Site icon Vistara News

Sunday read | ಹೊಸ ಪುಸ್ತಕ | ಸಣ್ಣಕಥೆ | ಹೊಸ ಶಿಕಾರಿ

karuvgallu maruthi nn

| ಡಾ. ಮಾರುತಿ ಎನ್. ಎನ್‌.

“ಹುಟ್ಟು ಆಕಸ್ಮಿಕ, ಸಾವು ಅನಿಶ್ಚಿತ ಮತ್ತು ಅನಿವಾರ್ಯ. ಹುಟ್ಟಿದ ದಿನವೇ, ಸಾವಿನ ದಿನ, ಸಮಯ, ಸ್ಥಳ ಎಲ್ಲವೂ ನಿಗದಿಯಾಗಿರುತ್ತದೆ. ನಮ್ಮ ಸಾವು ಯಾರಿಂದಾಗಬೇಕು, ಯಾವ ರೀತಿಯಾಗಬೇಕು? ಎಂಬುದೂ ನಿರ್ಧಾರವಾಗಿರುತ್ತದೆ. ಆದರೆ ಆ ಸಾವು ನಮ್ಮವರಿಂದಲೇ ಬರುತ್ತದೆಂದರೆ, ಅದು ಆ ಜೀವದ ವಿಪರ್ಯಾಸ ಮತ್ತು ಪೂರ್ವ ಕರ್ಮ.” ಶಾಲೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ದಯಾಶಂಕರ್ ರವರು ಹೇಳಿದ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ಈ ಮಾತುಗಳು ಹೀಗೇಕೆ ನನ್ನ ತಲೆಯಲ್ಲಿ ಮೇಲ್ಪಂಕ್ತಿಯಲ್ಲಿ ಅಚ್ಚಾದವೋ ಗೊತ್ತಿಲ್ಲ. ನನ್ನಪ್ಪನ ಕೈಯಲ್ಲಿ ಹುಲ್ಲು ಕುಯ್ಯುವ ಕುಡುಗೋಲು ಕಂಡಾಗ, ದೊಡ್ಡಪ್ಪನ ಕೈಯಲ್ಲಿ ಗಾಡಿಗೆ ಕಟ್ಟುವ ಹಗ್ಗ ನೋಡಿದಾಗ, ತಮ್ಮನ ಕೈಯಲ್ಲಿ ಪೆನ್ಸಿಲ್ ಚೂಪು ಮಾಡುವ ಬ್ಲೇಡ್ ನೋಡಿದಾಗ, ಎದುರಿಗೆ ಬಂದವರ ಕೈಯಲ್ಲಿ ಸಾವಿಗೆ ಕಾರಣವಾಗಬಲ್ಲ ವಸ್ತುಗಳನ್ನು ಕಂಡಾಗ, ಹೀಗೇ ಎಷ್ಟೋ ಬಾರಿ ನನ್ನವರಿಂದಲೇ ನನ್ನ ಸಾವಾಗಬಹುದಾ? ಎಂಬ ಆಲೋಚನೆ ಮೂಡುತ್ತಿದ್ದವು” ಎಂದು ಕನವರಿಸುವಾಗ ಸತೀಶನ ತುಟಿಗಳು ನಡುಗುತ್ತಿದ್ದವು, ಮುಂಗೈ ಅದುರುತ್ತಿತ್ತು.

“ನೋಡಿ ಏನೇನೋ ಮಾತಾಡಿ, ಆಯಾಸ ಮಾಡ್ಕೋಬೇಡಿ, ಇಂಜೆಕ್ಷನ್ ಕೊಡ್ತೀನಿ ಅರಾಮಾಗಿ ಮಲಗಿ” ಎಂದ ನರ್ಸ್ ರೀಟಾ ಇಂಜೆಕ್ಷನ್ ಸಿದ್ದಪಡಿಸುವ ವೇಳೆಗೆ, ಐಸಿಯು ವಾರ್ಡಿನ ಕ್ಯಾಪ್ನೋಗ್ರಾಫ್‍ನಲ್ಲಿನ ರೇಖೆಗಳು ಕೆಂಪು ಬಣ್ಣದ ಸರಳರೇಖೆಗಳಾಗಿ ಮಾರ್ಪಟ್ಟು ಪೀಂ.. ಪೀಂ.. ಎಂಬ ಬೀಪ್ ಶಬ್ದ ಮಾಡುವುದಕ್ಕೆ ಶುರು ಮಾಡಿತ್ತು. ಗಾಬರಿಯಾದ ರೀಟಾ ‘ಡಾಕ್ಟರ್..ಡಾಕ್ಟರ್.. ಸತೀಶ್ ಪೇಶಂಟ್ ಸೀರಿಯಸ್’ ಎಂದು ಕೂಗಿದಳು. ಒಳಗೆ ಬಂದ ವೈದ್ಯರು ದೇಹದ ಒಂದರೆಡು ಕಡೆ ಸ್ಟೆತೋಸ್ಕೋಪ್ ಇಟ್ಟು ಪರಿಶೀಲಿಸಿ, ಎಡಗೈಯಲ್ಲಿ ಕಣ್ಣಿಗಾಕಿದ್ದ ಕನ್ನಡಕ ತೆಗೆದು ‘ಓಹ್ ಸ್ಸಾರಿ, ಸತೀಶ್ ನೋ ಮೋರ್’ ಎಂದು ಕನ್ನಡಕವನ್ನ ಮೂಲ ಸ್ಥಾನಕ್ಕೇರಿಸಿದರು. ಸತೀಶನ ಪ್ರಾಣ ಪಕ್ಷಿ ಹಾರಿಹೋಗಿತ್ತು.


ಮಲೆನಾಡಿನ ಸಂಸ್ಕೃತಿ, ಮಲೆನಾಡಿನ ಕಾಡು, ಮಳೆ ಎಲ್ಲವೂ ಆಧಿಕವಾಗಿರುವ, ಕಾಡಿನಂಚಿನಲ್ಲಿರುವ, ಹೊಸನಗರದ ಹುಲಿಕಲ್ ಗ್ರಾಮದಿಂದ ಮೂರೇ ಮೈಲು ದೂರದಲ್ಲಿರುವ, ‘ಹೊಸಬಾಳು’ ಸತೀಶನ ಊರು. ಸತೀಶ ಆಸ್ಪತ್ರೆಯಲ್ಲಿ ಮಾತ್ರ ಸತೀಶ್, ಆದ್ರೆ ಹೊಸಬಾಳಲ್ಲಿ ಸತೀಶಣ್ಣ. ಮಾಸ್ತಿಕಟ್ಟೆ ಗ್ರಾಮ ಪಂಚಾಯಿತಿಯ ಸದಸ್ಯ, ಸಕ್ರಿಯ ರಾಜಕಾರಣಿ, ವಯಸ್ಸು ನಲವತೈದು ದಾಟಿದರೂ ಮದುವೆಯ ಬಗ್ಗೆ ಯೋಚನೆಯೂ ಮಾಡದ ಅವಿವಾಹಿತ. ತಂದೆ ನಾಗರಾಜ, ತಾಯಿ ನೀಲಮ್ಮರ ಮೊದಲನೇ ಮಗ. ಈತನ ತಮ್ಮ ನಂದೀಶ ಬೇಜವಾಬ್ದಾರಿ ಮನುಷ್ಯ. ಸತೀಶಣ್ಣ ಎತ್ತರದ ಆಳು, ತುಂಬಿದ ಮೈಕಟ್ಟು, ದುಂಡಾದ ಮುಖ. ಒಂಚೂರು ಮಲಯಾಳಂನ ಮುಮ್ಮುಟಿ ಕಂಡಂತೆ ಕಾಣ್ತಿದ್ದ. ಓದಿದ್ದು ಪಿಯುಸಿ ಆದರೂ ಬುದ್ದಿವಂತ, ಶ್ರಮಜೀವಿ, ಸಂಯಮದ ಎಲ್ಲೆ ಮೀರಿದವನಲ್ಲ.

