Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮೈ ಲೈಫ್ ಮೈ ಪ್ರಾಬ್ಲಮ್

my life my problem kannada short story

:: ಸುಷ್ಮ ಸಿಂಧು

ನೀತಾ ನಿಸ್ತೇಜವಾಗಿ ಮಲಗಿದ್ದಳು. ಬಹಳವೇ ಕೃಶವಾಗಿ ಕಾಣುತ್ತಿದ್ದ ಮಗಳ ದೇಹದೊಳಗೆ ತೂರಿಬಿಟ್ಟಿದ್ದ ಐವಿ ಸೆಟ್ಟಿನ ಡ್ರಿಪ್ ಚೇಂಬರ್ನೊಳಗೆ ತೊಟತೊಟನೆ ಬೀಳುತ್ತಿದ್ದ ಹನಿಗಳನ್ನು ಹೇಮಂತ ನೋಡುತ್ತಾ ಕುಳಿತಿದ್ದ. ಕೈ ಮೇಲೆಲ್ಲಾ ಕೊಯ್ದುಕೊಂಡಂತೆ, ಅಷ್ಟು ಡೀಪ್ ಅಲ್ಲದ ಕಟ್ ಮಾರ್ಕ್ಸ್ ನ ಗೆರೆಗಳು, ಎಷ್ಟೋ ದಿನದಿಂದ ಹೊಟ್ಟೆಗೇನೂ ತಿಂದಿಲ್ಲದವರಂತೆ ಸೊರಗಿದ್ದ ದೇಹ. ಮಾತಿಗೆ ಮೊದಲೇ ರೇಗಾಡುತ್ತಾ ಕೋಪ ತಾಪಗಳನ್ನೇ ಅಸ್ತ್ರವಾಗಿಸಿಕೊಂಡಂತೆ ಜೀವಿಸುತ್ತಿದ್ದ ಮಗಳು ಪುಟ್ಟ ಗುಬ್ಬಿ ಮರಿಯಂತೆ ಮೌನವಾಗಿ ಮಲಗಿ ಬಿಟ್ಟಿದ್ದಳು.

“ಮೈ ಲೈಫ್ ಮೈ ಪ್ರಾಬ್ಲಮ್ ಪಪ್ಪಾ” ಎಂದು ಚೀರಿ ಫೋನ್ ಕಟ್ ಮಾಡಿದ್ದವಳನ್ನೊಮ್ಮೆ ಎಬ್ಬಿಸಿ ಕೇಳಬೇಕು ” ನಿನ್ನ ಲೈಫಿನ ನಿನ್ನ ಸಮಸ್ಯೆಗಳನ್ನು ನೀನು ಬಗೆ ಹರಿಸಿ ಕೊಳ್ಳುವ ರೀತಿ ಇದೇನಾ ಮಗಳೇ?”

ಮಾನಿಟರ್‌ನ ಬೀಪ್ ಬೀಪ್ ಶಬ್ದ ಮನಸ್ಸಿನಾಳದ ಯಾವುದೋ ವೇದನೆಯನ್ನು ಕಲಕಿದಂತಾಗಿ ಒಮ್ಮೆ ನೀತಾಳ ಮುಖವನ್ನೇ ನಿಟ್ಟಿಸುತ್ತಾ ತಲೆಯನ್ನೊಮ್ಮೆ ನೇವರಿಸಿದ.

ʼಒಬ್ಬ ತಂದೆಯಾಗಿ ನಾನು ಸೋತು ಹೋದೆನೇ? ಮಗಳ ವಿಚಾರದಲ್ಲಿ ನಾನು ಕಟುವಾಗಿ ನಡೆದುಕೊಂಡು ಬಿಟ್ಟೆನೇ?ʼ ಎದೆಯಲ್ಲೊಂದು ಕುಸಿತ.

ʼಏನೇ ಇರಲಿ. ನೀತೂಗೆ ಏನೂ ಆಗಬಾರದುʼ

ಎಳವೆಯಿಂದಲೂ ಸಿಟ್ಟು, ಸೆಡವು, ಹಠದಿಂದ ಬಹಳವೇ ಕಾಡುತ್ತಿದ್ದ ನೀತಾ ಹೈಸ್ಕೂಲು ದಿನಗಳಲ್ಲಂತೂ ಇನ್ನಷ್ಟು ಕಗ್ಗಂಟಾಗಿ ಬಿಟ್ಟಳು. ಒಂದಿಲ್ಲೊಂದು ದೂರುಗಳು. ತನಗಾಗದವರು, ತನ್ನದೇ ಸ್ನೇಹಿತರು, ಶಿಕ್ಷಕರು, ನೆರೆಯವರು, ಇನ್ನೊಬ್ಬರು, ಮತ್ತೊಬ್ಬರು ಎಲ್ಲರೊಡನೆಯೂ ಒಮ್ಮೆ ಅತ್ಯಂತ ನಾಜೂಕಿನಿಂದ ಮತ್ತೊಮ್ಮೆ ಅತೀ ಒರಟಾಗಿಯೂ ವರ್ತಿಸುತ್ತಾ “ಈ ಹುಡುಗಿಗೆ ತನ್ನವರು ಎನ್ನುವರೇ ಇಲ್ಲವೇ?” ಎಂಬ ಗೊಂದಲ ಮೂಡಿಸುತ್ತಿದ್ದಳು.

ಏನೇ ಬುದ್ಧಿವಾದ ಹೇಳಿದರೂ ವಿಧೇಯವಾಗಿ ಕೇಳುತ್ತಾ ಮರುಕ್ಷಣವೇ ಮನಬಂದಂತೆ ನಡೆದುಕೊಳ್ಳುತ್ತಾ “ಪಪ್ಪಾ ಯು ಹ್ಯಾವ್‌ ಟು ಟ್ರಸ್ಟ್‌ ಮಿ. ನೀನು ನನ್ನನ್ನು ನಂಬು” ಎನ್ನುತ್ತಲೇ ನಂಬಲಾಗದ ರೀತಿ ಅವರಿವರ ಬಳಿ ಮನಃಸ್ತಾಪ ಮಾಡಿಕೊಂಡು ಬರುವಳು. “ಪಪ್ಪಾ ಇಟ್ಸ್‌ ಮೈ ಲೈಫ್‌” ಎನ್ನುವುದನ್ನು ಆಗಾಗ್ಗೆ ಹೇಳುತ್ತಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗುವಳು. ಈ ಹುಡುಗಿಗೆ ನಿಜವಾದ ಸ್ವಾತಂತ್ರ್ಯದ ಅರ್ಥ ತಿಳಿದು ಹೇಳುತ್ತಿದ್ದಾಳೆಯೇ? ಎಂಬ ಅನುಮಾನ ಬರುವಂತೆ ಬದುಕುವಳು. ಮಗಳೆಂಬ ಮಮಕಾರ ಅವಳ ಅದೆಷ್ಟೋ ವಿಚಾರಗಳನ್ನು ನಿರ್ಲಕ್ಷ್ಯಿಸಿತ್ತಾದರೂ ದಿನಕಳೆದಂತೆ ನೀತಾ ವಿವೇಕದ ಲವಲೇಶವೂ ಇಲ್ಲದೇ ಬೆಳೆಯುತ್ತಿರುವ ಹುಡುಗಿ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮೊಬೈಲನ್ನು ಗಂಟೆ ಗಟ್ಟಲೆ ಸ್ವಿಚ್‌ ಆಫ್‌ ಮಾಡಿ ಎಲ್ಲೆಲ್ಲಿಯೋ ತಿರುಗುವುದು, ಹುಡುಗರ ಪರಿಚಯ, ಜೇವನವನ್ನು ಎಂಜಾಯ್‌ ಮಾಡಬೇಕು ಎಂಬ ವಿಚಿತ್ರ ಫಿಲಾಸಫಿಗಳ ವಾಲ್‌ ಪೇಪರ್‌ ಮೊಬೈಲು, ಲ್ಯಾಪ್ಟಾಪು, ರೂಮಿನ ತುಂಬೆಲ್ಲಾ… ತನ್ನ ಬೇಜವಾಬ್ದಾರಿ, ಸಲೀಸಾಗಿ ಬಾಯಿಂದಿಣುಕುವ ಸುಳ್ಳುಗಳಿಂದ ತನ್ನನ್ನು ಬೆಳೆಸುವುದು ಸುಲಭವಲ್ಲ ಎನ್ನುವುದನ್ನು ನೀತಾಳೇ ತೋರಿಸಿಕೊಟ್ಟು ಬಿಟ್ಟಳು.

