ಇಳಿಸಂಜೆಯ ಸಮಯದಿ ಒಂದು ಕಡೆ ಪ್ರಸಾದನ-ವೇಷಭೂಷಣಗಳ ತಯಾರಿ, ಮತ್ತೊಂದೆಡೆ ‘ಗಜಮುಖದವಗೇ’ ಎಂಬ ಭಾಗವತರ ಪದ್ಯ ಪ್ರಾರಂಭವಾಗುತ್ತಿದಂತೆ ಚಂಡೆಯ ಝೇಂಕಾರಕ್ಕೆ, ಮೃದಂಗದ ಸಾಥ್. ಇದು ನಮ್ಮ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನ (Yakshagana Performance) ಪ್ರಾರಂಭವಾಗುವ ಬಗೆ. ಬಾನಿನಲ್ಲಿ ಉದಯ ಅಸ್ತಂಗತನಾಗುವ ವೇಳೆಯಲ್ಲಿ ಬೆಂಗಳೂರಿನ ಉದಯಬಾನು ಎಂಬ ಕಲಾ ಮಂಟಪದಲ್ಲಿ ಯಕ್ಷಗಾನದ ಮೆರುಗು ಆರಂಭವಾಯಿತು. ಇದಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರಿನ ಕರ್ನಾಟಕ ಮಹಿಳಾ ಯಕ್ಷಗಾನ ತಂಡ. ಯಕ್ಷಗಾನ ಕಲೆ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಪ್ರತಿರೂಪವೂ ಆಗಿದೆ. ಈ ಪಾರಂಪರಿಕ ಕಲೆ ದೇಶವಷ್ಟೇ ಅಲ್ಲ, ವಿದೇಶದಲ್ಲೂ ತನ್ನ ಸೊಬಗನ್ನು ಸಾದರಪಡಿಸಿದೆ.
ಬೆಂಗಳೂರಿನ ಕರ್ನಾಟಕ ಮಹಿಳಾ ಯಕ್ಷಗಾನ (ರಿ) ತಂಡ ಬೆಂಗಳೂರಿನಂತಹ ಮಹಾನಗರಿಯಲ್ಲಿ ಸುಮಾರು 23 ವರ್ಷಗಳಿಂದ ಜನತೆಗೆ ತಮ್ಮ ಯಕ್ಷಗಾನ ಕಲೆಯನ್ನು ಬಿತ್ತರಿಸುವಲ್ಲಿ ಯಶಸ್ಸನ್ನು ಕಂಡಿದೆ. ಕರ್ನಾಟಕ ಮಾತ್ರವಲ್ಲ, ಅಂತರಾಜ್ಯ, ದೇಶ-ವಿದೇಶದಲ್ಲೂ ಯಕ್ಷಗಾನ ಕಾರ್ಯಕ್ರಮ ಕೊಟ್ಟ ಹೆಗ್ಗಳಿಕೆ ಈ ತಂಡಕ್ಕಿದೆ. ಇದೇ ತಂಡ ಮೊನ್ನೆ ಭಾನುವಾರ ಬೆಂಗಳೂರಿನ ಉದಯಬಾನು ಕಲಾ ಸಂಘದಲ್ಲಿ “ಶಿವ ಪಂಚಾಕ್ಷರಿ ಮಹಿಮೆ” ಎಂಬ ಶಿವಪುರಾಣದ ಭಾಗದ ಕಥೆಯನ್ನು ಯಕ್ಷಗಾನದ ಮೂಲಕ ಬಹಳ ಅದ್ಬುತವಾಗಿ ತಂಡದ ಕಲಾವಿದರು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಬಂದ ಪ್ರೇಕ್ಷಕರಿಗೆ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲು ‘ಯಕ್ಷಗಾನ ರಸಪ್ರಶ್ನೆ’ ಯನ್ನು ನಡೆಸಲಾಯಿತು. ಡಾ. ಸುಪ್ರೀತಾ ಗೌತಮ್ ಇವರ ಭರತನಾಟ್ಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಯಕ್ಷಗಾನದ ಪೂರ್ವರಂಗದ ನೃತ್ಯಗಳಾದ ಬಾಲಗೋಪಾಲ, ಪೀಠಿಕೆ ಸ್ತ್ರೀವೇಷದ ಕುಣಿತಗಳು ಯಕ್ಷಗಾನ ಪ್ರಿಯರನ್ನು ರಂಜಿಸಿತ್ತು.
