:: ಪೂರ್ಣಿಮಾ ಭಟ್ ಸಣ್ಣಕೇರಿ
‘ಆರ್ ಯೂ ಔಟ್ ಆಫ್ ಯುವರ್ ಮೈಂಡ್ ಸನ್ನೀ?’ ಎಂದು ಸುಮಾರು ಕಿರಿಚಿದ ಹಾಗೇ ಮಾತಾಡಿದ ನನ್ನ ಧ್ವನಿ ಇನ್ನೂ ತಾರಕಕ್ಕೇ ಏರತೊಡಗಿತು.
‘ಬ್ರೆಸ್ಟ್ ರೀಕನ್‌ಸ್ಟ್ರಕ್ಷನ್, ನಿಪ್ಪಲ್ ಕನ್‌ಸ್ಟ್ರಕ್ಷನ್, ಬೂಬ್ಸ್ ಶೇಪಿಂಗ್… ಇನ್ನೂ ಏನಾದರೂ ಉಳಿದಿದ್ಯಾ ಇಲ್ಲಿಗೇ ಮುಗೀತಾ ನಿನ್ನ ಲಿಸ್ಟು?’ ನನ್ನ ಇಡೀ ದೇಹ ಥರಗುಡುತ್ತಿತ್ತು. ಈ ಎರಡು ವರ್ಷಗಳಲ್ಲಿ ಇಷ್ಟು ಧ್ವನಿ ಎತ್ತರಿಸಿ ಮಾತನಾಡಿದ್ದು ಇದು ಮೊದಲನೇ ಸಲವಾಗಿತ್ತು. ಒಂದೇ ಧ್ಯಾನದಲ್ಲಿ ತಾಳ್ಮೆ ಮೀರದ ಹಾಗೆ ತಾಸುಗಟ್ಟಲೇ ಹಿಡಿದ ಭಾರದ ಡಂಬೆಲ್ಸ್ ಸಮತೋಲನ ತಪ್ಪಿ ಕಾಲ ಮೇಲೆ ಬಿದ್ದ ಅನುಭವ ನನಗೆ.
ಮಂಚದ ಬುಡದಲ್ಲಿನ ಹೆಡ್ ಬೋರ್ಡಿಗೆ ಬೆನ್ನು ಆನಿಸಿದ್ದ ಸನ್ಮುಕ್ತಾ ಇವತ್ತು ಒಂದು ತೀರ್ಮಾನ ಆಗಲೇಬೇಕೆಂದು ಅಲ್ಲಿ ಬೇರುಬಿಟ್ಟು ಕುಳಿತಂತೆ ಇದ್ದಳು. ಬಲಗೈ ಎದೆಯ ನಡುವೆ ಹಾದು ಎಡದೋಳನ್ನು ಮೆಲ್ಲನೆ ಸವರುತ್ತಿತ್ತು. ಚಾಚಿದ ಕಾಲಿನ ಬೆರಳುಗಳನ್ನು ಆಗಾಗ ಸುರುಳಿ ಮಾಡಿ ನೆಟ್ಟಗಾಗಿಸುತ್ತಿದ್ದಳು ಅವಳಿಗೇ ಗೊತ್ತಿಲ್ಲದಂತೆ.
‘ನನಗೆ ಜಾಸ್ತಿ ಪೊಯಟಿಕ್ ಆಗಿ ಮಾತಾಡಲು ಬರೋದಿಲ್ಲ ಕಣೋ. ನನ್ನ ಫೀಲಿಂಗ್ಸ್ ನಿನಗೆ ಹೇಗೆ ಅರ್ಥ ಮಾಡಿಸಲಿ? ನನ್ನ ಕಡೆಯಿಂದ ಡಿಸೈಡ್ ಮಾಡಿಯಾಗಿದೆ. ತಾಸುಗಟ್ಟಲೆ ರೀಸರ್ಚ್ ಮಾಡಿದ್ದೇನೆ. ಎರಡು ಪ್ಲಾಸ್ಟಿಕ್ ಸರ್ಜನ್ ಜತೆ ಸಪರೇಟ್ ಆಗಿ ಮಾತಾಡಿದ್ದೇನೆ. ನಿನಗೆ ಕಾಣ್ತಿರೋ ಯಾವ ಕಾಂಪ್ಲಿಕೇಷನ್ನೂ ನನಗೆ ಕಾಣ್ತಿಲ್ಲ. ಹಠ ಯಾಕೆ ಮಾಡ್ತೀಯಾ ಅಮ್ಮೂ?’ ಸಮಾಧಾನದಲ್ಲೇ ಹೇಳಿದರೂ ಮಾತುಗಳು ಮಂಜಿನ ಚೂರಿಯಂತೆ ಹರಿತವಾಗಿದ್ದವು.
ಛೇ! ನಾನ್ಯಾಕೆ ಸವಕಲು ಸಿಮಿಲಿಗಳನ್ನೇ ನೆನಪಿಸಿಕೊಳ್ಳುತ್ತಿದ್ದೇನೆ ಎಂದು ಸಶಬ್ದವಾಗಿ ಹಣೆ ಬಡಿದುಕೊಂಡೆ.
‘ಅದ್ಯಾಕೆ ಹಣೆ ಚಚ್ಚಿಕೊಳ್ತೀಯಾ? ಮೊದಲ ಸಲ ಬ್ರಾ ಹಾಕಿಕೊಂಡ ಸಂಭ್ರಮ, ಹೈಸ್ಕೂಲಿನಲ್ಲಿ ಯೂನಿಫಾರ್ಮಿನ ಚೌಕುಳಿ ಬ್ಲೌಸಿನ ಸಂದಿಯಲ್ಲಿ ಇಣುಕಿದ ಸ್ಟ್ರಾಪ್ ಒಳತಳ್ಳುವಾಗ ಆದ ನಾಚಿಕೆ, ಧ್ರುವನಿಗೆ ಕೊನೆಯ ಬಾರಿ ಫೀಡ್ ಮಾಡುವಾಗ ನೀನು ಮಾಡಿದ ವಿಡಿಯೋ ನನಗೆ ಕೊಡುವ ಖುಶಿ.. ಇದೆಲ್ಲ ಭಾವನೆಯನ್ನ – ಹೌ ಕೆನ್ ಐ ಪಾಸ್ ದೆಮ್ ಟೂ ಯೂ? ಹೇಳಿಲ್ವಾ ಕವಿ ಥರ ವಿವರಣೆ ಕೊಡೋದು ನನಗಾಗಲ್ಲ ಅಂತ’ ಈ ಬಾರಿ ಧ್ವನಿ ಆದ್ರವಾಗಿತ್ತು.
