Site icon Vistara News

Sunday read | ದೇಶಕ್ಕೆ 75ರ ಹೊಸ್ತಿಲಲ್ಲಿ ಓದಲೇಬೇಕಾದ ದೇಶದ್ದೇ ಕಥೆಗಳಿವು!

independence

ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದುವು. ಅಮೃತಮಹೋತ್ಸವದ ಹೊಸ್ತಿಲಲ್ಲಿ ನಿಂತು ಹಿಂತಿರುಗಿ ನೋಡಿದಾಗ ಆಗಿನ ಘಟನೆಗಳನ್ನು ಕಲ್ಪನೆ ಮಾಡುವುದಕ್ಕೂ ಇಂದಿನ ಯುವಪೀಳಿಗೆಗೆ ಸಾಧ್ಯವಿಲ್ಲ. ಇತಿಹಾಸದಲ್ಲಿ ಅಲ್ಲಲ್ಲಿ ಚದುರಿಹೋದ ವಿವರಗಳನ್ನು ಓದಿಕೊಂಡರೂ, ಪರಿಸ್ಥಿತಿಯನ್ನು ಕಲ್ಪನೆಗೆ ತಂದು ಊಹಿಸಿ ನೋಡುವುದು ಕಷ್ಟವೇ. ಹೀಗೆ ಸಾಹಿತ್ಯ ಕೃತಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಘಟ್ಟದ, ವಿಭಜನೆಯ ಸಮಯದ, ಕಥಾಹಂದರವನ್ನಿಟ್ಟುಕೊಂಡು ಬಂದ ಕೃತಿಗಳಲ್ಲಿ ಯುವಪೀಳಿಗೆ ಓದಲೇ ಬೇಕಾದ ಐದು ಕೃತಿಗಳನ್ನಿಲ್ಲಿ ನೋಡೋಣ.

೧. ಮಿಡ್‌ನೈಟ್ಸ್‌ ಚಿಲ್ಡ್ರನ್-‌ ಸಲ್ಮಾನ್‌ ರಶ್ದಿ: ಮಿಡ್‌ನೈಟ್‌ ಚಿಲ್ಡ್ರನ್‌ ಎಂಬ ಈ ಕಥಾನಕ ೧೯೪೭ರ ಆಗಸ್ಟ್‌ ಹದಿನೈದರಂದು ಮಧ್ಯರಾತ್ರಿಯ ಸಮಯದಲ್ಲಿ ಹುಟ್ಟಿದ ಸಲೀಮ್‌ ಸಿನೈ ಹಾಗೂ ಇತರ ಮಕ್ಕಳ ಕುರಿತಾದ ಕಥೆ. ೧೯೮೧ರಲ್ಲಿ ಪ್ರಕಟವಾದ ಈ ಕೃತಿಗೆ ಬೂಕರ್‌ ಪ್ರಶಸ್ತಿಯಲ್ಲದೆ, ಬೂಕರ್‌ ಆಫ್‌ ಬೂಕರ್‌ ಕೂಡಾ ಲಭಿಸಿತ್ತು. ಬ್ರಿಟೀಶ್‌ ಆಳ್ವಿಕೆಯ ಭಾರತ ಸ್ವತಂತ್ರ ಭಾರತವಾಗಿ ಅರಳುವ, ವಿಭಜನೆಯ ಕಾಲಘಟ್ಟದ ಹಿನ್ನೆಲೆಯಿರುವ ಈ ಕಥೆ ಹಲವು ಐತಿಹಾಸಿಕ ಘಟನೆಗಳನ್ನು ತನ್ನ ಕಥೆಯಲ್ಲಿ ಒಳಗೊಳ್ಳುತ್ತಾ ಸೂಪರ್‌ ಪವರ್‌ ಹೊಂದಿದ ಬಾಲಕರ ಕಥೆಯನ್ನು ಹೇಳುತ್ತದೆ. ಕಾಶ್ಮೀರ, ಆಗ್ರಾ, ಬಾಂಬೆ, ಲಾಹೋರ್‌, ಢಾಕಾಗಳಲ್ಲಿ ಸಂಚರಿಸುವ ಈ ಕಥೆ ತನ್ನ ಮೂಲಕ ಸ್ವತಂತ್ರ್ಯಪೂರ್ವ ಭಾರತ, ನಂತರದ ಭಾರತದ ಕಲ್ಪನೆಯನ್ನು ಓದುಗರೆದುರು ಹರಡಿಬಿಡುತ್ತದೆ.

