Site icon Vistara News

World Theatre Day: ಅಹಂಕಾರದ ಸೋಂಕಿಲ್ಲದ, ಮನುಷ್ಯತ್ವದ ಕ್ಷೇತ್ರ ರಂಗಭೂಮಿ

Uncontaminated by ego, field theater of humanity

#image_title

ರಂಗನಾಥ ಶಿವಮೊಗ್ಗ ರಂಗಕಲಾವಿದ

ಪ್ರೀತಿಯ ರಂಗಕರ್ಮಿಗಳಿಗೆ, ರಂಗಾಸಕ್ತರಿಗೆ ವಿಶ್ವ ರಂಗಭೂಮಿ ದಿನದ ಶುಭಾಶಯಗಳು. ಈ ಸುಸಂದರ್ಭದಲ್ಲಿ ರಂಗಭೂಮಿಯಲ್ಲಿನ ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನಾನು ಮೂಲತಃ ಶಿವಮೊಗ್ಗದವನು, ಚಿಕ್ಕಂದಿನಲ್ಲೇ ಓದಿನ ಹವ್ಯಾಸವಿದ್ದ ನನಗೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ರಂಗಚಟುವಟಿಕೆಗಳ ಕುರಿತು ನಿಧಾನವಾಗಿ ಆಸಕ್ತಿ ಬೆಳೆಯಿತು. ನಾಟಕ ಪ್ರದರ್ಶನ, ಯಕ್ಷಗಾನಗಳನ್ನು ನೋಡುತ್ತಿದ್ದ ನನಗೆ ನಿಧಾನವಾಗಿ ರಂಗಭೂಮಿ ಮೇಲೆ ಒಲವು ಹೆಚ್ಚುತ್ತಾ ಹೋಯಿತು. ರಂಗದ ಮೇಲೆ ನಟಿಸಬೇಕೆಂಬ ಹಂಬಲ ನನ್ನನ್ನು ಬಿಡದೆ ಕಾಡುತ್ತ ಹೋಯಿತು. ಅವಕಾಶಕ್ಕಾಗಿ ಹುಡುಕುತ್ತಿದ್ದವನಿಗೆ ಸಮುದಾಯ ಶಿವಮೊಗ್ಗ ತಂಡದಲ್ಲಿ ಚಂದ್ರಶೇಖರ ಕಂಬಾರರ ಬೋಳೆಶಂಕರ ನಾಟಕದಲ್ಲಿ ಅಜಯ್ ನೀನಾಸಂ ನಿರ್ದೇಶನದಲ್ಲಿ ನಟಿಸುವ ಅವಕಾಶ ಲಭ್ಯವಾಯಿತು. ಅಲ್ಲಿಂದ ತಿರುಗಿ ನೋಡಲೇ ಇಲ್ಲ.

ಒಂದಷ್ಟು ನಾಟಕಗಳಲ್ಲಿ ನಟಿಸುತ್ತಾ, ರಂಗಭೂಮಿಯನ್ನು ಆಳವಾಗಿ ಅರಿಯಬೇಕೆಂಬ ಹಸಿವಿನಿಂದ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ವಿದ್ಯಾಭಾಸ ನಡೆಸಿದ್ದಾಯಿತು. ಒಂದು ವರ್ಷದ ಅಧ್ಯಯನದಲ್ಲಿ ಪಡೆದುಕೊಂಡದ್ದೆಷ್ಟೋ, ಕಳೆದು ಕೊಂಡದ್ದೆಷ್ಟೋ… ನೀನಾಸಂನಲ್ಲಿ ನಾನು ಕಂಡುಕೊಂಡದ್ದಿಷ್ಟೆ, ಕಲೆ ಎಂದರೆ ಏನು? ಅದರ ವಿಸ್ತಾರವೇನು? ಅಲ್ಲಿಂದ ಹೊರಬಂದ ಮೇಲೆ ಒಂದಷ್ಟು ಕಡೆ ನಟಿಸುತ್ತ, ಒಂದಷ್ಟು ಕಡೆ ನಾಟಕ ಕಟ್ಟುತ್ತಾ, ನಿರ್ದೇಶನ, ನಟನೆ
ನಾಟಕ ರಚನೆ ಕುರಿತ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾ, ರಂಗಭೂಮಿಯನ್ನು ಸಾಧ್ಯವಾದಷ್ಟು ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ. ಮಾಡುತ್ತಿರುತ್ತೇನೆ ಕೂಡ. ಒಂದೆರಡು ನಾಟಕ ಬರೆಯುವ, ಒಂದಷ್ಟು ನಾಟಕಗಳನ್ನು ಕಟ್ಟಲು ಪ್ರಯತ್ನಿಸಿದ್ದೇನೆ.

