| ಸಂಧ್ಯಾರಾಣಿ
ಪೀಠಿಕೆ
‘ಕಾದಂಬರಿ ಹೇಗೆ ಬರುತ್ತಿದೆ ಮೇಡಂ? ಬಿಡುಗಡೆ ದಿನಗಳು ಹತ್ತಿರ ಬರುತ್ತಿವೆ’
ಪ್ರಕಾಶಕ ಜಮೀಲ್ ಅವರ ಮೆಸೇಜ್ ತಲುಪಿದಾಗ ಎದೆ ಝಲ್ ಎಂದಿತು. ಆರು ತಿಂಗಳ ಹಿಂದೆ ಶುರು ಮಾಡಿದ ಕಥೆಯೊಂದು ನಡುವಲ್ಲೇ ದಾರಿ ತಿಳಿಯದೆ ನಿಂತುಬಿಟ್ಟಿದೆ. ಹಾಗೆ ತೀರಾ ಬರೆದೇ ಇಲ್ಲ ಅಂತಲೂ ಅಲ್ಲ, ಶುರು ಮಾಡಿ, ಸ್ವಲ್ಪ ಮುಂದೆ ಸರಿದಿದ್ದೆ. ಆಮೇಲೆ ಬೇರೆ ಏನೇನೋ ಕೆಲಸಗಳ ನಡುವೆ ನಿಲ್ಲಿಸಬೇಕಾಗಿ ಬಂದಿತ್ತು. ಇನ್ನೂ ಸಮಯ ಇದೆ, ಇನ್ನೂ ಸಮಯ ಇದೆ ಎಂದುಕೊಂಡಿದ್ದರೆ, ಆ ಸಮಯ ಬಂದೇ ಬಿಟ್ಟಿದೆ! ಮರುದಿನ ಸ್ನೇಹಿತೆಯರೊಂದಿಗೆ ಮಡಿಕೇರಿ ಬಳಿಯ ರೆಸಾರ್ಟ್ ಒಂದಕ್ಕೆ ಹೋಗುವ ಕಾರ್ಯಕ್ರಮ ಹಾಕಿ ಆಗಿತ್ತು. ಬರೆದಷ್ಟನ್ನು ಪ್ರಿಂಟ್ ತೆಗೆಸಿಕೊಂಡು ಹೊರಟೆ. ಸುತ್ತಲೂ 96 ಎಕರೆಗಳ ಕಾಫಿತೋಟ. ನಡುವಿನಲ್ಲಿ ಜಂಗಲ್ ಲಾಡ್ಜ್ ಥರದ ರೆಸಾರ್ಟ್. ರಾತ್ರಿ ಇಡೀ ಕಾಡು ಮಾತನಾಡುವ ಸದ್ದು. ಮರುದಿನ ಮುಂಜಾನೆ ಎದ್ದು ವಾಕಿಂಗ್, ಸ್ನಾನ ತಿಂಡಿ ಮುಗಿಸಿ, ಕಾಫಿ ಕಪ್ ಜೊತೆಗೆ ಆ ಹಾಳೆಗಳನ್ನು ಹಿಡಿದು ಕುಳಿತೆ. ಆ ದಿನ ಸುತ್ತಾಡಲು ಬರುವುದಿಲ್ಲ ಎಂದು ಹೇಳಿ ಬೈಸಿಕೊಂಡಾಗಿತ್ತು. ಅಷ್ಟು ದಿನಗಳ ಅಂತರದ ನಂತರ ಮತ್ತೆ ಕಥೆ ಕೈಗೆತ್ತಿಕೊಂಡಿದ್ದೆ. ಆಗ ಶುರುವಾಯಿತು, ಇದನ್ನು ಹೀಗೆ ಹೇಳಬಹುದೆ, ಕಥೆ ಮುಖ್ಯವೆ, ತಂತ್ರ ಮುಖ್ಯವೆ, ಈ ಬರಹ ಹೆಚ್ಚು ನಗರ ಕೇಂದ್ರಿತ ಆಗುತ್ತಿದೆಯೆ? ಆದರೆ ಕಥೆ ನಡೆಯುವುದೇ ನಗರದಲ್ಲಿ. ಕಥೆ ಕೇಳುವ ಬದುಕನ್ನು ಬರೆಯಬೇಕಲ್ಲದೆ, ಬೇಕೆಂದೇ ಬೇರೆಯದನ್ನು ತರುವುದು ಹೇಗೆ? ಹೀಗೆ ನೂರೆಂಟು ಪ್ರಶ್ನೆಗಳು.
ಕತೆಯ ಪಾತ್ರವಾಗಿದ್ದ ಸರೋಜಿನಿ ಈಗಲೂ ನಿದ್ದೆಯಿಂದ ಎಬ್ಬಿಸಿ, `ನಿರಂಜನ ಪತ್ರ ಬರೆದನೆ?’ ಎಂದು ಕೇಳುತ್ತಾಳೆ. ಗೌರಿ ನಗುವಿನ ನಡುವೆಯೇ ಮ್ಲಾನವಾಗುತ್ತಾಳೆ. ಇನಾಯಾ ‘ಇವಾಗೇನು?’ ಅನ್ನುತ್ತಾಳೆ. ಅರುಂಧತಿ ‘ಚಿಲ್ ಬೇಬಿ, ಚಿಲ್’ ಎನ್ನುತ್ತಾಳೆ. ರಾಮಚಂದ್ರ ನೆನಪಾದರೆ ಮಾತ್ರ ನನಗೆ ಮಾತು ಹೊರಡುವುದಿಲ್ಲ, ಮನಸ್ಸು ವಿಷಣ್ಣ ರಾಗದಲ್ಲಿ ಮುಳುಗುತ್ತದೆ. ನಿರಂಜನನ ಪಾತ್ರದ ಮುಖ ಆಗಾಗ ಬದಲಾಗುತ್ತಾ ಅಲ್ಲಿ ನಾನು ಕಂಡಿದ್ದ, ಕೇಳಿದ್ದ, ಓದಿದ್ದ ಯಾರು ಯಾರೋ ಕಾಣಿಸಿಕೊಂಡು ಮಿಣ್ಣಗೆ ನಗುತ್ತಾರೆ. ಈ ಪಾತ್ರಕ್ಕಿಂತ ನಿಜಜೀವನದ ವ್ಯಕ್ತಿಗಳೇ ಹೆಚ್ಚು ವರ್ಣರಂಜಿತವಾಗಿ ಕಂಡು ಬಂದು, ‘ನನ್ನ ಕಥೆ ಬರಿ, ನನ್ನ ಕಥೆ ಬರಿ’ ಎಂದು ಕೇಳುತ್ತಾರೆ. ಆದರೆ ಗೊತ್ತಿದ್ದವರ ಬಗ್ಗೆ ಬರೆಯುವುದೆಂದರೆ ತರಲೆ ತಾಪತ್ರಯ ಜಾಸ್ತಿ. ಏಕೆಂದರೆ, ‘ನನ್ನ ಕಥೆ ಹೇಳುತ್ತೇನೆ ಬರಿ’ ಎಂದವರೂ ಸಹ ಕಥೆ ಪೂರ್ತಿಯಾದ ಮೇಲೆ ಅವಕ್ಕೂ ತಮಗೂ ಸಂಬಂಧವೇ ಇಲ್ಲ, ಅದು ತಾವಲ್ಲವೇ ಅಲ್ಲ ಎಂದು ಹೇಳಿ, ಆ ಪಾತ್ರಗಳನ್ನು ಅನಾಥರನ್ನಾಗಿ ಮಾಡಿಬಿಡುತ್ತಾರೆ. ಆಮೇಲೆ ಅವಕ್ಕೊಂದು ದಡ ಮುಟ್ಟಿಸುವವರೆಗೂ ಅವುಗಳ ಹೊಣೆ ಇಡಿಯಾಗಿ ನಮ್ಮ ಮೇಲೆ ಬೀಳುತ್ತದೆ.
ಯಾರೇ ಆಗಲಿ, ಎಂಥವರೇ ಆಗಲಿ ಅವರ ಕಣ್ಣಲ್ಲಿನ ಅವರ ಪಾತ್ರಕ್ಕೂ, ನಮ್ಮ ಕಣ್ಣಲ್ಲಿನ ಅವರ ಪಾತ್ರಕ್ಕೂ ವ್ಯತ್ಯಾಸಗಳು ಇದ್ದೇ ಇರುತ್ತದೆ. ಎಷ್ಟೇ ಕೇಳಿ ಬರೆದರೂ ಕಡೆಗೆ ನಾವು ಬರೆದದ್ದು ಅವರು ಹೇಳಿದ್ದಕ್ಕಿಂತ ಹೆಚ್ಚೋ, ಕಡಿಮೆಯೋ ಆಗಿ ಅದು ಅವರ ಕಥೆಗಿಂತ ಹೆಚ್ಚಾಗಿ ನಮ್ಮ ಕಥೆ ಆಗಿಬಿಟ್ಟಿರುತ್ತದೆ. ‘ಪ್ರತಿ ವಿಲನ್ ಪಾತ್ರಧಾರಿ ಸಹ ತನ್ನನ್ನು ತಾನು ಹೀರೋ ಎಂದುಕೊಂಡೇ ತನ್ನ ಪಾತ್ರ ನಿರ್ವಹಿಸುತ್ತಾನೆ’ ಎಂದು ಗೆಳೆಯನೊಬ್ಬ ಹೇಳಿದ್ದು ನೆನಪಾಯಿತು. ಯಾರದೇ ಕಥೆ ಏಕಮೇವ ಸತ್ಯವಾಗಿರಲು ಸಾಧ್ಯವೇ ಇಲ್ಲ. ಅದು ಅವರೊಬ್ಬರದೇ ಕಥೆ ಆಗಿರಲು ಸಹ ಸಾಧ್ಯವಿಲ್ಲ. ಅವರ ಮಟ್ಟಿಗೆ ಪ್ರತಿಯೊಬ್ಬರೂ ಅವರವರ ಕಥೆಗಳಲ್ಲಿ ನಾಯಕ ಮತ್ತು ನಾಯಕಿಯರೇ ಆಗಿರುತ್ತಾರೆ. ಅವರ ಎಲ್ಲಾ ನಿರ್ಧಾರಗಳಿಗೂ, ನಡವಳಿಕೆಗಳಿಗೂ ಸಮರ್ಪಕವಾದ ಕಾರಣಗಳು ಇದ್ದೇ ಇರುತ್ತವೆ.
ಈ ಸಾವಾಸವೇ ಬೇಡ ಎಂದುಕೊಂಡು ಈ ಕಾದಂಬರಿ ಬರೆಯುವಾಗ ಕಾಲ್ಪನಿಕ ಪಾತ್ರಗಳಿಗೆ ಮೊರೆ ಹೋಗಿದ್ದೆ. ಆದರೆ ಈ ಕಾಲ್ಪನಿಕ ಪಾತ್ರಗಳು ಸಹ ಬೆಳೆದಂತೆ ನನ್ನ ಸುತ್ತಮುತ್ತಲಿನವರು, ಕಂಡು ಕೇಳಿದವರಂತೆಯೇ ಕಂಡು ನನ್ನ ದಿಕ್ಕೆಡೆಸುತ್ತಿದ್ದಾವೆ. ಸರಿರಾತ್ರಿಯಲ್ಲಿ ಎಚ್ಚರಾಗಿ, ಮತ್ತೆ ನಿದ್ದೆ ಬರದೆ ಹೊರಳುವಾಗ, ಒಬ್ಬಂಟಿಯಾಗಿ ವಾಕಿಂಗ್ ಹೊರಟಾಗ, ಡ್ರೈವ್ ಮಾಡುವಾಗ ವಾಸ್ತವದ ರೂಪ ಧರಿಸಿ, ಹರಟೆ ಹೊಡೆಯಲು ಆರಂಭಿಸುತ್ತವೆ. ನನ್ನ ಕಾದಂಬರಿಯ ಪಾತ್ರ ಸರೋಜಿನಿ ಒಮ್ಮೊಮ್ಮೆ ಹಾಡುಗಾರ್ತಿಯಂತೆ ಕಂಡರೆ ಮತ್ತೊಮ್ಮೆ ಬರಹಗಾರ್ತಿಯೊಬ್ಬಳಂತೆ ಕಾಣುತ್ತಾಳೆ. ಇನ್ನೂ ಕೆಲವೊಮ್ಮೆ ಯಾವುದೋ ಬುಟಿಕ್‌ನಲ್ಲಿರುತ್ತಾಳೆ. ಮೊನ್ನೆ ಯಾವಾಗಲೋ ಕಾತ್ಯಾಯಿನಿ ದೇವಿಯ ರೂಪದಲ್ಲಿ ಬಂದುಬಿಟ್ಟಿದ್ದಳು. ಅಂದಹಾಗೆ ಹಾಡುಗಾರ್ತಿ ಕಾತ್ಯಾಯಿನಿ ನೆನಪಿದೆಯಾ? ಪ್ರಖ್ಯಾತ ಸಂಗೀತಕಾರ ನೀಲಲೋಹಿತರ ಪತ್ನಿ. ಬಹಳ ಹಿಂದೆ ನಾನವರ ಸಂದರ್ಶನ ಮಾಡಿದ್ದೆ. ಆಗ ಒಂದು ಚಾನೆಲ್‌ಗಾಗಿ ಪ್ರತಿವಾರ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದೆ. ಅಂದು ಮಹಿಳಾ ದಿನಾಚರಣೆ, ಅದಕ್ಕೆ ತಕ್ಕ ಹಾಗೆ ನೀಲಲೋಹಿತರ ಹುಟ್ಟಿದ ದಿನ ಸಹ. ವರ್ಷಾನುಗಟ್ಟಲೆ ಹಾಡು ನಿಲ್ಲಿಸಿದ್ದ ಕಾತ್ಯಾಯಿನಿ ಇತ್ತೀಚೆಗಷ್ಟೇ ಮತ್ತೆ ಹಾಡಲು ಪ್ರಾರಂಭಿಸಿದ್ದರು. ಕಪ್ಪುಬಿಳಿ ನೀಳ ಕೂದಲು, ಆರ್ದ್ರವಾದ, ಕಾಡಿಗೆಯಿಲ್ಲದ, ಒದ್ದೆಒದ್ದೆ ಕಣ್ಣುಗಳು. ಅಪಾರ ಆತ್ಮವಿಶ್ವಾಸದ ಮುಖ, ಕಣ್ಣ ಕೊನೆಯ ಗೆರೆಗಳಲ್ಲಿ, ತುಟಿ ಪಕ್ಕದ ತಿರುವಿನ ಕಣಿವೆಗಳಲ್ಲಿ ಒತ್ತಿಟ್ಟ ವಯಸ್ಸು, ಕಿವಿಗಳಲ್ಲಿ ವಜ್ರದೋಲೆ, ಮೂಗಿಗೆ ವಜ್ರದ ಮೂಗುತಿ, ಬೇಸರಿ…ಉಟ್ಟಿದ್ದ ಕೆಂಪಂಚಿನ ಬಿಳಿಬಿಳಿ ಸೀರೆ… ಸೌಂದರ್ಯಕ್ಕೆ ವಯಸ್ಸಾದರೆ ಹೀಗೆಯೇ ಕಾಣಿಸಬಹುದು ಎನ್ನುವ ರೂಪ.
