ಹೊಸ ದಿಲ್ಲಿ: ಬಲ್ಗೇರಿಯನ್ ಬರಹಗಾರ ಜಾರ್ಜಿ ಗೊಸ್ಪೊಡಿನೋವ್ ಅವರ ʼಟೈಮ್ ಶೆಲ್ಟರ್’ ಕಾದಂಬರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಿದೆ. ಜಾರ್ಜಿ ಹಾಗೂ ಕಾದಂಬರಿಯ ಅನುವಾದಕಿ ಏಂಜೆಲಾ ರೋಡೆಲ್ ಈ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.
ʼಟೈಮ್ ಶೆಲ್ಟರ್ʼ ಗತಕಾಲದ ಹಳಹಳಿಕೆಯ ಅಪಾಯಗಳ ಬಗ್ಗೆ ಇರುವ ಗಾಢವಾದ ವ್ಯಂಗ್ಯದ ಕಾಮಿಕ್ ಕಾದಂಬರಿ. ʼಟೈಮ್ ಶೆಲ್ಟರ್’ನಲ್ಲಿ ಗತಕಾಲವನ್ನು ಮರುಸೃಷ್ಟಿಸುವ ಕ್ಲಿನಿಕ್ ಅನ್ನು ಕಲ್ಪಿಸಲಾಗಿದೆ. ಇಲ್ಲಿನ ಪ್ರತಿ ಮಹಡಿಯೂ ವಿಭಿನ್ನ ಬೇರೆ ಬೇರೆ ದಶಕಗಳನ್ನು ಮರುಸೃಷ್ಟಿಸುತ್ತದೆ. ಡಿಮೆನ್ಷಿಯಾ ಕಾಯಿಲೆ ಹೊಂದಿರುವವರು ತಮ್ಮ ನೆನಪುಗಳನ್ನು ಮರಳಿ ಪಡೆಯಲು ಸಹಾಯ ಮಾಡುವುದಕ್ಕಾಗಿ ಸೃಷ್ಟಿಸಲಾಗಿರುವ ಇದು, ಆಧುನಿಕ ಪ್ರಪಂಚದಿಂದ ತಪ್ಪಿಸಿಕೊಳ್ಳಲು ಉತ್ಸುಕರಾಗಿರುವ ಜನರ ನೆಲೆಯಾಗಿಬಿಡುವ ಕಥಾವಸ್ತುವನ್ನು ಇದು ಹೊಂದಿದೆ.
ಟೈಮ್ ಶೆಲ್ಟರ್, ಇದು ಇನ್ನಿತರ ಐದು ಐದು ಫೈನಲಿಸ್ಟ್‌ಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದಿದೆ. ಇಂಗ್ಲಿಷ್‌ಗೆ ಅನುವಾದಿಸಲಾದ ಪ್ರಪಂಚದ ಇತರ ಭಾಷೆಗಳ ಕಾದಂಬರಿಗೆ ಈ ಬಹುಮಾನ ಮೀಸಲಾಗಿದೆ. ಬಹುಮಾನದ ಮೊತ್ತವಾದ 50,000 ಪೌಂಡ್‌ಗಳನ್ನು ಲೇಖಕ ಮತ್ತು ಅನುವಾದಕರಿಬ್ಬರಿಗೂ ಹಂಚಲಾಗುತ್ತದೆ. ಕಳೆದ ವರ್ಷ ಭಾರತದ ಗೀತಾಂಜಲಿ ಶ್ರೀ ಅವರು ತಮ್ಮ ʼಟಾಂಬ್ ಆಫ್ ಸ್ಯಾಂಡ್ʼ ಕೃತಿಗೆ ಅನುವಾದಕಿ ಡೈಸಿ ರಾಕ್‌ವೆಲ್ ಅವರ ಜತೆಗೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.
ತೀರ್ಪುಗಾರರ ಸಮಿತಿಯ ಅಧ್ಯಕ್ಷರಾದ ಫ್ರೆಂಚ್ ಕಾದಂಬರಿಗಾರ್ತಿ ಲೀಲಾ ಸ್ಲಿಮಾನಿ ಕೃತಿಯ ಬಗ್ಗೆ, ʼʼಇದು ವ್ಯಂಗ್ಯ ಮತ್ತು ವಿಷಣ್ಣತೆಯಿಂದ ತುಂಬಿದ ಅದ್ಭುತ ಕಾದಂಬರಿ. ನಮ್ಮ ನೆನಪುಗಳು ಕಣ್ಮರೆಯಾದಾಗ ನಮಗೆ ಏನಾಗುತ್ತದೆ ಎಂಬ ಸಮಕಾಲೀನ ಮತ್ತು ತಾತ್ವಿಕ ಪ್ರಶ್ನೆಯನ್ನು ಹೊಂದಿರುವ ಅತ್ಯಂತ ಆಳವಾದ ಕೃತಿಯಿದು. ಹಾಗೇ ಯುರೋಪ್ ಬಗ್ಗೆ ಇರುವ ಉತ್ತಮ ಕಾದಂಬರಿಯೂ ಕೂಡ. ಇಲ್ಲಿನ ಭವಿಷ್ಯದ ಅಗತ್ಯವನ್ನು, ಭೂತಕಾಲವನ್ನು ಇಲ್ಲಿ ಮರುಶೋಧಿಸಲಾಗಿದೆʼʼ ಎಂದಿದ್ದಾರೆ. ಬಲ್ಗೇರಿಯಾದ ಹೆಚ್ಚು ಅನುವಾದಿತ ಲೇಖಕರಲ್ಲಿ ಗೋಸ್ಪೊಡಿನೋವ್ ಒಬ್ಬರು.