‘ಈ ಎರಡು ವರ್ಷ ಅನುಭವಿಸಿದ್ದು ಸಾಲದಾ? ಇನ್ನಷ್ಟು ಆಸ್ಪತ್ರೆ ಓಡಾಟ, ಕೌಂಟ್‌ಲೆಸ್ ಅಪಾಯಿಂಟ್ಮೆಂಟ್ಸ್, ಫೋನಿನಲ್ಲಿ ಇನ್ನೂ ಒಂದಷ್ಟು ಪಿಲ್ಸ್ ರಿಮೈಂಡರ್ಸ್ ಇದೆಲ್ಲಾ ಬೇಕಾ ಸನ್ನೀ? ಸ್ವಲ್ಪ ಯೋಚನೆ ಮಾಡು. ಹೀಗೆ ಆರಾಮಾಗಿದ್ದುಬಿಡೋಣ’ ಮಾತು ಮುಗಿಸೋಣವೆಂದುಕೊಂದಷ್ಟೂ ಮೆದುಳಿಗೂ ನಾಲಿಗೆಗೂ ಲಿಂಕ್ ತಪ್ಪಿದಂತಿತ್ತು.
‘ಗಂಟೆ ಆಗ್ಲೇ ಎಂಟು. ನಿಂಗೆ ಯಾವತ್ತಿನಂತೆ ಮೆಕ್ಸಿಕನ್ ಬರೀಟೋ ಬೌಲಾ? ನಾನಿವತ್ತು ಸೂಪ್ ಮತ್ತು ಸಲಾಡ್ ಮಾತ್ರ’ ಎಂದು ಫೋನಿತ್ತಿಕೊಂಡಳು, ಮುಂದೆನಿದೆ ಮಾತಾಡುವುದಕ್ಕೆ ಎನ್ನುವಂತೆ.
+++
ಬಾಲ್ಕನಿಗೆ ಬಂದು ಕೂತೆ. ಎರಡು ವಾರದ ಹಿಂದೆ ಈ ಬ್ರೆಸ್ಟ್ ರೀಕನ್‌ಸ್ಟ್ರಕ್ಷನ್ ವಿಷಯವನ್ನು ಮೊದಲ ಬಾರಿ ಸನ್ಮುಕ್ತಾ ಪ್ರಸ್ತಾಪ ಮಾಡಿದಾಗ ಅರ್ಧ ವಿಷಯ ತಲೆಯೊಳಗೆ ಹೋಗಲೇ ಇಲ್ಲ. ಒಂದೂವರೆ ದಶಕದ ದಾಂಪತ್ಯದಲ್ಲೂ ಅಷ್ಟೆ, ಅವಳ ಪಾತ್ರ ಜಾಸ್ತಿ ಇದ್ದುದು ಚಿಂತನ ಮಂಥನದಲ್ಲಿ. ನನ್ನ ಪಾತ್ರ ಕಾರ್ಯ ನೆರವೇರಿಸುವಲ್ಲಿ.
ದೊಡ್ಡ ಸಾಫ್ಟ್ವೇರ್ ಕಂಪನಿಯಲ್ಲಿ ಲಕ್ಷ ಸಂಪಾದಿಸುತ್ತಿದ್ದರೂ ನನ್ನ ಹುಕಿಗಾಗಿ ಸಣ್ಣದೊಂದು ಪ್ರಾಡಕ್ಟ್ ಶುರುಮಾಡಿ, ಗೆಳೆಯರಿಂದ, ಕಲೀಗ್‌ಗಳಿಂದ ಮೆಚ್ಚುಗೆ ಪಡೆದುಕೊಂಡು ಅಷ್ಟಕ್ಕೇ ಸುಮ್ಮನಾಗಿ ಕುಳಿತಿದ್ದೆ ನಾನು. ಸನ್ಮುಕ್ತಾ ಯಾವ್ಯಾವ ದಾರಿಯಲ್ಲಿ ಹೋದರೆ ಗಮ್ಯ ಸುಗಮವಾಗಬಹುದು, ಎಲ್ಲಿ ನನ್ನ ಪ್ರಾಡಕ್ಟ್ ಒಂದು ಕಂಪನಿಯಾಗಿ ಬೆಳೆಯಬಲ್ಲದು ಎಂಬುದನ್ನೆಲ್ಲ ಲೆಕ್ಕಾಚಾರ ಹಾಕಿದವಳು. ಕೋಟಿಗಟ್ಟಲೆ ಇನ್‌ವೆಸ್ಟ್‌ಮೆಂಟಿನ ಕಠಿಣ ದಾರಿಯನ್ನು ಹೂಹಾದಿಯನ್ನಾಗಿಸಿದವಳು.
ಎರಡು ವರ್ಷದ ಹಿಂದೆ ಒಂದು ಸುಡು ಬೇಸಿಗೆಯಲ್ಲಿ ಸನ್ಮುಕ್ತಾಳಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ಪತ್ತೆಯಾದದ್ದು. ಸ್ವಲ್ಪಕಾಲ ದಿಕ್ಕುತಪ್ಪಿದ ಜೋಡಿಹಕ್ಕಿಗಳಂತೆ ಅಲ್ಲಿಲ್ಲಿ ಅಲೆದರೂ ಹೇಗೋ ಮತ್ತೆ ಗೂಡನ್ನು ಕಂಡುಕೊಂಡಿದ್ದೆವು. ರೇಡಿಯೇಶನ್, ಕೀಮೋ, ಸ್ಕ್ಯಾನುಗಳು, ಡಯೆಟ್ ಪ್ಲಾನುಗಳು, ಮಾತ್ರೆಗಳು ಈ ಎಲ್ಲವಕ್ಕೂ ನಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದೆವು. ದಿನವೂ ಸಂಭವಿಸುವ ರಾತ್ರಿಯ ವಿಹಾರ ನಮ್ಮಿಬ್ಬರಿಗೂ ಥೆರಪ್ಯುಟಿಕ್. ಮಾತ್ರೆಯ ಭಾದೆ ತಾಳದೆ ಗೋಳೆಗುಟ್ಟಿ ಸನ್ಮುಕ್ತಾ ಅತ್ತ ರಾತ್ರಿಗಳಲ್ಲಿ ನಿದ್ದೆ ನನ್ನ ಸುತ್ತ ಸುಳಿಯುತ್ತಲಿರಲಿಲ್ಲ. ಮಾರನೆಯ ದಿನ ಮತ್ತೆ ಅವಳ ಕಣ್ಣಲ್ಲಿ ಹೊಳಪು ಕಂಡರೆ ನಾನು ಅಂದು ಸ್ವತಃ ಸೂರ್ಯ.