ನೀಲಲೋಹಿತ ಸಹ ಹೀಗೆಯೇ ಅತ್ಯಂತ ಆಕರ್ಷಕ ವ್ಯಕ್ತಿತ್ವ. ಅವರನ್ನು ಕಂಡರೆ ಜೀವ ಬಿಡುವಷ್ಟು ಮೋಹ. ಯಾವುದೋ ಕಾಣದ ಮಾಯೆಯನ್ನು ಹುಡುಕುತ್ತಾ, ತಡಕುತ್ತಾ ಇಗೋ ಇನ್ನೇನು ಮುಟ್ಟೇಬಿಟ್ಟೆ ಎನ್ನುವಂತೆ ರಾಗದ ಏರಿಳಿತಗಳ ಬೆನ್ನು ಹತ್ತಿ ಹೋಗುತ್ತಿದ್ದ ಆ ಬಲಕೈ ಬೆರಳುಗಳ ತುದಿಯಲ್ಲಿ ಹೃದಯವನ್ನಿಟ್ಟು ನಿವಾಳಿಸಬೇಕು ಅನ್ನಿಸಿಬಿಡುತ್ತಿತ್ತು. ರಂಗದ ಮೇಲೆ ಆತ ಹಾಡುತ್ತಿದ್ದರೆ ‘ಎಲ್ಲೋ ಜೋಗಪ್ಪ ನಿನ್ನರಮನೆ?’ ಎಂದು ಬಾಯಿ ಮಾತಿಗೂ ಕೇಳದೆ, ಹಳ್ಳಕೊಳ್ಳ, ಬಯಲು ದಿಣ್ಣೆ ಎಲ್ಲೋ ಒಂದು ಕಡೆ ಒಟ್ಟಿನಲ್ಲಿ ಅವರೊಟ್ಟಿಗೆ ಹೋಗಿಬಿಡಬೇಕು ಅನ್ನಿಸುತ್ತಿತ್ತು. ಯಾವುದೇ ಸಾಲಿನಲ್ಲಿ ಕುಳಿತು ಸಂಗೀತ ಕೇಳುತ್ತಿರಲಿ, ಯಾವುದೋ ಒಂದು ಕ್ಷಣ ಕೇಳುಗರೆಲ್ಲರೆಡೆಗೆ ತಿರುಗುತ್ತಾ, ಎಲ್ಲರ ಕಣ್ಣುಗಳನ್ನೂ ಸ್ಪರ್ಶಿಸುತ್ತಿದ್ದ ಅವರ ಕಣ್ಣೋಟ ನಮ್ಮ ಕಣ್ಣುಗಳಲ್ಲಿ ಅರೆಘಳಿಗೆ ತಂಗಿದಾಗ ’ತಟ್ಟನೆ ಮನಮಂ ಪಸಾಯದಾನ ಕೊಟ್ಟಳು’ ಎನ್ನುವ ಯಶೋದರೆ ಅರ್ಥವಾಗಿಬಿಡುತ್ತಿದ್ದಳು. ಪ್ರತಿಸಲ ಅವರ ಸಂಗೀತ ಕೇಳುವಾಗಲೂ ಕಣ್ಣುಗಳಿಂದ ತಣ್ಣಗೆ ಕಂಬನಿ ಹರಿದು, ಒಳಗನ್ನೆಲ್ಲಾ ತೊಳೆಯುತ್ತಿತ್ತು. ಅವರ ಧ್ವನಿಯಲ್ಲಿ ಒಬ್ಬ ಗಂಧರ್ವ ಮತ್ತು ಒಬ್ಬ ತಾಯಿ ಇದ್ದಾಳೆ ಅನ್ನಿಸುತ್ತಿತ್ತು. ಅವರ ಗುರುವಿನ ಮಗಳೇ ಈ ಕಾತ್ಯಾಯಿನಿ. ಗುರುಗಳು ಮಗಳ ಜೊತೆಯಲ್ಲಿ ತನ್ನ ಘರಾನಾ ಪರಂಪರೆಯನ್ನೂ ಇವರಿಗೆ ಧಾರೆಯೆರೆದು ಕೊಟ್ಟಿದ್ದರು. ತುಂಬಾ ಬಡತನದಿಂದ ಬಂದ ನೀಲಲೋಹಿತರಲ್ಲಿ ಅಪಾರ ಪ್ರತಿಭೆಯ ಜೊತೆಜೊತೆಗೆ ಪಟ್ಟು ಬಿಡದೆ ಸಾಧಿಸುವ ಛಲವೂ ಇತ್ತು. ಬೆಳೆಯುತ್ತಾ, ಬೆಳೆಯುತ್ತಾ ಅವರು ರಾಜ್ಯ, ದೇಶಗಳ ಸೀಮೆಯನ್ನು ದಾಟಿ ಬೆಳೆದಿದ್ದರು. ಅವರ ಅಡಿಗಳನ್ನು ಅನುಸರಿಸಿದ ಅದೆಷ್ಟು ಶಿಷ್ಯರು ಮತ್ತು ಶಿಷ್ಯೆಯರು.
ಮುಖ್ಯವಾಗಿ ಶಿಷ್ಯೆಯರು…ಅವರನ್ನು ಸದಾ ಹಿಂಬಾಲಿಸುತ್ತಿದ್ದ ಶಿಷ್ಯೆಯರು. ಹೆಂಡತಿಯ ಹಕ್ಕು, ಅಧಿಕಾರ, ಗೌರವ, ಮನ್ನಣೆ ಎಲ್ಲವನ್ನೂ ಕಾಲಕಾಲಕ್ಕೆ ಹಂಚಿಕೊಳ್ಳುತ್ತಿದ್ದ, ಕಾಲಕಾಲಕ್ಕೆ ಬದಲಾಗುತ್ತಿದ್ದ ಶಿಷ್ಯೆಯರು. ಸಾಣೆ ಹಿಡಿದ ಕತ್ತಿಯ ಅಲುಗಿನಂತಹ ಅವರ ಆಲಾಪದೊಂದಿಗೆ ಇಂತಹ ಸುದ್ದಿಗಳೂ ಪಸರಿಸುತ್ತಿದ್ದವು. ಅವರ ಸಿಟ್ಟು, ವಿಕ್ಷಿಪ್ತತೆ, ಕೆಲವು ಹೆಣ್ಣುಗಳಿಗೆ ಆಕರ್ಷಕವೆನ್ನಿಸುವ ಆರೋಗೆನ್ಸ್… ಎಲ್ಲಾ ಗೊತ್ತಿದ್ದರೂ ಅವರ ಹಾಡು ಕೇಳಿದಮೇಲೆ ಅವರನ್ನು ಪ್ರೀತಿಸದೆ ಇರಲು ಸಾಧ್ಯವೇ ಇರಲಿಲ್ಲ. ಆದರೆ ಅವರ ಕಾಲಾನಂತರ ಒಂದು ಪವಾಡ ನಡೆದಿತ್ತು. ಅವರಿರುವವರೆಗೂ ಬಾಯೇ ಬಿಡದ ಅವರ ಹೆಂಡತಿ ಆಮೇಲೆ ತಾವೂ ಹಾಡಲು ಶುರು ಮಾಡಿದ್ದರು. ಮಾಡಿದ್ದೇ ಮಾಡಿದ್ದು ಒಂದು ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದ್ದರು. ಬಿಸಿಲು ಮಳೆಯಾಗಿ, ಮಳೆ ಬೆಳದಿಂಗಳಾಗಿ, ತಂಗಾಳಿ ಬಿರುಗಾಳಿಯಾಗಿ ಅವರ ಸ್ವರದಲ್ಲಿ ಸಂಗೀತದ ಸ್ವರಗಳು ಕುಣಿಯುತ್ತಿದ್ದವು. ಆ ದನಿಯಲ್ಲಿ ಒಂದು ಮಾಧುರ್ಯವಿತ್ತು, ವರ್ಷಗಳ ಸಾಧನೆ ಇತ್ತು. ಜೊತೆಜೊತೆಯಲ್ಲೇ ಒಂದು ಅವ್ಯಕ್ತ ವಿಷಾದ, ನೋವು ಅಲೆಅಲೆಯಾಗಿ ಬರುತ್ತಿತ್ತು. ಅವರ ಪತಿ ಹಾಡುತ್ತಿದ್ದದ್ದು ತಾಂತ್ರಿಕವಾಗಿ ಅತ್ಯುನ್ನತ ಮಟ್ಟದಲ್ಲಿರುತ್ತಿತ್ತು, ಆದರೆ ಇವರ ಹಾಡಿನಲ್ಲಿದ್ದ ‘ಏನೋ ಒಂದು’ ಎಲ್ಲರ ಎದೆಯಾಳದ ದುಃಖಕ್ಕೂ ಮಾತು ಕೊಟ್ಟುಬಿಡುತ್ತಿತ್ತು. ಇಷ್ಟು ದಿನ ಈಕೆ ಹಾಡುತ್ತಿರಲಿಲ್ಲ ಏಕೆ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು.