ಶ್ವೇತಕುಮಾರನ ಒಡ್ಡೋಲಗದ ಮೂಲಕ ‘ಶಿವ ಪಂಚಾಕ್ಷರಿ ಮಹಿಮೆ’ ಯಕ್ಷಗಾನ ಪ್ರಾರಂಭವಾಯಿತು. ಭೂಮಿಯಲ್ಲಿ ದುಷ್ಟರ ಅಟ್ಟಹಾಸವನ್ನು ದೂರ ಮಾಡಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪೊರೆದು ಲೋಕ ಕಲ್ಯಾಣಕ್ಕಾಗಿ ನಡೆಯುವ ಒಂದು ಕಥಾ ಹಂದರ. ರುದ್ರಪುರದ ಅಧಿಕಾರಿ ಶ್ವೇತಕುಮಾರನಿಗೆ ನಾರದರ ಸೂಚನೆಯಂತೆ ಕಾಶೀರಾಜದ ದೊರೆ ಶೂರಸೇನನ ಮಗಳು ಶಿವೆಯೊಂದಿಗೆ ಮದುವೆಯಾಗಿ ಬರುವಾಗ ಕರಾಳನೇತ್ರೆ ಎಂಬ ರಾಕ್ಷಸಿಯ ಆಗಮನವಾಗಿ ಶ್ವೇತಕುಮಾರ & ಅವಳ ನಡುವೆ ಜಗಳವಾಗಿ ಕೊನೆಗೆ ಆ ರಾಕ್ಷಸಿಯ ಕರಭಂಗವಾಗುತ್ತದೆ. ಅರಮನೆಯಲ್ಲೇ ಇದ್ದು ಬೇಸರಗೊಂಡ ಶ್ವೇತಕುಮಾರ ಮನಸ್ಸಂತೋಷಕ್ಕಾಗಿ ವನವಿಹಾರದತ್ತ ಹೋಗುವಾಗ ಬ್ರಹ್ಮನಿಂದ ಕಳುಹಿಸಲ್ಪಟ್ಟ ತ್ರಿಲೋಕಸುಂದರಿಯ ಪರಿಚಯ ಪ್ರೇಮವಾಗಿ ಮಾರ್ಪಾಡಾಗುತ್ತದೆ. ಅವಳ ಮೋಹಕ್ಕೆ ಬಿದ್ದ ಶ್ವೇತಕುಮಾರ ಅವಳಿಗಾಗಿ ತನ್ನ ರಾಜ್ಯವನ್ನು ಕೊಡಲು ಸಿದ್ದನಾಗುತ್ತಾನೆ.
ಇತ್ತ ಕರಾಳನೇತ್ರೆ ತನಗಾದ ನೋವನ್ನು ಹೇಳಲು ಅಣ್ಣನಾದ ದುರ್ಜಯನ ಬಳಿ ಬರುತ್ತಾಳೆ. ದುಷ್ಟನಾದ ದುರ್ಜಯ ತಂಗಿಗಾದ ನೋವನ್ನು ತಾಳಲಾರದೇ ರುದ್ರಪುರಕ್ಕೆ ದಾಳಿ ಇಡಲು ಮಗನಾದ ಲೋಹಿತನೇತ್ರನಿಗೆ ಹೇಳುತ್ತಾನೆ. ದಾಳಿ ಮಾಡಲು ಹೋದವ ಶ್ವೇತಕುಮಾರನ ಹೆಂಡತಿಯಾದ ಶಿವೆಯನ್ನು ತಂದು ಅಪ್ಪನಲ್ಲಿ ಒಪ್ಪಿಸುತ್ತಾನೆ. ನಾರದರಿಂದ ವಿಷಯವನ್ನು ತಿಳಿದ ಶ್ವೇತಕುಮಾರ ಅಲ್ಲಿ ಧಾವಿಸಿ ಬಂದಾಗ ದುರ್ಜಯನಿಂದ ಹತನಾಗುತ್ತಾನೆ. ಸಾಯುವ ಕೊನೆಯ ಘಳಿಗೆಯಲ್ಲಿ ಶಿವೆ ಎಂದು ಉದ್ಗರಿಸಿದ್ದರಿಂದ ಪ್ರೇತವಾಗಿ ಯಮನಿಂದ ಒಂದು ವರವನ್ನು ಪಡೆಯುತ್ತಾನೆ. ರಂಭೆಯ ಭೋಗಕ್ಕೆ ಬೇಡಿಕೆಯನ್ನು ಇಡುತ್ತಾನೆ. ಇತ್ತ ರಂಭೆಯಿಂದ ಶಿವಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ಇರುವಾಗ ಕರೆಯಲು ಬಂದ ಯಮನಿಗೂ-ಒಲಿದು ಬಂದ ಶಿವನಿಗೂ ಯುದ್ದವಾಗುತ್ತದೆ. ಶಿವನಿಂದ ಶ್ವೇತಕುಮಾರನಿಗೆ ಪುನರ್ಜನ್ಮ ಪ್ರಾಪ್ತಿಯಾಗುತ್ತದೆ. ಕಾರಣ ದುಷ್ಟನಾದ ದುರ್ಜಯ ಹಿಂದೊಮ್ಮೆ ವರವೊಂದನ್ನು ಪಡೆದಿರುತ್ತಾನೆ ಸತ್ತು ಬದುಕಿ ಬಂದವರಿಂದ ಮರಣ ಬರಲಿ ಎಂದು. ಹಾಗಾಗಿ ಶಿವನಿಂದ ಶ್ವೇತಕುಮಾರನಿಗೆ ಪುನರ್ಜನ್ಮ ಪ್ರಾಪ್ತಿಯಾಗಿ ಕೊನೆಗೆ ದುರ್ಜಯನನ್ನು ಕೊಂದು ಮರಳಿ ತನ್ನ ರಾಜ್ಯವನ್ನು ಪಡೆಯುವಂತಾಗುತ್ತದೆ.