ಕಾಲಕ್ಕೆ ಕೂಡ್ರುವ ಪದ್ಧತಿಯಿಲ್ಲವಲ್ಲ. ಮ್ಯಾಸ್ಟೆಕ್ಟಮಿ ಪ್ರೊಸೀಜರ್ ನಂತರ ಸಪಾಟಾದ ಒಂದು ಭಾಗದ ಎದೆಯನ್ನು ನೋಡಿದಾಗಲೆಲ್ಲ ನಾನು ಸನ್ಮುಕ್ತಾಳ ಕಣ್ಣನ್ನು ತುಸು ತಪ್ಪಿಸಿದ್ದನ್ನು ಬಿಟ್ಟರೆ ಬಾಕಿ ಎಲ್ಲವೂ ನಾರ್ಮಲ್ ಎಂದುಕೊಂಡಿದ್ದೆವು ನಾವಿಬ್ಬರೂ. ಹದಿನೈದು ವರ್ಷಗಳ ಏರಿಳಿತಗಳ ಬಂಧ ನಮ್ಮನ್ನು ಹಿತವಾಗಿ ನೇವರಿಸುತ್ತಿತ್ತು. ಅದಕ್ಕೇ ಉಳಕಿ ಎಲ್ಲ ನಾರ್ಮಲ್ ನಾರ್ಮಲ್.
ಅದೆಲ್ಲಿಂದ ತಲೆಯಲ್ಲಿ ಹುಳು ಬಿಟ್ಟುಕೊಂಡಳೋ ಗೊತ್ತಿಲ್ಲ ಸನ್ಮುಕ್ತಾ. ಸಪಾಟಾದ ಎದೆಗೆ ಬ್ರೆಸ್ಟ್ ರೀಕನ್‌ಸ್ಟ್ರಕ್ಷನ್ ಸರ್ಜರಿ ಆಗಲೇಬೇಕೆಂದು ಹಟ ಹಿಡಿದಿದ್ದಾಳೆ. ಅವಳೇ ಹೇಳಿದ್ದಲ್ಲವೇ ನನಗೆ, ಅವಳ ಡೆವೆಲಪ್‌ಮೆಂಟ್ ಟೀಮಿನ ಅಮೇರಿಕನ್ ಕೌಂಟರ್‌ಪಾರ್ಟ್ ಮೆಗ್ ಮೊದಲು ಈ ಬಗ್ಗೆ ಹೇಳಿದ್ದು ಎಂದು..
ಶುರುವಿನಲ್ಲಿ ಸನ್ಮುಕ್ತಾ ಈ ಬಗ್ಗೆ ಮಾತಾಡಿದಾಗ ನಾನೂ ಹಾರಿಕೆಯ ಉತ್ತರ ಕೊಟ್ಟೆ. ಮಾತು ಮರೆಸಲು ನೋಡಿದೆ. ಸನ್ಮುಕ್ತಾಳಲ್ಲಿ ಈ ಬಗ್ಗೆ ಮಾತಾಡುವ ಸಲಿಗೆಯಿಲ್ಲ ಎಂದಲ್ಲ.. ಜೀವನ ಇನ್ಮುಂದೆ ಹೀಗೆಯೇ ಎಂದು ನಿರ್ಧರಿಸಿಯಾಗಿತ್ತಿರಬೇಕು. ಕಷ್ಟಕಾಲದಲ್ಲಿ ಹೆಂಡತಿಯ ಹಿಂದೆ ನಿಂತವ ಎನ್ನಿಸಿಕೊಳ್ಳುವ ಹಂಬಲವೂ ಇದ್ದಿರಬೇಕು. ಇಷ್ಟೆಲ್ಲ ಎದುರಿಸಿದ್ದೇವೆ ಆದರೂ ಜೀವನ ನಾರ್ಮಲ್ ಆಗಿಯೇ ಇದೆ ಎನ್ನುವ ಗಟ್ಟಿತನವನ್ನು ಇನ್ನಷ್ಟು ಕಲ್ಲಾಗಿಸಬೇಕಿತ್ತಿರಬೇಕು. ದೇಹದ ಅದೊಂದು ಭಾಗವಿಲ್ಲದಿದ್ದರೆ ಏನು ಮಹಾ? ನಿನ್ನೊಟ್ಟಿಗೆ ಚೆಂದವಾಗಿಯೇ ಬಾಳುವೆ, ಅವರಿವರು ಮಾತಿನ ಕಲ್ಲೆಸೆಯಲು ಬಿಡಲಾರೆ ಎಂಬ ಭಾವನೆಯನ್ನು ಸನ್ಮುಕ್ತಾಳಿಗೆ ದಾಟಿಸುವ ಸೋಗು ಗಾಢವಾಗಿತ್ತಿರಬೇಕು.
ಇಷ್ಟು ವರ್ಷದ ಜತೆತನದಲ್ಲಿ ಯಾವತ್ತೂ ಎರಡು ದಿನಕ್ಕಿಂತ ಜಾಸ್ತಿ ಮುಂದುವರೆದ ಭಿನ್ನಾಭಿಪ್ರಾಯಗಳಿರಲಿಲ್ಲ. ಈ ಬಾರಿ ಮಾತ್ರ ಎರಡು ವಾರಕ್ಕೂ ಮಿಕ್ಕಿ ತಿಕ್ಕಾಟ ನಡೆಯುತ್ತಿದೆಯಲ್ಲ. ನಿರಾಶೆ, ಹತಾಶೆ ಮಿಗುವರೆಯಿತು.
ಬಾಲ್ಕನಿಯಿಂದ ಡೈನಿಂಗ್ ಟೇಬಲಿನತ್ತ ಬಂದಾಗ ಸ್ವಿಗ್ಗಿಯಿಂದ ಬಂದ ಬರೀಟೋ ಬೌಲ್ ಮಾತ್ರ ಕಂಡಿತು. ಒಮ್ಮೆ ಅಡುಗೆ ಮನೆಯ ಸಿಂಕಿನ ಬಳಿ ಹೋಗಿ ಸನ್ಮುಕ್ತಾ ಊಟ ಮುಗಿಸಿದ್ದಾಳೆ ಎಂಬುದನ್ನು ಖಾತ್ರಿ ಮಾಡಿಕೊಂಡೆ. ಆರನೇ ಫ಼್ಲೋರಿನ ಗೆಳೆಯನ ಮನೆಗೆ ಹೋಗಿದ್ದ ಮಗ ಧ್ರುವ ಕೂಡಾ ಮನೆಗೆ ವಾಪಸ್ಸಾಗಿ ತನ್ನ ರೂಮಿನ ಕಂಪ್ಯೂಟರ್‌ನಲ್ಲಿ ಮುಳುಗಿದ್ದ. ಎಕ್ಸೆಲ್ ಶೀಟಿನ ಚೌಕದಮೇಲೆ ‘ಎಕ್ಸಾಂ – ಹೆಡ್ ಆನ್ ಕೊಲಿಶನ್’ ಎಂಬುದು ದಪ್ಪಕ್ಷರದಲ್ಲಿ ಕಾಣುತ್ತಿತ್ತು.
ಬರೀಟೋ ಬೌಲ್ ಬರಿದು ಮಾಡಿ ಮತ್ತೆ ಬಾಲ್ಕನಿಗೆ ಹೋಗಿ ಕುಕ್ಕರಿಸಿದೆ. ಅಸಂಬದ್ಧ ಯೋಚನೆಗಳು, ಇವಳ ಕ್ಯಾನ್ಸರಿನ ಪತ್ತೆಯಾದಾಗ ಶುರುವಿನ ದಿನಗಳಲ್ಲಿದ್ದಂತೆ. ಸಾಕಾಯಿತಪ್ಪ ಈ ಬಗ್ಗೆಯೇ ಯೋಚಿಸಿ. ನನಗಿಂತ ಜಾಸ್ತಿ ವ್ಯಾಲಿಡೇಶನ್ ಬೇಕಾ ಇವಳಿಗೆ? ನಾನೇ ಇವಳ ಸಪಾಟನ್ನು ಸ್ವೀಕರಿಸಿಯಾಗಿದೆ ಇನ್ನೆಲ್ಲಿಯ ರಗಳೆ ಇವಳದ್ದು ಎಂದು ಛೇಗುಟ್ಟಿದೆ ಶಬ್ದಸಹಿತವಾಗಿ. ತಕ್ಷಣ ನನ್ನ ಮೇಲೇ ನನಗೆ ಹೇವರಿಕೆ ಬಂತು. ಎಂಥ ಕೆಟ್ಟ ವಿಡಂಬನೆಯಪ್ಪಾ ಎಂದು ತಲೆ ಕೊಡವಿದೆ.
ಕುಟುಂಬಕ್ಕೆ ಇಂಬಾದ ಬಾಳಸಂಗಾತಿ ಅನುಭವಿಸಲಿರುವ ಮೆಡಿಕಲ್ ಕಾಂಪ್ಲಿಕೇಷನ್, ತೊಡಕುಗಳೇ ನನ್ನನ್ನು ನಿಜವಾಗಿಯೂ ಕಾಡುತ್ತಿವೆಯಾ ಎಂದು ಮೂಲ ಉದ್ದೇಶವನ್ನೇ ಪ್ರಶ್ನಿಸಿಕೊಂಡೆ. ಪ್ರಶ್ನೆಗಳು ಜಟಿಲವಾಗುತ್ತ ನಡೆದವು.
ಹತ್ತು ವರ್ಷದ ಹಿಂದೆ ನಡೆದ ಘಟನೆಯನ್ನು ಇವತ್ತಿಗೆ ತಳುಕು ಹಾಕುವ ಅಗತ್ಯವಿಲ್ಲ. ಆದರೂ ನೆನಪಿಗೆ ಬರುತ್ತಿದೆ. ದೊಡ್ಡ ಐಟಿ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನಿರ್ವಹಿಸುತ್ತಿದ್ದ ಕಾಲ. ಆರು ವಾರದ ಸಲುವಾಗಿ ಬರ್ಮಿಂಗ್‌ಹಮ್ ಆಫೀಸಿಗೆ ಹೋಗಿದ್ದೆ, ನವೆಂಬರ್ ತಿಂಗಳಿನಿಂದ ಡಿಸೆಂಬರ್‌ವರೆಗೆ. ವರ್ಷಾಂತ್ಯ ಬಂತೆಂದರೆ ಅಲ್ಲಿನವರಿಗೆ ಮೋಜಿನ ಸಮಯ. ಆಫೀಸಿನಲ್ಲಿ ಸೀಕ್ರೆಟ್ ಸ್ಯಾಂಟಾ ಗಿಫ್ಟ್ ಎಕ್ಸ್‌ಚೇಂಜ್ ಸಂಭ್ರಮ ನಡೆದಿತ್ತು. ಆಫೀಸಿನ ಮೂಲೆಯಲ್ಲಿ ಸಿಂಗರಿಸಿಕೊಂಡು ನಿಂತಿದ್ದ ಕ್ರಿಸ್‌ಮಸ್ ಟ್ರೀಯ ಬುಡದಲ್ಲಿ, ಒಂದು ದಿನ ಮುಂಚಿತವಾಗಿ ಎಲ್ಲರೂ ಉಡುಗೊರೆಗಳನ್ನು ತಂದಿಡಬೇಕು. ಕ್ರಿಸ್‌ಮಸ್ ಈವ್ ಆದ ಡಿಸೆಂಬರ್ ಇಪ್ಪತ್ನಾಲ್ಕರಿಂದ ಆಫೀಸಿಗೆ ರಜೆ. ಹಾಗಾಗಿ ಇಪ್ಪತ್ಮೂರರಂದು ಸಂಜೆ ತಮ್ಮ ತಮ್ಮ ಹೆಸರಿದ್ದ ಉಡುಗೊರೆಯನ್ನು ಪ್ರತಿಯೊಬ್ಬರೂ ಪಾಳಿಯ ಪ್ರಕಾರ ತೆರೆದು ತೋರಿಸಬೇಕು. ವಿಚಿತ್ರ ಸ್ಲೋಗನ್ನುಗಳಿದ್ದ ಜಂಪರ್, ಪೈರೆಟ್ ಐಪ್ಯಾಚ್, ಬೆತ್ತಲೆ ಜೋಡಿಯಿದ್ದ ಕರ್ಟನ್ ಹೀಗೆ ಇನ್ನೂ ಕೆಲವು ಉಡುಗೊರೆಗಳನ್ನು ಸಹೋದ್ಯೋಗಿಗಳು ತೆರೆದಾದ ಮೇಲೆ ನನ್ನ ಸರದಿ ಬಂತು. ನನ್ನ ಹೆಸರು ಯಾರಿಗೆ ಬಂದಿತ್ತು ಗೊತ್ತಿಲ್ಲ.. ನಾನು ನಿಧಾನಕ್ಕೆ ಪೊಟ್ಟಣವನ್ನು ಬಿಚ್ಚಿದೆ. ಮೆತ್ತಮೆತ್ತಗಿನ ಅನುಭವವಾದಂತಾಯ್ತು. ಕೊನೆಯ ಪದರವನ್ನೂ ಬಿಡಿಸಿದೆ. ನನ್ನ ಮಧ್ಯಮಗಾತ್ರದ ಕೈಯ್ಯಿಂದ ಹೊರ ತುಳುಕುವಷ್ಟು ದೊಡ್ಡ ಸ್ತನ! ಆರ್ಟಿಫಿಶಿಯಲ್ ಬ್ರೆಸ್ಟ್. ಹೂಬೇಹೂಬ್ ನಿಜವಾದ ಮೊಲೆಯಂತೆಯೇ ಇದೆ. ನನ್ನ ಮುಖವೆಲ್ಲ ಕೆಂಪಡರಿತು.
ಸಹೋದ್ಯೋಗಿಗಳೆಲ್ಲ `ಹೋ’ ಎಂದು ಕಿರುಚಿ ಕಿಚಾಯಿಸಿದರು. ನಾಚಿಕೆಯೋ, ಕಲ್ಚರಲ್ ಆಘಾತವೋ ಕೆಲವು ನಿಮಿಷಗಳಷ್ಟು ಕಾಲ ಮಾತೇ ಆಡಲಿಲ್ಲ ನಾನು. ನನ್ನ ಸೀಕ್ರೆಟ್ ಸ್ಯಾಂಟಾ ಉಡುಗೊರೆಯನ್ನು ಯಾರೂ ನೋಡೇ ಇಲ್ಲವೇನೋ ಎಂಬಂತೆ ಕದ್ದು ಲ್ಯಾಪ್‌ಟಾಪ್ ಬ್ಯಾಗಿನೊಳಗೆ ಸೇರಿಸಿದೆ. ಮೊದಲೇ ನಿಗದಿಯಾದಂತೆ ಮರುದಿನ ಭಾರತಕ್ಕೆ ಹೊರಟುಬಂದೆ. ಮನೆಗೆ ಬಂದ ಮಾರನೆಯ ರಾತ್ರಿ ಧ್ರುವ ಮಲಗಿದ ನಂತರ ಸನ್ಮುಕ್ತಾಳಿಗೆ ಒಮ್ಮೆ ಸ್ಯಾಂಟಾ ಕೊಟ್ಟ ಉಡುಗೊರೆ ತೋರಿಸಿ ಅದನ್ನು ಕವರ್ ಸಮೇತವಾಗಿ ನನ್ನ ವಾರ್ಡ್ರೋಬಿನ ಇನ್ನರ್ ಡ್ರಾದ ಮೂಲೆಯಲ್ಲಿ ತುರುಕಿದೆ. ಸನ್ಮುಕ್ತಾ ಅಂದು ಮನಸೋಇಚ್ಛೆ ನಕ್ಕಿದ್ದಳು.
+++
ಎಷ್ಟು ಹೊತ್ತು ಹೊರಗೆ ಕೂತಿದ್ದೆನೋ. ಪಕ್ಕದ ಲೇಔಟಿನಲ್ಲಿ ಗಾರ್ಡ್ ಎಡೆಬಿಡದೆ ಹೊಡೆಯುತ್ತಿದ್ದ ಸೀಟಿ ನನ್ನನ್ನು ಮತ್ತೆ ಈ ಲೋಕಕ್ಕೆ ಕರೆತಂದಿತು. ಬೆಡ್‌ರೂಮಿಗೆ ಬಂದೆ. ಸನ್ಮುಕ್ತಾ ನಿದ್ದೆ ಮಾಡಿಲ್ಲ ಎಂಬುದು ನನಗೆ ಗೊತ್ತು. ಗಾಢ ನವಿಲು ಬಣ್ಣದ ಕಿಟಕಿಯ ಪರದೆಯ ಕಡೆ ಮುಖ ಮಾಡಿ ಮಲಗಿದವಳ ಮಗ್ಗುಲಿಗೆ ಬಂದು ಕೂತೆ. `ಸನ್ನೀ’ ಎಂದು ನಿಧಾನವಾಗಿ ಕರೆದೆ. ಹಣೆಯ ಮೇಲೆ ಬೆರಳಾಡಿಸಿದೆ. ಇಡೀ ದೇಹವನ್ನು ಜರುಗಿಸಿ ಜಾಗ ಮಾಡಿದವಳೇ ಕಾಲರ್ ಹಿಡಿದು ಜಗ್ಗಿ ನನ್ನನ್ನೂ ತನ್ನ ಪಕ್ಕ ಒರಗಿಸಿಕೊಂಡಳು.