“ಅಂಕಲ್ ಇಟ್ ಈಸ್ ಅರ್ಜೆಂಟ್. ಯು ಹ್ಯಾವ್ ಟು ಕಮ್. ನೀತಾ ಈಸ್ ಹಾಸ್ಪಿಟಲೈಸ್ಡ್.. ನೀತಾ ಹ್ಯಾಸ್ ಟ್ರೈಡ್ ಟು…” ಎಂದು ಒಂದೇ ಸಮನೆ ಅಳುತ್ತಿದ್ದ ಸೀಮಾಳ ಫೋನ್ ಬಂದ ಕ್ಷಣದಿಂದ ಕಳೆದ ಕೆಲವು ಘಂಟೆಗಳು ಬಹಳವೇ ಯಾತನಾಮಯವಾಗಿತ್ತು.

ಡಾಕ್ಟರ್ ನ ಮಾತು, ಓನರ್‌ ನ ಆರ್ಭಟ, ಒಡಲೊಳಗಿನ ಸಂಕಟ… ತಲೆ ಚಿಟ್ಟು ಹಿಡಿದಿತ್ತು. ಸವಿತಾಳಿಗೆ ಏನು ಹೇಳುವುದು?

ನುಡಿ-ಭಾವನೆಗಳ ನಡುವೆ ಗ್ಯಾಪ್ ತಂದುಕೊಂಡು ಒಳಗೆಲ್ಲಾ ದುಗುಡವೇ ಮಡುಗಟ್ಟಿದ್ದರೂ ತೋರ್ಪಡಿಸದಂತೆ ಮಾತುಗಳಲ್ಲಿ ಮರೆಮಾಚುವುದಾದರೂ ಹೇಗೆ? ಅಷ್ಟರಲ್ಲಿ ಮನಸ್ಸಿನ ಕರೆ ಅಲ್ಲಿಗೇ ಹೋಗಿ ಮುಟ್ಟಿದಂತೆ ಸವಿತಾಳ ಫೋನು.

“ಹೇಮು. ನನಗೆ ಗೊತ್ತು. ನೀವೇನೋ ಹೈಡ್ ಮಾಡುತ್ತಿದ್ದೀರ. ಏನಾಯ್ತು? ನೀತು ಮತ್ತೇನಾದರೂ? ಎಲ್ಲಿದ್ದೀರ?” ಸವಿತಾಳ ಆತಂಕವ ಹೃದಯವ ಕುಸಿಯಲು ಬಿಡದೇ ಹೇಮಂತನೆಂದ,

“ಸವಿತಾ. ಸಮಾಧಾನವಾಗಿ ಕೇಳು… ನೀತು ಈಸ್ ಅನ್‌ವೆಲ್. ಸುಸ್ತಾಗಿದ್ದಾಳೆ… ನಥಿಂಗ್ ಟು ವರಿ. ನೀನು ಬೆಳಿಗ್ಗೆಯೇ ಹೊರಟು ಬಾ”

“ಸುಸ್ತಾ? ಆಸ್ಪತ್ರೆಯಲ್ಲಿದ್ದಾಳ ಏನಾಯ್ತು?”

” ಏನಿಲ್ಲ… ಗೊತ್ತಿಲ್ಲ. ಆಹಾರದಲ್ಲೇನೋ ಹೆಚ್ಚು ಕಡಿಮೆ ಆಗಿರಬೇಕು.”

ನಂಬಲು ಅರ್ಹವಾದ ಸುಳ್ಳನ್ನು ತಾನು ಹೇಳಿಲ್ಲವೆಂದು ಅವನಿಗೇ ಗೊತ್ತಿದ್ದರಿಂದ ಸವಿತಾ ಮತ್ತೇನು ಕೇಳುವಳೋ ಎಂದು ತಲ್ಲಣವಾಯ್ತು. ಸುಳ್ಳು ಎಂದು ತಿಳಿದಿದ್ದೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಷ್ಟೇ ಸುಮ್ಮನಾದಂತೆ ಸವಿತಾ “ಹೇಮು ಲಿಸನ್. ನಾನೀಗಲೇ ಡ್ರೈವರ್ ಕರೆದುಕೊಂಡು ಬರ್ತೀನಿ. ಟೆನ್ಷನ್ ಆಗಬೇಡಿ.” ಎಂದು ಬಿಟ್ಟಳು.

ಮುಂದೇನೂ ಹೇಳಲು ಮಾತು ಹೊರಡಲಿಲ್ಲ. ಎಷ್ಟಾದರೂ ಅವಳು ತಾಯಿ. ಮಗಳ ವಿಷಯ ಗೊತ್ತಾಗಲೇ ಬೇಕು. ಬೇಗ ಬಂದರೇ ಒಳ್ಳೆಯದು. ತನಗಿಲ್ಲಿ ಎಲ್ಲವನ್ನೂ ಸಂಭಾಳಿಸುವ ತಾಕತ್ತಾದರೂ ಎಲ್ಲಿದೆ? ಎನಿಸಿಬಿಟ್ಟಿತು.
ಹೊರಗೆ lobbyಯಲ್ಲಿ ತೆರೆದ ದೊಡ್ಡ ಕಿಟಕಿಯ ಬಳಿ ಹೋಗಲು ಹೇಮಂತ ನಡೆದ.

ʼಇಬ್ಬರ ಕೆರಿಯರ್‌ ನಡುವೆ ನೀತಾಳಿಗೆ ಕೊಡಬೇಕಾದ ಗಮನ ಕೊಡಲಿಲ್ಲವೇ?ʼ ಎಲ್ಲರೂ ಮಾಡುವುದನ್ನೇ ನಾವೂ ಮಾಡಿದ್ದೆವು. ಮಕ್ಕಳಿಗಾಗಿ ದುಡಿಯುವುದು! ಮಕ್ಕಳು ಸುಖವಾಗಿರಬೇಕು, ತಮಗೆದುರಾದ ಕಷ್ಟ ಅವರಿಗೆ ತಾಕಬಾರದು. ಹಾಗೆ ನೋಡಿದರೆ ಮೊದಲ ಮಗಳು ಹಿತಾ ನಮ್ಮೊಡನಿದ್ದುಕೊಂಡು ಚೆನ್ನಾಗಿಯೇ ಬೆಳೆದಳು. ಸರಳ, ಸೌಮ್ಯ ಸ್ವಭಾವದ ಹುಡುಗಿಯಾಕೆ. ಆದರೆ ನೀತಾಳಿಗೇನು ಕೊರತೆಯಾಯ್ತು? ಒಂದೇ ಪರಿಸರದಲ್ಲೇ ಬೆಳೆದ ಮಕ್ಕಳು ಹೀಗ್ಯಾಕೆ?

ದೇವರೇ ನೀತಾಳಿಗೆ ಏನೂ ಅಪಾಯವಾಗದಿರಲಿ.

