ಪ್ರಭಾಕರ ಜೋಶಿ, ನಿರ್ದೇಶಕರು, ರಂಗಾಯಣ, ಕಲಬುರಗಿ
ವಿಶ್ವದ ಅತ್ಯಂತ ಪ್ರಾಚೀನ ಕಲಾಪ್ರಕಾರವಾದ ರಂಗಭೂಮಿಯು, ವಿವಿಧ ಕಲೆಗಳ ಸಂಯೋಜಿತ ಅಭಿವ್ಯಕ್ತಿಯ ವಿಜ್ಞಾನ. ರಂಗಭೂಮಿಯ ಸಾಹಿತ್ಯೋಚಿತ ಪ್ರಭೇದಗಳು ಆಯಾ ದೇಶ, ಕಾಲಮಾನ, ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ರೂಪುಗೊಂಡಿದ್ದರೂ ಅಂತಿಮವಾಗಿ ಅದೆಲ್ಲದರ ಗುರಿ ಪ್ರೇಕ್ಷಕರನ್ನು ತಲುಪುವುದೇ ಆಗಿದೆ.
ನಾಗರಿಕತೆಯ ಜತೆಜತೆಗೇ ಬೆಳೆದು ಬಂದ ರಂಗಭೂಮಿ ದೇಶವಿದೇಶಗಳಲ್ಲಿ ತನ್ನದೇ ಆದ ಗುರುತಿಸಲ್ಪಡುವ ವಿಧಾನಗಳನ್ನು ಅನುಸರಿಸಿದರೂ ಅಂತಿಮವಾಗಿ ಮನುಷ್ಯ ಕೇಂದ್ರಿತ ಅಭಿವ್ಯಕ್ತಿಯನ್ನು ಅಳವಡಿಕೊಂಡಿರುತ್ತದೆ. ರಾಷ್ಟ್ರೀಯತೆಯ ಪ್ರಜ್ಞೆ ಹೆಚ್ಚು ಚರ್ಚೆಯಾಗುತ್ತಿರುವ ಈ ದಿನಗಳಲ್ಲಿ ರಾಷ್ಟ್ರೀಯ ರಂಗಭೂಮಿ ರೂಪುಗೊಳ್ಳಲು ಪ್ರಯತ್ನಗಳು ಸಾಗಿದ್ದರೂ ರಂಗಮಾಧ್ಯಮದ ದುರುಪಯೋಗ ಆಗುವ ಅಪಾಯ ಗೋಚರಿಸುತ್ತದೆ.
ಜಾಗತೀಕರಣದ ಪರಿಣಾಮವಾಗಿ ಪ್ರತಿಗ್ರಾಮವೂ ಪ್ರತ್ಯೇಕ ವಿಶ್ವದಂತೆ ವರ್ತಿಸುತ್ತಿರುವಾಗ ರಾಷ್ಟ್ರೀಯ ರಂಗಭೂಮಿ ಪರಿಕಲ್ಪನೆಯು ಅರ್ಥಹೀನ ಅನಿಸುತ್ತದೆ. ರಂಗಭೂಮಿಗೆ ಆದರ್ಶವಾದುದು ಬರೀ ಸಿದ್ಧಾಂತವೋ ಅಥವಾ ಆ ಸಿದ್ಧಾಂತವನ್ನು ಜಾರಿಗೆ ತರುವ ಕ್ರಮವೋ? ಅಥವಾ ರಂಗಭೂಮಿ ಎಂದರೆ ನಾಟಕಕಾರರ ವಿಚಾರಗಳನ್ನು ನಿರ್ದೇಶಕರ ನೋಟದಿಂದ ಕಾಣಿಸುವುದೋ? ಅಥವಾ ಕ್ರಿಯಾತ್ಮಕವಾಗಿ, ಸಾಮಾಜಿಕ ಸ್ನೇಹತ್ವದ ಆದರ್ಶದ ಅನಾವರಣ ಮಾಡುವುದೋ ಅಥವಾ ಪ್ರೇಕ್ಷಕರ ಆಂತರ್ಯದಲ್ಲಿ ಇರಬಹುದಾದ ಮನುಷ್ಯತ್ವವನ್ನು ಉದ್ದೀಪನಗೊಳಿಸುವುದೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಹಾಯ ಆಗುವ ಅಭಿವ್ಯಕ್ತಿಗೊಳಿಸುವುದೇ ಆಗಬೇಕು.
