Site icon Vistara News

Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು

neeru book mogasale

ಧನು ತಿಂಗಳ 18. ಭಾನುವಾರ (2 ಜನವರಿ 2015) ಊರಿಗೆ ಊರೇ ಆಕಾಶಕ್ಕೆ ನೆಗೆದ ಹಾಗೆ ಸೀತಾಪುರದ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತ್ತು. ಮುದುಕರು ಮಕ್ಕಳೆನ್ನದೆ, ಹಿರಿಯರು ಕಿರಿಯರೆನ್ನದೆ ಯಾರ್ಯಾರಿಗೆ ಓಡಾಡಲು ಮಂಡಿ ಮತ್ತು ಸೊಂಟ ಗಟ್ಟಿ ಇತ್ತೋ ಅಂತವರೆಲ್ಲ ಜಾತ್ರೆಗೆ ಹೊರಟು ಬಂದದ್ದರಿಂದ ಸೀತಾಪುರದ ರಥಬೀದಿ ಜನರಿಂದ ತುಂಬಿ ಗಿಜಿಗುಡುತ್ತಿತ್ತು.

ಸೀತಾಪುರದ ಜಾತ್ರೆ ಮೂರು ದಿನದ್ದು. ಮೊದಲ ದಿನ ಧ್ವಜಾರೋಹಣವಾಗಿ ಮಧ್ಯಾಹ್ನ ಉತ್ಸವಮೂರ್ತಿಯ ಮೂರು ಸುತ್ತಿನ ‘ಬಲಿ’ ಮತ್ತು ಮೃಷ್ಟಾನ್ನ ಭೋಜನ. ರಾತ್ರೆ ಸಾಂಸ್ಕೃತಿಕ ಕಾರ್ಯಕ್ರಮ. ಊರ ಪರವೂರಿನಲ್ಲಿರುವ ಸೀತಾಪುರದ ಮಂದಿಗೆ ಮೊದಲ ದಿನದ ಉತ್ಸವದಲ್ಲಿ ಭಾಗವಹಿಸುವುದು ಅಂದರೆ ಎಲ್ಲಿಲ್ಲದ ಸಂಭ್ರಮ. ಜೊತೆಗೆ ಊರ ಹುಡುಗರೇ ಸೇರಿ ಆಡುವ ಯಕ್ಷಗಾನ ಬಯಲಾಟ ಇಲ್ಲವೇ ನಾಟಕಗಳನ್ನು ನೋಡುವುದೆಂದರೆ – ಇದೀಗ ಟಿ.ವಿ.ಯಲ್ಲಿ ಧಾರಾವಾಹಿಗಳ ಹಾವಳಿ ಇದ್ದರೂ ಅದನ್ನು ಮರೆತು – ನಮ್ಮ ಮಕ್ಕಳ ಜೀವಚೈತನ್ಯ ಎಷ್ಟಿದೆ ಎನ್ನುವ ಕುತೂಹಲ.