ಕಿಟಕಿಯಿಂದಾಚೆಗೆ ದೃಷ್ಟಿ ಹಾಯಿಸುತ್ತಾ ಏನನ್ನೂ ನೋಡದೇ ತನ್ನ ತಲೆಯೊಳಗೇ ತಲ್ಲೀನನಾಗಿದ್ದವನನ್ನು ಹಿಂದಿನಿಂದ ಟಪಟಪನೆ ಹೆಜ್ಜೆ ಹಾಕುತ್ತಾ ಧಾವಿಸಿದ “ಅಂಕಲ್” ಎಂಬ ಧ್ವನಿ ಎಚ್ಚರಿಸಿತು.

ಕಣ್ಣೀರೊರೆಸಿಕೊಂಡೇ “ಯಾಮ್ ಸೋ ಸಾರಿ ಅಂಕಲ್” ಎನ್ನುತ್ತಾ ಸೀಮಾ ಇತ್ತ ಬಂದಳು. ಗಂಟೆ ರಾತ್ರಿಯ ಎಂಟು ತಾಕುತ್ತಿತ್ತು. ಅವಳ ಭುಜವನ್ನೊಮ್ಮೆ ತಟ್ಟಿ,

“ಹೊರಡು ಸೀಮಾ. ತಡವಾಯ್ತು. ” ಹೇಮಂತನೆಂದ.

“ನಾನು ನಿಮ್ಮೊಡನೆ ಮಾತಾಡಬೇಕು” ಸೀಮಾ ತಡವರಿಸಿದಳು.

ನಾಳೆ ಮಾತಾಡೋಣ, ಈಗ ಹೊರಡು. ಎನ್ನಬೇಕೆಂದುಕೊಂಡಿದ್ದು ನಾಲಿಗೆಯ ತುದಿಯವರೆಗಷ್ಟೇ ಬಂದು ಮರೆಯಾಗಿ ಹೋಯ್ತು. ಅಲ್ಲಿಯೇ ಇದ್ದ ಚೇರುಗಳನ್ನೆಳೆದುಕೊಂಡು ಇಬ್ಬರೂ ಕುಳಿತರು. ತನಗೆ ಗೊತ್ತಿಲ್ಲದ ತನ್ನದೇ ಮಗಳ ಬಗ್ಗೆ ತಿಳಿಯಲು ಸಿದ್ಧನಾಗಿರುವಂತೆ ಹೇಮಂತ ಕುಳಿತ. ನೀತಾಳ ವಿಷಯದಲ್ಲಿ ಸೀಮಾಳಿಗಿದ್ದ ಗಿಲ್ಟ್ ಹಾಗೂ ಅವಳಿಗೇನಾದರೂ ಆಗಿಬಿಟ್ಟರೆ ಎಂಬ ಭಯ ಸೀಮಾಳ ಕಣ್ಣುಗಳಲ್ಲಿದ್ದವು. ಒಂತರಹ ತಪ್ಪೊಪ್ಪಿಗೆಗೆ ಬಂದಂತೆ ಸೀಮಾ ಹೇಳಲು ತೊಡಗಿದಳು.

“ಅಂಕಲ್. ಡೋಂಟ್ ನೋ ಇಫ್ ಯು ನೋ ದಿಸ್. ನಾನು, ನೀತು ಈಗ ಪಿ.ಜಿಯಲ್ಲಿಲ್ಲ. ಬೇರೆ ಮನೆ ಮಾಡಿದ್ದೇವೆ…. ನಮ್ಮ ಮನೆಗಳಲ್ಲಿ ನಾವು ಹೇಳಿಕೊಂಡಿರಲಿಲ್ಲ.’

“… ನನಗೆ ಗೊತ್ತಿರಲಿಲ್ಲ”

“ಅದು… ಪಿ.ಜಿ ಯಲ್ಲಿ ತುಂಬಾ ರಿಸ್ಟ್ರಿಕ್ಷನ್ ಇತ್ತು. 8 ಗಂಟೆಯ ಮೇಲೆ ಹೊರಗೆ ಬಿಡುತ್ತಿರಲಿಲ್ಲ. ನಮಗೆ ಫ್ರೀಡಂ ಬೇಕಿತ್ತು.”

“ಎಷ್ಟು ದಿನಗಳಾಯ್ತು ?”

“ಲಾಸ್ಟ್ ಮೇ.. 5-6 ತಿಂಗಳು… “

“ಹ್ಮ್… “

ಒಳಗೆದ್ದ ಭಾವವೇಶಗಳನ್ನು ಈ ಹುಡುಗಿಯ ಮುಂದೆ ತೋರಿಸಬೇಕೆನಿಸಲಿಲ್ಲ. ಅವನ ತಣ್ಣನೆಯ ಮುಖಭಾವವ ಕಣ್ಣಿನ ಆತಂಕದಲ್ಲೇ ಅಂದಾಜಿಸುತ್ತಿದ್ದ ಸೀಮಾ ಮುಂದುವರೆದಳು…

“ಅಂಕಲ್ ಸೋ ಸಾರಿ. ನಾನಿದನ್ನು ನಿಮಗೆ ಮುಂಚೆಯೇ ಹೇಳಬೇಕಿತ್ತು. ಅವಳು ಹಿಂದೆಯೇ ಬಹಳಷ್ಟು ಬಾರಿ ಕೈ ಕುಯ್ದುಕೊಳ್ಳೋದು, ಊಟ ಬಿಡುವುದು ಮಾಡುತ್ತಿದ್ದಳು. ನಾನು ಪೇರೆಂಟ್ಸ್‌ಗೆ ಹೇಳ್ತೀನಿ ಅಂತ ಹೆದರಿಸಿದೆ. ಆದರೆ ಅವಳು ಬೆಗ್ ಮಾಡಿದ್ದಳು. ಹಾಗೆ ಮಾಡಲ್ಲ ಅಂತ. ಜೊತೆಗೇ ಹೇಳಬಾರದು ಎಂದು ಪ್ರಾಮಿಸ್ ಮಾಡಿಸಿಕೊಂಡಳು. ಅಲ್ಸೋ ಇಟ್ ವಾಸ್ ನಥಿಂಗ್ ಸೀರಿಯಸ್. ಅದು ಹೀಗಾಗತ್ತೆ ಅಂತ..” ತುಂಡುತುಂಡಾಗಿ ನೀತುವೆಂಬ ಮಗಳ ಬಗ್ಗೆ ಗಾಬರಿ ಎನಿಸುವಂತೆ ಹೇಳುತ್ತಿದ್ದ ಸೀಮಾಳ ಮಾತುಗಳಿಗೆ ಹೌಹಾರುವುದನ್ನು ಹೇಮಂತನಿಗೆ ತಪ್ಪಿಸಿಕೊಳ್ಳಲಾಗಲಿಲ್ಲ.

“ನಥಿಂಗ್ ಸೀರಿಯಸ್? ಹೀಗಾಗುತ್ತೆ ಎಂದರೇನು?”

