ಅಜಯ ಚ, ಹೂವಿನ ಹಡಗಲಿ
ರಂಗಭೂಮಿಯ ಕಾಯಕದಲ್ಲಿ ತೊಡಗಿರುವ , ರಂಗಭೂಮಿಯನ್ನು ಆಸ್ವಾದಿಸುತ್ತಿರುವ, ಪೋಷಿಸುತ್ತಿರುವ, ಒಟ್ಟಾರೆ ಈ ಕಲಾಬಳಗವೇ ಒಂದು ಕುಲ ಎಂದು ಕರೆಯಬಹುದು. ಈ ಆಧುನಿಕ ಕಾಲಘಟ್ಟದಲ್ಲಿಯೂ ರಂಗಭೂಮಿಗೆ ಬರುವ ಹೊಸಬರ ಸಂಖ್ಯೆ ಏನೋ ತಕ್ಕಮಟ್ಟಿಗೆ ಇದೆ. ಯಾಕೆ ರಂಗಭೂಮಿಗೆ ಬರಬೇಕು ಎಂಬುದಕ್ಕೆ ಅವರದ್ದೆ ಆದ ಕಾರಣಗಳು ಇರುತ್ತವೆ. ಬದುಕಿನಲ್ಲಿ ಆಕಸ್ಮಿಕವಾಗಿಯಾದರೂ ಪ್ರತಿಯೊಬ್ಬರೂ ಒಮ್ಮೆಯಾದರೂ ರಂಗ ಪ್ರವೇಶ ಮಾಡಿರುತ್ತಾರೆ. ಆ ದಾರಿಯಲ್ಲಿ ಬರುವವರು ರಂಗ ಕುಲಕ್ಕೆ ಸೇರುತ್ತಾರೆ.
ನಾನು ದಶಕಕ್ಕೂ ಹೆಚ್ಚು ಕಾಲ ರಂಗಭೂಮಿಯಲ್ಲಿದ್ದೇನೆ. ರಂಗದ ಮೇಲೆ ಮನಃಪೂರ್ವಕವಾಗಿ ಬಹಳ ತೃಪ್ತಿ ಮತ್ತು ಆತ್ಮಶ್ರದ್ಧೆಯಿಂದ ರಂಗದಲ್ಲಿ ತೊಡಗಿಕೊಂಡಿದ್ದೇನೆ. ರಂಗದ ಬದುಕು ನನಗೆ ವ್ಯಕ್ತಿತ್ವವನ್ನ ,ಮನಸ್ಸನ್ನ ಸಾಕಷ್ಟು ತಿದ್ದಿದೆ. ಓದನ್ನ, ಸಾಹಿತ್ಯವನ್ನ ಜೀವನಪ್ರೇಮವನ್ನ ಕಲಿಸಿಕೊಟ್ಟಿದೆ. ಜೊತೆಗೆ ನನ್ನ ಒಳಗೆ ಇಳಿದು ನನ್ನನೇ ನಾನು ನೋಡಿಕೊಳ್ಳುವ ಬಗೆಯನ್ನೂ ರಂಗಭೂಮಿ ಕಲಿಸಿದೆ. ಹೇಗೆಂದರೆ ಒಬ್ಬ ನಟನಾಗಿ ನನ್ನೊಳಗೆ ಒಂದು ಪಾತ್ರ ಪ್ರವೇಶಿಸಬೇಕಾದರೆ ಮೊದಲು ನಾನು ಖಾಲಿಯಾಗಿರಬೇಕು. ಹಾಗಾದರೆ ಮಾತ್ರ ಏನನ್ನಾದರೂ ತುಂಬಿಕೊಳ್ಳಲ್ಲು ಸಾಧ್ಯ!