ಸತೀಶನ ವಂಶಸ್ಥರ ಮನೆಯಿದ್ದದ್ದು ಹೊಸಬಾಳಿಗೆ ಅಂಟಿಕೊಂಡೇ ಇದ್ದ ದಟ್ಟ ಕಾಡಿನ ಅಂಚಿಗೆ. ಕಾಡು ಮರಗಳು, ಕಾಡಿನ ಪ್ರಾಣಿಗಳ ಜೊತೆಗೆ ತಿಕ್ಕಾಟ ಸರ್ವೇ ಸಾಮಾನ್ಯವಾಗಿತ್ತು. ಕಾಡಿನಂಚಿನ ಮನೆಯೆಂದರೆ, ಮನೆಗೆ ಒಂದೋ ಎರಡೋ ಲೈಸೆನ್ಸ್ ಪಡೆದಿರುವ ಬಂದೂಕಿರುವುದು ಅನಿವಾರ್ಯ. ಕಾಡಿನ ಬುಡಕ್ಕೆ ಎತ್ತರದಲ್ಲಿದ್ದ ಇವರ ಮನೆಯಿಂದ ಫರ್ಲಾಂಗು ದೂರದಲ್ಲಿ ಬೆಟ್ಟದಿಂದಿಳಿದ ನೀರು ಹರಿಯುವ ಹೊಳೆ, ಹಲವು ಮನೆಗಳನ್ನು ವಿಭಾಗಿಸಿತ್ತು. ಅದರಾಚೆಗೆ ಅಲ್ಲೊಂದು, ಇಲ್ಲೊಂದರಂತೆ ಮನೆ ಕಟ್ಟಿಕೊಂಡ ಇತರ ಕೋಮಿನವರ ಮನೆಗಳು ಬಿಟ್ಟರೆ, ಹೇಳಿಕೊಳ್ಳುವಷ್ಟು ದೊಡ್ಡ ಊರೇನಲ್ಲ. ಚದುರಿದಂತಿರುವ ನೂರು ಮನೆಗಳ ವ್ಯಾಪ್ತಿಗೆ ಇಟ್ಟಿದ್ದೇ ಈ ಹೊಸಬಾಳು ಎಂಬ ಹೆಸರು.

ಸತೀಶನ ಅಪ್ಪ ನಾಗರಾಜರಿಗೆ ಇದ್ದದ್ದು ಒಬ್ಬನೇ ಅಣ್ಣ ಮಂಜಪ್ಪ, ಧರ್ಮಸ್ಥಳ ಮಂಜುನಾಥನ ದಯೆಯಿಂದ ಹುಟ್ಟಿದªನೆಂದು ಈ ಹೆಸರು ಇಟ್ಟಿದ್ದರಂತೆ. ಆದರೆ ಎಂದೂ ಧರ್ಮ ನಿಷ್ಟನಾಗಿ ನಡೆಯಲೇ ಇಲ್ಲ. ಒಂಚೂರು ಜಾಸ್ತಿನೇ ಮುಂಗೋಪಿ, ಆಸ್ತಿ, ತೋಟ, ತುಡಿಕೆಯೆಂದರೆ ತುಸು ಹೆಚ್ಚೇ ಆಸೆ. ಸತೀಶನ ತಂದೆ ಚಿಕ್ಕವರಿದ್ದಾಗ ‘ನೋಡ ನಾಗರಾಜ, ಈ ಬದಿಯಿಂದ, ಹೊಳೆ ಆಚೆ ಬದಿವರ್ಗೆ ನಂದೇ ಗದ್ದೆ ಇರಬೇಕ್ ಕಣ, ಅಷ್ಟು ಮಾಡಿ ಈ ಜೀವ ಕಳಕಂಬುದಾ’ ಎಂದು ಪ್ರತಿ ರಾತ್ರಿ ವರಾಂಡದಲ್ಲಿ ಕುಳಿತು ಹೊಳೆಯ ಸದ್ದನ್ನು ಕೇಳುವಾಗ ಹೇಳುತ್ತಿದ್ದ ಮಾತು ಇದಕ್ಕೆ ಪುಷ್ಟಿ ಕೊಡುತ್ತಿತ್ತು. ಮಾತಿಗೆ ತಕ್ಕಂತೆ ನಡೆದುಕೊಂಡನಾದರೂ ಅನೈತಿಕ ಮಾರ್ಗ ಹಿಡಿದಿದ್ದ. ಹೊಳೆಯ ಬದಿಯಲ್ಲಿದ್ದ ನಿರಂಜನ ಉಡುಪರ ಕುಟುಂಬ, ಮಳೆಗಾಲದ ಜೋರು ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿ ಅವರ ಶವಗಳೂ ಸಿಗದ್ದಿದ್ದಾಗ, ತಾತನಿಗೆ ಮಂಕು ಬೂದಿ ಎರಚಿ, ಉಡುಪರ ಗದ್ದೆಗೂ ಬೇಲಿ ಹಾಕಿಸಿದ್ದ.

ಬೇಲಿ ಹಾಕಿದ್ದ ತಾತ ಎರಡೇ ವರ್ಷದಲ್ಲಿ ಅಸುನೀಗಿದಾಗ ಮನೆಯ ಒಡೆತನ ದೊಡ್ಡ ಮಗನಾದ ಸತೀಶನ ದೊಡ್ಡಪ್ಪನಿಗೆ ಸಿಕ್ಕಿತ್ತು. ಕಳ್ಳನಿಗೆ ಬೇಲಿ ಕಾಯುವ ಕೆಲಸ ಸಿಕ್ಕಂತಾಗಿ ಮಂಜಪ್ಪ ಅಡಿಕೆ ತೋಟದ ಪಕ್ಕದಲ್ಲಿದ್ದ ಮೂವತ್ತು ಎಕ್ಕರೆ ಕಾನಿಗೆ ಬೇಲಿ ವಿಸ್ತರಿಸಿದ್ದ. ಕೆಲವೇ ವರ್ಷಗಳಲ್ಲಿ ಅಲ್ಲಿದ್ದ ಮರಗಳನ್ನೆಲ್ಲಾ ಬುಡ ಕೊರೆದು ಒಣಗಿಸಿ, ಕಟಾವು ಮಾಡಿ, ಫಾರೆಸ್ಟ್ ಇಲಾಖೆಯವರಿಗೂ ಕಣ್ತಪ್ಪಿಸಿ ಅಡಿಕೆ ಗಿಡಗಳನ್ನು ನೆಟ್ಟುಬಿಟ್ಟಿದ್ದ.
ಕೂಡು ಕುಟುಂಬದ ಅಣ್ಣ ತಮ್ಮಂದಿರು, ಮದುವೆಯ ನಂತರ ಬಾಯಿ ಮಾತಿನಲ್ಲಿ, ಗದ್ದೆ ತೋಟವನ್ನು ಪಾಲು ಮಾಡಿಕೊಳ್ಳುವಾಗ “ಅಲ್ಲೊ ತಮ್ಮ, ನಿಂಗ್ ಹಮಾ ಜಮೀನು ನೋಡಕಾಗಲ್ಲ, ಈಗ ಮೂರು ಎಕ್ರೆ ಗದ್ದೇಲೆ ಅಕ್ಕಿ, ಶುಂಠಿ ಬೆಳಕಂಡಿರು ಅಮೇಲೆ ನೋಡನ” ಎಂದು ತಲೆ ಸವರಿ ಸಾಗಾಕಿದ್ದ ಮಂಜಪ್ಪ. ಹೊಳೆಯ ಇನ್ನೊಂದು ಬದಿಯಲ್ಲಿದ್ದ ಹೆಂಚಿನ ಮನೆಯನ್ನು ಬಿಟ್ಟುಕೊಟ್ಟಿದ್ದ. ಸತೀಶನ ದೊಡ್ಡಪ್ಪನಿಗೆ ಹುಟ್ಟಿದ್ದು ಒಬ್ಬಳು ಹೆಣ್ಣು ಮಗಳು ಸುಮಂಗಳ, ಮತ್ತೊಬ್ಬ ಮಗ ಅಣ್ಣಪ್ಪ.

ನಾಗರಾಜರು ಸೌಮ್ಯ ಸ್ವಭಾವದವರು ಅಷ್ಟೇನೂ ಆಸ್ತಿಯ ಬಗ್ಗೆ ತಲೆಕೆಡಿಸಿಕೊಳ್ಳದೇ, ತಮಗೆ ಬಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಅರಣ್ಯದಂಚಿನಲ್ಲಿರುವ ಜನರಿಗೆ ಸರ್ಕಾರ ನೀಡುವ ಸವಲತ್ತುಗಳಲ್ಲಿ ಸಿಕ್ಕ ಕರಾಬು ಭೂಮಿಯಲ್ಲಿ ಹೊಸದಾಗಿ ಅಡಿಕೆ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮಂಜಪ್ಪ ಮಾತ್ರ ತನ್ನ ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗಿದ ಚಕ್ರವರ್ತಿಯಂತೆ, ಕಾಡಿನ ಮೇಲೆ ದಾಳಿ ಮುಂದುವರೆಸಿ ಹಲವು ಎಕರೆಗಳಷ್ಟು ಕಾಡಿನೊಳಗೆ ನುಸುಳಿದ್ದ. ಸರ್ಕಾರದ ನಿಯಮಾವಳಿಯಂತೆ ಬಗರ್‍ಹುಕುಂನಲ್ಲಿ ಕಾನಿನ ಜಮೀನು ಸತೀಶನ ತಂದೆಯ ಹೆಸರಿಗೆ ನೋಂದಣಿ ಆಯ್ತು, ಮಂಜಪ್ಪ ಆಕ್ರಮಿಸಿಕೊಂಡಿದ್ದ ಅಷ್ಟೂ ಕಾನಿನ ಜಾಗವನ್ನು ಅರಣ್ಯ ಇಳಾಖೆಯವರು ವಶ ಪಡಿಸಿಕೊಂಡರು. ಇಲ್ಲಿಂದಲೇ ಶುರುವಾಗಿದ್ದು ಮಂಜಪ್ಪನ ನಿಜವಾದ ವರಸೆ.

ಸತೀಶನಿಗೆ ಆಗ ಹದಿನೆಂಟರ ಹರೆಯ, ಸತೀಶನ ದೊಡ್ಡಪ್ಪ ಮುಕ್ಕಾಲು ಭಾಗ ಜಮೀನು ಕಳೆದುಕೊಂಡು ಕೋರ್ಟು, ಕೇಸು ಅಂತ ಓಡಾಡಿ, ಕೂಡಿಟ್ಟಿದ್ದ ಹಣವನ್ನೆಲ್ಲಾ ಕಳೆದುಕೊಂಡಿದ್ದ. ನಾಗರಾಜನಿಂದ ಆಗೀಗ ಪುಸಲಾಯಿಸಿ ಕೋರ್ಟಿನ ಖರ್ಚಿಗೆಂದು ಸಾವಿರಾರು ರೂಪಾಯಿ ಸಹಾಯ ಪಡೆzನೇ ಹೊರತು, ವಾಪಸ್ ಕೊಡುವ ಗೋಜಿಗೆ ಹೋಗಲಿಲ್ಲ. ತಮ್ಮ ನಾಗರಾಜನ ಅಡಿಕೆ ತೋಟ ಕಣ್ಣು ಕೆಂಪಾಗಿಸಿತೋ, ಮನೆಯ ತಿಜೋರಿಯಲ್ಲಿದ್ದ ದುಡ್ಡಿನ ಕಂತೆ ಆಸೆ ಮೂಡಿಸಿತೋ ಗೊತ್ತಿಲ್ಲ, ಊರಿನವರ ಸಮ್ಮುಖದಲ್ಲಿ ಆಸ್ತಿ ಪಾಲು ಮಾಡಿಕೊಳ್ಳುವ ಪ್ರಸ್ತಾಪ ಮುಂದಿಟ್ಟಿದ್ದ. ಊರಿನವರು ‘ಆಯ್ತು ಅಣ್ಣ ತಮ್ಮರು, ಎಂದಿದ್ರೂ ಬ್ಯಾರೆಯಾಗಲೇಬೇಕು. ಪಿತ್ರಾರ್ಜಿತ ಆಸ್ತಿನಾ ಪಾಲು ಮಾಡ್ಕಳಿ, ನಿಮ್ಮ ಸ್ವದುಡಿಮೆಯ ಆಸ್ತಿ ನಿಮ್ಮ ನಿಮ್ಮತ್ರನೇ ಇರ್ಲಿ’ ಎಂಬ ತೀರ್ಮಾನ ಮಾಡಿದ್ದು ದೊಡ್ಡಪ್ಪನಿಗೆ ಸಹಿಸದಾಗಿತ್ತು. “ಊರ್ ಜನ್ರ ಮಂಡೆ ಕೆಡಿಸಿ, ಆಸ್ತಿ ಹೊಡ್ಯೋ ಯೋಚ್ನೇ ಮಾಡಿಯೇನೋ?” ಎಂಬ ಆರೋಪದೊಂದಿಗೆ ಸತೀಶನ ಅಪ್ಪನ ಮೇಲೆ ಕೈ ಮಾಡಲು ಮುಂದಾದಾಗ, ಸತೀಶನೇ ಅಡ್ಡಬಂದು ತಳ್ಳಿದ ರಭಸಕ್ಕೆ ದೊಡ್ಡಪ್ಪನ ಎಡಗೈ ಮತ್ತು ಎಡಗಾಲಿಗೆ ಏಟು ಬಿದ್ದು ಮೂಳೆ ಮುರಿಯುವಂತಾಗಿತ್ತು. ‘ನನ್ ಅಣ್ಣನ್ನೇ ತಳ್ತೀಯೇನೋ, ಅಪ್ಪಂಗೆ ಸಮಾ ಅವಾ’ ಎಂದು ಸತೀಶನ ಕೆನ್ನೆಗೆ ಬಾರಿಸಿದ್ದ ನಾಗರಾಜಪ್ಪ ಎಲ್ಲರ ಮುಂದೆ ದೊಡ್ಡೋರಾಗಿದ್ದರು. ಅಚಾತುರ್ಯ ತಿಳಿಯದೇ ಆಗಿದ್ದೆಂದು, ಇವೆಲ್ಲವನ್ನು ಇಲ್ಲಿಯೇ ಬಿಟ್ಟುಬಿಡಿ ಎಂದು ಊರಿನವರೇ ಹೇಳಿ ಚಿಕಿತ್ಸೆಯ ವೆಚ್ಚವನ್ನು ಸತೀಶನ ಮನೆಯವರೇ ಭರಿಸಬೇಕೆಂದು ಬುದ್ಧಿ ಹೇಳಿದ್ದರು. ಇದೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು, ಯಾವ ಸಬೂಬೂ ಕೇಳದ ದೊಡ್ಡಪ್ಪನ ಮಗ ಅಣ್ಣಪ್ಪ ಹಲವು ವರ್ಷ ದ್ವೇಷ ಸಾಧಿಸುತ್ತಲೇ ಬಂದಿದ್ದ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ

ಸತೀಶನ ತಂದೆ ನಾಗರಾಜಪ್ಪ ಅಡಿಕೆ ಮರದಿಂದ ಬಿದ್ದು ಬೆನ್ನುಮೂಳೆಗೆ ಏಟು ಮಾಡಿಕೊಂಡು ಹಾಸಿಗೆ ಸೇರಿದಾಗ, ಅಣ್ಣಪ್ಪ ‘ಇದೆಲ್ಲಾ ನಮ್ಮಪ್ಪಂದೇ ಶಾಪ’ ಎಂದುಕೊಂಡು ಓಡಾಡಿದ. ಮಂಜಪ್ಪನ ಬುದ್ದಿ ಗೊತ್ತಿದವರ್ಯಾರು ಇದನ್ನು ನಂಬಲಿಲ್ಲ, ಅದು ಹೆಚ್ಚು ದಿನ ಪ್ರಚಲಿತದಲ್ಲಿರಲಿಲ್ಲ. ಮಂಜಪ್ಪ ಹೃದಯಾಘಾತವಾಗಿ ಸತ್ತ ಮೂರೇ ತಿಂಗಳಿಗೆ ನಾಗರಾಜರೂ ಅಣ್ಣನನ್ನು ಹಿಂಬಾಲಿಸಿದ್ದರು. ಚಿಕ್ಕಪ್ಪನ ಕ್ರಿಯಾಕಾರ್ಯಕ್ಕೆ ಬಂದ ಅಣ್ಣಪ್ಪ, “ಈ ದ್ವೇಷ, ಅಸೂಯೆಯೆಲ್ಲಾ ನಮ್ಮಪ್ಪಂದರ ಕಾಲಕ್ಕೇ ಮುಗಿದೋಗ್ಲೇ ತಮ್ಮಾ, ನಾವೆಲ್ಲ ಚೆನಾಗಿರಾನ ಕಣಾ” ಎಂದು ಮರುಕಪಟ್ಟು ಸತೀಶನನ್ನು ಕೂಡಿದ್ದ.

ಇದ್ದುದ್ದರಲ್ಲೇ ಬೇಸಾಯ ಮಾಡಿಕೊಂಡು, ಆಗಾಗ ಸುತ್ತಮುತ್ತಲಿನ ಓರಗೆಯವರ ಜೊತೆಗೂಡಿ ಶಿಖಾರಿ ಮಾಡಿಕೊಂಡು, ಎರಡೂ ಮನೆಯಲ್ಲಿ ಓಡಾಡಿಕೊಂಡು ಚೆನ್ನಾಗಿದ್ದಾಗಲೇ ಮದುವೆಯಾದ ಅಣ್ಣಪ್ಪ, ನಿಧಾನವಾಗಿ ಬದಲಾಗಲಾರಂಭಿಸಿದ್ದ. ಮದುವೆಗೆಂದು ಸತೀಶನೂ ಒಂದೆರಡು ಸೊಪ್ಪಿನ ಕುರಿ ಕೊಡಿಸಿ, ಬೀಗರೂಟದ ದಿನ ಪೂರ್ಣವಾಗಿ ತೊಡಗಿಸಿಕೊಂಡಿದ್ದೆಲ್ಲಾ ಊರಿನವರ ಮುಂದೆ ಒಳ್ಳೆಯವನಂತೆ ಕಾಣಲು ಎಂದು, ಅಣ್ಣಪ್ಪನ ಹೆಂಡತಿಯೂ ಮಾತನಾಡಿದ್ದಳು.

ಮಾಸ್ತಿಕಟ್ಟೆ ಗ್ರಾಮ ಪಂಚಾಯಿತಿಯ ಚುನಾವಣೆ ಎದುರಾದಾಗ ಸಾಹುಕಾರ ಶಂಕ್ರೇಗೌಡ್ರ ಸೂಚನೆಯಂತೆ ಚುನಾವಣೆಗೆ ಸತೀಶ ಸ್ಪರ್ಧಿಸಿದ. ಮೊದ ಮೊದಲು ತಾನೂ ಚುನಾವಣೆಗೆ ನಿಲ್ಲೋದಾಗಿ ಹೇಳಿಕೊಂಡು ಓಡಾಡಿ, ನಾಲ್ಕೈದು ಓಟು ಬೀಳುವುದೂ ಅನುಮಾನವೆಂದು ಗೊತ್ತಾದ ಮೇಲೆ, ನಾಮಪತ್ರ ಸಲ್ಲಿಸುವ ಕೊನೆಯ ದಿನ ಸುಮ್ಮನಾಗಿದ್ದ ಅಣ್ಣಪ್ಪ. ಚುನಾವಣೆಯಲ್ಲಿ ಸತೀಶ ಗೆಲ್ಲೋದು ಖಚಿತ ಎಂದು ತಿಳಿದ ಮೇಲೆ, ಅರೆ ಮನಸ್ಸಿನಲ್ಲೇ ಜೊತೆಯಾಗಿ ನಿಂತು ಸತೀಶ ಗೆಲ್ಲಲು ನೆರವಾಗಿದ್ದ. ಸದಸ್ಯನಾದ ಮೇಲೆ ಒಂದೆರಡು ಬಾರಿ ಊರಿನಲ್ಲಿ ಚರಂಡಿ ಮಾಡಿಸುವ ಸಣ್ಣಪುಟ್ಟ ಕಾಂಟ್ರಾಕ್ಟ್ ಕೊಡಿಸು ಎಂದು ಕೇಳಿದ್ದು ಬಿಟ್ಟರೆ ಬೇರೇನೂ ಕೇಳಲಿಲ್ಲ.

