Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ

mukkodlu village short story

 :: ಮೇ. ಕುಶ್ವಂತ್‌ ಕೋಳಿಬೈಲು

ಲಂಡನಿನ ಬಹುಮಹಡಿ ಕಟ್ಟಡವೊಂದರ ಕೊಠಡಿಯ ಕಿಟಕಿಯಿಂದ ಕಾಣುತ್ತಿದ್ದ ಥೇಮ್ಸ್ ನದಿಯ ಸೌಂದರ್ಯವನ್ನು ಸವಿಯುತ್ತಿದ್ದ ಡಾ ದಿಗಂತ್ ತಮ್ಮ ಚಿಂತನೆಗಳಲ್ಲಿ ಕಳೆದುಹೋಗಿದ್ದರು. ಮನುಷ್ಯ ಸಾಧನೆ ಮಾಡಿದಾಗಲೆಲ್ಲ ಆತನ ಮನಸ್ಸು ಆತ ಸವೆಸಿದ ಹಾದಿಯನ್ನು ಹಿಂದಿರುಗಿ ನೋಡುತ್ತದೆ. ಜೀವನದ ಹಾದಿಯಲ್ಲಿ ಪಟ್ಟ ಕಷ್ಟಗಳ ಕಹಿ ಅನುಭವಗಳು  ಕಾಲ ಮಾಸಿದಂತೆ ಸಾರ್ಥಕತೆಯ ಭಾವವನ್ನು ಕೊಡುತ್ತದೆ. ಡಾ ದಿಗಂತರ ಸುತ್ತ ಮುತ್ತ ಕುಳಿತ್ತಿದ್ದ ಯುರೋಪಿನ ವೈದ್ಯರುಗಳು ಕೂಡ ಡಾ ದಿಗಂತರಂತೆ  ತಾವು  ಕೋವಿಡ್ ವೈರಸ್ಸನ್ನು ಮಣಿಸಲು ಶ್ರಮಿಸಿದ  ಬಗ್ಗೆ  ಜೊತೆಗೆ ತಾವು ಕಂಡುಹಿಡಿದ ವ್ಯಾಕ್ಸಿನ್ ವಿಶ್ವವನ್ನು ಉಳಿಸಿದ ಬಗ್ಗೆ ಹೆಮ್ಮೆಯಿಂದ ಬೀಗುತ್ತಿದ್ದರು.  ಬ್ರಿಟಿಷರಿಗೆ ಸಮಯ ಸಮಯಕ್ಕೆ ಟೀ ಕುಡಿಯುವ ಶತಮಾನಗಳಷ್ಟು ಇತಿಹಾಸವಿರುವ ಚಟವು ಇಂದಿಗೂ ಕಡಿಮೆಯಾಗಿಲ್ಲ! ತನ್ನ ಮುಂದಿಟ್ಟಿದ್ದ ಏಲಕ್ಕಿಯ ಸುವಾಸನೆಯನ್ನು ಬೀರುವ ಟೀಯನ್ನು ಡಾ ದಿಗಂತ ದಿಟ್ಟಿಸುತ್ತಿದ್ದಂತೆ ಆ ಏಲಕ್ಕಿಯ ಸುವಾಸನೆಯು ಅವರನ್ನು ತಮ್ಮ  ಬಾಲ್ಯದ ದಿನಗಳ ನೆನಪುಗಳತ್ತ ಆಯಸ್ಕಾಂತದಂತೆ ಸೆಳೆಯಲು ಪ್ರಾರಂಭಿಸಿತು. ತನ್ನ ಭಾವನೆಗಳನ್ನು ಸೀಮಿತದಲ್ಲಿಡಲು ಪ್ರಯತ್ನಿಸುತ್ತಾ ಡಾ ದಿಗಂತ್  ಹಿರಿಯ ವಿಜ್ಞಾನಿಗಳು ಮತ್ತು ವಿಶ್ವದ ಖ್ಯಾತ ವೈದ್ಯರು ತುಂಬಿದ್ದ ಆ ಸಭೆಯಲ್ಲಿ ತಮ್ಮ ಮಾತನಾಡುವ ಸರದಿ ಬರುಲು ಕಾಯುತ್ತಿದ್ದರು. ತಮ್ಮ ಈ ಸಾಧನೆಯ ಹಾದಿಯಲ್ಲಿ ಬಂದ ಸವಾಲುಗಳ ಬಗ್ಗೆ ಮಾತನಾಡಲು ತಯಾರಾಗಿದ್ದರು.

ಅತ್ಯಂತ ಸೂಕ್ಷ್ಮ ಮನಸ್ಸಿನವರಾದ ಡಾ ದಿಗಂತ್ ತಮ್ಮ ವೈದ್ಯಕೀಯ ಕಾಲೇಜಿನ ದಿನಗಳಿಂದಲೇ ಸೂಕ್ಷ್ಮಾಣು ಜೀವಿಗಳ ಕುರಿತು ವಿಶೇಷ ಆಸಕ್ತಿ ತೆಳೆದವರು‌. ಮನುಕುಲವನ್ನು ವಿನಾಶದ ಅಂಚಿಗೆ ನೂಕಿದ ಸಿಡುಬು ಮತ್ತು ಸ್ಪ್ಯಾನಿಷ್ ಫ್ಲೂ ವೈರಸ್ಸುಗಳ ಬಗ್ಗೆ ಅಧ್ಯಯನ ಮಾಡುತ್ತಾ  ವೈರಾಣುಗಳು ಉಂಟು ಮಾಡುವ ಕಾಯಿಲೆಗಳ ವಿಭಾಗದಲ್ಲಿ ತಜ್ಞ ವೈದ್ಯರಾದವರು. ಮನುಷ್ಯನ ಮೂಗಿನಲ್ಲಿ, ಜಠರದಲ್ಲಿ ಮತ್ತು ದೇಹದ ವಿವಿಧ ಅಂಗಾಂಗದಲ್ಲಿ  ಇರುವ ಸೂಕ್ಷ್ಮಾಣು ಜೀವಿಗಳ ಬಗ್ಗೆ ಹಲವು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಸಂಶೋಧನೆಯನ್ನು ನಡೆಸಿದ್ದ ಡಾ ದಿಗಂತರನ್ನು ಯುರೋಪಿನ ರಾಷ್ಟ್ರಗಳು ಕೊರೊನಾ ವೈರಸ್ಸನ್ನು ನಿಯಂತ್ರಿಸಲು ನಿಯೋಜಿಸಿದ ತಂಡದ ಮುಖ್ಯಸ್ಥರನ್ನಾಗಿ ನೇಮಿಸಿದಾಗ ಅವರ ಸಹೋದ್ಯೋಗಿಗಳು ಹೆಮ್ಮೆ ಪಟ್ಟಿದ್ದರು. ಯೋಗ್ಯ ಮತ್ತು ಸಮರ್ಥ ವ್ಯಕ್ತಿಗೆ ಒಲಿದು ಬಂದ ಗೌರವವೆಂದು ಡಾ ದಿಗಂತರ ಅಡಿಯಲ್ಲಿ ತಯಾರಾದ ವೈದ್ಯರೆಲ್ಲರೂ ಸಂತಸ ಪಟ್ಟಿದ್ದರು. ವೈರಸ್ ಬಗ್ಗೆ ಸಂಶೋಧನೆ ಮಾಡುವ ಹೆಚ್ಚಿನ‌ ವೈದ್ಯರು ಮತ್ತು  ವಿಜ್ಞಾನಿಗಳು ತಮ್ಮ ಇಡೀ ಜೀವನವನ್ನು ಸಂಶೋಧನಾ ಕೇಂದ್ರಗಳಲ್ಲಿ ಕಳೆದು ಬಿಡುತ್ತಾರೆ ಮತ್ತು ಇವರ ಹೆಚ್ಚಿನ ಸಂಶೋಧನೆಗಳು ಇವರ ಮರಣದ ನಂತರ ಬೆಳಕಿಗೆ ಬರುವುದೂ ಇದೆ. ಆದರೆ ಡಾ ದಿಗಂತರಿಗೆ ಈ ಕೋವಿಡ್ ವೈರಾಣು ಸೃಷ್ಟಿಸಿದ ಬಿಕ್ಕಟ್ಟು ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸುವರ್ಣಾವಕಾಶವನ್ನು ಸೃಷ್ಟಿಸಿತ್ತು. ಅವರ ಸಂಶೋಧನೆಗಳ ಅನುಭವಗಳನ್ನು ಬಳಸಿಕೊಂಡು ಯುರೋಪಿನಲ್ಲಿ ಕೋವಿಡ್ ನಿಯಂತ್ರಿಸಿದ್ದು ಮತ್ತು ಲಸಿಕೆಗಳ ತಯಾರಿಗೆ ಅವರು ನೀಡಿದ ಸಲಹೆಗಳಿಂದ ಲಕ್ಷಾಂತರ ಜೀವಗಳು ಉಳಿದ ಕಾರಣ ಅಂದು ಡಾ ದಿಗಂತರನ್ನು ಅಭಿನಂದಿಸಲು ಬ್ರಿಟಿಷ್ ಪ್ರಧಾನಿಗಳೇ ಖುದ್ದಾಗಿ ಬಂದಿದ್ದರು‌. ಪ್ರಧಾನಿಗಳಿಂದ ಅಭಿನಂದನೆಗಳನ್ನು ಸ್ವೀಕರಿಸುತ್ತಾ ಮಾತನಾಡಿದ ಡಾ ದಿಗಂತ್ ತಮ್ಮ ತಂಡದ ಕಿರಿಯ ವಿಜ್ಞಾನಿಗಳನ್ನು ಹುರಿದುಂಬಿಸುವ ಸಲುವಾಗಿ  ಅತ್ಯಂತ ಆತ್ಮವಿಶ್ವಾಸದಿಂದ ಮಾತನಾಡಿದರು. ಇಂದಿನ ವೈಜ್ಞಾನಿಕ ಯುಗದಲ್ಲಿ ಯಾವುದೇ  ಹೊಸಾ ವೈರಸ್ ಹೊರಹೊಮ್ಮಿದರೂ ವೈದ್ಯ ವಿಜ್ಞಾನಿಗಳು ಅದನ್ನು ಕೆಲವೇ ದಿನಗಳಲ್ಲಿ ನಿಯಂತ್ರಿಸಲು ಶಕ್ತರು ಎಂದು ಹೇಳಿದಾಗ ಬ್ರಿಟನ್ ಪ್ರಧಾನಿಗಳು ಕೂಡ ತಲೆದೂಗಿದರು. ಕೊರೊನಾದಂತಹಾ ವೈರಸ್ಸನ್ನು ನಿಯಂತ್ರಿಸಿದ ವೈದ್ಯ ವಿಜ್ಞಾನಿಗಳಿಗೆ ಈ ಸೂಕ್ಷ್ಮಾಣು ಜೀವಿಗಳು ಮುಂದೆ ಯಾವುದೇ ಜೈವಿಕ ಬದಲಾವಣೆ ಮಾಡಿಕೊಂಡು ಬಂದರೂ ಅವನ್ನು  ಸಂಬಾಳಿಸುವ ಶಕ್ತಿಯಿದೆಯೆಂದು ಎಂದು ಹೇಳಿ ತಮ್ಮ ಸ್ಥಾನದಲ್ಲಿ ಕುಳಿತುಕೊಂಡು ಗೆಲುವಿನ ನಗು ಬೀರಿದರು. ನೂರಾರು ಕ್ಯಾಮರಾಗಳು ಡಾ ದಿಗಂತರ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಂತೆ ಅವರ ಆ ಗೆಲುವಿನ ನಗುವನ್ನು ವಿಶ್ವದ ಎಲ್ಲಾ ದೇಶಗಳ ದೃಶ್ಯ ವಾಹಿನಿಗಳಿಗೆ ಬಿತ್ತರಿಸಿದವು. ಏಲಕ್ಕಿ ಟೀಯನ್ನು ಮತ್ತೆ ಹೀರಲು ಶುರುಮಾಡಿದ ಡಾ ದಿಗಂತರನ್ನು ಈ ಬಾರಿ ಏಲಕ್ಕಿ ಸುವಾಸನೆಯು ಅವರ  ಬಾಲ್ಯದ ನೆನಪುಗಳಿಂದ ಹೊರಬರಲು ಬಿಡಲಿಲ್ಲ. ನೆನಪಿನಂಗಳದ ಪುಸ್ತಕದ ಪುಟಗಳು ತೆರೆದುಕೊಳ್ಳುತ್ತಿದ್ದಂತೆ ಕಾಲ ಹಿಂದಕ್ಕೆ ಓಡಲು ಪ್ರಾರಂಭಿಸಿತು.

