Site icon Vistara News

World Theatre Day : ರಂಗಭೂಮಿ ನಿಂತಿರುವುದೇ ಬದ್ಧತೆಯ ಮೇಲೆ

Theater stands on commitment

#image_title

ನಂದಕುಮಾರ ಜಿ ಕೆ

#image_title

ನಮಸ್ಕಾರ್ರಿ…
ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು. ನಾ ನಂದಕುಮಾರ. ಹತ್ತು ವರ್ಷಗಳಿಂದ ರಂಗಭೂಮಿನ ನಂಬಿ ಬದಕಾಕತ್ತೀನಿ. ಇವತ್ತು ನಾ ನಂಬಿ ಬದಕ್ತಿರೋ ರಂಗಭೂಮಿಗೆ ಕ್ಷಮೆ ಕೇಳೋ ವ್ಯಾಳೆ ಬಂದತಿ. ಯಾಕಂದ್ರ ರಂಗಭೂಮಿ ನಿಂತಿರೋದೇ ಬದ್ಧತೆ ಮ್ಯಾಗ. ಆದರ ಅದನ್ನ ನಂಗ ನಿಭಾಯಸಾಕಾಗ್ಲಿಲ್ಲ. ಇದರಾಗ ನಂದೂ ಸಣ್ಣ ಪಾಲಿದ್ರ ಇಂಥಾ ಸ್ಥಿತಿ ಬರಂಗ ಮಾಡಿದ ವ್ಯವಸ್ಥೆದು ದೊಡ್ಡ ಪಾಲೈತಿ. ಈಗ ಅದನ್ನ ಹೇಳದ ಹೋದ್ರ ನನಗ ನಾ ಮೋಸಾ ಮಾಡಕಂಡಂಗ ಆಕ್ಕತಿ, ಹಂಗಾಗಿ ಈ ಸ್ವಗತ.

ನಾ ಹುಟ್ಟಿದ್ದು ರಾಣೇಬೆನ್ನೂರಾಗಾದ್ರ. ಓದಿ ಬೆಳದದ್ದೆಲ್ಲ ಹೂವಿನ ಹಡಗಲ್ಯಾಗ. ಹೂವಿನಹಡಗಲಿ ಅಂದ್ರ ನನಗ ಮೊದಲು ನೆನಪಾಗೊರ ನಮ್ಮ ಸಾಹೇಬ್ರು ದಿವಂಗತ ಎಂ ಪಿ ಪ್ರಕಾಶರು ಮತ್ತವರು ಕಟ್ಟಿದ ರಂಗಭಾರತಿ, ಜತೀಗೆ ನಂಗ ರಂಗ ದೀಕ್ಷೆ ನೀಡಿದ ನನ್ನಜ್ಜ. ವೃತ್ತಿ ರಂಗಭೂಮಿ ಕಲಾವಿದರಾದ ದಿವಂಗತ ಹಣ್ಣೀ ವೀರಭದ್ರಪ್ಪನವರು. ನಮ್ಮ ಅಜ್ಜ ಹೇಳ್ತಿದ್ದ ಕಂಪನಿ ನಾಟಕದ ಕತಿಗುಳನ್ನ ಪಾತ್ರದ ಮಾತುಗುಳನ್ನ ಕೇಳಕಂತ, ರಂಗಭಾರತಿ ರಂಗದಮ್ಯಾಗ ಬಣ್ಣಾ ಹಚ್ಚಿ, ಜಿ.ಬಿ.ಆರ್ ಕಾಲೇಜಿನ ರಂಗದ ಮ್ಯಾಗ ಆಡಕಂತ, ಹಾಡಕಂತ, ಕುಣಕಂತ, ನೀನಾಸಂ ಸೇರಿ ರಂಗಭೂಮೀನ ಅಪ್ಪಿ ಹಿಡಕಂಡೆ‌.

ಯಾಕಂದ್ರ ನನಗ ರಂಗಭೂಮಿ ಬಿಟ್ರ ಯಾರೂ ಇದ್ದಿಲ್ಲ. ಚಂದಗ ಓದಿ ಕೋರ್ಸ್ ಮುಗಸಿ ಫಸ್ಟ್ ಕ್ಲಾಸಿನ್ಯಾಗ ಪಾಸಾಗಿ, ಯಾಲ್ಡ ವರಸದ ತಿರಗಾಟದಾಗ ಪ್ರಮುಖ ಪಾತ್ರಗಳಾಗಿ ಮೆರದೆ. ಅದಾದಮ್ಯಾಗ ನನ್ನ ಹುರುಪು ಕಂಡು ನೀನಾಸಂ ಪ್ರತಿಷ್ಠಾನ ಸ್ಕಾಲರ್ಶಿಪ್ ಕೊಟ್ಟು ಮುಂಬೈಕ್ ಕಳ್ಸತು ಓದ್ ಹೋಗು ಅಂತ. ಅಲ್ಲೂ ಟಾಟಾ ಟ್ರಸ್ಟ್, ಇನ್ಲ್ಯಾಕ್ಸ್ ಶಿವದೇಶಿನಿ, ಡಾ ಶಂಕರ್ ಶೇಷ್ ಫೌಂಡೇಶನ್ ನಿಂದ ಸ್ಕಾಲರ್ಶಿಪ್ ತಗಂಡ್ ಓದಬಕಾರ ಕೋರ್ಸಿನ ಕಡೀಗೆ ಕೊರೋನಾ ಮಹಾಮಾರಿ ಮುಂಬೈ ಬಿಡಸಿ ಓಡಸ್ತು.