ರಂಗಭೂಮಿಯನ್ನು ಅರಿಯುತ್ತಾ ಸಾಗುವ ನನ್ನ ಈ ಪಯಣದಲ್ಲಿ ನನ್ನ ವೈಯಕ್ತಿಕ ಬದುಕಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಕಲಾವಿದನಾಗೇ ಜೀವಿಸಬೇಕೆಂಬ ಅಚಲಭಾವ. ನನ್ನನ್ನು ಕಲಾವಿದನಾಗೇ ಬದುಕುತ್ತಿರುವಂತೆ ಮಾಡಿದೆ. ಯಾವುದೇ ಕ್ಷೇತ್ರವನ್ನಾಗಲಿ ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಕಷ್ಟಪಟ್ಟು ಅದಕ್ಕಿಂತ ಮಿಗಿಲಾಗಿ ಇಷ್ಟಪಟ್ಟು ತೊಡಗಿಸಿಕೊಂಡರೆ ಅಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದು ನನ್ನ ಬಲವಾದ ನಂಬಿಕೆ. ಇಂದಿನ ದಿನಗಳಲ್ಲಿ ನಮ್ಮಂತೆ ಯುವಕರು ಹೆಚ್ಚಾಗಿ ರಂಗಭೂಮಿಯ ಕಡೆ ಹೆಚ್ಚು ಆಕರ್ಷಿತರಾಗುತ್ತಾ, ಇಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿರುವುದನ್ನು ಕಾಣುತ್ತಿದ್ದೇವೆ. ರಂಗಭೂಮಿಯಲ್ಲಿ ಆರ್ಥಿಕ ಸಬಲತೆಯನ್ನು ದೊಡ್ಡ ಮಟ್ಟದಲ್ಲಿ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದು ತಿಳಿದಿದ್ದರೂ ಇಲ್ಲಿಗೆ ಧಾವಿಸಲು ಕಾರಣಗಳು ಸಾಕಷ್ಟಿರಬಹುದು. ನಟನೆ ಕಲಿಯಲು ಸುಲಭದ ದಾರಿ ಎಂದೋ, ಸಿನಿಮಾ ಕ್ಷೇತ್ರಕ್ಕೆ ಹೋಗಲು ಮೆಟ್ಟಿಲಂತೆಯೋ, ಇಲ್ಲಿ ಏನಿರಬಹುದೆಂಬ ಕುತೂಹಲದಿಂದಲೋ… ಇನ್ನೂ ಏನೇನೋ ಕಾರಣಗಳಿರಬಹುದು.