ವರ್ಷಕ್ಕೆ ಇನ್ನೂರು ಇಂಚು ಮಳೆ ಸುರಿಯುವ ಮುಕ್ಕೋಡ್ಲು ಎಂಬ ಗ್ರಾಮ ಮಡಿಕೇರಿಯಿಂದ ಕೇವಲ ಹದಿನೈದು ಕಿಲೋಮೀಟರ್ ದೂರವಿದ್ದರೂ ಇಲ್ಲಿಗೆ ರಸ್ತೆ, ಕರೆಂಟು ಮತ್ತಿತರ ಸರಕಾರಿ ಸೌಲಭ್ಯಗಳು ಬಂದು ತಲುಪಲು ಬಹಳ ವರ್ಷಗಳು ಬೇಕಾಯಿತು. ಮುಕ್ಕೋಡ್ಲು ಗ್ರಾಮ ಮತ್ತು ಅಂಚೆ ಎಂಬ ಬೆರೆದು ಡಬ್ಬಿಗೆ ಹಾಕಿದ ಪತ್ರಗಳೂ ಆ ಊರಿಗೆ ಆಮೆಗತಿಯಲ್ಲಿ ಬಂದು ತಲುಪುತ್ತಿತ್ತು. ಡಾ ದಿಗಂತರ ಬಾಲ್ಯದ ಸವಿನೆನಪುಗಳನ್ನು ಜಾಲಾಡಿದರೆ ಮುಕ್ಕೋಡ್ಲು ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಂದು ತಲುಪುತ್ತಿದ್ದದ್ದು ಪ್ರತಿ ವರ್ಷದ ಮಳೆ ಮಾತ್ರ ಎಂಬ  ವಿಷಯವು ಹೊರಬರುತ್ತಿತ್ತು. ಪಶ್ಚಿಮ ಘಟ್ಟದ ಬೆಟ್ಟಸಾಲುಗಳ ನಡುವೆ ದಟ್ಟ ಕಾಡುಗಳಿಂದ ತುಂಬಿದ ಮುಕ್ಕೋಡ್ಲುವಿನಂತಹಾ ನೂರಾರು ಗ್ರಾಮಗಳು ಕೊಡಗಿನಲ್ಲಿ ದ್ವೀಪದಂತೆ ಇದ್ದವು. ಸಂಜೆ ಏಳುಗಂಟೆ ದೀಪ ಆರಿಸಿ ಮಲಗುತ್ತಿದ್ದ ರೈತಾಪಿ ಜನರು ಶ್ರಮಜೀವಿಗಳಾಗಿದ್ದು ಮುಂಜಾನೆ ಕೋಳಿ‌ ಕೂಗುವ ಸಮಯಕ್ಕೆ ಸುರಿವ ಮಳೆಯನ್ನು ಲೆಕ್ಕಿಸದೆ ತೋಟ ಗದ್ದೆಗಳಿಗೆ ತೆರಳುತ್ತಿದ್ದರು. ಹೆಚ್ಚಿನ‌‌ ಓದಿಗೆ ಅವಕಾಶಗಳು ಇಲ್ಲದ ಮತ್ತು ಬೆಟ್ಟಗುಡ್ಡಗಳನ್ನು ಹತ್ತಿ ಇಳಿದು ದೇಹವು ಗಟ್ಟಿ ಮುಟ್ಟಾಗಿದ್ದ ಸಾಹಸ ಪ್ರವೃತ್ತಿಯ ಒಂದಷ್ಟು ಯುವಕರು ಸೇನೆಗೆ ಸೇರಿಬಿಡುತ್ತಿದ್ದರು. ಜಿದ್ದಿಗೆ ಬಿದ್ದು ಮಿಲಿಟರಿ ಸೇರಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿ ಮತ್ತೆ ಊರಿಗೆ ಮರಳಿದವರ ಪೈಕಿ ಡಾ ದಿಗಂತರ ಅಪ್ಪ ಮುತ್ತಪ್ಪನವರೂ ಒಬ್ಬರಾಗಿದ್ದರು. ನಿವೃತ್ತಿಯ ನಂತರ ಅವರು ಮುಕ್ಕೋಡ್ಲುವಿನಲ್ಲಿ ತಮಗೆ ಬಂದ  ಪಿತ್ರಾರ್ಜಿತ ಆಸ್ತಿಯನ್ನು ಸರ್ವೆ ಮಾಡಿಸಿ, ಬೇಲಿ ಹಾಕಿದ ನಂತರ ಆ ತೋಟಕ್ಕೆ ಸಂಪಿಗೆಕಾಡು ಎಸ್ಟೇಟ್ ಎಂಬ ಬೋರ್ಡ್ ಹಾಕಿಸಿಬಿಟ್ಟರು. ದಾಯಾದಿಗಳು ಅಲ್ಪಸ್ವಲ್ಪ ಆಸ್ತಿ ಕಬಳಿಸಿದ್ದರೂ ಎರಡು ಬೆಟ್ಟಗಳ ನಡುವೆ ಸಂಪಿಗೆ ಮರಗಳು ತುಂಬಿದ್ದ  ಫಲವತ್ತಾದ ಮೂವತ್ತು ಎಕ್ರೆ ಭೂಮಿಯಲ್ಲಿ ಡಾ ದಿಗಂತರು ತಮ್ಮ ಬಾಲ್ಯವನ್ನು ಕಳೆದಿದ್ದರು. ಮಳೆಗಾಲದ ಮುನ್ಸೂಚನೆಯನ್ನು ಮೇ ತಿಂಗಳಲ್ಲಿ ನೀಡುತ್ತಿದ್ದ ಓಡುವ ಮೋಡಗಳನ್ನು ನೋಡುತ್ತಾ ನಿಂತರೆ ಅವರ ಪುಟ್ಟ ಕಾಲಿಗೆ ಜಿಗಣೆ ಹತ್ತುತ್ತಿದ್ದದ್ದು ಗೊತ್ತಾಗುತ್ತಿರಲಿಲ್ಲ. ಮಳೆಗಾಲ ಶುರುವಾಗುತ್ತಿದ್ದಂತೆ ಹತ್ತಾರು ಜನ ಕೆಲಸದವರು ಬೆತ್ತದ ಕುಕ್ಕೆಗಳನ್ನು  ಹಿಡಿದುಕೊಂಡು ಅವರ ಮನೆಯಂಗಳಕ್ಕೆ ಮುಂಜಾನೆ  ಹಾಜರಾಗುತ್ತಿದ್ದರು. ಕೊಡೆಗಳು ಮತ್ತು ಪ್ಲಾಸ್ಟಿಕ್ ಹಳ್ಳಿಗಾಡನ್ನು ನಿಧಾನಕ್ಕೆ ಪ್ರವೇಶಿಸುತ್ತಿದ್ದ ಆ ಕಾಲದಲ್ಲಿ ಬಿದಿರಿನಿಂದ ಮಾಡಿದ ಗೊರಗಗಳನ್ನು ಏರಿಸಿಕೊಂಡ ಆ ಎಲಕ್ಕಿ ಕುಯ್ಯುವವರಿಗೆ  ತಲೆಯಿಂದ ಮೊಣಕಾಲಿನ ತನಕ ಮಳೆಯಿಂದ ರಕ್ಷಣೆ ಸಿಗುತ್ತಿತ್ತು. ಧೋ ಎಂದು ಸುರಿವ ಜುಲೈ  ಮಳೆಗೆ ಈ ಜನರು ಏಲಕ್ಕಿ ಹಣ್ಣುಗಳನ್ನು ಕುಯ್ಯಲು ಶುರುಮಾಡಿದರೆ ಸಂಪೂರ್ಣ ಕುಯ್ಲು ಮುಗಿಯುವಾಗ ಸೆಪ್ಟೆಂಬರ್ ತಿಂಗಳಾಗಿರುತ್ತಿತ್ತು. ಕಾಲಿಗೆ ಜಿಗಣೆ ಕಚ್ಚಿಸಿಕೊಳ್ಳುತ್ತಾ ಏಲಕ್ಕಿ ಕುಯ್ಯುವವರ ಹಿಂದೆ ಮುಂದೆ ಸುತ್ತುವುದು ಡಾ  ದಿಗಂತರಿಗೆ ಬಾಲ್ಯದಲ್ಲಿ  ನಿತ್ಯದ ಕಾಯಕವಾಗಿತ್ತು. ಮನೆಯ ಅಡುಗೆಮನೆಗೆ ತಾಗಿಕೊಂಡಿದ್ದ ಏಲಕ್ಕಿ ಗೂಡುಗಳ ಒಳಗೆ ಮುತ್ತಪ್ಪನವರು ಏಲಕ್ಕಿ ಒಣಗಿಸುವಾಗ ದಿಗಂತ್ ಅಪ್ಪನ ಜೊತೆಗೆ ಕುಕ್ಕರುಕಾಲು ಹಾಕಿಕೊಂಡು  ಕುಳಿತು ಏಲಕ್ಕಿ ಗೂಡಿನ ಬಿಸಿಯನ್ನು ಅನುಭವಿಸುತ್ತಿದ್ದರು. ಏಲಕ್ಕಿ ಹಣ್ಣು ಒಣಗಿದ ನಂತರ ಅದನ್ನು ಪಾಲಿತೀನ್ ಚೀಲಗಳ ಒಳೆಗಡೆ  ತುಂಬಿಸಿ ಕಪಾಟುಗಳ ಒಳಗೆ ಭದ್ರವಾಗಿಡುತ್ತಿದ್ದ ಅಪ್ಪನ ಕಣ್ಣುಗಳಲ್ಲಿದ್ದ ಸಾಧನೆಯ ಕುಷಿಯನ್ನು ಪುಟ್ಡ ದಿಗಂತ್ ನೋಡುತ್ತಿದ್ದರು. ಏಲಕ್ಕಿ ಹೂವಿನ ಮಕರಂದವನ್ನು ಹೀರುತ್ತಿದ್ದ ಜೇನು ನೊಣಗಳು ಆ ಸಮಯದಲ್ಲಿ ಉತ್ಪಾದಿಸುತ್ತಿದ್ದ  ಜೇನಿನ‌ ಸ್ವಾದವು  ವಿಭಿನ್ನವಾಗಿರುತ್ತಿತ್ತು.  ಎಪ್ಪತ್ತು  ಮತ್ತು ಎಂಬತ್ತರ ದಶಕದಲ್ಲಿ ಸ್ವಾಭಾವಿಕವಾಗಿ ಊರಿನ ಜನರು ಬೆಳೆಯುತ್ತಿದ್ದ ಏಲಕ್ಕಿ ರೈತರ ಕೈ ಹಿಡಿದ ಕಾರಣದಿಂದ ಊರಿನ ಸ್ವಲ್ಪ ಜನ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಹೊಸ್ತಿಲು ತುಳಿದಿದ್ದರು. ಪ್ರಪಂಚದಲ್ಲಿ ಏಲಕ್ಕಿ ಬೆಳೆಗೆ ಬಂಗಾರದ ಬೆಲೆ ಬಂದದ್ದು ಮತ್ತು ಕೊಡಗಿನ ಜೇನಿಗೆ ಮಾರುಕಟ್ಟೆ ಸೃಷ್ಟಿಯಾದದ್ದು  ಮುಕ್ಕೋಡ್ಲುವಿನಂತಹಾ ಹತ್ತಾರು ಗ್ರಾಮಗಳಲ್ಲಿದ್ದ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಶಕ್ತಿ ಒದಗಿಸಿದ್ದನ್ನು ಡಾ ದಿಗಂತರು ನೋಡಿಕೊಂಡು ಬೆಳೆದವರು.

