ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ(Ayodhya Ram Mandir)ದಲ್ಲಿ ಜನವರಿ 22ರಂದು ನಡೆಯುವ ‘ಪ್ರಾಣ ಪ್ರತಿಷ್ಠಾ’ (Pran prathishta) ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿದೆ. ಪ್ರಾಣ ಪ್ರತಿಷ್ಠೆ ದಿನದಂದು ಗಣ್ಯರು ಮತ್ತು ಭಕ್ತರಿಗೆ ಪ್ರಸಾದ ಹಂಚಲೂ ಸಿದ್ಧತೆ ನಡೆಸಲಾಗಿದೆ. ಇದರ ಭಾಗವಾಗಿ ಸುಮಾರು 13.5 ಲಕ್ಷ ಲಾಡು ತಯಾರಿಸಲಾಗುತ್ತಿದೆ.
ಅಯೋಧ್ಯೆ ಸಮೀಪದ ಕರಸೇವಕಪುರಂನ ಚೋಟಿ ಚಾವ್ನಿ ಕಟ್ಟಡದ ಮೊದಲ ಮಹಡಿ ಅಕ್ಷರಶಃ ‘ಲಡ್ಡು ಕಾರ್ಖಾನೆ’ ಆಗಿ ಮಾರ್ಪಟ್ಟಿದೆ. ಸಾವಿರಾರು ಮಂದಿ ಸ್ಪೀಟ್ ಡಬ್ಬಿಗಳಲ್ಲಿ ಅಚ್ಚುಕಟ್ಟಾಗಿ ಲಾಡುಗಳನ್ನು ಜೋಡಿಸುತ್ತಿದ್ದಾರೆ. ರಾಮನ ಈ ವಿಶೇಷ ಪ್ರಸಾದವನ್ನು ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಆಗಮಿಸುವ ಅತಿಥಿಗಳಿಗೆ ಹಂಚಲಾಗುತ್ತದೆ. ಜತೆಗೆ ಜನವರಿ 23ರಂದು ರಾಮ ಮಂದಿರ ವಿಎಚ್‌ಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಪ್ರವೇಶಕ್ಕಾಗಿ ಮುಕ್ತವಾಗಲಿದ್ದು, ಅಂದು ಕೂಡ ಲಾಡು ವಿತರಿಸಲಾಗುತ್ತದೆ.
ಸ್ಟೀಲ್ ಡಬ್ಬದಲ್ಲಿ ಪ್ಯಾಕ್
ಈ ಲಾಡುಗಳನ್ನು ಮೂರು ರೀತಿಯ ಸ್ಟೀಲ್ ಡಬ್ಬಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. 11 ಲಾಡುಗಳಿರುವ ಡಬ್ಬ ಪ್ರಾಣ ಪ್ರತಿಷ್ಠೆಗೆ ಆಗಮಿಸುವ ವಿಶೇಷ ಅತಿಥಿಗಳಿಗೆ, 7 ಲಾಡುಗಳ ಪ್ಯಾಕ್ ವಿಎಚ್‌ಪಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಮತ್ತು 5 ಲಾಡುಗಳ ಡಬ್ಬ ಸಾವರ್ಜನಿಕರಿಗೆ ಜನವರಿ 23ರಂದು ಹಂಚಲಾಗುತ್ತದೆ. ಈ ಮೂರು ಡಬ್ಬಗಳು ವಿವಿಧ ಗಾತ್ರದಲ್ಲಿ ಇರಲಿದ್ದು, ಸ್ಟಿಕ್ಕರ್‌ನಲ್ಲಿ ರಾಮ ದೇಗುಲದ ಚಿತ್ರವನ್ನು ಮುದ್ರಿಸಲಾಗಿದೆ.