‘ನಾನು ಹೊರಗೆ ಹಾಡುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ..’ ಒಮ್ಮೆ ಮಾತ್ರ ಅವರು ಹೇಳಿದ್ದರು. ಎಲ್ಲರ ಆರಾಧ್ಯದೈವವಾಗಿದ್ದ ಆ ದಿವಂಗತ ಸಂಗೀತಗಾರರು ಇದ್ದಕ್ಕಿದ್ದಂತೆ ಈಕೆಯನ್ನು ಮನೆಯ ಒಳಕೋಣೆಯಲ್ಲಿ ಕೂಡಿಹಾಕಿ, ಕಾವಲು ಕೂತಿದ್ದ ಗಂಡಸಾಗಿ ಬದಲಾಗಿಬಿಟ್ಟಿದ್ದರು. ಕಾತ್ಯಾಯಿನಿಯವರ ಸಂದರ್ಶನ ಮಾಡಲೆಂದು ಅವರ ನಡುಮನೆಯಲ್ಲಿದ್ದ ತೊಟ್ಟಿಮನೆಯಂತಹ ಚೌಕದ ಕಟ್ಟೆಯ ಮೇಲೆ ಕುಳಿತಿದ್ದೆ. ಅವರ ಮೆಲುಮಾತು, ಸಮಾಧಾನದ ಉತ್ತರ ತುಂಬಾ ಇಷ್ಟವಾಗುತ್ತಿತ್ತು. ಏನೇನೋ ಪ್ರಶ್ನೆ ಕೇಳುತ್ತಿದ್ದವಳು ನಡುವಿನಲ್ಲಿ, ‘ಹೀಗೆ ಜಗತ್ತಿನ ಯಾರೇ ಆಗಲಿ ಪ್ರೀತಿಸದೆ ಇರಲು ಸಾಧ್ಯವೇ ಇಲ್ಲದಂತಹ ಕಲಾವಿದರ ಪತ್ನಿಯಾಗಿ, ಆ ಎಲ್ಲಾ ಪ್ರೀತಿಯ ನಡುವಲ್ಲಿ, ಅವರೆಲ್ಲರೊಡನೆ ಅವರನ್ನು ಹಂಚಿಕೊಂಡು, ಮನೆಯಲ್ಲಿ ಅವರನ್ನು ಪ್ರೀತಿಸುತ್ತಲೇ ಇರುವುದು ಸಾಧ್ಯವೆ?’ ಅಂದೆ.
ಕೃತಿ: ಇಷ್ಟು ಕಾಲ ಒಟ್ಟಿಗಿದ್ದು… (ಕಾದಂಬರಿ)
ಲೇಖಕಿ: ಸಂಧ್ಯಾರಾಣಿ
ಪ್ರಕಾಶಕರು: ಸಾವಣ್ಣ ಪ್ರಕಾಶನ