ಕಾಲಕ್ರಮೇಣ ಆ ಊರಿನ ಮಣ್ಣಿನ ರಸ್ತೆಗಳ ಮೇಲೆ ಒಂದೆರಡು ಜೀಪುಗಳು ಓಡಾಡಲು ತೊಡಗಿದವು ಮತ್ತು ಜನರ ಜೇಬಿನಲ್ಲಿ ಸ್ವಲ ಹಣ ಓಡಾಡತೊಡಗಿದಂತೆ ಊರಿನ ಕೆಲವು ಹುಲ್ಲು ಹೊದಿಸಿದ್ದ ಮನೆಗಳ ಮೇಲೆ ಮಂಗಳೂರು ಹಂಚುಗಳು ಬಂದವು. ಪಶ್ಚಿಮ ಘಟ್ಟಗಳ ಫಲವತ್ತಾದ ಆ ಮಣ್ಣಿನಲ್ಲಿ ಎಪ್ಪತ್ತು ಎಂಬತ್ತರ ದಶಕದಲ್ಲಿ ಏಲಕ್ಕಿಯು ಯಾವ ರಸಗೊಬ್ಬರ ಮತ್ತು ಆರೈಕೆಯ ಅಗತ್ಯವಿಲ್ಲದೆ ಸಮೃದ್ಧವಾಗಿ ಬೆಳೆದು ಅದೆಷ್ಟೋ ರೈತರ ಮನೆ ಮನಗಳನ್ನು ಬೆಳಗಿದ್ದವು.  ಜೇನು ದುಂಬಿಗಳ ಝೇಂಕಾರದಿಂದ ತುಂಬಿದ್ದ  ಏಲಕ್ಕಿ ತೋಟಗಳಲ್ಲಿ ಹೆಜ್ಜೇನು ಗೂಡುಕಟ್ಟಿರುತ್ತಿದ್ದ ಕಾರಣ ಸಾವಿರಾರು ಕೆಜಿ ಜೇನು ಸ್ವಾಭಾವಿಕವಾಗಿ  ಬೆಳೆಯುತ್ತಿತ್ತು. ಜೇನಿನ ನೊಣಗಳು ಪರಾಗಸ್ಪರ್ಶದ ಗುತ್ತಿಗೆಯನ್ನು ತೆಗೆದುಕೊಂಡ ಕಾರ್ಮಿಕರಂತೆ ಶ್ರಮದಿಂದ ನಿರಂತರವಾಗಿ ದುಡಿಯುತ್ತಿದ್ದದ್ದನು ನೋಡುತ್ತಾ ಪುಟ್ಟ ದಿಗಂತ್ ಕೂಡ  ಶ್ರಮವಹಿಸಿ ಓದುತ್ತಾ ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದರು.  ಏಲಕ್ಕಿ ದುಡ್ಡು ಓಡಾಡುತ್ತಿದ್ದ ಕಾರಣ ದಿಗಂತರನ್ನು ಪಿಯುಸಿ ಮಾಡಲು ಮಂಗಳೂರಿನ ಕಾಲೇಜು ಸೇರಿಸಿದ್ದರು. ನಂತರದ ವರ್ಷಗಳಲ್ಲಿ ವೈದ್ಯಕೀಯ ಪದವಿಗಾಗಿ ಬೆಂಗಳೂರಿಗೆ ಕಾಲಿಟ್ಟ ದಿಗಂತನಿಗೆ ಹೆಚ್ಚಿನ‌  ವಿದ್ಯಾಭ್ಯಾಸ ಕೊಡಿಸಲು ಮುಕ್ಕೋಡ್ಲುವಿನ  ಸಂಪಿಗೆಕಾಡು ಎಸ್ಟೇಟಿನ ಏಲಕ್ಕಿ ತೋಟದೊಳಗೆ ತಂದೆ ಮುತ್ತಣ್ಣ ಹೆಚ್ಚು ದುಡಿಮೆ ಮಾಡತೊಡಗಿದರು. ಮುಕ್ಕೋಡ್ಲುವಿನ ಸಂಪಿಕೆಕಾಡು ಎಸ್ಟೇಟಿನ ಏಲಕ್ಕಿಗೂಡಿನಿಂದ ಹೊರಬರುತ್ತಿದ್ದ ಏಲಕ್ಕಿ ಮೂಟೆಗಳು ತಮ್ಮ ಗುಣಮಟ್ಟದ ಕಾರಣದಿಂದ ವಿದೇಶಕ್ಕೆ ರಫ್ತಾದಂತೆ ಪ್ರತಿಭಾವಂತ ವೈದ್ಯನಾಗಿ ಹೊರಹೊಮ್ಮಿದ  ಡಾ ದಿಗಂತ್ ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಯುರೋಪಿನ‌ ದೇಶಗಳಲ್ಲಿ ಒಂದಷ್ಟು ವರ್ಷ ಓಡಾಡಿ ನಂತರ ಲಂಡನ್ ನಿವಾಸಿಯಾಗಿ ಬಿಟ್ಟರು. ಅಪ್ಪನ ಸಾವಿಗೆ ಅತಿಥಿಯಂತೆ ಬಂದುಹೋದ ನಂತರ ಸಂಪಿಗೆಕಾಡು ಎಸ್ಟೇಟನ್ನು ದಾಯದಿಗಳ ಸುಪರ್ದಿಗೆ ಒಪ್ಪಿಸಿ ಬರಬರುತ್ತಾ ಅವರ ಸಂಪರ್ಕದಿಂದಲೂ ಡಾ ದಿಗಂತ್ ದೂರವಾಗುತ್ತಾ ಹೋದರು. ಇಂಗ್ಲೆಂಡಿನ ಹೆಣ್ಣು ಮಗಳನ್ನು ಮದುವೆಯಾದ ನಂತರ ಭಾರತದಿಂದ ಮತ್ತಷ್ಟು ಮಾನಸಿಕವಾಗಿ ದೂರವಾದ ಡಾ ದಿಗಂತರಿಗೆ ಮತ್ತೆ ಊರಿಗೆ ಬರುವ ಮತ್ತು ಅಲ್ಲಿಯ ಜನರ ಜೊತೆಗೆ ಸಂಬಂಧ ಉಳಿಸಿಕೊಳ್ಳುವ ಯಾವ ಅಗತ್ಯತೆಯೂ ಕಂಡುಬರಲಿಲ್ಲ. ತಾವು ಹುಟ್ಟಿ ಬೆಳೆದ ಊರಾದ ಮುಕ್ಕೋಡ್ಲುವಿನ ಜಡಿಮಳೆ ಮತ್ತು ಏಲಕ್ಕಿಯ ಕಂಪುನ್ನು ಸವಿದ ಸಂಪಿಗೆಕಾಡು ಎಸ್ಟೇಟಿನ ಬಾಲ್ಯದ ದಿನಗಳು  ಈಗ ಡಾ ದಿಗಂತರ ಮನದಲ್ಲಿ  ಸವಿನೆನಪಾಗಿ ಉಳಿದಿತ್ತು.