`ಸನ್ನೀ, ನಿನ್ನ ಆಪರೇಶನ್ ಆಗಿ ಹದಿನೆಂಟು ತಿಂಗಳಾಯ್ತು. ಅಷ್ಟೊಂದು ತಿಂಗಳು ಆಸ್ಪತ್ರೆಗೆ ಟೆಸ್ಟ್‌ಗಳಿಗೆ ಹೋಗಿದ್ದು, ಪ್ರತೀ ರಿಪೋರ್ಟ್ ಓದುವ ಮೊದಲೂ ಕೈಕಾಲು ತಣ್ಣಗಾಗಿದ್ದು ಎಲ್ಲವೂ ಮರೆತೆಯಾ? ಈಗಲೂ ತುಂಬ ಸುಂದರಿ ನೀನು. ನನಗೆ ಅಪ್ಸರೆಯೇ. ಧ್ರುವನಿಗಂತೂ ದೇವತೆ ನೀನು. ದ್ಯಾಟ್ಸ್ ವಾಟ್ ಹೀ ಸೇಸ್ ರೈಟ್? ಈ ಎರಡು ವಾರ ನಮ್ಮ ಜೀವನದಲ್ಲಿ ಇರಲೇಯಿಲ್ಲ ಎಂದುಕೊಂಡು ಸುಮ್ಮನಾಗಿಬಿಡೋಣ’
`ಐ ಹ್ಯಾವ್ ಕ್ಲೋಸ್ಡ್ ಆನ್ ಇಟ್. ಸರ್ಜರಿ ಶೆಡ್ಯೂಲ್ ಆಗಿದೆ. ನನ್ನ ಸರ್ಜನ್ನಿನ ನಂಬರನ್ನ ಆಗಲೇ ಶೇರ್ ಮಾಡಿದ್ದೇನೆ. ಒಮ್ಮೆ ನೀನೂ ಮಾತಾಡಿ ನೋಡು’
`ಇಷ್ಟು ಮುಂದುವರೆದ ಮೇಲೆ ಇನ್ನೇನಿದೆ?’ ಅಹಂಅನ್ನು ಹತ್ತಿಕ್ಕುವ ಸರ್ವಪ್ರಯತ್ನ ಜಾರಿಯಲ್ಲಿತ್ತು.
`ಹೊರಗಿನ ಗಾಳಿ ನಿನ್ನ ತಲೆಯನ್ನ ಹಗುರಾಗಿಸಿತು ಎಂದು ಭಾವಿಸಿ ಮಾತಾಡುವ ಎಂದೆ’
`ಯಾಕೆ ಸನ್ನೀ? ಮರೆತೆಯಾ ನಮ್ಮ ಮಾತುಕತೆ.. ಬರೀ ಏರುಗತಿಯೇ ಆದರೆ ನಮ್ಮ ಬೇರನ್ನ ಮರೆಯುತ್ತೇವೆಂದು, ಬೇರಿಗೆ ಹುಳಹಿಡಿದು ಬದುಕಿನ ಮರ ಬೀಳುತ್ತದೆಂದು ಅಲ್ಲಲ್ಲಿ ಪಾಸ್ ತೆಗೆದುಕೊಳ್ಳುತ್ತೇವಲ್ಲ? ಅಲ್ಲ? ನೀನು ತಿಳಿಹೇಳು ನನಗೆ. ಇಷ್ಟೂ ವರ್ಷ ಕಾಲ ಇದೇ ಅಲ್ಲವೇ ನಾವು ಮಾಡಿದ್ದು?’
`ಅಬಾ, ಎಷ್ಟಪ್ಪ ಮಾತು! ಈ ಬಾರಿ ನಿಂಗೆ ತಿಳಿಹೇಳುವ ವಿವೇಕ ನನ್ನಲ್ಲಿಲ್ಲ’ ವಿಷಾದ ತುಂಬಿತು ರೂಮನ್ನ.
ಪ್ರಯತ್ನಪೂರ್ವಕವಾಗಿ ಕೊರಳ ಇಳಿಜಾರ ನೇವರಿಸಹೋದೆ. ಸಟ್ಟನೆ ಕೈ ತಳ್ಳಿದಳು.
`ಇಂಟಾಂಜಿಬಿಲಿಟಿ.. ರಿಮೆಂಬರ್? ಹಾಗೇ ಇರಲಿ ಬಿಡು ಅಮ್ಮೂ.. ಭಾವನೆಗಳ ಬಂಧವೂ ಬೇಡ’
`ಬದುಕನ್ನ ಬಂದಹಾಗೇ ಅಪ್ಪಿಕೊಂಡಾಗಿದೆ ಸನ್ನೀ, ಕಾಣದ ಇನ್ನೊಂದು ತಿರುವು ಬೇಡ’
`ನಾನು ದಿನವೂ ಅರಳಲು ಪ್ರಯತ್ನಿಸಿ ನರಳುತ್ತಿರುವುದು ನಿಂಗೆ ಕಂಡಿಲ್ಲ ಎಂದಾದರೆ ನಿನಗೆ ಕಣ್ಣಿದ್ದೂ ಪ್ರಯೋಜನವೇನು..?’
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ
`…’
`ವಾರ್ಡೋಬಿನ ಬಟ್ಟೆಗಳು ನನ್ನನ್ನು ಅಣಕಿಸುತ್ತವೆ ಕಣೋ.. ಬೋರ್ರ್ಡೂಮಿನಲ್ಲಿ ಎಲ್ಲರೆದುರು ಫ್ರೀಜ್ ಆಗಿಬಿಡುತ್ತೀನಿ. ಇದಕ್ಕೆಲ್ಲ ಒಂದು ಫುಲ್‌ಸ್ಟಾಪ್ ಬೇಕಲ್ಲ’
`ಐ ಥಾಟ್ ವಿ ಹ್ಯಾವ್ ಗಾನ್ ಪಾಸ್ಟ್ ಆಲ್ ದೀಸ್. ಗೋ ಫ್ಲ್ಯಾಟ್ ಫೋಟೋಶೂಟ್..?’