ಮೇಲೆ ಪಾತ್ರ ಒಳ ಸೇರಿದ ಮೇಲೆ ನಟ ಮತ್ತು ಪಾತ್ರ ಜಿದ್ದಾಜಿದ್ದಿ ಶುರುವಾಗುತ್ತದೆ. ಹೀಗೆ ಒಂದಿಷ್ಟು ಹಗ್ಗ ಜಗ್ಗಾಟದ ನಂತರ ಒಂದು ನಿಲುವಿಗೆ ಬಂದು ನಟ ಪಾತ್ರವಾಗಿ ಕಾಣಲಿಕ್ಕೆ ಸಾಧ್ಯವಾಗುತ್ತದೆ . ಈ ಪ್ರಕ್ರಿಯೆ ಇದೆಯಲ್ಲ ಅಂದರೆ ನಟ ಪಾತ್ರವಾಗುವ ಪ್ರಕ್ರಿಯೆ ನಟನ ವ್ಯಕ್ತಿತ್ವಕ್ಕೊಂದು ಅನುಭವವಾಗುತ್ತದೆ. ನಿಜಕ್ಕೂ ಈ ಕ್ರಿಯೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ತೊಡಗಿಕೊಂಡರೆ ನಟನಿಗೆ ಮಾಡಿದ ಪಾತ್ರ ಒಂದು ಜನ್ಮವಿದ್ದಂತೆಯೇ ಸರಿ! ಅದಕ್ಕೆ ಹಿರಿಯರು ಹೇಳಿದ್ದು ನಟರಲ್ಲದವರಿಗೆ ಒಂದೇ ಜನ್ಮ, ಅದರೆ ನಟನಿಗೆ ಆತ ಮಾಡಿದ ಪಾತ್ರವೆಲ್ಲವೂ ಜನ್ಮವೇ !! ಅನ್ನೊದು.
ರಂಗಭೂಮಿ ಜೀವಂತ ಮಾಧ್ಯಮ!! ಆಭಿನಯ ಜೀವತಾಳಬೇಕಾದರೆ ಅಪಾರ ಪರಿಶ್ರಮಬೇಕು. ತಾಳ್ಮೆ ತುಂಬಾ ಆಗತ್ಯವಿದೆ. ಈ ಕುರಿತಂತೆ ಜರ್ಮನ್ ಕವಿ ಮತ್ತು ಕಾದಂಬರಿಕಾರರಾದ ರೈನರ್ ಮಾರಿಯಾ ರಿಲ್ಕೆ ರವರು “ಲೆಟರ್ ಟು ದ ಯಂಗ್ ರೈಟರ್ ” ಪುಸ್ತಕದ ಒಂದು ಮಾತು ಸದಾ ನನ್ನ ಎದೆಯೊಳಗೆ ಇಣುಕುತ್ತದೆ. ಅದು ಏನೆಂದರೆ !
“ಕಲಾವಿದನಾಗಿ ಬದುಕುವುದೆಂಬುದರ ಅರ್ಥ ಇದೇ: ಅರ್ಥ ಮಾಡಿಕೊಳ್ಳುವುದಕ್ಕೆ, ಸೃಷ್ಟಿಸುವುದಕ್ಕೆ ತಕ್ಕ ಗಳಿಗೆಗಾಗಿ ಕಾಯುವುದು. ಕಾಲದ ಅಳತೆಗೆ ಇಲ್ಲಿ ಬೆಲೆ ಇಲ್ಲ. ಒಂದು ವರ್ಷ ಎನ್ನುವುದು ಏನೇನೂ ಅಲ್ಲ, ಹತ್ತು ವರ್ಷ ಎಂಬುದು ತೀರಾ ಕಡಿಮೆ. ಕಲಾವಿದನಾಗುವುದೆಂದರೆ ಅಂಕಿ ಸಂಖ್ಯೆಗಳ ಬಗ್ಗೆ ಚಿಂತೆ ಮಾಡುವುದಲ್ಲ. ಒತ್ತಾಯವಿಲ್ಲದೆ ಬೆಳೆಯುವ, ವಸಂತವು ಬರುವುದೋ ಇಲ್ಲವೋ ಎಂಬ ಆತಂಕವಿಲ್ಲದ, ಬೇಗ ಬೇಗ ಬೆಳೆಯಬೇಕೆಂಬ ಆತುರವಿಲ್ಲದ ಮರದ ಹಾಗಿರಬೇಕು ಕಲಾವಿದ. ಯಾವ ಕಳಕಳಿಯೂ ಇಲ್ಲದ, ಮೌನವೂ ವಿಸ್ತಾರವೂ ಆದ ಅನಂತತೆ ತನ್ನ ಮುಂದೆ ಇದೆ ಎಂಬಂತೆ ಸಹನೆಯಿಂದ ಕಾಯಬಲ್ಲ ಕಲಾವಿದನ ಬದುಕಿನಲ್ಲಿ ವಸಂತ ಬಂದೇ ಬರುತ್ತದೆ. ಸಹನೆಯೇ ಎಲ್ಲವೂ ಎಂಬುದನ್ನು ನಾನು ನನ್ನ ಬದುಕಿನ ಪ್ರತಿದಿನವೂ ನೋಯುತ್ತಾ ಕಲಿಯುತ್ತಿದ್ದೇನೆ.!”
( ಪುಸ್ತಕ: – “ಯುವಕವಿಗೆ ಬರೆದ ಪತ್ರಗಳು”
ಕನ್ನಡಕ್ಕೆ: – ಓ ಎಲ್ ನಾಗಭೂಷಣ ಸ್ವಾಮಿ)
ತಾಳ್ಮೆ ಮತ್ತು ಪರಿಶ್ರಮ ಆಗತ್ಯ!
ರಂಗಭೂಮಿಯನ್ನೆ ವೃತ್ತಿಯಾಗಿ ತೆಗೆದುಕೊಂಡು ಬದುಕುವುದು ಕಷ್ಟ ಇದೆ. ಕಾರಣ ರಂಗಕ್ಕೆ ಬರುವ ಅದಾಯ ಬಲು ಕಮ್ಮಿ.! ಹಾಗಾಗಿ ಯಾರೂ ನೀ ರಂಗಭೂಮಿಲಿ ಮುಂದುವರೆ ಅಂತ ಯಾರೂ ಹೇಳಲ್ಲ. ಅದು ಏನಿದ್ದರೂ ನನ್ನ ಸ್ವತಃ ಆಯ್ಕೆಯಾಗಿರುತ್ತದೆ. ಹಾಗಾಗಿ ಇತರೆ ಓದಿಗಿಂತ ರಂಗದ ಓದು ಪರಿಶ್ರಮದ್ದು ಮತ್ತು ಅನಿಶ್ಚಿತವಾದದ್ದು. ಇನ್ನೂ ಸಿನಿಮಾ/ ಧಾರಾವಾಹಿ ಮಾಡಬಹುದಲ್ವಾ? ಎಲ್ಲಿ ನೋಡಿದರೂ ಕೋಟಿ ಬಜೆಟ್ ಇರುತ್ತದೆ ಎಂದು ಕೇಳುವವರಿಗೆ ಹೇಳಬಹುದಾದ ಒಂದು ಮಾತೆಂದರೆ
‘ಆ ಮಾಧ್ಯಮದ ಭಾಷೆಯೇ ಬೇರೆ. ರಂಗದ ಭಾಷೆಯೇ ಬೇರೆ ಎರಡಕ್ಕೂ ಅದರದ್ದೇ ಆದ ತಾಂತ್ರಿಕ ಭಿನ್ನತೆ ಇದ್ದೆ ಇದೆ. ತನಗೆ ಯಾವುದು ಬೇಕು ಎಂಬುದನ್ನು ನಿಶ್ಚಯ ಮಾಡಿಕೊಂಡು ಆ ದಾರಿಯಲ್ಲಿ ಮುಂದುವರಿಯಬೇಕು.