ಮುಕ್ಕೋಡ್ಲುವಿನ ಕೆಲವು ಕುಡುಕರು ಮಾತ್ರ ಎಣ್ಣೆ ಏಟು ಮಿತಿಮೀರಿದಾಗ ಇಂಗ್ಲೆಂಡಿನಿಂದ ತಮಗೆ ಡಾಕ್ಟರು ಫೋನು ಮಾಡಿದ್ದರೆಂದೂ ಮತ್ತು ಅವರು ಮುಂದಿನ ತಿಂಗಳು ಊರಿಗೆ  ಬರುತ್ತಾರೆಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮಜಾ ತೆಗೆದುಕೊಳ್ಳುತ್ತಿದ್ದರು. ಸಂಪಿಗೆಕಾಡು ಎಸ್ಟೇಟನ್ನು ಅನುಭವಿಸುತ್ತಿದ್ದ ಅವರ ಕುಟುಂಬಸ್ಥರು ಆತಂಗಕ್ಕೆ ಒಳಗಾಗುತ್ತಿದ್ದದ್ದು ಬಿಟ್ಟರೆ ಉಳಿದ ಊರಿನವರು ಕುಡುಕರ ಹೇಳಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಕೆಲವು  ಕಿಡಿಗೇಡಿಗಳು ಸಂಪಿಕೆಕಾಡು ಎಸ್ಟೇಟಿನೊಳಗೆ ಅಳಿದುಳಿದ   ಕಾಡುಬೆಕ್ಕು ಮತ್ತು ಕಾಡುಹಂದಿಗಳನ್ನು ಬೇಟೆಯಾಡುವ ಅನುಮತಿಯನ್ನು ನಾವು ಡಾಕ್ಟರಿಂದ ಪಡೆದಿದ್ದೇವೆಂದು ಹೇಳಿಕೊಂಡು ಊರಿನಲ್ಲಿ ಓಡಾಡುತ್ತಿದ್ದರು. ರಾತ್ರಿಯ ವೇಳೆ ಕೇಳಿಬರುತ್ತಿದ್ದ ಒಂದಡರಡು ಗುಂಡಿನ ಶಬ್ದಗಳು ಮಾತ್ರ ಯಾರ ಕೋವಿಯಿಂದ ಸಿಡಿದವು ಎಂಬುದು ಮಾತ್ರ  ಇಂದಿಗೂ ನಿಗೂಢವಾಗಿತ್ತು. ಡಾ ದಿಗಂತರ ಪಾಲಿಗೆ ಮುಕ್ಕೋಡ್ಲು ಗ್ರಾಮವು ಕೇವಲ ನೆನಪಾಗಿ ಉಳಿದಂತೆ ಮುಕ್ಕೋಡ್ಲುವಿನ ಬಹಳಷ್ಟು ಹಿರಿಯರ ಪಾಲಿಗೆ  ತಾವು ಎತ್ತಿ ಆಡಿಸಿದ್ದ  ಮಿಲಿಟ್ರಿ ನಿವೃತ್ತ ಮುತ್ತಣ್ಣ ಮಗ ದಿಗಂತನೂ ಕೇವಲ ನೆನಪಾಗಿ ಹೋಗಿದ್ದ. ಡಾ ದಿಗಂತ್ ಲಂಡನ್ ಸೇರಿದ ಕಳೆದ ಎರಡು ಮೂರು ದಶಕಗಳಲ್ಲಿ ಕಾವೇರಿ ಮತ್ತು ಥೇಮ್ಸ್ ನದಿಯಲ್ಲಿ ಬಹಳಷ್ಟು ನೀರು ಹರಿದು ಸಾಗರವನ್ನು ಸೇರಿತ್ತು ಮತ್ತು  ಜಾಗತೀಕರಣದ ಗಾಳಿ ಬೀಸಿದ ಕಾರಣ ಪ್ರಪಂಚವೇ ಬಹಳಷ್ಟು ಬದಲಾಗಿತ್ತು.