`ಸೋ ಕಾಲ್ಡ್ ಇನ್‌ಕ್ಲೂಸಿವ್‌ನೆಸ್ಸಿನ, ಎಜುಕೇಟೆಡ್ ಸೊಸೈಟಿಯ ಡ್ರಾಮಾ ಅಲ್ಲವಾ ಇದೆಲ್ಲ? ಕ್ಲಿವೇಜ್ ತೋರಿಸುವ ಡ್ರೆಸ್ ಹಾಕಿದಾಗಲೆಲ್ಲ ಎಷ್ಟುಬಾರಿ ಕಾಂಪ್ಲಿಮೆಂಟ್ ಕೊಟ್ಟಲ್ಲ ನೀನು!’ ಕಳ್ಳನನ್ನು ಹಿಡಿದಂತೆ ಮಾತಾಡಿದಳು.
ಥತ್! ನನ್ನನ್ನ ಡೈಲೆಮಾದಲ್ಲಿ ಹಾಕುತ್ತಿದ್ದಾಳಲ್ಲ ಮತ್ತೆ ಎನ್ನಿಸಿತು. ಮಾತುಗಳು ಇನ್ನಷ್ಟು ರಾಡಿ ಮಾಡುವ ಮೊದಲು ಬ್ರಶ್ ಮಾಡುವ ನೆಪಮಾಡಿ ಬಾತ್ರೂಮಿಗೆ ನಡೆದೆ. ಹಲ್ಲುಕಿರಿದಂತಾಗಿದ್ದ ಬ್ರಶ್ಶನ್ನು ಮೂಲೆಗೆ ರಪ್ಪನೆ ಎಸೆದೆ.
ಬೆಳಗ್ಗೆ ಐದಕ್ಕೇ ಎದ್ದು ಊರಿಗೆ ಹೋಗಿ ಬರುವ ನಿರ್ಧಾರ ಮಾಡಿದೆ. ಐದು ಗಂಟೆಗಳ ನಾನ್‌ಸ್ಟಾಪ್ ಡ್ರೈವ್. ಎರಡು ದಿನಗಳ ಓಓಓ’ ಸೆಟ್‌ಅಪ್ ಮಾಡಿ, ಆಫೀಸಿಗೆ ಬರಲಾಗುವುದಿಲ್ಲ ಎಂದು ಇಮೇಲ್ ಬರೆದು
ಸೆಂಡ್ ಆಲ್’ ಬಟನ್ನೊತ್ತಿದೆ. ಬೆಕ್ಕಿನ ಹೆಜ್ಜೆಯಿಟ್ಟು ರೂಮಿನೊಳಗೆ ಹೋಗಿ ವಾರ್ಡೋಬಿನ ಇನ್ನರ್ ಡ್ರಾ ತೆಗೆದು ಹತ್ತುವರ್ಷದಿಂದ ಮುಟ್ಟದೇ ಇದ್ದ ಸಿಕ್ರೇಟ್ ಸ್ಯಾಂಟಾ ಗಿಫ಼್ಟನ್ನು ಎತ್ತಿಟ್ಟುಕೊಂಡೆ.
`ಸನ್ನೀ, ಅಮ್ಮನನ್ನು ನೋಡಿಬರುವೆ’ ಎಂದು ವಾಟ್ಸ್ಯಾಪ್ ಮೆಸೇಜಿಸಿ ಕಾರು ಹತ್ತಿದೆ.
ದಣಪೆ ದಾಟಿ ಅಂಗಳಕ್ಕೆ ಬಂದಾಗ ಅಮ್ಮ ಕೊಟ್ಟಿಗೆಯಲ್ಲಿದ್ದಳು. `ಅರೇ.. ಯಾರು ಬಂದರು ನೋಡು ಗಿರಿಜೆ’ ಎನ್ನುತ್ತ ಅಂಗಳಕ್ಕೆ ಬಂದಳು ಅಮ್ಮ. ಆಗಲೇ ಹೊಳೆದಿದ್ದು ಊರಿಗೆ ಬಂದು ಆರು ತಿಂಗಳಾಗಿದೆ ಎಂದು. ಅರವತ್ತು ಸೀಮೆಯಲ್ಲಿರಸಿದ ನೆಮ್ಮದಿ ಅವಿತಿದ್ದು ಮಾತ್ರ ಅಮ್ಮನ ಮಡಿಲಲ್ಲಿ ಅನ್ನುವುದು ಮನಸ್ಸಿಗೆ ಬಂದು ತುಟಿಗಳು ಅಗಲವಾದವು. ಒಳ್ಳೆಯ ಎತ್ತರದ ಅಮ್ಮ ಕೆಂಪು ಸೀರೆ, ಕಪ್ಪು ಪೋಲಕದಲ್ಲಿ ಎಂದಿಗಿಂತ ಚೆಂದ ಕಂಡಳು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಹುಣಸೇಹೂವು
ನಾ ಕಂಡಷ್ಟು ದಿನವೂ ಅಮ್ಮನ ಮೇಲೆ ಕೆಸಕ್ಕನೆ ಹಚಗುಟ್ಟುತ್ತಿದ್ದ ಅಪ್ಪ ಅರವತ್ತಕ್ಕೆ ತೀರಿಕೊಂಡಿದ್ದ. ಬರೀ ಒಳ್ಳೆಯತನ ಮಾತ್ರ ಮನುಷ್ಯನಲ್ಲಿರಲು ಸಾಧ್ಯವೇ ಎಂದುಕೊಂಡು ಅಮ್ಮ ಎಲ್ಲವನ್ನೂ ಹೊಟ್ಟೆಯಲ್ಲಿ ಹಾಕಿಕೊಂಡಂತಿದ್ದಳು. ಪರಿಸ್ಥಿತಿ ಯಾವುದೇ ಇರಲಿ, ಜೊತೆಯಿರುವ ಜೀವಗಳ ಅನುತನು ನೋಡುವುದು ಹೇಗೆಂದು ಅಮ್ಮ ಮಾತನಾಡದೇ ಕಲಿಸಿಕೊಟ್ಟಿದ್ದಳು. ಅಪ್ಪ ಹೋದ ಮೇಲೆ ಕೊಟ್ಟಿಗೆ, ಮನೆ ಸುತ್ತಲ ಜಮೀನು, ಕಾರ್ಯಕಟ್ಟಲೆ, ಆಗೀಗ ವೀಡಿಯೋ ಕಾಲ್‌ಗಳು ಎಂದುಕೊಂಡು ಆರಾಮವಾಗಿದ್ದಳು. ಮೊದಲು ಕಳೆದ ಕಷ್ಟದ ದಿನಗಳ ಕನಸು ಬಿದ್ದು ನಿದ್ದೆ ಕೆಡಿಸದಿರಲಿ ಎಂದು ದಿನವೂ ಅರ್ಧ ನಿದ್ದೆಗುಳಿಗೆ ನುಂಗುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ವರ್ಷಕ್ಕೊಮ್ಮೆ ವಾರದ ಮಟ್ಟಿಗೆ ನಮ್ಮೊಟ್ಟಿಗೆ ಬಂದಿದ್ದು ಮೊಮ್ಮಗನಿಗೆ ಅಚ್ಚೆ ಮಾಡುತ್ತಿದ್ದಳು. ಅದರಾಚೆಗೆ ಅವಳೂ ಏನೂ ನಿರೀಕ್ಷಿಸುತ್ತಿರಲಿಲ್ಲ, ನಾವೂ ಅವಳನ್ನು ಪರೀಕ್ಷೆಗೊಡ್ಡುತ್ತಿರಲಿಲ್ಲ.
