದ ಸ್ಥಾನವೇ ಸರಿ.)

ನಾದಾನುಸಂಧಾನವೇ ಈ ಕೃತಿಯ ಆರಂಭಬಿಂದು; ಅಲ್ಲಿಂದ ಆರಂಭಿಸಿ, ತುರೀಯವನ್ನು – ಅರ್ಥಾತ್ ನಿರ್ವಿಕಲ್ಪ-ಸಮಾಧಿ-ಸ್ಥಿತಿಯನ್ನು – ತಲುಪುವುದರವರೆಗಿನ ಹಲವು ಹೆಜ್ಜೆಗಳನ್ನು ಇದು ಕಾಣಿಸುತ್ತದೆ: ಲಯವಿಧಾನಗಳು, ನಾದಾನುಸಂಧಾನ, ನಾಡೀಶುದ್ಧಿ, ಅನಾಹತನಾದ-ಶ್ರವಣ, ಬಂಧ-ತ್ರಯ, ಕುಂಡಲಿನೀ-ಜಾಗರಿತಿ, ಕೇವಲ-ಕುಂಭಕ, ಸುಷುಮ್ನಾ-ಪ್ರವೇಶ, ರಾಜಯೋಗ-ಪ್ರಗತಿ, ಕೇವಲ-ಸಂವಿತ್, ಮನೋನ್ಮನೀ, ಉನ್ಮನೀ, ಅಮನಸ್ಕ, ಸಹಜಾಮನಸ್ಕ, ಅಜಾಡ್ಯ-ನಿದ್ರಾ, ಯೋಗ-ನಿದ್ರಾ, ನಿರ್ವಿಕಲ್ಪ-ನಿದ್ರಾ, ಜಗದ್-ವಿಲಯ, ಮನೋ-ವಿಲಯ, ಹಾಗೂ ಸಮಾಧಿ ಎಂಬ ಹೆಸರಿನ ಒಂದಿಪ್ಪತ್ತು ಘಟ್ಟಗಳನ್ನು ಈ ಕೃತಿಯು ತಿಳಿಸಿಕೊಡುತ್ತದೆ. “ಸೂಕ್ಷ್ಮಭೇದಃ ಪರಸ್ಪರಮ್” – ಎಂದು ಹೇಳಬಹುದಾದ ಯೋಗ-ಸ್ಥಿತಿಗಳಿವು. ಇವನ್ನು ಸಂಕ್ಷೇಪವಾಗಿಯಾದರೂ ಸುಂದರವಾಗಿ ಇಲ್ಲಿ ತಿಳಿಸಲಾಗಿದೆ. ಇದುವೇ ಇದರ ಗುರುಪ್ರೀತಿಕರವಾದ ಗರಿಮೆಯೆನ್ನಬಹುದು.

ಇತ್ತ ನಾದಯೋಗಿಗಳೂ ಆಗಿ, ಅತ್ತ ತುರೀಯಾತೀತವನ್ನೇ ಮುಟ್ಟಿದವರೂ ಆಗಿದ್ದವರು ಶ್ರೀರಂಗ ಮಹಾಗುರುಗಳು. ಈ ಲಘು-ಯೋಗಕಾವ್ಯದಲ್ಲಿ “ಮಧ್ಯ-ಮಣಿ” – ಎನ್ನಬಹುದಾದ ಶ್ಲೋಕವೊಂದಿದೆ: “ಅಶೇಷದೃಶ್ಯೋಜ್ಝಿತ” ಎಂದು ಆರಂಭವಾಗುವ ಹದಿನೈದನೆಯ ಶ್ಲೋಕ. ಅದನ್ನು ಶ್ರೀಗುರುಗಳು ಹಲವು ಬಾರಿ ಉಲ್ಲೇಖಿಸಿದ್ದರು. ಅಲ್ಲಿ ನಿರೂಪಿತವಾದಂತಹ “ವಿಚಿತ್ರ”ಸ್ಥಿತಿಗೆ ತಾವು ಆಗಾಗ್ಗೆ ಹೋಗಿಬರುತ್ತಿದ್ದುದನ್ನೂ ಸೂಚಿಸಿದ್ದರು; ಆ ಕಾರಣಕ್ಕಾಗಿ ತನ್ನನ್ನೇ “ವಿಚಿತ್ರ-ಮನುಷ್ಯ”ನೆಂಬುದಾಗಿ ಸಹ ಚಿತ್ರಿಸಿಕೊಂಡದ್ದೂ ಉಂಟು!