ಹೀಗೆ ರಂಗಭೂಮಿಗೆ ದೌಡಾಯಿಸುತ್ತಿರುವ ನನ್ನ ಮಿತ್ರರಿಗೊಂದು ಕಿವಿಮಾತು. (ಮನವಿ ಕೂಡ)
ನಮ್ಮಲ್ಲೊಂದು ಮಾತಿದೆ, ಕಲೆ ನಮ್ಮನ್ನು ಕೈಬೀಸಿ ಕರೆಯುತ್ತೆ, ಆದರೆ ಎಲ್ಲರನ್ನೂ ತನ್ನಲ್ಲಿ ಉಳಿಸಿಕೊಳ್ಳುವುದಿಲ್ಲ. ಈ ಮಾತು ಸತ್ಯ ಆದರೆ ಕಲಾವಿದನಾಗುತ್ತೇನೆಂದು ಬಯಸುವವ ತನ್ನನ್ನು ಆ ಕ್ಷೇತ್ರಕ್ಕೆ ಕೊಟ್ಟುಕೊಳ್ಳುತ್ತಾನೆ, ಎಷ್ಟರ ಮಟ್ಟಿಗೆ ಆಳಕ್ಕೆ ಸಾಗಲು ಪ್ರಯತ್ನಿಸುತ್ತಾನೆ, ಎಲ್ಲಯತನಕ ಕುತೂಹಲ, ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾನೆ, ಅಭ್ಯಾಸದಲ್ಲಿರುತ್ತಾನೆ ಅನ್ನುವುದರ ಮೇಲೆ ಎಲ್ಲವೂ ನಿರ್ಧರಿತವಾಗುತ್ತದೆ. ಕಲಿಕೆಯ ವಿಷಯದಲ್ಲಿ ತಾಳ್ಮೆ ಬಹಳ ಮುಖ್ಯ. ನಟನೆಯನ್ನು ಯಾರೂ ಹೀಗೆಯೇ, ಇಂತಿಷ್ಟೆ ಎಂದು ಕಲಿಸಲಾರರು. ನಟನೆ ಒಂದು ಅನುಭೂತಿ. ಮಾಗುತ್ತಾ ಸಾಗುವ ಪ್ರಕ್ರಿಯೆ. ಇಷ್ಟು ದಿನದಲ್ಲಿ ನಟನಾಗಿಬಿಡಬೇಕೆಂಬ ಚೌಕಟ್ಟು ನಟನಾಗಬಯಸುವವನಿಗೆ ಇರಬಾರದು. ಸತ್ವದ ನಟನೆಗೆ ಅನುಭವ ಅತ್ಯಗತ್ಯ.

ಕಲಾವಿದನಿಗೆ ಯಾವುದೇ ಮಿತಿಯಿಲ್ಲ. ಕಲೆಯ ಯಾವುದೇ ಪ್ರಕಾರದಲ್ಲಾದರೂ ತನ್ನನ್ನು ತಾನು ತೊಡಗಿಸಿಕೊಳ್ಳುವ ಹಕ್ಕು ಸ್ವಾತಂತ್ರ್ಯ ಕಲಾವಿದನಿಗೆ ಇರುತ್ತದೆ. ಬದುಕಿನ ಅನಿವಾರ್ಯತೆಗಳನ್ನು ಪರಿಗಣಿಸಿ ಆರ್ಥಿಕವಾಗಿ ಸಬಲರಾಗಲು, ರಂಗಭೂಮಿ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ದುಡಿಯುವುದರಲ್ಲಿ ತಪ್ಪಿಲ್ಲ. ನನಗಂತೂ ರಂಗಕಾಯಕದಲ್ಲಿ ಸಿಕ್ಕಷ್ಟು ಖುಷಿ ನೆಮ್ಮದಿ ಬೇರೆಲ್ಲೂ ಸಿಕ್ಕಿಲ್ಲ. ಅಹಂಕಾರ ತಲೆದೋರದ, ಮನುಷ್ಯನಾಗಿ ಉಳಿಯಬಹುದಾದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ರಂಗಭೂಮಿ ಮೊದಲಿನದು ಎಂಬುದೇ ನನ್ನ ನಂಬಿಕೆ.

ದುರಿತ ಕಾಲದಲ್ಲಿ ಬದುಕಿನ ಅನಿಶ್ಚಿತತೆಗಳನ್ನು ಅನುಭವಿಸುತ್ತಿರುವ ನಾವು ಕಲಾವಿದರಾಗಿ ಬದುಕುವುದು ಒಂದು ರೀತಿಯಲ್ಲಿ ಹೋರಾಟವೇ ಸರಿ. ಈ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ಕಲಿಯಲಿಚ್ಛಿಸುವ ನಾವು ಇಲ್ಲಿನ ವಿಶಾಲ ಪರಿಕಲ್ಪನೆಯನ್ನು ಅರಿಯುತ್ತಾ ಸಾಗೋಣ. ತನ್ನತನದ ಹುಡುಕಾಟಕ್ಕೆ ರಂಗಭೂಮಿಯೇ ಮದ್ದು.

Exit mobile version