೨. ಟ್ರೈನ್‌ ಟು ಪಾಕಿಸ್ತಾನ್- ಕುಶ್ವಂತ್‌ ಸಿಂಗ್:‌ ೧೯೫೬ರಲ್ಲಿ ಹೊರಬಂದ ಪ್ರಸಿದ್ಧ ಕೃತಿ. ೧೯೪೭ರಲ್ಲಿ ಭಾರತ ಪಾಕಿಸ್ತಾನದ ವಿಭಜನೆಯ ಹಿನ್ನೆಲೆಯಲ್ಲಿ ಹೆಣೆದ ಕಥಾನಕ. ಭಾರತ ಹಾಗೂ ಪಾಕಿಸ್ತಾದ ಗಡಿಯ ಮನೋ ಮಜ್ರಾ ಎಂಬ ಕಾಲ್ಪನಿಕ ಪುಟ್ಟ ಹಳ್ಳಿಯಲ್ಲಿ ನಡೆಯುವ ಕಥೆ. ಮುಖ್ಯವಾಗಿ ಸಿಖ್‌ ಹಾಗೂ ಮುಸ್ಲಿಮರೇ ಹೆಚ್ಚಿರುವ, ಯಾವಾಗಲೂ ಶಾಂತಿಯಿಂದ ಜೊತೆಯಾಗಿಯೇ ಇದ್ದ ಆ ಹಳ್ಳಿಗರು ಇದ್ದಕ್ಕಿದ್ದಂತೆ ವಿಭಜನೆಯ ಸಂದರ್ಭ ಬದಲಾಗುವ ಪರಿಸ್ಥಿತಿಯಲ್ಲಿ ನರಳುವ ಸಿಖ್‌ ಯುವಕ ಹಾಗೂ ಮುಸ್ಲಿಂ ಯುವತಿಯ ಪ್ರೇಮ ಕಥೆಯಿದು. ಕಥೆಯಾದರೂ, ಭಾರತದ ವಿಭಜನೆಯ ಸಂದರ್ಭವನ್ನು ಅರ್ಥೈಸಿಕೊಳ್ಳಲು ಯೋಗ್ಯವಾದ ಅತ್ಯುತ್ತಮ ಕೃತಿ.

೩. ಡಿಸ್ಕವರಿ ಆಫ್‌ ಇಂಡಿಯಾ- ಜವಹರಲಾಲ್‌ ನೆಹರು: ಭಾರತದ ಮೊದಲ ಪ್ರಧಾನಿ ನೆಹರು ವಿರಚಿತ ಡಿಸ್ಕವರಿ ಆಫ್‌ ಇಂಡಿಯಾ ಕೂಡ ಒಂದು ಪ್ರಸಿದ್ಧ ಕೃತಿ. ನೆಹರೂ ಅವರು ೧೯೪೪ರಲ್ಲಿ ಭಾರತ ಬಿಟ್ಟು ತೊಲಗಿ ಆಂದೋಲನದ ವೇಳೆ ಇರತ ಮುಖಂಡರ ಜೊತೆಗೆ ಜೈಲುಪಾಲಾದ ಸಂದರ್ಭ ಜೈಲಿನಲ್ಲೇ ಕೂತು ಬರೆದ ಪುಸ್ತಕವಿದು. ಈ ಪುಸ್ತಕ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡುತ್ತಿರುವ ದೇಶವೊಂದರ ಪ್ರಜೆಯೊಬ್ಬನ ಕಣ್ಣಿನಲ್ಲಿ ತನ್ನ ದೇಶದ ಬಗೆಗಿನ ವೇದ ಉಪನಿಷತ್ತಿನಿಂದ ಹಿಡಿದು, ಇತಿಹಾಸ, ಸಂಸ್ಕೃತಿಯನ್ನೂ ಒಳಗೊಂಡು, ದೇಶದ ಸಾಮಾಜಿಕ ರಾಜಕೀಯ ಭವಿಷ್ಯದ ಒಳನೋಟಗಳನ್ನು ಇದರ ಮೂಲಕ ನೀಡಿದ್ದಾರೆ. ೧೯೪೪ರಲ್ಲಿ ಈ ಪುಸ್ತಕ ಪ್ರಕಟಗೊಂಡಿರುವ ಈ ಕೃತಿ ಕಾದಂಬರಿಯಲ್ಲದಿದ್ರೂ, ಅಂದಿನ ಚಿಂತನೆಯ ತಳಹದಿಯಲ್ಲಿ ದೇಶದ ಭವಿಷ್ಯವನ್ನು ನೋಡುವ ಯುವ ಪ್ರಜೆ ಒಮ್ಮೆ ತಿರುವಿ ಹಾಕಬೇಕಾದ ಪುಸ್ತಕವಿದು.