ಹೆದರಿ ಮೆಲು ದನಿಯಲ್ಲಿ ಸೀಮಾ ಎಂದಳು “ಅಂದರೆ… ಶಿ ಹ್ಯಾಡ್‌ ಕ್ರಷ್.. ಐ ಮೀನ್‌ ಲವ್. ಬಟ್‌ ಹಿ ವಾಸ್‌ ನಾಟ್‌ ಇನ್‌ ಟು ಹರ್‌ ಅಂತೆ. ಅವನು ರಿಜೆಕ್ಟ್‌ ಮಾಡಿದ. 4 ತಿಂಗಳು ಅಯ್ತು. ಅದು ಗೊತ್ತಾದಾಗಿನಿಂದ ಅವಳು ಡಿಪ್ರೆಸ್‌ ಆಗಿದ್ಲು. ಈ ಸಲ ಮಾರ್ಕ್ಸ್‌ ಬೇರೆ ತುಂಬಾ ಕಡಿಮೆ ಆಯ್ತು. ಸೋ ಆಗ ಹೀಗೆಲ್ಲ ಮಾಡಿಕೊಳ್ಳೋದು ಮಾಮುಲು. ನನ್ನ ಫ್ರೆಂಡ್ಸ್ ಕೆಲವರು ಸ್ವಲ್ಪ ದಿನ ಡಿಪ್ರೆಸ್ ಆಗಿ ಆಮೇಲೆ ಮೂವ್ ಆನ್ ಆದ್ರು. ನೀತು ಹಾಗೆ ಆಗ್ತಾಳೆ ಅಂದುಕೊಂಡೆ…ಅವ್ಳು ಮೊದಲೇ ತುಂಬಾ ಮೂಡಿ.. ಯಾಮ್ ಸೋ ಸಾರಿ…” ಸೀಮಾಳ ಅಳು ಜೋರಾಯಿತು. ತನ್ನನ್ನು ಸಮಾಧಾನ ಪಡಿಸಿಕೊಳ್ಳಬೇಕೆ ಅವಳನ್ನು ಸಮಾಧಾನ ಪಡಿಸಬೇಕೆ ಹೇಮಂತ ತಿಳಿಯದಾದ.

ಜೀವನದ ಬಗ್ಗೆ ಸ್ವಲ್ಪವೂ ಗಂಭೀರತೆ ಇಲ್ಲದೇ ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವ ಸಂಬಂಧಗಳು, ಬ್ರೇಕ್ಅಪ್‌ಗಳು, ಡಿಪ್ರೆಶನ್, ಕಡೆಗೆ ಆತ್ಮಹತ್ಯೆಯ ಯೋಚನೆ, ಯತ್ನಗಳನ್ನೂ ಮಾಮೂಲೆಂದು ಪರಿಗಣಿಸುವ ಈ ಮಕ್ಕಳಿಗೆ ಏನನ್ನುವುದು ತಿಳಿಯದಾದ.

ಸೀಮಾ ಬಿಕ್ಕಳಿಕೆಯ ನಡುವೆಯೇ ನುಡಿದಳು, “ಅವಳು ರೂಮಿನ ಬಾಗಿಲು ಎಷ್ಟು ಬಡಿದರೂ ತೆರೆಯಲಿಲ್ಲ. ಒಳಗಿನಿಂದ ಚೀರುತ್ತಿದ್ದಳು. ಫೋನಿನಲ್ಲಿದ್ದ ಹಾಗಿತ್ತು. ನಂತರ ಕೂಗಾಡುವುದನ್ನು ನಿಲ್ಲಿಸಿದಳು. ಹಾಳೆಯನ್ನು ಬಾಗಿಲಡಿ ಆಚೆ ತೂರಿಸಿದಾಗ ನಾನು ನೋಡಿ ಗಾಬರಿಯಾಗಿ owner ಕರೆದುಕೊಂಡು ಬಂದೆ. ಅಷ್ಟರಲ್ಲೇ… ಬಾಗಿಲು ತೆರೆಯುವಷ್ಟರಲ್ಲಿ ಅವಳು ಒದ್ದಾಡುತ್ತಿದ್ದಳು. ಟ್ಯಾಬ್ಲೆಟ್ ಎಲ್ಲಿಂದ ತಂದಳೋ ಗೊತ್ತಿಲ್ಲ.”

ಯಾವುದೋ ಸಿನಿಮಾದ ದೃಶ್ಯವೊಂದು ಕಣ್ಮುಂದೆ ಬಂದಂತೆ. ಬದುಕೆಂದರೆ ಎಷ್ಟು ಸಲೀಸು ಇವರಿಗೆಲ್ಲಾ? ನೀತಾಳ ತಲೆಯಲ್ಲೇನು ಓಡುತ್ತಿರಬಹುದು? ಅವಳು ತನ್ನ ಜೀವನವನ್ನು ತೆಗೆದುಕೊಂಡು ಹೋಗುತ್ತಿದ್ದ ದಿಕ್ಕೇ ಬೇರೆ. ನಾವು ಪೋಷಕರಾಗಿ ಅವಳಿಂದ ನಿರೀಕ್ಷಿಸಿದ್ದೇ ಬೇರೆ! ನಾವು ಮಗಳ ವಿಚಿತ್ರ ವರ್ತನೆಗಳ ನಡುವೆಯೂ ಆರಮವಾಗುತ್ತಾಳೆ, ಎಲ್ಲವೂ ಸರಿ ಹೋಗುತ್ತದೆ ಎಂದೆಣಿಸಿದ್ದು ಆಧಾರರಹಿತವಷ್ಟೇ.

ಬ್ಯಾಗಿನಿಂದ ತೆಗೆದ ಹಾಳೆಯೊಂದನ್ನು ಹೇಮಂತನ ಕೈಗೆ ತುರುಕಿ ಸೀಮಾ ಎದ್ದು ನಿಂತು, “ಅಂಕಲ್ ನಾನು ಹೊರಡಬೇಕು. ಪ್ಲೀಸ್ ಐ ಯಾಮ್ ಸಾರಿ.” ಎಂದವಳೇ ಹೊರಡಲನುವಾದಳು.

ಹೇಮಂತ ಅವಳ ಭುಜವನ್ನೊಮ್ಮೆ ದಡವಿ “ಜೋಪಾನ” ಎಂದ.

ಅವನಿಗೆ ನೀತಾ ಎಂಬ ಹುಡುಗಿ ಒಂದು ಕ್ಷಣ ತನ್ನ ಮಗಳು ಎಂದು ನೋಡದಷ್ಟು ದೂರ ಎನಿಸಿಬಿಟ್ಟಳು.

ತನ್ನ ಕೈಲಿದ್ದ ಹಾಳೆಯನ್ನು ತೆರೆದು ನೋಡಬೇಕು ಎಂದುಕೊಂಡಷ್ಟೂ ಅದಕ್ಕಸ್ಪದ ಕೊಡದೇ ಇನ್ನಷ್ಟು ಮತ್ತಷ್ಟು ಹೊಸಕಿ ಉಂಡೆ ಮಾಡುತ್ತಾ ಅವನ ಮನಸ್ಸು ಪ್ರತೀಕಾರ ತೀರಿಸಿ ಕೊಳ್ಳುತ್ತಿತ್ತು. ಯಾರ ಮೇಲಿನ ಪ್ರತೀಕಾರ? ಮಗಳನ್ನರಿಯಲಾಗದ ತನ್ನ ಮೇಲೋ? ತನ್ನನ್ನರಿಯಲಾಗದ ಮಗಳ ಮೇಲೋ?

ಎಳವೆಯಿಂದಲೂ ಕೋಪ, ಹಠಗಳನ್ನು ಹೆಚ್ಚಾಗೇ ಹೊತ್ತು ತಿರುಗಿದ ನೀತಾಳನ್ನು ಸಂಭಾಳಿಸುವುದು ಬಹಳವೇ ತ್ರಾಸು ಎನಿಸಿದ್ದರೂ ಅದೇ ಹಠವ ತೊಟ್ಟು ಓದುವುದರಲ್ಲೋ, ಸ್ಪರ್ಧೆಯಲ್ಲೋ ಗೆದ್ದು ಬಂದಾಗ ಇವಳು ನನ್ನಂತೆಯೇ ಎನಿಸದಿರುತ್ತಿರಲಿಲ್ಲ. ಅಮ್ಮನಿಗಿಂತ ತನಗೇ ಹೆಚ್ಚಾಗಿ ಅಂಟಿಕೊಂಡು ʼಪಪ್ಪಾ ಪಪ್ಪಾʼ ಎನ್ನುತ್ತಲೇ ಬೆಳೆದ ಮಗಳು ಯಾವ ಹಂತದಲ್ಲಿ ತನ್ನಿಂದ ದೂರಾದಳು?

ʼಹೆಚ್ಚು ಮುದ್ದು ಮಾಡಿದಷ್ಟೂ ಮಕ್ಕಳು ಹಾಳಾಗುತ್ತಾರೆʼ ಎಂದುಕೊಳ್ಳುತ್ತಾ ತಾನು ಮಾಡಿದ್ದ ಕಟ್ಟುನಿಟ್ಟು ಅವಳನ್ನು ತನ್ನಿಂದ ದೂರಾಗಿಸಿತೇ? ಎಷ್ಟು ಪ್ರಮಾಣದ ಶಿಸ್ತನ್ನು ಸಲಿಗೆಯೊಂದಿಗೆ ಬೆರೆಸಿದರೆ ಈ ಕಾಲದ ಮಕ್ಕಳಿಗೆ ಹಿತವೆನಿಸೀತು ಹೇಳುವರ್ಯಾರು? ಅವಳೇಕೆ ವಿಚಲಿತಳಾದಳು? ಕ್ರಷ್‌, ಲವ್? ‌19ರ ಹುಡುಗಿಯ ಬದುಕೇ ಇದು? ಪರೀಕ್ಷೆಯಲ್ಲಷ್ಟೇ ಅಲ್ಲ, ಬದುಕಿನಲ್ಲೂ ನೀತು ಮಾರ್ಕ್ಸು ತೆಗೆದುಕೊಳ್ಳುವುದರಲ್ಲಿ ಹಿಂದೆ ಬಿದ್ದು ಬಿಟ್ಟಳೆ?

ಯಾರ ಮಾತೂ ಕೇಳದೆ ಸಿಟ್ಟು ಸೆಡವು ತೋರುವ ನೀತೂವನ್ನು ಹಾಸ್ಟೆಲ್ ಸೇರಿಸಿದರಷ್ಟೇ ಸರಿ ಹೋಗುವುದು ಎನಿಸುವ ಅನಿವಾರ್ಯ ನಿರ್ಮಾಣವಾಗಿ ಹೋಗಿತ್ತು. ಹೈಸ್ಕೂಲು ಮುಗಿಸಿದರೂ ಸ್ಥಿಮಿತವಿಲ್ಲದಂತೆ ಅರಚಾಡುವ, ಅನುದಿನವೂ ಕಿರಿಕಿರಿ ಮಾಡುತ್ತಾ ಮನೆಯವರನ್ನು ಕಾಡಿ ಹೈರಾಣು ಮಾಡುವ ನೀತು ಸಹಿಸಲಸಾಧ್ಯವಾದಳು. ಅಕ್ಕ ಹಿತಾಳೊಡನೆ ಪೈಪೋಟಿಗೆ ಬೀಳುತ್ತಾ ಹಗೆ ಸಾಧಿಸುವಾಗ ಹಾಸ್ಟೆಲ್‌ಗೆ ಕಳಿಸುವುದೇ ಸೂಕ್ತ ಎನಿಸಿತ್ತು.

ಇಬ್ಬರೂ ದೂರವಿದ್ದರೆ ಸರಿ ಹೋಗ್ತಾರೆ. ನೀತೂವಿಗೆ ಶಿಸ್ತಿಲ್ಲ. ಇಲ್ಲಿ ಅವರಿವರ ಸಹವಾಸ ಮಾಡಿ ತಿರುಗುತ್ತಿದ್ದಾಳೆ. ಹೀಗೇ ಆದರೆ ಓದಿನ ಗತಿ ಏನು? ಎಂಬೆಲ್ಲಾ ಸಮಜಾಯಿಷಿ ನೀಡಿಕೊಂಡಿದ್ದಾಯ್ತು. ನೀತಾಳನ್ನು ಇಲ್ಲೇ ಇರಿಸಿಕೊಳ್ಳುವುದೇ ಹಾಸ್ಟೆಲ್ ಸೇರಿಸುವುದೇ ಎಂಬ ದ್ವಂದ್ವವೇ ದಿನನಿತ್ಯದ ಚರ್ಚೆಯಾಗಿದ್ದಾಗ ʼನೀತು ನೀಡ್ಸ್ ಹೆಲ್ಪ್ʼ ಎನ್ನುತ್ತಾ ʼಕೌನ್ಸಿಲಿಂಗ್‌ಗೆ ಕರೆದೊಯ್ಯೋಣ. ನಂತರ ನಿರ್ಧರಿಸೋಣʼವೆಂದು ಸವಿತಾ ಅವಳ ಮನವೊಲಿಸುವ ಯತ್ನಕ್ಕೆ ಮುಂದಾಗುವ ಸಮಯದಲ್ಲೇ ನೀತಾ, “ನಾನು ಹಾಸ್ಟೆಲ್ ಗೆ ಹೋಗ್ತೀನಿ” ಎಂದು ಘೋಷಿಸಿ ಬಿಟ್ಟಳು. ಅವಳು ತನ್ನ ನಿರ್ಣಯದಿಂದ ಅಷ್ಟೇನು ಸಮಾಧಾನವಾಗಿಲ್ಲವೆಂದು ಕಂಡರೂ ʼನಿಧಾನವಾಗಿ ಹೊಂದಿಕೊಳ್ತಾಳೆ, ಹಾಸ್ಟೆಲಿನಲ್ಲಿ ಶಿಸ್ತು ಕಲಿತಷ್ಟೂ ಅವಳ ಬದುಕಿಗೇ ಒಳ್ಳೆಯದು, ಎಜ್ಯುಕೇಶನ್‌ ಚೆನ್ನಾಗಿ ಆಗತ್ತೆʼ ಎಂತಂದುಕೊಂಡು ಸುಮ್ಮನಿದ್ದಿದ್ದಾಯ್ತು.

ಆದರೆ ಹೊರಟಾಗ ದಾರಿಯಲ್ಲಿ ಮಾತ್ರ, “ಪಪ್ಪಾ ನಾನು ಹೋಗೋದಿಲ್ಲ. ಐ ಹೇಟ್ ಟು ಗೋ ದೇರ್” ಎಂದು ಅತ್ತು ಬಿಟ್ಟಳು ನೀತಾ. ಮನೆಗೆ ಕರೆದುಕೊಂಡು ಹೋಗಿಬಿಡಲೇ? ಇದೆಲ್ಲಾ ಬೇಡ ನಡೀ ಹೋಗೋಣ ಎನ್ನಲೇ? ಎಂದೆಲ್ಲಾ ನೂರೆಂಟು ಬಾರಿ ಎನಿಸಿದರೂ ಸಂಯಮ ಕಳೆದುಕೊಳ್ಳದೇ “ನೀತಾ ಇದು ನಿನ್ನ ಒಳ್ಳೆಯದಕ್ಕೇ. ಜೊತೆಗೆ ನೀನೇ ಆಯ್ಕೆ ಮಾಡಿಕೊಂಡಿರುವುದು. ನಿನಗೆ ಅಡ್ಜಸ್ಟ್‌ ಆಗದಿದ್ದರೆ ನೋಡೋಣವಂತೆ.” ಅಂದುಬಿಟ್ಟ ಹೇಮಂತ.