13.5 ಲಕ್ಷ ಲಡ್ಡುಗಳನ್ನು ತಯಾರಿಸುವುದು ಸಾಮಾನ್ಯ ಕೆಲಸವಲ್ಲ. ಅದಕ್ಕಾಗಿ ಸ್ವಯಂಸೇವಕರು ಇಲ್ಲಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಈ ಲಡ್ಡುಗಳು ಜನವರಿ 22ರೊಳಗೆ ಪ್ಯಾಕ್ ಆಗಬೇಕಿರುವುದರಿಂಧ ಸಮರೋಪಾದಿಯಲ್ಲಿ ದುಡಿಯುತ್ತಿದ್ದಾರೆ. ಜಾರ್ಖಂಡ್‌ನ ಗೃಹ ಕಾರ್ಯದರ್ಶಿಯಾಗಿದ್ದ ಎನ್.ಎನ್. ಪಾಂಡೆ ಅವರು ಇಲ್ಲಿನ ಕೆಲಸದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಪ್ರತಿ ಲಡ್ಡು ಡಬ್ಬವನ್ನು ಚೀಲವೊಂದರಲ್ಲಿ ಇರಿಸಲಾಗುತ್ತದೆ. ಇದರಲ್ಲಿ ರಾಮ ಜನ್ಮಭೂಮಿ ಚಳವಳಿಯ ಇತಿಹಾಸ ಮತ್ತು ದೇವ್ರಾಹ ಬಾಬಾ ಅವರ ಕೊಡುಗೆಯ ಬಗ್ಗೆ ಮೂರು ಪುಸ್ತಕಗಳು ಇರುತ್ತವೆ. ಜತೆಗೆ ಅಂಗವಸ್ತ್ರವನ್ನೂ ಇರಿಸಲಾಗುತ್ತಿದೆ.
ಈಗಾಗಲೇ ಇಂತಹ ಸಾವಿರಾರು ಚೀಲಗಳು ಸಿದ್ಧವಾಗಿದ್ದು, ಕರಸೇವಕಪುರದಲ್ಲಿ ವಿಎಚ್‌ಪಿ ಕಾರ್ಯಕರ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಎನ್.ಎನ್. ಪಾಂಡೆ ತಿಳಿಸಿದ್ದಾರೆ. “ಇದೊಂದು ಪವಿತ್ರ ಕಾರ್ಯ ಮತ್ತು ಅತಿದೊಡ್ಡ ಸೇವೆ. ಎಲ್ಲ ರಾಮ ಭಕ್ತರು ಈ ಪ್ರಸಾದದಿಂದ ಪುನೀತರಾಗುತ್ತಾರೆ ಎನ್ನುವ ವಿಶ್ವಾಸವಿದೆ. ಈ ಮೂಲಕ ಭಗವಾನ್ ರಾಮನ ದೈವತ್ವವು ಪ್ರತಿಯೊಬ್ಬರ ಮನೆಗೂ ತಲುಪುತ್ತದೆ” ಎಂದು ಲಡ್ಡುಗಳನ್ನು ಪ್ಯಾಕ್ ಮಾಡುವ ಮಹಿಳೆಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ದೇವರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಧನ್ಯತೆಯ ಭಾವ ಅವರ ಧ್ವನಿಯಲ್ಲಿ ಅಡಗಿತ್ತು.
ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಇನ್ನೊಬ್ಬ ಕನ್ನಡಿಗ ಕೆತ್ತಿದ ಮೂರ್ತಿ! ಯಾವುದದು ನೋಡಿ
ವಿಶೇಷ ಎಂದರೆ ಶುದ್ಧ ದೇಸಿ ತುಪ್ಪ ಬಳಸಿ ಈ ಲಾಡುಗಳನ್ನು ತಯಾರಿಸಲಾಗುತ್ತಿದೆ. ಒಂದು ಹನಿ ನೀರನ್ನೂ ಲಡ್ಡು ತಯಾರಿಕೆಯಲ್ಲಿ ಬಳಸುತ್ತಿಲ್ಲ. ಹೀಗಾಗಿ ಇದು ಸುಮಾರು 6 ತಿಂಗಳು ಕೆಡುವುದಿಲ್ಲ ಎಂದು ಬಾಣಸಿಗರು ತಿಳಿಸಿದ್ದಾರೆ. ವಾರಾಣಸಿ ಮತ್ತು ಗುಜರಾತ್‌ನ ಬಾಣಸಿಗರ ಗುಂಪು ಲಾಡು ತಯಾರಿಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