ಎರಡನೇ ದಿನದ ಉತ್ಸವ ಮಾಮೂಲು. ದಿನನಿತ್ಯದ ಪೂಜೆಗಿಂತ ಹೆಚ್ಚು ವೈಭವೋಪೇತವಾಗಿ ಅಂದರೆ ದೇವರನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಿ ಹತ್ತಾರು ಆರತಿ ಎತ್ತಿ ಪೂಜಿಸುವುದು ಬಿಟ್ಟರೆ ಮತ್ತೇನಿಲ್ಲ. ಪ್ರತಿನಿತ್ಯ ದೇವರ ಮಡಿಲಲ್ಲಿ ಊರಲ್ಲೇ ಬೆಳೆದ ದಾಸವಾಳ ಅಥವಾ ಇನ್ನಿತರ ಸಾಮಾನ್ಯ ಹೂಗಳು ಮಾತ್ರ ಇದ್ದರೆ, ಉತ್ಸವದ ಸಮಯದಲ್ಲಿ ಸೀತಾಪುರದಲ್ಲಿ ಬೆಳೆಯುವ ಮಲ್ಲಿಗೆ ಹೂಗಳೂ ಸಾಕಾಗದೆ ಶಿರ್ವ ಮಂಚಕಲ್ಲಿನಿಂದಲೂ ಮಲ್ಲಿಗೆ ಹೂಗಳ ಸಾವಿರಾರು ‘ಅಟ್ಟೆ’ಗಳು ಸೀತಾಪುರಕ್ಕೆ ಬರುತ್ತವೆ. ಅವು ಎಷ್ಟಿದ್ದರೂ ಅರ್ಧ ಇಲ್ಲವೇ ಒಂದು ಗಂಟೆಯಲ್ಲಿ ದೇವರ ಮೂರ್ತಿಯ ಮುಖವೂ ಕಾಣದಷ್ಟು ಅಲಂಕಾರಕ್ಕೆ ಸಲ್ಲುತ್ತವೆ. ಶ್ರೀದೇವಿಗೆ ಮಲ್ಲಿಗೆ ಹೂವೆಂದರೆ ಇಷ್ಟ ಎಂಬ ನಂಬಿಕೆ ಜನರಲ್ಲಿರುವುದರಿಂದ, ಕರಾವಳಿ ಪ್ರದೇಶದಲ್ಲಿ ದೇವಿ ದೇವಸ್ಥಾನಗಳು ಇರುವಲ್ಲಿ ಮಲ್ಲಿಗೆ ಹೂಗಳು ಏನಿಲ್ಲ ಎಂದರೂ ಸಾವಿರಾರು ‘ಮಾರು’ (ಒಂದು ಮಾರು ಅಂದರೆ ಸುಮಾರು ಒಂದೂವರೆ ಅಡಿ) ಮಾರಾಟವಾಗುತ್ತವೆ. ಮತ್ತು ಅವುಗಳ ಬೇಡಿಕೆ ಆಕಾಶಕ್ಕೆ ಏರಿದ ಹಾಗೆ ಬೆಲೆಯೂ ಏರಿ ಮೋಡಗಳಾಗಿ ತುಂತುರು ಮಳೆ ಬಿದ್ದಂತೆ ದೇವಿಯ ಮಡಿಲು ಸೇರುತ್ತವೆ.

ಶ್ರೀದೇವಿಯ ಮೂರನೇ ದಿನದ ಉತ್ಸವ ಸುತ್ತುಮುತ್ತು ಎಲ್ಲೂ ಇಲ್ಲದಷ್ಟು ವಿಜೃಂಭಣೆಯಿಂದ ನಡೆಯುತ್ತದೆ. ಮಧ್ಯಾಹ್ನ ಎಂದಿನ ಹಾಗೆ ಮೂರು ಸುತ್ತಿನ ದೇವಿಯ ‘ಬಲಿ’ ಇದ್ದರೆ ರಾತ್ರೆ ಮಾತ್ರ ಒಂಬತ್ತು ಸುತ್ತಿನ ಬಲಿ. ಇದರಲ್ಲಿ ಉಡ್ಕೆ ಸುತ್ತು, ಚೆಂಡೆ ಸುತ್ತು, ಸರ್ವವಾದ್ಯ ಸುತ್ತು, ಓಡಬಲಿ ಸುತ್ತು ಎಂಬ ವೈಶಿಷ್ಟ್ಯಗಳಿದ್ದು ದೇವರನ್ನು ತಲೆ ಮೇಲೆ ಹೊತ್ತು ‘ಬಲಿ ಬರುವ’ (ದೇವರನ್ನು ಹೊರುವ) ಐತಾಳರು ಅದಕ್ಕಾಗಿಯೇ ದೂರದ ಕುಂಬ್ಳೆಯಿಂದ ಬರುತ್ತಾರೆ. ಅವರು ಆ ದಿವಸಕ್ಕೆ ಮಾತ್ರ ಬರುವವರಿದ್ದು ಅವರಿಗೆ ‘ದೇವರು ಹೊರುವ’ ಕಲೆಯಲ್ಲಿ ವಿಶೇಷ ನೈಪುಣ್ಯ ಇದೆ ಎನ್ನುವುದು ಸೀತಾಪುರದ ಮಂದಿಗೆ ಮಾತ್ರವಲ್ಲ ಪ್ರಾಯಃ ಕರಾವಳಿಯ ಮಂದಿಗೇ ಗೊತ್ತು. ಅವರ ಒಂದು ದಿನದ ಸೇವೆಗೆ, ಅವರು ಬಂದು ಹೋಗುವ ವಾಹನದ ಬಾಡಿಗೆಯಲ್ಲದೆ ಐದು ಸಾವಿರ ಸಂಭಾವನೆ ಕೊಡಬೇಕೆಂದು ಅವರು ಹೇಳಿದರೂ, ‘ಚಿಂತಿಲ್ಲ, ಕೊಡೋಣ ಬನ್ನಿ’ ಎಂದು ಅವರನ್ನು ಆಹ್ವಾನಿಸುವ ಮಂದಿ ಸೀತಾಪುರದಲ್ಲಿ ಮಾತ್ರವಲ್ಲ, ಇನ್ನೂ ಅನೇಕ ಕಡೆ ಇದ್ದಾರೆ.

ಇಂಥ ಜಾತ್ರೆಗಳಲ್ಲಿ ಅನೇಕರು ದೇವರಿಗೆ ಭಕ್ತಿ ಶ್ರದ್ಧೆಯಿಂದ ಹರಕೆ ಹಾಕಿ ಹೋಗುವುದಕ್ಕೆ ಬಂದರೆ, ಇನ್ನು ಕೆಲವರು ಐತಾಳರ ‘ದರ್ಶನ ಸೇವೆ’ಯನ್ನು ನೋಡ ಬೇಕೆಂತಲೇ ಬರುತ್ತಾರೆ. ಐತಾಳರು ಚೆಂಡೆ ಸುತ್ತಿನಲ್ಲಿ ದೇವರನ್ನು ತಲೆಯ ಮೇಲೆ ಇಟ್ಟು ದೇವರ ಪಾಣಿಪೀಠವನ್ನು ಹಿಡಿಯದೆ ನರ್ತಿಸುವುದನ್ನು ನೋಡುವಾಗ ಜನರು ರೋಮಾಂಚನಗೊಳ್ಳುತ್ತಾರೆ. ಹದಿನೈದು ಹದಿನಾರು ಚೆಂಡೆಗಳ ವಾದನದ ನಡುವೆ ನಡೆಯುವ ಈ ‘ದೇವರ ಬಲಿ’ ನಿಜಕ್ಕೂ ಆಕರ್ಷಕವೂ ಭಕ್ತಿಭಾವವನ್ನು ಹುಟ್ಟಿಸು ವಂಥದ್ದೂ ಆಗಿದೆ ಎಂದು ಗೋವಿಂದಯ್ಯ ಹೋದಲ್ಲೆಲ್ಲ ಹೇಳುವುದುಂಟು. ಅವರಿಗೆ ಯಕ್ಷಗಾನದ ಕುಣಿಕೆ ಗೊತ್ತಿರುವುದರಿಂದ ಮತ್ತು ಬಾಲ್ಯದಲ್ಲಿ ಅವರೂ ಸೀತಾಪುರದ ಉತ್ಸವದ ಸಮಯದ ಸಾಂಸ್ಕøತಿಕ ಉತ್ಸವದಲ್ಲಿ ಭಾಗವಹಿಸಿದವರಾಗಿದ್ದುದರಿಂದ, ದೇವರ ‘ಬಲಿ’ ನಡೆಯುವಾಗ ಅವರು ಚೆಂಡೆಯವರ ಹಿಂದೆಯೇ ಬಂದು ನಿಲ್ಲುತ್ತಾರೆ. ಒಮ್ಮೊಮ್ಮೆ ಬಲದ ಕೈಯಿಂದ ತಮ್ಮ ತೊಡೆಗೆ ಬಡಿಯುತ್ತ ತಾಳ ಹಾಕುತ್ತಾರೆ. ಹಾಗೆಯೇ ದೇವರನ್ನು ಹೊತ್ತವರು ‘ಗಿರಕಿ’ ಹೊಡೆಯುವಾಗ ಇವರಿಗೂ ಗಿರಕಿ ಹೊಡೆಯುವ ಉತ್ಸಾಹ ಬರುವುದೂ ಉಂಟು. ಆದರೆ ತಾನೇನಾದರೂ ಗಿರಕಿ ಹೊಡೆದರೆ ಜನ ಗೇಲಿ ಮಾಡಬಹುದು ಎಂಬ ಎಚ್ಚರ ಅವರಿಗಿದ್ದು ‘ಕಾಲು ಹಾಕಲು ಜಾಗ’ ಇಲ್ಲದಷ್ಟು ಜನ ಬಲಿ ಉತ್ಸವದಲ್ಲಿ ಭಾಗವಹಿಸುವುದರಿಂದ, ಗೋವಿಂದಯ್ಯನಿಗೆ ಗಿರಕಿ ಹೊಡೆಯುವುದು ಬಿಡಿ, ಕಾಲು ಮುಂದಿಡಲೂ ಸಾಧ್ಯವಿಲ್ಲದಷ್ಟು ಗುಂಪು ಅಡ್ಡಿಯಾಗುವುದು ಸಾಮಾನ್ಯ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ನೀಲಿ ನಕ್ಷೆ