ಇದನ್ನೂ ಓದಿ| Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ

ಊರಾಚೆಯ ಕುಂಬಾರರ ಶಿವ ಹೊಸದಾಗಿ ಮದುವೆಯಾಗಿದ್ದ, ಅತನ ಹೆಂಡತಿ ಲಕ್ಷ್ಮಿ ಸುಂದರವಾಗಿದ್ದವಳು. ಪದವಿ ಓದಿದ್ದವಳು, ಫೇಸ್ಬುಕ್ಕು, ಟಿಕ್-ಟಾಕ್ ಎಂದು ಆಗಾಗ ಸಾಮಾಜಿಕ ತಾಣಗಳಲ್ಲಿ ತೊಡಗಿಸಿಕೊಂಡಿದ್ದವಳು. ಅಣ್ಣಪ್ಪ ಕುಂಬಾರರ ಮನೆ ಬೀದಿಯ ಚರಂಡಿ ಕೆಲಸ ಮಾಡಿಸುವಾಗ ಪರಿಚಯವಾಗಿ, ಸಲುಗೆಯಿಂದ ಮಾತನಾಡಿದ್ದಳಂತೆ. ಅದನ್ನೇ ದುರುಪಯೋಗ ಪಡಿಸಿಕೊಂಡ ಅಣ್ಣಪ್ಪ ತನಗೆ ಮದುವೆಯಾಗಿ, ಮಕ್ಕಳಿರುವುದನ್ನು ಮರೆತು ಲಕ್ಷ್ಮಿಯ ಮೇಲೆ ಕಣ್ಣಾಕಿದ್ದ. ಆಕೆಯೂ ಒಂಚೂರು ಚಲ್ಲುಚಲ್ಲಾಗಿ ಆಡಿದ್ರೂ, ಕಂಡ ಕಂಡವರಿಗೆ ಆಹಾರವಾದವಳಲ್ಲ ಎಂಬುದು ಸತೀಶನಿಗೂ ತಿಳಿದಿತ್ತು. ಲಕ್ಷ್ಮಿಯ ಗಂಡ ಶಿವ, ಸತೀಶನ ಬಳಿ ದೂರು ತಂದಾಗ, ಇವೆಲ್ಲಾ ಸರಿಯಿಲ್ಲ, ಕುಟುಂಬ ಮರ್ಯಾದೆ ಪ್ರಶ್ನೆ ಇದೆಲ್ಲಾ ನಿಲ್ಲಿಸಿಬಿಡು ಎಂದು ಹೇಳಿ ಸುಮ್ಮನಾಗಿಸಿದ್ದ, ಅಣ್ಣಪ್ಪನ ಹೆಂಡತಿಗೂ ವಿಷಯ ತಿಳಿಯದಂತೆ ಮುಚ್ಚಿಟ್ಟಿದ್ದ.

ಕೃತಿ: ಕರುವ್ಗಲ್ಲು (ಕಥಾ ಸಂಕಲನ)
ಲೇಖಕ: ಡಾ.ಮಾರುತಿ ಎನ್.ಎನ್‌
ಪ್ರಕಾಶನ: ಸಪ್ನಾ ಬುಕ್‌ ಹೌಸ್‌
ಬೆಲೆ: 110 ರೂ.

Exit mobile version