ಡಾ ದಿಗಂತರ ಸಾಧನೆಯ ಸುದ್ದಿಗಳು ಮಾಹಿತಿ‌ ತಂತ್ರಜ್ಞಾನದ ಈ ಯುಗದಲ್ಲಿ ಲಂಡನಿನಿಂದ ಕೊಡಗಿಗೆ ಬರಲು ಜಾಸ್ತಿ ಸಮಯ ಬೇಕಾಗಲಿಲ್ಲ. ಯುರೋಪಿನಲ್ಲಿ ಕೋವಿಡ್  ವೈರಾಣುಗಳನ್ನು ತಡೆಗಟ್ಟಲು ನೇತೃತ್ವ ವಹಿಸಿದ್ದ ಭಾರತೀಯ ಮೂಲದ ವೈದ್ಯರಾದ ಡಾ ದಿಗಂತರನ್ನು ಭಾರತದ ಸರಕಾರವೂ ಸನ್ಮಾನಿಸಲು ನಿರ್ಧರಿಸಿದ ಕಾರಣ ಡಾ ದಿಗಂತ್  ಸುಮಾರು ಎರಡು ದಶಕಗಳ ನಂತರ ಮತ್ತೆ ಭಾರತಕ್ಕೆ ಹೊರಟು ನಿಂತರು. ವೈರಾಣುಗಳು ವಿಷಯದಲ್ಲಿ ತಾನು ಮಾಡಿದ ಬಹಳಷ್ಟು ಸಂಶೋಧನೆಗಳನ್ನು ಬರೆದು ಪ್ರಕಟಿಸುವ ಜವಾಬ್ದಾರಿಯಿದ್ದ ಅವರಿಗೆ ಈ ಬಾರಿ  ತಮ್ಮ ಹುಟ್ಟೂರಾದ ಮುಕ್ಕೋಡ್ಲುವಿಗೆ ಬಂದು ಸಂಪಿಕೆಕಾಡು ಎಸ್ಟೇಟನ್ನು ನೋಡಲು ಸಾಧ್ಯವಾಗದಿದ್ದರೆ ಮುಂದಿನ ವರ್ಷಗಳಲ್ಲಿ ಸಮಯ ಸಿಗುವುದು ಕಷ್ಟವಾಗಬಹುದೆಂದು ಅನಿಸಿತ್ತು. ಈ ಬಾರಿ ಡಾ ದಿಗಂತರು ಮುಕ್ಕೋಡ್ಲುವಿಗೆ ಬರುತ್ತಿರುವ ವಿಚಾರವನ್ನು ತಿಳಿದ  ಊರಿನ ಸಂಭಾವಿತರು  “ಲಂಡನಿಂದ ಮುತ್ತಣ್ಣನ ಮಗ ಡಾ ದಿಗಂತ್ ಬರುತ್ತಿದ್ದಾರಂತೆ” ಎಂದು ಊರೆಲ್ಲಾ ಟಾಮ್ ಟಾಮ್ ಮಾಡಿದರು. ಕಳೆದ ಕೆಲವು ದಶಕಗಳಲ್ಲಿ ಬದಲಾಗಿದ್ದ ಮುಕ್ಕೋಡ್ಲುವಿನ ಹೆಚ್ಚಿನ ಮನೆಗಳಿಗೆ ಕಾಂಕ್ರೀಟ್ ರಸ್ತೆಗಳು ಮತ್ತು ಕರೆಂಟು ಲೈನುಗಳು ತಲುಪಿದ್ದವು. ಮುಕ್ಕೋಡ್ಲುವಿನಲ್ಲಿ ಡಾ ದಿಗಂತರನ್ನು ಸ್ವಾಗತಿಸಲು ಸ್ವಾಗತ ಸಮಿತಿಯೂ ಊರ ಹಿರಿಯರ ನೇತೃತ್ವದಲ್ಲಿ ತಯಾರಾಗಿತ್ತು.

ಭಾರತಕ್ಕೆ ಬಂದ ಡಾ ದಿಗಂತ್ ಕುಶಾಲನಗರದ ಮೂಲಕ ಕೊಡಗು ಪ್ರವೇಶಿಸಿದಾಗ ಕಾವೇರಿ ಹೊಳೆಯನ್ನು ನೋಡಿ ತಾಯಿ ಕಾವೇರಮ್ಮನಿಗೆ ಮನಸ್ಸಿನಲ್ಲಿ ನಮಿಸಿದರು. ರಸ್ತೆಯ ಎರಡು ಇಕ್ಕೆಲಗಳಲ್ಲಿ ಅಣಬೆಗಳಂತೆ ಎದ್ದು ನಿಂತಿರುವ ಕೂರ್ಗ್ ಹನಿ ಮತ್ತು ಕೂರ್ಗ್ ಸ್ಪೈಸಸ್ ಅಂಗಡಿಗಳ ಸಂಖೆಗಳನ್ನು ಗಮನಿಸುತ್ತಿದ್ದಂತೆ ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಏಲಕ್ಕಿ ಮತ್ತು ಜೇನು ಕೃಷಿಯ ಕ್ರಾಂತಿ ನಡೆದಿದೆ ಎಂದು ಮನಸ್ಸಿನೊಳಗೆ ಡಾ ದಿಗಂತ್  ಸಂತೋಷ ಪಟ್ಟರು. ಬಾಲ್ಯದ ದಿನಗಳಲ್ಲಿ ಬಸ್ಸಿನ ಕಿಟಕಿ ಬಳಿಯ ಸೀಟಿನಲ್ಲಿ ಕುಳಿತು ತಂಗಾಳಿಯನ್ನು ಸವಿಯುತ್ತಾ ಕೊಡಗಿನ ದಟ್ಟ ಅರಣ್ಯದ ಸಂಪತ್ತನ್ನು ನೋಡಿ  ಕಣ್ಣು ತಂಪು ಮಾಡಿಕೊಳ್ಳುತ್ತಿದ್ದ ದಿನಗಳು ನೆನಪಾದವು. ಅಪ್ಪ ತಮ್ಮ ಹಳೇ ಜೀಪಿನಲ್ಲಿ ದಿಗಂತರನ್ನು ಕೂರಿಸಿಕೊಂಡು  ಶುಕ್ರವಾರದ  ಮಡಿಕೇರಿ ಸಂತೆಗೆ ಕರೆದುಕೊಂಡು ಹೋಗಿ ಏಲಕ್ಕಿ ಮಮ್ಮದೆಯ ಅಂಗಡಿಯಲ್ಲಿ ವ್ಯಾಪಾರ ಕುದುರಿಸಿದ ಬಳಿಕ ಈಸ್ಟೆಂಡ್ ಹೋಟೇಲಿನಲ್ಲಿ ಊಟ ಮಾಡಿಸುತ್ತಿದ್ದರು. ಮಡಿಕೇರಿ ಬಸ್ ಸ್ಟ್ಯಾಂಡ್ ಬಳಿಯಿದ್ದ ಏಲಕ್ಕಿ ಮಮ್ಮದೆಯ ಅಂಗಡಿಯಲ್ಲಿ ಆತ ಏಲಕ್ಕಿಯ ಬಣ್ಣ ಮತ್ತು ಗಾತ್ರವನ್ನು ನೋಡಿ ದರವನ್ನು ನಿಗದಿಪಡಿಸುತ್ತಿದ್ದ ಆ ದಿನಗಳು ದಿಗಂತರಿಗೆ ನೆನಪಾದವು. ಮುಕ್ಕೋಡ್ಲು ಗ್ರಾಮಕ್ಕೆ ಬಂದಿಳಿದ ಡಾ ದಿಗಂತರಿಗೆ ತಮ್ಮ ಊರಿನ ಚಿತ್ರಣವೇ ಸಂಪೂರ್ಣವಾಗಿ ಬದಲಾದಂತೆ ಕಂಡಿತ್ತು. ಸಾವಿರಾರು ಕೆಜಿ ಏಲಕ್ಕಿ ಬೆಳೆಯುತ್ತಿದ್ದ ಬೆಟ್ಟಗಳು ಬೋಳು ಬೋಳಾಗಿ ಅಲ್ಲಿ ರೋಬಸ್ಟಾ ಕಾಫಿ ಗಿಡಗಳು ಮೂಡಿದ್ದವು. ರಸ್ತೆಯ  ಅಂಚಿನಲ್ಲಿ ತೆಲೆ ಎತ್ತಿರುವ ಊರಿನ ಅನೇಕ ಹೊಸಾ ಮನೆಗಳು ಊರಿನ ಅಂದವನ್ನು ಹೆಚ್ಚು ಮಾಡಿದ್ದವು. ಜೇನು ನೊಣಗಳು ಸುತ್ತ ಮುತ್ತಲಿನ ತೋಟಗಳಿಂದ  ಝೇಂಕರಿಸುವ ಸದ್ದು ದೂರ ದೂರಕ್ಕೂ ಕೇಳಲು ಸಿಗಲಿಲ್ಲ. ಊರಿನ ಹಿರಿಯರಿಗೆ ವಂದಿಸಿ ಗ್ರಾಮ ದೇವತೆಗೆ ನಮಿಸಿ ಡಾ ದಿಗಂತ್ ತನ್ನ ಸ್ವಂತ ಮಣ್ಣಾದ ಸಂಪಿಗೆಕಾಡು ಎಸ್ಟೇಟಿನ ಗೇಟಿನೊಳಗೆ ಬಂದಾಗ ಅಲ್ಲಿಯ ಚಿತ್ರಣವು ಸಂಪೂರ್ಣವಾಗಿ ಬದಲಾಗಿತ್ತು. ಸಂಪಿಗೆಕಾಡು ಎಸ್ಟೇಟಿನ ಸಂಪಿಗೆ ಮರಗಳು ಟಿಂಬರ್ ವ್ಯಾಪಾರಿಗಳ ಪಾಲಾಗಿ  ರೋಬಸ್ಟಾ ಮತ್ತು ಅರೇಬಿಕಾ ತಳಿಯ ಕಾಫಿ ಗಿಡಗಳು ಅಲ್ಲಿ ಕಂಗೊಳಿಸುತ್ತಿದ್ದವು. ತೋಟದ ಮನೆಯ ಏಲಕ್ಕಿ ಗೂಡನ್ನು ಬಿಚ್ಚಿ ಅದನ್ನು ಸ್ಟೋರ್ ರೂಮಾಗಿ ಪರಿವರ್ತಿಸಿದ್ದರು. ಏಲಕ್ಕಿಯ ಸುವಾಸನೆ ಮತ್ತು ಜೇನು ದುಂಬಿಗಳ ಝೇಂಕಾರದ ಗುಂಗಿನಲ್ಲಿ ಹುಟ್ಟೂರಿಗೆ ಮರಳಿದ್ದ ಡಾ ದಿಗಂತನನ್ನು ಸಂಪಿಗೆ ಕಾಡು ಎಸ್ಟೇಟಿನ ಲೈನು ಮನೆಗಳಲ್ಲಿ ಕೇಜಿ ಲೆಕ್ಕದಲ್ಲಿ ಕಾಫಿ ಕುಯ್ಯಲು ಕೊಡಗಿಗೆ ಬಂದಿದ್ದ ಅಸ್ಸಾಮಿ ಕಾರ್ಮಿಕರ ಅರೆ ಬರೆ ಹಿಂದಿ ಭಾಷೆ ಸ್ವಾಗತಿಸಿತ್ತು. ವಿಷಾದದ ನಿಟ್ಟುಸಿರಿನ ಜೊತೆ ಅಂಗಳದಲ್ಲಿ ಕುರ್ಚಿ ಹಾಕಿ ತಡ ರಾತ್ರಿಯ ತನಕ ವಿಸ್ಕಿ ಹೀರುತ್ತಾ ಕುಳಿತ ಡಾ ದಿಗಂತ್ ತೋಟದೊಳಗಿನಿಂದ ಕೇಳಿ ಬರುತ್ತಿದ್ದ ಕೀಟಗಳ ಸಂಗೀತ ಕಚೇರಿಗೆ ತಲೆದೂಗುತ್ತಿದ್ದರು..