ಇರ್ಲಿಕ್ರ ಇನ್ನೂ ಅಲ್ಲೆ ಇರ್ತಿದ್ನೇನೋ ಗೊತ್ತಿಲ್ಲ. ಆಮ್ಯಾಗ ಊರಿಗ ಬಂದ್ ಏನರ ಮಾಡನಂದ್ರ ಜನಾ ಸೇರೋದ ಕಷ್ಟಾಗಿತ್ತು. ಕಡೇಗೆಲ್ಲಾ ಮುಗದ ಮತ್ತ ರಂಗಭೂಮಿ ಶುರುವಾಗಿಂದ ಅಮಿತ ಅನ್ನೋ ಗೆಳಿಯಾ ಕರದು ಸಮಾನಮನಸ್ಕ ಕಲಾವಿದರನ್ನ ಸೇರ್ಸಿ “ತಹ ತಹ” ಅನ್ನೋ ಅದ್ಭುತ ನಾಟಕ ಕಟ್ಟಿದ. ಅದರಾಗ ಆಡಿದೆ, ಹಾಡಿದೆ, ಕುಣದೆ. ಮತ್ತ ಕರೋನಾ ಬಂತು. ಅದಕ್ಕೂ ಅಂಜದ ಹೊಸಪೇಟ್ಯಾಗ ಜೊಮ್ಯಾಟೋ ಮಾಡಕ್ಯಂತ ಓದಕಂತ, ಬರಕಂತ, ತಿರಗಾಕತ್ತೆ. ಮತ್ತಲ್ಲಿಂದ ಗೆಳಿಯಾನ ಸಹಕಾರದಿಂದ ಕಾಪಿ ಸೀಮಿ ಸೇರಿ ಎಸ್ಟೇಟ್ ಮ್ಯಾನೇಜರಾದೆ.
ಈ ನಡಕ ಸುಮ್ಮನ ಇರ್ಲಂತ ಮೈಸೂರು ರಂಗಾಯಣದ ಮಹಾ ರಂಗಪ್ರಯೋಗದ ಎರಡನೆ ಸುತ್ತಿನ ಕಲಾವಿದರ ಆಯ್ಕೆಗೆ ಆಡಿಷನ್ ಕೊಟ್ ಬಂದಿದ್ದೆ.

ಅದು ಮತ್ತ ಕೈಗೂಡಿ ರಂಗಾಯಣ ಕರೀತು ಕೊರೋನಾದ ನಂತ್ರ ಮತ್ತ ಬಣ್ಣಾ ಹಚ್ಚಾಕ ಆವಕಾಶ ಸಿಕ್ಕತಲೇ ಅಂತ ಚಿಕ್ಕಮಗಳೂರಿಂದ ಬೈಕನ್ಯಾಗ ಹಾರಕ್ಯಂತ ಬಂದು ಸಂಜಯನಾಗಿ, ದುರ್ಯೋಧನಾಗಿ, ಪೂರ್ಣ ಚಂದ್ರ ತೇಜಸ್ವಿಯವರಾಗಿ,ರಾಮನಾಗಿ,ಬಣ್ಣಾ ಹಚ್ಚಿ ರಂಗಾಯಣದ ರೆಪರ್ಟರಿ ಕಲಾವಿದನಾಗಿ ಸಂಚಾರ ಮಾಡಿದೆ ರೆಪರ್ಟರ್ಯಾಗ ದುಡಕಂತ ಪ್ರತಿಭಾ ಬೀರೂರ್ ಗಿರಿರಾಜ್ ಅನ್ನೋ ಅದ್ಭುತ ರಂಗಸಂಗಾತೀನ ಮದವೀನೂ ಆದೆ.
ಕಡೇಗ ಪರ್ವ ನಾಟಕ ಮುಗೀತು.