4. ದಿ ಶ್ಯಾಡೋ ಲೈನ್ಸ್‌- ಅಮಿತಾವ್‌ ಘೋಷ್‌: ಸಾಹಿತ್ಯ ಅಕಾಡೆಮಿ ಪುರಸ್ಕೃತ ಕೃತಿ ಇದಾಗಿದೆ. ಈ ಕಾದಂಬರಿ ಎರಡನೇ ಮಹಾಯುದ್ಧ, ಸ್ವದೇಶೀ ಚಳುವಳಿ, ದೇಶವಿಭಜನೆ, ೧೯೬೪-೬೫ರ ಢಾಕಾ- ಕೋಲ್ಕತ್ತಾಗಳ ಮತೀಯ ಗಲಭೆಗಳನ್ನು ಹಿನ್ನೆಲೆಯನ್ನಾಗಿ ಬಳಸಿಕೊಂಡಿದೆ. ಗೋಯಿಂಗ್‌ ಅವೇ ಹಾಗೂ ಕಮಿಂಗ್‌ ಬ್ಯಾಕ್‌ ಎಂಬ ಎರಡು ವಿಭಾಗಗಳನ್ನು ಇದು ಒಳಗೊಂಡಿದ್ದು, ರಾಜಕೀಯ ಘಟನೆಗಳು ಸಾಮಾನ್ಯ ಮನುಷ್ಯನ ಜೀವನದಲ್ಲಿ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆ.

5. ಆಟೋಬಯಾಗ್ರಫಿ ಆಫ್‌ ಅನ್‌ನೋನ್‌ ಇಂಡಿಯನ್-‌ ನೀರದ್‌ ಸಿ ಚೌಧರಿ: ೧೯೫೧ರ ಈಗಿನ ಬಾಂಗ್ಲಾದಲ್ಲಿ ನಡೆವ ಕಥಾನಕ ಇದಾಗಿದ್ದು, ಲೇಖಕ ನೀರದ್‌ ಚೌಧರಿಯವರದ್ದೇ ಆತ್ಮಚರಿತ್ರೆ. ತನ್ನ ಹದಿಹರೆಯದಲ್ಲಿ ಕೋಲ್ಕತ್ತಾದ ಹಳ್ಳಿಗಳ ಬೀದಿಗಳಲ್ಲಿ ಅಡ್ಡಾಡುತ್ತಿದ್ದ ಹುಡುಗನ ಜೀವನವೊಂದು ಬ್ರಿಟೀಶ್‌ ಆಡಳಿತ ಹಾಗೂ ಸ್ವತಂತ್ರ್ಯಾನಂತರದ ಭಾರತದಲ್ಲಿ ಹೇಗೆ ಬದಲಾಯಿತು ಎಂಬುದರ ಪ್ರಾಮಾಣಿಕ ಅನುಭವದ ಬರಹರೂಪವಿದು.

Exit mobile version