Site icon Vistara News

Award wapsi: ಪ್ರಶಸ್ತಿ ಬೇಕೆ? ʼಅವಾರ್ಡ್‌ ವಾಪ್ಸಿʼ ಮಾಡಲ್ಲ ಎಂದು ಬರೆದುಕೊಡಿ!

award wapsi

ಹೊಸದಿಲ್ಲಿ: ಸರ್ಕಾರಿ ಪ್ರಶಸ್ತಿಗಳನ್ನು ಸ್ವೀಕರಿಸುವವರು ಅವನ್ನು ಪಡೆಯುವ ಮೊದಲು ತಾವು ಮುಂದೆ ʻಅವಾರ್ಡ್‌ ವಾಪ್ಸಿʼ (Award wapsi) ಮಾಡುವುದಿಲ್ಲ ಎಂದು ಘೋಷಿಸುವ ಲಿಖಿತ ಪತ್ರಕ್ಕೆ ಸಹಿ ಹಾಕಬೇಕು ಎಂದು ಸಂಸದೀಯ ಸಮಿತಿ ನೀಡಿರುವ ಶಿಫಾರಸು ಇದೀಗ ದೇಶದ ಸಾಂಸ್ಕೃತಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗತೊಡಗಿದೆ.

ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಸಮಿತಿಯು ‘ರಾಷ್ಟ್ರೀಯ ಅಕಾಡೆಮಿಗಳು (national academy) ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯನಿರ್ವಹಣೆ’ ಎಂಬ ಶೀರ್ಷಿಕೆಯ ವರದಿಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದೆ. “ಪ್ರಶಸ್ತಿಯನ್ನು ನೀಡುವಾಗ, ಅವುಗಳನ್ನು ಸ್ವೀಕರಿಸುವವರ ಒಪ್ಪಿಗೆಯನ್ನು ತೆಗೆದುಕೊಳ್ಳಬೇಕು ಎಂದು ಸಮಿತಿಯು ಸೂಚಿಸುತ್ತದೆ. ಮುಂದೆ ಅವರು ಅದನ್ನು ರಾಜಕೀಯ ಕಾರಣ ನೀಡಿ ಹಿಂದಿರುಗಿಸದಂತೆ ಖಚಿತಪಡಿಸಲು ಇದು ಸಹಕಾರಿ. ಯಾಕೆಂದರೆ ಇದು ದೇಶಕ್ಕೆ ಅವಮಾನಕಾರಿʼʼ ಎಂದು ವೈಎಸ್‌ಆರ್‌ಸಿಪಿ ಮುಖಂಡ ವಿಜಯ್ ಸಾಯಿ ರೆಡ್ಡಿ ನೇತೃತ್ವದ ಸಮಿತಿ ಹೇಳಿದೆ.

ಡಾ. ಸೋನಲ್ ಮಾನ್‌ಸಿಂಗ್, ಮನೋಜ್ ತಿವಾರಿ, ಚೆದಿ ಪೆಹೆಲ್ವಾನ್, ದಿನೇಶ್ ಲಾಲ್ ಯಾದವ್, ತಿರತ್ ಸಿಂಗ್ ರಾವತ್, ರಜನಿ ಪಾಟೀಲ್, ತಾಪಿರ್ ಗಾವೊ ಮತ್ತು ರಾಜೀವ್ ಪ್ರತಾಪ್ ರೂಡಿ ಈ ಸಮಿತಿಯ ಪ್ರಮುಖ ಸದಸ್ಯರಾಗಿದ್ದಾರೆ. ʼʼಸಾಹಿತ್ಯ ಅಕಾಡೆಮಿ ಮತ್ತು ಇತರ ಸಂಸ್ಥೆಗಳು ರಾಜಕೀಯಕ್ಕೆ ಯಾವುದೇ ಸ್ಥಾನವಿಲ್ಲದ ಸಂಸ್ಥೆಗಳುʼʼ ಎಂದು ಸಮಿತಿಯು ಈ ಶಿಫಾರಸನ್ನು ಸಮರ್ಥಿಸಿಕೊಂಡಿದೆ.

ಸಾಹಿತ್ಯ ಅಕಾಡೆಮಿ (sahitya academy) ಮೊದಲಾದ ಅಕಾಡೆಮಿಗಳು ನೀಡಿದ ಪ್ರಶಸ್ತಿಗಳನ್ನು ಸ್ವೀಕರಿಸಿದ ಕೆಲವರು ಅವುಗಳನ್ನು ಸಾಂಸ್ಕೃತಿಕ ಕ್ಷೇತ್ರಗಳ ವ್ಯಾಪ್ತಿಯಿಂದ ಹೊರಗಿರುವ ಕೆಲವು ರಾಜಕೀಯ ವಿಷಯಗಳಿಗೆ ಸಂಬಂಧಿಸಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಕೆಲವು ನಿದರ್ಶನಗಳು ನಡೆದಿವೆ. ಇಂತಹ ಅನುಚಿತ ಘಟನೆಗಳು ಇಂಥ ಪ್ರಶಸ್ತಿಗಳನ್ನು ಪಡೆದ ಇತರರ ಸಾಧನೆಗಳನ್ನು ಅವಮಾನಿಸುತ್ತವೆ. ಹಾಗೂ ಆ ಪ್ರಶಸ್ತಿಗಳ ಒಟ್ಟಾರೆ ಘನತೆಯನ್ನು ಹಾಳುಮಾಡುತ್ತವೆ ಎಂದು ವರದಿ ಹೇಳಿದೆ.