ಆ ದಿನದ ಉತ್ಸವದಲ್ಲಿ ದೇವರು ಹೊರುವ ಐತಾಳರು ಅನಾರೋಗ್ಯದ ಕಾರಣದಿಂದ ಬರುವುದಿಲ್ಲ ಎಂಬ ವಾರ್ತೆ ಗೋವಿಂದಯ್ಯನಿಗೆ ಈ ಮೊದಲೇ ಅಂದರೆ ಧ್ವಜಾರೋಹಣದ ದಿನವೇ ಸಿಕ್ಕಿತ್ತು. “ಹಾಗಾದರೆ ಜಾತ್ರೆ ಬರೇ ಸಪ್ಪೆ ಆದ ಹಾಗೇ !” ಎಂದು ಮಧ್ಯಾಹ್ನ ಅವರು ಊಟಕ್ಕೆ ಕುಳಿತಾಗ ಪಕ್ಕದಲ್ಲಿ ಕುಳಿತಿದ್ದ ಬಾಳು ಭಟ್ರಿಗೆ ಬೇಕಂತಲೇ ಹೇಳಿದರು. ಬಾಳು ಭಟ್ರು “ಹಾಗೇನಿಲ್ಲ ಗೋವಿಂದಣ್ಣ, ಐತಾಳರ ಮಗ ಬರುತ್ತಾನಂತೆ. ಆತ ಅಪ್ಪನಿಗಿಂತಲೂ ‘ಭಲ’ ಇದ್ದಾನಂತೆ” ಎಂದರು. ಅಷ್ಟರಲ್ಲಿ ಬೂಂದಿ ಲಾಡನ್ನು ಊಟಕ್ಕೆ ಕುಳಿತವರಿಗೆ ಇಕ್ಕುತ್ತ ಹೋಗುತ್ತಿದ್ದ ದಾಸಣ್ಣನ ಕಿವಿಗೆ ಈ ಇಬ್ಬರ ಮಾತುಕತೆ ಕೇಳಿಸಿದಂತಾಗಿ, ಅವರು ಬಡಿಸುವುದನ್ನು ನಿಲ್ಲಿಸಿ “ಹೌದು ಗೋವಿಂದಣ್ಣ, ಐತಾಳರ ಮಗನ ಚೆಂಡೆ ಸುತ್ತು ನೀವು ನೋಡಲೇ ಬೇಕು ಎಂದು ಕುಂಬ್ಳೆಯಲ್ಲಿರುವ ನನ್ನ ಮಗಳ ಗಂಡ ಮನಮೋಹನ ಹೇಳಿದ್ದಾನೆ” ಎನ್ನುತ್ತ ಬಡಿಸುತ್ತಾ ಮುಂದೆ ಹೋದರು.