ಎರಡು ಪೀಳಿಗೆಯ ಜನರನ್ನು ಬಡತನದಿಂದ ಮೇಲೆತ್ತಿದ ಏಲಕ್ಕಿ ಇಂದು ಕೊಡಗಿನ ಬೆಟ್ಟಸಾಲುಗಳಿಂದ ಹೇಗೆ ಅಳಿದು ಹೋಯಿತು ಮತ್ತು ಕೊಡಗಿನ ಜೇನಿಗೆ ಈ ಸ್ಥಿತಿ ಏಕೆ ಬಂತ್ತೆಂದು ಮರುದಿನ ಮುಂಜಾನೆ ಎಚ್ಚರವಾದಾಗಿನಿಂದ ಡಾ ದಿಗಂತ್  ಯೋಚಿಸಲಾರಂಭಿಸಿದರು. ಹೃದಯಕ್ಕೆ ಹತ್ತಿರವಾಗಿದ್ದ ಏನನ್ನೋ ಕಳೆದುಕೊಂಡಿರುವೆನೆಂಬ ತೊಳಲಾಟದಿಂದ ಡಾ ದಿಗಂತ್  ತನ್ನ ಅಪ್ಪನ ಸಮಕಾಲೀನರಾದ ಒಂದೆರಡು ಹಿರಿತಲೆಗಳ ಮನೆಗೆ ಹೋಗಿ  ಮಾತನಾಡುತ್ತಾ ಕುಳಿತುಕೊಂಡರು. ತೊಂಬತ್ತರ ದಶಕದ ಅಂತ್ಯದಲ್ಲಿ ಬಂದ ಕಟ್ಟೆರೋಗವು ಏಲಕ್ಕಿ‌ ಕೃಷಿಯನ್ನು ಬಲಿ ತೆಗೆದುಕೊಂಡ ವಿಚಾರಗಳು  ಮತ್ತು ಕಟ್ಟೆ ರೋಗವು ತೋಟದಿಂದ ತೋಟಕ್ಕೆ ಗಾಳಿಯಿಂದ ಹರಡಿ ಇಡೀ ಊರಿನ ಏಲಕ್ಕಿ ಕೃಷಿಗೆ ಇತಿಶ್ರೀ ಹಾಡಿದ ವಿವರಗಳು  ಡಾ ದಿಗಂತನ ಗಮನಕ್ಕೆ ಬಂದವು. ಕೃಷಿ ವಿಜ್ಞಾನಿಗಳ ಹಿಂದೆ ಮತ್ತು ಕೃಷಿ ಇಲಾಖೆಯ ಕಚೇರಿಗಳಿಗೆ ಅಲೆದಾಡಿ ಸುಸ್ತಾದ ಊರಿನ ಅನೇಕ ಹಿರಿಯ ಕೃಷಿಕರು ತಮ್ಮ ನೋವನ್ನು ತೋಡಿಕೊಂಡರು. ಏಲಕ್ಕಿ ಬೆಳೆ ಅಳಿದ ಕಾರಣ ಜನರು ಮರಗಳನ್ನು ಕಡಿದು ಕಾಫಿ ಗಿಡಗಳನ್ನು ಹಾಕಲು ಶುರುಮಾಡಿದ ಕೆಲವೇ ವರ್ಷಗಳಲ್ಲಿ ಕೊಡಗಿನ ಜೇನು ನೊಣಗಳ ಸಂತತಿ ಕ್ಷೀಣಿಸುತ್ತಾ ಹೋಗಿ ಸಾವಿರಾರು ಕೆಜಿ ಜೇನು ಬೆಳೆಯುತ್ತಿದ್ದ ಮನೆಯವರೂ  ಈಗ ಒಂದೆರಡು ಬಾಟಲಿ  ಶುದ್ಧ ಸ್ಥಳೀಯ ಜೇನು ಸಂಗ್ರಹಿಸಿ ಔಷಧಿಯಂತೆ ಬಳಸುತ್ತಿದ್ದರು. ಕೊಡಗಿ‌ನ ಏಲಕ್ಕಿ ಮತ್ತು ಜೇನಿಗೆ ಈ ಸ್ಥಿತಿ ಬರಲು ಬದಲಾದ ಹವಾಮಾನ‌ ಕಾರಣವೆಂದು ಹೇಳಿಕೊಂಡು ಓಡಾಡುತ್ತಿದ್ದ ಸ್ವಯಂಘೋಷಿತ ಪರಿಸರವಾದಿಗಳೂ ಡಾ ದಿಗಂತರ ಕಣ್ಣಿಗೆ ಬಿದ್ದರು.  ಹುಚ್ಚುಮುಂಡೆ ಮದುವೆಯಲ್ಲಿ ಉಂಡವರೇ ಜಾಣರೆಂಬ ಮನಸ್ಥಿತಿಯಿದ್ದ ಕೆಲವು ಕಿಲಾಡಿಗಳು  ಮಾತ್ರ ಕೊಡಗಿನ ಏಲಕ್ಕಿ ಮತ್ತು ಜೇನಿಗಿದ್ದ ಜನಪ್ರಿಯತೆಯ ಲಾಭ ಪಡೆಯಲು ಕೂರ್ಗ್ ಹನಿ ಮತ್ತು ಸ್ಪೈಸಸ್ ಎಂಬ ಹೆಸರಿನ‌ ಅಂಗಡಿಗಳನ್ನು ರಸ್ತೆಯ ಎರಡೂ ಬದಿಗಳಲ್ಲಿ ತೆಗೆದು ಪ್ರವಾಸಿಗರನ್ನು ಮಂಗಮಾಡುತ್ತಿದ್ದರು. ಅಲ್ಲಿ ಮಾರಲು ಇಟ್ಟಿದ್ದ ಏಲಕ್ಕಿ ಮತ್ತು ಜೇನು ಯಾವುದೋ ರಾಜ್ಯಗಳಿಂದ ಬಂದು ಇಲ್ಲಿ ಪ್ರವಾಸಿಗರಿಗೆ  ಕೊಡಗಿನ ಹೆಸರಲ್ಲಿ ಮಾರಾಟವಾಗುತ್ತಿದ್ದ ವಿಚಾರವೂ ಡಾ ದಿಗಂತರಿಗೆ ತಿಳಿಯಿತು. ಕೊಡಗಿನ ಏಲಕ್ಕಿ ಮತ್ತು ಜೇನು ಅಳಿಯುವ ಸಮಯದಲ್ಲಿ ಇದರ ಕುರಿತಾಗಿ ಸಂಶೋಧನೆ ಮಾಡಿ ಪರಿಹಾರ ಕಂಡು ಹಿಡಿಯಲು  ಹತ್ತು ವರ್ಷಗಳ ಕಾಲ ಹೆಣಗಾಡಿ ಸೋತ ಕೃಷಿ ವಿಜ್ಞಾನಿ ಡಾ   ಕೃಷ್ಣ ಕಾನಿಟ್ಕರ್ ಬಗ್ಗೆಯೂ ಕೆಲವು ಹಿರಿಯರು ಮಾಹಿತಿ ನೀಡಿದರು. ಬೆಂಗಳೂರಿನಿಂದ ಲಂಡನಿಗೆ ವಿಮಾನ ಹತ್ತುವ ಮುನ್ನ ಡಾ ಕೃಷ್ಣ ಕಾನಿಟ್ಕರನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿಯೆ ಭಾರತವನ್ನು ಬಿಡುವುದೆಂಬ ದೃಢ ನಿರ್ಧಾರಕ್ಕೆ ಡಾ ದಿಗಂತ್ ಬಂದಿದ್ದರು. ಕೋವಿಡ್ ಕುರಿತಾಗಿ ತಮ್ಮ ಸಾಧನೆಗಳನ್ನು ಬೆಂಗಳೂರಿನ ಒಂದಷ್ಟು ಕನ್ನಡ ದೃಶ್ಯ ವಾಹಿನಿಗಳಿಗೆ ಸಂದರ್ಶನ ನೀಡಿದ ನಂತರ ಅದೇ ದಿನ ಡಾ ಕಾನಿಟ್ಕರರನ್ನು ಭೇಟಿಯಾಗಲು ದಿನ ನಿಗದಿಯಾಗಿತ್ತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಹುಣಸೇಹೂವು‌

ಬೆಂಗಳೂರಿನ ಹಳೇ ಬಡಾವಣೆಯ ಗಲ್ಲಿಯೊಂದರಲ್ಲಿ  “ಡಾ ಕೃಷ್ಣ ಕಾನಿಟ್ಕರ್, ಪ್ಲಾಂಟ್ ಪೆಥಾಲಜಿಸ್ಟ್” ಎಂದು ತೂಗು ಹಾಕಿದ್ದ ಹಳೇ ಬೋರ್ಡನ್ನು ನೋಡಿ ಅವರ ಮನೆಯನ್ನು ಡಾ ದಿಗಂತ್ ಬಹಳ ಹುಡುಕಾಟದ ನಂತರ ಪತ್ತೆ ಹಚ್ಚಿದರು. ಬಿಳಿ ಜುಬ್ಬ ಮತ್ತು ಪಂಚೆಯುಟ್ಟಿದ್ದ   ಎತ್ತರದ ಮುದುಕರೊಬ್ಬರು ಡಾ ದಿಗಂತರನ್ನು ಸ್ವಾಗತಿಸಿ ತಾವೇ ಡಾ ಕೃಷ್ಣ ಕಾನಿಟ್ಕರರೆಂದು ತಮ್ಮನ್ನು ಪರಿಚಯಿಸಿಕೊಂಡರು‌.  ಸಂಪಿಗೆಕಾಡು ಎಸ್ಟೇಟಿನ ಏಲಕ್ಕಿ ತೋಟದಲ್ಲಿ ತನ್ನ ತಂದೆ ಮುತ್ತಣ್ಣನವರ ಜೊತೆಗೆ ನಿಂತು ಡಾ ಕಾನಿಟ್ಕರ್ ತೆಗೆಸಿಕೊಂಡಿದ್ದ ಫೋಟೋಗಳು ಆ ಹಳೇ ಮನೆಯ ಗೋಡೆಯಲ್ಲಿ ನೇತಾಡುತ್ತಿತ್ತು. ಲಂಡನಿನಲ್ಲಿ ವೈರಸ್ಸುಗಳ ಕುರಿತಾಗಿ ಕೆಲಸ ಮಾಡುತ್ತಿರುವ ತಾನು ಸಂಪಿಗೆಕಾಡು ಎಸ್ಟೇಟಿನ ಮುತ್ತಣ್ಣನವರ ಮಗನೆಂದು   ಡಾ ದಿಗಂತ್ ಪರಿಚಯಿಸಿಕೊಂಡ ನಂತರ ಡಾ ಕಾನಿಟ್ಕರ್ ಹೆಚ್ಚು ಮುಕ್ತವಾಗಿ ಮಾತನಾಡಲಾರಂಭಿಸಿದರು. ಏಲಕ್ಕಿಯ ತೋಟಗಳು ಕೊಡಗಿನಲ್ಲಿ ನಾಶವಾಗಲು ಶುರುವಾದಾಗ ಮುತ್ತಣ್ಣನವರ ಜೊತೆಗೆ ಸಂಪಿಗೆಕಾಡು ಎಸ್ಟೇಟಿನಲ್ಲಿ ಬೀಡುಬಿಟ್ಟು ಆ ರೋಗವನ್ನು ಹತೋಟಿಗೆ ತರಲು ತಾನು ನಡೆಸಿದ ವಿಫಲ ಯತ್ನಗಳನ್ನು ಡಾ ಕಾನಿಟ್ಕರ್ ನೆನಪಿಸಿಕೊಂಡರು. ಮುತ್ತಣ್ಣನವರು ನೀಡುತ್ತಿದ್ದ ಸಹಕಾರವನ್ನು ಮತ್ತು ಅವರಿಗಿದ್ದ ಏಲಕ್ಕಿ ತೋಟದ ಮೇಲಿನ ಪ್ರೀತಿಯನ್ನು ಡಾ ಕಾನಿಟ್ಕರ್ ನೆನೆಯುತ್ತಿದ್ದಂತೆ ಡಾ ದಿಗಂತರ ಕಣ್ಣುಗಳು ಮಂಜಾದವು. ತಾನು  ಕೋವಿಡ್ ವೈರಸ್ಸನ್ನು ಮಣಿಸಿದ ವಿಚಾರವನ್ನು ಕೇಳಿ ಸಂತೋಷ ಪಡಲು ತಂದೆ ಜೀವಂತವಿರಬೇಕಿತ್ತೆಂಬ ಭಾವನೆಗಳು ಅವನನ್ನು ಇನ್ನಷ್ಟು ಭಾವುಕ ಗೊಳಿಸಿದವು.

ಒಂದಷ್ಟು ಕಡತಗಳನ್ನು ತಡಗಾಡಿದ ಬಳಿಕ ಡಾ ಕಾನಿಟ್ಕರ್ ಕರ್ನಾಟಕ ಸರಕಾರಕ್ಕೆ ಬರೆದ ವರದಿಯ ಕಡತವನ್ನು ದೂಳು ಕೊಡವುತ್ತಾ ಮೇಜಿನ ಮೇಲಿಟ್ಟರು. ಅವರ ಮನೆಕೆಲಸದವನು ತಂದಿಟ್ಟ ಟೀ ಮೇಜಿನ ಮೇಲೆ ಹಬೆಯಾಡುತ್ತಾ ಇತ್ತು. ಅದರೊಳಗೆ ಹಾಕಿದ್ದ ಏಲಕ್ಕಿಯ ಪರಿಮಳವು ಇಡೀ ಕೋಣೆಯನ್ನು ನಿಧಾನಕ್ಕೆ ಆವರಿಸಲು ಪ್ರಾರಂಭಿಸಿತು. “ಏಲಕ್ಕಿಯನ್ನು ವಿನಾಶದಂಚಿಗೆ ತಳ್ಳಿದ  ಮೊಸ್ಯಾಕ್ ವೈರಸ್” ಎಂಬ ತಲೆಬರಹವಿದ್ದ ಕಡತವನ್ನು ಡಾ ದಿಗಂತರು ತರೆದು ನಿಧಾನಕ್ಕೆ ಪುಟಗಳನ್ನು ತಿರುವಲು ತೊಡಗಿದರು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಕಿತ್ತಳೆ ಚಿಟ್ಟೆ