ತಬ್ಬಿ ಹಿಡಿದು ಶರ್ಟು ತೋಯಿಸಿ ಅತ್ತ ನೀತಾಳಿಗೂ ಇಂದು ಇಲ್ಲಿ ಹೀಗೆ ಮಲಗಿರುವ ನೀತಾಳಿಗೂ ಸಂಬಂಧವೇ ಇಲ್ಲವೇನೋ ಎನಿಸಿತು ಹೇಮಂತನಿಗೆ.

ಪಪ್ಪಾ ಎಂಬ ಪದದ ಹಿಂದಿನ ಅಪ್ಯಾಯಮಾನತೆ ಎಂದಿಗೋ ಕಳೆದು ಹೋದಂತೆ.

ಆಶ್ಚರ್ಯಕರವಾಗಿ ನೀತಾ ಹೇಗೋ ಕಾಲೇಜಿಗೇ ಹೊಂದಿಕೊಂಡಳು. ೩ ವರುಷಗಳ ಕಾಲೇಜು ಜೀವನದಲ್ಲಿ ಅಷ್ಟಿಷ್ಟು ಆರೋಗ್ಯ ಸಮಸ್ಯೆ, ಒಮ್ಮೊಮ್ಮೆ ಕಡಿಮೆ ಅಂಕಗಳು ಇತ್ಯಾದಿ ಬಿಟ್ಟರೆ ಮತ್ಯಾವ ದೊಡ್ಡ ದೂರೂ ಬರದಿದ್ದರೂ ಕಾರಣವೇ ಇಲ್ಲದೇ “ಪಪ್ಪಾ” ಎಂದು ಎಲ್ಲೇ ಹೋದರೂ ಹರಟಲು ಮಾಡುತ್ತಿದ್ದ ಫೋನ್‌ ಕರೆಗಳೂ ಕಡಿಮೆಯಾಗುತ್ತಾ ಬಂದವು. ಅದೇಕೋ ನೀತಾ ಮನೆಯವರೊಂದಿಗಿನ ಬಂಧ ಇಂಚಿಂಚೇ ಕಡೆಗಣಿಸಿ ಬಿಟ್ಟಳು. ಸವಿತಾ ಒಮ್ಮೊಮ್ಮೆ ಹೇಳುವಳು, “ಈಸ್‌ ಎವೆರಿಥಿಂಗ್‌ ಆಲ್ರೈಟ್‌ ವಿತ್‌ ನೀತೂ? ನನ್ನೊಡನೆ ಅವಳು ಮಾತಾಡುವುದು ಕಡಿಮೆಯೇ. ಆದರೆ ಹೇಮು ನಿಮಗ್ಯಾಕೆ ಅವಳು ಸರಿಯಾಗಿ ಕಾಲ್‌ ಮಾಡುತ್ತಿಲ್ಲ?”

ಹದಿಹರೆಯದ ಮಗಳು ದಾರಿ ತಪ್ಪುತ್ತಿದ್ದಾಳೇನೋ ಎನ್ನುತ್ತಾ ಹತ್ತಿರದಲ್ಲಿದ್ದಾಗ ಆತಂಕಿಸುವುದು ಒಂತರಹವಾದರೆ ದೂರದಲ್ಲಿರುವ ಮಗಳು ತನ್ನ ಬದುಕನ್ನು ಏನು ಮಾಡಿಕೊಳ್ಳುತ್ತಿರಬಹುದು ಎನ್ನುವುದು ಇನ್ನೊಂದು ರೀತಿಯ ಚಿಂತೆ. ಅವಳು ತರುವ ಅಂಕ, ಶಾಲೆಯಲ್ಲಿ ಗೆದ್ದ ಪದಕಗಳಿಂದಾಚೆಗೆ ಅವಳ ಸೌಖ್ಯವಾಗಿದ್ದಾಳೆಯೇ ಎಂಬ ಪ್ರಶ್ನೆ ಮೂಡಿದಾಗ ಉತ್ತರ ಹುಡುಕುವುದು ಕಷ್ಟದ್ದು. ಮ್ಯಾನೇಜ್ಮೆಂಟು, ಪರಿಚಯದ ಮೇಷ್ಟ್ರು ಎಲ್ಲರ ಕಣ್‌ ದೃಷ್ಟಿಯನ್ನೂ ಮೀರಿಯೂ ಮಕ್ಕಳು ಬದುಕಬಲ್ಲರು ಎಂಬ ಯೋಚನೆಯೂ ಪೋಷಕರಿಗೆ ಬಾರದು. ನೀತೂ ಅಲ್ಲಿಯ ಜೀವನಕ್ಕೆ ಹೊಂದಿಕೊಂಡಿದ್ದಾಳೆ ಎಂದಾಗ ಒಮ್ಮೆಯೂ ಅನುಮಾನ ಮೂಡಲಿಲ್ಲ. ಎಲ್ಲರ ಬಳಿ ಒಂದಲ್ಲೊಂದು ಸಮಸ್ಯೆ ಮಾಡಿಕೊಂಡು ಬರುತ್ತಿದ್ದ ಹುಡುಗಿ ತನಗಿಷ್ಟ ಬಂದಂತೆ ಬದುಕುವುದನ್ನು, ಯಾರಿಗೂ ತಿಳಿಯ ಪಡಿಸದೇ, ಕಾಣುವಂತೆ ಸಮಸ್ಯೆ ತಂದುಕೊಳ್ಳದೇ ಜೀವನವನ್ನೇ ಸಮಸ್ಯೆಯನ್ನಾಗಿ ಮಾಡಿಕೊಳ್ಳುತ್ತಿರಬಹುದೆಂಬ ಸೂಚನೆಯೂ ದೊರೆಯಲಿಲ್ಲ.

ಹಾಸ್ಟೆಲ್‌ನಲ್ಲಿ ಫುಡ್‌ ಚೆನ್ನಾಗಿಲ್ಲವೆಂದು ಪಿಜಿಗೆ ಶಿಫ್ಟ್ ಆಗಿದ್ದಷ್ಟೇ ಗೊತ್ತು. ಆದರೆ ಎಲ್ಲೋ ತಿಳಿಯದ ಜಾಗದಲ್ಲಿ ಮನೆ ಮಾಡಿಕೊಂಡು ಯಾವುದೋ ಸಮಯದಲ್ಲಿ ತನಗೆ ಬೇಕಾದವರೊಡನೆ ತಿರುಗಿಕೊಂಡಿರುವ ನೀತೂವಿನ ಬದುಕಿನಲ್ಲಿ ತನಗೆ ತಿಳಿಯದ ಗೌಪ್ಯ ಸತ್ಯಗಳೆಷ್ಟಿವೆಯೋ? ಯೋಚಿಸಿದಷ್ಟೂ ಹೇಮಂತ ಮತ್ತಷ್ಟು ಹೈರಾಣಾದ.

ತಾನು ಯಾವತ್ತೂ ದುಡ್ಡಿಗೆ ಲೆಕ್ಕ ಕೇಳಬಾರದು. ಎಷ್ಟೆಂದರೂ ನನ್ನ ಮಗಳು. ದೂರದಲ್ಲಿ ಅವಳ ಅವಶ್ಯಕತೆಗಳು ಹೆಚ್ಚೇ ಇರುತ್ತವೆ. ಆದರೆ ಇತ್ತೀಚೆಗೆ ನೀತೂ ತನ್ನ ಅವಶ್ಯಕತೆಗಳಿಗೆ ಮಾತ್ರವೇ ನಮ್ಮನ್ನು ಸಂಪರ್ಕಿಸುತ್ತಿದ್ದಾಳೆ ಎನಿಸಿದಾಗ ಎಲ್ಲೋ ಒಂದು ಕಡೆ ತಪ್ಪಾಗಿದೆ ಎನಿಸಲಾರಂಭಿಸಿತ್ತು.