ಭಾರತೀಯ ಸಂದರ್ಭದಲ್ಲಿ ನಮ್ಮ ಜನಪದರು ಕಟ್ಟಿದ ರಂಗಭೂಮಿ ರಾಷ್ಟ್ರೀಯ ರಂಗಭೂಮಿಯ ಜೀವಾಳವಾಗಿದೆ. ಪಾಶ್ಚಾತ್ಯ ಪ್ರಭಾವದಿಂದಾಗಿ ಮೂಡಿದ ಆಧುನಿಕ ರಂಗಭೂಮಿಯು ಪೂರ್ವದ ಬಾಗಿಲಿಗೆ ಪಶ್ಚಿಮದ ಚೌಕಟ್ಟು ಹೊದೆಸಿ, ವಿಶ್ವರಂಗಭೂಮಿಗೆ ಅಮೋಘ ಕಾಣಿಕೆ ನೀಡಿರುವುದು ಗಮನಾರ್ಹ.
ರಂಗಭೂಮಿಯ ಮೂಲಕ ಸಮಾಜದ ಸ್ವರೂಪ ನಿರ್ಧರಿಸುವಾಗ ರಂಗಕಾರಣಕ್ಕಿಂತ ಆರ್ಥಿಕ ಕಾರಣಗಳು ಮುಖ್ಯವಾಗಿವೆ. ಒಂದು ದೇಶದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಮೂಲಭೂತ ಪರಿವರ್ತನೆ ಉಂಟಾದಾಗ ಜನಜೀವನವೂ ಮಾರ್ಪಟಾಗಿರುವುದನ್ನು ಇತಿಹಾಸ ಹೇಳುತ್ತದೆ.
ಇದನ್ನೂ ಓದಿ : Manoj Bajpayee : ʼಮುಂಬೈಗೆ ಬಂದಾಗ ಹಣವಿರಲಿಲ್ಲ, ಹೊತ್ತಿನ ಊಟಕ್ಕೂ ಗತಿಯಿರಲಿಲ್ಲʼ ಕಷ್ಟದ ದಿನಗಳನ್ನು ಮೆಲುಕು ಹಾಕಿದ ಫ್ಯಾಮಿಲಿ ಮ್ಯಾನ್
ಯಾವುದೇ ಮಾಧ್ಯಮ ಅಂದಂದಿನ ಸಮಾಜವನ್ನು ಪ್ರತಿಬಿಂಬಿಸುವುದಲ್ಲದೆ ಪರಂಪರಾಗತ ಸ್ಮೃತಿಯನ್ನು ತನ್ನೊಳಗೆ ಹುದುಗಿಟ್ಟಿಕೊಂಡಿರುತ್ತದೆ. ರಂಗಭೂಮಿಯೇ ಒಂದು ಭಾಷೆಯಾದ ಪ್ರಯುಕ್ತ ವಿಶ್ವದ ಎಲ್ಲರೊಂದಿಗೂ ಸಂವಹನ ಮಾಡಲು ಸಾಧ್ಯವಾಗಿದೆ. ಕನ್ನಡದ ನಾಟಕವೊಂದು ಆ ಭಾಷೆಯ ಗಂಧವಿಲ್ಲದ ಪ್ರದೇಶದಲ್ಲಿ ಪ್ರದರ್ಶನಗೊಂಡಾಗ ಅದನ್ನು ನೋಡಿದ ಪ್ರೇಕ್ಷಕನಿಗೆ ತಟ್ಟಿದಾಗ ವಿಶ್ವರಂಗ ಕಲ್ಪನೆ ಸಾಕಾರಗೊಳುತ್ತದೆ.
ಇದರ ಆಚರಣೆಯೇ ವಿಶ್ವರಂಗಭೂಮಿ ದಿನಾಚರಣೆ.