ಇಲ್ಲಿ ವಿಚಿತ್ರವೇನು- ಎಂಬುದನ್ನೂ ಗಮನಿಸಬೇಕು. ಜ್ಞಾನಿಗೆ ಸಹಜವಾದದ್ದು ಲೋಕಕ್ಕೆ ವಿಚಿತ್ರವೇ ಸರಿ: “ಯಾ ನಿಶಾ ಸರ್ವಭೂತಾನಾಂ…” ಎಂದು ಗೀತೆ ಹೇಳುವಂತೆ. ಲೋಕವು ಯಾವ ವಿಷಯಗಳನ್ನು ಕುರಿತಾಗಿ ಬಹಳವೇ ಕಾಳಜಿ ಮಾಡುತ್ತದೋ, “ಅದೆಲ್ಲಿ ಕಳೆದುಹೋಗಿಬಿಡುವುದೋ?” ಎಂಬುದಾಗಿ ಯಾವುದರ ಬಗ್ಗೆ ಎಚ್ಚರವಾಗಿರುತ್ತದೋ, ಅದು ಜ್ಞಾನಿಗೆ ಆಸ್ಥೆಗೆ ವಿಷಯವಾಗಿರುವುದಿಲ್ಲ. ಲೋಕದ ಎಚ್ಚರವು ಆತನಿಗೆ ಕತ್ತಲು: ಯಾವುದರ ಬಗ್ಗೆ ಲೋಕವು ಗಮನವನ್ನೇ ಕೊಡದೋ, ಅಂತಹ ಆತ್ಮಜ್ಞಾನದ ಬಗ್ಗೆ ಜ್ಞಾನಿಯು ಎಚ್ಚರವಾಗಿರುತ್ತಾನೆ. ಹೀಗಾಗಿ ಲೋಕದ ಪಾಲಿಗೆ ಕತ್ತಲಾದದ್ದು ಜ್ಞಾನಿಗೆ ಎಚ್ಚರದ ವಿಷಯವೇ. ಹಾಗಿಲ್ಲಿ ಯೋಗದ ಒಂದು ಉನ್ನತಸ್ಥಿತಿಯೆಂಬುದು ಇತ್ತ ಜಾಗರವೂ ಅಲ್ಲ, ಅತ್ತ ಸುಷುಪ್ತಿಯೂ ಅಲ್ಲ; ಹಾಗೂ ಜೀವಿತಾವಸ್ಥೆಯೂ ಅಲ್ಲ, ಹಾಗೆಂದು ಮರಣಾವಸ್ಥೆಯಂತೂ ಅಲ್ಲ – ಎಂಬ ವಿಶಿಷ್ಟವಾದ ಮಹಾನಂದ-ಸ್ಥಿತಿಯದು. ಹೀಗೊಂದು ಸ್ಥಿತಿಯೊಂದುಂಟೆಂದು ಸಹ ಲೋಕವರಿಯದು; ಅಂತಹ ಸ್ಥಿತಿಯಲ್ಲಿ ತಾನು ಆಗಾಗ್ಗೆ ಅನಾಯಾಸವಾಗಿ ನೆಲೆಸಿರುತ್ತಿದ್ದುದನ್ನು ಮಹಾಗುರುಗಳು ಹೇಳಿಕೊಂಡಿದ್ದರು!

ಅಲ್ಲದೆ, ಇಲ್ಲಿಯ ಕೊನೆಯ (29ನೆಯ) ಶ್ಲೋಕವನ್ನೂ ಉಲ್ಲೇಖಿಸಿ ಕಿಂಚಿತ್ತಾಗಿ ಅವರು ವಿವರಿಸಿದ್ದೂ ಉಂಟು; ಪ್ರಥಮ-ಶ್ಲೋಕವನ್ನಂತೂ ತೋಡಿ/ಕೇದಾರಗೌಳ ರಾಗಗಳಲ್ಲಿ ಹಾಡಿದ್ದರು ಕೂಡ. ಶ್ರೀರಂಗ ಮಹಾಗುರುಗಳ ಆಪ್ತಶಿಷ್ಯರಲ್ಲೊಬ್ಬರಾದ ಪೂಜ್ಯ ಶ್ರೀರಂಗಪ್ರಿಯಸ್ವಾಮಿಗಳೂ ಈ ಕೃತಿಯ ನಾಲ್ಕೈದು ಶ್ಲೋಕಗಳ ವಿಷಯವನ್ನು ತಮ್ಮ ಪ್ರವಚನಗಳಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಉಲ್ಲೇಖಿಸಿದ್ದರು.

ಇಲ್ಲಿ ನಿರೂಪಿತವಾದ ಯೋಗಾನುಭವವು ಲೋಕವಿಲಕ್ಷಣವೂ ಲೋಕೋತ್ತರವೂ ಆದುದೆಂಬುದನ್ನು ಕೃತಿಯು ವಾಚ್ಯವಾಗಿಯೂ ಸೂಚ್ಯವಾಗಿಯೂ ಹೇಳುತ್ತದೆ. ಎಂದೇ “ವಿಚಿತ್ರಂ!” “ಅಹೋ!” ಎಂಬ ಉದ್ಗಾರಗಳನ್ನಷ್ಟೇ ಅಲ್ಲದೆ, ಆ ಅನುಭವದ ಅನಿರ್ವಚನೀಯತೆಯನ್ನು ಸೂಚಿಸುವ “ಕಾಚಿತ್” “ಕೋಽಪಿ”, “ಕಾಮಪಿ”– ಎಂಬ ಶಬ್ದಗಳನ್ನೂ ಅದು ಬಳಸುತ್ತದೆ. ಯೋಗದ ಪರಮಾನಂದದಾಯಕವಾದ ಪರಮೋನ್ನತ ಸ್ಥಿತಿಗಳಿಗಾಗಿ ನಮ್ಮ ಪರವಾಗಿ ಹಂಬಲಿಸುತ್ತಾ “ಕದಾ” “ಕದಾ” ಎಂದೂ ಪದೇ ಪದೇ ಕೇಳುತ್ತದೆ!

ಚಿಕ್ಕದಾದರೂ ಚೊಕ್ಕದಾದ ಈ ಕೃತಿಯ ಬಗೆಗಿನ ಒಟ್ಟಾರೆ ನೋಟವೂ, ಮುಖ್ಯವಾಗಿ ಇದರ ಸಾರಭೂತವಾದ ಒಂದು ಒಳನೋಟವೂ, ದಕ್ಕುವಂತಹ ಸುಷಮ-ಸುಭಗ-ಸಮಗ್ರ-ವಿವರಣಪರ ಕೃತಿಗಳು ಈವರೆಗೆ ಬಂದಿಲ್ಲವೆಂದೇ ಹೇಳಬಹುದೇನೋ? ಕನ್ನಡದಲ್ಲಂತೂ ಇದ್ದಂತಿಲ್ಲ.

ಒಂದರ್ಥದಲ್ಲಿ ಭಗವದ್ಗೀತೆಯಂತೆಯೇ ಈ ಕೃತಿಯೂ: ಆಳವಾದ ಶಾಸ್ತ್ರವಾದರೂ ಗೇಯವಾದ ಕಾವ್ಯವೇ. “ಮಾಲಿನೀ” ಎಂಬ ವೃತ್ತದಲ್ಲಿರುವ ಅಂತಿಮ ಶ್ಲೋಕವೊಂದು, ಹಾಗೂ ಉಪಾಂತ್ಯವಾದ (ಎಂದರೆ ಕೊನೆಯದರ ಹಿಂದಿನ) “ವಸಂತತಿಲಕಾ” ಎಂಬ ವೃತ್ತದಲ್ಲಿರುವ ಶ್ಲೋಕವೊಂದು– ಇವೆರಡನ್ನು ಬಿಟ್ಟರೆ, ಉಳಿದ ಇಪ್ಪತ್ತೇಳು ಶ್ಲೋಕಗಳೂ “ಉಪಜಾತಿ” ಎಂಬ ವೃತ್ತದಲ್ಲಿಯೇ ಇವೆ; ಅಲ್ಲದೆ, ಶಬ್ದಾಲಂಕಾರ-ಅರ್ಥಾಲಂಕಾರಗಳಿಗೆ ಏನೂ ಕೊರತೆಯಿಲ್ಲ; ಹೃದ್ಯವಾದ ಭಾವಗಳಿಂದ ಕೂಡಿದ್ದು, “ರಸಾನಾಂ ರಸತಮ”ನಾದ ಭಗವಂತನೊಂದಿಗಿನ ಯೋಗವನ್ನು ಸರಳವಾಗಿ ಸರಸವಾಗಿ ಮಾಡಿಸುವ ಇದು, ನಿಸ್ಸಂಶಯವಾಗಿಯೂ ರಸ-ಭಾವ-ಭರಿತವಾದ ವರ-ಕವಿ-ಕೃತಿಯೇ ಸರಿ.

ಇನ್ನು, ಶಿವಾನಂದಲಹರಿಯೆಂಬ ಭಕ್ತಿಕಾವ್ಯದಲ್ಲಿ ಹೇಗೋ ಈ ಕೃತಿಯಲ್ಲಿಯೂ ಹಾಗೆಯೇ, ಶ್ರೀಶೈಲದ ದಿವ್ಯಸಾನ್ನಿಧ್ಯದ ಸ್ಮರಣೆಯು ಬಂದಿದೆ (ಶ್ಲೋ. 28). ಈ ಹಿಂದೆ (1910ರಲ್ಲಿ) ಶ್ರೀರಂಗದ ವಾಣೀವಿಲಾಸ ಮುದ್ರಣಾಲಯದಲ್ಲಿ 20 ಸಂಪುಟಗಳಲ್ಲಿ ಪ್ರಕಟವಾದ “ಶ್ರೀಶಂಕರ ಭಗವತ್ಪಾದರ ಸಮಗ್ರ ಕೃತಿಗಳ”ಲ್ಲಿ (16ನೇ ಸಂಪುಟದ ಪುಟಸಂಖ್ಯೆ 115ರಿಂದ 124ರವರೆಗೆ) ಯೋಗತಾರಾವಳಿಯು ಮುದ್ರಿತವಾಗಿತ್ತು. (ಮುಂದಿನ ಮರುಮುದ್ರಣಗಳಲ್ಲಿ ಸಂಪುಟ ಸಂಖ್ಯೆ-ಪುಟ ಸಂಖ್ಯೆಗಳು ತುಸು ಭಿನ್ನವಾಗಿರುವುದೂ ದಿಟವೇ). ಹೀಗಾಗಿ ಪರಂಪರೆಯಲ್ಲಿ ಶ್ರೀಶಂಕರ ಭಗವತ್ಪಾದರ ಕೃತಿಯೆಂಬುದಾಗಿಯೇ ಇದು ಗೃಹೀತವಾಗಿದೆ.

ಇದನ್ನೂ ಓದಿ:Sunday Read: ಹೊಸ ಪುಸ್ತಕ: ಎದೆಯ ದನಿ ಕೇಳಿರೋ

ಆದರೂ ಶೈಲಿಯಲ್ಲಿಯ ಭೇದವನ್ನೋ ವಸ್ತುವಿನಲ್ಲಿಯ ವಿಶೇಷವನ್ನೋ ಲಕ್ಷಿಸಿ, ಇದು ಶಂಕರರ ಕೃತಿಯಿರಲಾರದೆಂದು ವಾದಿಸುವವರೂ ಇದ್ದಾರೆ; ಆದರೂ, ಈ ಬಗ್ಗೆ ಯಾವ ಅಂತಿಮತೀರ್ಮಾನಕ್ಕೂ ಯಾರೂ ಬಂದಿಲ್ಲ. ಒಬ್ಬರು ಒಂದೇ ಶೈಲಿಯಲ್ಲೇ ಬರೆಯಬೇಕೆಂಬ ನಿಯಮವೇನೂ ಇಲ್ಲ; ಬೇರೆಬೇರೆಡೆ ಬೇರೆಬೇರೆ ವಿಷಯಗಳನ್ನು ನಿರೂಪಿಸಬಾರದೆಂಬ ನಿಯಮವಾದರೂ ಇರಲು ಸಾಧ್ಯವೇ? ಇವೆರಡಕ್ಕೂ ಯಾವುದೇ ಬಾಧಕವು ಇರಲಾರದಾದ್ದರಿಂದ, ಶಂಕರರ ಕರ್ತೃತ್ವವನ್ನು ಶಂಕಿಸಲೇಬೇಕೆಂಬುದಕ್ಕೆ ಪ್ರಬಲವಾದ ಕಾರಣವೂ ಕಾಣದೆಂದೇ ಹೇಳಬೇಕು. ಯೋಗತಾರಾವಳಿಯೇನು ವಾದಗ್ರಂಥವೇ? ಆದ್ದರಿಂದ, ವಾದಗ್ರಂಥಗಳಿಗೆ ಪ್ರಸ್ತುತವೇ ಅಲ್ಲದ, ಅನುಭವ-ಪ್ರಧಾನವೇ ಆಗಿರುವ, ಇದರ ವಿಷಯವನ್ನು ವಾದಗ್ರಂಥಗಳಲ್ಲಿ ಹುಡುಕಹೊರಡುವುದೇ ಅಸಂಗತ; ಅವಲ್ಲಿ ಯೋಗಾನುಭವದ ವಿಷಯಗಳು ಬಂದಿಲ್ಲವೆಂದು ಈ ಕೃತಿಯನ್ನೇ ಅಲ್ಲಗಳೆಯುವುದೂ ಯುಕ್ತವೆನಿಸಲಾರದಷ್ಟೆ.

ಅದೇನೇ ಆದರೂ, ಇಲ್ಲಿ ನಿರೂಪಿತವಾದ ವಸ್ತುವಿನ ಹಿರಿಮೆಯನ್ನು ಸ್ವಾನುಭವದಿಂದಲೇ ಅಳೆದು ನೋಡಿಯೇ ಶ್ರೀರಂಗ ಮಹಾಗುರುಗಳು ಇದನ್ನಾದರಿಸಿರುವುದು. ಇದರ ಕರ್ತೃವು ಯಾರೇ ಆದರೂ, ಉದಗ್ರವಾದ ವಿಷಯವನ್ನು ಉದಾತ್ತವಾದ ಶೈಲಿಯಲ್ಲಿ ನಿರೂಪಿಸಿರುವ ಅವರು ವಂದ್ಯರೇ ಸರಿ. ಭಕ್ತಿಯೋಗ-ನಾದಯೋಗ-ಜ್ಞಾನಯೋಗ- ಲಯಯೋಗ- ರಾಜಯೋಗಗಳ ಮಧುರಮಿಲನವಾದ ಈ ಕೃತಿಯು ಶ್ರೀಗುರುವಿಗೆ ಇಷ್ಟತಮವಾದ ಸಾಹಿತ್ಯರಾಶಿಯಲ್ಲೊಂದು. ಇಂತಹ ಅನರ್ಘ್ಯ ಕೃತಿಯನ್ನು ಆದಷ್ಟೂ ಲಲಿತವಾದ ಭಾಷೆಯಲ್ಲಿ, ಇಂದಿನವರಿಗೆ ರುಚಿಸಬಹುದಾದ ಶೈಲಿಯಲ್ಲಿ, ಶಾಸ್ತ್ರಗಳಿಗೆ ವಿರೋಧವಾಗದ ಬಗೆಯಲ್ಲಿ, ಪ್ರಾಕ್ತನ-ಅಧುನಾತನ ವಿದ್ವಾಂಸರಿಗೂ ಒಪ್ಪಿಗೆಯಾಗಬಲ್ಲ ಹಲಕೆಲವು ಯುಕ್ತಿಗಳ ಮೇಳನದಲ್ಲಿ – ನಿರೂಪಿಸುವ ಯತ್ನ ಈ ಪುಸ್ತಕದಲ್ಲಿದೆ.

ಇದನ್ನೂ ಓದಿ: Sunday read: ಹೊಸ ಪುಸ್ತಕ: ಅಂತರ್ವೀಕ್ಷಣೆ: ದೈವೀ ಮತ್ತು ಆಸುರೀ ಗುಣಗಳು

ಇದನ್ನು ಬರೆದಿರುವ ವಿದ್ವಾಂಸರೂ ಸಾಧಾರಣರಲ್ಲ. ಈಗ ಐಐಟಿ-ಮದ್ರಾಸಿನಲ್ಲಿ ಪೀಠ ಪ್ರಾಧ್ಯಾಪಕ(ಛೇರ್-ಪ್ರೊಫೆಸರ್) ರಾಗಿರುವ ಕೆ.ಎಸ್.ಕಣ್ಣನ್‍ರವರು. ಶ್ರೀ ಗುರುವಿನ ಪ್ರಿಯಶಿಷ್ಯರಲ್ಲೊಬ್ಬರಾದ ಶ್ರೀರಂಗಪ್ರಿಯ ಸ್ವಾಮಿಗಳಂತೆಯೇ (ಹಾಗೂ ಅವರ ಜೊತೆಯಲ್ಲಿಯೇ) ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತವನ್ನು (ವಿಭಾಗದ ಮುಖ್ಯಸ್ಥರಾಗಿಯೂ) ಬೋಧಿಸಿದವರು. ಕರ್ಣಾಟಕ ಸಂಸ್ಕೃತವಿಶ್ವವಿದ್ಯಾಲಯ/ಜೈನ್ ವಿಶ್ವವಿದ್ಯಾಲಯಗಳಲ್ಲಿ (ನಿರ್ದೇಶಕ/ಪ್ರಾಧ್ಯಾಪಕರಾಗಿ) ಈ ಹಿಂದೆ ಕೆಲಸ ಮಾಡಿದವರು. ಬಹುಶ್ರುತರಾದ ಇವರು ಮೂವತ್ತಕ್ಕೂ ಮಿಕ್ಕು ಗ್ರಂಥಗಳನ್ನು ಬರೆದಿರುವರು/ಸಂಪಾದಿಸಿರುವರು. ಹತ್ತಾರು ರಾಷ್ಟ್ರಿಯ/ಅಂತಾರಾಷ್ಟ್ರಿಯ ಸಮ್ಮೇಳನ/ವಿಚಾರಸಂಕಿರಣಗಳಲ್ಲಿ ಪತ್ರಿಕೆಗಳನ್ನು ಮಂಡಿಸಿ ಪ್ರವಚನಗಳನ್ನು ಮಾಡಿರುವರು.

ಮೂಲಕೃತಿಯಲ್ಲಿ ಚಿತ್ರಿಸಿರುವ ಯೋಗದ ನಾನಾಸೂಕ್ಷ್ಮ ಘಟ್ಟಗಳನ್ನು, ಇಲ್ಲಿಯಷ್ಟು ವಿಶದವಾಗಿ ತಿಳಿಸಿಕೊಡುವ ಮತ್ತೊಂದು ವಿವರಣೆಯು ಬಂದಿಲ್ಲವೆಂದೇ ಹೇಳಬಹುದೇನೋ? ಯೋಗದ ಮಹೋನ್ನತ ಸ್ತರಗಳ ತಿಳಿವಳಿಕೆಯನ್ನು ತಿಳಿಗನ್ನಡದಲ್ಲಿ ಉಂಟುಮಾಡುವ ಈ ಕೃತಿಯು ಎಲ್ಲರಿಗೂ ತಲುಪುವುದು ಮುಖ್ಯವೇ ಸರಿ.

ಕೃತಿ: ಯೋಗತಾರಾವಳಿ
ಲೇಖಕರು: ಪ್ರೊ.ಕೆ. ಎಸ್. ಕಣ್ಣನ್
ಪ್ರಕಾಶಕರು: ಅಷ್ಟಾಂಗಯೋಗ ವಿಜ್ಞಾನಮಂದಿರಂ
ಬೆಲೆ: 120 ರೂ.
ಖರೀದಿಗೆ: https://www.ayvm.in/publications (ವಾಟ್ಸ್ಯಾಪ್: 7411960041)

Exit mobile version