ಹೇಮಂತ ಸುಕ್ಕುಸುಕ್ಕಾಗಿದ್ದ ಕಾಗದಗಳ ಹಾಳೆಯನ್ನು ತೆರೆಯಲಾರಂಭಿಸಿದ.

ದಪ್ಪ ದಪ್ಪ ಅಕ್ಷರಗಳು:

ದೂರದಲ್ಲಿದ್ದೂ ಪ್ರೀತಿಸಬಹುದು. ಆದರೆ ದೂರದಲ್ಲಿಟ್ಟು ಪ್ರೀತಿಸುತ್ತೇವೆಂದು ನಿರ್ಧರಿಸಬಾರದು. Everyone pushed me away.

ಒಂದು ಕ್ಷಣ ಹೇಮಂತ ಏನೂ ತೋಚದೇ ಅತ್ತುಬಿಟ್ಟ.

ಮತ್ತೆಮತ್ತೆ ಓದಿದರೆ ಮನಸ್ಸಿನಲ್ಲಿ ಪ್ರಶ್ನೆಗಳ ಸರಮಾಲೆ. ಇದು ಯಾರ ಬಗ್ಗೆ ಬರೆದಿರುವುದು? ದೂರವಿಟ್ಟ ತನ್ನ ಪೋಷಕರ ಬಗ್ಗೆಯೋ? ಇಲ್ಲವೇ ತಾನು ಮುರಿದುಕೊಂಡ ಸಂಬಂಧದ ಬಗ್ಗೆಯೋ?

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಪ್ರೀತಿ ಇಲ್ಲದ ಮೇಲೆ…

ನೀತಾಗೆ ಅಗತ್ಯವನ್ನೆಲ್ಲಾ ಪೂರೈಸಲು ದುಡಿದ ನಾವು ಅವಳ ಮಾನಸಿಕ ಅಗತ್ಯವನ್ನು ಕಡೆಗಣಿಸಿದೆವೇ? ಮನದ ಮೂಲೆಯಲ್ಲೆಲ್ಲೋ ಕಾಡುವ ಗಿಲ್ಟು. ಪ್ರತಿ ಕ್ಷಣವೂ ಬದಲಾಗುವ ಅವಳ ಚಿತ್ತವ ಅರಿಯಲು ಸಾಧ್ಯವೇ ಆಗಲಿಲ್ಲ ಎಂಬ ನೋವು. ನಮ್ಮ ಕಷ್ಟವನ್ನು ಮಗಳೆಂದೂ ಅರಿಯಲೇ ಇಲ್ಲವಲ್ಲ ಎನ್ನುವ ಸಂಕಟ. ನಮ್ಮಲ್ಲಿ ಒಂದು ಬಾಂಧವ್ಯ ಇದ್ದಿದ್ದರೆ? ಅವಳು ನಮ್ಮಿಬ್ಬರೊಡನೆ ಇಲ್ಲವೇ ಹಿತಾಳೊಡನೆಯಾದರೂ ಚೆನ್ನಾಗಿದ್ದಿದ್ದರೆ ಹೀಗೆ ಮಾಡಿಕೊಳ್ಳುತ್ತಿರಲಿಲ್ಲವೇ? ಸವಿತಾ ಯೋಚಿಸಿದಂತೆ ಆಗಲೇ ಕೌನ್ಸಿಲಿಂಗ್‌ ಕೊಡಿಸಿದಿದ್ದರೆ ನೀತಾ ಚೆನ್ನಾಗಿರುತ್ತಿದ್ದಳೇ? ಮನೆಯವರೊಡನೆ ಇದ್ದ ಡಿಸ್ಟೆನ್ಸ್‌ ನಿಂದಲೇ ಹೊರಗಿನ ಸಂಬಂಧಗಳ ಬಗ್ಗೆ ನೀತಾ ಬಹಳ ಬೇಗ ಆಸಕ್ತಳಾದಳೆ? ಉತ್ತರ ಸಿಗದೇ ಇದ್ದರೂ ಪ್ರಶ್ನೆಗಳಂತೂ ಸೋಲವು. ಯಾವತ್ತಿಗೂ ಇದೆಲ್ಲಾ ಮಕ್ಕಳಲ್ಲಿ ಸಹಜವೇ. ಇವತ್ತಲ್ಲಾ ನಾಳೆ ಸರಿಯಾಗುತ್ತಾರೆ ಎನಿಸುವುದೇ ಹೊರತು ನಮ್ಮ ಮಕ್ಕಳು ಮಾನಸಿಕವಾಗಿ ದುರ್ಬಲರು, ಅವರಿಗೆ ನೆರವಿನ ಅವಶ್ಯಕತೆಯಿದೆ ಎಂದು ಯಾವ ಹಂತದಲ್ಲಿ ಪೋಷಕರಿಗೆ ಅನಿಸುವುದು?

ಹೇಮಂತ ಹಾಳೆಯನ್ನು ಪಕ್ಕಕ್ಕಿಟ್ಟು ಒಮ್ಮೆ ನಿಡುಸುಯ್ದು ಕಣ್ಮುಚ್ಚಿದ. ನೀತಾಳ ಕಡೆಯ ಕರೆ… ಅವಳ ಹರಿತವಾದ ಮಾತುಗಳು ಅವನ ಕಿವಿಯನ್ನು ಪುನಃಪುನಃ ತಾಕಿದವು.

“ಪಪ್ಪಾ ನನ್ನ ಅಕೌಂಟಿಗೆ ಈ ತಿಂಗಳ ದುಡ್ಡು ಬಂದಿಲ್ಲ. ಏನೋ ಪ್ರಾಬ್ಲಮ್‌ ಇರಬೇಕು. ನೋಡು. ಐ ನೀಡ್‌ ಮನಿ.”

“ನೀತೂ. ನಾನು ಟ್ರಾನ್ಸ್ಫರ್‌ ಮಾಡಿಲ್ಲ.”

“ಹ್ಮ್..‌ ಯಾಕೆ ಪಪ್ಪಾ? ಎಷ್ಟು ದಿನ ಆಯ್ತು ಆಗಲೇ. ನಾನು ಕಾಯ್ತಾ ಇದ್ದೆ”

“ನೀನಾಗೇ ಫೋನ್‌ ಮಾಡಿ ಎಷ್ಟು ದಿನವಾಯ್ತು?”

“ಬೇಕಾದಾಗ ನೀವೇ ಮಾಡ್ತೀರಲ್ಲ. ನಾನ್ಯಾಕೆ ಮಾಡಬೇಕು?”

“ಸರಿ. ನಾವು ಎಷ್ಟು ನಿಮಿಷ ಮಾತಾಡುತ್ತೀವಿ ನೀತಾ? ಇದು ಯಾಕೋ ಸರಿ ಕಾಣ್ತಿಲ್ಲ. ಈ ಸಾರ್ತಿ ಊರಿಗೆ ಬಂದಾಗಲೂ ನಿನ್ನ ಮಾತು-ಕತೆ ಅಷ್ಟಕ್ಕಷ್ಟೇ. ಯಾಕೆ ಹೀಗೆ ಡಿಸ್ಟೆಂಟ್‌ ಆಗಿದ್ದೀಯ? ಕಾಲೇಜಿಂದ ಫೋನು ಬಂದಿತ್ತು. ಮಾರ್ಕ್ಸು ಬೇರೆ ಕಮ್ಮಿ..”