ಹೀಗೆ ಅವಾರ್ಡ್‌ ವಾಪ್ಸಿ ಮಾಡಿದ ನಂತರ ಮತ್ತೆ ಅಕಾಡೆಮಿಗಳನ್ನು ಸೇರಿಕೊಳ್ಳುವ ಕೆಲವರ ನಡೆಗಳನ್ನೂ ಸಮಿತಿಯು ಪ್ರಶ್ನಿಸಿದೆ. ಇಂಥ ಅಭ್ಯರ್ಥಿಗಳ ಪೂರ್ವಭಾವಿ ಸಮ್ಮತಿಯನ್ನು ತೆಗೆದುಕೊಳ್ಳುವಂತೆಯೂ ಶಿಫಾರಸು ಮಾಡಿದೆ. ಪ್ರಶಸ್ತಿ ಪುರಸ್ಕೃತರು ಭವಿಷ್ಯದಲ್ಲಿ ಯಾವುದೇ ರೀತಿಯಲ್ಲೂ ಪ್ರಶಸ್ತಿಯನ್ನು ಅವಮಾನಿಸುವಂತಿಲ್ಲ ಎಂದು ಒಪ್ಪಿಗೆ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬಹುದು. ಒಂದು ವೇಳೆ ಹಾಗೆ ಪ್ರಶಸ್ತಿಗಳನ್ನು ಹಿಂತಿರುಗಿಸಿದವರನ್ನು ಮುಂದಿನ ಭವಿಷ್ಯದಲ್ಲಿ ಅಂತಹ ಯಾವುದೇ ಪ್ರಶಸ್ತಿಗೆ ಪರಿಗಣಿಸಬಾರದು- ಎಂದೂ ಸಮಿತಿ ಶಿಫಾರಸು ಮಾಡಿದೆ.

2015ರಲ್ಲಿ ಸಂಶೋಧಕ ಎಂ.ಎಂ ಕಲ್ಬುರ್ಗಿ (M M Kalburgi) ಅವರ ಹತ್ಯೆ ಪ್ರಕರಣದ ನಂತರ ಉದಯ್ ಪ್ರಕಾಶ್, ನಯನತಾರಾ ಸೆಹಗಲ್ ಮತ್ತು ಅಶೋಕ್ ವಾಜಪೇಯಿ ಮುಂತಾದ ಸಾಹಿತಿಗಳು ಸೇರಿದಂತೆ 33 ಪ್ರಶಸ್ತಿ ಪುರಸ್ಕೃತರು ಪ್ರತಿಭಟನಾರ್ಥವಾಗಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. ಅಂದಿನಿಂದ ಅವಾರ್ಡ್‌ ವಾಪ್ಸಿಯು ಸರ್ಕಾರವನ್ನು ಪ್ರತಿಭಟಿಸುವ ಜನಪ್ರಿಯ ಸಾಧನವಾಗಿದೆ. ಇತ್ತೀಚಿನ ನಿದರ್ಶನವೆಂದರೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ WFI ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ (Brij Bhushan singh) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಮುಖ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವುದಾಗಿ ಬೆದರಿಕೆ ಹಾಕಿದ್ದು. ಸದ್ಯ, ಪದ್ಮ ಪ್ರಶಸ್ತಿಗಳನ್ನು ಪುರಸ್ಕೃತರ ಒಪ್ಪಿಗೆ ಪಡೆದು ನೀಡಲಾಗುತ್ತಿದೆ. ಇದನ್ನೂ ನಿರಾಕರಿಸುವವರಿದ್ದಾರೆ.

ಸಮಿತಿಯ ಈ ಶಿಫಾರಸಿನ ಕುರಿತು ಸಾಂಸ್ಕೃತಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ. ಪ್ರತಿಭಟನೆಯು ಪ್ರಜಾಪ್ರಭುತ್ವದಲ್ಲಿ ಅತ್ಯಗತ್ಯವಾದ ಒಂದು ಆಯುಧ. ಅದನ್ನು ಹತ್ತಿಕ್ಕಬಾರದು ಎಂದು ಕೆಲವು ಲೇಖಕರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: Award Wapsi In Maharashtra | ಮಹಾರಾಷ್ಟ್ರದಲ್ಲಿ ಶುರುವಾಯ್ತು ಪ್ರಶಸ್ತಿ ವಾಪಸ್‌ ಅಭಿಯಾನ, ಏನಿದಕ್ಕೆ ಕಾರಣ?

Exit mobile version