ಗೋವಿಂದಯ್ಯನಿಗೆ ಸಮಾಧಾನವಾಯಿತು. ಅವರಿಗೆ ಅದನ್ನು ಬಾಳು ಭಟ್ಟರಲ್ಲಿ ಹೇಳಿ ಚರ್ಚಿಸಬೇಕೆನಿಸಿತು. ಅವರು ಬಾಳು ಭಟ್ಟರಲ್ಲಿ ಆ ವಿಷಯ ಚರ್ಚಿಸಲು ಮುಂದಾದಾಗ ಬೂಂದಿ ಲಾಡಿಗೆ ತುಪ್ಪ ಬಡಿಸುವವರು ಪಂಕ್ತಿಯಲ್ಲಿ ಬಂದೇ ಬಿಟ್ಟಿದ್ದರು. ಗೋವಿಂದಯ್ಯ “ತಡೀರಿ, ನೀವು ಒಟ್ಟು ತುಪ್ಪ ಬಡಿಸುವುದಲ್ಲ, ಅವಸರ ಮಾಡಬೇಡಿ” ಎನ್ನುತ್ತಾ ಎಲೆಯಲ್ಲಿದ್ದ ಬೂಂದಿ ಲಾಡನ್ನು ಒಡೆದು ‘ಈಗ ತುಪ್ಪ ಹಾಕಿ’ ಎಂದು ಎರಡು ಚಮಚೆ ತುಪ್ಪ ಹಾಕಿಸಿಕೊಂಡು ಆಮೇಲೆ ಒಂದು ತುಂಡು ಲಾಡನ್ನು ಬಾಯಿಗೆ ಹಾಕಿ “ಆ್ಹ, ಲಾಡು ಅಂದರೆ ಲಾಡು. ಅಡಿಗೆ ಚಂಕಣ್ಣ ಇದರಲ್ಲೇ ಅಲ್ವಾ ಹೆಸರು ಮಾಡಿದ್ದು?” ಎಂದು ಸ್ವಗತದಲ್ಲಿ ಆಡಿಕೊಳ್ಳುವಾಗ, ಅವರ ಮನಸ್ಸಿನಲ್ಲಿ ಮತ್ತೆ ದೇವರು ಹೊರುವ ಐತಾಳರು ಪ್ರತ್ಯಕ್ಷರಾಗಿದ್ದರು. ತಕ್ಷಣ ಅವರು ಪಕ್ಕದಲ್ಲಿದ್ದ ಬಾಳು ಭಟ್ಟರ ತೊಡೆಯನ್ನು ಮೆತ್ತಗೆ ತಟ್ಟಿ “ಈ ಐತಾಳರು ಇದ್ದಾರಲ್ಲ, ಅವರ ದೊಡ್ಡ ಮಗಳನ್ನು ಯಾರಿಗೆ ಕೊಟ್ಟದ್ದು ಅನ್ನುತ್ತೀರಿ? ನನ್ನ ಮಗಳ ಗಂಡನ ಸೋದರಮಾವನ ಮಗನಿಗೆ. ಹಾಗಾಗಿ ಅವರು ನಮಗೆ ಸಂಬಂಧ !” ಎನ್ನುತ್ತಾ ಬೀಗಿದರು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಮೊದಲ ಮಳೆಯ ಪರಿಮಳ: ಹುಟ್ಟು

ಬಾಳು ಭಟ್ಟರಿಗೆ ಈ ಗೋವಿಂದಯ್ಯನಿಗೆ ಐತಾಳರು ಸಂಬಂಧೀಕರಾದರೆ ತನಗೇನಾಗಬೇಕು ಎಂಬ ಉದಾಸೀನ ಭಾವ ಮೂಡಿತು. ಅವರು “ಅದೆಲ್ಲ ಸರಿ ಗೋವಿಂದಣ್ಣ, ನೀವು ಹವೀಕರು. ಅವರು ಕೋಟದವರು. ನಿಮ್ಮೊಳಗೆ ರಕ್ತ ಸಂಬಂಧ ಆಗ್ತದಲ್ಲ ಈಗ?!” ಎಂದು ಕುತೂಹಲ ತೋರಿಸಿದರು.

ಕೃತಿ: ನೀರು (ಕಾದಂಬರಿ)
ಲೇಖಕ: ಡಾ.ನಾ. ಮೊಗಸಾಲೆ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: ರೂ.295

Exit mobile version