“ಓಹ್‌ ವಿಷಯ ಇದು. ಮಾರ್ಕ್ಸ್‌ ತಾನೇ? ಅದನ್ನ ಹೇಳೋಕ್ಯಾಕೆ ಇಲ್ಲದ ಕಾಳಜಿ ತೋರಿಸ್ತೀರ? ಡೋನ್ಟ್‌ ಮೇಕ್‌ ಇಟ್‌ ಯಾನ್ ಇಶ್ಯೂ ಪಪ್ಪಾ. ಹಾಸ್ಟಲ್‌ ಸೇರಬೇಕು. ಸೇರಿದೆ. ಓದಬೇಕು. ಓದ್ತೇನೆ. ನಿಮ್ಮ ಹತ್ರ ನಾನೇನು ಮಾತಾಡಲಿ? ನೀವಿಬ್ರೂ ನಿಮ್ಮ ಕೆಲಸಗಳಲ್ಲಿ ಬಿಜಿ. ನಿಮಗೆ ಎಂಟರ್ಟೈನ್‌ ಮಾಡೋಕೆ ಹಿತ ಇದ್ದಾಳಲ್ಲ? ಮತ್ತೆ ನಾನ್ಯಾಕೆ?”

“ಹಾಸ್ಟಲ್‌ ಸೇರಿಸಿದ್ದು ನಿನ್ನ ಮೇಲಿನ ದ್ವೇಷದಿಂದಲೇ? ನೀನು ಚೆನ್ನಾಗಿರಲಿ ಅಂತಲ್ಲವೇ ನಾನು-ಅಮ್ಮ ದುಡೀತಿರೋದು?”

“ಚೆನ್ನಾಗಿರೋದು ಯಾವಾಗ ಪಪ್ಪಾ? ನಾಳೆ, ನಾಡಿದ್ದು, 10 ವರ್ಷ ಆದಮೇಲೆ?ʼʼ

“ನೀತಾ ಯಾಕೆ ಹೀಗೆ ನೀನು? ಏನು ತೊಂದರೆ ಹೇಳದೇ ಗೊತ್ತಾಗೋದು ಹೇಗೆ?”

“ಏನು ಹೇಳಬೇಕು ಪಪ್ಪಾ? ಹೇಳಿದ್ರೆ ಏನು ಮಾಡ್ತೀಯ? ಕಾಲೇಜ್‌ ಚೇಂಜ್‌ ಮಾಡಿ ಇನ್ನಷ್ಟು ದೂರ?”

“ನೀತಾ… ನಿನಗಿಷ್ಟವಿಲ್ಲ ಅಂದ್ರೆ ಮೊದಲೇ ಯಾಕೆ ಹೇಳಲಿಲ್ಲ, ಬೇಡದಿದ್ದರೆ ಬಿಟ್ಟು ಬಾ”

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಆತ್ಮದ ಗಿಡುಗ

“ಬಂದು ಮಾಡೋಕ್ಕೇನಿದೆ? ನಿಮ್ಮ ಜೊತೆ ನಾನೇನು ಮಾಡಲಿ? ಮೈ ಲೈಫ್‌ ಮೈ ಪ್ರಾಬ್ಲಮ್ದ ಪಪ್ಪಾ.‌ ನಾನು ನೋಡಿಕೊಳ್ತೀನಿ. ನೀನು ಆರಾಮಾಗಿರು”

ಆಗ ಸ್ವಿಚ್‌ ಆಫ್‌ ಆದ ನೀತಾಳ ಫೋನು ಮತ್ತೆ ಆನ್‌ ಆಗಲಿಲ್ಲ.

ಡಾಕ್ಟರ್ಗಳ ಹಿಂಡೊಂದು ನೀತಾಳಿದ್ದ ಕಡೆಗೆ ಹೊರಟಿತು. ಹೇಮಂತನ ಎದೆ ಡವಡವನೆ ಹೊಡೆದುಕೊಳ್ಳಲಾರಂಭಿಸಿತು.

ʼಏನಾದರೂ ಇರಲಿ. ಅದು ಮುಂದಿನದ್ದು. ನೀತಾಗೆ ಏನೂ ಆಗಬಾರದು.ʼ ಹೇಮಂತ ಎದ್ದೋಡಿದ. ಡಾಕ್ಟರ್‌ ಇತ್ತ ಬರುವವರೆಗೆ ನಿಮಿಷಗಳೇ ವರ್ಷಗಳಾದಂತೆ…

ಮನದಲ್ಲೊಂದೇ ಪ್ರಾರ್ಥನೆ ʼನೀತಾ ವಿಚಾರದಲ್ಲಿ ನಮ್ಮ ತಪ್ಪೆಷ್ಟೋ ತಿಳಿಯದು. ಆದರೆ ಇದೇ ನಮ್ಮ ಕಡೆಯ ತಪ್ಪಾಗಿ ಉಳಿದು ಬಿಡಬಾರದುʼ

ಆಚೆ ಬಂದ ವೈದ್ಯರು ಹೇಳಿದ ಸಮಾಧಾನದ ಮಾತುಗಳಲ್ಲಿ “ಇನ್ನೇನು ಯೋಚನೆಯಿಲ್ಲ. ಶಿ ಈಸ್‌ ಸ್ಟೇಬಲ್”‌ ಎಂಬ ಮಾತೊಂದೇ ಎಲ್ಲವೂ ಎನಿಸಿಬಿಟ್ಟಿತು. ಬದುಕಿಡೀ ಅಸ್ತವ್ಯಸ್ತವಾಗಿ, ಸ್ಟೇಬಲ್‌ ಪದಕ್ಕೆ ಬಹು ದೂರವೇ ಕಳೆದ ನೀತಾಳ ಜೀವನದಲ್ಲಿ ಸ್ಟೆಬಿಲಿಟಿ ತರುವುದೇ ತನ್ನ ಬದುಕಿನ ಉದ್ದೇಶವೇನೋ ಎನಿಸಿಬಿಟ್ಟಿತು. ಅದಕ್ಕೆ ಸಿಗಬಲ್ಲ ಅವಕಾಶ ಇದೊಂದೇ ಎನ್ನುವಂತೆ!

ಈ ಪರಿಸ್ಥಿತಿಗೆ ಬಂದು ನಿಂತ ಈ ಮನಃಸ್ಥಿತಿಯ ಹುಡುಗಿಯ ಮನದಲ್ಲಿ ಸ್ಥೈರ್ಯ, ಬದುಕಿನಲ್ಲಿ ವಿವೇಕ ಮೂಡಿಸಲು ಸಾಧ್ಯವೇ? ಕಡಿದು ಹೋದ ಬಂಧವ ಸರಿ ಮಾಡಿಕೊಳ್ಳಲು ಅವಳು ಮನಸ್ಸು ಮಾಡಬಹುದೇ? ನಮ್ಮನ್ನು ನಿರಂತರ ಬ್ಲೇಮ್‌ ಮಾಡುತ್ತಲೇ ಇದ್ದು ಬಿಡಬಹುದೇ?

ʼತನ್ನ ಲೈಫ್‌ ತನ್ನ ಪ್ರಾಬ್ಲಮ್ ಎನ್ನುವ ನೀತಾಳಿಗೆ ಅವಳ ಪ್ರಾಬ್ಲಮ್ಮಿಲ್ಲಿ ನಾವೂ ಪಾಲುದಾರರು ಎನ್ನುವಂತೆ ಒಂದೇ ಒಂದು ಬಾರಿ ಎನಿಸಿ ಬಿಡಲಿ… ಪುಟ್ಟೀ ಒಮ್ಮೆ ಹುಶಾರಾಗಿ ಬಿಡು. ಲೆಟ್ಸ್‌ ಗೋ ಹೋಮ್‌ʼ ಮನದಲ್ಲೇ ಹೇಳಿಕೊಳ್ಳುತ್ತಲೇ ನೀತಾಳಿದ್ದ ವಾರ್ಡಿನ ಬಾಗಿಲು ತೆಗೆದ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಹುರಿಮೀಸೆ

Exit mobile version