ಇನ್ನ ಕಲತದ್ದನ್ನ ಹಂಚೋ ವ್ಯಾಳೆ ಬಂದಂತಂತ ಭಾರತೀಯ ರಂಗ ವಿದ್ಯಾಲಯದ ಶಿಕ್ಷಕ ವೃತ್ತಿಗೆ ಅರ್ಜಿ ಹಾಕಿದೆ.
ನೇಮಕಾತಿ ನಡೀತು ಆಯ್ಕೆ ಆದೆ. ಆದರ ಆಯ್ಕೆ ಆಗಿಂದ ತಿಳೀತು ಕಳದ ವರ್ಸ ಕೊಡೋದಕ್ಕಿಂತ ಸಂಬಳ ಕಡಮೀ ಮಾಡ್ಯಾರಂತ. ಭಾಳ ದುಃಖ ಆತು ಆದರೂ ಹೆದರಲಿಲ್ಲ. ಕನ್ನಡ ರಂಗಭೂಮಿ ನಮಗ ಒಂದ್ ಭಾಳ ಚಂದ ಕಲಸೇತಿ “ಬದ್ಧತೆ” ಅನ್ನೋದನ್ನ, ಎನರ ಆಗಲಿ ಒಪಗಂಡ ಕೆಲಸಾ ಮುಗಸಾಕ ಬೇಕು ಅನ್ನೋದನ್ನ ಬದ್ಧತೆಯ ಗುಂಗಿನ್ಯಾಗ ಬಿದ್ದು, ನೋವಾದ್ರು ನುಂಗಕ್ಯಂತ, ನುಂಗಕ್ಯಂತ ಕೆಲಸಾ ಮಾಡಾಕತ್ತೆ.

ಆಗಾಗ ಭಾಳ ತ್ರಾಸಾದಾಗ ಸಂಬಂಧ ಪಟ್ಟೋರಿಗೆ “ಚೂರ್ ಸಂಬಳಾ ಜಾಸ್ತಿ ಮಾಡ್ರಿ ಭಾಳ ತ್ರಾಸಾಗಾಕತ್ತತ್ತಿ”. ಅಂತ ಕೇಳತಿದ್ದೆ ಅವರು ಹಾರಿಕೆ ಉತ್ರಾ ಕೊಡಕಂತ ಮೂಗಿಗ್ ತುಪ್ಪಾ ಹಚಗಂತ ಕೆಲಸಾ ತಗಾಣಾಕತ್ರು,ಕೊಡಬೇಕಾದ ಕನಿಷ್ಠ ಸೌಲಭ್ಯಾನ ಕೇಳಿದ್ರೂ ಕೊಡಲಿಲ್ಲ, ಕೊಡಾಕ ಆಗಲ್ಲಪಾ ರಂಗಾಯಣದಾಗ ಫಂಡ್ ಇಲ್ಲಾ. ಈ ವ್ಯವಸ್ಥೆ ಹಿಂಗ ಇರೋದು. ಇಷ್ಟಾ ಇದ್ರ ಮಾಡು ಇಲ್ಲಾ ಬಿಡು ಅಂದ್ರು. ಕಣ್ಣೀರ ಕಣ್ಣಾಗ ಒಪಗಂಡ ಕೆಲಸಕ್ಕ ರಾಜೀನಾಮೆ ಕೊಟ್ಟೆ. ನನ್ನ ಬದ್ಧತೆಯನ್ನ ನಾನ ಮುರದೆ.

ಇದರಿಂದ ಒಂದು ತಿಳೀತು. ಕಲಾವಿದ ಯಾರ ಹಂಗಿನ್ಯಾಗೂ ಇರಬಾರದು. ಅಕಸ್ಮಾತ್ ಇದ್ರೂ ಅಲ್ಲಿನ ವ್ಯವಸ್ಥೆ ಮತ್ತ ವಾತಾವರಣ ಆತನ ಅನ್ನಕ್ಕ ಕೆಲಸಕ್ಕ ಪೂರಕವಾಗಿರಬಕು ಅಂತ. ವಿಶ್ವ ರಂಗಭೂಮಿ ದಿನಾಚರಣೆ ದಿನಾ ರಂಗಭೂಮಿಗೆ ನಾ ಮತ್ತ ಕ್ಷಮೆ ಕೇಳಾಕತ್ತೀನಿ ಕ್ಷಮಿಸ್ ನನ್ನ ಅಂತ.

ನನ್ನಂಥಾ ಸ್ಥಿತಿ ಯಾವ ಕಲಾವಿದನಿಗೂ ಬರಬಾರದು. ಇಂಥಾ ಆಧುನಿಕರಂಗದ ಯುಗದಾಗೂ ಕಲಾವಿದರಿಗೆ ಹಿಂಗ್ ಆಗಬಾರದು. ಹೆಸರಾಂತ ಸಂಸ್ಥೆಗಳು ಕಲಾವಿದರನ್ನ ಕಲಾವಿದರ ಥರಾ ನೋಡಬೇಕು, ನಾವ್ ಕೇಳೋದೇನ್ ದೊಡ್ಡದಲ್ಲ. ಚೂರ ಚೂರ್ ಅನುಕೂಲ ಅಷ್ಟ. ಇದನ್ನ ಕೊಟ್ರ ನೋಡ್ರಿ ಕಲಾವಿದ ಹೆಂಗ ದುಡೀತಾನ ಅಂತ. ಇಷ್ಟೆಲ್ಲ ಆದರೂ ನಾ ಎದಿಗುಂದಲ್ಲ ಮತ್ತ ಬರೀತನಿ ಆಡತನಿ ಹಾಡತನಿ ಕುಣೀತನಿ ಸ್ವತಂತ್ರವಾಗಿ.

ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು.

Exit mobile version