ಈ ರೀತಿ ಸಾಗಿದ ಕಥಾಭಾಗಕ್ಕೆ ತಮಗೆ ಕೊಟ್ಟಂತಹ ಪಾತ್ರಕ್ಕೆ ಕಲಾವಿದರು ಜೀವ ತುಂಬಿದರು. ಶ್ವೇತಕುಮಾರನಾಗಿ ಸೌಜನ್ಯ ನಾವುಡ, ಮಂತ್ರಿ ಮಣಿಬಿಂಬ & ಯಮನಾಗಿ ಶಶಿಕಲಾ, ದುರ್ಜಯನಾಗಿ ಕೆ ಗೌರಿ, ದೂತನಾಗಿ ಆಶಾ ರಾಘವೇಂದ್ರ, ತ್ರಿಲೋಕ ಸುಂದರಿಯಾಗು ಚೈತ್ರ ಭಟ್, ಶಿವೆಯಾಗಿ ಧೃತಿ ಅಮ್ಮೆಂಬಳ, ಲೋಹಿತನೇತ್ರ & ಶಿವನಾಗಿ ಸುಮಾ ಅನಿಲ್ ಕುಮಾರ್, ಕರಾಳನೇತ್ರೆಯಾಗಿ ಅನ್ನಪೂರ್ಣ ಕಟೀಲು, ಸಿತಕೇತನಾಗಿ ಚೈತ್ರ ರಾಜೇಶ್ ಕೋಟ, ಬಲದವರಾಗಿ ಸರಯು ವಿಠಲ್, ವೀರಭದ್ರನಾಗಿ ಅಂಬಿಕಾ, ರಂಭೆಯಾಗಿ ಲತಾ ಕೃಷ್ಣಮೂರ್ತಿ, ಪ್ರೇತವಾಗಿ ಶರ್ವಾಣಿ ಹೆಗಡೆ, ಧೀರ ವಯ್ಯಾರದಲ್ಲಿ ಚಿನ್ಮಯ್ ನಾವುಡ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ಮೃದಂಗದಲ್ಲಿ ಅಜಿತ್ ಕುಮಾರ್, ಚಂಡೆಯಲ್ಲಿ ಸುಬ್ರಹ್ಮಣ್ಯ. ಕೆ ಗೌರಿ ಇವರ ನಿರ್ದೇಶನದಲ್ಲಿ ಮೂಡಿಬಂದ ಯಕ್ಷಗಾನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆ ಬಂದಿದೆ.
ಒಟ್ಟಿನಲ್ಲಿ ಇಂತಹ ಯಕ್ಷಗಾನ ಕಲೆಯನ್ನು ಬರೀ ಯಕ್ಷಗಾನ ಪ್ರೇಮಿಗಳಷ್ಟೇ ಅಲ್ಲ, ದೇಶ-ವಿದೇಶದ ಜನರು ಮೆಚ್ಚುವಂತಾದರೆ ಕಲೆ ಇನ್ನಷ್ಟು ಹೆಮ್ಮರವಾಗಿ ಬೆಳೆಯಲು ಸಾಧ್ಯ. ಮನಸ್ಸಿಗೊಪ್ಪುವ ಕಲೆ ಎಲ್ಲರ ಮನಸ್ಸಲ್ಲೂ ಮನೆ ಮಾಡಲಿ. ಯಕ್ಷಗಾನ ವಿಶ್ವಗಾನವಾಗಿ ಉಳಿಯಲಿ ಬೆಳೆಯಲಿ ಎನ್ನುವುದೇ ಹಾರೈಕೆ. ಯಕ್ಷಗಾನಂ ಗೆಲ್ಗೆ.
ವರದಿ : ಚೈತ್ರಾ ರಾಜೇಶ್ ಕೋಟಅ
ಇದನ್ನೂ ಓದಿ | Yakshagana Sammelana | ಫೆ.11, 12ರಂದು ಉಡುಪಿಯಲ್ಲಿ ʼಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನʼ