ಬೆಂಗಳೂರು: ‘ನಿಸರ್ಗಪ್ರಿಯ’ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದ ಸಾಹಿತಿ, ಸಂಶೋಧಕ ಬಿ. ಸಿದ್ದಗಂಗಯ್ಯ ಕಂಬಾಳು (೭೭) ಅವರು ಶುಕ್ರವಾರ ನಿಧನರಾಗಿದ್ದಾರೆ. ಕಂಬಾಳುವಿನಲ್ಲಿಯೇ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಸಿದ್ದಲಿಂಗಯ್ಯ ಜಾನಪದ ಎಂದರೆ ಕೇವಲ ಸಾಹಿತ್ಯ ಮತ್ತು ಸಂಸ್ಕೃತಿ ಎಂದು ಭಾವಿಸದೆ ಅದನ್ನು ನಿಜ ಬದುಕು ಎಂದು ಪರಿಭಾವಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
“ನಿಸರ್ಗಪ್ರಿಯʼʼ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ವಿಶಿಷ್ಟಸ್ಥಾನ ಪಡೆದುಕೊಂಡಿರುವ ಇವರ ಕಾವ್ಯದ ಕುರಿತು ಗೋಪಾಲಕೃಷ್ಣ ಅಡಿಗರು ಶ್ಲಾಘನೆ ವ್ಯಕ್ತಪಡಿಸಿದ್ದರು.
ಬೆಂಗಳೂರು ಗ್ರಾಮಾಂತರದ ಕಂಬಾಳು ಗ್ರಾಮದಲ್ಲಿ ಜನಿಸಿದ (ಮೇ ೧೦, ೧೯೪೫) ಇವರು ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ನಂತರ ಕೆಲ ವರ್ಷ ಗುಜ ಕಂಪನಿಯಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಾಟಕ ರಚನೆ ಪ್ರಾರಂಭಿಸಿದರು. ಎತಪ್ಪತ್ತರ ದಶಕದಲ್ಲಿ ಆಧುನಿಕ ಕನ್ನಡ ನಾಟಕಗಳು ಹೊಸ ಆಯಾಮಗಳನ್ನು ತಾಳುತ್ತಿದ್ದಾಗ ಇವರು ಅನೇಕ ನಾಟಕಗಳನ್ನು ಬರೆದು ಗಮನ ಸೆಳೆದಿದ್ದರು. ಅವರ ʼʼಬೆನಕನಕೆರೆʼʼ ಎಂಬ ಪ್ರಸಿದ್ಧ ನಾಟಕ ಆ ಕಾಲದ ಮಹತ್ವದ ರಂಗ ಕೃತಿಯಾಗಿದೆ. ನಾಟಕವಲ್ಲದೆ, ಇವರು ಕಾದಂಬರಿ, ಮಹಾಕಾವ್ಯ, ಜನಪದ ಗ್ರಂಥ ಸಂಪಾದನೆ, ಸಂಶೋಧನೆ(ಇತಿಹಾಸ) ಮುಂತಾದ ಪ್ರಕಾರಗಳಲ್ಲಿ ರಚನೆ ಮಾಡಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಪ್ರಿಯ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಶಿಕ್ಷಣ ಇಲಾಖೆಯ ಸಹಾಯಕ ನಿರ್ದೆಶಕರಾಗಿ, ನಾಟಕ ಅಕಾಡೆಮಿಯ ರಿಜಿಸ್ಟಾರ್ ಆಗಿ ಗೌರವ ಹುದ್ದೆಗಳನ್ನು ಅಲಂಕರಿಸಿದ್ದ ಇವರು ಬರೆದ, ರಾಮಾಯಣವನ್ನು ಸೀತೆಯ ದೃಷ್ಟಿಯಲ್ಲಿ ನೋಡುವ ಇವರ “ಮೈಥಿಲಿʼ ಕಾದಂಬರಿ ಜನಪ್ರಿಯವಾಗಿತ್ತು.
ಬೆನಕನಕೆರೆ, ಸ್ವರ್ಗಸ್ಥ (‘ಸ್ವರ್ಗಸ್ಥ’ ಕೃತಿಗೆ ರಾಜ್ಯ ಸಾಹಿತಿ ಅಕಾಡೆಮಿಯ ಬಹುಮಾನ ಲಭಿಸಿದೆ), ವ್ಯವಸ್ಥೆ, ಯಶೋಧರ, ತಿರುಕರಾಜ, ರುದ್ರ ಚೋರಪುರಾಣ ಪ್ರಹಸನ (ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ನಾಟಕ ರಚನಾ ಸ್ಪರ್ಧೆ ಬಹುಮಾನ) ಮುಂತಾದ ಕೃತಿಗಳನ್ನು ರಚಿಸಿರುವ ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ನಾಟಕ ಅಕಾಡೆಮಿಗಳಿಂದ ಪುರಸ್ಕೃತರಾಗಿದ್ದಾರೆ.
ತೊಂಭತ್ತರ ದಶಕದಲ್ಲಿ (1990) ಬೆಂಗಳೂರು ದೂರದರ್ಶನದಿಂದ ಪ್ರತಿ ಶನಿವಾರ ಪ್ರಸಾರವಾಗುತ್ತಿದ್ದ ‘ಸಿರಿಗಂಧ’ ಜಾನಪದ ಚಿತ್ರಮಾಲಿಕೆಗೆ ಸಂಶೋಧನಾ ಸಾಹಿತ್ಯ ಹಾಗೂ ನಿರೂಪಣಾ ಸಾಹಿತ್ಯ ರಚಿಸಿದ್ದ ಇವರು ‘ಅಲ್ಲಮ’, ‘ರಾಮಾ ರಾಮಾ ರೇ’ ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ರಾಮಾ ರಾಮಾ ರೇ… ಚಿತ್ರಕ್ಕಾಗಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಪಡೆದಿದ್ದರು.