ಅಮ್ಮನ ಅಕರಾಸ್ಥೆಯ ಜಮೀನಿನಲ್ಲಿ ತಿರುಗಾಡಿದೆ. ತಿಳಿಸಾರನ್ನು ಲೋಟದಲ್ಲಿ ಸೊರಸೊರ ಶಬ್ದಮಾಡಿ ಕುಡಿದೆ. ಗಾಡ್ರೆಜ್ ಬೀರುವಿನ ಬಾಗಿಲು ತೆಗೆದು ಅಮ್ಮ ಜೋಡಿಸಿಟ್ಟ ಸೀರೆಗಳ ಮೇಲೆ ಪ್ರೀತಿಯಿಂದ ಕೈಯ್ಯಾಡಿಸಿದೆ. ಹಿತ್ತಲ ಬಾಗಿಲಲ್ಲಿದ್ದ ಕೈತೊಳೆವ ಸಿಂಕಿನ ಮೇಲ್ಭಾಗದ ಕನ್ನಡಿ ಪಳಪಳ ಹೊಳೆಯುತ್ತಿರುವುದ ನೋಡಿ ಬೆರಗಾದೆ. ಮೊದಲು ಯಾವತ್ತೂ ಈ ಕನ್ನಡಿಯ ಹೊಳಪು ನನ್ನ ಕಣ್ಣಿಗೆ ಬಿದ್ದದ್ದಕ್ಕೆ ಬೇಸರಪಟ್ಟೆ.
ನಾಳೆ ಬೆಳಗ್ಗೆ ಒತ್ತು ಶ್ಯಾವಿಗೆ ಮಾಡಲಾ ಎಂದು ಕೇಳಿದ ಅಮ್ಮ ನನ್ನ ಉತ್ತರವನ್ನು ಮೊದಲೇ ಊಹಿಸಿದವಳಂತೆ ಎದ್ದು ದೇವರಮನೆಯ ಪಕ್ಕದ ಪಡಸಾಲೆಯಲ್ಲಿ ಮಲಗಿದಳು. ಜಗಲಿಯಲ್ಲಿ ಟೀವಿ ಚಾನೆಲ್ ಬದಲಾಯಿಸುತ್ತ ಬಿದ್ದುಕೊಂಡೇ ಇದ್ದ ನಾನು ಏನೋ ನಿರ್ಧರಿಸಿದಂತೆ ಎದ್ದೆ. ಗಡಿಯಾರ ಹನ್ನೊಂದೂವರೆ ತೋರಿಸುತ್ತಿತ್ತು. ಬ್ಯಾಗಿನಲ್ಲಿದ್ದ ಸೀಕ್ರೆಟ್ ಸ್ಯಾಂಟಾ ಗಿಫ್ಟನ್ನು ಕವರಿನ ಸಮೇತ ತೆಗೆದು ಕೊಟ್ಟಿಗೆಯ ಪಕ್ಕ ಬಂದೆ. ಕೈಗೆ ಸಿಕ್ಕ ಕೋಲಿನ ಸಹಾಯದಿಂದ ಮಣ್ಣು ಕಲ್ಲು ಏನನ್ನೂ ಲೆಕ್ಕಿಸದೇ ಸಣ್ಣದೊಂದು ಗುದ್ದ ತೋಡಿ ಗಿಫ್ಟನ್ನು ಅದರೊಳಗಿಟ್ಟೆ. ಮೈ ಇದ್ದಕ್ಕಿದ್ದಂತೆ ಹಗುರಾದಂತಾಯಿತು. ಒನ್ನಮೂನೆ ಸ್ಖಲನದ ಸುಖ!
ಮತ್ತೆ ಜಗಲಿಗೆ ಬಂದು ಹಾಸಿಗೆಯ ಪಕ್ಕದಲ್ಲಿದ್ದ ಮೊಬೈಲನ್ನು ಎತ್ತಿಕೊಂಡು ಸನ್ಮುಕ್ತಾಳ ಸರ್ಜನ್ನರ ನಂಬರನ್ನು ಸೇವ್ ಮಾಡಿಕೊಂಡೆ. ಮೆಸೇಜ್ ಟೈಪ್ ಮಾಡತೊಡಗಿದೆ… `ಡಾಕ್, ದಿಸ್ ಇಸ್ ಸನ್ಮುಕ್ತಾಸ್ ಹಸ್ಬಂಡ್. ಐ ವಿಲ್ ಬೀ ಇನ್‌ಫ಼್ರಂಟ್ ಆಫ್ ದ ಥಿಯೇಟರ್ ಡ್ಯೂರಿಂಗ್ ದ ಸರ್ಜರಿ ಟುಮೊರೋ’
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