ಸ್ಥಳೀಯರು ಕಟ್ಟೆ ರೋಗವೆಂದ ಹೆಸರಿಸಿದ ಈ ರೋಗವು ಮೊಸೈಕ್ ವೈರಸ್   ಎಂಬ ವೈರಸ್ಸಿನಿಂದ ಬರುತ್ತದೆ ಮತ್ತು  ಮೊಸೈಕ್ ವೈರಸ್ ಏಲಕ್ಕಿ ಗಿಡಗಳ ಮೇಲೆ ಉಂಟುಮಾಡುವ ರೋಗ ಲಕ್ಷಣಗಳನ್ನು ಡಾ ಕಾನಿಟ್ಕರ್ ಚಿತ್ರಗಳ ಸಮೇತ ವಿವರವಾಗಿ ಬರದಿದ್ದರು‌. ಗಾಳಿಯ ಮೂಲಕ ತೋಟದಿಂದ ತೋಟಕ್ಕೆ ಈ ಕಟ್ಟೆರೋಗವು  ವೇಗವಾಗಿ ಹರಡಿದ ಕಾರಣದಿಂದ ಅಲ್ಪಸಮಯದಲ್ಲಿ ಕೊಡಗಿನ ಏಲಕ್ಕಿ ತಮ್ಮ ಕಣ್ಣ ಮುಂದೆ  ಸರ್ವನಾಶವಾದ ಘಟನೆಗಳನ್ನು ಸಾಕ್ಷಿ ಸಮೇತವಾಗಿ ಡಾ ಕಾನಿಟ್ಕರ್ ದಾಖಲಿಸಿದ್ದರು. ತಮಗೆ ಈ ರೋಗಕ್ಕೆ ಪರಿಹಾರ ಕಂಡುಹಿಡಿಯಲು  ಸಂಪಿಗೆಕಾಡು ಎಸ್ಟೇಟಿನ ಮಾಲಿಕರಾದ ಮುತ್ತಣ್ಣನವರು ಒಂದು ಏಕ್ರೆ ತೋಟವನ್ನು ಬಿಟ್ಟುಕೊಟ್ಟು ಸಹಕರಿಸಿದ್ದ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿತ್ತು. ಏಲಕ್ಕಿ ನಾಶವಾದ ಕೆಲವು ವರ್ಷಗಳಲ್ಲಿ ಕೊಡಗಿನ ಜೇನಿಗೂ ಕಾಯಿಲೆ ಬಂದು ಜೇನಿನ ಗೂಡುಗಳು ಹಳದಿ ಬಣ್ಣಕ್ಕೆ ತಿರುಗಿ ಮರಿಹುಳಗಳು ಸಾಯಲು ಪ್ರಾರಂಭಿಸಿದ ಬಗ್ಗೆಯೂ ಡಾ ಕಾನಿಟ್ಕರ್ ಬರೆದಿದ್ದರು. ಜೇನು ಕೃಷಿಯ ತಜ್ಞರು ಬಂದು ಪರಿಶೀಲಿಸಿ ಜೇನಿಗೆ ಬಂದ ಆ ರೋಗಕ್ಕೆ  ಸ್ಯಾಕ್ ಬ್ರೂಡ್ ವೈರಸ್ ಕಾರಣವೆಂದು ತಿಳಿಸಿದ ವಿಚಾರವೂ ದಾಖಲಾಗಿತ್ತು. ಆ ಸ್ಯಾಕ್ ಬ್ರೂಡ್ ವೈರಸ್ಸನ್ನು ಪತ್ತೆ ಹಚ್ಚುವಷ್ಟರಲ್ಲಿ ಅವು ಕೊಡಗಿನ ಶೇಖಡಾ ತೊಂಬತ್ತು ಪ್ರತಿಶತದಷ್ಟು ಜೇನನ್ನು ನಾಶ ಮಾಡಿದ ಬಗ್ಗೆ ಡಾ ಕಾನಿಟ್ಕರರಿಗೆ ತೀವ್ರ ವಿಷಾದವಿತ್ತು. ಕೊಡಗಿನ ಮಣ್ಣಿನಲ್ಲಿ ಅರಳಿದ ಸಂಬಾರಗಳ ರಾಣಿ   ಏಲಕ್ಕಿ ಮತ್ತು  ಕೊಡಗಿನ ಜೇನನ್ನು ಎಲ್ಲಿಂದಲೂ ಬಂದ ವೈರಸ್ಸುಗಳು ನುಂಗಿ ನೀರು ಕುಡಿದ ಬಗ್ಗೆ   ಡಾ ಕಾನಿಟ್ಕರರ ವರದಿಯಲ್ಲಿ  ಮರುಕವಿತ್ತು. ಪ್ರಕೃತಿಯು ಮುನಿಸಿಕೊಂಡಾಗ ಮನುಷ್ಯನ ಎಲ್ಲಾ ಪ್ರಯತ್ನಗಳು ಕೆಲವೊಮ್ಮೆ  ವಿಫಲವಾಗುತ್ತದೆ ಎಂಬ ಅಸಹಾಯಕತೆಯನ್ನು ಅವರು ತಮ್ಮ ವರದಿಯಲ್ಲಿ ಬಣ್ಣಿಸಿದ್ದರು‌. ಮನುಷ್ಯ ಭೂಮಿಯ ಮೇಲೆ ಬರುವುದಕ್ಕಿಂತ ಲಕ್ಷಾಂತರ ವರ್ಷಗಳ ಹಿಂದಿನಿಂದಲೇ ಭೂಮಿಯಲ್ಲಿ ಇರುವ ಈ  ವೈರಸ್ ಮತ್ತಿತ್ತರ ಸೂಕ್ಷ್ಮಾಣು ಜೀವಿಗಳು ತಿರುಗಿ ಬಿದ್ದು ಮುಂದೊಂದು ದಿನ ಮನುಷ್ಯನನ್ನು ಕಾಡಬಹುದೆಂಬ ಅಪಾಯದ ಮುನ್ಸೂಚನೆಯೂ ಅವರ ವರದಿಯಲ್ಲಿತ್ತು.

ಪುಟಗಳನ್ನು ತಿರುವುತ್ತಾ ಹೋದಂತೆ ಡಾ ದಿಗಂತರ ಎದೆ ಭಾರವಾಗುತ್ತಾ ಹೋಯಿತು. ಉಬ್ಬಿದ ಬಲೂನು ತೂತಾದಾಗ ಗಾಳಿಯು ಹೊರಹೋಗುವಂತೆ  ದೀರ್ಘವಾದ ನಿಟ್ಟುಸಿರನ್ನು ಬಿಟ್ಟ ಡಾ ದಿಗಂತ್ ಆ ಕೋಣೆಯಲ್ಲಿ ಮೌನವಾಗಿ ಕುಳಿತುಕೊಂಡರು. ಆ ಕೋಣೆಯಲ್ಲಿದ್ದ ಟೀವಿಯ ಪರದೆಯ ಮೇಲೆ ಡಾ ದಿಗಂತರು ಮುಂಜಾನೆ  ನೀಡಿದ ಸಂದರ್ಶನವು ಕನ್ನಡದಲ್ಲಿ ಪ್ರಸಾರವಾಗುತ್ತಿತ್ತು. ವೈರಸ್ಸನ್ನು ಮಣಿಸಿದ ಕನ್ನಡಿಗನೆಂಬ ಆ ವಿಶೇಷ ವರದಿಯಲ್ಲಿ ಡಾ ದಿಗಂತರ ಗುಣಗಾನವಿತ್ತು. ಮನುಷ್ಯನಿಗಿರುವ ವೈದ್ಯಕೀಯ ವಿಜ್ಞಾನಗಳ ಜ್ಞಾನದ ಮುಂದೆ ಯಾವ ವೈರಸ್ಸಿನ ಆಟವೂ ನಡೆಯುವುದಿಲ್ಲವೆಂದು ಮುಂಜಾನೆ ನೀಡಿದ್ದ ಹೇಳಿಕೆಗಳು ಈಗ ಡಾ ದಿಗಂತರಿಗೆ  ಬಾಲಿಶವೆನಿಸತೊಡಗಿತು. ಟೀಯನ್ನು ನಿಧಾನಕ್ಕೆ ದಿಟ್ಟಿಸಿ ಕೊನೆಯ ಗುಟುಕು ಕುಡಿದು ಮೇಲೆದ್ದಾಗ ಆ  ಏಲಕ್ಕಿ ಟೀ ಡಾ ದಿಗಂತರ ನಾಲಿಗೆಯ ಮೇಲೆ   ವಿಚಿತ್ರವಾದ ಕಹಿಯನ್ನು ಉಳಿಸಿತ್ತು. ಏರ್ಪೋರ್ಟಿಗೆ ಬಿಡಲು ತಯಾರಾಗಿದ್ದ ಟ್ಯಾಕ್ಸಿ ಡಾ ಕಾನಿಟ್ಕರ್ ಮನೆಯ ಕಾಂಪೌಂಡಿನ ಹೊರಗೆ  ಡಾ ದಿಗಂತರಿಗಾಗಿ ಕಾಯುತ್ತಿತ್ತು. ಡಾ ಕಾನಿಟ್ಕರ್ ಮನೆಯಿಂದ ಹೊರಡುವಾಗ ಅವರ ಗೋಡೆಯಲ್ಲಿ ತೂಗು ಹಾಕಿದ್ದ ಸಂಪಿಗೆಕಾಡು ಎಸ್ಟೇಟಿನ ಫೋಟೋದ ಜೊತೆಗೆ ಮುಕ್ಕೋಡ್ಲುವಿನ ಎಲ್ಲಾ ನೆನಪುಗಳನ್ನು ಎದೆಯೊಳಗೆ ತುಂಬಿಕೊಂಡು ಕೊನೆಯ ಬಾರಿ ಭಾರತ ಬಿಡಲು ಡಾ ದಿಗಂತ್ ಮಾನಸಿಕವಾಗಿ ತಯಾರಾಗುತ್ತಿದ್ದರು. ಮುಕ್ಕೋಡ್ಲುವಿನ ಮಳೆಯನ್ನು ನೆನಪಿಸುವ ಸಲುವಾಗಿ ಎಂಬಂತೆ ಆ ಸಂಜೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಚಿರಿಪಿರಿ ಮಳೆಯಾಗುತ್ತಿತ್ತು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್‌ 25ರ ಗೌರವ ಪಡೆದ ಕಥೆ: ಸೀಕ್ರೆಟ್ ಸ್ಯಾಂಟಾ

Exit mobile version